ಬುಧವಾರ, ಡಿಸೆಂಬರ್ 22, 2010

ರಹಮತ್ ತರೀಕೆರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂಸ್ಕೃತಿ ಚಿಂತನೆಗೆ ಸಂದ ಗೌರವ

ರಹಮತ್ ತರೀಕೆರೆ ಅವರು ಕನ್ನಡದ ಆಲೋಚನ ಕ್ರಮವನ್ನು ಭಿನ್ನವಾಗಿ ಕಟ್ಟುತ್ತಿರುವವರಲ್ಲಿ ಪ್ರಮುಖರು. ಅವರ ಒಟ್ಟೂ ಆಲೋಚನೆಯೊಳಗೆ ಪ್ರತಿಸಂಸ್ಕೃತಿಯ ಹುಡುಕಾಟದ ಎಳೆ ತುಂಬಾ ಸೂಕ್ಷ್ಮವಾಗಿ ಬೆರೆತಿದೆ. ಹಾಗೆಯೇ ಸಂಸ್ಕೃತಿಯ ಸಂಕರಶೀಲತೆಯನ್ನು ತುಂಬಾ ಆಸ್ಥೆಯಿಂದ ಸೂಕ್ಷ್ಮವಾಗಿ ಗಮನಿಸಿ, ಅದರೆಲ್ಲಾ ಆಯಾಮಗಳ ಮೂಲಕ ಸಾಂಸ್ಕೃತಿಕ ಅಧ್ಯಯನವನ್ನು ರೂಪಿಸುತ್ತಿರುವವರು. ಕರ್ನಾಟಕದಲ್ಲಿ ಸಮಾಜ ವಿಜ್ಞಾನದ ಹಲವು ಜ್ಞಾನಶಾಖೆಗಳು ಬೇರೆ ಬೇರೆ ಕವಲುಗಳಲ್ಲಿ ನಡೆಯುತ್ತಿರುವಾಗ, ಈ ಎಲ್ಲವುಗಳ ಕೊಡು ಕೊಳ್ಳುವಿಕೆಯ ಎಳೆಗಳನ್ನು ಹಿಡಿದು, ಅವುಗಳ ನಡುವೆ ಸಂಬಂಧವನ್ನು ಬೆಸೆದು ಬಹುಶಿಸ್ತೀಯ ಅಧ್ಯಯನದ ತಾತ್ವಿಕತೆಯನ್ನು ತುಂಬಾ ಜತನದಿಂದ ರೂಪಿಸುತ್ತಿರುವ ಕನ್ನಡದ ಮಹತ್ವದ ಲೇಖಕರು. ಕನ್ನಡದ್ದೇ ಆದ ಚಿಂತನಾ ಮಾದರಿಯನ್ನು ವರ್ತಮಾನದ ಎಚ್ಚರದ ಮೂಲಕ ಕಟ್ಟುತ್ತಿರುವ ಕಾರಣಕ್ಕೆ ತರಿಕೆರೆ ಅವರು ನಮ್ಮ ಕಾಲದಲ್ಲಿ ಮುಖ್ಯರಾಗುತ್ತಾರೆ. ಇವರ ಈ ಆಲೋಚನ ವಿನ್ಯಾಸ ದೇಸಿ ಚಿಂತನೆಗೆ ಹೊಸ ಹೊಳಹುಗಳನ್ನು ನೀಡುತ್ತಿದೆ. ಅದೆಲ್ಲಕ್ಕಿಂತ ಮುಖ್ಯವಾಗಿ ಈ ನಾಡಿನ ತಳಸಮುದಾಯಗಳ, ನೊಂದವರ, ಅಶಕ್ತರ ದ್ವನಿ ಅವರ ಬರಹ ಮತ್ತು ಬದುಕಿನ ಕ್ರಮದಲ್ಲಿ ಬೆರೆತಿದೆ. ಹಾಗಾಗಿ ಈ ಕಾಲದಲ್ಲಿ ತಮ್ಮ ಬರಹದೊಳಗೆ ನಿರಂತರವಾಗಿ ಚಳುವಳಿಯ ತಾತ್ವಿಕತೆಯ ಬೀಜಗಳನ್ನು ಬಿತ್ತುತ್ತಿದ್ದಾರೆ. ಕರ್ನಾಟಕದಾದ್ಯಾಂತ ತಿರುಗಾಡಿ, ಜನಬದುಕಿನ ತಳಮಳಗಳನ್ನೂ, ಚೈತನ್ಯವನ್ನೂ ಗುರುತಿಸುತ್ತಾ ಬರಹ ಮಾಡುತ್ತಿರುವವರಲ್ಲಿ ಇವರು ಪ್ರಮುಖರು. ತರಿಕೆರೆ ಅವರು ಶಂಬಾ ನಂತರದ ಸಾಂಸ್ಕೃತಿಕ ಅಧ್ಯಯನದ ಮಾದರಿಯನ್ನು ತುಂಬಾ ಅರ್ಥಪೂರ್ಣವಾಗಿ ಮುಂದುವರೆಸುತ್ತಿದ್ದಾರೆ ಮತ್ತು ಹೊಸ ಅರ್ಥಗಳನ್ನು ಹುಟ್ಟಿಸುತ್ತಿದ್ದಾರೆ. ಅಂತೆಯೇ ಕರ್ನಾಟಕದ ತುಂಬಾ ಅಪಾರ ಶಿಷ್ಯಬಳಗವನ್ನು ಹೊಂದಿದ ಇವರು, ಅವರೆಲ್ಲರೊಳಗೂ ಆರೋಗ್ಯಕರ ಓದುಗ, ಲೇಖಕ, ಚಿಂತಕರ ಹೊಸ ತಲೆಮಾರು ಹುಟ್ಟಲು ತುಂಬಾ ಪ್ರೇರಕ ಶಕ್ತಿಯಾಗಿದ್ದಾರೆ. ತರಿಕೆರೆ ಅವರ ಸಂಸ್ಕೃತಿ ಚಿಂತನೆಯ ದೊಡ್ಡ ಶಕ್ತಿ ಎಂದರೆ, ಜನಸಾಮಾನ್ಯರ ಜ್ಞಾನಲೋಕವನ್ನು ತಮ್ಮ ಆಲೋಚನೆಯಲ್ಲಿ ಒಳಗು ಮಾಡಿಕೊಂಡು ಆ ಮೂಲಕ ಸಂಸ್ಕೃತಿಯನ್ನು ವಿಶ್ಲೇಷಣೆಗೆ ಒಡ್ಡುತ್ತಿರುವುದು. ಕುವೆಂಪು ಅವರ ‘ಇಲ್ಲಿ ಯಾರೂ ಮುಖ್ಯರಲ್ಲ’ ಎನ್ನುವ ತಾತ್ವಿಕತೆ ತರೀಕೆರೆ ಅವರ ಚಿಂತನೆಯ ಆಳದ ಭಿತ್ತಿಯಾಗಿರುವುದು ಮುಖ್ಯವಾಗಿದೆ. ಅಂತೆಯೇ ಒಟ್ಟು ಆಲೋಚನೆಯಲ್ಲಿ ಅಧಿಕಾರದ ಬೇರೆ ಬೇರೆ ಬಗೆಯ ಚಲನೆಗಳನ್ನು ಗುರುತಿಸಿ ಅವುಗಳ ಅಪಾಯಗಳನ್ನು, ಮತ್ತು ಅವುಗಳನ್ನು ಮೀರಲು ಸಾದ್ಯವಾಗುವ ಪರ್ಯಾಯ ಆಲೋಚನೆಗಳನ್ನು ಮಂಡಿಸುತ್ತಿದ್ದಾರೆ. ಹಾಗಾಗಿ ಅವರ ಚಿಂತನೆಗಳಲ್ಲಿ ಸಾಂಸ್ಕೃತಿಕ ಪಲ್ಲಟಗಳ ಸೂಕ್ಷ್ಮಗಳನ್ನು ಹಿಡಿದಿಡಲು ಸಾದ್ಯವಾಗಿದೆ. ತರೀಕೆರೆ ಅವರ ‘ಕರ್ನಾಟಕದ ಸೂಫಿಗಳು’ ಮತ್ತು ‘ಕರ್ನಾಟಕದ ನಾಥಪಂಥ’ ದಂತಹ ಕೃತಿಗಳು ಕರ್ನಾಟಕವನ್ನು ಬೇರೆ ಬೇರೆ ದಿಕ್ಕಿನಿಂದ ನೋಡಲು ಒತ್ತಾಯಿಸುವಂತಹ ತುಂಬಾ ಸೂಕ್ಷ್ಮ ಅಧ್ಯಯನಗಳು. ಈಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುವ ‘ಕತ್ತಿಯಂಚಿನ ದಾರಿ’ ಕನ್ನಡದ ವಿಮರ್ಶೆ ಮತ್ತು ಕನ್ನಡ ಪ್ರಜ್ಞೆಯು ಮೈಪಡೆದ ಹಲವು ದಾರಿಗಳನ್ನು ಅದರೆಲ್ಲಾ ಸೂಕ್ಷ್ಮಗಳೊಂದಿಗೆ ವಿಶ್ಲೇಷಣೆಗೆ ಒಡ್ಡುತ್ತದೆ. ಇಲ್ಲಿ ಸಾಂಸ್ಕೃತಿಕ ವಿಮರ್ಶೆಯೊಂದು ರೂಪುಗೊಳ್ಳುತ್ತಿರುವ ಗಟ್ಟಿ ನೆಲೆಗಳು ಗೋಚರಿಸುತ್ತಿವೆ. ಅದು ಅವರ ‘ಧರ್ಮ ಪರೀಕ್ಷೆ’ ಮತ್ತು ಇತ್ತೀಚಿನ ಅವರ ಕೃತಿ ‘ಚಿಂತನೆಯ ಪಾಡು’ ಗಳಲ್ಲಿ ಇನ್ನಷ್ಟು ಸ್ಪಷ್ಟತೆಯನ್ನು ಮತ್ತು ಪಕ್ವತೆಯನ್ನೂ ಕಂಡಿದೆ. ಈ ಪ್ರಶಸ್ತಿಯನ್ನು ಸಂಸ್ಕೃತಿ ಚಿಂತನೆ ಸಂದ ಗೌರವ ಎಂದು ಭಾವಿಸಬಹುದು. ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಗೌರವ ಹೆಚ್ಚಿದಂತಾಗಿದೆ. ಈ ಹೊತ್ತಲ್ಲಿ ಕನ್ನಡದ ಮನಸ್ಸುಗಳು ತರೀಕೆರೆ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸೋಣ.

ಗುರುವಾರ, ಡಿಸೆಂಬರ್ 9, 2010

ಮೊಹರಂ ಹಬ್ಬದ ಅಲೆಕುಣಿಗೆ ಗುದ್ದಲಿ ಬಿದ್ದಿದೆ..ಮಕ್ಕಳಾಟ ಶುರುವಾಗಿದೆ

ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ಮೊಹರಂ ಹಬ್ಬ ತುಂಬಾ ವಿಜೃಂಬಣೆಯಿಂದ ಜರುಗುತ್ತದೆ. ಇಡೀ ಊರವರು ಜಾತಿ ಧರ್ಮ ಮರೆತು ಎಲ್ಲರೊಳಗೊಂದಾಗಿ ಬೆರೆಯುತ್ತಾರೆ. ಸಾಮಾಜಿಕವಾಗಿ ಜನರು ತಮ್ಮ ಜಾತಿ ಧರ್ಮ ಮರೆತು ಒಂದು ಹಬ್ಬದಲ್ಲಿ ಭಾಗಿಯಾಗುವ ಕೆಲವೇ ಕೆಲವು ಆಚರಣೆಗಳಲ್ಲಿ ಮೊಹರಂ ಕೂಡ ಒಂದು. ಮಕ್ಕಳು ಜಾನಪದದಲ್ಲಿ ಹೇಗೆ ಭಾಗಿಗಳಾಗುತ್ತಾರೆ, ಜನಪದದ ಹೊಸ ತಲೆಮಾರು ಮಕ್ಕಳ ಆಟಗಳ ಮೂಲಕ ಹೇಗೆ ಸೃಷ್ಟಿಯಾಗುತ್ತದೆ ಎನ್ನುವುದಕ್ಕೆ ಮೊಹರಂ ನ ಅಲೆಕುಣಿಯೇ ಸಾಕ್ಷಿ. ಅಂತಹ ಒಂದು ವೀಡಿಯೋ ಕ್ಲಿಪಿಂಗ್ ಇಲ್ಲಿ ಕೊಡಲಾಗಿದೆ. ಇದರ ಬಗ್ಗೆ ಇನ್ನಷ್ಟು ವಿಸ್ತಾರವಾದ ಬರಹವನ್ನು ಈ ಸಲದ ಮೊಹರಂ ನಲ್ಲಿ ಭಾಗವಹಿಸಿ ಆ ಅನುಭವವನ್ನು ದಾಖಲಿಸುತ್ತೇನೆ.

ಮಂಗಳವಾರ, ಡಿಸೆಂಬರ್ 7, 2010

Alipur Muharram Zanjeer Matam 2 - İzle, Dinle, İndir - VideoLife

Alipur Muharram Zanjeer Matam 2 - İzle, Dinle, İndir - VideoLife

ಹಗಲು ವೇಷಗಾರರು: ಕಲೆ, ಬದುಕು ಮತ್ತು ವಾಸ್ತವ

ಕುತೂಹಲಕ್ಕೆ ಹಗಲುವೇಷಗಾರರು ಎನ್ನುವ ಪದವನ್ನು ಕೊಟ್ಟು ಗೂಗಲ್‌ನಲ್ಲಿ ಹುಡುಕಲು ಹೇಳಿದೆ. ಅಲ್ಲಿ ಬಂದ ನಾಲ್ಕೈದು ಪುಟಗಳ ಬಹುಪಾಲು ದಾಖಲುಗಳಲ್ಲಿ ರಾಜಕಾರಣಿಗಳನ್ನು ಹಗಲುವೇಷಗಾರರು ಎಂದು ಟೀಕಿಸಿದ ಉಲ್ಲೇಖಗಳೇ ಹೆಚ್ಚಾಗಿದ್ದವು. ಉಳಿದಂತೆ ಒಂದೆರಡು ಉಲ್ಲೇಖಗಳು ವೃತ್ತಿ ಕಲಾವಿದರಾದ ಹಗಲುವೇಷಗಾರರ ಬಗ್ಗೆ ಇದ್ದವು. ಇದು ಬಹುಶಃ ಹಗಲುವೇಷಗಾರರ ಸದ್ಯದ ಸ್ಥಿತಿಯನ್ನು ವಿವರಿಸಲು ಒಳ್ಳೆಯ ರೂಪಕ ಎಂದು ಭಾವಿಸುವೆ. ಕಾರಣ ಇಂದು ಜನಪದ ಕಲಾವಿದರಾದ ಹಗಲುವೇಷಗಾರರನ್ನು ಮೀರಿಸುವಂತಹ ಹಗಲುವೇಷಗಳ ಮುಖವಾಡಗಳನ್ನು ರಾಜಕಾರಣಿಗಳು, ಅಧಿಕಾರಿಗಳು ಹಾಕಿ ಸಾಮಾನ್ಯ ಜನರನ್ನು ಮರುಳುಗೊಳಿಸುತ್ತಿದ್ದಾರೆ, ಹಗಲು ದರೋಡೆ ಮಾಡುತ್ತಿದ್ದಾರೆ. ಹಾಗಾಗಿ ಹಗಲುವೇಷ ಎನ್ನುವ ಪದವೇ ನಕಾರಾತ್ಮಕ ಅರ್ಥವನ್ನು ಪಡೆದುಕೊಂಡುಬಿಟ್ಟಿದೆ. ಆದರೆ ನಿಜಕ್ಕೂ ಹಗಲುವೇಷವನ್ನು ವೃತ್ತಿಯನ್ನಾಗಿಸಿಕೊಂಡ ಒಂದು ಜನಸಮುದಾಯದ ಗುಂಪೇ ಕರ್ನಾಟಕದಲ್ಲಿದೆ. ಆದರೆ ಇವರ ವೇಷ ಮೋಸಗೊಳಿಸಲಿಕ್ಕಲ್ಲ, ಬದಲಾಗಿ ಜನರನ್ನು ರಂಜಿಸಿಲು ಮತ್ತು ಸಾಂಸ್ಕೃತಿಕ ಪರಂಪರೆಯ ಕುರುಹುಗಳನ್ನು ಕಾಪಾಡಲು. ಹಾಗಾಗಿ ನಾಟಕ ಕಲೆಯನ್ನು ಮನೆ ಮುಂದೆ ಕೊಂಡೊಯ್ದಿರುವುದು ಈ ಅಲೆಮಾರಿ ಸಮುದಾಯದ ಹೆಗ್ಗಳಿಕೆ. ಈ ಸಮುದಾಯ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ನಾಣ್ಯಾಪುರ, ಹೊಸಪೇಟೆ ತಾಲೂಕಿನ ರಾಮಸಾಗರ, ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ, ವಟಪರವಿ ಮುಂತಾದ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ಮೂಲತಃ ಅಲೆಮಾರಿ ಸಮುದಾಯ. ಇವರ ಒಂದೊಂದು ಕುಟುಂಬಗಳು ಇಂತಿಷ್ಟು ಹಳ್ಳಿಗಳನ್ನು ಹಂಚಿಕೊಂಡಿರುತ್ತಾರೆ. ಆ ಹಳ್ಳಿಗಳಲ್ಲಿ ಏಳು ದಿನಗಳ ಕಾಲ ಬೇರೆ ಬೇರೆ ವೇಷ ಧರಿಸಿ, ಕೊನೆಯ ದಿನ ಇಂತಿಷ್ಟು ಎಂದು ವಂತಿಗೆಯನ್ನು ಧಾನ್ಯ, ಹಣ, ಬಟ್ಟೆ, ಜಾನುವಾರುಗಳ ರೂಪದಲ್ಲಿ ಪಡೆಯುತ್ತಾರೆ. ಇವರ ವೇಷಗಾರಿಕೆ ಮುಖ್ಯವಾಗಿ ರಾಮಾಯಣ, ಮಹಾಭಾರತದ ಉಪಕಥೆಗಳನ್ನು ಆಧರಿಸಿರುತ್ತವೆ. ಈ ಕಥನದ ನಿರೂಪಣೆಗಳಲ್ಲಿ ಇವರದೇ ಆದ ಸ್ಥಳೀಯ ಪಠ್ಯಗಳು ಸೇರಿರುತ್ತವೆ. ಇದು ರಾಮಾಯಣ, ಮಹಾಭಾರತದ ಅಧ್ಯಯನಕಾರರಿಗೆ ಒಂದು ಹೂಸ ಆಯಾಮವನ್ನು ಒದಗಿಸಬಲ್ಲದು. ಆಧುನಿಕ ಸಿನಿಮಾದ ಹಾಡುಗಳನ್ನು ಅವರದೇ ದಾಟಿಯಲ್ಲಿ ಹಾಡುತ್ತಾ ಈ ಕಾಲದವರೂ ಆಗುತ್ತಾರೆ. ಇವರು ವಾರದ ಕೊನೆಯ ದಿನ ವಂತಿಗೆಯನ್ನು ಎತ್ತುವಾಗ ಇಡೀ ಊರಿನ ಪ್ರತಿ ಮನೆಯವರಿಗೂ ‘ಗೌಡ್ರೆ ನಿಮ್ಮಾವ ನಾಲ್ಕು ಮನೆ ಕೈ ಎತ್ತಿ ಕೋಡೋ ಮನೆತನಗಳು..ನೀವಾ ಇಂಗಂದ್ರ ಹ್ಯಾಂಗ..’ಎನ್ನುತ್ತಿದ್ದರು. ಇದು ಊರಲ್ಲಿ ಗೌಡರ ಮನೆತನಕ್ಕೆ ಮಾತ್ರ ಸಲ್ಲುವ ಗೌರವ ನಮಗೂ ಸಲ್ಲಿತೆಂದು ಹಲವರು ತಮ್ಮ ತಮ್ಮ ಕೀಳಿರಿಮೆಯನ್ನು ಬಿಟ್ಟು ಬದುಕಿಗೆ ಹೊಸ ಉತ್ಸಾಹವನ್ನು ಪಡೆಯುತ್ತಿದ್ದರು. ಹೀಗೆ ಹಗಲುವೇಷಗಾರರ ಬದುಕು ಮತ್ತು ಕಲೆ ಈಗಲೂ ಚೂರೂ ಬದಲಾವಣೆ ಇಲ್ಲದೆ ಮುಂದುವರಿಯುತ್ತಿದೆ. ಇವರು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಕುದರಮೋತಿ ಎನ್ನುವ ಗ್ರಾಮದಲ್ಲಿ ಎರಡು ವರ್ಷಕ್ಕೊಮ್ಮೆ ಮೊಹರಂ ಹಬ್ಬಕ್ಕೆ ಇಡೀ ಕರ್ನಾಟಕದ ಹಗಲುವೇಷಗಾರರು ಒಂದೆಡೆ ಸೇರುತ್ತಾರೆ. ಇಲ್ಲಿಯೇ ಅವರ ನ್ಯಾಯಪಂಚಾಯ್ತಿ, ವಧು ವರರ ಅನ್ವೇಷಣೆ, ಮದುವೆ, ಮುಂತಾದ ಆಚರಣೆಗಳು ನಡೆಯುತ್ತವೆ. ಅವರ ವೇಷಗಾರಿಕೆಗೆ ಬೇಕಾಗುವ ಬಣ್ಣ, ಸಂಗೀತದ ಪರಿಕರಗಳನ್ನೂ ಕೊಳ್ಳಲಾಗುತ್ತದೆ. ಈ ವರ್ಷ ಅಂದರೆ ಇದೇ ತಿಂಗಳ ಮೊಹರಂ ಕಡೇ ದಿನ ಡಿಸೆಂಬರ್ ೧೭ ರಂದು ಕುದರಮೋತಿಗೆ ಬೇಟಿ ನೀಡಿದರೆ ಇಡೀ ಕರ್ನಾಟಕದ ಹಗಲುವೇಷಗಾರರನ್ನು ಒಂದೆಡೆ ನೋಡಬಹುದಾಗಿದೆ. ಹಗಲುವೇಷಗಾರರು ಮೂಲತಃ ಅಲೆಮಾರಿ ಸಮುದಾಯ. ಇವರು ಒಂದೆಡೆ ನೆಲೆನಿಲ್ಲುವುದಿಲ್ಲ. ಈ ಕಾರಣವೇ ಬಹುತೇಕ ಹಗಲುವೇಷಗಾರರ ಹೊಸ ತಲೆಮಾರು ಶಿಕ್ಷಣಕ್ಕೆ ತೆರೆದುಕೊಳ್ಳುವುದಕ್ಕೆ ಕಡಿವಾಣ ಹಾಕಿದೆ. ಕರ್ನಾಟಕದಲ್ಲಿ ವೃತ್ತಿಕಲೆಯನ್ನು ಉಳಿಸಿಕೊಂಡು ಬರುತ್ತಿರುವವರಲ್ಲಿ ಇವರು ಪ್ರಮುಖರು. ಜನಪದ ಕಲೆಗಳು ನಶಿಸುತ್ತಿವೆ ಎಂದು ಹಲಬುವ ಜನಪದ ವಿದ್ವಾಂಸರಿಗೆ ಈ ಸಮುದಾಯ ಹೆಚ್ಚು ಸಂತೋಷವನ್ನು ಕೊಡಬಲ್ಲದು. ಆದರೆ ಈ ಸಮುದಾಯ ಶಿಕ್ಷಣಕ್ಕೆ ತೆರೆದುಕೊಂಡು ಆಧುನಿಕವಾಗಬೇಕೆಂಬ ಅಭಿವೃದ್ಧಿಪರ ಆಲೋಚನೆ ಮಾಡಿದಾಗ ಇದರ ಹಿಂದುಳಿಯುವಿಕೆಯ ಬಗ್ಗೆ ಆತಂಕವಾಗುತ್ತದೆ. ಯಾಕೆ ಹೀಗಾಗುತ್ತಿದೆ. ಇದು ಕೇವಲ ಹಗಲುವೇಷಗಾರರ ಸಮಸ್ಯೆಯಲ್ಲ, ಬಹುಪಾಲು ಅಲೆಮಾರಿ ಸಮುದಾಯಗಳ ಸಮಸ್ಯೆಯಾಗಿದೆ. ಈ ಎಲ್ಲಾ ಅಲೆಮಾರಿ ಸಮುದಾಯಗಳಿಗೆ ಅವರದೇ ನೆಲೆಯಲ್ಲಿ ಜಾಗ್ರತಗೊಳಿಸುವ ಅಗತ್ಯವಿದೆ. ಅವರ ಮಕ್ಕಳಾದರೂ ಶಿಕ್ಷಣಕ್ಕೆ ತೆರೆದುಕೊಳ್ಳುವಂತಹ ವಾತಾವರಣವನ್ನು ಸೃಷ್ಠಿಸಬೇಕಿದೆ. ಅಲೆಮಾರಿ ಸಮುದಾಯಗಳ ಅಭಿವೃದ್ಧಿಯ ಹೆಸರಲ್ಲಿ ಸರಕಾರದ ಹಣ ಅವ್ಯಯವಾಗುವುದೇನೂ ತಪ್ಪಿಲ್ಲ, ಆದರೆ ಅದು ಎಲ್ಲಿ ವ್ಯಯವಾಗುತ್ತಿದೆ? ಅದರ ಲಾಭಗಳನ್ನು ಪಡೆದುಕೊಂಡವರಾರು? ಇಂತಹ ಪ್ರಶ್ನೆಗಳನ್ನು ಕೇಳಿಕೊಂಡರೆ ಸಿಗುವ ಉತ್ತರ ಬ್ರಷ್ಟ ಸರಕಾರದತ್ತ ಕೈತೋರಿಸುತ್ತದೆ. ಇಂತಹ ಯೋಜನೆಗಳ ಹಣವನ್ನು ನಿಜವಾಗಿ ತಲುಪಬೇಕಾದವರಿಗೆ ತಲುಪಿಸುವಂತಹ ಕರ್ತವ್ಯ ಕೂಡ ಜಾನಪದ ವಿದ್ವಾಂಸರ ಜವಾಬ್ದಾರಿ ಎಂದು ಅರಿಯಬೇಕಿದೆ. ಈ ಹೊತ್ತು ಜನಪದ ಅಧ್ಯಯನಕಾರರು ಕೇವಲ ಜನಪದ ಕಲೆಯನ್ನು ಕಲೆ ಎನ್ನುವ ಚೌಕಟ್ಟಿನಲ್ಲಿ ಅಭ್ಯಸಿಸಬೇಕಿಲ್ಲ. ಬದಲಾಗಿ ಜನಪದ ಕಲಾವಿದರ ಬದುಕಿನ ನೆಲೆಯಲ್ಲಿ, ಮತ್ತವರು ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡು ಬದಲಾಗಬೇಕಾದ ಆಶಯಗಳಲ್ಲಿ ಅಧ್ಯನಗಳ ತಾತ್ವಿಕತೆಯನ್ನು ಬದಲಾಯಿಸಿಕೊಳ್ಳಬೇಕಿದೆ. -ಡಾ. ಅರುಣ್ ಜೋಳದಕೂಡ್ಲಿಗಿ

ಗುರುವಾರ, ಡಿಸೆಂಬರ್ 2, 2010

ಸೋಮವಾರ, ನವೆಂಬರ್ 29, 2010

ಜನಪದ ಮಹಾಕಾವ್ಯ ಪರಂಪರೆಯ ಮಹತ್ವದ ಅಧ್ಯಯನ

ಇತ್ತೀಚೆಗೆ ಕನ್ನಡದಲ್ಲಿ ಜಾನಪದ ಅಧ್ಯಯನ ಕುರಿತು ಬಂದ ಗಂಭೀರ ಪುಸ್ತಕಗಳಲ್ಲಿ ಕನ್ನಡದ ವಿಮರ್ಶಕರಾದ ಡಾ. ಸಿ.ಎನ್. ರಾಮಚಂದ್ರನ್ ಅವರ ಕೃತಿ ‘ಹೊಸಮಡಿಯ ಮೇಲೆ ಚದುರಂಗ’ . ಇದು ಜಗತ್ತಿನ ಇಪ್ಪತ್ತೈದು ಜನಪದ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದ ಕೃತಿ. ಈ ಕೃತಿಯಲ್ಲಿ ಕನ್ನಡದ ಮಲೆ ಮದೇಶ್ವರ, ಮಂಟೇಸ್ವಾಮಿ, ಹಾಲುಮತ ಮಹಾಕಾವ್ಯ, ಜುಂಜಪ್ಪ, ಕುಮಾರರಾಮ, ಕೃಷ್ಣಗೊಲ್ಲರ ಕಾವ್ಯ, ತುಳು ಭಾಷೆಯ ಸಿರಿ, ತೆಲುಗಿನ ಪಲ್ನಾಟಿ ವೀರುಲ ಕಥಾ, ತಮಿಳಿನ ಅಣ್ಣನ್ ಮಾರ್ ಕತೈ, ರಾಜಾಸ್ಥಾನಿಯ ಪಾಬೂಜಿ, ಅವಧಿ ಭಾಷೆಯ ಚನೈನಿ, ಟಿಬೆಟನ್ ಮಂಗೋಲಿಯನ್ ನ ಗೆಸೆರ್ ರಾಜ, ಅರಾಬಿಕ್ ನ ಅಂತರ್, ಕಿರ್ಘೀಜ್ ನ ಮನಸ್, ಫಿನಿಷ್ ನ ಕಲೆವಲ, ಮಾಲಿಯ ಸುನ್ಜಾತ, ದಕ್ಷಿಣ ಅಮೇರಿಕಾದ ಮೊಹಾವೆ ಮಹಾಕಾವ್ಯ, ಜಪಾನ್ ಐನು ಕೋಟನ್ ಉಟುನ್ನೈ ಇಷ್ಟು ಮಹಾಕಾವ್ಯಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಕನ್ನಡದ ಜಾನಪದ ಮಹಾಕಾವ್ಯಗಳ ಅಧ್ಯಯನ ಕುರಿತಂತೆ ಇದೊಂದು ಮಹಾತ್ವಾಕಾಂಕ್ಷೆಯ ಕೃತಿ. ಕನ್ನಡದ ಜನಪದ ಮಹಾಕಾವ್ಯಗಳನ್ನು ಜಾಗತಿಕ ಜನಪದ ಮಹಾಕಾವ್ಯಗಳ ಜತೆ ಅಧ್ಯಯನ ಮಾಡಿರುವುದು ಈ ಕೃತಿಯ ಮೌಲ್ಯ ಹೆಚ್ಚಲು ಕಾರಣವಾಗಿದೆ. ಸಿ.ಎನ್. ಆರ್ ಅವರು ಮೂಲತಃ ಸೃಜನಶೀಲ ಸಾಹಿತ್ಯ, ವಿಮರ್ಶೆ, ಅನುವಾದ ಕ್ಷೇತ್ರದಲ್ಲಿ ಪರಿಚಿತರು. ಇವರು ಜಾನಪದ ಅಧ್ಯಯನದ ಸೆಳೆತಕ್ಕೆ ಒಳಗಾದದ್ದು ಈ ಕ್ಷೇತ್ರಕ್ಕೆ ಒಳ್ಳೆಯದೇ ಆಗಿದೆ. ಕಾರಣ ಕನ್ನಡದ ಸಾಹಿತ್ಯ ವಿಮರ್ಶೆಯು ಸಾಂಸ್ಕೃತಿಕ ವಿಮರ್ಶೆಯಾಗಿ ರೂಪಾಂತರಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂತಹ ಬಹುಶಿಸ್ತೀಯ ಸೆಳೆತ ಸಹಜವಾಗಿದೆ. ಅದು ಎಲ್ಲರೊಳಗೂ ಆಗಬೇಕಾದುದೆ. ಕನ್ನಡದಲ್ಲಿ ಶಂಬಾ ಜೋಶಿ, ಡಿ. ಆರ್.ನಾಗರಾಜ್ ಮುಂತಾದವರನ್ನು ಮೊದಲುಗೊಂಡಂತೆ, ಕೆ.ವಿ. ನಾರಾಯಣ, ಎಚ್.ಎಸ್.ಆರ್ , ರಹಮತ್ ತರೀಕೆರೆ, ರಾಜೇಂದ್ರ ಚೆನ್ನಿ , ಮೊಗಳ್ಳಿ ಗಣೇಶ್ ಮುಂತಾದವರ ಸಂಶೋಧನೆ, ವಿಮರ್ಶೆಯಲ್ಲಿ ದೇಸಿ ಚಿಂತನೆಯ ಹುಡುಕಾಟದ ನೆಲೆಗಳು ಭಿನ್ನ ದಾರಿಗಳಲ್ಲಿ ಕ್ರಮಿಸಿವೆ ಮತ್ತು ಕ್ರಮಿಸುತ್ತಿವೆ. ಅದು ಸಿ.ಎನ್. ಆರ್ ಅವರಲ್ಲಿ ಇನ್ನೊಂದು ಮಗ್ಗಲು ಪಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ಕೃತಿಯನ್ನು ಕುರಿತಂತೆ " ಜನಪದ ಮಹಾಕಾವ್ಯಗಳನ್ನು ವಿಶ್ವಾತ್ಮಕ ನೆಲೆಯಲ್ಲಿ, ಭಾರತೀಯ ನೆಲೆಯಲ್ಲಿ, ಮತ್ತು ಸ್ಥಳೀಯ ನೆಲೆಯಲ್ಲಿ ನೋಡಿದ ಕ್ರಮಗಳಿಂದಾಗಿ ಹೊಸ ಅನುಭವಗಳು ಇಲ್ಲಿ ದೊರೆಯುತ್ತವೆ. ಬದಲಾದ ನಿ ಯೋಗಗಳಿಂದಾಗಿ ಹೊಸ ಸಾಹಿತ್ಯ ನಿರ್ಮಾಣವಾಗುವುದು, ಹೊಸ ರಂಗ ಹುಟ್ಟಿಕೊಳ್ಳುವುದು, ಗಂಡು ಹೆಣ್ಣಿನ ಸಂಬಂಧಗಳು ಪಲ್ಲಟಗೊಳ್ಳುವುದು, ಜನಾಂಗಿಕ ಅಸ್ಮಿತೆಯನ್ನು ಕಟ್ಟಿಕೊಳ್ಳುವುದು –ಹೀಗೆ ಆಧುನಿಕತೆಯ ಜಗತ್ತಿನಲ್ಲಿ ಆಧುನಿಕ ರೂಪಕಗಳು ಇಂತಹ ಮೌಖಿಕ ಮಹಾಕಾವ್ಯಗಳಿಂದ ನಿರಂತರವಾಗಿ ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಡಾ. ಸಿ.ಎನ್. ರಾಮಚಂದ್ರನ್ ಅವರು ಬದಲಾಗುತ್ತಿರುವ ಇಂತಹ ನಿಯೋಗಗಳನ್ನು ಮತ್ತು ರೂಪಾಂತರಗಳನ್ನು ಹಿಡಿದಿಟ್ಟಿದ್ದಾರೆ. ಮತ್ತು ನಾವು ಹೊಸದಾಗಿ ಹಿಡಿಯಲು ಅವಕಾಶ ಕಲ್ಪಿಸಿದ್ದಾರೆ" ಎಂದು ಪ್ರೊ.ಬಿ.ಎ. ವಿವೇಕ ರೈ ಅವರು ಮುನ್ನುಡಿಯಲ್ಲಿ ಹೇಳುತ್ತಾರೆ. ಇದು ಈ ಕೃತಿಯ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ. ಮುಖ್ಯವಾಗಿ ಕನ್ನಡದಲ್ಲಿ ಜಾಗತಿಕ ಜಾನಪದ ಮಹಾಕಾವ್ಯಗಳ ಹೊಟ್ಟೆಯೊಳಗಿಂದ ಹುಟ್ಟಿದ ವ್ಯಾಖ್ಯಾನಗಳ ಮೂಲಕ ಜನಪದ ಮಹಾಕಾವ್ಯಗಳನ್ನು ಪರಿಶೀಲಿಸುವ ತೀರಾ ಸವಕಲು ವಿಶ್ಲೇಷಣಾ ವಿಧಾನವೊಂದಿತ್ತು. ಅಂತಹ ಹಳೆ ವಿಧಾನವನ್ನು ಸಿ.ಎನ್.ಆರ್ ಅವರು ಬಳಸಿಲ್ಲ ಎನ್ನುವುದು ಸಮಾಧಾನಕರ ಸಂಗತಿ. ಹಾಗಾಗಿ ಅವರ ವಿಶ್ಲೇಷಣೆಯಲ್ಲಿ ಹೊಸ ಹುಡುಕಾಟದ ಸೆಳಕುಗಳು ಕಾಣಿಸಿಕೊಳ್ಳುತ್ತವೆ. ಮಹಾಕಾವ್ಯಗಳ ಕುರಿತಂತೆ ಇಂತಹ ವ್ಯಾಪಕ ಅಧ್ಯಯನದಿಂದ ಹುಟ್ಟಬಹುದಾದ ಫಲಿತಗಳು ಈ ಕೃತಿಯಲ್ಲಿ ಸಾಧ್ಯವಾಗಿಲ್ಲ.ಕಾರಣ ಇಲ್ಲಿನ ವಿಶ್ಲೇಷಣೆಯಲ್ಲಿ ಜನಪದ ಮಹಾವ್ಯಗಳ ಪರಿಚಯ, ಹೋಲಿಕೆ ಸಾಮ್ಯಗಳ ತುಲನೆಯ ಆಚೆ ಗಂಭೀರ ಒಳನೋಟಗಳು ಕಾಣುವುದಿಲ್ಲ. ಆಯಾ ಜನಪದ ಮಹಾಕಾವ್ಯಗಳು ಅಲ್ಲಲ್ಲಿನ ಸಾಂಸ್ಕೃತಿಕ ಮತ್ತು ರಾಜಕೀಯದ ಚಾರಿತ್ರಿಕ ಕಾರಣದ ಹಿನ್ನೆಯಲ್ಲಿ ಹುಟ್ಟಿರುತ್ತವೆ, ಆ ಚಾರಿತ್ರಿಕ ಹಿನ್ನೆಲೆಯ ಪರಿಚಯವಿಲ್ಲದೆ ಕೇವಲ ಮಹಾಕಾವ್ಯಗಳನ್ನು ವಿಶ್ಲೇಷಣೆಗೆ ಒಳಗು ಮಾಡಿದರೆ ಉಂಟಾಗಬಹುದಾದ ಅಪಾಯ ಈ ಕೃತಿಯಲ್ಲಿ ಕಾಣುತ್ತದೆ. ಮುಖ್ಯವಾಗಿ ಒಟ್ಟು ಜನಪದ ಮಹಾಕಾವ್ಯಗಳ ಒಳನೇಯ್ಗೆಯಲ್ಲಿ ಇರಬಹುದಾದ ಸಮಾನ ಎಳೆ ಯಾವುದು ಎನ್ನುವುದು ಕೃತಿಯಲ್ಲಿ ಸ್ಪಷ್ಟಗೊಳ್ಳುವುದಿಲ್ಲ. ಹಾಗಾಗಿ ಇಲ್ಲಿ ವಿಮರ್ಶಾತ್ಮಕ ನೆಲೆ ಹೆಚ್ಚಾಗಿ, ಸಂಶೋಧನಾತ್ಮಕ ಅಧ್ಯಯನದ ಆಳ ಇಲ್ಲವಾಗಿದೆ. ಸಿ.ಎನ್.ಆರ್ ಕೃತಿಯ ಮೊದಲಿಗೆ ತಮ್ಮ ಅಧ್ಯಯನಕ್ಕೆ ಇರಬಹುದಾದ ಮಿತಿಗಳನ್ನು ವಿನಯದಿಂದಲೇ ಹೇಳಿಕೊಂಡಿದ್ದಾರೆ. ಅಂತೆಯೇ ಇಂತಹ ಬೃಹತ್ ಕಥನಗಳನ್ನು ಅಧ್ಯಯನಕ್ಕೆ ಆಯ್ದುಕೊಂಡಾಗ ಇರಬಹುದಾದ ಸಮಸ್ಯೆಯೂ ಇಲ್ಲಿ ಕಾಣುತ್ತದೆ. ಇಂತಹ ಕೆಲವು ಮಿತಿಗಳಾಚೆಯೂ ಕೃತಿಯ ಹೆಚ್ಚುಗಾರಿಕೆಯ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿಯಾಗಿದೆ. ಜನಪದ ಮಹಾಕಾವ್ಯದ ಅಧ್ಯಯನಕಾರರಿಗೊಂದು ಉತ್ತಮ ಪ್ರವೇಶಿಕೆಯನ್ನೂ ಇದು ಒದಗಿಸುತ್ತದೆ. ಡಾ. ಸಿ.ಎನ್. ರಾಮಚಂದ್ರನ್ ಅವರ ಅಪಾರ ಶ್ರಮ, ಶ್ರದ್ಧೆ ಈ ಅಧ್ಯಯನದಲ್ಲಿ ಕಾಣುತ್ತದೆ. ಈ ಎಲ್ಲಾ ಕಾರಣಗಳಿಗಾಗಿ ಅವರು ಅಭಿನಂದನಾರ್ಹರು.

