ಬುಧವಾರ, ನವೆಂಬರ್ 15, 2017

ವ್ಯಂಗ್ಯಚಿತ್ರ:ಹಾಸ್ಯ ಮತ್ತು ಸಿಟ್ಟು ಜೊತೆಗಿರಬಲ್ಲವೇ?


ಅನುಶಿವಸುಂದರ್
Image result for n.ponnappa
ಒಂದು ಒಳ್ಳೆಯ ವ್ಯಂಗ್ಯಚಿತ್ರ ನಗುವಿಗಿಂತ ಜಾಸ್ತಿ ಅಲೋಚನೆಯನ್ನು ಪ್ರಚೋದಿಸಬೇಕು.

ಎನ್. ಪೊನ್ನಪ್ಪ ಬರೆಯುತ್ತಾರೆ:

ಇದೇ ಅಕ್ಟೋಬರ್ ೨೯ರಂದು ತಮಿಳುನಾಡಿನ ವ್ಯಂಗ್ಯಚಿತ್ರಕಾರ ಜಿ. ಬಾಲಾ ಅವರನ್ನು ಪೊಲೀಸರು ಬಂಧಿಸಿದರು. ಏಕೆಂದರೆ ಇತ್ತೀಚೆಗೆ ಅವರು ಒಂದು ವ್ಯಂಗ್ಯಚಿತ್ರವನ್ನು ರಚಿಸಿದ್ದರು. ಅದರಲ್ಲಿ ಅವರು ಮೂರು ಬೆತ್ತಲೆ ಪುರುಷರನ್ನು ಚಿತ್ರಿಸಿದ್ದರು. ಮೂವರಲ್ಲಿ ಒಬ್ಬರು ಟೈ ಅನ್ನು ಮತ್ತೊಬ್ಬರು ಟೋಪಿಯನ್ನು ಧರಿಸಿದ್ದರು ಮತ್ತು ಮೂವರೂ ತಮ್ಮ ಮರ್ಮಾಂಗಗಳನ್ನು ನೋಟುಗಳ ಕಂತೆಯಿಂದ ಮುಚ್ಚಿಕೊಂಡಿದ್ದರು. ಅವರ ಕಾಲುಗಳ ಬಳಿ ಸುಟ್ಟು ಕರಕಲಾಗಿರುವ ಮಗುವೊಂದು ಮುಖ ಅಡಿಯಾಗಿ ಬಿದ್ದಿತ್ತು ಮತ್ತು ಅದರ ಬೆನ್ನ ಮೇಲಿದ್ದ ಬೆಂಕಿ ಇನ್ನೂ ಉರಿಯುತ್ತಿರುವಂತಿತ್ತು. ಮಗುವು ನೋಡಲು ಹೆಚ್ಚೂ ಕಡಿಮೆ ೨೦೧೫ರಲ್ಲಿ ಮೆಡಿಟರೇನಿಯನ್ ಸಮುದ್ರ ತೀರದಲ್ಲಿ ಬಂದು ಬಿದ್ದಿದ್ದ ಅಯ್ಲಾನ್ ಕುರ್ದಿ ಎಂಬ ನಿರಾಶ್ರಿತ ಮಗುವನ್ನೇ ಹೋಲುತ್ತಿತ್ತು. ಆದರೆ ಅದಕ್ಕಿಂತ ಭೀಕರವಾಗಿತ್ತು. ವ್ಯಂಗ್ಯಚಿತ್ರವು ತಿರುನಲ್ವೇಲಿ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಕೂಲಿ ಕಾರ್ಮಿಕನೊಬ್ಬ ತನ್ನ ಇಬ್ಬರು ಮಕ್ಕಳನ್ನು ಮತ್ತು ಹೆಂಡತಿಗೂ ಬೆಂಕಿಹಚ್ಚಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆಯನ್ನು ಆಧರಿಸಿತ್ತು. ಕೂಲಿ ಕಾರ್ಮಿಕ ತಾನು ಸಾಲ ತೆಗೆದುಕೊಂಡಿದ್ದ ಬಡ್ಡಿ ವ್ಯಾಪಾರಿ ತಮಗೆ ಕೊಡುತ್ತಿದ್ದ ಕಿರುಕುಳವನ್ನು ತಡೆಯಲಾರದೆ ಆರು ಬಾರಿ ಜಿಲ್ಲಾಧಿಕಾರಿಗೆ ದೂರು ನೀಡಿದ್ದ. ಅದರಿಂದ ಏನು ಪ್ರಯೋಜನವಾಗದೆ ಹೋದಾಗ ಆತ  ಅಂತಿಮವಾಗಿ ನಿರ್ಧಾರಕ್ಕೆ ಬಂದಿದ್ದ.

