ಮಂಗಳವಾರ, ಫೆಬ್ರವರಿ 22, 2011

ಗೋ.ರು. ಚನ್ನಬಸಪ್ಪ ಅವರೊಂದಿಗೆ ಮಾತುಕತೆ



( ಗೋ.ರು. ಚನ್ನಬಸಪ್ಪ ಅವರು ಹಿರಿಯ ಜಾನಪದ ತಜ್ಞರು, ಸದ್ಯದ ಕರ್ನಾಟಕ ಜಾನಪದ ಅಕಾಡೆಮಿಯ ಕ್ರಿಯಾಶೀಲ ಅಧ್ಯಕ್ಷರು. ಅವರು ಕನ್ನಡ ಜಾನಪದ ಕ್ಷೇತ್ರಕ್ಕೆ ಗುರುತರವಾದ ಸೇವೆ ಸಲ್ಲಿಸಿದ್ದಾರೆ. ಭಾರತದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸುವಲ್ಲಿ ಅವರ ಪಾತ್ರ ದೊಡ್ಡದು. ಮೈದುನ ರಾಮಣ್ಣ, ಗ್ರಾಮಗೀತೆಗಳು, ಬಾಗೂರು ನಾಗಮ್ಮ ಮತ್ತು ಇತರ ಹಾಡುಗಳು, ಮುಂತಾದ ಕೃತಿಗಳು ಅವರ ವಿದ್ವತ್ತಿಗೆ ಸಾಕ್ಷಿಯಾಗಿವೆ. 1977 ರಲ್ಲಿ ಅವರು ಸಂಪಾದಿಸಿದ `ಕರ್ನಾಟಕ ಜನಪದ ಕಲೆಗಳು’ ಇಂದಿಗೂ ಮಾದರಿ ಕೃತಿಯಾಗಿದೆ. ಅವರ ಇತ್ತೀಚಿನ ‘ಆಲೋಚನೆ’ ಎನ್ನುವ ಕೃತಿಯ ತನಕ ಅವರ ಜಾನಪದ ಅಧ್ಯಯನದ ಬೇರೆ ಬೇರೆ ನೆಲೆಯ ಆಲೋಚನ ವಿನ್ಯಾಸಗಳು ಜಾನಪದ ಅಧ್ಯಯನಕಾರರಿಗೆ ಉಪಯುಕ್ತವಾಗಿವೆ . ಗೋ.ರು.ಚ ಅವರ ಆಲೋಚನೆಯಲ್ಲಿ ಸಾಂಪ್ರದಾಯಿಕ ಜಾನಪದ ಅಧ್ಯಯನ ವಿದಾನಗಳು ಬದಲಾಗಿಲ್ಲವಾದರೂ, ಈಚೆಗೆ ಇದನ್ನು ಮೀರುವ ಪ್ರಯತ್ನದಲ್ಲಿದ್ದಂತೆ ಕಾಣುತ್ತದೆ. ಅವರು ಕನ್ನಡ ಜಾನಪದ ಬ್ಲಾಗಿಗಾಗಿ ಮಾತನಾಡಿದ ಮಾತುಕತೆ ಇಲ್ಲಿದೆ-ಅರುಣ್ )


ಅರುಣ್ : ಸಾರ್, ನೀವು ಜಾನಪದ ಅಕಾಡೆಮಿ ಅಧ್ಯಕ್ಷರಾದಂದಿನಿಂದ ಒಳ್ಳೆಯ ಕೆಲಸಗಳು ನಡೆಯುತ್ತಿವೆ, ಅಕಾಡೆಮಿ ಕ್ರಿಯಾಶೀಲವಾಗಿದೆ. ಸದ್ಯದ ಅಕಾಡೆಮಿಯ ಚಟುವಟಿಕೆಗಳಾವುವು?