ಗುರುವಾರ, ನವೆಂಬರ್ 18, 2010

ಪುರಂದರ ದಾಸರ ದೇಸಿ ಚಿಂತನೆಯ ಆಯಾಮಗಳು

ಅರುಣ್ ಜೋಳದಕೂಡ್ಲಿಗಿ -೧- ಪುರಂದರರ ಬಗೆಗೆ ಮಾತನಾಡುವಾಗ ನನಗೆ ಎರಡು ಸಂಗತಿಗಳು ನೆನಪಾಗುತ್ತವೆ. ಒಂದು ಹಂಪಿಯ ಪುರಂದರ ಮಂಟಪ. ಇನ್ನೊಂದು ಮೂಡುಮಾರ್ನಾಡು ಎಂಬ ಪುಟ್ಟ ಊರು. ಹಂಪಿಯಲ್ಲಿ ಪುರಂದರ ಮಂಟಪವಿದೆ. ವಿಜಯನಗರದ ಕಾಲದಲ್ಲಿ ಇದ್ದ ಅವರ ನೆನಪನ್ನು ಇದು ತರುತ್ತದೆ. ಇದು ಬಯಲು ಮಂಟಪ. ಇಲ್ಲಿಗೆ ಬರುವ ಪ್ರವಾಸಿಗರು ತಂದ ಬುತ್ತಿಯನ್ನು ಉಣ್ಣುತ್ತಾರೆ. ಊಟದ ಪಾಲುದಾರರಾಗಿ ನಾಯಿ, ಕಾಗೆ, ಗುಬ್ಬಿ ಇರುವೆ ಗೊದ್ದಗಳೂ ಇದರ ಸುತ್ತ ಮನೆಮಾಡಿಕೊಂಡಿವೆ. ಇದು ಮೀನು ಹಿಡಿಯುವವರಿಗೆ ಪ್ರಶಸ್ತ ತಾಣ. ಬಲೆ ಎತ್ತಿದಾದ ಮೀನು ಈ ಮಂಟಪದಲ್ಲಿ ಒದ್ದಾಡಿ ಪ್ರಾಣ ಬಿಡುತ್ತವೆ. ಮಂಟಪಕ್ಕೆ ಹೊಂದಿಕೊಂಡಂತೆ ಒಲೆಗುಂಡುಗಳೂ ಇವೆ. ಅಡುಗೆಯನ್ನೂ ಮಾಡುತ್ತಾರೆ. ಸಾದು ಸನ್ಯಾಸಿಗಳ ನೆಲೆ ಕೂಡ. ಹಂಪಿ ಉತ್ಸವದಲ್ಲಿ ಕೀರ್ತನೆ ನೃತ್ಯಾದಿಗಳಿಂದಾಗಿ ಮಂಟಪದಲ್ಲಿ ಪುರಂದರರು ಜೀವತಳೆದಂತಾಗುತ್ತದೆ. ಪುರಂದರ ಉತ್ಸವದಲ್ಲಿ ಈ ಮಂಟಪ ಭೂತ ವರ್ತಮಾನವನ್ನು ಬೆಸೆವ ಕೊಂಡಿ. ಮಕರ ಸಂಕ್ರಮಣದಲ್ಲಿ ಅನೇಕರು ಸ್ನಾನ ಮಾಡಿ ಬಟ್ಟೆ ಬದಲಿಸುವ ತಾಣವಿದು. ಆ ದಿನ ಹುಡುಗಿಯರು ಸ್ನಾನ ಮಾಡುವುದನ್ನು ನೋಡುವುದಕ್ಕಾಗಿ ಹುಡುಗರು ದೌಡಾಯಿಸುತ್ತಾರೆ. ಅಂತವರ ಮನದಲ್ಲಿ ಮಂಟಪವೊಂದು ರಮ್ಯ ನೆನಪು. ಇನ್ನೊಂದು ಉಡುಪಿ ಹತ್ತಿರದ ಪುಟ್ಟ ಊರು ಮೂಡು ಮಾರ್ನಾಡು. ಅಲ್ಲಿಗೆ ಯುವ ಬರಹಗಾರ್ತಿ ಭಾರತೀದೇವಿ ಅವರ ತಂದೆಯನ್ನು ನೋಡಲೆಂದು ಹೋಗಿದ್ದೆವು, ಅವರ ಮನೆಯ ಹೆಸರೇ ಪುರಂದರರ ಸೇವಾಶ್ರಮ. ಭಾರತಿಯವರ ತಂದೆ ಜಗದೀಶ ದಾಸರು ಪುರಾಣಗಳ ಪ್ರವಚನ ಮಾಡುತ್ತಾ, ಹರಿಕತೆಗಳನ್ನು ಹೇಳುತ್ತಾ, ಮಕ್ಕಳಿಗೆ ಪುರಂದರರ ರಚನೆಗಳನ್ನು ಬೋಧಿಸುತ್ತಾ, ಕೀರ್ತನೆಗಳನ್ನು ಹಾಡುತ್ತಾ ಈ ಪುಟ್ಟ ಊರಿನಲ್ಲಿ ಪುರಂದರರನ್ನು ಜೀವಂತಗೊಳಿಸಿದ್ದಾರೆ. ಹೀಗೆ ಪುರಂದರರು ಅನೇಕ ಕಡೆ ಜೀವಂತವಾಗಿರಬಹುದು. ಅಂದರೆ ಪುರಂದರರ ನೆನಪಿನ ಭೌತಿಕ ಸ್ಮಾರಕವೊಂದು ಪಡೆದ ಸಾಂಸ್ಕೃತಿಕ ಜೀವಂತಿಕೆ, ಮತ್ತು ಪುರಂದರರ ರಚನೆಗಳೇ ಜೀವಂತವಾಗಿರುವಿಕೆ ಇವೆರಡೂ ಪುರಂದರ ದೇಸಿ ಚಿಂತನೆಯನ್ನು ಭಿನ್ನವಾಗಿ ನಿರೂಪಿಸುತ್ತವೆ. ಅಥವಾ ಈ ಬಗೆಯ ಪುರಂದರ ಜೀವಂತಿಕೆ ಅವರ ಕುರಿತ ಅಕಾಡೆಮಿಕ್ ಅಧ್ಯಯನಗಳಲ್ಲಿ ಸಾದ್ಯವಾಗಿಲ್ಲದಿರುವುದನ್ನು ಗಮನಿಸಬಹುದು. ಹಾಗಾಗಿ ವರ್ತಮಾನದಲ್ಲಿ ಪುರಂದರರ ಜೀವಂತಿಕೆಯ ಆಯಾಮಗಳ ಮೂಲಕ ದೇಸಿ ಚಿಂತನೆಯನ್ನು ಇಲ್ಲಿ ಮಂಡಿಸಲು ಪ್ರಯತ್ನಿಸಲಾಗಿದೆ. ಈಗಾಗಲೆ ಪುರಂದರರ ಬಗೆಗೆ ಕನ್ನಡದಲ್ಲಿ ಹಲವು ಅಧ್ಯಯನಗಳು ಬಂದಿವೆ. ಈ ಅಧ್ಯಯನಗಳು ಪುರಂದರರ ಜತೆ ಕೆಲವು ಚಿತ್ರಗಳನ್ನು ಬಿಗಿಯಾಗಿ ಕಟ್ಟಿವೆ. ಅಥವಾ ಪುರಂದರ ಬಗೆಗೆ ಈಗಿರುವ ಪ್ರವೇಶಗಳು ಒಂದೋ ಮತೀಯ ಆಲೋಚನೆಯಿಂದ ರೂಪುಗೊಂಡವು, ಇನ್ನೊಂದು ಭಾವನಾತ್ಮಕ ನೆಲೆಯಲ್ಲಿ ನಿರೂಪಿತವಾದವು. ಈಗ ಹಂಪಿ ವಿವಿಯ ಪುರಂದರರ ಪೀಠದ ಅಧ್ಯಯನಗಳು ಸದ್ಯದ ಪುರಂದರರ ತಿಳುವಳಿಕೆಯನ್ನು ಹೇಗೆ ವಿಸ್ತರಿಸುತ್ತವೆ ಕಾಯ್ದು ನೋಡಬೇಕಷ್ಟೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದ ಪುರಂದರರ ಸಾಹಿತ್ಯ ದರ್ಶನದ ನಾಲ್ಕು ಸಂಪುಟಗಳನ್ನು ಸಂಪಾದಿಸಿದ ಸಾ.ಕೃ ರಾಮಚಂದ್ರರಾವ್ ಪುರಂದರರ ಬಗೆಗಿನ ತಿಳುವಳಿಕೆಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ರಹಮತ್ ತರೀಕೆರೆ ಅವರು ತಮ್ಮ ಪ್ರತಿ ಸಂಸ್ಕೃತಿ ಕೃತಿಯಲ್ಲಿ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ವಿಧಾನ ಯಾವುದು ? ಎನ್ನುವ ಲೇಖನದಲ್ಲಿ ಒಟ್ಟು ದಾಸ ಪರಂಪರೆಯನ್ನು ಹೊಸದಾಗಿ ನೋಡುವ ಒಳನೋಟಗಳನ್ನು ಕೊಟ್ಟಿದ್ದಾರೆ. ಈಚೆಗೆ ಎಚ್. ಎನ್. ಮುರಳೀಧರ ಅವರ ತಂಬೂರಿ ಮೀಟಿದವ ಕೃತಿ ಪುರಂದರರ ಬಗ್ಗೆ ಭಿನ್ನ ದೃಷ್ಟಿಕೋನವನ್ನು ಹರಿಸಿದೆ. ಉಳಿದಂತೆ ಭಾವನಾತ್ಮಕ ನಿರೂಪಣೆಗಳ ಸಂಖ್ಯೆ ದೊಡ್ಡದಿದೆ. ಮೂಲತಃ ಜಾನಪದದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಸಂಶೋಧನೆಯಲ್ಲಿ ತೊಡಗಿಕೊಂಡ ನಾನು ಪುರಂದರರ ದೇಸೀ ಚಿಂತನೆ ಕುರಿತು ಕೆಲವು ಮಾತುಗಳಿವು . ಪುರಂದರರ ದೇಸಿ ಚಿಂತನೆಗೆ ಹಲವು ಆಯಾಮಗಳಿವೆ. ಅವುಗಳಲ್ಲಿ ಕೆಲವನ್ನು ಹೀಗೆ ಪಟ್ಟಿ ಮಾಡಬಹುದು. ಒಂದು : ದಾಸ ಸಾಹಿತ್ಯದಲ್ಲಿ ಪುರಂದರರ ವಿಶಿಷ್ಟತೆ ಯಾವ ಬಗೆಯದು. ಎರಡು: ಪುರಂದರರ ಸಾಹಿತ್ಯದೊಳಗಿನ ದೇಸಿ ಜಗತ್ತು ಯಾವ ಬಗೆಯದು. ಮೂರು: ಪುರಂದರ ವರ್ತಮಾನದ ಜೀವಂತಿಕೆ ಮೂಲಕ ನಿರೂಪಿಸಬಹುದಾದ ದೇಸಿಯತೆ ಎಂಥಹದು ? ನಾಲ್ಕು: ಪುರಂದರರು ಪ್ರತಿಪಾದಿಸುವ ಅನ್ಯ ಮತ್ತು ಸ್ವಂತಿಕೆ ಯಾವುವು ? ಇಷ್ಟು ಆಯಾಮಗಳ ಮೂಲಕ ಪುರಂದರರನ್ನು ಅವಲೋಕಿಸುವುದು ಸೂಕ್ತ ಎನ್ನುವುದು ನನ್ನ ಭಾವನೆ. -೨- ಈ ಮೇಲಿನ ಪುರಂದರರ ದೇಸಿ ಚಿಂತನೆಯ ಆಯಾಮಗಳಿಗೆ ಮುಖ್ಯವಾಗಿ ಎರಡು ನೆಲೆಗಳಿವೆ. ಒಂದು ಅವರೇ ಮಂಡಿಸಿದ ತಿಳುವಳಿಕೆಯಲ್ಲಿ ಇರುವ ದೇಸಿಯತೆ ಮತ್ತೊಂದು ನಾವೀಗ ನಮ್ಮ ಕಾಲದ ದೇಸಿ ಚಿಂತನೆ ಮುಖೇನ ಪುರಂದರರನ್ನು ಎದುರುಗೊಳ್ಳಲು ಹೊರಟಾಗ ನಮಗೆ ಕಾಣಬಹುದಾದ ದೇಸಿಯತೆ. ಈ ಎರಡು ಬೆರೆತ ಆಲೋಚನ ವಿನ್ಯಾಸವನ್ನು ಈ ಲೇಖನದಲ್ಲಿ ಬಳಸಿಕೊಳ್ಳಲಾಗಿದೆ. ಹಾಗೆಯೇ ಪುರಂದರರಲ್ಲಿ ದೇಸಿ ಚಿಂತನೆ ಎಂದು ಹುಡುಕಹೊರಟಾಗ ಕೆಲವು ತೊಡಕುಗಳು ಎದುರಾಗುತ್ತವೆ. ಒಂದು: ಪುರಂದರರು ವಿಜಯನಗರದ ಅರಸರ ಆಶ್ರಯದಲ್ಲಿ ಜೀವನವನ್ನು ಕಳೆದವರು. ಇಂತವರು ಜನಸಾಮಾನ್ಯರ ಬಗೆಗೆ ತೋರುವ ಅಭಿಮಾನ ಏಕ ದೇವೋಪಾಸನೆಯ ನೆಲೆಯಲ್ಲಿ ಜನರ ನಂಬಿಕೆಗೆ ವಿಮುಖವಾದದ್ದು. ಎರಡು: ವೈದಿಕ ಪರಂಪರೆಗೆ ಜೀವತುಂಬುವುದು ದಾಸ ಪಂಥದ ನಿಜವಾದ ಧ್ಯೇಯವಾಗಿತ್ತು ಹಾಗಾಗಿ ಅವೈದಿಕ ದೇಸಿ ಪರಂಪರೆಯನ್ನು ಇವರು ಕಂಡ ಬಗೆ ಕೂಡ ಇದಕ್ಕೆ ಪೂರಕವಾದದ್ದಾಗಿದೆ. ಮೂರು: ನಮ್ಮಲ್ಲಿ ದೇಸಿ ಚಿಂತನೆಯೆ ಖಚಿತವಲ್ಲದ ಪರಿಭಾಷೆಯಲ್ಲಿ ಬಳಕೆಯಾಗುತ್ತಿದೆ. ಇಂತಹ ತಿಳುವಳಿಕೆಯನ್ನು ಆಧರಿಸಿ ಮಾಡ ಹೊರಡುವ ಚಿಂತನೆಗೂ ಅಂತದ್ದೇ ಮಿತಿ ಇರಲು ಸಾಧ್ಯವಿದೆ. ನಾಲ್ಕು: ಈಗ ನಮ್ಮ ಕಾಲದಲ್ಲಿ ಲಭ್ಯವಿರುವ ಜಾನಪದ ಸಂಗ್ರಹವನ್ನಿಟ್ಟುಕೊಂಡು ೧೪ ನೇ ಶತಮಾನದ ಪುರಂದರರ ಜಾನಪದೀಯತೆಯನ್ನು ಹುಡುಕಲು ಹೊರಡುತ್ತೇವೆ. ಇದೊಂದು ತೊಡಕು. ಅಂದರೆ ಪುರಂದರರು ಗಾದೆಯನ್ನು ಹೇಗೆ ಬಳಸಿದ್ದಾರೆ, ಒಗಟನ್ನು ಹೇಗೆ ಬಳಸಿದ್ದಾರೆ, ಜಾನಪದ ಕಥೆಯ ಮಾದರಿಗಳನ್ನು ಹೇಗೆ ಬಳಸಿದ್ದಾರೆ ಎನ್ನುವ ತರಹದ ಹುಡುಕಾಟ. ಈ ಹುಡುಕಾಟಕ್ಕೆ ಸದ್ಯದ ಜಾನಪದ ಸಂಗ್ರಹವನ್ನು ಗುರುತಾಗಿಟ್ಟುಕೊಳ್ಳಲಾಗುತ್ತದೆ. ಆದರೆ ಮಧ್ಯಕಾಲೀನ ಕರ್ನಾಟಕದಲ್ಲಿ ಇರಬಹುದಾಗಿದ್ದ ಜಾನಪದ ಸಂಗತಿಯ ಬಗ್ಗೆ ನಮಗೆ ಖಚಿತ ಮಾಹಿತಿಯಿಲ್ಲ. ಹಾಗಾಗಿ ಪುರಂದರರ ರಚನೆಯ ಒಳಗಿಂದಲೇ ಜಾನಪದ ಜಗತ್ತಿನ ವಿವರಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಅಷ್ಟಕ್ಕೂ ಈ ಆಯ್ದ ವಿವರಗಳೇ ಪುರಂದರರು ಬದುಕಿದ್ದ ಕಾಲದ ಒಟ್ಟು ಜಾನಪದವನ್ನು ಪ್ರತಿನಿಧಿಸಲಾರದು ಕೂಡ. ನಾವೀಗ ಪುರಂದರರ ಕಾಲಘಟ್ಟದ ಆರೇಳು ಶತಕದ ಆಚೆ ನಿಂತು ಅವರ ದೇಸಿಯತೆ ಕುರಿತು ಮಾತನಾಡುತ್ತಿದ್ದೇವೆ, ಹಾಗಾಗಿ ಪುರಂದರರ ರಚನೆಗಳಿಂದಲೇ ಅನೇಕ ಸಂಗತಿಗಳು ಮೌಖಿಕ ಪರಂಪರೆಗೆ ಜಿಗಿದಿರಬಹುದಾದ ಸಾದ್ಯತೆಯನ್ನು ಅಲ್ಲಗೆಳೆಯುವಂತಿಲ್ಲ. ಕತ್ತೆ ಬಲ್ಲದೆ ಕಸ್ತೂರಿ ಪರಿಮಳವ ಎನ್ನುವ ಗಾದೆಯೊಂದಿದೆ, ಅಂತೆಯೇ ಪುರಂದರರ ಕೀರ್ತನೆಯಲ್ಲಿ ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ ಎನ್ನುವ ತರಹದ ಒಂದು ಕೀರ್ತನೆಯೇ ಇದೆ. ಇದಕ್ಕೆ ಅನೇಕ ಉದಾಹರಣೆಯನ್ನು ಎಕ್ಕಬಹುದು ಕೂಡ. ಅದನ್ನು ಗುರುತಿಸಲು ಖಚಿತ ಅಳತೆಗೋಲು ಇಲ್ಲವಾದರೂ ಪುರಂದರರನ್ನು ಅದ್ಯಯನ ಮಾಡಹೊರಟವರಿಗೆ ಈ ಒಂದು ಸಾಧ್ಯತೆಯ ಅರಿವು ಇರಬೇಕಾಗುತ್ತದೆ. ಇದು ವಚನಕಾರರಲ್ಲಿ ದೇಸೀಯತೆ, ದಾಸ ಸಾಹಿತ್ಯದಲ್ಲಿ ದೇಸಿಯತೆ ಮುಂತಾಗಿ ಮಾತನಾಡುವಾಗಲೂ ಇರಬೇಕಾದ ಎಚ್ಚರ ಎನ್ನುವುದು ನನ್ನ ತಿಳುವಳಿಕೆ. ಮಾತನ್ನು ಒಂದು ಉದಾಹರಣೆಯ ಮೂಲಕ ಖಚಿತಪಡಿಸಲು ಪ್ರಯತ್ನಿಸುತ್ತೇನೆ. ಅದೆಂದರೆ ಫರ್ಡಿನಂಡ್ ಕಿಟ್ಟಲ್ ತನ್ನ ನಿಘಂಟಿನ ಮುನ್ನುಡಿಯಲ್ಲಿ ಈ ಕೋಶವನ್ನು ಸಿದ್ದಪಡಿಸಲು ದಾಸರನ್ನು, ವಚನಕಾರರನ್ನು, ಹಳೆಗನ್ನಡವನ್ನೂ ಜಾನಪದ ಲೋಕವನ್ನೂ ಒಟ್ಟಾಗಿ ಗಮನಿಸಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಅಂದರೆ ಈಗಿನ ಮೌಖಿಕ ಶಿಷ್ಟ ಎನ್ನುವ ಪರಿಭಾಷೆಯನ್ನು ಕಿಟ್ಟಲ್ ಮೀರಿದ್ದರು ಎಂದು ಗೊತ್ತಾಗುತ್ತದೆ. ಆದರೆ ನಾವಿಂದು ಕಿಟ್ಟಲ್ ಕೋಶದ ಗಾದೆಗಳನ್ನು ಜನಪದ ಗಾದೆಗಳು ಎಂದು ಅದ್ಯಯನ ಮಾಡುತ್ತೇವೆ. ಇದರಲ್ಲಿ ಕೆಲವು ದಾಸರ ಕೀರ್ತನೆಗಳಿಂದಲೂ, ವಚನಗಳಿಂದಲೂ, ಹಳೆಗನ್ನಡದಿಂದಲೂ ಆಯ್ದಿರುವ ಸಾದ್ಯತೆ ಇದೆ. ಅಂದರೆ ನಾವಿಂದು ಕಿಟ್ಟಲ್ ಕೋಶದ ಜನಪದ ಗಾದೆಗಳು ಎನ್ನುವುದು ಇವು ಬೆರೆತ ಗಾದೆಗಳೇ ಆಗಿವೆ. ಇನ್ನೊಂದು ಚಾರ್ಲ್ಸ್ ಇ. ಗೋವರ್ ಎನ್ನುವ ಪಾಶ್ಚ್ಯಾತ್ಯ ವಿದ್ವಾಂಸನ ಫೋಕ್ ಸಾಂಗ್ಸ ಇನ್ ಸದರನ್ ಇಂಡಿಯಾ ಎನ್ನುವ ಕೃತಿ. ಈ ಕೃತಿಯಲ್ಲಿ ಗೋವರನು ಕೆಲವು ದಾಸರ ಪದಗಳನ್ನೂ ಜನಪದ ಗೀತೆಗಳೆಂತಲೇ ಸಂಗ್ರಹಿಸಿದ್ದಾನೆ. ಆತನು ಕೊಡುವ ಸಮರ್ಥನೆಯೆಂದರೆ ದಾಸರು ಊರೂರು ಸುತ್ತುತ್ತಾ ಅಲೆಯುತ್ತಿದ್ದರು ಜನರ ಪದಗಳನ್ನೂ ತಾವೂ, ತಮ್ಮ ಹಾಡುಗಳನ್ನು ಜನರು ಒಕ್ಕುಬಳಸಿತ್ತಿದ್ದರಿಂದ ದಾಸರ ಪದಗಳನ್ನು ಜಾನಪದ ಹಾಡುಗಳೆಂತಲೇ ಸಂಗ್ರಹಿಸಿದ್ದೇನೆ ಎನ್ನುತ್ತಾರೆ. ಆದರೆ ಕನ್ನಡದ ಜಾನಪದ ವಿದ್ವಾಂಸರಾದ ಜಿ. ಶಂ. ಪರಮಶಿವಯ್ಯ ಮತ್ತು ಸೋಮಶೇಖರ ಇಮ್ರಾಪುರ ಅವರು ಜಾನಪದದ ಬಗ್ಗೆ ಶಿಷ್ಟದ ಎದುರಿನ ವ್ಯಾಖ್ಯಾನವನ್ನು ಆಧರಿಸಿ ಗೋವರ್ ಸಂಗ್ರಹಿಸಿದ್ದು ದಾಸರ ಪದಗಳೇ ಹೊರತು ಜಾನಪದ ಗೀತೆಗಳಲ್ಲ ಎಂದು ಕಟುವಾದ ವಿಮರ್ಶೆಗೆ ಒಳಗು ಮಾಡುತ್ತಾರೆ. ಹೀಗೆ ಜಾನಪದ ಶಿಷ್ಟದ ಬೆರೆತ ವ್ಯಾಖ್ಯಾನ ಸಾಧ್ಯವಾಗದ ಕಾರಣ ಈ ಕುರಿತ ಚಿಂತನೆಯು ಇಂತಹ ತೊಡಕನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಈ ನಾಲ್ಕು ತೊಡಕುಗಳನ್ನು ಗಮನದಲ್ಲಿರಿಸಿಕೊಂಡೇ ಪುರಂದರರ ದೇಸಿ ಚಿಂತನೆಯ ಆಯಾಮಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. -೩- ದಾಸ ಸಾಹಿತ್ಯ ಎಂದ ಕೂಡಲೇ ನಮಗೆ ನೆನಪಾಗುವುದು ಪುರಂದರ ಮತ್ತು ಕನಕದಾಸರು. ಕಾರಣ ದಾಸ ಸಾಹಿತ್ಯದ ಮತೀಯ ಕಟ್ಟುಗಳನ್ನು ಮೀರಲು ಈ ಇಬ್ಬರಿಗೆ ಸಾಧ್ಯವಾದದ್ದು. ಪುರಂದರರನ್ನು ಕೇಂದ್ರವನ್ನಾಗಿಟ್ಟುಕೊಂಡು ಮಾತನಾಡುವುದಾದರೆ, ಕೇವಲ ಸ್ತೋತ್ರಗಳಾಗಿ ಪರಿಣಮಿಸಿ ಬಿಡಬಹುದಾಗಿದ್ದ ಕೀರ್ತನಾ ಪ್ರಕಾರವನ್ನು ಅದರಾಚೆಗೂ ತೆಗೆದುಕೊಂಡು ಹೋಗಿ ಸಾಧ್ಯತೆಗಳನ್ನು ವಿಸ್ತರಿಸಿದ್ದು ಪುರಂದರ ದಾಸರಂತವರ ಸಿದ್ಧಿಯೆನ್ನಬೇಕು. ಮುಖ್ಯವಾಗಿ ಅದನ್ನು ವೈಯಕ್ತಿಕವಾದ ಬೇಕು ಬೇಡಗಳ ನಿರೂಪಣೆಗೆ ವಾಹಕವನ್ನಾಗಿ ಪರಿವರ್ತಿಸಿಕೊಳ್ಳುವಲ್ಲಿ, ಸಂವಾದದ ನೆಲೆಗಳನ್ನು ನಿರ್ಮಿಸುವಲ್ಲಿ, ನಿರೂಪಣೆಯ ವಿಭಿನ್ನ ಧ್ವನಿಗಳನ್ನು ಕಂಡುಕೊಳ್ಳುವ ಮೂಲಕ ಈ ಪ್ರಕಾರಕ್ಕೆ ವಿವೃತತೆಯನ್ನು ದೊರಕಿಸಿಕೊಡುವಲ್ಲಿ ದಾಸರ ಸಾಧನೆ ದೂಡ್ಡದು. ಕೇವಲ ಸ್ತ್ರೋತ್ರಗಳ ಗುಂಪಿಗೆ ಸೇರಿಬಿಡಬಹುದಾದ ಕೀರ್ತನೆಗಳ ಸಂಖ್ಯೆ ದೊಡ್ಡದಾಗಿದೆ ಎಂಬ ಮಾತನ್ನು ಒಪ್ಪಿಕೊಳ್ಳುತ್ತಲೂ ಈ ಸಂಗತಿಯನ್ನು ಗುರುತಿಸಿಕೊಳ್ಳಬೇಕಾಗಿದೆ. (ಎಚ್.ಎನ್.ಮುರಳೀಧರ್,೨೦೦೫:೧೮) ಹೀಗೆ ಪುರಂದರರು ದಾಸ ಸಾಹಿತ್ಯದಲ್ಲಿಯೇ ತಮ್ಮದೊಂದು ಅನನ್ಯತೆಯನ್ನು ಕಾಪಾಡಿಕೊಂಡಿರುವುದನ್ನು ಗಮನಿಸಬಹುದಾಗಿದೆ. ಯಾವುದು ಹರಿಸ್ಮರಣೆಗೆ ಮಾತ್ರ ಸೀಮಿತವಾದ ಸಾಹಿತ್ಯವೋ ಅದರ ಕಣ್ಣೋಟದಿಂದಲೇ ಪುರಂದರರು ಜನಬದುಕಿನೊಳಗಿನ ಹರಿಯನ್ನೂ ಹುಡುಕಿದರೆನಿಸುತ್ತದೆ. ಪುರಂದರ ಕನಕರನ್ನು ಹೊರತು ಪಡಿಸಿದ ಬಹುಪಾಲು ದಾಸರಲ್ಲಿ ಹರಿಯ ಹುಡುಕಾಟ ಕೇವಲ ದೈವಿಕ ಮತ್ತು ಮತೀಯ ನೆಲೆಯದಾಗಿತ್ತು. ಆದರೆ ಅದು ಪುರಂದರ ಕನಕರಲ್ಲಿ ಸಾಮಾಜಿಕ ನೆಲೆಗೆ ವಿಸ್ತರಣೆಯಾಯಿತು. ಇದೊಂದು ದಾಸ ಸಾಹಿತ್ಯದಲ್ಲಿ ಘಟಿಸಿದ ದೊಡ್ಡ ಪಲ್ಲಟ. ಇದಕ್ಕೆ ವೈದಿಕ ಧರ್ಮವನ್ನು ಪ್ರಚಾರಮಾಡುವ ಉದ್ಯೇಶವಂತೂ ಇದ್ದೇ ಇದೆ. ಕೆಲವೊಮ್ಮೆ ಪುರಂದರರು ಜನಬದುಕಿನ ವಿವರದ ಒಳಗಿನ ಕೆಡುಕಗಳನ್ನು ಕೆದಕಿ ಅದರಿಂದ ಹೊರ ಬರಲು ಪರ್ಯಾಯವಾಗಿ ಹರಿಸ್ಮರಣೆಯನ್ನು ಸೂಚಿಸುತ್ತಾರೆ. ಈ ಕಾರಣಕ್ಕೇ ಅವರು ಜನಸಂಸ್ಕೃತಿಯ ಒಳಗೆ ಪ್ರವೇಶಿಸುತ್ತಾರೆನಿಸುತ್ತದೆ. ಆದರೆ ಈ ಪ್ರವೇಶ ಜನರ ಬದುಕನ್ನು ಪ್ರೇರೇಪಿಸಿತು, ಬದಲಾಯಿಸಿತು ಎನ್ನುವುದಕ್ಕಿಂತ ಜನಬದುಕಿನ ವಿವರ ಪುರಂದರರ ಕೀರ್ತನ ಸಾಹಿತ್ಯದ ದಿಕ್ಕನ್ನೇ ಬೇರೆಡೆ ಚಲಿಸುವುದಕ್ಕೆ ಪ್ರೇರಣೆಯಾಯಿತು ಎನ್ನುವುದೇ ಸರಿ. ಈ ಕಾರಣಕ್ಕಾಗಿಯೇ ಪುರಂದರರು ಹರಿಯನ್ನೇ ’ನೀನ್ಯಾಕೋ ನಿನ ಹಂಗ್ಯಾಕೋ’ ಎಂದು ಕೇಳಲು ಸಾಧ್ಯವಾಯಿತೆ? ಎಂದು ಪರಿಶೀಲಿಸಬೇಕಿದೆ. ಈ ನಿಟ್ಟಿನಲ್ಲಿ ಒಟ್ಟು ದಾಸ ಸಾಹಿತ್ಯದಲ್ಲಿ ಪುರಂದರರ ವಿಶಿಷ್ಟತೆಯನ್ನು ಅವರ ದೇಸಿಯತೆಯನ್ನು ಗಮನಿಸಲು ಸಾಧ್ಯವಿದೆ. ಎರಡನೆಯದಾಗಿ ಪುರಂದರರ ಸಾಹಿತ್ಯದೊಳಗಿನ ದೇಸಿ ಜಗತ್ತು ಯಾವ ಬಗೆಯದು ಎಂದು ನೋಡಬೇಕಾಗಿದೆ. ಪುರಂದರರ ಕೀರ್ತನ ಮುಂತಾದ ಪ್ರಾಕಾರಗಳಲ್ಲಿ ಜಾನಪದ ಜಗತ್ತಿನ ವಿವರಗಳು ಹೇರಳವಾಗಿ ಬರುತ್ತವೆ. ಆದರೆ ಈ ವಿವರಗಳ ಮೂಲಕ ಅವರು ಹೇಳ ಹೊರಡುವುದು ಏನು ಎನ್ನುವ ಪ್ರಶ್ನೆ ಎದುರು ನಿಲ್ಲುತ್ತದೆ. ಪುರಂದರರು ಜನಪದರ ಹಬ್ಬದ ಕಲ್ಪನೆಯನ್ನು ವಿಮರ್ಶಿಸುತ್ತಾ ಸಾಧು ಸಜ್ಜನರೊಳಗಿರುವುದೇ ಹಬ್ಬ/ ವೇದಾಂತದರ್ಥವ ತಿಳಿವುದೇ ಹಬ್ಬ/ ಬೇಧ ಬುದ್ಧಿಗಳೆಲ್ಲವ ಬಿಡುವುದೆ ಹಬ್ಬ/ ಭಾಗೀರಥಿಯಲಿ ಲೋಲಾಡುವುದೇ ಹಬ್ಬ ಎನ್ನುತ್ತಾರೆ. ಹೀಗಾಗಿ ಪುರಂದರರು ಬಳಸುವ ಜನಭಾಷೆ ಮತ್ತು ಅದು ಒಳಗೊಳ್ಳುವ ಆಶಯಗಳಲ್ಲಿ ಮೂಲಭೂತವಾಗಿ ವೈರುದ್ಧ್ಯಗಳಿರುವುದನ್ನು ಗಮನಿಸಬಹುದು. ನಾವು ಪುರಂದರರ ಭಾಷಿಕ ಲಯ ಮತ್ತು ಜನಪದ ವಿವರಗಳನ್ನು ಉಲ್ಲೇಖಿಸುತ್ತಾ ಅಪ್ಪಟ ದೇಸಿ ಎನ್ನುವ ಸಡಿಲ ನಿಲುವುಗಳನ್ನು ತಾಳುತ್ತೇವೆ. ಇಲ್ಲಿ ಗಮನಿಸಬಹುದಾದ ಅಂಶವೆಂದರೆ ತಮ್ಮ ಹರಿ ಸರ್ವೋತ್ತಮ ಎನ್ನುವ ಆಶಯವನ್ನು ಜನರಲ್ಲಿ ಬಿತ್ತುವ ಕಾರಣಕ್ಕಾಗಿ ಜಾನಪದ ಜಗತ್ತಿನ ಚೈತನ್ಯದಾಯಕ ಸಂಗತಿಗಳನ್ನು ನಿರಾಕರಿಸುತ್ತಾರೆ. ಆ ಸ್ಥಾನದಲ್ಲಿ ವೈದಿಕ ಧರ್ಮದ ತಾತ್ವಿಕತೆಯನ್ನು ಕೂರಿಸುತ್ತಾರೆ. ಅಂತೆಯೇ ಜಾನಪದ ಜಗತ್ತಿನ ವೈವಿಧ್ಯತೆಯನ್ನು ಉಲ್ಲೇಖಿಸಿ ಅದುವೇ ಜನಸಾಮಾನ್ಯರ ಕೆಡುಕು ಎನ್ನುವಂತೆ ಏಕದೇವೋಪಾಸನೆಯನ್ನು ಪರ್ಯಾಯವಾಗಿ ಸೂಚಿಸುತ್ತಾರೆ. ಹೀಗಾಗಿ ಹರಿಯನ್ನು ಕಂಡೆನೆಂದು ಉನ್ಮಾದದಿಂದ ಕೊಂಡಾಡುವ ಪುರಂದರರು ಜಾನಪದ ಜಗತ್ತಿನ ಚೈತನ್ಯವನ್ನು ಕಾಣುವಲ್ಲಿ ವಿಫಲರಾಗುತ್ತಾರೆ. ಅಥವಾ ಜಾನಪದ ಜಗತ್ತಿನ ಚೈತನ್ಯ ಪುರಂದರರಿಗೆ ಗೋಚರಿಸಿದ್ದೇ ಆಗಿದ್ದರೆ ಹರಿ ಸರ್ವೋತ್ತಮ ಎನ್ನುವ ನಿಲುವನ್ನು ಪುರಂದರರಿಂದ ನಿರೀಕ್ಷಿಸುವುದು ಕಷ್ಟವಾಗುತ್ತಿತ್ತು. ಪುರಂದರರ ದಾಸಪೂರ್ವ ಜೀವನದ ಕಥನಗಳು ನಿಜವೆಂದಾದಲ್ಲಿ ಹೀಗೊಂದು ಆಲೋಚನೆ ಸಾಧ್ಯವಿದೆ. ಪುರಂದರರು ತಮ್ಮ ಜೀವನದ ಅರ್ಧ ಭಾಗ ಸಮಾಜವನ್ನು ನೋಡಿದ್ದು ಅಂಗಡಿಯಲ್ಲಿ ಕೂತು. ಅದೂ ಒಬ್ಬ ತಿಮ್ಮಪ್ಪ ಶ್ರೇಷ್ಠಿಯಾಗಿ, ಒಬ್ಬ ಜಿಪುಣ ವ್ಯಾಪಾರಿಯಾಗಿ ಎನ್ನುವುದನ್ನು ಮರೆಯುವಂತಿಲ್ಲ. ಹಾಗಾಗಿ ಅವರ ದಾಸ ಪೂರ್ವ ಜೀವನದ ಸಾಮಾಜಿಕ ದೃಷ್ಟಿಕೋನ ದಾಸರಾದ ನಂತರ ಪೂರ್ಣ ಬದಲಾಯಿತು ಎಂದು ಹೇಳುವಂತಿಲ್ಲ. ಅವರ ದಾಸ ಜೀವನದಲ್ಲೂ ದಾಸಪೂರ್ವ ಜೀವನದ ವಿವರಗಳು ಮತ್ತು ಸಾಮಾಜಿಕ ದೃಷ್ಠಿಕೋನ ಮತ್ತೆ ಮತ್ತೆ ನುಗ್ಗಿ ಬರುವುದನ್ನು ಗಮನಿಸಬಹುದು. ಹಾಗಾಗಿ ಅನೇಕ ಕಡೆ ಪುರಂದರರು ಅಂಗಡಿಯಲ್ಲಿ ಕೂತುಕೊಂಡೆ ಸಮಾಜವನ್ನು ನೋಡಿದ್ದಾರೆ ಅನ್ನಿಸುತ್ತದೆ. ಈ ಮಾತು ಅವರ ರಚನೆಗಳಲ್ಲಿ ಕಾಣಬಹುದಾದ ದೇಸಿ ಜಗತ್ತಿನ ವಿವರಗಳಿಗೂ ಅನ್ವಯವಾಗುತ್ತದೆ. ಈ ಮಾತಿನ ತಾತ್ವಿಕತೆ ಪುರಂದರರ ದೇಸಿ ಚಿಂತನೆಯು ಒಳಗೊಳ್ಳುವ ಮಿತಿಗೂ ಸರಿ ಹೊಂದುತ್ತದೆ -೪- ಮೂರನೆಯದಾಗಿ ಪುರಂದರ ವರ್ತಮಾನದ ಜೀವಂತಿಕೆ ಮೂಲಕ ನಿರೂಪಿಸಬಹುದಾದ ದೇಸಿಯತೆ ಎಂಥಹದು ? ಎನ್ನುವುದನ್ನು ನೋಡಬೇಕಿದೆ. ಇದಕ್ಕೆ ನನ್ನ ಬಾಲ್ಯ ಕಾಲದ ನೆನಪೊಂದು ಬರುತ್ತಿದೆ. ನಾನು ಬಾಲ್ಯದಲ್ಲಿ ಭಜನೆ ಮಾಡಲು ಹಿರಿಯರೊಂದಿಗೆ ಹೋಗುತ್ತಿದ್ದೆ. ಆಗ ನಾನು ತಾಳ ಹಾಕುತ್ತಾ ಹಿನ್ನೆಲೆಯಾಗಿ ಗುನುಗುತ್ತಿದ್ದೆ. ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ, ತಾರಕ್ಕ ಬಿಂದಿಗೆಯ, ನೀನ್ಯಾಕೋ ನಿನ ಹಂಗ್ಯಾಕೋ, ಯಾರಿಗೆ ಯಾರುಂಟು ಎರವಿನ ಸಂಸಾರ ಮುಂತಾದ ಪುರಂದರರ ರಚನೆಗಳನ್ನು ಹಾಡುತ್ತಿದ್ದೆವು. ಆಗ ಯಾರಿಗೂ ಇವು ಪುರಂದರರ ರಚನೆಗಳು ಎಂದು ತಿಳಿದಿರಲಿಲ್ಲ. ತುಂಬಾ ದಿನದ ನಂತರ ಈ ರಚನೆಗಳು ಪುರಂದರ ದಾಸರವು ಎನ್ನುವುದು ತಿಳಿಯಿತು. ಈ ಹಾಡುಗಳನ್ನು ಪ್ರತಿ ಊರಿನ ಭಜನಾ ಮಂಡಳಿಗಳೂ ಹೆಚ್ಚುಕಡಿಮೆ ಹಾಡುತ್ತಿದ್ದವು. ನಾನು ಮೊದಲೇ ಪ್ರಸ್ತಾಪಿಸಿದಂತೆ ಮೂಡು ಮಾರ್ನಾಡಿನ ಜಗದೀಶ ದಾಸರಂಥವರು ಕರ್ನಾಟಕದ ಅನೇಕ ಕಡೆ ಪುರಂದರರನ್ನು ಜೀವಂತಗೊಳಿಸಿದ್ದಾರೆ. ಅನೇಕ ಕರ್ನಾಟಕ ಸಂಗೀತ ಪ್ರಿಯರು ಪುರಂದರರ ರಚನೆಗಳನ್ನು ಮೈದುಂಬಿ ಹಾಡುತ್ತಾರೆ. ಪುರಂದರರ ಹಾಡಿನ ಕ್ಯಾಸೆಟ್ಟು, ಡಿವಿಡಿ ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಪುರಂದರರ ಹೆಸರಲ್ಲಿ ಅನೇಕ ಸಂಗೀತದ ಕೂಟಗಳಿವೆ. ಜನಪದರಲ್ಲಿ ತುಂಬಾ ವಿರಳವಾಗಿ ಎನ್ನುವಂತೆ ಪುರಂದರರ ರಚನೆಯ ತುಣುಕುಗಳು ಗಾದೆ ಒಗಟಿನ ರೂಪದಲ್ಲಿ ಬಳಕೆಯಾಗುತ್ತಿವೆ. ಇನ್ನು ಪುರಂದರರ ದಾಸಪೂರ್ವ ಜೀವನದ ಕಥೆಯಂತೂ ಜನಪದ ಕಥೆಯಂತೆ ಕರ್ನಾಟಕದಾದ್ಯಂತ ಮನೆ ಮಾತಾಗಿದೆ. ಹೀಗೆ ಅನೇಕ ವಿಧದಲ್ಲಿ ಪುರಂದರರು ವರ್ತಮಾನದಲ್ಲಿ ಜೀವಂತವಾಗಿರುವುದನ್ನು ನೋಡಬಹುದು. ಹಾಗೆಯೇ ಪುರಂದರರ ಬಗೆಗಿನ ಅಧ್ಯಯನಗಳು ಹೇರಳವಾಗಿವೆ. ಅಂತೆಯೇ ಪುರಂದರರ ರಚನೆಗಳು ವ್ಯಾಪಕವಾಗಿ ಪ್ರಕಟಣೆಯಾಗಿವೆ. ಮೇಲಿನ ಉಲ್ಲೇಖವನ್ನು ಇನ್ನೊಂದು ನಿಟ್ಟಿನಲ್ಲಿ ನೋಡಬಹುದು. ಈ ಮೇಲಿನ ಉದಾಹರಣೆಗಳು ಬಹುಪಾಲು ಸಮಾಜದ ಮೇಲ್ವರ್ಗದಲ್ಲಿ ಹೆಚ್ಚು ಪ್ರಚಲಿತದಲ್ಲಿರುವಂತಹವುಗಳು. ನಾನು ಉಲ್ಲೇಖಿಸಿದ ಭಜನೆಯೂ ಕೂಡ ಊರಿನ ಮೇಲ್ವರ್ಗದವರ ಕೂಟವೆ. ಇಂದು ಸಂಗೀತ ವಲಯದಲ್ಲಿ ಪುರಂದರರು ಜೀವಂತವಾಗಿದ್ದಾರೆಂದರೆ ಅದು ಹೆಚ್ಚಾಗಿ ಬ್ರಾಹ್ಮಣ ವರ್ಗದಲ್ಲಿ ಎನ್ನುವುದನ್ನು ಗಮನಿಸಬೇಕು. ಮೌಖಿಕ ಪರಂಪರೆಯಲ್ಲಿ ಇಂದು ಪುರಂದರರು ಹೆಚ್ಚು ಉಳಿಯಲಿಲ್ಲ ಇದಕ್ಕೆ ಅವರೂ ಸಹಾ ಮೇಲ್ವರ್ಗದಿಂದ ಬಂದದ್ದೇ ಕಾರಣವಿರಬೇಕು. ವಚನ ಸಾಹಿತ್ಯವನ್ನು ದಲಿತರು ಕೆಳಸಮುದಾಯಗಳು ಮುತ್ತಿಕೊಂಡಂತೆ ದಾಸ ಸಾಹಿತ್ಯವನ್ನು ಅದರಲ್ಲೂ ಪುರಂದರರ ಸಾಹಿತ್ಯವನ್ನು ಕೆಳಸಮುದಾಯಗಳು ಮುತ್ತಿಕೊಳ್ಳಲಿಲ್ಲ ಅಪ್ಪಿಕೊಳ್ಳಲಿಲ್ಲ. ಹೀಗೆ ಪುರಂದರರ ವರ್ತಮಾನದ ಜೀವಂತಿಕೆ ಕೂಡ ಅದು ಸಮಾಜದ ಮೇಲ್ವರ್ಗದ ಜತೆ ಆಯಿತು, ಬದಲಾಗಿ ಮೌಖಿಕ ಪರಂಪರೆಯ ಸಮುದಾಯಗಳಿಗಿಂತ ಶಿಷ್ಟ ಪರಂಪರೆಯ ಸಮುದಾಯಗಳಲ್ಲಿ ಪುರಂದರರು ಜೀವಂತವಾಗಿರುವುದನ್ನು ಗಮನಿಸಬೇಕು. ಹಾಗಾಗಿ ಪುರಂದರರ ವರ್ತಮಾನದ ಜೀವಂತಿಕೆಯ ಮೂಲಕ ನಿರೂಪಿಸಬಹುದಾದ ದೇಶೀಯತೆ ಕೂಡ ಅದು ಮೇಲ್ವರ್ಗದ ಜತೆ, ಶಿಷ್ಟ ಸಮುದಾಯದ ಜತೆ ತಳಕು ಹಾಕಿಕೊಳ್ಳುತ್ತದೆ. ನಾಲ್ಕನೆಯದಾಗಿ ಅನ್ಯ ಮತ್ತು ಸ್ವಂತಿಕೆಯ ದೇಸಿ ಚಿಂತನೆಯ ನೆಲೆಯಲ್ಲಿ ಪುರಂದರರ ಆಲೋಚನೆಯನ್ನು ಪರಿಶೀಲಿಸಬೇಕಿದೆ. ಮುಖ್ಯವಾಗಿ ಸ್ವಂತಿಕೆಯ ನೆಲೆಗಳ ಮೇಲೆ ಅನ್ಯ ಪ್ರಭಾವಗಳು ಹೆಚ್ಚಾಗಿ ಸ್ವಂತಿಕೆಯನ್ನು ಎತ್ತಿ ಹಿಡಿಯುವ ಮೂಲಕ ದೇಸಿಯನ್ನು ಸ್ಥಾಪಿಸುವ ಆಲೋಚನೆಯ ಕ್ರಮ ನಮ್ಮಲ್ಲಿದೆ. ಅದು ಮಾರ್ಗ ಮತ್ತು ದೇಸಿ ಎನ್ನುವಂತಹ ತಿಳುವಳಿಕೆಯಲ್ಲೂ ಇರುವ ಎಳೆ ಕೂಡ. ಸಂಸ್ಕೃತ ಭಾಷೆಯ ಯಾಜಮಾನಿಕೆಯಲ್ಲಿ ಕನ್ನಡ ಬಳಸುವಿಕೆಯೇ ದೇಸಿಯಾಯಿತು, ಅಂತೆಯೇ ಅದು ಬೇರೆ ಬೇರೆ ನೆಲೆಗಳನ್ನು ಪಡೆದುಕೊಂಡುದನ್ನು ನೋಡಬಹುದು. ದಾಸರು ಸಂಸ್ಕೃತಕ್ಕಿಂತ ಕನ್ನಡ ಬಳಸಿದ್ದು ದೇಸಿ ಅಂತಲೇ ಕಾಣುತ್ತದೆ. ಈ ಮಾತು ಒಟ್ಟು ದಾಸ ಪರಂಪರೆಗೆ ಸಲ್ಲುತ್ತದೆ. ದಾಸರು ಸಂಸ್ಕೃತವಾದಿಗಳಾಗಿದ್ದ ಪಂಡಿತ-ಪುರೋಹಿತರಿಂದ ವೈದಿಕ ಧರ್ಮವನ್ನು ಬಿಡಿಸಿ, ಕನ್ನಡದಲ್ಲಿ ಅಭಿವ್ಯಕ್ತಿಸಿದ್ದು ಮಹಾ ಬದಲಾವಣೆಯಂತೆ ಕಾಣುತ್ತದೆ. ಆದರೆ ಅದು ವೈದಿಕ ಧರ್ಮದ ಒಳಗಿನ ತುರ್ತಾಗಿತ್ತು. ಯಾಕೆಂದರೆ ಸಂಸ್ಕೃತವನ್ನು ತಿರಸ್ಕರಿಸಿ ಕನ್ನಡದಲ್ಲಿ ಮಾತಾಡಿ, ಜನರನ್ನು ಮೈದಡವಿದ ವಚನಕಾರರ ಸಾಧನೆ ದಾಸರೆದುರಂತೂ ಅದು ತೆರೆದ ಪುಸ್ತಕವಾಗಿ ಬಿದ್ದಿತ್ತು. ವೈದಿಕ ಭಕ್ತಿ ಪಂಥದ ಬಗ್ಗೆ ಒಳ ನೋಟಗಳುಳ್ಳ ಲೇಖನ ಬರೆದಿರುವ ನಾಗರಾಜಪ್ಪನವರು, ದಾಸರ ಕನ್ನಡ ಬಳಕೆಗೆ ಒತ್ತಡವಾಗಿದ್ದ ಮೂರು ಕಾರಣಗಳನ್ನು ಕೊಡುತ್ತಾರೆ: ೧. ಸಂಸ್ಕೃತಕ್ಕೆ ರಾಜಾಶ್ರಯ ಇಲ್ಲವಾದದ್ದು ೨. ವೀರಶೈವರೂ ಸಂಸ್ಕೃತದಲ್ಲಿ ಪರಿಣತಿ ಪಡೆದದ್ದು ೩. ಸಂಸ್ಕೃತದ ಗೂಡಲ್ಲಿದ್ದ ವೈದಿಕಕ್ಕೆ ಕನ್ನಡದ ಮೂಲಕ ವೀರಶೈವ-ಜೈನರು ಪ್ರಹಾರ ಮಾಡಿದ್ದು(ರಹಮತ್ ತರೀಕೆರೆ ೨೦೦೯:೨೩). ಹೀಗೆ ಪುರಂದರರು ಸಂಸ್ಕೃತದ ಜತೆ ಕನ್ನಡವನ್ನು ತಮ್ಮ ರಚನೆಗಳಲ್ಲಿ ಬಳಸಿದರು ಎನ್ನುವುದಕ್ಕೂ ಈ ಮೇಲಿನ ಮಾತಿನ ಮಿತಿ ಅನ್ವಯವಾಗುತ್ತದೆ. ಪುರಂದರರು ತಮ್ಮ ರಚನೆಗಳಲ್ಲಿ ಹರಿಸ್ಮರಣೆಯನ್ನು ಸ್ವಂತಿಕೆಯೆಂತಲೂ ಇತರ ದೈವಗಳನ್ನು ಅನ್ಯ ಎಂತಲೂ ಮಂಡನೆ ಮಾಡುತ್ತಾರೆ. ಈ ನೆಲೆಯಲ್ಲೇ ಅವರು ಜನಪದ ದೈವವನ್ನು ನಿರಾಕರಿಸುವ ಧೋರಣೆ ಇರುವುದು. ಹಾಗಾಗಿ ಪುರಂದರರು ಕಳ್ಳತನ, ಸುಳ್ಳುತನ, ವ್ಯಭಿಚಾರ ಮುಂತಾದ ಜೀವನದ ಅನೇಕ ಕೆಟ್ಟ ಎಂದು ಕರೆವ ಸಂಗತಿಗಳನ್ನು ವಿರೋಧಿಸುತ್ತಾರಾದರೂ, ಇವುಗಳಿಗೆ ಕಾರಣವಾದ ಸಾಮಾಜಿಕ ವ್ಯವಸ್ಥೆಯೊಳಗೇ ಇರುವ ಅಸಮಾನತೆಯನ್ನು ಪ್ರಶ್ನೆ ಮಾಡುವುದಿಲ್ಲ. ಅಥವಾ ಅಂತಹ ಕಾರಣಾನ್ವೇಷಣೆಗೆ ಇಳಿಯದೆ ಮೇಲುನೋಟದ ವಿಮರ್ಶೆ ಮಾಡುತ್ತಾರೆ. ಹೀಗಾಗಿ ಪುರಂದರರ ಬಹುಪಾಲು ರಚನೆಗಳಲ್ಲಿ ವ್ಯಕ್ತವಾಗುವ ಅನ್ಯ ಮತ್ತು ಸ್ವಂತಿಕೆ ಗುರುತಿಸುವಿಕೆಯ ಒಳಗೂ ವೈದಿಕ ಧರ್ಮವನ್ನು ಪುನರುಜ್ಜೀವನಗೊಳಿಸುವ ಆಶಯಗಳಿರುವುದನ್ನು ಅಲ್ಲಗಳೆಯುವಂತಿಲ್ಲ. -೫- ಈ ಮೇಲಿನ ಒಟ್ಟು ಚರ್ಚೆ ಪುರಂದರರ ದೇಸಿ ಚಿಂತನೆಯನ್ನು ಗುರುತಿಸುವ ನೆಲೆ ಮತ್ತು ಅದರ ಮಿತಿಯನ್ನು ಗುರುತಾಗಿಟ್ಟುಕೊಂಡೇ ಮಾತನಾಡಲಾಗಿದೆ. ಈ ಮಾತುಗಳಿಗೆ ಕೆಲವು ಮಿತಿ ಇರಬಹುದಾದರೂ ಇವು ನಮ್ಮ ಕಾಲದಲ್ಲಿ ಪುರಂದರರನ್ನು ಎದುರುಗೊಳ್ಳುವಾಗ ಇರಬೇಕಾದ ಒತ್ತಡಗಳೂ ಹೌದು. ಹಾಗಾಗಿ ಪುರಂದರರ ಕಾಲದ ರಾಜಕಾರಣವನ್ನು ಅರಿಯದೆ ಅವರೊಬ್ಬರನ್ನೇ ಕತ್ತರಿಸಿ ಮಾತನಾಡುವುದು ಕಷ್ಟದ ಕೆಲಸ. ಹಾಗಾದಲ್ಲಿ ಹೆಚ್ಚೆಂದರೆ ಅದು ಪುರಂದರರ ಭಜನೆಯಾಗಬಹುದು. ಇಲ್ಲಿನ ಮಾತುಗಳು ಪುರಂದರರನ್ನು ಪ್ರೀತಿಸುವವರಿಗೆ ನೋವಾಗುವ ಸಾಧ್ಯತೆಯಿದೆ. ಅಥವಾ ಈ ನಿಲುವುಗಳನ್ನೇ ಸಾರಾಸಗಟಾಗಿ ನಿರಾಕರಿಸುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಪುರಂದರರ ಬಗೆಗಿನ ಪ್ರೀತಿ ಅವರ ಕುರಿತಾದ ವಿಮರ್ಶೆಗೆ ತೊಡಕಾಗಬಾರದು ಎನ್ನುವುದು ನನ್ನ ನಂಬುಗೆ. ಅವರನ್ನು ನನ್ನ ಕಾಲದ ತಿಳುವಳಿಕೆಯ ಮೂಲಕ ಎದುರುಗೊಳ್ಳುವ ಅಗತ್ಯವಿದ್ದಾಗ ಅವರೊಂದಿಗೆ ಪ್ರೀತಿಯ ಜಗಳವೂ ಸಾಧ್ಯವಾಗಬೇಕು. ಬಹುಶಃ ಆ ತಿಳುವಳಿಕೆಯ ನೆಲೆಯಲ್ಲಿ ಮೇಲಿನ ಆಲೋಚನೆ ರೂಪುಗೊಂಡಿದೆ. ಹಾಗೆಯೇ ಅದು ನನ್ನ ಓದು ಮತ್ತು ಆಲೋಚನೆಯ ಮಿತಿಗೆ ಒಳಪಟ್ಟಿದೆ ಎಂದು ವಿನಮ್ರವಾಗಿ ತಿಳಿಸಲು ಇಚ್ಫಿಸುತ್ತೇನೆ. (ಕನ್ನಡ ವಿಶ್ವವಿದ್ಯಾಲಯ, ಹಂಪಿಯ ಪುರಂದರ ಅಧ್ಯಯನ ಪೀಠವು ಅಮರೇಶ ನುಗಡೋಣಿ ಅವರ ಸಂಚಾಲಕತ್ವದಲ್ಲಿ ದಾರವಾಡದಲ್ಲಿ ಆಯೋಜಿಸಿದ ಸೆಮಿನಾರಿನಲ್ಲಿ ಮಂಡಿಸಿದ ಪ್ರಬಂಧ)