ಬಾಲಾ ಅವರು ತಮ್ಮ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ ಮತ್ತು ತಾಣಗಳಲ್ಲಿ ಅವರು ಅತ್ಯಂತ ಜನಪ್ರಿಯರೂ ಆಗಿದ್ದಾರೆ. ವ್ಯಂಗ್ಯಚಿತ್ರದ ಕೆಳಗೆ ಅವರು ಹಾಕಿರುವ ತಮಿಳು ಟಿಪ್ಪಣಿಯ ಎರಡು ಅನುವಾದಗಳು ಮುದ್ರಣ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದವು. ಅದರಲ್ಲಿ ಒಂದು: ನಿಜ.. ವ್ಯಂಗ್ಯಚಿತ್ರವು ಆಕ್ರೋಶದ ಅಭಿವ್ಯಕ್ತಿಯ ಉತ್ತುಂಗವಾಗಿದೆ ಎಂದಿದ್ದರೆ ಮತ್ತೊಂದು: ನಿಜ..ನಾನು ವ್ಯಂಗ್ಯಚಿತ್ರವನ್ನು ಅತ್ಯಂತ ಕೋಪದಲ್ಲಿ ರಚಿಸಿದ್ದೇನೆ ಎಂದೂ ಹೇಳುತ್ತದೆ. ಎರಡು ಅನುವಾದಗಳು ಭಿನ್ನವಾಗಿದ್ದು ಅದರ ಧ್ವನಿಗಳೂ ಭಿನ್ನವಾಗಿವೆ. ಅದೇನೇ ಇದ್ದರೂ ಒಂದು ಉತ್ತಮ ವ್ಯಂಗ್ಯಚಿತ್ರವು ತನ್ನ ಓದುಗರಲ್ಲಿ ಕೇವಲ ನಗುವನ್ನು ಮಾತ್ರವಲ್ಲದೆ ಒಂದು ಆಲೋಚನೆಯನ್ನೂ ಹುಟ್ಟುಹಾಕಬೇಕು. ಹಾಸ್ಯಕ್ಕೆ ಹಲವು ಮುಖಗಳಿದ್ದು ಖಂಡಿತಾ ಸಿಟ್ಟು ಅದರಲ್ಲಿ ಒಂದಲ್ಲ. ಹಾಸ್ಯ ಮತ್ತು ಸಿಟ್ಟು ಎಂದಿಗೂ ಜೊತೆಗೆ ಸಾಗುವುದಿಲ್ಲ. ವ್ಯಂಗ್ಯಚಿತ್ರದಲ್ಲೂ ಸಹ. ಆದರೆ ಇದನ್ನು ಬರೆದ  ವ್ಯಂಗ್ಯಚಿತ್ರಕಾರ ಸಿಟ್ಟಿನಲ್ಲಿ ಬರೆದೆ ಎಂದು ಒಪ್ಪಿಕೊಳ್ಳುತ್ತಾರೆ.

ಒಂದು ದುರಂತವನ್ನು ವ್ಯಂಗ್ಯಚಿತ್ರದಲ್ಲಿ ಅಭಿವ್ಯಕ್ತಿಸುವುದು ಅತ್ಯಂತ ಕಷ್ಟದ ಕೆಲಸ. ಹಾಗೊಮ್ಮೆ ಅಭಿವ್ಯಕ್ತಿಸಿದರೂ ಅದನ್ನು ಅತ್ಯಂತ ನವಿರಾಗಿ ಮಾಡಬೇಕು. ಈಗ ವಿವಾದದಲ್ಲಿರುವ ಬಾಲಾ ಅವರ ವ್ಯಂಗ್ಯಚಿತ್ರವು ಅಂಥ ಸೂಕ್ಷ್ಮಗಳಿಲ್ಲದ ನೇರಾನೇರಾ ಅಭಿವ್ಯಕ್ತಿಯಾಗಿದೆ. ಅವರು ಮಗುವನ್ನು, ದುರಂತದ ಬಲಿಪಶುವನ್ನು, ಸುಟ್ಟಂತೆ ತೋರಿಸಿದ್ದಾರೆ. ವ್ಯಂಗ್ಯಚಿತ್ರದಲ್ಲಿ ಮೂರೂ ಅಧಿಕಾರಿಗಳನ್ನೂ ನಗ್ನವಾಗಿಯೂ ತಮ್ಮ ಮರ್ಮಾಂಗಗಳನ್ನು ಪ್ರಾಯಶಃ ಹೊಸ ನೋಟುಗಳ ಕಂತೆಯಿಂದಲೂ ಮುಚ್ಚಿಕೊಂಡಿರುವಂತೆ ತೋರಿಸಿದ್ದಾರೆ. ಹೀಗಾಗಿ ಯಾವುದೇ ರೀತಿಯಲ್ಲಿ ನೋಡಿದರೂ ಇದು ವ್ಯಂಗ್ಯಚಿತ್ರದ ಭೂಮಿಕೆಗೆ ಹೊಂದುವುದಿಲ್ಲ.

ಬಡ್ಡಿವ್ಯಾಪಾರವೆಂಬುದು ಅತ್ಯಂತ ದುಬಾರಿ ಬಡ್ಡಿಗೆ ಸಾಲ ಕೊಡುವ ಕಲೆಯಾಗಿದೆ. ಬಡ್ಡಿವ್ಯಾಪಾರಿಯು ನೀಡುತ್ತಿದ್ದ ಕಿರುಕುಳವೇ ದುರದೃಷ್ಟಕರ ಘಟನೆಗಳಿಗೂ ಮತ್ತು ವ್ಯಂಗ್ಯಚಿತ್ರಕ್ಕೂ ಕಾರಣವಾಗಿದೆ. ಆದರೂ ಬಡ್ಡಿವ್ಯಾಪಾರಿ ಮಾತ್ರ ವ್ಯಂಗ್ಯಚಿತ್ರದಲ್ಲೆಲ್ಲೂ ಕಾಣುವುದೇ ಇಲ್ಲ. ಒಂದು ವೇಳೆ ಕಲಾವಿದ ಇನ್ನಷ್ಟು ಸಮಯ ಕೊಟ್ಟು ಅಲೋಚನೆ ಮಾಡಿ ಚಿತ್ರಿಸಿದ್ದರೆ ಪ್ರಾಯಶಃ ಕೆಲವು ಗೆರೆಗಳೆನ್ನೆಳೆದು ಕ್ರೂರಿಯನ್ನು ಚಿತ್ರದ ಚೌಕಟ್ಟಿನೊಳಗೆ ತರಬಹುದಿತ್ತು. ಆಗ ವಿವಸ್ತ್ರವಾಗಿ ನಿಂತ ಅಧಿಕಾರಶಾಹಿಗೆ ಸರಿಯಾದ ಸಮತೋಲನ ಚಿತ್ರದಲ್ಲಿರುತ್ತಿತ್ತು. ಪ್ರಾಯಶಃ ಹಾಗೆ ಮಾಡಿದ್ದರೆ ಅಧಿಕಾರಶಾಹಿಗೂ ಸ್ವಲ್ಪ ಸಮಾಧಾನವೆನಿಸಿ ಬಾಲಾ ಅವರು ರಾತ್ರೋರಾತಿ ಬಂಧನಕ್ಕೊಳಗಾಗಿ ಕತ್ತಲಕೋಣೆಯ ಪಾಲಾಗುವ ಗತಿ ಬರುತ್ತಿರಲಿಲ್ಲ. ಏಕೆಂದರೆ ವ್ಯಂಗ್ಯಚಿತ್ರವೊಂದರಲ್ಲಿ ಹೀಗೆ ತಮ್ಮನ್ನು ನಗ್ನವಾಗಿ ಚಿತ್ರಿಸಲಾಗಿದೆ ಎಂಬುದು ಅಧಿಕಾರಶಾಹಿಗಳ ಗಮನಕ್ಕೆ ಬಂದದ್ದೇ ಅದು ಪ್ರಕಟವಾಗಿ ಭರ್ತಿ ಮೂರುವಾರಗಳ ನಂತರ.

