ಬುಧವಾರ, ಜನವರಿ 12, 2011

ಊರಿಗೆಷ್ಟು ಹೆಸರು ?

ಪ್ರೊ.ಕೆ.ವಿ.ನಾರಾಯಣ. (ಕೆ.ವಿ. ನಾರಾಯಣ ಅವರು ನಿರ್ವಹಿಸುತ್ತಿರುವ ಮತ್ತೊಂದು ಬ್ಲಾಗ್ ‘ಪದಗತಿ’(http://padagati.blogspot.com) . ಇವರು ಈ ಬ್ಲಾಗ್ ನಲ್ಲಿ ಕನ್ನಡದ ಪದಗತಿಯ ಚಲನೆಯ ಬೇರೆ ಬೇರೆ ನೆಲೆಗಳನ್ನು ಹುಡುಕುತ್ತಿದ್ದಾರೆ. ಊರಿಗೆಷ್ಟು ಹೆಸರು ಅನ್ನುವ ಬರಹ ಕೂಡ ಅಂತಹ ಹುಡುಕಾಟದ್ದೆ. ಈ ಪುಟ್ಟ ಬರಹ ಊರಿನ ಹೆಸರ ಚರಿತೆಯಂತೆ ಬೆಳಯುತ್ತಾ ಹೋಗಿದೆ. ಇಲ್ಲಿ ಹೆಸರ ಚರಿತೆ ಸದ್ಯದ ಕಾಲದ ತನಕವೂ ಚಾಚಿಕೊಂಡಿದೆ. ನೀವೊಮ್ಮೆ ಓದಿ.- ಅರುಣ್) ಊರಿಗೆಷ್ಟು ಹೆಸರು? ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ? ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ. ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ 'ಚಾಮರಾಜ ನಗರ' ಹಿಂದೆ 'ಅರಿಕೊಠಾರ'ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು 'ಪ್ರತಿನಾಮ' ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ. 'ಅತ್ತಿಬೆಲೆ'ಯು "ಔದುಂಬರಪುರ'ವಾಗುತ್ತದೆ;'ನಂಜನಗೂಡು' 'ಗರಳಪುರಿ'ಯಾಗುತ್ತದೆ;'ಹಾಡುವಳ್ಳಿ' 'ಸಂಗೀತಪುರ'ವಾಗುತ್ತದೆ.ಇನ್ನೂ ಕೆಲವೊಮ್ಮೆ ಊರುಗಳ ಹೆಸರುಗಳು ಕಳೆದುಹೋಗುವುದೂ ಉಂಟು. ಈಗ ನಾವು ಬೆಂಗಳೂರು ಎಂದು ಕರೆಯುತ್ತಿರುವ ಊರಿನಲ್ಲಿ ಸರಿಸುಮಾರು ಐವತ್ತು ಊರ ಹೆಸರುಗಳು ಕಳೆದುಹೋಗಿವೆ. ಗವಿಪುರ,ಸಿದ್ಧಾಪುರ,ಗುಟ್ಟಹಳ್ಳಿ,ಮಾರತ್ ಹಳ್ಳಿ,ಜಕ್ಕಸಂದ್ರ, ಸಾರಕ್ಕಿ,ಶಿವನ ಹಳ್ಳಿ, ಸಾಣೇ ಗುರವನ ಹಳ್ಳಿ, ಹೆಣ್ಣೂರು, ಬಾಣಸವಾಡಿ, ಹಲಸೂರು,ನಾಗಸಂದ್ರ, ಗಂಗೇನ ಹಳ್ಳಿ ಹೀಗೆ ಪಟ್ಟಿ ಇದೆ. ಇವುಗಳಲ್ಲಿ ಕೆಲವು ಹೆಸರುಗಳು ಬಡಾವಣೆಗಳ ಹೆಸರುಗಳಾಗಿ ಉಳಿದಿವೆ. ಆದರೆ ಊರ ಹೆಸರುಗಳಾಗಿ ಅಲ್ಲ. ಇದೇನೇ ಇರಲಿ. ಹೆಸರುಗಳನ್ನು ಬಾಯಲ್ಲಿ ಹೇಳುವುದೂ ಅವನ್ನು ಬರೆಯುವುದೂ ಬೇರೆಬೇರೆ. ನಮ್ಮ ಸಾವಿರಾರು ಊರುಗಳ ಹೆಸರನ್ನು ಬರೆಯ ಬೇಕಾಗಿ ಬಂದದ್ದೇ ಈಚಿನ ವರುಷಗಳಲ್ಲಿ. ಅದರಲ್ಲೂ ಆ ಯ್ ಊರಿನ ದಾಖಲೆಗಳನ್ನು ಜತನವಾಗಿ ಇರಿಸಲು ಸರಕಾರದ ಬೇರೆ ಬೇರೆ ಇಲಾಖೆಗಳು ಮುಂದಾಗಿರುವುದರಿಂದ ಹೀಗೆ ಹೆಸರನ್ನು ಬರೆಯಬೇಕಾಗಿ ಬಂದಿದೆ. ಹೀಗೆ ಬರೆಯುವಾಗ ಒಂದೇ ಬಗೆಯಲ್ಲಿ ಬರೆಯುತ್ತಿಲ್ಲ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. ಅಂಚೆ ಇಲಾಖೆಯವರು ಒಂದು ಬಗೆಯಲ್ಲಿ ಬರೆದಿದ್ದರೆ,ಕಂದಾಯ ಇಲಾಖೆಯವರು ಮತ್ತೊಂದು ಬಗೆಯಲ್ಲಿ ಬರೆದಿರುತ್ತಾರೆ. ಪಂಚಾಯತ್ ರಾಜ್ಯ ಇಲಾಖೆಯವರು,ಪೋಲಿಸಿನವರು,ಮರಾಮತ್ ಇಲಾಖೆಯವರು,ಸಮಾಜ ಕಲ್ಯಾಣ ಇಲಾಖೆಯವರು ಹೀಗೆ ಹತ್ತು ಹಲವು ಕಡೆಗಳಲ್ಲಿ ಊರಿನ ಹೆಸರನ್ನು ಬರೆಯುವುದು ಈಗ ಬೇಕಾಗಿದೆ. ಒಮ್ಮೆ ಹೀಗೆ ಬರೆಯಲು ಮೊದಲು ಮಾಡಿದ ಮೇಲೆ ಊರಿನ ಹೆಸರುಗಳಿಗೆ ಎರಡು ರೂಪಗಳು ಉಳಿದುಕೊಳ್ಳುತ್ತವೆ. ಮಾತಿನ ರೂಪ ಮತ್ತು ಬರೆಹದ ರೂಪ. ಮಾತಿನ ರೂಪ ಮೊದಲಿನಂತೆ ಜನರ ನೆನಪನ್ನು ಹೊಂದಿಕೊಂಡು ಬದಲಾಗುವುದಿಲ್ಲ. ಬರೆದ ಬಗೆಯನ್ನು ಅನುಸರಿಸಿ ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುತ್ತದೆ. ಬರಹದ ರೂಪವಂತೂ ಈಗಿನ ದಾಖಲಾತಿ ಚೌಕಟ್ಟಿನಲ್ಲಿ ಹೆಚ್ಚು ಬದಲಾಗದೇ ಉಳಿಯಬಹುದಾಗಿದೆ. ಜನರು ಊರಿನ ಹೆಸರನ್ನು ಬಾಯಲ್ಲಿ ಹೇಳುವಾಗ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆನಷ್ಟೆ. ಈ ಬದಲಾವಣೆ ಎರ್ರಾಬಿರ್ರಿಯಾಗಿರುವುದಿಲ್ಲ. ಊರಿನ ಹೆಸರಿನಲ್ಲಿ ಬಹುಮಟ್ತಿಗೆ ಎರಡು ಭಾಗ ಇರುತ್ತವೆ. ಎರಡನೆಯ ಭಾಗದಲ್ಲಿ 'ಊರು" ಎಂಬುದನ್ನು ಹೇಳುವಂತಿರುವ ಪದವಿರುತ್ತದೆ. ಊರು, ಪುರ, ನಗರ, ಕಲ್ಲು, ಗಾಲ, ಗಿ, ಹಾಳು, ಹಳ್ಳಿ, ವಾಡಿ, ಪಟ್ಟಣ, ಹಟ್ಟಿ, ಸಂದ್ರ, ಕೇರಿ, ಕೆರೆ, ಪೇಟೆ ಹೀಗೆ ಇಂತಹವು. ಮೊದಲ ಭಾದದಲ್ಲಿ ಚಿಕ್ಕ ಪದದಿಂದ ಹಿಡಿದು ಹಲವಾರು ಪದಗಳು ಇರುವುದೂ ಉಂಟು. ಜನರು ಈ ಎರಡು ಭಾಗಗಳನ್ನು ಚಿಕ್ಕದು ಮಾಡಿಕೊಳ್ಳುತ್ತಾರೆ. ಹೀಗೆ ಚಿಕ್ಕದು ಮಾಡಿಕೊಳ್ಳುವಾಗ ಮೊದಲ ಭಾಗದಲ್ಲಿ ಎರಡಕ್ಕಿಂತ ಹೆಚ್ಚು ಸ್ವರಗಳನ್ನು ಇರಿಸಿಕೊಳ್ಳುವುದಿಲ್ಲ.ಹಾಗೆಯೇ ಎರಡನೆಯ ಭಾಗದಲ್ಲಿ ಕೂಡ ಒಂದು ಅಥವಾ ಎರಡು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಕನ್ನಡ ನುಡಿಯ ಜಾಯಮಾನ ಎಂದಷ್ಟೇ ಹೇಳಬಹುದು. ಕೆಲವು ಊರುಗಳ ಹೆಸರು ಮಾತಿನಲ್ಲಿ ಏನಾಗುತ್ತದೆ ನೋಡಿ. ಕೃಷ್ಣರಾಜ ನಗರ ಕೆ.ಆರ್.ನಗರ, ತಿರುಮಕೂಡಲು ನರಸೀಪುರ, ಟಿ. ನರ್ಸಿಪುರ ಆಗುತ್ತವೆ.ಊರ ಹೆಸರಿನಲ್ಲಿ ಒಟ್ಟು ನಾಲ್ಕಕ್ಕಿಂತ ಹೆಚ್ಚು ಸ್ವರಗಳಿದ್ದರೆ ಆ ಸ್ವರಗಳನ್ನು ನಾಲ್ಕಕ್ಕೆ ಇಳಿಸಿಕೊಳ್ಳುವುದು ಕಂಡು ಬರುತ್ತದೆ.ಕೆಲವೊಮ್ಮೆ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳುವುದೂ ಉಂಟು. ಇರುವಷ್ಟು ವ್ಯಂಜನಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳುತ್ತಾರೆ.'ಚಿಕ್ಕನಾಯಕನ ಹಳ್ಳಿ'ಯಲ್ಲಿ ಎಂಟು ಸ್ವರಗಳಿವೆ. ಜನರ ಬಾಯಲ್ಲಿ ಅದು 'ಚಿಕ್ ನಾಯ್ಕ್ ನಳ್ಳಿ' ಎಂದು ಆಗುವುದು.ಬದಲಿಗೆ ಕೆಲವೊಮ್ಮೆ 'ಸಿ.ಎನ್.ಹಳ್ಳಿ' ಆದರೂ ಅಲ್ಲಿ ನಾಲ್ಕು ಸ್ವರಕ್ಕೆ ಇಳಿಯುತದೆ.'ಹಾಸನ' 'ಹಾಸನ್' ಅಥವಾ 'ಹಾಸ್ನ' ಆಗುತ್ತದೆ. 'ಚಾಮರಾಜನಗರ' 'ಚಾಮ್ರಾಜ್ ನಗ್ರ' ಎಂದಾಗುತ್ತದೆ. ಹೀಗೇ ಪಟ್ಟಿ ಬೆಳೆಸಬಹುದು. ಈ ಮಾತು ಹೇಳಿದ್ದೇಕೆಂದರೆ, ಜನರಿಗೆ ಊರಿನ ಬರಹ ರೂಪ ಹೇಗಿದೆ ಎನ್ನುವುದು ಅದರ ಹೆಸರನ್ನು ಹೇಳುವಾಗ ಅಷ್ಟು ಗಮನಿಸಬೇಕಾದ ಸಂಗತಿಯಾಗಿ ತೋರುವುದಿಲ್ಲ ಎಂದು ತಿಳಿಸುವುದು. ಇನ್ನೂ ಒಂದು ಮಾತಿದೆ. ಬಲ್ಲವರು ನಮ್ಮ ಊರುಗಳ ಹೆಸರುಗಳನ್ನು 'ಕುಲಗೆಡಿಸಿ'ದವರು ಇಂಗ್ಲಿಶಿನವರು ಎನ್ನುತ್ತಾರೆ. ಇಂಗ್ಲಿಶಿನವರು ನಮ್ಮ ಊರುಗಳ ಹೆಸರುಗಳನ್ನು ನಾವು ಬರೆದಂತೆ ಬರೆಯಲಿಲ್ಲ. ಏಕೆಂದರೆ ಎಷ್ಟೋ ಊರುಗಳ ಹೆಸರನ್ನು ನಾವು ಬಾಯಲ್ಲಿ ಹೇಳುತ್ತಿದ್ದುದನ್ನು ಅವರು ಕೇಳಿಸಿಕೊಂಡಂತೆ ಬರೆದರು. ಹೀಗಾಗಿ ಅವರು ಕೇಳಿಸಿಕೊಂಡದ್ದು ಹೇಗೋ ಹಾಗೆ ಊರ ಹೆಸರುಗಳು ಬರಹದಲ್ಲಿ ದಾಖಲಾದವು. ಆದರೆ ಸಾವಿರಾರು ಊರುಗಳ ಹೆಸರುಗಳನ್ನು ಮೊದಲು ಬರೆದವರು ನಾವೇ ಆಗಿದ್ದೇವೆ. ಅವುಗಳಿಗೆ ನಮ್ಮ ನುಡಿಯಲ್ಲಿ, ಜತೆಗೆ ಇಂಗ್ಲಿಶಿನಲ್ಲಿ ಬರೆಹ ರೂಪವನ್ನು ಕೊಟ್ಟವರು