ಗುರುವಾರ, ನವೆಂಬರ್ 11, 2010

ಪುರುಷೋತ್ತಮ ಬಿಳಿಮಲೆ ಅವರ ಬರಹ ‘ಕುಂಬಳೆ ಸುಂದರ ರಾವ್ ಮತ್ತು ಸೂರಿಕುಮೇರು ಗೋವಿಂದ ಭಟ್’

(ಪುರುಷೋತ್ತಮ ಬಿಳಿಮಲೆ ಅವರು ಕನ್ನಡ ಜಾನಪದ ಅಧ್ಯಯನದ ತಾತ್ವಿಕ ಚೌಕಟ್ಟನ್ನು ರೂಪಿಸಿದ ಕೆಲವೇ ಕೆಲವು ಜಾನಪದ ವಿದ್ವಾಂಸರಲ್ಲಿ ಒಬ್ಬರು. ಕರಾವಳಿ ಜಾನಪದ, ಕೂಡುಕಟ್ಟು ಅವರ ಮುಖ್ಯವಾದ ಕೃತಿಗಳು. ಅವರು ಕನ್ನಡ ಜಾನಪದ ಅಧ್ಯಯನಗಳ ವಿವರಣಾತ್ಮಕ ನೆಲೆಯಿಂದ ದೂರಸರಿದು, ಸಾಂಸ್ಕೃತಿಕ ರಾಜಕಾರಣದ ಒಳನೇಯ್ಗೆಯ ಸೂಕ್ಷ್ಮಗಳನ್ನು ಗುರುತಿಸುತ್ತಾ ಭಿನ್ನ ಆಯಾಮವನ್ನು ನೀಡಿದವರು. ಜಾನಪದದ ಬಹುಮುಖಿ ನೆಲೆಯ ಅಧ್ಯಯನಕ್ಕೆ ಒಳನೋಟಗಳನ್ನು ಕೊಟ್ಟವರು. ಅವರು ದೆಹಲಿಗೆ ತೆರಳಿದ ನಂತರ ಕನ್ನಡ ಜಾನಪದ ಕ್ಷೇತ್ರ ಅವರಿಂದ ತುಂಬಾ ಕಳೆದುಕೊಂಡಿದೆಯೆಂದೇ ನನ್ನ ಭಾವನೆ. ಅವರು ಮತ್ತೆ ಕನ್ನಡ ಜಾನಪದದ ಬಗ್ಗೆ ಹೊಸ ನೆಲೆಗಳಲ್ಲಿ ಬರೆಯಲು ತೊಡಗಲಿ ಎಂದು ಕನ್ನಡ ಜಾನಪದ ಬ್ಲಾಗ್ ಆಶಿಸುತ್ತದೆ. ಅವರು ತಮ್ಮ ಬಿಳಿಮಲೆ ಬ್ಲಾಗ್ ನಲ್ಲಿ ಬರೆದುಕೊಂಡಿದ್ದ ಯಕ್ಷಗಾನದ ಬಗೆಗಿನ ನುಡಿಚಿತ್ರದಂತಹ ಈ ಸೂಕ್ಷ್ಮ ಬರಹವನ್ನು ಇಲ್ಲಿ ಕೊಡಲಾಗಿದೆ. –ಅರುಣ್ ) ನಾನು ಯಕ್ಷಗಾನ ನೋಡಲು ಆರಂಭಿ ಸಿದ್ದು ಬಹುಮಟ್ಟಿಗೆ 1959-60ರ ಸುಮಾರಿ ನಲ್ಲಿ ಎಂದು ನನ್ನ ನೆನಪು. ಅಂದಿನಿಂದ ಇಂದಿನವರೆಗೆ ಕಳೆದ 50 ವರ್ಷಗಳಲ್ಲಿ ನಾನು ನೂರಾರು ಯಕ್ಷಗಾನಗಳನ್ನು ನೋಡಿದ್ದೇನೆ, ತಾಳಮದ್ದಳೆಗಳ ವಾದ ವಿವಾದಗಳಿಗೆ ಕಿವಿ ಗೊಟ್ಟಿದ್ದೇನೆ. ಹವ್ಯಾಸಿ ಕಲಾವಿದರೊಂದಿಗೆ ಅವಕಾಶ ಸಿಕ್ಕಿದಾಗಲೆಲ್ಲ ಗೆಜ್ಜೆ ಕಟ್ಟಿ, ಕುಣಿದು, ಅರ್ಥ ಹೇಳಲು ಹೆಣಗಿದ್ದೇನೆ. ಯಕ್ಷಗಾನದ ಬಗ್ಗೆ ದೇಶ-ವಿದೇಶ ಗಳ ವಿದ್ವಾಂಸರಿಗೆ ನನಗೆ ತಿಳಿದ ಮಾಹಿತಿ ನೀಡಿದ್ದೇನೆ, ಕಲಾವಿದ ರೊಂದಿಗೆ ವಿದೇಶ ಸುತ್ತಿದ್ದೇನೆ. ಈಗ 2010ರ ಕೊನೆಯಲ್ಲಿ ಒಂದು ಕ್ಷಣ ನಿಂತು ಹಿಂದಿರುಗಿ ನೋಡಿದರೆ, ನಾನು ಮತ್ತು ನನ್ನ ತಲೆಮಾರಿನ ಜನರು ಯಕ್ಷಗಾನ ನೋಡುತ್ತಿದ್ದ ಕಾಲವು ಯಕ್ಷಗಾನದ ಸುವರ್ಣ ಯುಗ ಆಗಿತ್ತೇ ಎಂಬ ಭಾವ ಬಲವಾಗಿ ಮೂಡುತ್ತಿದೆ. ಏಕೆಂದರೆ ನಾವೆಲ್ಲ ದಾಮೋದರ ಮಂಡೆಚ್ಚ, ಕಡತೋಕ ಮಂಜುನಾಥ ಭಾಗವತ, ಬಲಿಪ ನಾರಾಯಣ ಭಾಗವತ, ಅಗರಿ, ಪುತ್ತಿಗೆ, ಪದ್ಯಾಣ, ಉಪ್ಪೂರು, ಕಾಳಿಂಗ ನಾವುಡ, ನೀಲಾವರ ಮೊದಲಾದ ಸಾರ್ವಕಾಲಿಕ ಮಹತ್ವದ ಭಾಗವತರ ಹಾಡುಗಳಿಗೆ ಕಿವಿ ಕೊಟ್ಟಿದ್ದೇವೆ. ನಿಡ್ಲೆ ನರಸಿಂಹ ಭಟ್‌, ದಿವಾಣ ಭೀಮ ಭಟ್‌, ಚಿಪ್ಪಾರು ಕೃಷ್ಣಯ್ಯ ಬಲ್ಲಾಳ್‌, ಕಾಸರಗೋಡು ವೆಂಕಟರಮಣ, ಕುದ್ರೆ ಕೂಡ್ಲು ರಾಮ ಭಟ್‌, ಪದ್ಯಾಣ ಶಂಕರ ನಾರಾಯಣ ಭಟ್‌, ಗೋಪಾಲಕೃಷ್ಣ ಕುರುಪ್‌, ಹಿರಿಯಡಕ ಗೋಪಾಲ ರಾವ್‌ ಮತ್ತಿತರ ಮಹಾನ್‌ ಕಲಾವಿದರ ಕೈಚಳಕ ಗಳಿಗೆ ಪುಳಕಗೊಂಡಿದ್ದೇವೆ. ರಂಗದ ಮೇಲೆ ಇನ್ನಿಲ್ಲದಂತೆ ಮೆರೆದ ಪಡ್ರೆ ಚಂದು, ಅಳಿಕೆ ರಾಮಯ್ಯ ರೈ, ಕುರಿಯ ವಿಠಲ ಶಾಸ್ತ್ರಿ, ಶೇಣಿ, ಸಾಮಗ, ಪುತ್ತೂರು ನಾರಾಯಣ ಹೆಗ್ಡೆ, ಕೋಳ್ಯೂರು, ಎಂಪೆಕಟ್ಟೆ, ಮಿಜಾರು, ವಿಟ್ಲ ಜೋಷಿ, ಬಂಟ್ವಾಳ ಜಯರಾಮ ಆಚಾರ್ಯ, ಕೆರೆಮನೆ ಗಜಾನನ, ಮಹಾಬಲ, ಶಂಭು ಹೆಗಡೆ, ಚಿಟ್ಟಾಣಿ, ಪ್ರಭಾಕರ ಜೋಷಿ, ಬಣ್ಣದ ಮಾಲಿಂಗ, ಕುಟ್ಯಪ್ಪು, ಅಂಬು, ಶ್ರೀಧರ ಭಂಡಾರಿ, ಅರುವ, ಕೊಂಡದಕುಳಿ, ಮೊದಲಾದ ಕಲಾವಿದರ ಭಿನ್ನ ಪಾತ್ರಾಭಿವ್ಯಕ್ತಿಗಳನ್ನು ನೋಡಿ ಸಂಭ್ರಮಿಸಿದ್ದೇವೆ. ಇರಾ, ಕರ್ನಾಟಕ, ಧರ್ಮಸ್ಥಳ, ಕಟೀಲು, ಕದ್ರಿ, ಸುರತ್ಕಲ್‌, ಮೇಳಗಳು ತಿರುಗಾಟದಲ್ಲಿ ಇತಿಹಾಸ ಸೃಷ್ಟಿಸಿದ್ದನ್ನು ನಾವು ಕಂಡಿದ್ದೇವೆ. ಅಮೃತ ಸೋಮೇಶ್ವರ, ರಾಘವ ನಂಬಿಯಾರ್‌, ಅನಂತರಾಮ ಬಂಗಾಡಿಯವರಂತಹವರು ರಂಗದ ಮೇಲೆ ಅಭೂತಪೂರ್ವ ಯಶಸ್ಸು ಸಾಧಿಸಿದ ಪ್ರಸಂಗಗಳನ್ನು ಬರೆದದ್ದು ಕೂಡಾ ನಮ್ಮ ಕಾಲದಲ್ಲಿಯೇ. ಡಾ ಶಿವರಾಮ ಕಾರಂತರು ಕುಣಿದಿದ್ದನ್ನು ನಾವು ಕಂಡಿದ್ದೇವೆ. ಗುಣಸುಂದರಿ-ಪಾಪಣ್ಣ, ಸಮುದ್ರ ಮಥನ. ರಂಭಾ ರೂಪರೇಖ, ಚಂದ್ರಾವಳಿ, ಬಪ್ಪ ನಾಡು, ಕೋಟಿ ಚೆನ್ನಯ, ಸಿರಿ, ದೇವು ಪೂಂಜ, ಪಟ್ಟದ ಪದ್ಮಲೆ, ಕಾಡಮಲ್ಲಿಗೆ, ಕಾಯಕಲ್ಪ, ಸಹಸ್ರಕವಚ ಮೋಕ್ಷ, ಅತಿ ಕಾಯ-ಇಂದ್ರಜಿತು, ಗದಾಯುದ್ಧ, ಅಭಿ ಮನ್ಯು, ತ್ರಿಪುರ ಮಥನ, ಕಾಂತಬಾರೆ- ಬೂದಾಬಾರೆ, ಕಡುಗಲಿ ಕುಮಾರ ರಾಮ, ಮಾನಿಷಾಧ, ನಳದಮಯಂತಿ, ದಕ್ಷಾಧ್ವರ, ಮಹಾಶೂರ ಭೌಮಾಸುರ, ಗೆಜ್ಜೆದ ಪೂಜೆ, ಮಹಾರಥಿ ಕರ್ಣ ಮೊದಲಾದ ನೂರಾರು ಪ್ರಸಂಗಗಳು ರಂಗದ ಮೇಲೆ ವಿಜೃಂಭಿಸಿದ್ದು ಕೂಡಾ ನಮ್ಮ ಕಾಲದಲ್ಲಿಯೇ. ಈ ಅರ್ಥದಲ್ಲಿ ನಾವು ಪುಣ್ಯವಂತರು. ಯಕ್ಷಗಾನದ ಸುವರ್ಣ ಯುಗಕ್ಕೆ ಸಾಕ್ಷಿಗಳಾದ ಭಾಗ್ಯ ನಮ್ಮದು. ಇಂಥ ಕಾಲಘಟ್ಟದ ಎರಡು ಅಪೂರ್ವ ಪ್ರತಿಭೆಗಳೆಂದರೆ ಕುಂಬಳೆ ಸುಂದರ ರಾವ್‌ ಮತ್ತು ಸೂರಿಕುಮೇರು ಗೋವಿಂದ ಭಟ್‌. ತಮ್ಮ ಅಸಾಧಾರಣ ಪ್ರತಿಭೆಯಿಂದಾಗಿ ಈ ಇಬ್ಬರೂ ಕಲಾವಿದರೂ ಲಕ್ಷಾಂತರ ಯಕ್ಷಗಾನ ರಸಿಕರ ಮನಸೂರೆಗೊಂಡ ದ್ದಲ್ಲದೆ, ಯಕ್ಷಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಇತಿಹಾಸ ಸೃಷ್ಟಿಸಿದವರು. ನಮ್ಮ ಭಾಗ್ಯವೋ ಎಂಬಂತೆ, ಈ ಇಬ್ಬರು ಕಲಾವಿದರೂ ತಮ್ಮ ಆತ್ಮಚರಿತ್ರೆಗಳನ್ನು ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ. ಕುಂಬಳೆಯವರ ಸುಂದರಕಾಂಡ (ಸಂ. ಅಮೃತ ಸೋಮೇಶ್ವರ)ವು ಅವರ ಅಭಿನಂದನ ಕೃತಿಯೇ ಹೌದಾದರೂ, ಅದರ ಆರಂಭದ ಯಕ್ಷಪಥ ಯಾತ್ರಿಕ ಭಾಗದಲ್ಲಿ ಯಕ್ಷಪಥಯಾತ್ರಿಕ ಎಂಬ ಶೀರ್ಷಿಕೆಯಲ್ಲಿ 236 ಪುಟಗಳಷ್ಟು ದೀರ್ಘ‌ವಾದ ಜೀವನ ಸ್ಮೃತಿ ಸಂಚಯವಿದ್ದು, ಅದರಲ್ಲಿ ಕುಂಬಳೆಯವರು ತಮ್ಮ ಕಲಾ ಜೀವನದ ಏಳು-ಬೀಳುಗಳ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಬರೆದುಕೊಂಡಿ ದ್ದಾರೆ. ಕುಂಬಳೆ ಪರಿಸರದಲ್ಲಿ ನೇಯ್ಗೆ ಕುಲ ವೃತ್ತಿ ಮಾಡಿಕೊಂಡಿದ್ದ ಬಡಕುಟುಂಬದಲ್ಲಿ ಜನಿಸಿದ ಮಲೆಯಾಳಂ ಮಾತೃಭಾಷೆಯ ಸುಂದರ ಎಂಬ ಹೆಸರಿನ ಹುಡುಗ, ಅತ್ತ ನೇಯ್ಗೆಯನ್ನೂ ಕಲಿಯದೆ, ಇತ್ತ ಶಾಲೆಗೂ ಹೋಗದೆ, ಯಕ್ಷಗಾನ ಕಲಾವಿದನಾಗಿ ಹಂತ ಹಂತವಾಗಿ ಮೇಲೇರುತ್ತಾ ಹೋಗಿ, ಕುಂಬಳೆ ಸುಂದರ ರಾವ್‌ ಆಗಿ ರೂಪುಗೊಂಡ ಬಗೆಯ ಅತ್ಯಂತ ರೋಚಕ ವಿವರಗಳು ಇಲ್ಲಿವೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಊರು ಬಿಡಬೇಕಾದ ಸಂದರ್ಭ ಬಂದದ್ದು, ಬಣ್ಣಹಚ್ಚಿ, ವೇಷ ಕಟ್ಟಿದರೂ, ರಂಗಸ್ಥಳ ಪ್ರವೇಶ ಮಾಡಲಾಗದೇ ವೇಷ ಬಿಚ್ಚಿ, ಬಣ್ಣ ಅಳಿಸದೇ ಮನೆ ಸೇರಿದ ಪ್ರಸಂಗ-ಇತ್ಯಾದಿ ಘಟನೆಗಳನ್ನು ಸುಂದರ ರಾಯರು ಒಂದು ಬಗೆಯ ಮುಗ್ಧತೆಯಲ್ಲಿ ವಿವರಿಸುವ ಸೊಗಸನ್ನು ಓದಿಯೇ ತಿಳಿದು ಕೊಳ್ಳಬೇಕು. ಇದೇ ರೀತಿ ಡಾ ಪ್ರಭಾಕರ ಶಿಶಿಲರು ಸೂರಿಕುಮೇರು ಗೋವಿಂದ ಭಟ್ಟರ ಆತ್ಮ ವೃತ್ತಾಂತವನ್ನು ಯಕ್ಷೊàಪಾಸನೆ ಎಂಬ ಹೆಸರಿನಲ್ಲಿ ನಿರೂಪಿಸಿದ್ದಾರೆ. ಹೃದಯ ವಿದ್ರಾವಕವಾದ ಬಡತನದಲ್ಲಿ ಬಾಲ್ಯವನ್ನು ಕಳೆದ ಗೋವಿಂದಣ್ಣ, ಮುಂದೆ ಮನೆ ತೊರೆಯಬೇಕಾದ ಪರಿಸ್ಥಿತಿ ಇದಿರಾದದ್ದು, ಬ್ರಾಹ್ಮಣನಾಗಿ ಹುಟ್ಟಿದರೂ, ಬ್ರಾಹ್ಮಣೇತರರ ಮನೆಯಲ್ಲಿ ಉಣ್ಣಬೇಕಾಗಿ ಬಂದ ದಯನೀಯ ಪರಿಸ್ಥಿತಿ, ಮಳೆಗಾಲದ ತಿರುಗಾಟ ಮುಗಿಸಿ ಹಿಂದಿರುಗಿ ಮನೆಗೆ ಬಂದಾಗ, ಬೆಂಕಿ ಬಿದ್ದು ಸುಟ್ಟು ಬೂದಿ ಯಾದ ಮನೆ ನೋಡಬೇಕಾಗಿ ಬಂದ ದಾರುಣ ಘಟನೆಗಳನ್ನು ಈ ಪುಸ್ತಕದಲ್ಲಿ ಕಾಣ ಬಹುದು. ಸಾಹಿತ್ಯದ ವಿದ್ಯಾರ್ಥಿಯಾದ ನನ್ನನ್ನು ಗಾಢವಾಗಿ ತಟ್ಟಿದ ಕನ್ನಡ ಕೃತಿಗಳಲ್ಲಿ ಕಾರಂತರ ಬೆಟ್ಟದ ಜೀವವೂ ಒಂದು. ಕಾವ್ಯ ದಂಥ ಕಾದಂಬರಿಯದು. ಕುಂಬಳೆ- ಗೋವಿಂದ ಭಟ್ಟರ ಕೃತಿಗಳನ್ನು ಓದುವಾಗ ಅವು ಬೆಟ್ಟದ ಜೀವಕ್ಕೆ ಸಮನಾದ ಕೃತಿಗಳೆಂದು ನನಗೆ ಅನ್ನಿಸಿದ್ದುಂಟು. ಗೋಪಾಲಯ್ಯ ಬೆಟ್ಟದ ಜೀವವಾದರೆ, ಕುಂಬಳೆ- ಗೋವಿಂದಣ್ಣನವರು ಬಯಲ ಜೀವಗಳು-ಬಯಲಾಟದ ಜೀವಗಳು. ಬಡತನದ ಬೇಗುದಿಯಲ್ಲಿ ಉರಿದು, ಅದರ ಬೂದಿಯಿಂದೆದ್ದು ಬಂದ ಈ ಇಬ್ಬರು ಮುಂದೆ ಸುಮಾರು 45 ವರ್ಷಗಳ ಕಾಲ ಯಕ್ಷಗಾನ ರಂಗಭೂಮಿಯ ಅದ್ವಿತೀಯ ಕಲಾವಿದರಾಗಿ ರಾರಾಜಿಸಿದ್ದನ್ನು ನಾವೆಲ್ಲ ಕಣ್ಣಾರೆ ಕಂಡಿದ್ದೇವೆ. ನಿರಂತರ ಅವಮಾನ ಕ್ಕೊಳಗಾದ "ಮಾಸ್ಟರ್‌ ಸುಂದರ' ಮುಂದೆ ಮಹಾರಥಿ ಕರ್ಣನಾಗಿ ಕೃಷ್ಣನೊಡನೆ "ದೇವಾ, ನೀನೋ ಪರ್ವತ, ನಾನು ಪ್ರಪಾತ, ನೀನು ಸಿಂಧು- ನಾನು ಅದರಿಂದ ಸಿಡಿದು ಬಿದ್ದ ಒಂದು ಬಿಂದು' ಎಂದು ಪ್ರಾಸ ಬದ್ಧ ವಾಗಿ ಭಾವುಕವಾಗಿ ಹೇಳುವಾಗ ಬದುಕು ಮತ್ತು ರಂಗಭೂಮಿ ಅನುಸಂಧಾನ ಗೊಂಡು, ನನ್ನಂಥ ಅನೇಕ ಪ್ರೇಕ್ಷಕರ ಕಣ್ಣು ತೇವಗೊಂಡದ್ದು ಸುಳ್ಳಲ್ಲ. ಕೂಡುÛ ಮೇಳ, ಸುರತ್ಕಲ್‌ ಮೇಳ, ಕುಂಡಾವು, ಧರ್ಮಸ್ಥಳ ಮೇಳಗಳಲ್ಲಿ ಕುಂಬಳೆಯವರು ವೇಷಧಾರಿ ಯಾಗಿ, ಊರೆಲ್ಲಾ ತಾಳಮದ್ದಳೆಯ ಅರ್ಥ ಧಾರಿಯಾಗಿ ಜನಮನ ಸೂರೆಗೊಂಡರು. ಈಗ ದಿಲ್ಲಿಯಲ್ಲಿ ಕುಳಿತಿರುವ ನನ್ನ ಕಣ್ಣ ಮುಂದೆ ಕುಂಬಳೆಯವರ ಚಂದ್ರಾವಳಿಯ ಕೃಷ್ಣ, ಸುಧನ್ವ ಮೋಕ್ಷದ ಸುಧನ್ವ, ಮಹಾಕಲಿ ಮಗಧೇಂದ್ರದ ಕೃಷ್ಣ, ಕೋಟಿ ಚೆನ್ನಯದ ಪೆರುಮಲೆ ಬಲ್ಲಾಳ, ಸಿರಿಮಹಾತೆ¾ಯ ಕಾಂತು ಪೂಂಜ, ಕಚದೇವಯಾನಿಯ ಕಚ, ಕಾಯಕಲ್ಪದ ಚ್ಯವನ, ಅಮರವಾಹಿನಿಯ ಭಗೀರಥ, ಪಾದುಕಾಪ್ರದಾನದ ಭರತ, ಭರತೇಶ ವೈಭವದ ಭರತ, ಮಹಾರಥಿ ಕರ್ಣದ ಕರ್ಣ, ತ್ರಿಪುರ ಮಥನದ ಚಾರ್ವಾಕ, ಗೋಗ್ರಹಣದ ಉತ್ತರ, ಚಕ್ರವರ್ತಿ ದಶರಥದ ದಶರಥ ಮೊದಲಾದ ಪಾತ್ರಗಳು ಜೀವಂತವಾಗಿ ಕಾಣುತ್ತಿವೆ. ಅವರ ಮಾತುಗಳಿಗೆ ಕ್ರಿಯೆಯಾಗುವ ಅಪೂರ್ವ ಗುಣವಿರುವುದರಿಂದಾಗಿ "ಕುಂಬಳೆಯವರಿಗೆ ಕುಣಿಯಲು ಬರುವುದಿಲ್ಲ' ಎಂಬ ಮಾತಿಗೆ ಅರ್ಥವೇ ಉಳಿಯುವುದಿಲ್ಲ. ಸೂರಿಕುಮೇರು ಗೋವಿಂದ ಭಟ್ಟರು ನಾವೆಲ್ಲಾ ಸರಿಯಾಗಿಯೇ ಹೇಳಿಕೊಂಡು ಬರುತ್ತಿರುವಂತೆ ಪರಿಪೂರ್ಣ ಕಲಾವಿದ. ಬಾಲಗೋಪಾಲರಿಂದ ತೊಡಗಿ ಪುಂಡು ವೇಷ, ಸ್ತ್ರೀ ವೇಷ, ಕಿರೀಟ ವೇಷ, ಹಾಸ್ಯ, ಬಣ್ಣ-ಹೀಗೆ ಯಾವ ವೇಷವಾದರೂ ಸರಿ, ಗೋವಿಂದ ಭಟ್ಟರಿಗೆ ಅದೊಂದು ಸವಾಲೂ ಅಲ್ಲ, ಸಮಸ್ಯೆಯೂ ಅಲ್ಲ. ಮಾತು, ಕುಣಿತ, ವೇಷಗಳಲ್ಲಿ ಅಪೂರ್ವ ಸಾಮರಸ್ಯ ಸಾಧಿಸುವ ಅವರು, ಕಿರೀಟ ವೇಷದಲ್ಲಿ ಇನ್ನಿಲ್ಲದ ಪಕ್ವತೆ ಯನ್ನು ತೋರಿಸಿದ್ದಾರೆ. ನನ್ನ ಮನಸ್ಸಿನಲ್ಲಿ ಈಗಲೂ ಗಾಢವಾಗಿ ಉಳಿದಿರುವ ಅವರ ಪಾತ್ರಗಳೆಂದರೆ- ಕುಶಲವದ ರಾಮ, ಭಾರ್ಗವ ವಿಜಯದ ಕಾರ್ತವೀರ್ಯ, ಗದಾಯುದ್ಧದ ಕೌರವ, ರಾಜಸೂಯಾ ಧ್ವರದ ಶಿಶುಪಾಲ, ಮಾರಣಾಧ್ವರದ ಇಂದ್ರಜಿತು, ದಕ್ಷಾಧ್ವರದ ದಕ್ಷ, ಮಹಾಕಲಿ ಮಗಧೇಂದ್ರದ ಮಾಗಧ, ನಳ ದಮಯಂತಿಯ ಋತುಪರ್ಣ, ಸಹಸ್ರಕವಚದ ದಂಬೋದ್ಭವ, ಅಮರ ವಾಹಿನಿಯ ಅಸಮಂಜಸ, ಭರತಾ ಗಮನದ ರಾಮ, ಮಹಾಶೂರ ಭೌಮಾ ಸುರದ ಭೌಮಾಸುರ, ನರಕಾಸುರದ ನರಕ, ಭರತೇಶ ವೈಭವದ ಬಾಹುಬಲಿ ಮತ್ತು ತ್ರಿಪುರ ಮಥನದ ತಾಮ್ರಾಕ್ಷ. ಗೋವಿಂದಣ್ಣನ ಜೊತೆ ಜಪಾನ್‌ ಪ್ರವಾಸ ಮಾಡುವ ಅವಕಾಶ ದೊರೆತದ್ದು ನನ್ನ ಮರೆಯಲಾಗದ ನೆನಪು ಗಳಲ್ಲಿ ಒಂದು. ದುರಂತದ ಛಾಯೆ ಇರುವ ಪಾತ್ರಗಳನ್ನು ಗೋವಿಂದ ಭಟ್ಟರ ಹಾಗೆ ನಿರ್ವಹಿಸುವ ಕಲಾವಿದ ಯಕ್ಷಲೋಕದಲ್ಲಿ ಬೇರೊಬ್ಬರಿಲ್ಲ. ಹೀಗಾಗಿಯೇ ಅವರು ನಿರ್ವಹಿಸಿದ ಗದಾಯುದ್ಧದ ಕೌರವ, ಮಹಾಶೂರ ಭೌಮಾಸುರದ ಭೌಮಾಸುರ ಮೊದಲಾದ ಪಾತ್ರಗಳು ನನ್ನೊಳಗೆ ಗಾಢವಾಗಿ ಹೆಪ್ಪುಗೊಂಡು ಕುಳಿತುಬಿಟ್ಟಿವೆ