ವ್ಯಂಗ್ಯಚಿತ್ರವಂತೂ ಯಾವ ಅಂಕೆಗೂ ಒಳಪಡದೆ ಅಭಿವ್ಯಕ್ತಿಯ ಸ್ವಾತಂತ್ರ್ಯವು ಸ್ವೈರವಿಹಾರ ಮಾಡುವ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿತು. ಸಾಮಾಜಿಕ ಜಾಲತಾಣಗಳಿಗೂ ಅಂಥಾ ಸಾಮಗ್ರಿಗಳೇ ಬೇಕು. ಮುದ್ರಣ ಮಾಧ್ಯಮದಲ್ಲಿ ಸಂಪಾದಕರು ವಹಿಸುವ ಯುಕ್ತಯುಕ್ತ ವಿವೇಚನೆಯ ಎಚ್ಚರಗಳು ಸಾಮಾಜಿಕ ಜಾಲತಾಣದಲ್ಲಿ ಇರುವುದಿಲ್ಲ. ಬದಲಿಗೆ ಇಲ್ಲಿ ಏನನ್ನು ಬೇಕಾದರೂ ಪ್ರಕಟಿಸಬಹುದೆಂಬ ಬೇಫಿಕರ್ ಮನೋಭಾವವೇ ಚಾಲ್ತಿಯಲ್ಲಿರುತ್ತದೆ. ಬಾಲಾ ಅವರೇ ಸ್ವತಃ ಒಪ್ಪಿಕೊಂಡಂತೆ ಅವರು ವ್ಯಂಗ್ಯಚಿತ್ರವನ್ನು ಸಿಟ್ಟಿನಲ್ಲಿ ರಚಿಸಿದ್ದು ಸಭ್ಯತೆಯ ಎಲ್ಲೆಗಳನ್ನು ದಾಟಿದ್ದಾರೆ. ಅಭಿವ್ಯಕ್ತಿಯ ಸ್ವಾತಂತ್ರ್ಯವು ತನ್ನ ಮಿತಿಯಲ್ಲಿ ಎಷ್ಟೇ ಮುಖ್ಯವೆಂದು ಒಪ್ಪಿಕೊಂಡರೂ ವ್ಯಂಗ್ಯಚಿತ್ರ ರಚನೆಯಲ್ಲಿ ಅವ್ಯಾವುದೂ ಮುಖ್ಯಪಾತ್ರವನ್ನು ವಹಿಸಿಲ್ಲವೆಂಬುದು ಸ್ಪಷ್ಟ.

ವ್ಯಂಗ್ಯಚಿತ್ರವೊಂದನ್ನು ನೇರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಬಿಡುವುದು ಮತ್ತೊಂದು ಬಗೆಯ ಸಮಸ್ಯೆ. ಅಂಥ ಕಡೆಗಳಲ್ಲಿ ಗಂಭೀರವಾದ ಹಾಗೂ ಮತಿಹೀನವಾದ ಎರಡೂ ಬಗೆಯ ಟೀಕೆಗಳು, ಎದುರು ಜವಾಬುಗಳು. ವಿಮರ್ಶೆಗಳು ಕೂಡಲೇ ದಾಖಲಾಗುತ್ತವೆ. ಅದನ್ನು ನೋಡುವವರೆಲ್ಲಾ ಮೆಚ್ಚಿಕೊಳ್ಳುತ್ತಾರಂತೇನಲ್ಲ. ಯಾವ ಎಗ್ಗೂ ಸಿಗ್ಗೂ ಇಲ್ಲದಂತೆ  ಎಲ್ಲಾ ಬಗೆಯ ಪ್ರತಿಕ್ರಿಯೆಗಳು ಅಲ್ಲಿ ನುಗ್ಗಿ ಬರುತ್ತವೆ. ಒಂದು ಕಡೆ ಸಾಮಾಜಿಕ ಜಾಲತಾಣಗಳಲ್ಲಿ ಮುದ್ರಣ ಮಾಧ್ಯಮಕ್ಕಿಂತೆ ಹೆಚ್ಚಿನ ಸ್ವಾತಂತ್ರ್ಯವಿರುವುದು ನಿಜವೇ ಆದರೂ, ಸಕಾರಣವಾಗಿಯೇ ಒಬ್ಬ ವಿವೇಚನಾರಹಿತ ವ್ಯಂಗ್ಯಚಿತ್ರಕಾರರಿಗೆ ಸಾಕಷ್ಟು ಅಪಾಯಗಳು ಎದುರಾಗುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ ಹಿಂದೆ ಮುದ್ರಣ ಮಾಧ್ಯಮದಲ್ಲಿ ಈಗಿರುವುದಕ್ಕಿಂತ ಹೆಚ್ಚಿನ ಮುಕ್ತತೆಯೂ ಮತ್ತು ವ್ಯಂಗ್ಯವನ್ನು ಒಪ್ಪಿಕೊಳ್ಳುವುದರಲ್ಲಿ ಹೆಚ್ಚಿನ ಸಹನಶೀಲತೆಯೂ ಇತ್ತೆಂದು ಹೇಳಬಹುದು. ಕಳೆದ ಕೆಲವು ವರ್ಷಗಳ ಹಿಂದೆ ಪ್ರಕಟವಾದ ವ್ಯಂಗ್ಯಚಿತ್ರಗಳನ್ನು ಈಗ ಮರುಮುದ್ರಣ ಮಾಡಬೇಕೆಂದರೂ ಹಿಂದೆಮುಂದೆ ನೋಡಬೇಕಾದ ಸಂದರ್ಭವಿದು. ಪರಸ್ಪರ ವಿರುದ್ಧ ವೈಚಾರಿಕ ಧ್ರುವಗಳನ್ನಷ್ಟೇ ಗಮನಿಸದೇ ವಿಶಾಲ ಓದುಗ ಸಮುದಾಯವನ್ನೂ ಅಂಥ ಸಂಧರ್ಭಗಳಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಿರುತ್ತದೆ. ಇಂದು ದೇಶದ ಜನಸಮುದಾಯವು ಮೊದಲಿಗಿಂತ ಸಣ್ಣಸಣ್ಣ ತುಂಡುಗಳಾಗಿ ವಿಭಜಿತಗೊಂಡಿದ್ದು ನಮ್ಮ ಕ್ರಿಯೆ-ಪ್ರತಿಕ್ರಿಯೆಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಯಾವುದಾದರೂ ಒಂದು ಸಮುದಾಯದ ಭಾವನೆಗಳಿಗೆ ಘಾಸಿ ಮಾಡಿಬಿಡುವ ಸಂಭವನೀಯತೆ ಹೆಚ್ಚಿದೆ.