ನಾವೇ. ಹಾಗಾಗಿ ಏನಾದರೂ ಗೊಂದಲಗಳಿದ್ದರೆ ಅದಕ್ಕೆ ನಾವು ಹೊಣೆಗಾರರಾಗಿದ್ದೇವೆ. ಹಿಗೆ ಅಡ್ಡಾದಿಡ್ಡಿ ಹೆಸರುಗಳನ್ನು ಬರೆಯುವುದನ್ನು ಬದಲಾಯಿಸಿ ಒಂದು ಸರಿಯಾದ ಬಗೆಯಲ್ಲಿ ಬರೆಯುವುದು ಮತ್ತು ಅದೇ ರೂಪವನ್ನು ಎಂದೂ, ಎಲ್ಲೆಲ್ಲೂ ಬಳಸುವುದು ಈಗ ಆಗ ಬೇಕಾಗಿರುವ ಕೆಲಸ; ಹೆಸರುಗಳ ಹಳೆಯ ರೂಪಗಳಿಗೆ ಮರಳಿ ಹೋಗುವುದಕ್ಕಿಂತ ಇದು ಮೊದಲು ಆಗ ಬೇಕಾದ ಕೆಲಸ. ಮತ್ತೆ ಕೆಲವರು ಇಂಗ್ಲಿಶಿನವರು ಕುಲಗೆಡಿಸಿದ ಹೆಸರುಗಳಿಗೆ ಕೊನೆಯಲ್ಲಿ 'ಉ' ಸೇರಿಸಿ ಬಿಟ್ಟರೆ ಅದು ಕನ್ನಡದ ಹೆಸರಾಗಿಬಿಡುವುದೆಂದು ಹೇಳುವುದುಂಟು. ಇದು ಸರಿಯಾದ ಮಾತಲ್ಲ. ಕನ್ನಡ ಮಾತಾಡುವ ಕೆಲವರು ಕೆಲವೊಮ್ಮೆ ಮತ್ತು ಕೆಲವು ಕಡೆಗಳಲ್ಲಿ ಹೀಗೆ ಕೊನೆಯಲ್ಲಿ 'ಉ' ಸೇರಿಸುವುದುಂಟು. ಕನ್ನಡ ಮಾತಾಡುವವರೆಲ್ಲ ಹೀಗೆ ಮಾಡುವುದಿಲ್ಲ. ತುಂಗಭದ್ರೆಯ ಉತ್ತರಕ್ಕೆ ಹೋದರೆ ಅಲ್ಲಿ ವ್ಯಂಜನದಿಂದ ಕೊನೆಯಾಗುವ ಪದಗಳನ್ನು ಬರೆಯುವಾಗ ಕೊನೆಗೆ 'ಅ' ಸೇರಿಸುತ್ತಾರೆ.ಆ ಕಡೆಯಿಂದ ಬರುವ ಎಷ್ಟೋ ಬಸ್ಸುಗಳಲ್ಲಿ 'ಬೆಂಗಳೂರ','ಮೈಸೂರ''ಮಂಗಳೂರ' ಎಂದು ಬರೆದಿರುವುದನ್ನು ನೋದಬಹುದು. ಆದರೆ ಅಲ್ಲಿ ಕನ್ನಡ ಮಾತನಾಡುವವರು ಈ ಊರುಗಳ ಹೆಸರನ್ನು ಹೇಳುವಾಗ ಕೊನೆಯಲ್ಲಿ 'ಅ' ಹೇಳುವುದಿಲ್ಲ. ಕೊನೆಯಲ್ಲಿ ವ್ಯಂಜನವನ್ನೇ ಹೇಳುತ್ತಾರೆ. ಅಲ್ಲದೆ ವ್ಯಂಜನದಿಂದ ಕೊನೆಯಾಗುವ ಎಲ್ಲ ಕಡೆಯಲ್ಲೂ "ಉ' ಸೇರಿಸಲು ಬರುವುದಿಲ್ಲ. 'ಹೊಸ್ ಪೇಟ್','ಬಾಗಲ್ ಕೋಟ್'.'ಕೋಲಾರ್','ರಾಮ್ ನಗರ್' ಮುಂತಾದವನ್ನು ಏನು ಮಾಡುವುದು. ಎಲ್ಲ ಕಡೆಗೂ ಉಕಾರವೇ ಸಲ್ಲುವುದೆಂದು ಹೇಳಬಹುದೇ? ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ನೆಲೆಸುವುದು ಎಂದಿಗಿಂತಲೂ ಈಗ ಹೆಚ್ಚಾಗಿದೆ. ಬೇರೆಬೇರೆ ನುಡಿಗಳನ್ನಾಡುವವರು ಒಂದೆಡೆ ನೆಲಸುತ್ತಿದ್ದಾರೆ. ಇದರಿಂದ ಊರುಗಳ ಹೆಸರನ್ನು ಬರೆಯುವ ಬಗೆಯಲ್ಲಿ ಒಂದು ಚೌಕಟ್ಟನ್ನು ತರಬಹುದೇ ಹೊರತು ಆ ಹೆಸರುಗಳನ್ನು ಜನರು ಹೇಳುವ ಬಗೆಯಲ್ಲಿ ಅಲ್ಲ. ಹೀಗೆ ಹೆಸರನ್ನು ಹೇಳುವ ಬಗೆಯಲ್ಲೂ ನಾವು ಅಂದುಕೊಳ್ಳುವಂತೆ ಏರುಪೇರುಗಳು ಇರುವುದಿಲ್ಲ. ಬೇರೆ ಬಗೆಯಲ್ಲಿ ಹೆಸರನ್ನು ಹೇಳುತ್ತಿದ್ದರೂ ಅದರಲ್ಲೂ ಒಂದು ಚೌಕಟ್ಟು ಇರುತ್ತದೆ. ಮತ್ತು ಹಾಗೆ ಹೇಳುವುದಕ್ಕೆ ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ. ಕೊನೆಗೊಂದು ಮಾತು: ಲೋಕದಲ್ಲಿ ಅತಿ ದೊಡ್ಡ ಹೆಸರಿರುವ ಊರು ಯಾವುದು? ಆ ಊರಿನ ಹೆಸರನ್ನು ರೋಮನ್(ಇಂಗ್ಲಿಶ್) ಲಿಪಿಯಲ್ಲಿ ಬರೆದರೆ ಅದರಲ್ಲಿ ೮೪ ಅಕ್ಷರಗಳಿರುತ್ತವೆ.

ಶುಕ್ರವಾರ, ಜನವರಿ 7, 2011

ಪ್ರೊ.ಕೆ.ವಿ. ನಾರಾಯಣ ಮೇಷ್ಟ್ರು ಬರಹ- ಕರ್ನಾಟಕ ಓದು