ಸೋಮವಾರ, ನವೆಂಬರ್ 8, 2010

ಕನ್ನಡ ಜಾನಪದ ಬ್ಲಾಗ್ ಬಗೆಗೆ ಹಿರಿಯರು ಹೀಗನ್ನುತ್ತಾರೆ...

ವಯಕ್ತಿಕ ನೆಲೆಯ ಬ್ಲಾಗ್ ಎನ್ನುವ ತಾಣವನ್ನು ಸಾಮಾಜಿಕ ನೆಲೆಗೆ ವಿಸ್ತರಿಸಲು ಸಾಧ್ಯವೇ ? ಎನ್ನುವ ಸಣ್ಣ ಪ್ರಯತ್ನದ ಭಾಗವಾಗಿ ಕನ್ನಡ ಜಾನಪದ ಬ್ಲಾಗ್ ಆರಂಭಿಸಿದೆ. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಜಾನಪದ ವಿದ್ವಾಂಸರು ಈ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕನ್ನಡದ ಜಾನಪದ ಆಲೋಚನೆಯನ್ನು ಭಿನ್ನವಾಗಿ ವಿಸ್ತರಿಸಿದ ಪುರುಷೋತ್ತಮ ಬಿಳಿಮಲೆಯವರು ಬ್ಲಾಗ್ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು. ಕನ್ನಡದಲ್ಲಿ ಜಾನಪದ ವಿವಿಯ ಬಗ್ಗೆ ತೋರಬಹುದಾದ ಉತ್ಸಾಹ ವ್ಯಕ್ತವಾಗುತ್ತಿಲ್ಲ ಎಂದು ವಿಷಾದಿಸಿದರೂ ಕೂಡ. ಪ್ರೊ.ಬಿ.ಎ ವಿವೇಕ ರೈ ಅವರು ತಮ್ಮ ಬ್ಲಾಗ್ ನಲ್ಲಿ ಕನ್ನಡ ಜಾನಪದ ಬ್ಲಾಗ್ ಬಗ್ಗೆ ಬರೆದುಕೊಂಡಿದ್ದಾರೆ. ಅದಕ್ಕೆ ಸಿ.ಎನ್. ಆರ್ ಅವರು ಪ್ರತಿಕ್ರಿಯಿಸಿದ್ದಾರೆ. ಅಂತೆಯೇ ಎಚ್.ಎಸ್.ರಾಘವೇಂದ್ರರಾವ್ ಬ್ಲಾಗ್ ಪ್ರಯತ್ನವನ್ನು ಮೆಚ್ಚಿದ್ದಾರೆ. ಜಾನಪದ ವಿವಿಯ ವಿಶೇಷಾಧಿಕಾರಿ ಪ್ರೊ.ಅಂಬಳಿಕೆ ಹಿರಿಯಣ್ಣ ಅವರೂ ಸಹ ಬ್ಲಾಗ್ ಪ್ರಯತ್ನವನ್ನು ಮೆಚ್ಚಿ, ಬ್ಲಾಗ್ ಗಾಗಿ ಸಂದರ್ಶನವನ್ನೂ ನೀಡಿದ್ದಾರೆ. ಈ ಎಲ್ಲಾ ಹಿರಿಯರ ಪ್ರೀತಿ ಆಧರಗಳಿಗೆ ಕೃತಜ್ಞತೆಗಳು. ಇನ್ನಷ್ಟು ಹೊಸ ಪ್ರಯತ್ನಗಳಿಗೆ ಕನ್ನಡ ಜಾನಪದ ಬ್ಲಾಗ್ ಪ್ರಯತ್ನಿಸುತ್ತದೆ, ಜಾನಪದದ ಹೊಸ ನಡಿಗೆಯನ್ನು ಗುರುತಿಸಲು ಯತ್ನಿಸುತ್ತದೆ ಎಂದಷ್ಟೇ ಈಗ ಹೇಳಬಯಸುತ್ತೇನೆ. ಪ್ರತಿಕ್ರಿಯೆಯ ಕೆಲವು ತುಣುಕುಗಳು ಇಲ್ಲಿವೆ. -ಅರುಣ್ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.. ಅರುಣ್,ನಿಮ್ಮ ಕನ್ನಡ ಜಾನಪದ ಬ್ಲಾಗ್ ಓದಲು ತೊಡಗಿದ್ದೇನೆ.ಒಳ್ಳೆಯ ಪ್ರಯತ್ನ.ಕನ್ನಡ ಜಾನಪದಕ್ಕೆ ಒಂದು ಬ್ಲಾಗ್ ಅಗತ್ಯ ಇತ್ತು.ಅಭಿನಂದನೆಗಳು.ತೊಗಲುಗೊಂಬೆ ಆಟದ ಕಲಾವಿದರ ಪರಿಚಯ ಚೆನ್ನಾಗಿದೆ.ಜೀ ಶಂ ಪ ಈ ಕ್ಷೇತ್ರದಲ್ಲಿ ಅದ್ಭುತ ಸಾಧನೆ ಮಾಡಿದವರು.ಪಿ ಅರ.ತಿಪ್ಪೇಸ್ವಾಮಿ ಮೈಸೂರು ಮ್ಯೂಸಿಯಂ ನಲ್ಲಿ ತೊಗಲು ಗೊಂಬೆಗಳ ಸಂಗ್ರಹದ ಪರಿಶ್ರಮ ಪಟ್ಟವರು.ಜಾನಪದ ವಿವಿ ಆಗಿರುವ ಈ ಹೊತ್ತಿನಲ್ಲಿ ಇವರ ನೆನಪೇ ನಮಗೆ ದೀಪಾವಳಿ ಪ್ರೊ. ಬಿ.ಎ. ವಿವೇಕ ರೈ ಪ್ರಿಯ ವಿವೇಕ ರೈ ಅವರಿಗೆ:ಕನ್ನಡ ಜಾನಪದ ಬ್ಲಾಗ್ ಬಗ್ಗೆ ನಿಮ್ಮ ಉತ್ಸಾಹಪೂರ್ಣ ಪ್ರತಿಕ್ರಿಯೆ ಓದಿ ಸಂತೋಷವಾಯಿತು; ಕನ್ನಡ ಜಾನಪದ ಲೋಕ ಎಷ್ಟು ವಿಶಾಲವಾಗಿದೆಯೆಂದರೆ ಅದರ ಬಗ್ಗೆ ಎಷ್ಟು ಬ್ಲಾಗ್‍ಗಳಿದ್ದರೂ ಸಾಲದು; ಇದು ಕನ್ನಡಿಗರೆಲ್ಲರಿಗೂ ಸಂತೋಷದ ಸಂಗತಿ.ನಾನೂ ಕನ್ನಡ ಜಾನಪದ ಮಹಾಕಾವ್ಯಗಳ ಬಗ್ಗೆ (ಹಾಗೂ ಸಂಬಂಧಿಸಿದ ಕನ್ನಡ ಸಾಹಿತ್ಯದ ಬಗ್ಗೆ) ಇಂಗ್ಲೀಷಿನಲ್ಲಿ ಕಳೆದೆರಡು ವರ್ಷಗಳಿಂದ ಒಂದು ಬ್ಲಾಗ್ ಬರೆಯುತ್ತಿದ್ದೇನೆ:drcnr.blogspot.com. ಸಮಯವಾದಾಗ ಅದನ್ನೂ ಓದಿದರೆ (ಹಾಗೂ ನಿಮ್ಮ ಮಿತ್ರರ ಗಮನಕ್ಕೆ ತಂದರೆ) ಸಂತೋಷವಾಗುತ್ತದೆ. ಅದರಲ್ಲಿರುವ ಲೇಖನಗಳ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಯಲು ಕುತೂಹಲವಿದೆ. -ಸಿ.ಎನ್ .ರಾಮಚಂದ್ರನ್ ಪ್ರಿಯ ಅರುಣಕುಮಾರ್ ಅವರಿಗೆ, ನಮಸ್ಕಾರ. ಹೇಗಿದ್ದೀರಿ? ನಿಮ್ಮ ಬ್ಲಾಗ್ ಬರೆಹಗಳನ್ನು ನೋಡುತ್ತಿದ್ದೇನೆ. ಬಹಳ ಉಪಯುಕ್ತವಾಗಿವೆ. -ಎಚ್.ಎಸ್.ಆರ್. Bilimale ಹೇಳಿದರು... ಡಾ. ಅಂಬಳಿಕೆಯವರ ಸಂದರ್ಶನಕ್ಕಾಗಿ ಅಭಿನಂದನೆಗಳು. ಅವರ ನೇತ್ರತ್ವದಲ್ಲಿ ಜಾನಪದ ವಿ ವಿ ಯು ಅರ್ಥಪೂರ್ಣವಾಗಿ ಬೆಳೆದೀತು ಎಂದು ನಾನು ಭಾವಿಸಿದ್ದೇನೆ. ಕನ್ನಡ ಜಾನಪದ ತಜ್ಞರು ಮತ್ತು ಕಲಾವಿದರು ಜಾನಪದ ವಿವಿ ಯ ಜೊತೆ ಭಾವನಾತ್ಮಕವಾಗಿ ತಮ್ಮನ್ನು ತೊಡಗಿಸಿಕೊಂಡರು ಎಂದು ನಾನು ಭಾವಿಸುತ್ತೇನೆ. ಗೆಳೆಯ ಅಂಬಳಿಕೆಯವರಿಗೆ ಅಭಿನಂದನೆಗಳು ಹಾಗೂ ಶುಭ ಹಾರೈಕೆಗಳು . Hi Arun, I've read your blog and it looks good. I appreciate your views on transformation of folk arts and political undercurrents found in them. I agree not much work has been done in this regard. Hopefully, you will make an effort in near future and formulate a model.Regards, -Ambalike Hiriyanna

ಮಂಗಳವಾರ, ನವೆಂಬರ್ 2, 2010

ತೊಗಲು ಗೊಂಬೆಯಾಟದ ಅಪರೂಪದ ಕಲಾವಿದ ಬಡೆಲಡುಕಿನ ಕೆ.ತಿಪ್ಪೇಸ್ವಾಮಿ

- ಸಿದ್ಧರಾಮ ಹಿರೇಮಠ, ಕೂಡ್ಲಿಗಿ

ಪರಂಪರಾಗತ ಜನಪದ ಕಲೆಗಳಲ್ಲಿ ತೊಗಲು ಗೊಂಬೆಯಾಟವೂ ಒಂದು. ಶೀಘ್ರವಾಗಿ ನಶಿಸುತ್ತಿರುವ ಜನಪದ ಕಲೆಗಳಲ್ಲಿಯೂ ಈ ಕಲೆ ಮುಂಚೂಣಿಯಲ್ಲಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಕಲೆಗಳ ತವರೂರು . ಅದಕ್ಕೆ ಅನ್ವರ್ಥವಾಗಿ ತಾಲೂಕಿನಲ್ಲಿ ಅನೇಕ ಕಲಾವಿದರೂ ಸಿಗುತ್ತಾರೆ. ಅವರಲ್ಲಿ ಬಡೇಲಡುಕಿನ ತೊಗಲು ಗೊಂಬೆಯಾಟದ ಕೆ.ತಿಪ್ಪೇಸ್ವಾಮಿ ಒಬ್ಬರು. ಬಳ್ಳಾರಿ ಜಿಲ್ಲೆಯಲ್ಲಿ ತೊಗಲು ಗೊಂಬೆಯಾಟದ ಕಲೆಗೆ ಒಂದು ಪರಂಪರೆಯೇ ಇದೆ. ಹಗರಿಬೊಮ್ಮನಹಲ್ಲಿಯ ಸಮೀಪದ ಯಡ್ರಾಮನಹಲ್ಲಿ ಬರಮಪ್ಪನು ತೊಗಲು ಗೊಂಬೆ ಕಲೆಯನ್ನು ಜರ್ಮನಿಯವರೆಗೂ ಹಬ್ಬಿಸಿದ್ದಾರೆ. ಆ ನಿಟ್ಟಿನಲ್ಲಿ ಬೆಳಗಲ್ಲು ವೀರಣ್ಣನವರು ಹೆಜ್ಜೆಯನ್ನಿಡುತ್ತಿದ್ದಾರೆ. ಹಾಗೆ ನೋಡಿದರೆ ಕೂಡ್ಲಿಗಿ ತಾಲೂಕಿನ ಬಡೇಲಡುಕಿನ ತಿಪ್ಪೇಸ್ವಾಮಿ ತೊಗಲು ಗೊಂಬೆಯಾಟದಲ್ಲಿ ಹೆಚ್ಚು ಬೆಳಕಿಗೆ ಬರಲಿಲ್ಲ. ಆದರೆ ನಿಜವಾಗಿಯೂ ಬಡೇಲಡುಕಿನ ತಿಪ್ಪೇಸ್ವಾಮಿ ಗೊಂಬೆಯಾಟದಲ್ಲಿ ನಿಪುಣರು. ಅದನ್ನವರು ಕೇವಲ ಕಲೆಯನ್ನಾಗಿ ಮಾತ್ರ ಭಾವಿಸದೆ, ಬದುಕನ್ನಾಗಿ ಭಾವಿಸಿದ್ದಾರೆ. ಈಚೆಗೆ ಬಳ್ಳಾರಿಯಲ್ಲಿ ರಾಷ್ತ್ರೀಯ ತೊಗಲುಗೊಂಬೆ ಉತ್ಸವವನ್ನು ಆಚರಿಸಲಾಗುತ್ತಿದೆ. ಆದರೆ ಇದರಲ್ಲಿಯೂ ಬಡೆಲಡುಕಿನ ಕೆ.ತಿಪ್ಪೇಸ್ವಾಮಿಯವರಿಗೆ ಅವಕಾಶ ಸಿಕ್ಕಿಲ್ಲ. ಇದು ಹಿತ್ತಲ ಗಿಡ ಮದ್ದಲ್ಲ ಎಂಬುದನ್ನು ನೆನಪಿಸುವಂತಿದೆ. ವಿಶೇಷವೆಂದರೆ ಕೂಡ್ಲಿಗಿ ತಾಲೂಕಿನಲ್ಲಿ ತೊಗಲು ಗೊಂಬೆಯಾಡಿಸುವ ಕಲೆ, ವೃತ್ತಿಯ್ಲಲಿ ತೊಡಗಿರುವವರು ಇವರೊಬ್ಬರೇ. ಕಳೆದ 25 ವರ್ಷಗಳಿಂದ ನಿರಂತರವಾಗಿ ತೊಗಲು ಗೊಂಬೆಯಾಟ ಪ್ರದರ್ಶನ ನೀಡುತ್ತಿರುವ ತಿಪ್ಪೇಸ್ವಾಮಿಯವರಿಗೆ ಇದೇ ಜೀವನ. ತಮ್ಮ 18ನೇ ವಯಸ್ಸಿನಿಂದಲೇ ತಂದೆಯಿಂದ ಬಳುವಳಿಯಾಗಿ ಬಂದ ತೊಗಲು ಗೊಂಬೆಯಾಟ ಪ್ರದರ್ಶನವನ್ನು ಸ್ವತಂತ್ರವಾಗಿ ಪ್ರದರ್ಶಿಸಲು ಆರಂಭಿಸಿದ ತಿಪ್ಪೇಸ್ವಾಮಿ ಮೊಟ್ಟ ಮೊದಲ ಬಾರಿಗೆ ಕೊಪ್ಪಳ ಜಿಲ್ಲೆಯ ಕಿನ್ನಾಳದಲ್ಲಿ ತಮ್ಮ ಪ್ರದರ್ಶನ ತೋರಿಸಿದರು. ಅಲ್ಲಿಂದ ಇಲ್ಲಿಯವರೆಗೆ ಇವರು ಅಲೆದಾಡಿದ ಗ್ರಾಮ, ಪಟ್ಟಣಗಳನ್ನು ಲೆಕ್ಕವಿಡಲು ಸಾಧ್ಯವಿಲ್ಲ. ಗ್ರಾಮೀಣ ಮಟ್ಟದಿಂದ, ಖ್ಯಾತ ತೊಗಲು ಗೊಂಬೆಯಾಟದ ಕಲಾವಿದ ಬೆಳಗಲ್ ವೀರಣ್ಣನವರೊಂದಿಗೆ ದೆಹಲಿಯವರೆಗೆ ಹೋಗಿಬಂದ ಕಲಾವಿದ ತಿಪ್ಪೇಸ್ವಾಮಿ. ಗದಗ, ಹುಬ್ಬಳ್ಳಿ, ದಾವಣಗೆರೆ, ರಾಯಚೂರು, ಶಿವಮೊಗ್ಗ ಹೀಗೆ ಹತ್ತು ಹಲವು ಜಿಲ್ಲೆಗಳಲ್ಲಿ ಸಂಚರಿಸಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಹಿಂದೆಲ್ಲ ರಾತ್ರಿ 8ಕ್ಕೆ ಆಟ ಶುರುವಾದರೆ, ಬೆಳಗಿನ 5 ರವರೆಗೂ ಪ್ರದರ್ಶನ ನಡೆಯುತ್ತಿತ್ತು, ಈಗ ರಾತ್ರಿ 12ಕ್ಕೇ ಮುಗಿಯುತ್ತದೆಯಂತೆ. ಇವರು ಪ್ರದರ್ಶಿಸುವ ಆಟವೆಂದರೆ ರಾಮಾಯಣದ ಕಥಾ ಭಾಗಗಳು. ಬಿಳಿಯ ಪರದೆಯ ಹಿಂದೆ ವಿದುತ್ ದೀಪಗಳನ್ನು ಬೆಳಗಿಸಿ, ಪರದೆಗೆ ಅಂಟಿಕೊಂಡಂತೆ ಗೊಂಬೆಗಳನ್ನು ಆಡಿಸುತ್ತ ಆಟವನ್ನು ಪ್ರದರ್ಶಿಸುತ್ತಾರೆ. ಗೊಂಬೆಗಳ ಚಲನವಲನಕ್ಕೆ ಬಿದಿರನ್ನು ಕಟ್ಟಿರುತ್ತಾರೆ. ಆಯಾ ಪಾತ್ರಕ್ಕೆ ತಕ್ಕಂತೆ ಸಂಭಾಷಣೆ, ಹಾಡುಗಳನ್ನು ತಾವೇ ಹೇಳುತ್ತಾರೆ. ತಿಪ್ಪೇಸ್ವಾಮಿಯವರ ಇಡೀ ಕುಟುಂಬ ಈ ಆಟದ ಪ್ರದರ್ಶನದ್ಲಲಿ ಪಾಲ್ಗೊಂಡಿರುತ್ತದೆ. ಆಯಾ ಕಥೆಗಳಿಗೆ ತಕ್ಕಂತೆ ಗೊಂಬೆಗಳನ್ನು ಇವರೇ ಸಿದ್ಧಪಡಿಸಿಕೊಳ್ಳುತ್ತಾರೆ. ಆಡಿನ ಚರ್ಮವನ್ನು ಹದ ಮಾಡಿ, ಅದನ್ನು ತಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಂಡು, ಅದಕ್ಕೆ ತಾವೇ ಸಿದ್ಧಪಡಿಸಿದ ಬಣ್ಣದ ಮೂಲಕ ಚಿತ್ರವನ್ನು ರಚಿಸುತ್ತಾರೆ. ಇಷ್ಟೆಲ್ಲ ಸಿದ್ಧಪಡಿಸಲು ಕನಿಷ್ಠ 15 ದಿನಗಳಾದರೂ ಬೇಕು. ಇವರ ಬಳಿ ತಲೆತಲಾಂತರದಿಂದ ಪ್ರದರ್ಶಿಸುತ್ತ ಬಂದಿರುವ ಪುರಾತನವಾದ ತೊಗಲು ಗೊಂಬೆಗಳಿವೆ. 150 ವರ್ಷಗಳಷ್ಟು ಹಳೆಯದಾದ ಗೊಂಬೆಗಳಿಂದ ಆಧುನಿಕ ಗೊಂಬೆಗಳವರೆಗೆ ಸುಮಾರು 60-70 ತೊಗಲು ಗೊಂಬೆಗಳಿವೆ. ಆಟ ಪ್ರದರ್ಶನದ ಸಂದರ್ಭದಲ್ಲಿ ಗಂಡು ಪಾತ್ರವಿದ್ದರೆ ಬಯಲಾಟದ ಮಟ್ಟಿನಲ್ಲಿ ಹಾಡುಗಳನ್ನು ಹೇಳಲಾಗುತ್ತದೆ, ಹೆಣ್ಣಿನ ಪಾತ್ರವಿದ್ದಲ್ಲಿ ದಕ್ಷಿಣಾದಿ ಮಟ್ಟಿನ ಹಾಡುಗಳನ್ನು ಹೇಳಲಾಗುತ್ತದೆ. ಒಂದು ಆಟದ ಪ್ರದರ್ಶನದಲ್ಲಿ 25 ಹಾಡುಗಳನ್ನಾದರೂ ಹಾಡಬೇಕಾಗುತ್ತದೆ. ಪತ್ನಿ ಸುಭದ್ರಮ್ಮ, ಮಕ್ಕಳಾದ ಸರೋಜ, ಅಂಜಿನಮ್ಮ, ತಂಗಿ ಗೌರಮ್ಮ, ಮೈದುನ ಮಹಾಂತೇಶ್ ಹೀಗೆ ಇಡೀ ಕುಟುಂಬವೇ ಪ್ರದರ್ಶನದಲ್ಲಿ ತೊಡಗಿಸಿಕೊಳ್ಳುತ್ತದೆ. ಪ್ರದರ್ಶನಕ್ಕೆ ಬಿಳಿ ಪರದೆ, ಹಾರ್ಮೋನಿಯಂ, ಮೃದಂಗ, ತಾಳ, ಗೆಜ್ಜೆಗಳು ಅವಶ್ಯಕ. ಹಂಪಿ ಉತ್ಸವ, ಬೆಂಗಳೂರಿನಲ್ಲಿ ನಡೆದ ಜನಪದ ಜಾತ್ರೆಯಂತಹ ಕಾರ್ಯಕ್ರಮಗಳಲ್ಲಿ ತಿಪ್ಪೇಸ್ವಾಮಿ ಪ್ರದರ್ಶನ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಮೊದಲೆಲ್ಲ ತೊಗಲು ಗೊಂಬೆಯಾಟದಲ್ಲಿ ಆಸಕ್ತಿಯಿತ್ತು. ಆದರೆ ಇತ್ತೀಚೆಗೆ ಗ್ರಾಮಸ್ಥರೂ ಸಹ ಜನಪದ ಕಲೆಗಳಲ್ಲಿ ಆಸಕ್ತಿ ಕಳೆದುಕೊಂಡು ಸಿನಿಮಾ, ಟಿವಿ ಮಾಧ್ಯಮಗಳಿಗೆ ಮಾರುಹೋಗಿರುವುದರಿಂದ, ಈ ಕಲೆ ನಶಿಸುವಂತಾಗಿದೆ ಎಂದು ತಿಪ್ಪೇಸ್ವಾಮಿ ವಿಶಾದ ವ್ಯಕ್ತಪಡಿಸುತ್ತಾರೆ. ಆಟದ ಪ್ರದರ್ಶನದ್ಲಲಿಯೂ ಸಹ ಹಲವಾರು ಬದಲಾವಣೆಗಳಾಗಿದ್ದು, ಮೊದಲಿನ ರೀತಿಯಲ್ಲಿ ಹಾಡು, ಕತೆಗಳನ್ನು ಜನರು ಕೇಳುವುದಿಲ್ಲ. ಅವರ ಆಸಕ್ತಿಗೆ ತಕ್ಕಂತೆ ಹಾಡು, ಸಂಭಾಷಣೆಯನ್ನು ಬದಲಾಯಿಸಿಕೊಳ್ಳಲಾಗಿದೆ ಎಂದು ಅವರು ಹೇಳುತ್ತಾರೆ. ತೊಗಲು ಗೊಂಬೆಯಾಟದ ಪ್ರದರ್ಶನದಿಂದಲೇ ತಮ್ಮ ಉಪಜೀವನವಾಗಿರುವುದರಿಂದ ಸರ್ಕಾರ ಈ ಆಟ ಪ್ರದರ್ಶಿಸುವ ಕಲಾವಿದರಿಗೆ ಹೆಚ್ಚು ಅವಕಾಶಗಳನ್ನು ಒದಗಿಸಬೇಕು, ಕಲೆಗೆ ಪ್ರೋತ್ಸಾಹ ನೀಡುವ ರೀತಿಯಲ್ಲಿ ಆರ್ಥಿಕ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಇವರ ಬೇಡಿಕೆಯಾಗಿದೆ. ಹೊಸಬರಿಗೆ ಆಟವನ್ನು ಕಲಿಸುವ ರೀತಿಯಲ್ಲಿ ತರಬೇತಿ ಕೇಂದ್ರಗಳನ್ನೂ ಸರ್ಕಾರ ಆರಂಭಿಸಿದರೆ ಮಾತ್ರ ಕಲೆ ಉಳಿಯಬಹುದಾಗಿದೆ ಎಂಬುದು ಇವರ ವಾದ. ನಶಿಸುತ್ತಿರುವ ಅಪರೂಪದ ತೊಗಲು ಗೊಂಬೆಯಾಟ ಕಲೆಯನ್ನು ಉಳಿಸಬೇಕಾಗಿದೆ. ಇದಕ್ಕೆ ಜನಪ್ರತಿನಿಧಿಗಳು, ಸಾರ್ವಜನಿಕರ ಸಹಾಯ, ಸಹಕಾರವೂ ಅತ್ಯವಶ್ಯಕವಾಗಿದೆ. ಅಂದಾಗ ಮಾತ್ರ ವಿಶಿಷ್ಟವಾದ ಕಲೆಯನ್ನು ಬೆಳೆಸಬಹುದಾಗಿದೆ. ಇಲ್ಲದಿದ್ದಲ್ಲಿ ಆಧುನಿಕತೆಯ ಪ್ರವಾಹದಲ್ಲಿ ಅಪರೂಪದ ಕಲೆಯೊಂದು ಹೇಳಹೆಸರಿಲ್ಲದಂತೆ ಮರೆಯಾಗಬಹುದಾಗಿದೆ.