ಸಾರಾಂಶದ ವಿಷಯವೇನೆಂದರೆ ಒಬ್ಬ ವ್ಯಂಗ್ಯಚಿತ್ರಕಾರ ತನ್ನ ಕೃತಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೆಂದು ಬಯಸುತ್ತಾನೋ ಅದಕ್ಕಿಂತ ಸಾಕಷ್ಟು ಭಿನ್ನಭಿನ್ನ ರೀತಿಯಲ್ಲಿ ಅದನ್ನು ಅರ್ಥಮಾಡಿಕೊಳ್ಳಬಹುದು ಅಥವಾ ಅಂಥಾ ಸಾಧ್ಯತೆ ಇರುತ್ತದೆ. ಸರಳವಾಗಿ ಹೇಳಬೇಕೆಂದರೆ ಒಂದು ವ್ಯಂಗ್ಯಚಿತ್ರವನ್ನು ರಚಿಸುವಾಗ ಮೊದಲಿಗಿಂತಲೂ ಈಗ ಹೆಚ್ಚಿನ ಪೂರ್ವಾಲೋಚನೆಯ ಅಗತ್ಯವಿದೆ. ಯಾರು ಬೇಕಾದರೂ ಒಂದು  ವ್ಯಂಗ್ಯಚಿತ್ರದ ಪ್ರಕಟಣೆಯನ್ನು ತಡೆಹಿಡಿಯಬಹುದು. ಮುದ್ರಣ ಮಾಧ್ಯಮದಲ್ಲಿ ಸಂಪಾದಕರು ಅಂಥ ಒಬ್ಬರು ಇರುವುದರಿಂದ ವ್ಯಂಗ್ಯಚಿತ್ರಕಾರ ಇದ್ದಿದ್ದರಲ್ಲಿ ಸುರಕ್ಷಿತ. ಏಕೆಂದರೆ ಸಂಪಾದಕರು ಯಾವುದೇ ಆಕ್ಷೇಪಣೀಯ ವ್ಯಂಗ್ಯಚಿತ್ರವನ್ನು ತಡೆಹಿಡಿಯಬಹುದು. ಹಲವು ದಶಕಗಳ ಹಿಂದೆ ತಮಿಳಿನ ಆನಂದ ವಿಗಡನ್ ಎಂಬ ಪತ್ರಿಕೆಯ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಶಾಸಕರನ್ನು ಕೆಟ್ಟ ರೀತಿಯಲ್ಲಿ ಅಭಿವ್ಯಕ್ತಿಸಿದ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ಕಾರಣಕ್ಕೆ ಹಲವು ಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಅದನ್ನು ರಚಿಸಿದ ವ್ಯಂಗ್ಯಚಿತ್ರಕಾರ ಬಚಾವಾಗಿದ್ದರು. ಹೀಗಾಗಿ ಒಬ್ಬ ಒಳ್ಳೆಯ ಸಂಪಾದಕರ ಅಗತ್ಯವಂತೂ ತುಂಬಾ ಇದೆ.
-------------
ಎನ್. ಪೊನ್ನಪ್ಪ ಅವರು ಪ್ರಖ್ಯಾತ ವ್ಯಂಗ್ಯಚಿತ್ರಕಾರರಾಗಿದ್ದು ಇಪಿಡಬ್ಲ್ಯೂ ಪತ್ರಿಕೆಗೂ ವ್ಯಂಗ್ಯಚಿತ್ರಗಳನ್ನು ರಚಿಸುತ್ತಾರೆ.

  ಕೃಪೆ: Economic and Political Weekly,Nov 11, 2017. Vol. 52. No. 45
                                                                                                
ಕಾರ್ಮಿಕರು ಸಾವುಗಳು ಮತ್ತು ಸರಾಗವಾಗಿ ನಡೆಯುವ ಉದ್ಯಮಗಳು


 ಅನುಶಿವಸುಂದರ್
Image result for Raebareli tragedy
ಸರಾಗವಾಗಿ ಉದ್ಯಮ ನಡೆಸಲು ತೆರಬೇಕಾದ ಬೆಲೆ ಕಾರ್ಮಿಕರ ಸುರಕ್ಷೆಯ ಬಗ್ಗೆ ಅಮಾನುಷ ನಿರ್ಲಕ್ಷ್ಯ.

ಭಾರತದಲ್ಲಿ ಮನುಷ್ಯರ ಜೀವ ಬಲು ಅಗ್ಗವಾಗಿಬಿಟ್ಟಿದೆ. ಎಷ್ಟು ಅಗ್ಗವೆಂದರೆ ಒಬ್ಬ ಬಡವ ಅಥವಾ ಒಬ್ಬ ಕಾರ್ಮಿಕ ಸತ್ತರೆ ಯಾರಿಗೂ ಏನೂ ಅನಿಸುವುದೇ ಇಲ್ಲ. ಮಾಧ್ಯಮಗಳು ಇತರ ಹಲವಾರು ವಿಷಯಗಳ ಬಗ್ಗೆ ಸಾರ್ವಜನಿಕ ಆಕ್ರೋಶವನ್ನು ಕೆರಳಿಸುತ್ತವೆ. ಆದರೆ ನಾವೂ ಕೂಡ ಪರೋಕ್ಷವಾಗಿ ಹೊಣೆಗಾರರಾಗಿರುವ ಸಮಾಜದ ಅತ್ಯಂತ ಅತಂತ್ರ ವರ್ಗಗಳ ಸಾವಿನ ಬಗ್ಗೆ ಮಾತ್ರ ಎಂದಿಗೂ ಮಾಧ್ಯಮಗಳ ಮನ ಮಿಡಿಯುವುದೇ ಇಲ್ಲ. ಹೀಗಾಗಿಯೇ ಇತ್ತಿಚೆಗೆ ಸಾರ್ವಜನಿಕ ವಲಯದ ಉಷ್ಣ ವಿದ್ಯುತ್ ಸ್ಥಾವರವೊಂದರಲ್ಲಿ ನಡೆದ ಅಪಘಾತವೊಂದರಲ್ಲಿ ೩೨ ಜನ ಕಾರ್ಮಿಕರು ಸತ್ತು ನೂರಕ್ಕೂ ಹೆಚ್ಚು ಕಾರ್ಮಿಕರು ಮಾರಣಾಂತಿಕವಾಗಿ ಗಾಯಗೊಂಡಿದ್ದು ಯಾರ ಗಮನಕ್ಕೂ ಬರದ ಮತ್ತೊಂದು ಅಪಘಾತವಾಗಿ ಘಟಿಸಿಹೋಯಿತು. ರಾಜ್ಯ ಸರ್ಕಾರವು ಒಂದಷ್ಟು ಪರಿಹಾರವನ್ನು ಘೊಷಿಸಿತು. ಒಂದು ತನಿಖಾ ಅಯೋಗವನ್ನು ರಚಿಸಲಾಯಿತು. ಅಷ್ಟೆ. ಪ್ರಕರಣವೇ ಜನಮಾನಸದಿಂದ ಮರೆಯಾಗಿ ಹೋಯಿತು. ಉತ್ತರ ಪ್ರದೇಶದ ರಾಯ್ಬರೇಲಿ ಜಿಲ್ಲೆಯ ಉಂಚಹಾರದ ನ್ಯಾಶನಲ್ ಥರ್ಮಲ್ ಪವರ ಕಾರ್ಪೊರೇಷನ್ಗೆ (ಎನ್ಟಿಪಿಸಿ)ಸೇರಿದ ಘಟಕವೊಂದರಲ್ಲಿ ನವಂಬರ್ ರಂದು ನಡೆದ ಅವಘಡವು ಕಾರ್ಮಿಕರ ಸುರಕ್ಷತೆಯ ಬಗ್ಗೆ ಇರುವ ಅಮಾನುಷ ನಿರ್ಲಕ್ಷ್ಯವನ್ನೂ ಮತ್ತು ಒಂದು ನಿಯಮದಂತೆ ದೇಶದಲ್ಲಿ ನಡೆಯುತ್ತಿರುವ ಕಾರ್ಮಿಕ ಕಾನೂನುಗಳ ಉಲ್ಲಂಘನೆಯ ಭೀಕರತೆಯನ್ನು ಬಯಲಿಗೆ ತಂದಿದೆ.

ಎನ್ಟಿಪಿಸಿ ಘಟಕದಲ್ಲಿ ನಿರ್ದಿಷ್ಟವಾಗಿ ಏನು ಸಂಭವಿಸಿತೆಂಬ ವಿವರಗಳು ಪ್ರಾಯಶಃ ತನಿಖೆಯ ನಂತರ ಲಭ್ಯವಾಗಬಹುದು. ಆದರೂ ಈಗಾಗಲೇ ಕೆಲವು ವಾಸ್ತವ ಸತ್ಯಗಳು ಬಯಲಾಗಿವೆ. ಉಂಚಹಾರ್ ಉಷ್ಣ ವಿದ್ಯುತ್ ಸ್ಥಾವರದಲ್ಲಿ ಹೊಸದಾಗಿ ನಿರ್ಮಿಸಲಾದ  ನೇ ಘಟಕದ ಅಧಿಕ ಒತ್ತಡದ ಸ್ಟೀಮ್ ಬಾಯ್ಲರ್ನಲ್ಲಿ ತೀವ್ರವಾದ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದ್ದವು. ಅದನ್ನು ನಿವಾರಿಸುವ  ಸಲುವಾಗಿ ಬಾಯ್ಲರ್ ಅನ್ನು ಬಂದ್ ಮಾಡಿರಬೇಕಿತ್ತು. ಆದರೂ, ಅದು ಕಾರ್ಯ ನಿರ್ವಹಿಸುತ್ತಲೇ ಇತ್ತು ಮತ್ತು ಬಾಯ್ಲರ್ನಲ್ಲಿ ತುಂಬಿಕೊಂಡಿದ್ದ ಕಲ್ಲಿದ್ದಲ ಧೂಳನ್ನು ಕೈಗಳಿಂದಲೇ ತೆಗೆಯಲು ಕಾರ್ಮಿಕರಿಗೆ ಹೇಳಲಾಯಿತು. ಬಾಯ್ಲರ್ನಲ್ಲಿ ಒತ್ತಡವು ತೀವ್ರಗೊಂಡು ಅದು ಸ್ಪೋಟಗೊಳ್ಳುವ ಸಮಯದಲ್ಲಿ ಅದರ ಆಸುಪಾಸಿನಲ್ಲಿ ೩೦೦ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಕಾರ್ಮಿಕರ ಸುರಕ್ಷತೆಯನ್ನು ಅದ್ಯತೆಯನ್ನಾಗಿ ಮಾಡಿಕೊಂಡಿದ್ದರೆ ಖಂಡಿತಾ ದುರಂತವನ್ನು ತಡೆಗಟ್ಟಬಹುದಾಗಿತ್ತು.