(ಈ ಹೊತ್ತು ಕನ್ನಡದ್ದೇ ತಿಳಿವಿನ ಕ್ರಮವನ್ನು ರೂಪಿಸುತ್ತಿರುವ ನಮ್ಮ ನಡುವಿನ ದೊಡ್ಡ ಚಿಂತಕರಲ್ಲಿ ಪ್ರೊ.ಕೆ.ವಿ. ನಾರಾಯಣ ಮೇಷ್ಟ್ರು ಪ್ರಮುಖರು. ಅವರು ‘ಕರ್ನಾಟಕ ಓದು’ ಎನ್ನುವ ಹೊಸ ಬ್ಲಾಗ್‍ ಆರಂಭಿಸಿದ್ದಾರೆ. ಇದರಿಂದಾಗಿ ಕನ್ನಡದ ಬಗ್ಗೆ ಅಂತರಜಾಲದಲ್ಲಿ ಹುಡುಕಾಟ ಮಾಡುವವರಿಗೆ ಕೆ.ವಿ.ಎನ್‍ ಮೇಷ್ಟ್ರ ಬರಹ ಸಿಕ್ಕುವಂತಾದುದು ನಮಗೆಲ್ಲಾ ಖುಷಿಯ ಸಂಗತಿ. ಅವರ ಬ್ಲಾಗ್‍ ವಿಳಾಸ : www.karnatakaodu.blogspot.com. ಈ ಬ್ಲಾಗ್‍ನ ಮೊದಲ ಬರಹವನ್ನು ಕನ್ನಡ ಜಾನಪದ ಬ್ಲಾಗ್‍ನಲ್ಲೂ ಪ್ರಕಟಿಸಲಾಗಿದೆ. ಅವರ ತೊಂಡುಮೇವಿನ ಕಂತುಗಳ ಆಳದಲ್ಲಿರುವ ತಿಳಿವಿನ ಎಳೆಯಲ್ಲಿ ದೇಸಿ ಚಿಂತನೆ ಬಹಳ ಮುಖ್ಯವಾದುದು. ಅಂತಹ ದೇಸಿ ಚಿಂತಕರಾದ ಕೆ.ವಿ.ಎನ್‍ ಮೇಷ್ಟ್ರ ಕನ್ನಡತನದ ತಿಳಿವಿನ ಎಳೆ ಈ ಬರಹದಲ್ಲಿದೆ.- ಅರುಣ್‍) ರವಿವಾರ ೧೨ ಡಿಸೆಂಬರ್ ೨೦೧೦ ಕರ್ನಾಟಕ ಓದು ಕನ್ನಡದ ತಿಳಿವು ಕನ್ನಡದ ಮೂಲಕ ದೊರೆಯುವಂತಾಗಬೇಕು. ನಮಗೆ ಕನ್ನಡದ ಮೂಲಕ ಸಿಗುವ ತಿಳುವಳಿಕೆ ಯಾವುದಾಗಿರಬೇಕು? ಹೀಗೆ ಕೇಳಿದರೆ ಇದೆಂತಹ ಮಾತೆಂದು ಪಕ್ಕಕ್ಕೆ ತಳ್ಳಿ ಹಾಕುವವರೇ ಹೆಚ್ಚು. ಆದರೆ ಕನ್ನಡದ ಮೂಲಕ ನಮಗೆ ದೊರೆಯುವ ತಿಳುವಳಿಕೆ ಈಗ ಇಂಗ್ಲಿಶಿನ ಮೂಲಕ ದೊರೆಯುವ ತಿಳುವಳಿಕೆಯೇ ಆಗಿರಬೇಕೆ? ಆ ತಿಳುವಳಿಕೆಯನ್ನು ಪಡೆದುಕೊಳ್ಳುವ ಚೌಕಟ್ಟನ್ನೂ ಕೂಡ ನಾವು ಹೊರಗಿನಿಂದ ಪಡೆದುಕೊಳ್ಳಬೇಕೆ? ಹಾಗೆ ನೋಡಿದರೆ ಸುಮಾರು ಐವತ್ತು ವರುಷಗಳ ಹಿಂದಿನಿಂದಲೇ ಕನ್ನಡದ ಮೂಲಕ ತಿಳಿವನ್ನು ನೀಡುವ ನಡೆಗಳು ಹೆಚ್ಚಿನ ಕಲಿಕೆಯ ಹಂತದಲ್ಲಿ ಮೊದಲಾಗಿವೆ. ಅದಕ್ಕೆ ಬೇಕಾದ ಹೊತ್ತಗೆಗಳನ್ನು ಇಂಗ್ಲಿಶಿನಿಂದ ಕನ್ನಡಕ್ಕೆ ತರುವ ಕೆಲಸವೂ ನಡೆಯಿತು. ಕಲಿಸಲು ಕನ್ನಡವನ್ನೇ ಬಳಸುವ ನಿಟ್ಟಿನಲ್ಲಿ ಕೆಲಸಗಳೂ ನಡೆದವು. ಈಗಲೂ ನಮಗೆಲ್ಲರಿಗೂ ತಿಳಿದಿರುವಂತೆ ಹೆಚ್ಚಿನ ಕಲಿಕೆಯ ನೆಲೆಯಲ್ಲಿ ಮಾನವಿಕ ತಿಳಿವುಗಳನ್ನು ಇಂಗ್ಲಿಶಿನ ಮೂಲಕ ಕಲಿಸುವ ಮಾತಿದೆಯಾದರೂ ಕಲಿಯುವವರು, ತಾವು ಕಲಿಯಲು ಮತ್ತು ಕಲಿತದ್ದನ್ನು ಬರೆಯಲು ಕನ್ನಡವನ್ನೇ ಬಳಸುತ್ತಿದ್ದಾರೆ. ಅರಿಮೆಯ ಬರಹಗಳನ್ನು ಕನ್ನಡದಲ್ಲೇ ಬರೆಯುತ್ತಿದ್ದಾರೆ. ಹಾಗಿದ್ದರೂ ನಮಗೆ ಬೇಕಾದ ಗುರಿಯನ್ನು ನಾವು ಮುಟ್ಟಿಲ್ಲವೆಂಬ ಕೊರತೆ ನಮ್ಮೆಲ್ಲರನ್ನೂ ಕಾಡುತ್ತಿದೆ. ಏಕೆ ಹೀಗಾಯ್ತು? ತಿಳಿವು ಯಾವ ನುಡಿಯ ಮೂಲಕ ನಮಗೆ ದೊರಕಬೇಕು ಎಂಬುದನ್ನು ಹೇಳುವಾಗಲೇ (೧)ನಮಗೆ ಯಾವ ತಿಳಿವು ಬೇಕು ಮತ್ತು (೨)ಆ ತಿಳಿವು ಯಾವ ಚೌಕಟ್ಟಿನ ಮೂಲಕ ನಮಗೆ ದೊರಕಬೇಕು ಎನ್ನುವುದನ್ನು ಗುರುತಿಸಕೊಳ್ಳಬೇಕಾಗುತ್ತದೆ. ಎಲ್ಲ ತಿಳುವಳಿಕೆಗಳು ನಮಗೆ ಕನ್ನಡದ ಮೂಲಕ ದೊರಕಲಿ ಎಂದು ಹೇಳಿದಾಗ ನಾವು ನಮಗೇ ಗೊತ್ತಿಲ್ಲದಂತೆ ಕನ್ನಡವನ್ನು ಪಡೆಯುವ ನುಡಿಯ ಜಾಗದಲ್ಲಿ ಅಲುಗಾಡದಂತೆ ಇರಿಸಿಬಿಟ್ಟಿರುತ್ತೇವೆ. ಆಗ ನಮಗೆ ದೊರೆಯುವ ತಿಳಿವು ನಮ್ಮದಾಗಿರದು. ಆದರೆ ಅದೇ ತಿಳಿವು ನಮಗೆ ಬೇಕಾಗಿದೆ ಎಂದು ಒಪ್ಪಿಕೊಳ್ಳುವ ಮತ್ತು ಇದಲ್ಲದೆ ಬೇರೆ ಯಾವ ಹಾದಿಗಳೂ ನಮಗೆ ತೆರೆದಿಲ್ಲ ಎಂದು ನಂಬುವ ಒತ್ತಡಕ್ಕೆ ನಮ್ಮ ಕಲಿಕೆಯ ಚೌಕಟ್ಟು ಈವರೆಗೆ ನಮ್ಮನ್ನು ಗುರಿಮಾಡಿದೆ. ಇದರಿಂದ ನಮ್ಮ ನುಡಿಯೂ ಬೆಳೆಯಲಿಲ್ಲ;ನಮ್ಮ ತಿಳಿವು ಹೆಚ್ಚಾದರೂ ಅದು ಎಂದೂ ನಮ್ಮದಾಗಲಿಲ್ಲ. ಬೇರೆ ಬೇರೆ ಮಾನವಿಕ ತಿಳಿವುಗಳಲ್ಲಿ ಹೆಚ್ಚಿನ ಓದಿದವರೂ ಕೂಡ ತಾವು ಓದಿದ್ದಕ್ಕೂ ತಾವು ಸುತ್ತಲೂ ನೋಡುತ್ತಿರುವುದಕ್ಕೆ ಯಾವ ನಂಟೂ ಇಲ್ಲದಿರುವುದನ್ನು ಕಂಡಿದ್ದಾರೆ. ಓದಿದ್ದನ್ನು ಹಾಗೆಯೇ ಮರೆತು ಬಿಟ್ಟಿದ್ದಾರೆ.