ಚಿತ್ರ ವಿವರ 01 ಚಿತ್ರ: ಅಪರೂಪದ ಕಲೆ ತೊಗಲು ಗೊಂಬೆಯಾಟದ ಕಲಾವಿದ ಬಡೆಲಡುಕು ಕೆ.ತಿಪ್ಪೇಸ್ವಾಮಿ. 02 ಚಿತ್ರ: ಅಪರೂಪದ ಕಲೆ ತೊಗಲು ಗೊಂಬೆಯಾಟದ ಕಲಾವಿದ ಬಡೆಲಡುಕು ಕೆ.ತಿಪ್ಪೇಸ್ವಾಮಿ ತನ್ನ ಕುಟುಂಬದ ಸದಸ್ಯರೊಂದಿಗೆ. 03 ಚಿತ್ರ: 150 ವರ್ಷಗಳಷ್ಟು ಹಳೆಯದಾದ ರಾವಣನ ತೊಗಲು ಗೊಂಬೆ. 04 ಚಿತ್ರ: ಪುರಾತನವಾದ ತೊಗಲು ಗೊಂಬೆ. 05 ಚಿತ್ರ: ಪುರಾತನವಾದ 7 ಹೆಡೆ ಸರ್ಪದ ತೊಗಲು ಗೊಂಬೆ.

ಭಾನುವಾರ, ಅಕ್ಟೋಬರ್ 31, 2010

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಮತ್ತು ಯಕ್ಷಗಾನ ಕಲಾವಿದರಿಗೆ ಅಭಿನಂದನೆಗಳು.

ರಾಜ್ಯೋತ್ಸವ ಪ್ರಶಸ್ತಿಗಳು ಪ್ರಕಟವಾಗಿವೆ. ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು, ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಈ ಎಲ್ಲಾ ಪ್ರಶಸ್ತಿ ಪುರಸ್ಕೃತರಿಗೆ ‘ಕನ್ನಡ ಜಾನಪದ’ ಬ್ಲಾಗ್ ಮೂಲಕ ಅಭಿನಂದನೆಗಳನ್ನು ತಿಳಿಸಲು ಸಂತೋಷವಾಗುತ್ತಿದೆ. ರಾಜ್ಯೋತ್ಸವ ಪ್ರಶಸ್ತಿಯ ಇತರೆ ವಿಭಾಗಗಳು ವಿವಾದಕ್ಕೆ ಗುರಿಯಾದಂತೆ ಜಾನಪದ ಕ್ಷೇತ್ರದ ಪ್ರಶಸ್ತಿಗಳು ವಿವಾದಕ್ಕೆ ಗುರಿಯಾದದ್ದು ಕಡಿಮೆ. ಕಾರಣ ಜಾನಪದ ಕ್ಷೇತ್ರದ ಕಲಾವಿದರು ಈ ಪ್ರಶಸ್ತಿಯನ್ನೂ ಮೀರಿಸುವ ಕಲಾ ಪ್ರತಿಭೆಯನ್ನು ಸಹಜವಾಗಿ ಪಡೆದಿರುತ್ತಾರೆ. ಅದರಲ್ಲೂ ಎಲ್ಲಾ ಜಾನಪದ ಕಲಾವಿದರಿಗೂ ರಾಜ್ಯೋತ್ಸವ ಪ್ರಶಸ್ತಿ ಒಲಿಯುತ್ತದೆ ಎಂದೇನೂ ಅಲ್ಲ. ಕೆಲವೊಮ್ಮೆ ಜಾನಪದ ಕಲಾವಿದರ ಸೋಗು ಹೊತ್ತ ಕೆಲವು ನಕಲಿ ಕಲಾವಿದರಿಗೂ ಪ್ರಶಸ್ತಿ ಲಭಿಸುವ ಪವಾಡಗಳೂ ಜರುಗುತ್ತವೆ. ಇದರಲ್ಲಿ ಇನ್ನೂ ಕೆಲವು ಅಂಶಗಳು ಪ್ರಭಾವ ಬೀರುವ ಸಾದ್ಯತೆ ಇದೆ. ಜಾನಪದ ವಿದ್ವಾಂಸರು ಗುರುತಿಸಿದ ಕಲಾವಿದರಿಗೆ ಪ್ರಶಸ್ತಿಗಳು ಲಭಿಸುವ ಸಾದ್ಯತೆ ಹೆಚ್ಚಾಗಿರುತ್ತದೆ. ಕೆಲವೊಮ್ಮೆ ಆಯಾ ಕಲಾವಿದರ ಜಾತಿಯೂ ಪ್ರಭಾವ ಬೀರುತ್ತದೆ.
ಹಾಗೆ ನೋಡಿದರೆ, ಯಕ್ಷಗಾನವೂ ಜಾನಪದ ಕಲೆಯೇ ಆಗಿದ್ದರೂ ಅದನ್ನು ಪ್ರತ್ಯೇಕವಾಗಿ ಗುರುತಿಸುವಲ್ಲಿ ಮೇಲ್ವರ್ಗದ ರಾಜಕಾರಣ ಇದ್ದೇ ಇದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯಲ್ಲಿಯೂ ಈ ರಾಜಕಾರಣ ಎದ್ದು ಕಾಣುತ್ತಿದೆ. ಕರ್ನಾಟಕದ ಜಾನಪದ ಕ್ಷೇತ್ರಕ್ಕೆ ಹತ್ತು ಪ್ರಶಸ್ತಿಗಳು ಲಬಿಸಿದರೆ, ಇದೇ ಜಾನಪದದ ಭಾಗವಾದ ಯಕ್ಷಗಾನಕ್ಕೆ ಐದು ಪ್ರಶಸ್ತಿಗಳು ಲಬಿಸಿವೆ. ಇದನ್ನು ನೋಡಿದರೆ ಜಾನಪದ ಕ್ಷೇತ್ರಕ್ಕಿಂತ ಯಕ್ಷಗಾನವೇ ಮೇಲುಗೈ ಸಾಧಿಸಿದಂತೆ ಕಾಣುತ್ತದೆ. ಈ ರಾಜಕಾರಣ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯನ್ನು ಬೇರೆ ಬೇರೆಯಾಗಿ ಒಡೆಯುವುದರಲ್ಲಿಯೂ, ಪ್ರತ್ಯೇಕ ಯಕ್ಷಗಾನ ಅಕಾಡೆಮಿ ರಚನೆಯಾದದ್ದರ ಹಿಂದೆಯೂ ಇದೆ. ಇದನ್ನು ನೋಡಿದರೆ ಮೇಲ್ವರ್ಗದವರ ಜನಪದ ಕಲೆಗಳಿಗೆ ಸಿಕ್ಕ ಪ್ರಾಶಸ್ತ್ಯ ಕೆಳವರ್ಗದ ಮತ್ತು ಅಲ್ಪಸಂಖ್ಯಾತರ ಜನಪದ ಕಲೆಗಳಿಗೆ ಸಿಗುತ್ತಿಲ್ಲ ಎನ್ನುವುದು ವಿಷಾದನೀಯ.
ಕನ್ನಡ ಜಾನಪದ ಬ್ಲಾಗ್ ಆರಂಭವಾದ ಮೊದಲಿಗೆ ಮಂಜಮ್ಮ ಜೋಗತಿಯ ಬಗ್ಗೆ ಬರೆಯಲಾಗಿತ್ತು. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಅವರು ಬಳ್ಳಾರಿ ಜಿಲ್ಲೆಯನ್ನು ಪ್ರತಿನಿದಿಸಿದ್ದಾರೆ. ಇದು ಮಂಜಮ್ಮನ ಪ್ರತಿಭೆಗೆ ಸಂದ ಗೌರವ. ಈ ಬಾರಿ ಜಾನಪದ ಮತ್ತು ಯಕ್ಷಗಾನ ಕ್ಷೇತ್ರಕ್ಕೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರ ಪಟ್ಟಿ ಈ ಕೆಳಗಿನಂತಿದೆ.
ಜಾನಪದ
ಡಾ.ಶ್ರೀರಾಮ ಇಟ್ಟಣ್ಣವರ ಬಾಗಲಕೊಟೆ ಪ್ರೊ.ಬಿ.ಆರ್.ಪೊಲೀಸ್ ಪಾಟೀಲ್ ವಿಜಾಪುರ ಯುಗಧರ್ಮ ರಾಮಣ್ಣ ದಾವಣಗೆರೆ ಡಾ. ಜಿ.ವಿ. ದಾಸೇಗೌಡ ಮಂಡ್ಯ ಜಿ.ಪಿ.ಜಗದೀಶ ಚಿಕ್ಕಮಗಳೂರು ಮಲೆಯೂರು ಗುರುಸ್ವಾಮಿ ಚಾಮರಾಜನಗರ ಮಂಜವ್ವ ಜೋಗತಿ ಬಳ್ಳಾರಿ ಬೋವಿ ಜಯಮ್ಮ ಚಿತ್ರದುರ್ಗ ಸಂಬಣ್ಣಪುರವಂತರ ಗುಲ್ಬರ್ಗ ಮಾಲಾಬಾಯಿ ಸಂತ್ರಾಮ ಸಾಂಬ್ರೆಕರ್ ಬೆಳಗಾವಿ
ಯಕ್ಷಗಾನ
ನೆಬ್ಬೂರು ನಾರಾಯಣ ಹೆಗಡೆ ಉ. ಕ.ಜಿಲ್ಲೆ ಭಾಸ್ಕರ ಕೊಗ್ಗ ಕಾಮತ ದ.ಕ.ಜಿಲ್ಲೆ ಕೆ.ವಿ.ರಮೇಶ್(ಯಕ್ಷಗಾನ ಬೊಂಬೆಯಾಟ) ಕಾಸರಗೋಡು ಬಲಿಪ ನಾರಾಯಣ ಭಾಗವತ ಕಾಸರಗೋಡು ಕೆ.ಗೋಪಾಲಕೃಷ್ಣ ಭಟ್ ಬಂಟ್ವಾಳ ಗೋಪಾಲಕೃಷ್ಣ ಕಾಸರಗೋಡು ಮತ್ತೊಮ್ಮೆ ಈ ಎಲ್ಲಾ ಕಲಾವಿದರಿಗೂ ವಿದ್ವಾಂಸರಿಗೂ ಅಭಿನಂದನೆಗಳು. ಈ ಪ್ರಶಸ್ತಿ ಕಲಾವಿದರಲ್ಲಿ ಹೊಸ ಚೈತನ್ಯವನ್ನು ಮೂಡಿಸಲಿ ಎಂದು ಆಶಿಸೋಣ.

ಮಂಗಳವಾರ, ಅಕ್ಟೋಬರ್ 26, 2010

ಪ್ರೊ. ಅಂಬಳಿಕೆ ಹಿರಿಯಣ್ಣ ಅವರೊಂದಿಗೆ ಮಾತುಕತೆ

(ಈಚೆಗೆ ಜಾನಪದ ವಿಶ್ವವಿದ್ಯಾಲಯದ ವಿಶೇಷ ಅಧಿಕಾರಿಯನ್ನಾಗಿ ಮೈಸೂರು ವಿವಿಯ ಪ್ರೊ.ಅಂಬಳಿಕೆ ಹಿರಿಯಣ್ಣ ಅವರನ್ನು ನೇಮಿಸಲಾಗಿದೆ. ಪಶ್ಚಿಮದ ಜಾನಪದ ತಿಳುವಳಿಕೆಯನ್ನು ಕನ್ನಡಕ್ಕೆ ತಂದು ಇಲ್ಲಿನ ಆಲೋಚನೆಯ ನೆಲೆಗಳನ್ನು ವಿಸ್ತರಿಸಿದವರಲ್ಲಿ ಇವರು ಪ್ರಮುಖರು. ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವ ಕನಸನ್ನು ಕುರಿತು ಕನ್ನಡ ಜಾನಪದ ಬ್ಲಾಗಿಗಾಗಿ ಅವರು ಮಾತನಾಡಿದ ಮಾತುಕತೆ ಇಲ್ಲಿದೆ.) ಅರುಣ್- ಸಾರ್, ನಮಸ್ಕಾರ. ನೀವು ಜಾನಪದ ವಿವಿ ಗೆ ವಿಶೇಷ ಅಧಿಕಾರಿಯಾಗಿದ್ದೀರಿ. ಅದಕ್ಕಾಗಿ ಅಭಿನಂದನೆಗಳು. ಕರ್ನಾಟಕ ಜಾನಪದದಲ್ಲಿ ಅಪಾರ ಕೆಲಸ ನಡೆದಿದೆ, ನಡೆಯಬೇಕಾದುದು ಬಹಳಷ್ಟಿದೆ. ಇಲ್ಲಿ ಜಾನಪದದ ಗ್ರಹಿಕೆ ಮತ್ತು ಅಧ್ಯಯನ ವಿಧಾನಗಳಲ್ಲಿ ಹಲವು ತೊಡಕುಗಳಿವೆ, ಹಾಗಾಗಿ ಈ ತನಕದ ಕನ್ನಡ ಜಾನಪದ ಅಧ್ಯಯನಗಳನ್ನು ಜಾನಪದ ವಿವಿ ಹೇಗೆ ಮುಂದುವರೆಸಲು ನೀವು ಬಯಸುತ್ತೀರಿ ? ಅಂಬಳಿಕೆ ಹಿರಿಯಣ್ಣ- ಹೌದು ಕನ್ನಡದ ಜಾನಪದ ಅಧ್ಯಯನದಲ್ಲಿ ಹೆಚ್ಚು ಕೆಲಸ ನಡೆದಿದೆ, ಅಂತೆಯೇ ನಡೆಯಬೇಕಾದುದು ಇದೆ. ಆದರೆ ಹಿಂದಿನ ಜಾನಪದ ಅಧ್ಯಯನಗಳ ತುರ್ತು ಬೇರೆಯೇ ಆಗಿತ್ತು, ಆ ಅನಿವಾರ್ಯತೆಗೆ ತಕ್ಕ ಹಾಗೆ ಅಧ್ಯಯನ ವಿಧಾನಗಳೂ ರೂಪುಗೊಂಡಿದ್ದವು. ಆದರೆ ಇಂದಿನ ಜಾನಪದ ಅಧ್ಯಯನದ ತುರ್ತು ಬೇರೆಯೇ ಆಗಿದೆ ಹಾಗಾಗಿ ಇದನ್ನು ಗಮನದಲ್ಲಿಟ್ಟುಕೂಂಡು ಈ ಕಾಲಕ್ಕೆ ಹೊಂದಿಕೆಯಾಗುವಂತಹ ಅಧ್ಯಯನ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ಹಿಂದೆ ಕೇವಲ ಜನಪದರ ಮೌಖಿಕ ಮತ್ತು ಬೌತಿಕ ಸಂಪತ್ತನ್ನು ಸಂಗ್ರಹಿಸಬೇಕು ಎನ್ನುವ ಜಾನಪದದ ಸಂರಕ್ಷಣೆಯ ಭಾವ ಪ್ರಭಾವಿ ಅಂಶವಾಗಿತ್ತು. ಅಷ್ಟಕ್ಕೂ ಅವುಗಳಲ್ಲಿ ಬಹುಪಾಲು ಮೇಲ್ಪದರದ ಅಧ್ಯಯನಗಳು. ಈಗ ಜಾನಪದ ಸಂಪೂರ್ಣ ಸರ್ವೇಕ್ಷಣೆ ಮಾಡುವ ಅಗತ್ಯವಿದೆ. ಮೂಲ ಜನಪದ ಕಲಾವಿದರನ್ನು ಗುರುತಿಸಬೇಕಿದೆ. ಅರುಣ್- ಕರ್ನಾಟಕದಲ್ಲಿ ಜಾನಪದ ಸ್ನಾತಕೋತ್ತರ ಪದವಿ ಪಡೆದ ಮತ್ತು ಜಾನಪದದಲ್ಲಿ ಸಂಶೋಧನೆ ಮಾಡಿದ ನಿರುದ್ಯೋಗಿಗಳಿದ್ದಾರೆ, ಇನ್ನೊಂದೆಡೆ ಅಪಾರ ಜಾನಪದ ಜ್ಞಾನವನ್ನಿಟ್ಟುಕೊಂಡ ಕಡು ಬಡವ ಜಾನಪದ ಕಲಾವಿದರಿದ್ದಾರೆ, ಹಾಗೆಯೇ ಕನ್ನಡದಲ್ಲಿ ಶ್ರೀಮಂತ ಜನಪದ ಸಾಹಿತ್ಯವಿದೆ ಅಂತೆಯೇ ಬಹುಪಾಲು ತೀರಾ ಬಡಕಲು ವಿಶ್ಲೇಷಣೆಗಳಿವೆ. ಒಂದೆಡೆ ಆಧುನಿಕತೆಗೆ ಒಗ್ಗಿಕೊಳ್ಳುತ್ತಾ ಸಹಜವಾಗಿ ದೇಸಿ ತಿಳುವಳಿಕೆಗೆ ಮರೆವು ಬಂದಿದೆ, ಇನ್ನೊಂದೆಡೆ ಜನಪದರು ಆಧುನಿಕತೆಯನ್ನೇ ತಮ್ಮ ಜ್ಞಾನಲೋಕಕ್ಕೆ ಒಗ್ಗಿಸಿಕೊಂಡು ಹೊಸ ಜಾನಪದವನ್ನು ಸೃಷ್ಟಿಸುತ್ತಿದ್ದಾರೆ. ಈ ಬಗೆಯ ವೈರುಧ್ಯಗಳನ್ನು ವಿವಿ ಹೇಗೆ ಅರ್ಥೈಸುತ್ತದೆ ? ಅಂಬಳಿಕೆ ಹಿರಿಯಣ್ಣ – ಈ ಬಗೆಯ ವೈರುದ್ಧ್ಯಗಳಿರುವುದು ನಿಜ. ಜಾನಪದದಲ್ಲಿ ಸಂಶೋಧನೆ ಮಾಡಿದವರು ಅವರವರ ಭಾಗದ ಜಾನಪದವನ್ನೋ, ಅಥವಾ ಯಾವುದಾದರೂ ಒಂದು ಜನಪದ ಸಂಗತಿಯನ್ನೋ ಕುರಿತು ಸಂಶೋಧನೆ ಮಾಡಿದ್ದಾರೆ. ಅವುಗಳಲ್ಲಿಯೂ ಸಹ ಮೇಲ್ಮಟ್ಟದ ಅಧ್ಯಯನಗಳೇ ಹೆಚ್ಚಾಗಿವೆ. ಜಾನಪದ ವಿವಿಯ ಮಿತಿಯಲ್ಲಿ ಇಂತವರಿಗೆ ಸಂಶೋಧನೆ ಮಾಡಲು ವಿಫುಲ ಅವಕಾಶಗಳನ್ನು ಒದಗಿಸುವ ಸಾಧ್ಯತೆ ಇದೆ. ಇನ್ನು ಜನಪದ ಕಲಾವಿದರಿಗೆ ನಮ್ಮಲ್ಲಿ ಗೌರವ ಕಡಿಮೆ. ಹಾಗಾಗಿ ಜನಪದ ಕಲಾವಿದರಿಗೆ ಗೌರವ ಸಿಗುವ ವಾತಾವರಣವನ್ನು ಜಾನಪದ ವಿವಿ ನಿರ್ಮಿಸಬೇಕಿದೆ. ಕಲಾವಿದರು ತಮ್ಮ ಕಲೆಯನ್ನೇ ನಂಬಿ ಬದುಕಬಹುದೆಂಬ ಆತ್ಮವಿಶ್ವಾಸವನ್ನು ವಿವಿ ಮೂಡಿಸಬೇಕಿದೆ. ಅರುಣ್ - ಸಾರ್ ಆಧುನಿಕವಾಗಿ ತಂತ್ರಜ್ಞಾನ ಬಹಳ ಮುಂದುವರೆದಿದೆ. ಇಂತಹ ಹೊತ್ತಲ್ಲಿ ಜಾಗತಿಕವಾಗಿ ಕನ್ನಡ ಜಾನಪದವನ್ನು ಲಭ್ಯವಾಗುವಂತೆ ಮಾಡಲು ವಿಪುಲ ಅವಕಾಶಗಳಿದೆ. ಹಾಗಾಗಿ ಇಪ್ಪತ್ತೊಂದನೇ ಶತಮಾನದ ಜಾನಪದದ ದಾಖಲೀಕರಣ ಹೇಗಿರಬೇಕು ? ಮತ್ತು ಅದನ್ನು ಜಾನಪದ ವಿವಿ ಹೇಗೆ ನಿರ್ವಹಿಸಬೇಕೆಂದು ಬಯಸುತ್ತೀರಿ ? ಅಂಬಳಿಕೆ ಹಿರಿಯಣ್ಣ - ಆಧುನಿಕವಾಗಿ ತಂತ್ರಜ್ಞಾನ ಬೆಳೆದಿದೆ. ಇದನ್ನು ಸಮರ್ಥವಾಗಿ ಇಂದಿನ ಜಾನಪದ ಅಧ್ಯಯನಗಳಲ್ಲಿ ಬಳಸಿಕೊಳ್ಳಬೇಕಿದೆ. ಮುಖ್ಯವಾಗಿ ಕನ್ನಡ ಜಾನಪದವನ್ನು ಇಂಗ್ಲೀಷಿಗೆ ಮತ್ತು ಭಾರತೀಯ ಇತರೆ ಭಾಷೆಗೆ ಅನುವಾದ ಮಾಡುವ ಅಗತ್ಯವಿದೆ. ಹಾಗಾಗಿ ಜಾನಪದ ವಿವಿಯಲ್ಲಿ ಭಾಷಾಂತರ ವಿಭಾಗವನ್ನು ತೆರೆಯುವ ಆಲೋಚನೆ ಇದೆ. ಅಂತೆಯೇ ಹೀಗೆ ಅನುವಾದವಾದ ಸಾಹಿತ್ಯವನ್ನು ಅಂತರ್ಜಾಲದಲ್ಲಿ ಲಬ್ಯವಾಗುವಂತೆ ಅಂತರ್ಜಾಲ ತಾಣವೊಂದನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ನಾವು ಕೇವಲ ಕನ್ನಡ ಕನ್ನಡ ಎನ್ನುತ್ತಾ ಕೂಪ ಮಂಡೂಕಗಳಾಗಿ ಕೂರುವ ಕಾಲ ಇದಲ್ಲ. ನಮ್ಮ ಜನಪದರ ತಿಳುವಳಿಕೆಯನ್ನು ಜಾಗತಿಕವಾಗಿ ವಿಸ್ತರಿಸಬೇಕಿದೆ. ಈಗ ಏಕಕಾಲದಲ್ಲಿ ಪಠ್ಯ,ವೀಡಿಯೋ, ಆಡಿಯೋ ಈ ಮೂರು ಮಾದ್ಯಮಗಳಲ್ಲಿ ಜಾನಪದ ಸಂಗ್ರಹ ಮಾಡಲು ಅವಕಾಶವಿದೆ. ಇದು ಹೊರಗಿನ ಅಧ್ಯಯನಕಾರರಿಗೆ ಹೆಚ್ಚು ಉಪಯುಕ್ತವಾಗಲಿದೆ. ಅರುಣ್- ಸಾರ್, 80ರ ದಶಕದಲ್ಲೇ ಸ್ಕ್ಯಂಡಿನೇವಿಯಾ, ಡೆನ್ಮಾರ್ಕ್ ಗಳಲ್ಲಿ ಬಹಳ ದೊಡ್ಡದಾಗಿ ಫೋಕ್ ಸ್ಕೂಲ್ ಮೂವ್ ಮೆಂಟ್ ಆರಂಭವಾಯಿತು. ಈ ಚಳವಳಿ ಮುಖ್ಯವಾಗಿ ಜಾನಪದ ಜ್ಞಾನವನ್ನು ಶಿಕ್ಷಣ ಮಾಧ್ಯಮವನ್ನಾಗಿ ಪರಿವರ್ತಿಸಿದವು. ಇದರಿಂದಾಗಿ ಅಲ್ಲಿ ಹೊಸ ತಲೆಮಾರುಗಳಲ್ಲಿ ಜಾನಪದ ಒಂದು ಜೀವನ ಕ್ರಮವಾಗಿ ಬದಲಾಗುತ್ತಿದೆ. ಇದು ಜಾಗತೀಕರಣಕ್ಕೆ ದೊಡ್ಡ ಪ್ರತಿರೋಧವಾಗಿ ಬೆಳೆದಿದೆ. ಹಾಗಾಗಿ ಕರ್ನಾಟಕದಲ್ಲಿ ಜಾನಪದವನ್ನು ಪ್ರಾಥಮಿಕ ಶಿಕ್ಷಣದಿಂದ ಪದವಿ ತರಗತಿಗಳಿಗೆ ಒಂದು ಪಠ್ಯವನ್ನಾಗಿ ಖಡ್ಡಾಯಗೊಳಿಸಿದರೆ, ಹೊಸ ತಲೆಮಾರುಗಳಲ್ಲಿ ಜಾನಪದ ಜ್ಞಾನ ಲೋಕ ಜೀವನ ಕ್ರಮವಾಗಿ ಬದಲಾಗಲು ಸಾಧ್ಯವಿದೆ, ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ? ಅಂಬಳಿಕೆ ಹಿರಿಯಣ್ಣ- ಜಾನಪದ ವಿವಿಯ ಮೊದಲ ಹಂತದ ಕೆಲಸದಲ್ಲಿ ಶೈಕ್ಷಣಿಕವಾಗಿ ಜಾನಪದವನ್ನು ಒಂದು ಕಡ್ದಾಯ ಪಠ್ಯವನ್ನಾಗಿಸುವುದು ಮುಖ್ಯವಾಗಿದೆ. ಹಾಗಾದಲ್ಲಿ ಆಯಾ ಭಾಗದ ಜನಪದ ಕಲೆಯನ್ನು ಪ್ರಾಯೋಗಿಕವಾಗಿಯೂ ಕಲಿಯುವ, ಆ ಮೂಲಕ ಹೊಸ ತಲೆಮಾರಿನಲ್ಲಿ ಜನಪದ ಕಲಾವಿದರನ್ನು ಹುಟ್ಟುಹಾಕುವ ಸಾಧ್ಯತೆ ಇದೆ. ಇದನ್ನು ವಿದ್ವಾಂಸರ ಸಮಿತಿ ರಚಿಸಿ ಈ ಬಗ್ಗೆ ಚರ್ಚಿಸಬೇಕಾಗಿದೆ. ಜಾನಪದವನ್ನು ಒಂದು ಪಠ್ಯವನ್ನಾಗಿ ಮಾಡಿದರೆ ಜಾನಪದವನ್ನು ಒಂದು ಶೈಕ್ಷಣಿಕ ಶಿಸ್ತಿನಲ್ಲಿ ಕಲಿಯುವವರ ಸಂಖ್ಯೆ ಹೆಚ್ಚುತ್ತದೆ, ಆಗ ಜನಪದ ವಿದ್ವಾಂಸ ಏಕಕಾಲದಲ್ಲಿ ಕಲಾವಿದನೂ ಆಗುತ್ತಾನೆ. ಕಲಿತವರು ಜಾನಪದ ಕಲೆಗಳನ್ನು ಪ್ರವೇಶಿಸುವುದರಿಂದ ಕಲೆ ಉಳಿಯುತ್ತದೆ. ಅಂತೆಯೇ ಜಾನಪದವನ್ನು ಕಲಿತವರ ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಬಹುದು. ಅರುಣ್- ಸಾರ್, ಇಂದು ಜಾಗತಿಕವಾಗಿ ಜಾನಪದ ಅಧ್ಯಯನಗಳು ಆನ್ವಯಿಕ ಚಿಂತನೆಯಲ್ಲಿ ಬಹಳ ಮುಂದುವರಿದಿವೆ. ಹಾಗೆ ನೋಡಿದರೆ ಕರ್ನಾಟಕ ಜಾನಪದ ಅಧ್ಯಯನಗಳು ಕನಿಷ್ಟ ಅರ್ಧ ಶತಮಾನದಷ್ಟು ಹಿಂದಿವೆ. ಹೀಗಿರುವಾಗ ಜಾಗತಿಕ ಜಾನಪದ ಅಧ್ಯಯನದ ತಿಳುವಳಿಕೆಯನ್ನು ಕನ್ನಡಕ್ಕೆ ಹೇಗೆ ಅನ್ವಯಿಸಿಕೂಳ್ಳುತ್ತೀರಿ? ಅಂತೆಯೇ ಕನ್ನಡದಲ್ಲಿ ದೇಸಿ ಚಿಂತನಾ ವಿಧಾನ ಇನ್ನು ಗಟ್ಟಿಯಾಗಿ ನೆಲೆಗೊಳ್ಳಬೇಕಿದೆ ಈ ಎರಡೂ ವೈರುದ್ಯಗಳನ್ನು ಹೇಗೆ ಜಾನಪದ ವಿವಿಯಲ್ಲಿ ಸಮನ್ವಯಗೊಳಿಸುತ್ತೀರಿ ? ಅಂಬಳಿಕೆ ಹಿರಿಯಣ್ಣ- ಹೌದು ಫಿನ್ಲ್ಯಾಂಡ್ ಮುಂತಾದ ದೇಶಗಳಲ್ಲಿ ಜಾನಪದವನ್ನು ಪ್ರವಾಸೋಧ್ಯಮದ ಅಭಿವೃದ್ಧಿಗೆ ಬಳಸಿಕೊಂಡು ಯಶಸ್ವಿಯಾಗಿದ್ದಾರೆ. ಅಂತಹ ಕೆಲಸಗಳು ಪ್ರಯೋಗಗಳು ಕನ್ನಡದಲ್ಲಿಯೂ ಆಗಬೇಕಿದೆ. ಆದರೆ ಅಲ್ಲಿ ಜನಪದ ಕಲಾವಿದರಿಗೆ ಹೆಚ್ಚಿನ ಗೌರವವಿದೆ. ನಮ್ಮಲ್ಲಿ ಜನಪದ ಕಲಾವಿದರಿಗೆ ಗೌರವ ಕಡಿಮೆ. ಆನ್ವಯಿಕ ಜಾನಪದ ಕೇವಲ ಚಿಂತನೆಯ ಮಟ್ಟದಲ್ಲಿದ್ದರೆ ಸಾಲದು, ಅದು ಪ್ರಾಯೋಗಿಕ ಹಂತವನ್ನು ತಲುಪಬೇಕಿದೆ. ಜಾನಪದ ವಿವಿ ಈ ಕೆಲಸಕ್ಕೆ ಹೆಚ್ಚು ಒತ್ತು ಕೊಡಬೇಕಾಗಿದೆ. ಅರುಣ್- ಕೊನೆಯದಾಗಿ ಒಂದು ಪ್ರಶ್ನೆ, ಸದ್ಯಕ್ಕೆ ಜಾನಪದ ವಿವಿ ಘೋಷಣೆಯಾದ ನಂತರದ ಬೆಳವಣಿಗೆಗಳೇನು ? ಅಂಬಳಿಕೆ ಹಿರಿಯಣ್ಣ- ಸದ್ಯಕ್ಕೆ ಪ್ರಾಥಮಿಕ ಕೆಲಸಗಳು ನಡೆಯುತ್ತಿವೆ. ಪಿಡಬ್ಲು.ಡಿ/ ಬಿ.ಬಿ.ಎಂ.ಪಿ ಯವರು ಬೆಂಗಳೂರಿನಲ್ಲಿ ಒಂದು ಕಛೇರಿಯನ್ನು ಶೋಧಿಸುತ್ತಿದ್ದಾರೆ. ಕೆಲವು ವಿವಿಯ ಮೊದಲ ಹಂತದ ಕೆಲಸಗಳು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದೇವೆ. ಅರುಣ್ –ಈ ಮಾತುಕತೆಗಾಗಿ ಧನ್ಯವಾದಗಳು ಸಾರ್