ನಾವು ಇಲ್ಲಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಮುಖ್ಯವಾದ ಸಂಗತಿಯೆಂದರೆ ದುರಂತವು ನಡೆದಿರುವುದು ಯಾವುದೋ ಸಣ್ಣಪುಟ್ಟ ಘಟಕದಲ್ಲೊ ಅಥವಾ ಯಾವುದೇ ಕಾರ್ಮಿಕ ಸುರಕ್ಷಾ ಕಾಯಿದೆ ಮತ್ತು ನಿಯಂತ್ರಣಗಳಿಗೆ ಒಳಪಡದ ಕಾರ್ಖಾನೆಯಲ್ಲೋ ಅಲ್ಲ. ಅಪಘಾತವು ನಡೆದಿರುವುದು ದೇಶಾದ್ಯಂತ ೪೮ ಉಷ್ಣ ವಿದ್ಯುತ್ ಘಟಕಗಳ ನಿರ್ವಹಣೆ ಮಾಡುವ ದೇಶದ ಅತ್ಯಂತ ದೊಡ್ಡ ವಿದ್ಯುತ್ ಉತ್ಪಾದನಾ ಸಂಸ್ಥೆಯಾದ ಎನ್ಟಿಪಿಸಿ ಯು ನಡೆಸುವ ಘಟಕವೊಂದರಲ್ಲಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ಅಪಘಾತದಿಂದ ತೀವ್ರವಾಗಿ ಹಾನಿಗೊಳಗಾದವರು ಕೆಲಸವನ್ನು ತುಂಡುಗುತ್ತಿಗೆಯಲ್ಲಿ ಪಡೆದುಕೊಂಡ ಗುತ್ತಿಗೆದಾರ ಕರೆತಂದಿದ್ದ ವಲಸೆ ಗುತ್ತಿಗೆ ಕಾರ್ಮಿಕರು. ಇದು ದೊಡ್ಡ ದೊಡ್ಡ ಉದ್ಯಮ ಸಂಸ್ಥೆಗಳು ಹೂಡುತ್ತಿರುವ ಕುತಂತ್ರದ ಭಾಗ. ಇದು ಉದ್ಯಮಗಳು ಮತ್ತು ಮಾಲೀಕರು ಕಾರ್ಮಿಕರ ಬಗ್ಗೆ ತಮಗಿರಬೇಕಾದ ಹೊಣೆಗಾರಿಕೆಯನ್ನು ಕಾರ್ಮಿಕ ಕಾನೂನುಗಳು ಅನ್ವಯವಾಗುವ ಅತಿ ಕಡಿಮೆ ಸಂಖ್ಯೆಯ ಶಾಶ್ವತ ಕಾರ್ಮಿಕರಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ಬಹುಪಾಲು ಕೆಲಸಗಳನ್ನು ಅದರಲ್ಲೂ ಇಂಥಾ ಅಪಾಯಕಾರಿ ಕೆಲಸಗಳನ್ನು ಹೊರಗುತ್ತಿಗೆಗೆ ಕೊಡಲಾಗುತ್ತದೆ. ಸಾಮಾನ್ಯವಾಗಿ ಅಂಥ ತುಂಡು ಗುತ್ತಿಗೆದಾರರು ದಿನಗೂಲಿಯ ಲೆಕ್ಕದಲ್ಲಿ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಗುತ್ತಿಗೆ ಕಾರ್ಮಿಕರಿಗೆ ಅಪಘಾತ ಅಥವಾ ಅಪಾಯಗಳು ಸಂಭವಿಸಿದಾಗ ರಕ್ಷಿಸಿಕೊಳ್ಳಲು ಅರೋಗ್ಯ ವಿಮಾದ ಸೌಲಭ್ಯವಿರುವುದಿಲ್ಲ. ಭಾರತದ ತಥಾಕಥಿತ ಸಂಘಟಿತ ಕ್ಷೇತ್ರದ ಕರಾಳ ಮುಖಗಳು ಇಂಥಾ ಅಪಘಾತಗಳು ಸಂಭವಿಸಿದಾಗ ಬಯಲಾಗುತ್ತವೆ.

ಅತ್ಯುತ್ತಮವಾಗಿ ನಿರ್ವಹಿಸಲ್ಪಡುವ ಕಾರ್ಖಾನೆಗಳಲ್ಲೂ ಅಪಘಾತಗಳು ಸಂಭವಿಸಬಹುದು. ಆದರೆ ಅವುಗಳ ದೈನಂದಿನ ನಿರ್ವಹಣೆಯಲ್ಲಿ ಯಾವುದೇ ರಾಜಿಯನ್ನು ಮಾಡಿಕೊಳ್ಳದಿದ್ದಲ್ಲಿ ಇಂಥಾ ಅಪಘಾತಗಳನ್ನು ತಡೆಗಟ್ಟಬಹುದು ಮತ್ತು ಅವುಗಳ ಪರಿಣಾಮವನ್ನು ಕಡಿಮೆ ಮಾಡಬಹುದು. ಭೂಪಾಲ್ ಅನಿಲ ದುರಂತದಲ್ಲಿ ನಾವು ನೋಡಿದಂತೆ ಕಳಪೆ ನಿರ್ವಹಣೆಯ ಕಾರಣದಿಂದಲೇ ೧೯೮೪ರ ನವಂಬರ್ ರಂದು ಕಾರ್ಖಾನೆ ಆವರಣದಲ್ಲಿದ್ದ ಮೀಥೈಲ್ ಐಸೊಸಿಯನೈಟ್ ಟ್ಯಾಂಕು ಸ್ಪೋಟಗೊಳ್ಳುವಂತಾಯಿತು. ಅದರಿಂದ ಭೂಪಾಲಿನ ಹಲವು ಭಾಗಗಳನ್ನು ಆವರಿಸಿಕೊಂಡ ಅನಿಲ ಮೋಡಗಳ ಪರಿಣಾಮವನ್ನು ಇವತ್ತಿಗೂ ಭೂಪಾಲಿನ ಜನ ಅನುಭವಿಸುತ್ತಿದ್ದಾರೆ. ದುರಂತದ ಕಾರಣದಿಂದಾಗಿಯೇ ಭಾರತದಲ್ಲಿ ಸಡಿಲವಾಗಿದ್ದ ಕಾರ್ಮಿಕರ ಸುರಕ್ಷತೆಯ ಬಗೆಗಿನ ಕಾನೂನುಗಳು ಸ್ವಲ್ಪವಾದರೂ ಬಿಗಿಯಾಯಿತು.