ಹಾಗಿದ್ದರೆ ನಾವು ಈಗ ಏನು ಮಾಡಬೇಕು? ಇದಕ್ಕಾಗಿ ಕರ್ನಾಟಕದ ಓದು ಎಂಬ ಹೊಸ ತಿಳಿವಿನ ವಲಯವನ್ನು ನಾವು ಕಟ್ಟ ಬೇಕಿದೆ. ಈಗ ಬೇರೆಬೇರೆಯಾಗಿ ಒಂದಕ್ಕೊಂದು ನಂಟಿಲ್ಲದಂತೆ ಇರುವ ಹಲವು ತಿಳಿವಿನ ವಲಯಗಳನ್ನು ಒಗ್ಗೂಡಿಸಬೇಕು. ಅವುಗಳ ನಡುವೆ ಇರುವ ಗಡಿಗೆರೆಗಳನ್ನು ಅಳಿಸಲಾಗದಿದ್ದರೂ ಆ ಗೆರೆಗಳು ಗೋಡೆಗಳಾಗದಂತೆ ನೋಡಿಕೊಳ್ಳಬೇಕಾಗಿದೆ. ಚರಿತ್ರೆ,ಸಮಾಜ ಶಾಸ್ತ್ರ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಾಹಿತ್ಯದ ಓದು, ಭಾಷಾಶಾಸ್ತ್ರ, ಕಲಾಧ್ಯಯನ, ಪುರಾತತ್ವಶಾಸ್ತ್ರ ಇವೇ ಮೊದಲಾದ ತಿಳಿವಿನ ವಲಯಗಳಲ್ಲಿ ಕರ್ನಾಟಕವನ್ನು ನೋಡಿರುವ ಬಗೆಯನ್ನು ಈ ಹೊಸ ಓದಿನ ವಲಯ ಗುರುತಿಸಿಕೊಳ್ಳುತ್ತದೆ. ಇದು ಕೇವಲ ಮಾಹಿತಿಗಳನ್ನು ಕೂಡಿಹಾಕುವ ಕೆಲಸವಲ್ಲ. ಹಿಂದೆ ಪಟ್ಟಿ ಮಾಡಿದ ತಿಳಿವಿನ ವಲಯಗಳು ಜಾಗತಿಕ ತಿಳಿವಿನ ಚೌಕಟ್ಟಿನ ನೆಲೆಯಲ್ಲಿ ಕನ್ನಡದ,ಕರ್ನಾಟಕದ ಮಾಹಿತಿಯನ್ನು ನೋಡುವ ಹಾದಿಯನ್ನು ಹಿಡಿದಿವೆ. ಇದರಿಂದ ನಮಗೆ ಹೆಚ್ಚಿನ ನೆರವು ದೊರೆಯುವುದಿಲ್ಲ. ಕರ್ನಾಟಕವನ್ನು ಒಳಗಿನವರು ನೋಡಿರುವ ಬಗೆ ಮತ್ತು ಕರ್ನಾಟಕದ ಹೊರಗಿನವರು ನೋಡಿರುವ ಬಗೆ ಈಗ ಒಂದೇ ಆಗಿವೆ. ಏಕೆಂದರೆ ಒಳಗಿದ್ದೂ ಕರ್ನಾಟಕವನ್ನು ನೋಡಿರುವವರೂ ಬಳಸಿರುವ ಚೌಕಟ್ಟುಗಳು ಹೊರಗಿನವೇ ಆಗಿವೆ. ಹೆಚ್ಚೆಂದರೆ ಒಳಗಿದ್ದು ನೋಡಿದವರು ಕನ್ನಡದಲ್ಲಿ ಬರೆದಿದ್ದಾರು. ಅಂದರೆ ಕರ್ನಾಟಕದ ಓದು ಎಂಬುದು ಈಗ ಇದ್ದರೂ ಅದು ನಮ್ಮನ್ನು ತಕ್ಕ ದಾರಿಯಲ್ಲಿ ಕರೆದೊಯ್ಯುವಂತೆ ಇಲ್ಲ. ನಾವು ಕಟ್ಟ ಬೇಕಾದ ಕರ್ನಾಟಕದ ಓದು ಎಂಬ ತಿಳಿವಿನ ವಲಯವು ಹಲವು ತಿಳಿವಿನ ವಲಯಗಳನ್ನು ಹೆಣೆಯ ಬೇಕಲ್ಲದೆ ತಿಳಿಯುವ ಚೌಕಟ್ಟನ್ನು ಕೂಡ ಹೊಸದಾಗಿ ಕಟ್ಟ ಬೇಕು. ಆಗ ಮಾತ್ರ ಕನ್ನಡದ ತಿಳಿವು ಕನ್ನಡದ ಮೂಲಕ ದೊರೆಯುವುದಕ್ಕೆ ದಾರಿಗಳು ಕಾಣತೊಡಗುತ್ತವೆ. ತಿಳಿಯುವ ಚೌಕಟ್ಟಿನಲ್ಲಿಒಳಗಿನವು ಹೊರಗಿನವು ಎಂದು ಬೇರೆಬೇರೆ ಮಾಡುವುದು ಸರಿಯಲ್ಲ ಎಂದು ಕೆಲವರು ಹೇಳಬಹುದು. ಹೀಗೆ ಹೇಳುವವರು ಈಗ ನಮಗೆ ದೊರೆತಿರುವ ಮತ್ತು ನಾವು ಬಳಸುತ್ತಿರುವ ತಿಳಿಯುವ ಚೌಕಟ್ಟುಗಳು ಸರಿಯಾಗಿವೆಯೆಂದೂ ಅವುಗಳನ್ನು ಬೇಡವೆಂದು ಹೇಳಬಾರದೆಂದೂ ನಂಬಿದ್ದಾರೆ. ಜೊತೆಗೆ ಈ ಚೌಕಟ್ಟುಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆಂದು ಒಪ್ಪಿದ್ದಾರೆ. ತಿಳಿಯುವ ಬಗೆಯನ್ನು ಕಟ್ಟಿ ಹಾಕುವ ಒತ್ತಡಗಳು ಆಯಾ ಕಾಲದಲ್ಲಿ ಆಯಾ ಸಂಸ್ಕೃತಿಗಳಲ್ಲಿ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಅವರು ಮರೆತಿರುತ್ತಾರೆ. ಇಲ್ಲವೇ ಅಂತಹ ಒತ್ತಡಗಳು ನಮ್ಮನ್ನು ಕಾಡಿಸ ಬಾರದೆಂದು ಹೇಳುತ್ತಾರೆ. ಹೀಗೆ ಒಪ್ಪಿದ್ದರಿಂದಲೇ ಈ ನಾಡು ನುಡಿಗಳು ಯಾವಾಗಲೂ ಯಾರೋ ಹೇಳಿದ್ದನ್ನು ಮರು ನುಡಿಯುವ ನೆಲೆಗೆ ಬಂದು ನಿಂತಿವೆ. ಇದು ಬದಲಾಗ ಬೇಕಾದರೆ ತಿಳಿವಿನ ಮಾಹಿತಿಗಳ ಒಡಲಲ್ಲೇ ಹುಟ್ಟುವ ತಿಳಿವಿನ ಚೌಕಟ್ಟುಗಳನ್ನೂ ಕಂಡುಕೊಳ್ಳಬೇಕು. ಇದು ಸರಾಗವಾದ ಹಾದಿಯಲ್ಲ. ಎಲ್ಲಕಿಂತ ದೊಡ್ಡ ತೊಡರೆಂದರೆ ಮೇಲೆ ಪಟ್ಟಿ ಮಾಡಿದ ಮಾನವಿಕ ತಿಳಿವಿನ ವಲಯಗಳು ಕರ್ನಾಟಕವನ್ನು ಕಾಣುವ ಬಗೆಯಲ್ಲೇ ಈಗಿರುವಂತೆ ಏರುಪೇರುಗಳಿವೆ. ಕೆಲವು