ಮಂಗಳವಾರ, ಅಕ್ಟೋಬರ್ 19, 2010

ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವ

ಡಾ.ಚಂದ್ರಪ್ಪ ಸೊಬಟಿ ಕರ್ನಾಟಕದ ಜನಸಮುದಾಯಗಳಲ್ಲಿ ಸಾಂಸ್ಕೃತಿಕ ನಾಯಕರ ಆರಾಧನೆಯ ಹಲವು ಪರಂಪರೆಗಳಿವೆ. ಅದರಲ್ಲಿ ಕೆಲವು ಹೆಚ್ಚು ಪರಿಚಿತವಾಗದೆ ಆಯಾ ಭಾಗಗಳಲ್ಲಿ ಮಾತ್ರ ಜೀವಂತವಾಗಿವೆ. ಹಾಗೆ ಅಷ್ಟೇನು ಪರಿಚಿತವಲ್ಲದ ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಆರಾಧನೆಗೊಳ್ಳುವ ಸಾಂಸ್ಕೃತಿಕ ನಾಯಕರಲ್ಲಿ ಅಮೋಘಸಿದ್ಧನೂ ಒಬ್ಬ. ಈತ ಆಯಾ ಭಾಗದ ಜನರ ಚೈತನ್ಯದಾಯಕ ಸಂಗತಿಯಾಗಿದ್ದಾನೆ. ಹಾಗಾಗಿಯೇ ಈತನನ್ನು ಬೇಟಿಯಾಗುವ ಸಿದ್ಧ ದೈವಗಳ ಪಲ್ಲಕ್ಕಿ ಉತ್ಸವದಲ್ಲಿ ನೂರಾರು ಪಲ್ಲಕ್ಕಿಗಳು ಒಂದೆಡೆ ಸೇರುತ್ತವೆ. ಇದು ಹಲವು ಸಮುದಾಯಗಳ ಜೀವಂತಿಕೆಯ ನಿಜ ದರ್ಶನವನ್ನು ಮಾಡಿಸುತ್ತದೆ. ಅಮೋಘಸಿದ್ಧ ಹಾಲುಮತದ ಸಾಂಸ್ಕೃತಿಕ ವೀರರಲ್ಲಿ ಒಬ್ಬ. ಶೈವಸಿದ್ಧ ಪಂಥಕ್ಕೆ ಸೇರಿದ ಸಾಂಸ್ಕೃತಿಕ ನಾಯಕ. ಸೋಮಲಿಂಗ ಈತನ ಗುರು. ಮೂಲಗಳ ಪ್ರಕಾರ ಈತ ಹನ್ನೆರಡು-ಹದಿಮೂರನೆ ಶತಮಾನಕ್ಕೆ ಸೇರಿದ ವ್ಯಕ್ತಿ. 'ಸಿದ್ಧಸೋಮನಾಥ' ಎನ್ನುವ ಅಂಕಿತದಲ್ಲಿ ವಚನಗಳನ್ನು ಬರೆದಿದ್ದಾನೆ ಎನ್ನುವ ವಾದಗಳಿವೆ . ಅಮಕಸಿದ್ಧ. ಅಮೋಗಿಸಿದ್ಧ, ಅಮೋಗಿದೇವ, ಅಮಗೋಂಡ ಮುಂತಾದ ಹಲವು ಹೆಸರುಗಳು ಜನರಲ್ಲಿ ಜೀವಂತವಾಗಿವೆ. ಈತನನ್ನು ಪಶುಪಾಲನ ಸಮುದಾಯಗಳು ಕುಲದೈವವಾಗಿ ಆರಾಧಿಸುತ್ತವೆ. ಈತನ ಕ್ಷೇತ್ರ ಮುಮ್ಮೆಟ್ಟಿಗಿರಿ. ಇದು ಬಿಜಾಪುರದಿಂದ ಹನ್ನೆರಡು ಕಿಲೋ ಮೀಟರ್ ಅಂತರದಲ್ಲಿದೆ. ಅಮೋಘಸಿದ್ಧನ ವಂಶ ದೊಡ್ಡದು. ಈತನ ವಂಶದ ಬಗ್ಗೆ ಅನೇಕ ಕಥನಗಳು ಸಿಗುತ್ತವೆ. ಈತನ ವಂಶ ನೂರ ಒಂದರಿಂದ ನವಕೋಟಿಯಾಗಿ ಬೆಳೆಯಿತು ಅನ್ನುವ ರೋಚಕ ನಿರೂಪಣೆಗಳು ಡೊಳ್ಳಿನ ಹಾಡುಗಳಲ್ಲಿವೆ. ಕರ್ನಾಟಕ, ಆಂದ್ರ, ಮಹರಾಷ್ಟ್ರಗಳಲ್ಲಿ ಈತನ ವಂಶಸ್ಥರ, ಶಿಷ್ಯರ ಮಠಗಳಿವೆ. ಇದರಲ್ಲಿ ಶಿಸುಮಕ್ಕಳು, ಒಕ್ಕಲುಮಕ್ಕಳು, ಸಾಕುಮಕ್ಕಳು, ಧರ್ಮದ ಮಕ್ಕಳು, ಪುಣ್ಯದಮಕ್ಕಳು ಸೇರುತ್ತಾರೆ. ಅಂತೆಯೇ ಸೇವಕ ವರ್ಗ, ಸೋತು ಶರಣಾದ ದೈವಗಳು ಸೇರಿಕೊಳ್ಳುತ್ತವೆ. ಕೋಳಿ ಕೂಗಿದಲೆಲ್ಲಾ ಆಮೋಘಸಿದ್ಧನ ಗುಡಿಗಳಿವೆ ಎನ್ನುವ ಗಾದೆ ಜನಪದರಲ್ಲಿದೆ. ಈ ಆಚರಣೆಯಲ್ಲಿ ಮುಖ್ಯವಾಗಿ ಕುರುಬರು, ನಾಯಕರು, ಲಂಬಾಣಿಗರು, ಹೊಲೆಮಾದಿಗರು, ಲಿಂಗಾಯಿತರು ಮುಂತಾದ ತಳ ಸಮುದಾಯಗಳು ಪಾಲ್ಗೊಳ್ಳುತ್ತವೆ. ಇಂದಿಗೂ ಕೆಲವು ಕಡೆ ಮಾದಿಗ ಸಮುದಾಯ ಪೂಜೆ ಮಾಡುತ್ತಿರುವುದು ವಿಶೇಷವಾಗಿದೆ. ಅಮೋಘಸಿದ್ಧ ಲೋಕಕ್ಕೆ ಬಂದ ಕಥನಗಳು ಕುತೂಹಲಕರ. ಹಾಲುಮತಸ್ಥರು ಶಿವನ ಆರಾಧನೆಯನ್ನು ಮರೆತಾಗ ಅವರಲ್ಲಿ ಮತ್ತೆ ಶೈವಾರಾಧನೆಯ ಬೀಜ ಬಿತ್ತುತ್ತಾನೆ ಎನ್ನುವ ನಂಬಿಕೆಗಳಿವೆ. ಇದರ ಪಠ್ಯವೊಂದು ಡೊಳ್ಳಿನ ಹಾಡಿನಲ್ಲಿ ಹೀಗಿದೆ: ಬಾರೋ ಬಾರೋ ನಂದಿವಾನ ಮೂರು ಲೋಕದ ವಳಗವನೆ ಮೂರು ಲೋಕದ ವಳಗೇನೋ ಕರಿತಲೆ ಮಾನವರೆಂಬುವರು ಕರಿತಲೆ ಮಾನವರೆಂಬುವರು ಹಾಲುಮತದವರಿದ್ದಾರೆ ಹಾಲುಮತದವರೆಂಬುವರು ನಮ್ಮ ನಾಮ ನೋಡಿರಿ ನನ್ನ ನಾಮ ನೋಡಪ್ಪ ಮರೆತ ನಡದಾರಂದಾನ ನೀನೆ ಹೋಗಲಿಬೇಕಪ್ಪ, ಉದ್ಧಾರ ಮಾಡಲಿ ಬೇಕಲ್ಲಿ ದೇವರು ಪರಮೇಶೂರನೂ ಹಿಂಗೊಂದು ಲಾಲಿಸಿ ನುಡದಾನೊ.. ಹೀಗೆ ಕಾವ್ಯದಲ್ಲಿ ಹಲವು ಪಾಠಾಂತರಗಳು ಸಿಗುತ್ತವೆ. ಛಟ್ಟಿ ಅಮವಾಸ್ಯೆಯ ದಿನ ( ಸಾಮಾನ್ಯವಾಗಿ ಜನವರಿ, ಪೆಬ್ರವರಿ) 'ಪಲ್ಲಕ್ಕಿ ಉತ್ಸವ'ಕ್ಕೆ ಅಮೋಘಸಿದ್ಧನ ಶಿಷ್ಯ ವೃಂದದ ಪಲ್ಲಕ್ಕಿಗಳು ಬರುತ್ತವೆ. ಪಲ್ಲಕ್ಕಿಗಳು ಒಂದು ಕಡೆ ಸೇರುವುದಕ್ಕೆ 'ಬೇಟಿಯಾಗುವ ಆಚರಣೆ' ಎಂದು ಹೆಸರು. ಹೀಗೆ ದೇವರುಗಳು ಬೇಟಿಯಾಗುವ ಆಚರಣೆಗಳು ಜನಪದರಲ್ಲಿ ಹೆಚ್ಚಾಗಿವೆ. ಮೊಹರಂ ನಲ್ಲಿ ಹಸೇನ್ ಹುಸೇನರು ಬೇಟಿಯಾಗುವ ಆಚರಣೆ ಮನಮಿಡಿಯುವಂತಿರುತ್ತದೆ. ಕಷ್ಟ ಬಂದಾಗ, ಪರಸ್ಪರ ದ್ವೇಶ ಅಸೂಯೆಗಳು ಹೆಚ್ಚಾದಾಗ ಅವುಗಳಲ್ಲಿ ಸಾಮರಸ್ಯ ತರಲು ಈ ಬಗೆಯ ಬೇಟಿಯ ಆಚರಣೆಗಳು ಹುಟ್ಟಿಕೊಂಡಿರಬೇಕು. ಈ ಆಚರಣೆಯಲ್ಲಿ 150ಕ್ಕೂ ಹೆಚ್ಚು ಪಲ್ಲಕ್ಕಿಗಳು ಸೇರುತ್ತವೆ. ಅರಕೇರಿಯ ಗುಡ್ಡದ ಕೆಳಗಿರುವ ಬಯಲು ಜಾಗ ಈ ಆಚರಣೆಗೆ ವೇದಿಕೆಯಾಗುತ್ತದೆ. ನೆರೆದ ಪಲ್ಲಕ್ಕಿಗಳು ಪರಸ್ಪರ ಅಪ್ಪಿಕೊಳ್ಳುತ್ತವೆ. ಈ ಸಂದರ್ಬದಲ್ಲಿ ದೇವರುಗಳೆಲ್ಲಾ ಜೀವತಳೆದಂತೆ ಭಾವಿಸಿ ಜನರು ಭಾವಾವೇಷಕ್ಕೆ ಒಳಗಾಗುತ್ತಾರೆ. ಇದರಲ್ಲಿ ಹೆಣ್ಣು ದೈವ, ಗಂಡು ದೈವ ಲಿಂಗದ ದೈವ, ಲಿಂಗೇತರ ದೈವ ಎನ್ನುವ ಬೇದಭಾವಗಳಿಲ್ಲದೆ ಸಮ್ಮಿಲನವಾಗುತ್ತವೆ. ಈ ಸಮ್ಮಿಲನ ಕದಡುತ್ತಿರುವ ಸಾಮಾಜಿಕ ಸಾಮರಸ್ಯವನ್ನು ಒಂದುಗೂಡಿಸುವ ರೂಪಕದಂತೆ ಕಾಣುತ್ತದೆ. ಅಂದರೆ ಪಲ್ಲಕ್ಕಿ ಹೊತ್ತವರು ಹಲಗೆ ಮತ್ತು ಡೊಳ್ಳಿನ ನಾದಕ್ಕೆ ಕುಣಿಯುತ್ತಾ, ಹಲವು ಪಲ್ಲಕ್ಕಿಗಳನ್ನು ಒಟ್ಟಿಗೆ ಸೇರಿಸುತ್ತಾರೆ. ಸುಮಾರು ಮೂರು ತಾಸುಗಳಿಗೂ ಹೆಚ್ಚು ಸಮಯ ನಡೆವ ಈ ಆಚರಣೆಯನ್ನು ನೋಡುವುದಕ್ಕೆ ಲಕ್ಷಾಂತರ ಜನ ಸೇರುತ್ತಾರೆ. ಜಾತ್ರೆಗೆ ಬಂದವರು ಆವರಣದ ಸುತ್ತ ಕೋಟೆಯಂತೆ ನಿಂತು ಉಘೇ ಉಘೇ ಎಂದು ಘೋಷಣೆ ಕೂಗುತ್ತಾರೆ. ಭಂಡಾರ, ಉತ್ತುತ್ತಿ, ಕುರಿಹುಣ್ಣಿ ಎಸೆಯುತ್ತಾರೆ. ಕ್ಷಣಾರ್ಧದಲ್ಲಿ ಆವರಣವೆಲ್ಲ ಭಂಡಾರಮಯವಾಗುತ್ತದೆ. ಸುಮಾರು ನಾಲ್ಕು ಟನ್ ಭಂಡಾರ ಖರ್ಚಾಗುತ್ತದೆ ಎಂದು ಭಂಡಾರ ವ್ಯಾಪಾರಿಗಳು ಹೇಳುತ್ತಾರೆ. ಸೇರಿದ ಜನರೆಲ್ಲಾ ಭಂಡಾರಮಯ. ಭಂಡಾರ ಆಕಾಶಕ್ಕೆ ಹಾರುತ್ತಿದ್ದರೆ, ಭಕ್ತರು ನಾವು ಹಾರಿಸಿದ ಭಂಡಾರ ಶಿವನ ಪಾದ ಸೇರುತ್ತದೆ ಎಂದು ಭಾವಿಸುತ್ತಾರೆ . ಈ ಆಚರಣೆ ಶೈವಾರಾಧನೆಯ ವಿಸ್ತರಣೆಯಂತೆ ಗೋಚರಿಸುತ್ತದೆ. ಈ ಇಡೀ ಆಚರಣೆ ಧಾರ್ಮಿಕ ಸಂಘರ್ಷ ಮತ್ತು ಸಮ್ಮಿಲನದ ಸಂಕೇತದಂತೆ ಕಾಣುತ್ತದೆ. ಈಗಲೂ ಹಲವು ಪಂಥ, ಜಾತಿ, ಪಂಗಡ, ಪ್ರದೇಶದ ಭಿನ್ನತೆಯನ್ನು ಮರೆತು ಈ ಆಚರಣೆಯಲ್ಲಿ ಜನರು ಭಾಗವಹಿಸುತ್ತಾರೆ. ಬಹುಶಃ ಜನರ ನಡುವೆ ಮತ್ತೆ ಮತ್ತೆ ಒಂದಾಗುವ, ಬೆರೆಯುವ, ಪರಂಪರೆಯನ್ನು ಈ ಆಚರಣೆ ಪ್ರತೀ ವರ್ಷವೂ ಜೀವಂತಗೊಳಿಸುತ್ತದೆ ಅನ್ನಿಸುತ್ತದೆ.

ಮಂಗಳವಾರ, ಅಕ್ಟೋಬರ್ 12, 2010

ಜಾನಪದ ಅಧ್ಯಯನಕಾರರಿಗೊಂದು ಉಪಯುಕ್ತ ಆಕರ ಗ್ರಂಥ

ಕರ್ನಾಟಕದಲ್ಲಿ ಜಾನಪದ ಅಧ್ಯಯನ ವಿಪುಲವಾಗಿ ನಡೆದಿದೆ. ಆದರೆ ಅದರೆಲ್ಲಾ ಮಾಹಿತಿ ಒಂದೇ ಕಡೆ ಸಿಗುವುದು ವಿರಳ. ಅಂತಹ ಕೊರತೆಯನ್ನು ಜಾನಪದ ಗ್ರಂಥ ಸೂಚಿಗಳು ತುಂಬುತ್ತವೆ. ವಿದ್ವತ್ ವಲಯದಲ್ಲಿ ಹೆಚ್ಚು ಮೌಲ್ಯಯುತವಲ್ಲದ ಈ ಗ್ರಂಥ ಸೂಚಿಗಳು ಮೂಲೆ ಸೇರಿದ ಮುರುಕಲು ಸೈಕಲ್ಲಿನಂತೆ ಗ್ರಂಥಾಲಯಗಳಲ್ಲಿ ಅನಾಥವಾಗಿರುತ್ತವೆ. ಆಯಾ ಕ್ಷೇತ್ರದಲ್ಲಿ ಗಂಭೀರವಾಗಿ ಅಧ್ಯಯನ ಮಾಡಹೊರಟವರಿಗೆ ಅಂತವುಗಳ ಮೌಲ್ಯ ತಿಳಿಯುತ್ತದೆ. ೧೯೭೪ ರಲ್ಲಿ ಹಾ.ಮ ನಾಯಕರು ಮೈಸೂರು ವಿವಿಯಿಂದ, ೨೦೦೦ ದಲ್ಲಿ ಟಿ.ಸಿ ಗುರುಪ್ರಸಾದ್ ಅವರು ಹಂಪಿ ವಿವಿಯಿಂದ ಪ್ರಕಟಿಸಿದ ಕನ್ನಡ ಜಾನಪದ ಗ್ರಂಥ ಸೂಚಿಗಳು ಈ ನೆಲೆಯಲ್ಲಿ ಉಪಯುಕ್ತವಾಗಿವೆ. ಇವುಗಳನ್ನು ಒಳಗೊಂಡಂತೆಯೂ ೨೦೦೪ ರಲ್ಲಿ ದಕ್ಷಿಣ ಭಾರತೀಯ ಭಾಷೆಗಳ ಜಾನಪದ ಸಂಘ (fossils) ತಿರುವನಂತಪುರ ಅವರು ಪ್ರಕಟಿಸಿರುವ ‘ಸಂಕ್ಷಿಪ್ತ ವಿವರಣಾತ್ಮಕ ಕನ್ನಡ ಜಾನಪದ ಗ್ರಂಥಸೂಚಿ’ ಜಾನಪದ ಅಧ್ಯಯನಕಾರರಿಗೆ ತುಂಬಾ ಉಪಯುಕ್ತವಾಗಿದೆ. ಈ ಪುಸ್ತಕವನ್ನು ಕರ್ನಾಟಕ ವಿವಿಯ ಪ್ರೊ.ಹೆಚ್.ಎಮ್.ಮಹೇಶ್ವರಯ್ಯ ಅವರು ಸಂಪಾದಿಸಿದ್ದಾರೆ. ಇದು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದ ೧೯೬೮ ಕೃತಿಗಳ ಪುಟ್ಟ ಪರಿಚಯವನ್ನು ಒಳಗೊಂಡಿದೆ. ತುಂಬಾ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ರೂಪಿಸಿರುವುದು ಇದರ ಹಿರಿಮೆ. ಇದರಲ್ಲಿ ಸಂಪಾದಕರ ಪರಿಶ್ರಮ ಎದ್ದು ಕಾಣುತ್ತದೆ. ಲೇಖಕರ ಹೆಸರುಗಳ ಅಕಾರಾಧಿಯಾಗಿ ಪುಸ್ತಕಗಳನ್ನು ಪರಿಚಯಿಸಲಾಗಿದೆ. ಅನುಬಂಧದಲ್ಲಿ ಪುಸ್ತಕಗಳ ಅಕಾರಾದಿಯೂ, ಮತ್ತು ವಿಷಯವಾರು ಸಂಖ್ಯಾ ವರ್ಗೀಕರಣವೂ ಇದೆ. ಈ ವರ್ಗೀಕರಣವೇ ಜಾನಪದದ ಯಾವ ಕ್ಷೇತ್ರದಲ್ಲಿ ಹೆಚ್ಚು ಕೆಲಸ ನಡೆದಿದೆ ಮತ್ತು ಯಾವ ಕ್ಷೇತ್ರ ಬರಡಾಗಿದೆ ಎಂಬುದನ್ನು ತೋರಿಸುತ್ತದೆ. ಈ ಕೃತಿ ಹೆಚ್ಚು ಜಾನಪದ ವಿದ್ವಾಂಸರಿಗೆ ಪರಿಚಯವಿದ್ದಂತಿಲ್ಲ. ಕಾರಣ ಗ್ರಂಥಸೂಚಿಯೆಂಬ ಅನಾದರವೂ ಇರಬಹುದು. ಹೊಸದಾಗಿ ಜಾನಪದದಲ್ಲಿ ಅಧ್ಯಯನ ಮಡುವವರಿಗಂತೂ ಇದು ಹೆಚ್ಚು ಉಪಕಾರಿಯಾಗಿದೆ . ಈ ಪುಸ್ತಕವನ್ನು ಸಿದ್ದಪಡಿಸಲು ಸಹಾಯಕ ಸಂಪಾದಕರಾಗಿ ಕೆಲಸ ಮಾಡಿದ ರಾಜೇಶ್ವರಿ ಆರ್.ಕಮ್ಮಾರ್, ಸುಜಾತ ಎಸ್.ಪಿ, ಶೋಭ ಹೂಲಿಕಟ್ಟಿ, ಗೌರೀಶ್ ವಿ.ಪಾಟ್ನೆ, ಶಿವಾಜಿ ಕಾಂಬಳೆ, ಲೀನಾ ಎಸ್. ನಾಯ್ಕ ಇವರ ಶ್ರಮ ನಿಜಕ್ಕೂ ಮೆಚ್ಚುವಂತದ್ದು. ಇಲ್ಲಿ ಹೆಚ್ಚಾಗಿ ಪುಸ್ತಕ ಪರಿಚಯಕ್ಕೆ ಮೂಲ ಕೃತಿಗಳನ್ನು ಅವಲಂಬಿಸಿರುವುದಾಗಿ ಸಂಪಾದಕರು ಹೇಳಿಕೊಂಡಿದ್ದಾರೆ. ಇದು ಮೆಚ್ಚುವಂತಹ ವಿಷಯ. ಹಾಗೆಯೇ ಪ್ರಕಟಿತ ಕೃತಿಗಳಷ್ಟೇ ಅಲ್ಲದೆ ಕರ್ನಾಟಕದ ಎಲ್ಲಾ ವಿಶ್ವವಿದ್ಯಾಲಯಗಳ ಅಪ್ರಕಟಿತ ಜಾನಪದ ಪಿಹೆಚ್.ಡಿ ಮತ್ತು ಎಂಫಿಲ್ ಸಂಶೋಧನ ಪ್ರಬಂಧಗಳನ್ನೂ ಒಳಗೊಂಡಿರುವುದು ಸೂಕ್ತವಾಗಿದೆ. ಮುಖ್ಯವಾಗಿ ಇಷ್ಟು ಜಾನಪದ ಕೃತಿಗಳನ್ನು ಅವಲೋಕಿಸಿ ಒಟ್ಟು ಕನ್ನಡ ಜಾನಪದ ಅಧ್ಯಯನಗಳನ್ನು ಕುರಿತು ಉತ್ತಮ ಒಳನೋಟವನ್ನು ಕೊಡಬಲ್ಲ ಪ್ರಸ್ಥಾವನೆಯನ್ನು ಬರೆಯುವ ಅಗತ್ಯವಿತ್ತು. ಆದರೆ ಈ ವಿಷಯದಲ್ಲಿ ಸಂಪಾದಕರು ಸೋತಿದ್ದಾರೆ. ಅಂತೆಯೇ ಕೆಲವೊಮ್ಮೆ ಹೀಗೆ ಜಾನಪದಕ್ಕೆ ಮಾತ್ರ ಮೀಸಲಾದ ಪುಸ್ತಕಗಳನ್ನು ಗೆರೆಕೊರೆದಂತೆ ವರ್ಗೀಕರಿಸಿ ವಿಭಾಗಿಸುವುದು ಅಪಾಯಕರವೆ. ಕಾರಣ ಜಾನಪದವಲ್ಲದ ಕೃತಿಗಳಲ್ಲೂ ಜಾನಪದದ ಬಗ್ಗೆ ಮಹತ್ವದ ಒಳನೋಟಗಳು ಇರಲಿಕ್ಕೆ ಸಾಧ್ಯವಿದೆ. ಡಿ.ಆರ್. ನಾಗರಾಜ್ ಅವರ ಕೃತಿಗಳು ಸಾಹಿತ್ಯ ವಿಮರ್ಶೆಯೇ ಆಗಿದ್ದರೂ ಅವರ ಒಟ್ಟೂ ಚಿಂತನೆ ದೇಶಿ ಆಲೋಚನೆಯನ್ನು ಕಟ್ಟುವುದಾಗಿತ್ತು. ಹಾಗೆಯೇ ಶಂಬಾ ಜೋಷಿಯವರ ಚಿಂತನೆ, ಕೆವಿಎನ್ ಬರೆಹ , ರಹಮತ್ ತರೀಕೆರೆಯವರ ಸಾಂಸ್ಕೃತಿಕ ಅಧ್ಯಯನಗಳನ್ನು ಉಲ್ಲೇಖಿಸಬಹುದು. ಇಂತಹ ಸಂದರ್ಬದಲ್ಲಿ ಕೃತಿ ಸೂಚಿಯ ಜೊತೆಗೇ ಬಿಡಿ ಬಿಡಿಯಾದ ಲೇಖನ ಸೂಚಿಯ ಅಗತ್ಯವೂ ಇದೆ. ಇಂತಹ ಕೆಲವು ಮಿತಿಗಳ ನಡುವೆ, ಜಾನಪದ ಅಭ್ಯಾಸಿಗಳಿಗೊಂದು ಉಪಯುಕ್ತ ಆಕರವಾಗಿದೆ. ೨೦೦೪ ರ ನಂತರದ ಜಾನಪದ ಪ್ರಕಟಣೆಗಳನ್ನು ಒಳಗೊಂಡು ಈ ಕೃತಿ ಮರು ಮುದ್ರಣವಾಗುವ ಅಗತ್ಯವಿದೆ. ಅಥವಾ ಈ ಪುಸ್ತಕದ ಮುಂದುವರಿದ ಭಾಗವೆಂತಾದರೂ ಪ್ರಕಟವಾಗಬೇಕಾಗಿದೆ.