ಆದರೆ ಇಂದು ನರೇಂದ್ರಮೋದಿ ಸರ್ಕಾರದ ಇಷಾರೆಯ ಮೇರೆಗೆ ಉದ್ಯಮಗಳ ಸರಾಗ ನಿರ್ವಹಣೆಯನ್ನು ಹೆಚ್ಚು ಮಾಡುವ ಹೆಸರಲ್ಲಿ ಹಲವಾರು ರಾಜ್ಯಗಳಲ್ಲಿ ಇಂಥಾ ಕಾನೂನುಗಳನ್ನು ಸಡಿಲಗೊಳಿಸಲಾಗುತ್ತಿದೆ. ೨೦೧೪ರ ನಂತರದಲ್ಲಿ ೧೯೭೦ರ ಗುತ್ತಿಗೆ ಕಾರ್ಮಿಕರ ನಿಯಂತ್ರಣ ಮತ್ತು ನಿರ್ಮೂಲನೆ ಕಾಯಿದೆಗೆ, ೧೯೪೮ರ ಕಾರ್ಖಾನೆ ಕಾಯಿದೆಗೆ, ೧೯೪೭ರ ಕೈಗಾರಿಕಾ ವ್ಯಾಜ್ಯ ಕಾಯಿದೆಗೂ ಹಲವಾರು ತಿದುಪ್ಪಡಿಗಳನ್ನು ಮಾಡುವ ಪ್ರಸ್ತಾಪಗಳನ್ನು ಮಾಡಲಾಗಿದೆ. ಅಷ್ಟು ಮಾತ್ರವಲ್ಲ, ಕೇಂದ್ರೀಯ ಬಾಯ್ಲರ್ ನಿಗಮದಿಂದ ತಪಾಸಣೆ ಮತ್ತು ಅನುಮತಿ ಪತ್ರವನ್ನು ಪಡೆಯುವುದನ್ನು ಕಡ್ಡಾಯ ಮಾಡುತ್ತಿದ್ದ ೧೯೫೦ರ ಭಾರತೀಯ ಬಾಯ್ಲರ್ ನಿಯಂತ್ರಣ ಕಾಯಿದೆಗೂ ತಿದ್ದುಪಡಿ ತಂದು ಸ್ವಯಂ ಪ್ರಮಾಣೀಕರಣವನ್ನು ಅನುಮತಿಸಲಾಗಿದೆ. ಇನ್ಸ್ಪೆಕ್ಟರ್ ರಾಜ್ ಅನ್ನು ಇಲ್ಲದಂತೆ ಮಾಡುವುದೇ ಇದರ ಹಿಂದಿನ ಉದ್ದೇಶವೆಂದು ಇದಕ್ಕೆ ಸಮಜಾಯಿಷಿ ನೀಡಲಾಗುತ್ತಿದೆ. ಆದರೆ ಇದರಿಂದಾಗಿ ಸುರಕ್ಷತೆಯನ್ನು ಖಾತರಿಗೊಳಿಸುವ ನಿಯಂತ್ರಣಗಳಲ್ಲಿ ರಾಜಿಯಾಗದಂತೆ ನೋಡಿಕೊಳ್ಳುವ ಯಾವುದೇ ಕ್ರಮಗಳನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ.