ಕಡೆ ನಿನ್ನೆಗಳ ಕಡೆಗೆ ಒತ್ತು ಹೆಚ್ಚಿದ್ದರೆ ಮತ್ತೆ ಕೆಲವು ಕಡೆ ಇಂದಿಗೆ ಒತ್ತಿದೆ. ಕೆಲವು ನಾಳೆಗಳತ್ತ ಮೊಗ ತಿರುಗಿಸಿವೆ. ಕೆಲವು ವಲಯಗಳು ಕರ್ನಾಟಕವನ್ನು ಬಿರುಕುಗಳಿಲ್ಲದ ಒಂದೇ ಹಾಸು ಎಂದು ತಿಳಿದರೆ ಮತ್ತೆ ಕೆಲವು ವಲಯಗಳು ಇಲ್ಲಿ ಒಂದಕ್ಕೊಂದು ಹೊಂದಿಕೆಯಾಗದ ಹಲವು ನೆಲೆಗಳು ತಿಕ್ಕಾಟದಲ್ಲಿವೆಯೆಂದು ತಿಳಿಯುತ್ತವೆ. ಈ ಹಲವು ನೆಲೆಗಳ ನಂಟನ್ನು ನೋಡುವ ಬಗೆಯೂ ಕೂಡ ಬೇರೆ ಬೇರೆಯಾಗಿದೆ. ಈ ಎಲ್ಲ ಗೋಜಲುಗಳನ್ನು ಬಿಡಿಸಿಕೊಂಡು ನಾವೀಗ ಕರ್ನಾಟಕದ ಓದು ಎಂಬ ತಿಳಿವಿನ ವಲಯವನ್ನು ಕಟ್ಟುಬೇಕು. ಹೆಚ್ಚಿನ ಓದಿನಲ್ಲಿ ಈ ತಿಳಿವಿನ ವಲಯ ನೆಲೆಗೊಳ್ಳ್ಳುವಂತೆ ಮಾಡಬೇಕು. ಆಗ ಮಾತ್ರ ಕನ್ನಡದ ಮೂಲಕ ತಿಳಿವನ್ನು ಪಡೆಯುವ ಆಯ್ಕೆಯಿಂದಾಗಿ ಪಡೆಯುವ ನುಡಿಯಾಗಿ ಉಳಿದು ಬಿಟ್ಟಿರುವ ಕನ್ನಡ, ಬರಲಿರುವ ದಿನಗಳಲ್ಲಿ ಕೊಡುವ ನುಡಿಯಾಗಿಯೂ ಬದಲಾಗಬಲ್ಲುದು. ಹೀಗೆ ಮಾಡುತ್ತ ಕುಳಿತರೆ ನಾವು ಬಾವಿಯ ಕಪ್ಪೆಗಳಾಗುತ್ತೇವೆ ಎಂದು ಹೇಳುವವರೂ ಇದ್ದಾರೆ. ದಿಟ. ಆದರೆ ಕಡಲನ್ನು ನೋಡುವ ಇರಾದೆ ತೋರುತ್ತ ನಮ್ಮ ಸುತ್ತಲಿನ ಕೆರೆಕುಂಟೆಗಳು ಬತ್ತಿಹೋಗುತ್ತಿರುವುದನ್ನು ಮರೆಯಬಾರದಲ್ಲವೇ? ಹಿಂದಿನ ಓಣಿಯ ಜಗಳವೇ ಇನ್ನೂ ಕೊನೆಗೊಂಡಿಲ್ಲವಾದ್ದರಿಂದ ನಾನು ಯಾವುದೋ ದೂರದ ಹೊರನಾಡಿನಲ್ಲಿ ನನ್ನ ಕವಿತೆಗಳನ್ನು ಓದಲು ಹೋಗುವ ಬಯಕೆ ಇಲ್ಲ ಎಂದು ಕವಿ ಬೇಂದ್ರೆಯವರು ಹೇಳಿದ್ದು ಕೇವಲ ನಗೆಚಾಟಿಕೆಯ ಮಾತಷ್ಟೇ ಅಲ್ಲವಷ್ಟೆ

ಗುರುವಾರ, ಜನವರಿ 6, 2011

ಬಣ್ಣದ ಬದುಕಿನಿಂದ ಡೊಳ್ಳು ಕುಣಿತಕ್ಕೆ ಮುಂದಾದ ಮಹಿಳೆಯರು

ಭೀಮಣ್ಣ ಗಜಾಪುರ (ಪುರುಷರು ಮಾತ್ರವೇ ಭಾಗವಹಿಸುತ್ತಿದ್ದ ಜನಪದ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಇದನ್ನು ಹೇಗೆ ಗ್ರಹಿಸಬೇಕು ಎನ್ನುವ ಬಗ್ಗೆ ತಾತ್ವಿಕವಾಗಿ ಇನ್ನು ಆಲೋಚಿಸಬೇಕಿದೆ. ಆದರೆ ಈ ಬದಲಾವಣೆಯ ಚಹರೆಗಳನ್ನು ಹಿಡಿಯಲು ಸೂಕ್ಷ್ಮವಾಗಿ ಅವುಗಳ ಬೆಳವಣಿಗೆಯನ್ನು ಗಮನಿಸಬೇಕಿದೆ. ವಿರುಪಾಪುರದ ಮಹಿಳೆಯರ ಡೊಳ್ಳು ಕಲೆಯ ಕಥಾನಕವನ್ನು ಕೂಡ್ಲಿಗಿಯ ಕ್ರಿಯಾಶೀಲ ಪತ್ರಕರ್ತ ಭೀಮಣ್ಣ ಗಜಾಪುರ ಅವರು ಇಲ್ಲಿ ಹಿಡಿದಿಡಲು ಪ್ರಯತ್ನಿಸಿದ್ದಾರೆ. –ಸಂ) ಬಣ್ಣ ಹಚ್ಚಿ ರಂಗಸಜ್ಜಿಕೆಯ ಮೇಲೆ 25ವಷ೯ಗಳಿಗಿಂತಲೂ ಹೆಚ್ಚು ಕಾಲ ನಟನೆ ಮತ್ತು ನಾಟ್ಯದ ಮೂಲಕ ರಂಗಾಸಕ್ತರನ್ನು ಸೆಳೆದ ಕೂಡ್ಲಿಗಿ ತಾ.ವಿರುಪಾಪುರ ಎಂಬ ಪುಟ್ಟ ಹಳ್ಳಿಯ ಹತ್ತಾರು ಕಲಾವಿದೆಯರು ಈಗ ಇಳಿವಯಸ್ಸಿನಲ್ಲಿಯೂ ತಮ್ಮ ಕ್ರಿಯಾಶೀಲತೆಯಿಂದ ಈಗ ಡೊಳ್ಳುಕುಣಿತ ಕಲಿಯಲು ಮುಂದಾಗಿದ್ದು ಈ ಮೂಲಕ ಹಿರಿಯ ರಂಗಕಲಾವಿದೆಯರು ತಮ್ಮ ಹಳ್ಳಿಯ ಇತರೆ ಕಿರಿಯ ರಂಗನಟಿಯರಿಗೂ ಮರೆಯಾಗುತ್ತಿರುವ ಭಜನೆ,ಕೋಲಾಟ,ಬಯಲಾಟ, ಜಾನಪದ ಸಣ್ಣಾಟ,ಡೊಳ್ಳುಕುಣಿತ ಕಲಿಸುವುದರ ಮೂಲಕ ಇಡೀ ಹಳ್ಳಿಯಲ್ಲಿಯೇ ಸಾಂಸ್ಕ್ರುತಿಕ ವಾತಾವರಣ ಮೂಡಿಸಿರುವುದು ಇಲ್ಲಿಯ ರಂಗನಟಿಯರ ಸಾಧನೆಯಾಗಿದೆ. ಬಣ್ಣ ಹಚ್ಚಿ ಹಳ್ಳಿಗಳಲ್ಲಿ ಪೌರಾಣಿಕ,ಐತಿಹಾಸಿಕ,ಸಾಮಾಜಿಕ ನಾಟಕಗಳಲ್ಲಿ ನಿರಂತರ 35-40ವಷ೯ಗಳ ಕಾಲ ರಂಗಭೂಮಿಯಲ್ಲಿಯೇ ಬದುಕನ್ನು ಕಂಡ ವಿರುಪಾಪುರದ ಹತ್ತಾರು ಮಹಿಳೆಯರು