ಸೋಮವಾರ, ಅಕ್ಟೋಬರ್ 11, 2010

ಜೋಗತಿ ಕಲೆಗೆ ಹೊಸ ಮೆರಗು ತಂದ ಮಂಜಮ್ಮ ಜೋಗತಿ

ಜನಪದ ಕಲೆಗಳನ್ನು ಅಭಿವ್ಯಕ್ತಿಸುವವರ ಜಾತಿ, ವರ್ಗ, ಲಿಂಗವನ್ನು ಆಧರಿಸಿ ಆಯಾ ಜನಪದ ಕಲೆಗಳಿಗೆ ಸಾಮಾಜಿಕ ದೃಷ್ಟಿಕೋನವೊಂದು ರೂಪುಗೊಳ್ಳುತ್ತದೆ. ಹಾಗಾಗಿ ಜನಪದ ಕಲೆಗಳನ್ನು ನೋಡುವ ಕ್ರಮದಲ್ಲೂ ಶ್ರೇಣಿಕರಣದ ಬಾವನೆಗಳು ಬೆರೆತಿವೆ. ಹಾಗೆ ಅಸ್ಪ್ರಶ್ಯ ಕಲೆಯಂತೆ ನೋಡುವ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕೆಲವೊಮ್ಮೆ ಆಯಾ ಕಲೆಯನ್ನು ಅಭಿವ್ಯಕ್ತಿಸುವ ಕಲಾವಿದರು ತಮ್ಮ ಕಲೆಯಿಂದಾಗಿಯೇ ಆಯಾ ಕಲೆಯ ನೋಡುವ ಕ್ರಮವನ್ನು ಬದಲಿಸುವ ಸಾಧ್ಯತೆಗಳೂ ಇವೆ. ಯಡ್ರಾಮನಹಳ್ಳಿ ದೊಡ್ಡಬರಮಪ್ಪರಿಂದ ತೊಗಲುಗೊಂಬೆ ಕಲೆ, ಈರಮ್ಮನಿಂದ ಬುರ್ರಕಥಾ ಕಲೆಯನ್ನು ನೋಡುವ ಕ್ರಮದಲ್ಲಾದ ಬದಲಾವಣೆಗಳನ್ನು ಗಮನಿಸಬಹುದು. ಹಾಗೆ ನೋಡುವುದಾದರೆ ಅಷ್ಟೇನೂ ಗೌರವಯುತವಲ್ಲದ ಜನಪದ ಕಲೆಗಳಲ್ಲಿ ಜೋಗತಿ ಕಲೆಯೂ ಒಂದು. ಕಾರಣ ಈ ಕಲೆಯನ್ನು ಅಭಿವ್ಯಕ್ತಿಸುವವರು ಬಹುಪಾಲು ಗಂಡು ಜೋಗತಿಯರು (ಮಂಗಳಮುಖಿಯರು). ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕದಲ್ಲಿ ಹುಡುಗನಲ್ಲಿ ಹಾರ್ಮೋನ್ಸ್ ಉತ್ಪತ್ತಿಯಲ್ಲಾದ ಜೈವಿಕ ವ್ಯತ್ಯಯಗಳಾಗಿ ಹುಡುಗಿಯ ಲಕ್ಷಣಗಳು ಕಾಣಿಸಿಕೊಂಡರೆ, ಅದನ್ನು ಯಲ್ಲಮ್ಮನ ಪವಾಡ ಎಂದು ಭಾವಿಸಿ ಅಂತವರಿಗೆ ಯಲ್ಲಮ್ಮ ಅಥವಾ ಉಚ್ಚಂಗಮ್ಮ ದೇವಿಯ ಮುತ್ತುಕಟ್ಟಿಸಿ ಸೀರೆ ಉಡುಸಿ ಜೋಗತಿಯರನ್ನಾಗಿ ಮಾಡಲಾಗುತ್ತ್ತದೆ. ಇದರಲ್ಲಿ ಹೆಣ್ಣುಮಕ್ಕಳೂ ಮುತ್ತುಕಟ್ಟಿಸಿಕೊಂಡು ಜೋಗತಿಯಾಗುವ ಕ್ರಮವೂ ಇದೆ. ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕರ್ನಾಟಕದಲ್ಲಿ ಇಂತಹ ಜೋಗತಿಯರ ಸಂಖ್ಯೆ ದೊಡ್ಡದು. ಇವರುಗಳು ಯಲ್ಲಮ್ಮನ ಹಾಡು ಹೇಳುತ್ತಾ, ಜಮದಗ್ನಿ ಋಷಿ ಮತ್ತು ಯಲ್ಲಮ್ಮನ ಜೀವನ ವೃತ್ತಾಂತನ್ನು ನಾಟಕ ಮಾಡುತ್ತಾ, ಚೌಟಕಿ ಬಾರಿಸುತ್ತಾ ಊರೂರು ಅಲೆದು ಭಿಕ್ಷೆ ಬೇಡುತ್ತಾರೆ. ಇಂತಹ ಜೋಗತಿ ಕಲೆಗೆ ಒಂದು ಗೌರವದ ಸ್ಥಾನ ತಂದವರಲ್ಲಿ ಕಾಳಮ್ಮ ಜೋಗತಿ ಮೊದಲಿಗರು. ಜೋಗತಿ ಕಲೆಗೆ ಜಾನಪದಶ್ರೀ ಪ್ರಶಸ್ತಿ ಪಡೆದ ಮೊದಲ ಜೋಗತಿಯೂ ಕೂಡ. ಕಾಳಮ್ಮನ ಶಿಷ್ಯೆ ಮಂಜಮ್ಮ ಜೋಗತಿ ಸಧ್ಯ ಜೋಗತಿ ಕಲೆಗೆ ಹೂಸ ಆಯಾಮವನ್ನು ನೀಡುತ್ತಿದ್ದಾರೆ. ಕರ್ನಾಟಕದಾಧ್ಯಂತ ಹಲವಾರು ಕಡೆಗಳಲ್ಲಿ ಮಂಜಮ್ಮ ಜೋಗತಿ ಕಲೆಯನ್ನು ಪ್ರತಿನಿಧಿಸುತ್ತಿದ್ದಾರೆ. ಅವರೊಂದಿಗೆ ಒಂದು ದೊಡ್ಡ ತಂಡವೇ ಇದೆ. ಕಲೆಯನ್ನೇ ನಂಬಿ ಈ ತಂಡ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಪುಟ್ಟದಾದ ಆಶ್ರಯ ಮನೆಯಲ್ಲಿ ವಾಸಿಸುತ್ತಿದೆ. ಗಂಡು ಜೋಗತಿಯರೆಂದರೆ ಮೂಗು ಮುರಿಯುವ ಮನಸ್ಥಿಯನ್ನು ಬದಲಾಯಿಸಿ ಗಂಡು ಜೋಗತಿಯರೂ ಕೂಡ ಕಲಾವಿದರು ಎನ್ನುವ ಹೊನ ನಂಬಿಕೆಯನ್ನು ಬಳ್ಳಾರಿ ಜಿಲ್ಲೆಯಾದ್ಯಾಂತ ಹುಟ್ಟಿಸುವತ್ತ ಮಂಜಮ್ಮನ ತಂಡ ಕ್ರಿಯಾಶೀಲವಾಗಿದೆ. ಅದೀಗ ರಾಜ್ಯವ್ಯಾಯೂ ಆಗಲಿದೆ. ಜೋಗತಿ ಕಲೆಯನ್ನು ಈ ಕಾಲಕ್ಕೆ ಅನ್ವಯಿಸಿ ಹೊಸ ರೂಪ ನೀಡಿ ಪ್ರದರ್ಶನ ನೀಡುವುದು ಮಂಜಮ್ಮನ ಹೊಸ ಸಾಧ್ಯತೆ. ಇದನ್ನು ಗುರುತಿಸಿ ಮಂಜಮ್ಮನಿಗೆ ಜಾನಪದ ಅಕಾಡೆಮಿ ಜಾನಪದಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸರಕಾರ ಆಯೋಜಿಸುವ ಜಾನಪದ ಜಾತ್ರೆಗಳಲ್ಲಿ ಮಂಜಮ್ಮನ ಜೋಗತಿ ಕಲೆ ತುಂಬಾ ಆಕರ್ಷಕವಾಗಿದೆ. ಇಷ್ಟೇ ಅಲ್ಲದೆ ಮಂಜಮ್ಮ ಕರ್ನಾಟಕದ ಜೋಗತಿ ಕಲೆಯನ್ನು ಮಹರಾಷ್ಟ್ರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಪುರ ಅವರಿಂದ ಗುರುತಿಸ್ಪಟ್ಟು ಗುರುಶಿಷ್ಯ ಪರಂಪರೆಯ ಯೋಜನೆಯಡಿ ಅನೇಕರಿಗೆ ಜೋಗತಿ ಕಲೆಯ ತರಬೇತಿಯನ್ನು ನೀಡುತ್ತಿದ್ದಾರೆ. ಕರ್ನಾಟಕದಲ್ಲಿ ಜನಪದ ಕಲೆಗಳ ಹೊಸ ರೂಪಾಂತರಗಳನ್ನು ಗುರುತಿಸುವ ಮತ್ತು ಅವುಗಳ ಹೊಸ ಬಗೆಯ ರಾಜಕಾರಣವನ್ನು ಅರಿತುಕೊಳ್ಳುವ ಅಧ್ಯಯನಗಳು ನಡೆಯುತ್ತಿಲ್ಲ. ಮಂಜಮ್ಮ ಜೋಗತಿ ಕಲೆಯಲ್ಲಿ ಮಾಡಿರುವ ರೂಪಾಂತರಗಳನ್ನು ನೋಡಿದರೆ, ಅವು ಎಲ್ಲಿಯೂ ದಾಖಲಾಗಿಲ್ಲದಿರುವುದು ಕಂಡುಬರುತ್ತದೆ. ಅಂತಹ ಪ್ರಯತ್ನಗಳು ಈಗಷ್ಟೇ ನಡೆಯಬೇಕಿದೆ. ಮಂಜು ಮಂಜಮ್ಮನಾದ ಕಥಾನಕ ನಿಜಕ್ಕೂ ಹೊಸ ಅನುಭವ ಲೋಕವನ್ನು ತೆರೆದಿಡುತ್ತದೆ. ಅವರ ಬದುಕಿನ ಕಥನ ‘ನಡುವೆ ಸುಳಿವಾತ್ಮ’ ಪುಸ್ತಕ ರೂಪದಲ್ಲಿ ಸಿದ್ದಗೊಳ್ಳುತ್ತಿದೆ. ಮೇಲಿನ ಚಿತ್ರಗಳು ಮಂಜಮ್ಮ ಮತ್ತು ಅವರ ತಂಡದ ಕೆಲವು ಕ್ಷಣಗಳು.

ಗುರುವಾರ, ಅಕ್ಟೋಬರ್ 7, 2010

ಜಾನಪದ ವಿ.ವಿ ದೊಡ್ಡ ಮ್ಯೂಜಿಯಂ ಆಗದಿರಲಿ.

******* ಎಪ್ಪತ್ತರ ದಶಕದಿಂದಲೆ ಜೀಶಂಪ ಮೊದಲಾದವರಿಂದ ಹುಟ್ಟಿದ ಜಾನಪದ ವಿವಿ ಕನಸು ಸದ್ಯಕ್ಕೆ ನನಸಾಗಿದೆ. ಇದಕ್ಕಾಗಿ ಜಾನಪದ ಅಕಾಡೆಮಿಯ ಅದ್ಯಕ್ಷರಾದ ಗೊ.ರು.ಚ ಮೊದಲಾದ ಹಿರಿಯರು ಅವಿರತವಾಗಿ ಶ್ರಮಿಸಿದ್ದಾರೆ. ಈಗ ವಿಶೇಷ ಅಧಿಕಾರಿ0ುನ್ನು ನೇಮಕ ಮಾಡಿ ವಿವಿಗೆ ಚಾಲನೆ ನೀಡಲಾಗಿದೆ. ಈ ಹೊತ್ತಲ್ಲಿ ಹಿರಿ0ು ಜಾನಪದ ವಿದ್ವಾಂಸರು ವಿವಿ0ು ಸ್ವರೂಪದ ಬಗೆಗೆ ಹಲವು ವಿನ್ಯಾಸಗಳನ್ನು ಸೂಚಿಸುತ್ತಿದ್ದಾರೆ. ಇವುಗಳಲ್ಲಿ ಕೆಲವು ಮಹತ್ವದ ಒಳನೋಟಗಳೂ ಇವೆ. ಆದರೆ ಬಹುಪಾಲು ಅಭಿಪ್ರಾಯಗಳನ್ನು ನೋಡಿದರೆ ಜಾನಪದ ವಿವಿ0ುನ್ನು ದೊಡ್ಡದೊಂದು ಮ್ಯೂಜಿ0ುಂ ಮಾಡುವಂತೆ ಕಾಣುತ್ತಿದೆ. ಜಾನಪದ ಕ್ಷೇತ್ರಕ್ಕೆ ಹೊಸ ತಲೆಮಾರಿನ ಸಂಶೋಧಕರು ಹೆಚ್ಚಾಗಿ ಬರದಿರುವುದರಿಂದ ಹಿರಿಯ ಜಾನಪದ ವಿದ್ವಾಂಸರೆ ವಿವಿಯನ್ನು ಕಟ್ಟುವ ಬಗ್ಗೆ ಚಚರ್ೆ ಮಾಡುತ್ತಿರುವುದು ಅನಿವಾರ್ಯವೂ ಆಗಿದೆ. ಇದು ಜಾನಪದದ ಬಗ್ಗೆ ಹೊಸ ಆಲೋಚನೆಗಳನ್ನು ಇರಿಸಿಕೊಂಡ ಕೆಲವಾದರೂ ಹೊಸ ತಲೆಮಾರಿನ ಜಾನಪದ ವಿದ್ವಾಂಸರಿಗೆ ಆತಂಕದಂತೆ ಕಾಣುತ್ತಿದೆ. ಕನರ್ಾಟಕದಲ್ಲಿ ಜಾನಪದದ ಬಗ್ಗೆ ಅಪಾರ ಕೆಲಸ ನಡೆದಿದೆ. ನಡೆ0ುಬೇಕಾದುದು ಇನ್ನೂ ಬಹಳಷ್ಟಿದೆ. ಅದು ನಿರಂತರವಾಗಿ ಆಗಬೇಕಾದುದು. ಆ ಕಾರಣಕ್ಕೆ ಜಾನಪದ ವಿವಿ0ೊಂದರ ಅಗತ್ಯವಿತ್ತು. ಮೂಲಗಳ ಪ್ರಕಾರ ಜಾನಪದಕ್ಕಾಗಿ ಪ್ರತ್ಯೇಕ ವಿವಿ0ುು ಬೇರೆಲ್ಲಿ0ುೂ ಇಲ್ಲ, ಅದು ಕನರ್ಾಟಕದಲ್ಲಿ ಆಗಿರುವುದು ಚಾರಿತ್ರಿಕವಾಗಿ ಮುಖ್ಯ ಘಟನೆ. ಹಾಗಾಗಿ ಅಂತಹ ಜಾನಪದ ವಿವಿ0ುನ್ನು ತುಂಬಾ ವೈಜ್ಞಾನಿಕವಾಗಿ, ಸೂಕ್ಷ್ಮವಾಗಿ ರೂಪಿಸಬೇಕಾದುದು ಎಲ್ಲರ ಕರ್ತವ್ಯವಾಗಿದೆ. ಈ ವಿವಿ0ುನ್ನು ದೂರದೃಷ್ಠಿಯಿಲ್ಲದೆ ರೂಪಿಸಿದ್ದಾದರೆ ಕನರ್ಾಟಕದ ಇತರ ವಿವಿಗಳಂತೆ0ೆು ಇದು ಒಂದು ಕಾಲಕ್ಕೆ ಜಡಗೊಂಡು ಸ್ಥಾವರವಾಗುವಲ್ಲಿ 0ಾವುದೇ ಅನುಮಾನವಿಲ್ಲ. ಕನರ್ಾಟಕದಲ್ಲಿ ನಡೆದ ಜಾನಪದ ಅಧ್ಯ0ುನಗಳು ಬಹುಪಾಲು ಸಂಗ್ರಹ ಮಾದರಿ0ುವು. ವಿಶ್ಲೇಷಣೆ0ು ದೃಷ್ಟಿಯಿಂದ ಅವು ಬಹುಪಾಲು ಅಸೂಕ್ಷ್ಮವಾದವುಗಳು. ಅವುಗಳು ಮಾಹಿತಿ ಸಂಗ್ರಹಣೆ0ುಲ್ಲೇ ಹೆಚ್ಚಿನ ಸಾಧನೆ ಮಾಡಿವೆ. ಅದು ಆರಂಭಿಕ ಕಾಲಘಟ್ಟದ ಅನಿವಾ0ರ್ುವೂ ಆಗಿತ್ತು. ಹಾಗಾಗಿ ಹಿರಿಯ ಜಾನಪದ ವಿದ್ವಾಂಸರನ್ನು ಗೌರವಿಸಬೇಕಿದೆ. ಬೆರಳೆಣಿಕೆ0ು ಕೆಲವು ವಿದ್ವಾಂಸರನ್ನು ಹೊರತುಪಡಿಸಿದರೆ ಬಹುಪಾಲು ಜಾನಪದ ವಿದ್ವಾಂಸರು ಜಾನಪದ ಎಂದರೆ ಮಾಹಿತಿ ಸಂಗ್ರಹ ಎನ್ನುವ ನಂಬಿಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಹಾಗಾಗಿ ಇದೇ ಧೋರಣೆ ಜಾನಪದ ವಿವಿ ನಿಮರ್ಾಣದಲ್ಲೂ ಕೆಲಸ ಮಾಡುವ ಸಾದ್ಯತೆಯಿದೆ. ಹಾಗಾದಲ್ಲಿ ಕನರ್ಾಟಕದ ಜಾನಪದ ವಿದ್ವತ್ತಿನ ಮಿತಿ ಜಾನಪದ ವಿವಿ0ು ಮಿತಿ0ಾಗುತ್ತದೆ0ುಷ್ಟೆ. ನಮ್ಮ ಕಾಲಕ್ಕೆ ಹೊಂದಿಕೆ0ೆು ಆಗದ ಬಹುಪಾಲು ಜಾನಪದ ಕುರಿತ ವ್ಯಾಖ್ಯಾನಗಳು ಸಿದ್ಧಾಂತಗಳು ಈಗಲೂ ನಿ0ುಂತ್ರಿಸುತ್ತಿವೆ. ಅಷ್ಟಕ್ಕೂ ನಮ್ಮ ನಿತ್ಯದ ಬದುಕಿನ ಒಡಲೊಳಗಿಂದ ಹುಟ್ಟುವ ಜಾನಪದವನ್ನು ವಿವರಿಸಿಕೊಳ್ಳಲು ಪಾಶ್ಚ್ಯತ್ಯ ಜಾನಪದ ವ್ಯಾಖ್ಯಾನಗಳಿಗೆ ಮೊರೆ ಹೋಗುತ್ತಿರುವುದೊಂದು ವಿಪ0ರ್ಾಸ. ಜಾನಪದ ಎನ್ನುವುದು ನಿತ್ಯದ ಬದುಕಿನ ಒಡಲೊಳಗಿಂದಲೇ ರೂಪಾಂತರವನ್ನು ಪಡೆ0ುುತ್ತದೆ. ಆದರೆ ಈ ರೂಪಾಂತರ ಜಾನಪದ ವ್ಯಾಖ್ಯಾನಗಳ ಚೌಕಟ್ಟಿಗೆ ಹೊಂದುವುದಿಲ್ಲ. ಅಥವಾ ಹೊಸತನ್ನು ಗುರುತಿಸಲು ಜಾನಪದದ ಹಳೆ ವ್ಯಾಖ್ಯಾನಗಳಿಗೆ ಧಾರಣ ಶಕ್ತಿ ಸಾಲದು. ಹಾಗಾಗಿ ನಮ್ಮ ಕಾಲದ ಜಾನಪದವನ್ನು ವಿವರಿಸಿಕೊಳ್ಳಲು ನಮ್ಮ ಕಾಲದ ಒಳಗಿಂದಲೇ ಹೊಸ ದೃಷ್ಠಿಕೋನಗಳು ಹೊಸ ಕಾಣ್ಕೆಗಳು ಸಿದ್ದಗೊಳ್ಳಬೇಕಿದೆ. ಅಂತಹ ಕಾಣ್ಕೆಗಳು ಕನ್ನಡ ಜಾನಪದ ವಿದ್ವತ್ತಿನಲ್ಲಿ ಹೆಚ್ಚಾಗಿ ಕಾಣುತ್ತಿಲ್ಲ ಎನ್ನುವುದನ್ನು ಮನಗಾಣಬೇಕು. ಜಾನಪದದ ನಿಜವಾದ ವಿದ್ವತ್ತು ಶೈಕ್ಷಣಿಕವಾಗಿ ಪಠ್ಯದ ವಿಷಯವಾಗಿ ಜಾನಪದವನ್ನು ಕಲಿತ ವಿದ್ವಾಂಸರಲ್ಲಿಲ್ಲದೆ, ಜಾನಪದ ಕಲಾವಿದರಲ್ಲಿದೆ. ಹಾಗಾಗಿ ಅಪಾರ ದೇಸಿ ಜ್ಞಾನವಿರುವ ಕಲಾವಿದರನ್ನು ವಿದ್ವಾಂಸರನ್ನಾಗಿ ಗೌರವಿಸುವ ಹೊಸ ಮೌಲ್ಯ ಜಾನಪದ ವಿವಿಯಲ್ಲಿ ಮೊಳೆಯಬೇಕಿದೆ. ಈ ಮೇಲಿನ ಎಲ್ಲಾ ಎಚ್ಚರಗಳನ್ನು ಗಮನದಲ್ಲಿರಿಸಿಕೊಂಡೇ ಜಾನಪದ ವಿವಿ0ುನ್ನು ರೂಪಿಸಬೇಕಾಗಿದೆ. ಇಂದು ಬಹು ಶಿಸ್ತೀ0ು ಸಾಂಸ್ಕೃತಿಕ ಅಧ್ಯ0ುನದ ಮಾದರಿಗಳು ಹೆಚ್ಚು ಪ್ರಸ್ತುತ ಅನ್ನಿಸುತ್ತಿವೆ. ಈ ಮಾದರಿ0ುನ್ನು ಗಮನಿಸಿಯೇ ಜಾನಪದ ವಿವಿ0ು ತಾತ್ವಿಕ ರೂಪುರೇಷೆಗಳನ್ನು ಸಿದ್ದಪಡಿಸಿಕೊಳ್ಳಬೇಕಿದೆ. ಸದ್ಯಕ್ಕೆ ವಿಶ್ವವಿದ್ಯಾಲ0ುಗಳಲ್ಲಿರುವ ಜಾನಪದ ವಿಭಾಗಗಳು, ಜಾನಪದ ಅಕಾಡಮಿ, ರಾಮನಗರದ ಜಾನಪದ ಲೋಕ, ಉಡುಪಿ0ು ಆರ್. ಆರ್. ಸಿ ಮುಂತಾದವುಗಳು ಜಾನಪದ ವಿವಿಗೆ ಒಳ್ಳೆ0ು ಮಾದರಿಗಳಾಗಲಾರವು. ಕಾರಣ ಈ ಮೇಲೆ ಹೇಳಿದ ಮಿತಿಗಳೇ ಇವುಗಳಲ್ಲಿ ಢಾಳಾಗಿ ಕಾಣುತ್ತಿವೆ. ಕನರ್ಾಟಕ ವಿವಿ 0ುು ಪ್ರತಿ ವರ್ಷ ಆ0ೋಜಿಸುವ ಜಾನಪದ ಸಮ್ಮೇಳನಗಳು ಹೊಸ ವಾಗ್ವಾದಗಳನ್ನು ಹುಟ್ಟುಹಾಕಲಿಲ್ಲವಾದರೂ ಹೊಸ ಶಾಖೆಗಳ ಬಗ್ಗೆ ಗಮನಸೆಳೆದಿವೆ. ಇದೇ ಮಾತು ಹಂಪಿ ಕನ್ನಡ ವಿಶ್ವವಿದ್ಯಾಲ0ು ಆ0ೋಜಿಸುವ ದೇಶಿ ಸಮ್ಮೇಳನಕ್ಕೂ ಅನ್ವ0ುವಾಗುತ್ತದೆ. ಹಾಗಾಗಿ ಈಗಾಗಲೇ ಇತರೆ ವಿವಿಗಳ ಜಾನಪದ ವಿಭಾಗದ ಅಧ್ಯಾಪಕರನ್ನೆ ಜಾನಪದ ವಿವಿಗೆ ನೇಮಕ ಮಾಡದಿರುವುದು ಸೂಕ್ತ. ಜಾನಪದವನ್ನು ಮುಖ್ಯ ಶಿಸ್ತಾಗಿ ಸ್ನಾತಕೋತ್ತರ ಪದವಿ ಪಡೆದು ಜಾನಪದದಲ್ಲಿ ಸಂಶೋಧನೆ ಮಾಡಿದ ಕೆಲವಾದರೂ ಹೊಸ ತಲೆಮಾರಿನ ಯುವ ಜಾನಪದ ವಿದ್ವಾಂಸರಿಗೆ ವಿವಿ ಅವಕಾಶ ಕಲ್ಪಿಸಿದ್ದಾದರೆ, ಹೊಸತೇನನ್ನಾದರೂ ಕಟ್ಟಲು ಸಾಧ್ಯವಿದೆ. ಹಿರಿ0ು ಜಾನಪದ ವಿದ್ವಾಂಸರು ಸೂಚಿಸಿದಂತೆ ಈಗ ಲಭ್ಯವಿರುವ ಎಲ್ಲಾ ಜನಪದ ಕಲೆಗಳನ್ನು ಆಡಿ0ೋ ವೀಡಿ0ೋ ವ್ಯವಸ್ಥಿತ ದಾಖಲೀಕರಣ ಆಗಬೇಕಿದೆ. ಸಂಗ್ರಹಿಸಲು ಸಾದ್ಯವಿರುವುದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಬೇಕಿದೆ. ಜಾನಪದ ವಸ್ತು ಸಾಮಗ್ರಿ0ುನ್ನು ರಕ್ಷಿಸಿಡುವ ಕೆಲಸವೂ ಆಗಬೇಕಿದೆ. ಆದರೆ ಅದು ಜಾನಪದ ವಿವಿ0ು ಆಂಶಿಕ ಭಾಗವಾಗಬೇಕೆ ವಿನಃ ಅದೇ ಪ್ರಧಾನವಾಗಬಾರದು. ಕಾರಣ ಜಾನಪದದ ಹೊಸ ನಡಿಗೆ0ುನ್ನು ಗುರುತಿಸಬೇಕು. ಸದ್ಯಕ್ಕೆ ರೂಪುಗೊಳ್ಳುತ್ತಿರುವ ನವ ಮೌಖಿಕತೆಯನ್ನು ಗುರುತಿಸುವಂತಾಗಬೇಕು, ವೈದಿಕ ಆಲೋಚನ ವಿನ್ಯಾಸಗಳನ್ನು ಮುರಿದು ಅವೈದಿಕ ಆಲೋಚನ ವಿನ್ಯಾಸಗಳನ್ನು ಹೊಸತಾಗಿ ಕಟ್ಟಬೇಕಿದೆ. ಸದ್ಯದ ಕನರ್ಾಟಕದಲ್ಲಿ ಹಿಂದೂ ಮೂಲಭೂತವಾದಿ ಆಲೋಚನ ವಿನ್ಯಾಸಗಳು ಗಟ್ಟಿ0ಾಗುತ್ತಿವೆ. ಈ ಒಟ್ಟು ಆಲೋಚನೆ0ುನ್ನೇ ಆಮೂಲಾಗ್ರವಾಗಿ ಬದಲಾಯಿಸಿ ದೇಸಿ ಚಿಂತನೆ0ು ಬೇರುಗಳು ಬಲವಾಗುವಂತೆ ನೀರು ಗೊಬ್ಬರ ಹಾಕುವ ಮಹತ್ವದ ಜವಾಬ್ದಾರಿ ಜಾನಪದ ವಿವಿ0ು ಮೇಲಿದೆ. ದೇಸಿ ಚಿಂತನೆ0ುನ್ನು ಗಟ್ಟಿ0ಾದ ಕನ್ನಡದ ಆಲೋಚನ ಮಾದರಿ0ಾಗಿ ರೂಪಿಸುವಲ್ಲಿ ಜಾನಪದ ವಿವಿ0ುು ದೊಡ್ಡ ಸವಾಲನ್ನು ಮೈಮೇಲೆ ಎಳೆದುಕೊಳ್ಳಬೇಕಿದೆ. ಇದಕ್ಕೆ ಹಂಪಿ ವಿವಿ0ುಲ್ಲಿ ರೂಪುಗೊಂಡ ದೇಸಿ ಚಿಂತನೆಯನ್ನು ಮಾದರಿ0ಾಗಿಟ್ಟುಕೊಳ್ಳಬಹುದು. ಆನ್ವಯಿಕ ಜಾನಪದದ ಆಲೋಚನೆ ಕನ್ನಡದಲ್ಲಿ ಗಟ್ಟಿ0ಾಗಿ ನೆಲೆಗೊಳ್ಳಬೇಕಾಗಿದೆ. ಈತನಕ ನಾವು ಜಾನಪದದಿಂದ ಜ್ಞಾನವನ್ನು ಪಡೆದದ್ದೇ ಆಗಿದೆ ಬದಲಾಗಿ ನಾವು ಸಾಹಿತ್ಯಿಕವಾಗಿ ಪಡೆದ 0ಾವುದೇ ಜ್ಞಾನ ಪರಂಪರೆ0ುನ್ನು ಜಾನಪದ ಲೋಕಕ್ಕೆ ಹಾಯಿಸಲಿಲ್ಲ. ಹಾಗಾಗಿ ಜನಪದರಲ್ಲಿ ಶೇಕ್ಸಪಿ0ುರ್, ಕುವೆಂಪುರಂತವರ ಒಂದು ನಾಟಕವೂ ಪುನರ್ಸೃಷ್ಠಿ0ಾಗಲಿಲ್ಲ. ಈ ಕುರಿತು ಹೊಸ ಆಲೋಚನೆ0ುನ್ನೇ ಹುಟ್ಟುಹಾಕುವ ಸಾದ್ಯತೆ ಇದೆ. ಇಂತಹ ಹೊಸ ಆಲೋಚನೆ0ು ತುಡಿತ ಇರುವ ಕೆಲವರನ್ನಾದರೂ ಜಾನಪದ ವಿವಿಗೆ ಆ0ೆ್ಕು0ಾದದ್ದಾದರೆ ಅಲ್ಲಿ ಹೊಸತೇನನ್ನಾದರೂ ಕಟ್ಟಲು ಸಾದ್ಯವಿದೆ.

ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್.

ಇದು ಕನ್ನಡ ಜಾನಪದ ಕುರಿತ ಚಿಂತನೆ, ಚರ್ಚೆ ಸಂವಾದಕ್ಕಾಗಿರುವ ಒಂದು ತಾಣ. ಇಲ್ಲಿ ನಮ್ಮ ಕಾಲದಲ್ಲಿ ಹುಟ್ಟುವ ಹೊಸ ಜಾನಪದವನ್ನು ಗುರುತಿಸಲು ಪ್ರಯತ್ನಿಸಲಾಗುವುದು. ಜಾನಪದ ಅಂದರೆ ಅದು ಹಳ್ಳಿಯದು, ಅನಕ್ಷರಸ್ತರದು ಮುಂತಾದ ಸೀಮಿತ ವ್ಯಾಖ್ಯಾನಗಳನ್ನು ಬಿಟ್ಟು ಕೊಟ್ಟು ಅದು ನಿರಂತರ ಕ್ರಿಯಾಶೀಲವಾಗಿರುತ್ತದೆ ಎನ್ನುವ ನಂಬಿಕೆ ಇಲ್ಲಿ ಮುಖ್ಯವಾಗಿದೆ. ಹೊಸ ಕಾಲದ ಜತೆ ಜಾನಪದ ಹೊಸ ರೂಪದಲ್ಲಿ ಜೀವತಳೆಯುತ್ತಿರುತ್ತದೆ. ಅದನ್ನು ಗುರುತಿಸುವ ಮನಸ್ಸು ಈ ಕಾಲದ್ದಾಗಿರಬೇಕಷ್ಟೆ. ಹಾಗಾಗಿ ಕರ್ನಾಟಕದ ಜಾನಪದ ಜಗತ್ತಿನ ಹೊಸ ಪ್ರಕ್ರಿಯೆಗಳನ್ನು ಗುರುತಿಸುವ ಪ್ರಯತ್ನವೇ ಕನ್ನಡ ಜಾನಪದ ಬ್ಲಾಗ್. ಡಾ.ಅರುಣ್ ಜೋಳದ ಕೂಡ್ಲಿಗಿ