ಮೇಲಾಗಿ, ಉಂಚಹಾರ್ನಲ್ಲಿ ನಡೆದಿರುವಂತೆ, ಅಪಾಯಕಾರಿ ಘಟಕಗಳಲ್ಲಿ ಹೆಚ್ಚೆಚ್ಚು ಗುತ್ತಿಗೆ ಕಾರ್ಮಿಕರ ನೇಮಕಾತಿಗೆ ಅನುಮತಿಕೊಡಬಲ್ಲಂಥ ತಿದ್ದುಪಡಿಗಳನ್ನು ಗುತ್ತಿಗೆ ಕಾರ್ಮಿಕರಿಗೆ ಸಂಬಂಧಪಟ್ಟಂಥ ಕಾಯಿದೆಗೆ ತರುವ ಪ್ರಸ್ತಾಪಗಳನ್ನು ಮಾಡಲಾಗಿದೆ. ಹಾಲಿ ಇರುವ ಕಾನೂನಿನ ಪ್ರಕಾರ, ಅದರಲ್ಲೂ ಏಷಿಯಾಡ್ ಪ್ರಕರಣದಲ್ಲಿ (ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ ಮತ್ತು ಭಾರತ ಸರ್ಕಾರ ಹಾಗೂ ಇತರರು, ೧೯೮೨) ಸುಪ್ರೀಂ ಕೋರ್ಟು ನೀಡಿರುವ ಆದೇಶದಂತೆ ಸರ್ಕಾರಿ ಸಂಸ್ಥೆಗಳಲ್ಲಿ ನೇಮಿಸಿಕೊಂಡಿರುವ ಗುತ್ತಿಗೆ ಕಾರ್ಮಿಕರಿಗೆ ಸಂಬಂಧಪಟ್ಟಂತೆ ಸರ್ಕಾರವೇ ಅವರನ್ನು ನೇಮಕಾತಿ ಮಾಡಿಕೊಂಡ ಪ್ರಮುಖ ಉದ್ಯೋಗದಾತನಾಗಿರುತ್ತದೆ. ಹೀಗಾಗಿ ಉಂಚಹಾರ್ ಘಟಕದಲ್ಲಿದ್ದ ಎಲ್ಲಾ ಶಾಶ್ವತ ಮತ್ತು ಗುತ್ತಿಗೆ ಕಾರ್ಮಿಕರಿಗೆ ಎನ್ಟಿಪಿಸಿ ಯೇ ಬಾಧ್ಯಸ್ಥನಾಗಿರುತ್ತದೆ. ಸರ್ಕಾರವು ಗಾಯಗೊಂಡ ಕಾರ್ಮಿಕರಿಗೆ ಕೊಡುವ ಪರಿಹಾರವಾಗಲೀ ಅಥವಾ ಸತ್ತ ಕಾರ್ಮಿಕರ ಕುಟುಂಬಗಳಿಗೆ ಕೊಡುವ ಪರಿಹಾರವಾಗಲೀ ಎಲ್ಲಾ ಕಾರ್ಮಿಕರ ಬಗ್ಗೆ ಎನ್ಟಿಪಿಸಿ ಗೆ ಇರುವ ಹೊಣೆಗಾರಿಕೆಯನ್ನು ಬದಲಿ ಮಾಡುವುದಿಲ್ಲ ಎಂಬುದನ್ನು ನಾವು ಒತ್ತಿಹೇಳಬೇಕಿದೆದುರದೃಷ್ಟವಶಾತ್ ಗುತ್ತಿಗೆ ಕಾರ್ಮಿಕರಿಗೆ ಸಬಂಧಪಟ್ಟ ಕಾಯಿದೆಗೆ ಪ್ರಸ್ತಾಪಿತ ತಿದ್ದುಪಡಿಗಳು ಗುತ್ತಿಗೆ ಕಾರ್ಮಿಕರ ಎಲ್ಲಾ ಹಕ್ಕುಗಳನ್ನು ಕಿತ್ತುಕೊಳ್ಳಲಿದೆ.

ಸರ್ಕಾರವು ಕಾರ್ಮಿಕ ಹಕ್ಕುಗಳ ತಪಾಸಣೆಯನ್ನು ಮಾಡುವ ನಿಯಮಾವಳಿಗಳಲ್ಲೂ ಬದಲಾವಣೆ ಮಾಡಿದೆ. ಮೂಲಕ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆ (ಐಎಲ್) ೮೧ ನೇ ಕಲಮನ್ನು ಉಲ್ಲಂಘಿಸಿದೆ. ಏಕೆಂದರೆ ಒಪ್ಪಂದಕ್ಕೆ ಭಾರತವು ಭಾಗೀದಾರನಾಗಿದೆ. ಸರ್ಕಾರವು ಶ್ರಮ್ ಸುವಿಧಾ ಎಂಬ ಪೋರ್ಟಲ್ ಒಂದನ್ನು ಸ್ಥಾಪಿಸಿದ್ದು ಎಲ್ಲಾ ಉದ್ಯಮಿಗಳು ಪೋರ್ಟಲ್ನಲ್ಲಿ ತಾವು ಕಾರ್ಮಿಕರಿಗೆ ಸಂಬಂಧಪಟ್ಟ ಎಲ್ಲಾ ೧೬ ಕಾಯಿದೆಗಳನ್ನು ಪಾಲಿಸುತ್ತಿದ್ದೇವೆ ಎಂದು ಸ್ವಯಂ ಪ್ರಮಾಣಿಕರಿಸಿದರೆ ಸಾಕಾಗುತ್ತದೆ. ಇಂಥಾ ಸ್ವಯಂ ಪ್ರಮಾಣಿಕರಣಗಳು ಪರಿಸರ ಸಂಬಂಧೀ ಕಾನುನುಗಳ ಪಾಲನೆಯಲ್ಲೂ ಮೋಸಪೂರಿತವಾಗಿರುತ್ತದೆ. ಹೀಗಿರುವಾಗ ಅವು ಕಾರ್ಮಿಕರ ಕಾನೂನು ಅಥವಾ ಕೈಗಾರಿಕಾ ಸುರಕ್ಷತೆಯ ವಿಷಯದಲ್ಲಿ ಮಾತ್ರ ಹೇಗೆ ಭಿನ್ನವಾಗಿರಲು ಸಾಧ್ಯ? ಮೇಕ್ ಇನ್ ಇಂಡಿಯಾ ಹಾಗೂ ಹೂಡಿಕೆಗಳನ್ನು ಉತ್ತೇಜಿಸುವ ಹೆಸರಿನಲ್ಲಿ ಸರ್ಕಾರವು, ಕಾರ್ಮಿಕರ ಅದರಲ್ಲೂ ಅತ್ಯಂತ ಅಸುರಕ್ಷಿತರಾದ ದಿನಗೂಲಿ ಹಾಗೂ ಗುತ್ತಿಗೆ ಕಾರ್ಮಿಕರ ಸುರಕ್ಷೆ ಮತ್ತು ಹಕ್ಕುಗಳಿಗೆ ಂಬಂಧಪಟ್ಟ ಕಾನೂನುಗಳನ್ನು ಉದ್ಯಮಿಗಳು ಅಟ್ಟಹಾಸದಿಂದ ಮಾಡುತ್ತಿರುವ ಉಲ್ಲಂಘನೆಯ ಬಗ್ಗೆ ಜಾಣ ಕುರುಡನ್ನು ಪ್ರದರ್ಶಿಸುತ್ತಿದೆ. ಉಂಚಹಾರ್ನಲ್ಲಿ ನಡೆದ ಅಪಘಾತವು ಕಟು ವಾಸ್ತವವನ್ನು ಮತ್ತಷ್ಟು ಗಂಭೀರವಾಗಿ ನಮ್ಮ ಮುಂದಿರಿಸಿದೆ.

ಕೃಪೆ: Economic and Political Weekly Nov 11, 2017. Vol. 52. No. 45