ಇನ್ನೇನು ನಮ್ಮ ವಯಸ್ಸು ಇಳಿಮುಖವಾಗ್ತಿದೆ ಸಾಕಾಪ್ಪಾ ಈ ನಟನೆ ಸಹವಾಸ ಎಂದು ಮನೆಯಲ್ಲಿ ಇರಬಹುದಾಗಿತ್ತು. ಆದರೆ ವಿರುಪಾಪುರದ ಈ ಹಿರಿಯ ರಂಗನಟಿಯರು ತಮ್ಮ ಹಳ್ಳಿಯ ಈಗಿನ ಯುವ ವಯಸ್ಸಿನ ರಂಗನಟಿಯರಿಗೆ ಈಗ ಮಾಗ೯ದಶ೯ಕರಾಗಿ ರಂಗಕಲೆಯ ಜೊತೆಗೆ ಅವರಿಗೆ ನಮ್ಮ ಹಳ್ಳಿಗಳಿಂದ ಮರೆಯಾಗುತ್ತಿರುವ ಗ್ರಾಮೀಣ ಕಲೆಗಳನ್ನು ಕಲಿಸುತ್ತಾ ಇದರ ಜೊತೆಗೆ ತಾವು ಅಭಿನಯಿಸುತ್ತಾ ಇಡೀ ಗ್ರಾಮವನ್ನೇ ಕಲೆಯ ತವರೂರಾಗಿ ಮಾಡಿರುವ ಇಲ್ಲಿಯ ಹಿರಿಯ ರಂಗನಟಿಯರ ಕಾಯ೯ ಮಾತ್ರ ಮಾದರಿಯಾಗಿದೆ. ವಿರುಪಾಪುರ ಗ್ರಾಮದ ಪರಿಶಿಷ್ಠ ಪಂಗಡಕ್ಕೆ ಸೇರಿದ ಇಲ್ಲಿಯ ಹಿರಿಯ ರಂಗನಟಿ ಎಸ್.ಅಂಜಿನಮ್ಮ , ಬಿ.ಗಂಗಮ್ಮ,ಕೆ.ನಾಗರತ್ನಮ್ಮ,ಯು.ಶಾರಾದಾ, ಕೂಡ್ಲಿಗಿ ದುರುಗಮ್ಮ, ಟಿ.ಹಂಪಮ್ಮ, ಬಿ.ನಾಗಮ್ಮ, ಎಸ್.ನಾಗವೇಣಿ, ಕೆ.ರಂಗವೇಣಿ, ಬಿ.ಭಾಗ್ಯ, ಬಿ.ವಿಜಯಲಕ್ಷ್ಮಿ ಸೇರಿದಂತೆ ಇಲ್ಲಿಯ ಹತ್ತಾರು ರಂಗನಟಿಯರು ಈಗಾಗಲೇ ನೂರಾರು ನಾಟಕಗಳಲ್ಲಿ ಅಭಿನಯಿಸಿದ್ದು ಈಗ ಈ ಎಲ್ಲಾ ರಂಗನಟಿಯರು ಶೖತಿಲಯ ಮಹಿಳಾ ಕಲಾಸಂಘ ರಚಿಸಿಕೊಂಡೂ ಏನಾದರೂ ಸಾಧಿಸಬೇಕು ಎಂದು ನಿಧಾ೯ರ ಕೈಗೊಂಡರು ಆಗ ಪರಿಶಿಷ್ಠ ವಗ೯ದ ಮಹಿಳಾ ಕಲಾವಿದೆಯರಿಗೆ ಕನ್ನಡ ಮತ್ತು ಸಂಸ್ಕ್ಕುತಿ ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ನೀಡುವಲ್ಲಿ ಸಹಾಯಕ ನಿಧೇ೯ಶಕ ಚೋರನೂರು ಕೊಟ್ರಪ್ಪ ಮುಂದೆ ಬಂದರು. ಅಲ್ಲಿಂದ ಶುರವಾಯ್ತು ನೋಡಿ ಈ ಹಳ್ಳಿಯ ದಿಟ್ಟಮಹಿಳೆಯರ ಸಾಧನೆಗಳು ವಿರುಪಾಪುರದಲ್ಲಿಯ ಈ ಶೖತಿಲಯ ಮಹಿಳಾ ಕಲಾ ಸಂಘದ ವತಿಯಿಂದ 2008ರಲ್ಲಿ ಬಳ್ಳಾರಿ ಯುವಜನ ಮೇಳ ಮತ್ತು ಬೀದರ್ ಯುವಜನ ಮೇಳದಲ್ಲಿ ಇಲ್ಲಿಯ ಪ್ರತಿಭಾನ್ವಿತ ನಟಿಯರಿಂದ ಕೋಲಾಟ ಕಾಯ೯ಕ್ರಮ ಯಶಸ್ವಿಯಾಗಿ ನಡೆಸಿದರು. ನಂತರ ಇದೇ ಸಂಘದ ರಂಗನಟಿಯರು ಸಂಪೂಣ೯ ಎಲ್ಲಾ ಪಾತ್ರಗಳನ್ನು ಮಹಿಳೆಯರೇ ನಿವ೯ಹಿಸಿ ಸಂಗ್ಯಾ-ಬಾಳ್ಯಾ ನಾಟಕವನ್ನು ಗಂಡಸರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಅಭಿನಯಿಸಿದರು. ಮರೆಯಾಗುತ್ತಿರುವ ಸಂಗ್ಯಾ-ಬಾಳ್ಯಾ, ಪ್ರಭಾಮಣಿ, ಗಿರಿಜಾ ಕಲ್ಯಾಣ ಎಂಬ ನಮ್ಮ ಜಾನಪದ ಪೌರಣಿಕ ನಾಟಕಗಳನ್ನು ಅಭಿನಯಿಸಿದ ಕೀತಿ೯ ಇಲ್ಲಿಯ ರಂಗನಟಿಯರದ್ದು. ಡೊಳ್ಳುಕುಣಿತಕ್ಕೆ ಮುಂದಾದ ರಂಗನಟಿಯರುಃ ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆವತಿಯಿಂದ ಗುರು-ಶಿಷ್ಯ ಪರಂಪರೆ ಯೋಜನೆಯಡಿ ಮಹಿಳೆಯರಿಗೆ ಡೊಳ್ಳು ಕುಣಿತ ತರಭೇತಿ ಕಾಯ೯ಕ್ರಮ 6 ತಿಂಗಳು ಕೂಡ್ಲಿಗಿ ತಾಲೂಕು ವಿರುಪಾಪುರದಲ್ಲಿ ನಡೆಯುತ್ತಿದ್ದು ಬಳ್ಳಾರಿಯ ಸಹಾಯಕ ನಿಧೇ೯ಶಕ ಚೋರನೂರು ಕೊಟ್ರಪ್ಪ ಸಕಾ೯ರದ ಈ ಯೋಜನೆಯ ಸಹಾಯ ಪಡೆದುಕೊಳ್ಳಲು ಆಗಸ್ಟ್ 6ರಂದೇ ವಿರುಪಾಪುರದಲ್ಲಿ ತರಭೇತಿ ಪ್ರಾರಂಭಿಸಿದ್ದಾರೆ. ಇಲ್ಲಿಯ ರಂಗನಟಿಯರಿಗೆ ಡೊಳ್ಳು ಕುಣಿತದ ತರಭೇತಿ ಊರ ಹೊರಗಿನ ತೋಟದ ಮನೆಯಲ್ಲಿ ನಡೆಯುತ್ತಿದೆ. ಮುಖಕ್ಕೆ ಬಣ್ಣ ಹಚ್ಚಿಕೊಂಡು ಕಾಲಲ್ಲಿ ಗೆಜ್ಜೆ ಕಟ್ಟಿಕೊಂಡು ನಟನೆ ಮಾಡುತ್ತಿದ್ದು ರಂಗನಟಿಯರೀಗ ಕೊರಳಿಗೆ ಹದಿನೈದು ಕೆ.