ಗೋ.ರು.ಚ: ಅಕಾಡೆಮಿ ಜಾನಪದ ಕುರಿತಂತೆ ತುಂಬಾ ಕ್ರಿಯಾಶೀಲವಾಗಿ ಕೆಲಸ ಮಾಡ್ತಿದೆ, ಇತ್ತೀಚಿಗೆ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾನಪದದ ಬಗ್ಗೆ ಆಸಕ್ತಿಯನ್ನು ಬೆಳೆಸಲು ಜಾನಪದ ಜಗುಲಿ ಎನ್ನುವ ಕಾರ್ಯಕ್ರಮವನ್ನು ಕಾಲೇಜುಗಳಲ್ಲಿ ಹಮ್ಮಿಕೊಳ್ಳುತ್ತಿದ್ದೇವೆ. ಮೊದಲು ಕಾಲೇಜುಗಳನ್ನು ಆಯ್ಕೆ ಮಾಡಿ, ಅವರನ್ನು ಸಂಪರ್ಕಿಸಿ ಒಂದು ಜಾನಪದ ಕಾರ್ಯಕ್ರಮವನ್ನು ಆಯೋಜಿಸುವುದು. ಅದರ ಸ್ವರೂಪ ಅಂದ್ರ, ಒಬ್ರು ಜಾನಪದ ವಿದ್ವಾಂಸರು ಮಾತಾಡ್ತಾರೆ, ಮಾತಿನ ಬಳಿಕ ವಿದ್ಯಾರ್ಥಿಗಳು ಚರ್ಚೆ ಸಂವಾದ ಮಾಡ್ತಾರೆ. ಮತ್ತೆ ಆ ಭಾಗದ ಸ್ಥಳೀಯ ಕಲಾವಿದರು, ಅಥವಾ ಕರ್ನಾಟಕದ ಬೇರೆ ಬೇರೆ ಕಡೆಗಳಿಂದ ಕರೆಯಿಸಿದ ಜಾನಪದ ಕಲಾವಿದರಿಂದ ಕಲಾಪ್ರದರ್ಶನ ನಡೆಯುತ್ತೆ.
ಇನ್ನು ಕಾಲೇಜು ಅಧ್ಯಾಪಕರನ್ನು ಜಾನಪದ ಸಂಗ್ರಹ ಮಾಡಲು ಬಳಸಿಕೊಳ್ಳಬಹುದು ಎಂದು ತಿಳಿದು, ಅಧ್ಯಾಪಕರಿಗೆ ಕ್ಷೇತ್ರಕಾರ್ಯದ ತರಬೇತಿಯನ್ನು ಜಾನಪದ ವಿದ್ವಾಂಸರಿಂದ ಕೊಡಿಸ್ತೀವಿ. ಇಲಾಖೆಯವರೇ ಕೆಲವು ಅಧ್ಯಾಪಕರನ್ನು ಇದಕ್ಕಾಗಿ ನಿಯೋಜನೆ ಮಾಡ್ತಿದಾರೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗ್ತಿದೆ. ಇದನ್ನು ಇನ್ನಷ್ಟು ಕ್ರಿಯಾಶೀಲವಾಗಿ ಮಾಡಬೇಕು.
ಮತ್ತೊಂದು ಜಾನಪದ ಡಿಕ್ಷನರಿ ಕೆಲಸ ನಡೀತಿದೆ. ಇದು ಒಟ್ಟು ಕನ್ನಡದ ಸಮಗ್ರ ಜಾನಪದ ನುಡಿಗಟ್ಟುಗಳ ಕೋಶ. ಇದೊಂದು ದೊಡ್ಡ ಪ್ರಯತ್ನ. ಕರ್ನಾಟಕದ ಎಲ್ಲಾ ಭಾಗದ ಜಾನಪದ ನುಡಿಗಟ್ಟುಗಳು ಸೇರಿಸುವಂತಹ ಪ್ರಯತ್ನ. ಎಲ್ಲಾ ಭಾಗದಿಂದಲೂ ಕ್ಷೇತ್ರ ಕಾರ್ಯಕರ್ತರನ್ನು ನೇಮಿಸಿ ಕೆಲಸ ಮಾಡಿಸ್ತಿದಿವಿ. ಸದ್ಯಕ್ಕೆ ಆ ಕೆಲಸ ನಡೀತಿದೆ.
ಬೀದರ್ನಲ್ಲಿ ಏಪ್ರಿಲ್ ೨೩, ೨೪, ೨೫ ರಂದು ಅಖಿಲ ಭಾರತ ಜಾನಪದ ಸಮ್ಮೇಳನ ಮಾಡ್ತಿದಿವಿ. ಇಂತಹ ಕಾರ್ಯಕ್ರಮ ಮೊದಲ ಪ್ರಯತ್ನ. ಭಾರತದ ಬೇರೆ ಬೇರೆ ರಾಜ್ಯಗಳಿಂದ ಜಾನಪದ ವಿದ್ವಾಂಸರು, ಜನಪದ ಕಲಾವಿದರೂ ಬರ್ತಿದಾರೆ, ಸೆಂಟ್ರಲ್ ಅಕಾಡೆಮಿ ಈಶಾನ್ಯ ಭಾರತದ ಜಾನಪದ ಕಲಾವಿದರನ್ನು ಸಮ್ಮೇಳನಕ್ಕಾಗಿ ಕಳಿಸಿಕೊಡ್ತಿದಾರೆ. ಇದರ ತಯಾರಿ, ಮುಂತಾದ ಕೆಲಸಗಳನ್ನು ಮಾಡ್ತಿದಿವಿ.