ಜಿ. ತೂಕದ ಪಾರಂಪರಿಕ ಡೊಳ್ಳು ಕೊರಳೊಳಗೆ ಹಾಕಿಕೊಂಡು ತರಭೇತಿ ಪಡೆಯುತ್ತಿದ್ದಾರೆ. ಗಂಡಸರಿಗೆ ಸೀಮಿತವಾಗಿದ್ದ ಡೊಳ್ಳುಕುಣಿತ ಈಗಾಗಲೇ ಸಾಗರ ಮತ್ತು ಬೆಳಗಾಂ ಮುಂತಾದ ಕೈಬೆರಳೆಣಿಕೆಯಷ್ಟು ಮಹಿಳಾ ತಂಡಗಳು ಈಗ ಮುಂದಾಗಿದ್ದು ಬಳ್ಳಾರಿ ಮತ್ತು ಸುತ್ತ ಮುತ್ತ ಜಿಲ್ಲೆಗಳಲ್ಲಿ ಕೂಡ್ಲಿಗಿ ತಾಲೂಕಿನ ವಿರುಪಾಪುರ ಗ್ರಾಮದ ಶೖತಿಲಯ ಕಲಾಸಂಘದ ಮಹಿಳೆಯರು ಡೊಳ್ಳುಕುಣಿತಕ್ಕೆ ಮುಂದಾಗಿರುವುದು ಈ ಭಾಗದಲ್ಲಿ ಮೊದಲಿಗರಾಗಿದ್ದಾರೆ. ವಿರುಪಾಪುರದ ಹತ್ತಾರು ರಂಗಕಲಾವಿದೆಯರು ತಾವು ಓದಿದ್ದು ಎರಡನೇ ತರಗತಿ ಇಲ್ಲವೇ ಮೂರನೇ ತರಗತಿ ಅಲ್ಲಿಗೆ ಕಲಿಯೋದು ಮುಗೀತು. ಬಡತನದಲ್ಲಿಯೇ ಇರೋ ನಮ್ಮ ಕುಟುಂಬ ಸಲವಲು ಚಿಕ್ಕವಯಸ್ಸಿನಲ್ಲಿಯೇ ತಮ್ಮ ತಾಯಿಂದಿರ ಜೊತೆ ಹಳ್ಳಿಗಾಡಿನಲ್ಲಿ ಹವ್ಯಾಸಿ ನಾಟಕಗಳಿಗೆ ಸ್ತ್ರೀ ಪಾತ್ರಾ ಮಾಡಲು ಹೋಗಾಬೇಕಾದ ಪರಿಸ್ಥಿತಿ ಬಂತು ಸಾರ್ ಅವರು ಕೊಟ್ಟ ಹತ್ತಾರು ರೂಪಾಯಿಯಿಂದಲೇ ನಮ್ಮಂತ ರಂಗನಟಿಯರ ಬದುಕು ಬೆಳಗ್ತಿತ್ತು. ಈಗ ಕಾಲ ಬದಲಾಗಿದೆ ವಯಸ್ಸಾಗುತ್ತಿದ್ದಂತೆ ನಮ್ಮನ್ನು ಹಳ್ಳಿಗಾಡಿನಲ್ಲಿ ನಾಟಕಕ್ಕೆ ಕರೆಯೋದು ಕಡಿಮೆಯಾಯಾಗ್ತಿದೆ, ಬಯಲಾಟದಲ್ಲಿಯೇ ಬದುಕು ಕಳೆದ ನಮ್ಮ ಜೀವನ ಈಗ ಬಯಲಾಗಿದೇ ಇರಲಿಕ್ಕೆ ಸರಿಯಾದ ಮನೆ ಇಲ್ಲ ಮಕ್ಕಳಿಗೆ ಉನ್ನತ ವಿಧ್ಯಭ್ಯಾಸ ಕೊಡಲು ಆಗ್ತಾ ಇಲ್ಲ ಸಾರ್ ಎನ್ನುತ್ತಾರೆ ವಿರುಪಾಪುರದ ಮತ್ತೊಬ್ಬ ಹಿರಿಯ ಕಲಾವಿದೆ ಬಿ.ಗಂಗಮ್ಮ.ಡೊಳ್ಳು ಕುಣಿತಕ್ಕೆ ಬೇಕಾದ ಕಾಲಲ್ಲಿಯ ಗೆಜ್ಜೆಗಳು, ಕಂಬಳಿಗಳನ್ನು ಕೊಡಿಸುವುದಾಗಿ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಒಪ್ಪಿಕೊಂಡಿದ್ದು, ಸಕಾ೯ರದಿಂದ ತರಬೇತಿ ಮುಗಿದ ತಕ್ಷಣ ನಮ್ಗೆ ನಾಲ್ಕು ಕೆಜಿ ತೂಕ ಇರೋ ಡೊಳ್ಳು ಕೊಡ್ತೀವಿ ಅಂತ ಚೋರನೂರು ಕೊಟ್ರಪ್ಪಣ್ಣನೋರು ತಿಳಿಸ್ಯಾರ ಸಾರ್, ಸಕಾ೯ರ ನಮ್ಗೆ ಡೊಳ್ಳು ಕುಣಿತಕ್ಕೆ ಸಹಾಯ ಮಾಡ್ತಿದೆ, ಸೊನ್ನ ಗ್ರಾಮದ ಮಲ್ಲೇಶಪ್ಪ ನಮ್ಗೆ ಚೆನ್ನಾಗಿ ಡೊಳ್ಳುಕುಣಿತ ತರಭೇತಿ ನೀಡ್ತಾ ಇದ್ದಾರೆ. ಈ ಸೌಲಭ್ಯ ಪಡೆಯೋದಕ್ಕೆ ಕೂಡ್ಲಿಗಿ ಬ್ಯಾಳಿ ಶಿವಪ್ರಸಾದಗೌಡ, ಕಣವಿ ವೀರಯ್ಯಸ್ವಾಮಿ, ಚಂದ್ರಾಚಾರಿ ಮುಂತಾದೋರು ಸಹಾಯ ಮರೆಯೋಂಗಿಲ್ರೀ ಎನ್ನುತ್ತಾರೆ ವಿರುಪಾಪುರದ ಹಿರಿಯ ರಂಗನಟಿ ಎಸ್.ಅಂಜಿನಮ್ಮ. ಮೂರನೇ ತರಗತಿ ಓದಿದರೂ ಒತ್ತಕ್ಷರಗಳನ್ನು ಯಾವೊಬ್ಬ ಎಂ.ಎ. ಓಧಿದವರಿಗೂ ಕಡಿಮೆ ಇಲ್ಲದೇ ಓದುವ ಇಲ್ಲಿಯ ರಂಗನಟಿಯರ ಛಲ ಅಚಲವಾಗಿದೆ. ಬದುಕು ಬರಡಾದರೂ ಸಮಾಜಮುಖಿಯಾಗಿ ಅಕಾಡೆಮಿಗಳು ಮಾಡದ ಕಾಯ೯ಗಳನ್ನು ಗ್ರಾಮೀಣ ಬಾಗದ ಈ ಅನಕ್ಷರಸ್ಥ ರಂಗನಟಿಯರು ಮರೆಯಾಗುತ್ತಿರುವ ಕಲೆಗಳನ್ನು ಉಳಿಸುವಲ್ಲಿ ಶ್ರಮಿಸುತ್ತಿರುವುದು ಶ್ಲಾಘನೀಯ

ಸೋಮವಾರ, ಜನವರಿ 3, 2011

Ugadi Celebration2008-Kolata

ಕನ್ನಡ ಸಂಘದ ಮಹಿಳೆಯರ ಕೋಲಾಟವಿದು. ಕರ್ನಾಟಕದ ಜನಪದ ಕಲೆಗಳಲ್ಲಿ ಪುರುಷ ಪ್ರಧಾನ ಕಲೆಗಳಿಗೆ ಮಹಿಳೆಯರ ಪ್ರವೇಶವಾಗುತ್ತಿದೆ. ಅದು ಒಳ್ಳೆಯ ಬೆಳವಣಿಗೆ. ಡೊಳ್ಳು ಕಲೆ, ವೀರಗಾಸೆ, ಕೋಲಾಟ, ಮುಂತಾದ ಕಲೆಗಳನ್ನು ಮಹಿಳೆಯರು ಪ್ರವೇಶಿಸಿ ಆ ಕಲೆಗಳ ಗ್ರಹಿಕೆಯ ನೆಲೆಗಳನ್ನು ಬದಲಿಸಿದ್ದಾರೆ. ಆ ನೆಲೆಯಲ್ಲಿ ಜಾನಪದ ಅಧ್ಯಯನ ಮಾಡುವ ಅಗತ್ಯವಿದೆ.