ಅರುಣ್: ಸಾರ್, ನೀವು ಕರ್ನಾಟಕದಲ್ಲಿ ಜಾನಪದ ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಹಗಲಿರುಳು ಶ್ರಮಿಸಿದವರು. ನಿಮ್ಮ ಮುಂದಾಳತ್ವದ ಹೋರಾಟದ ಫಲವೇ ಇಂದಿನ ಜಾನಪದ ವಿಶ್ವವಿದ್ಯಾಲಯ. ಅದಕ್ಕಾಗಿ ವಯಕ್ತಿವಾಗಿ ನಿಮ್ಮನ್ನು ಅಭಿನಂದಿಸುವೆ. ಸಾರ್, ನಿಮ್ಮ ಕನಸಿನ ಜಾನಪದ ವಿವಿಯ ಮೊದಲ ಆದ್ಯತೆಯ ಕೆಲಸ ಯಾವುದಾಗಿರಬೇಕು ?

ಗೋ.ರು.ಚ: ಹೌದು ಕರ್ನಾಟಕದ ಸಂದರ್ಭದಲ್ಲಿ ಜಾನಪದ ವಿವಿ ಆಗಿದ್ದು ದೊಡ್ಡ ಘಟನೆ. ಸರಕಾರ ಒಪ್ಪಿಗೆ ಕೊಟ್ಟಿದೆ, ನಾವು ಸರಕಾರಕ್ಕೆ ವರದಿ ಸಲ್ಲಿಸಿದಿವಿ, ಇನ್ನು ಸ್ಥಳ ಆಯ್ಕೆಯಾಗಿ ಚಟುವಟಿಕೆ ಆರಂಭವಾಗಬೇಕು ಅಷ್ಟೆ. ಜಾನಪದ ವಿವಿಯಲ್ಲಿ ಜಾನಪದಕ್ಕೆ ಸಂಬಂದಿಸಿದ್ದೆಲ್ಲಾ ಸಿಗುವಂತಾಗಬೇಕು. ಇನ್ನೂ ಸಂಗ್ರಹಿಸದೇ ಇರುವ ಜಾನಪದ ಸಾಮಗ್ರಿಗಳನ್ನು ಅವುಗಳು ನಶಿಸುವ ಮುನ್ನ ಸಂಗ್ರಹಿಸುವ ಕೆಲಸ ಮೊದಲಾಗಬೇಕು. ಹೊಸ ತಲೆಮಾರಿನಲ್ಲಿ ಜಾನಪದದ ಬಗ್ಗೆ ಆಸಕ್ತಿ ಮೂಡಿಸುವಂತಹ ಯೋಜನೆಗಳನ್ನು ರೂಪಿಸಬೇಕು. ನಶಿಸುತ್ತಿರುವ ಜಾನಪದವನ್ನು ಉಳಿಸಲು ಅನುವಾಗುವಂತಹ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಡಬೇಕು. ಜಾನಪದ ವಿವಿಯಲ್ಲಿ ಗ್ರಾಮ ಭಾರತವನ್ನು ಬಿಂಬಿಸುವಂತೆ, ಮಾದರಿ ಗ್ರಾಮೀಣ ಹಳ್ಳಿಯೊಂದನ್ನು ಸ್ಥಾಪಿಸಲಾಗುವುದು. ಇಲ್ಲಿ ಜಾನಪದ ಆಚರಣೆ, ಕಲೆ, ಹಬ್ಬ, ಮುಂತಾದವುಗಳು ವರ್ಷಪೂರ್ತಿ ನಡೆಯುವಂತೆ ಅದನ್ನು ರೂಪಿಸಲಾಗುವುದು. ಇಲ್ಲಿ ಜಾನಪದಕ್ಕೆ ಸಂಬಂದಿಸಿದ ಎಲ್ಲ ಬಗೆಯ ಪಾರಂಪರಿಕ ಕರಕುಶಲ ವಸ್ತು ಸಾಮಗ್ರಿಗಳು ಸಿಗುವಂತೆ ಮಾಡಲಾಗುವುದು. ಇಂತಹ ಕೆಲವು ಯೋಚನೆಗಳಿವೆ.

ಅರುಣ್: ಸಾರ್, ಇಂದು ತಂತ್ರಜ್ಞಾನ ತೀವ್ರವಾಗಿ ಬೆಳೆಯುತ್ತಿದೆ. ಎಲ್ಲವೂ ಅಂತರ್ಜಾಲದಲ್ಲಿ ಸಿಗಬೇಕು ಎನ್ನುವ ಭಾವನೆ ದಟ್ಟವಾಗುತ್ತಿದೆ, ಈ ಹೊತ್ತಲ್ಲಿ ಕನ್ನಡ ಜಾನಪದ ಎಂದು ಗೂಗಲ್ ಗೆ ಕೊಟ್ಟು ಹುಡುಕಿದರೆ ಬರುವ ಪಲಿತಾಂಶಗಳು ನಿರಾಸೆ ಹುಟ್ಟಿಸುತ್ತವೆ. ಈ ನಿಟ್ಟಿನಲ್ಲಿ ಅಕಾಡೆಮಿ ಯಾಕೆ ಯೋಚಿಸಬಾರದು?

ಗೋ.ರು.ಚ: ಈ ನಿಟ್ಟಿನಲ್ಲಿ ಯೋಚಿಸೋ ಅಗತ್ಯನೂ ಇದೆ. ಈಗಾಗಲೇ ನಮ್ಮ ಅಕಾಡೆಮಿಯ ಮಾಹಿತಿ, ಪೋಟೋ ಎಲ್ಲವುಗಳನ್ನು ಜ್ಞಾನ ಆಯೋಗಕ್ಕೆ ಕೊಟ್ಟಿದ್ದೇವೆ. ಅವರು ಆಯಾ ಮಾಹಿತಿಯನ್ನು ಅಂತರ್ಜಾಲದಲ್ಲಿ ಹಾಕಿ ಎಲ್ಲರಿಗೂ ಸಿಗುವಂತೆ ಮಾಡುತ್ತೇವೆ ಎಂದಿದ್ದಾರೆ. ಇನ್ನು ಜಾನಪದ ಡಿಕ್ಷನರಿಯನ್ನು ಸಿ.ಡಿ ರೂಪದಲ್ಲೂ ಒದಗುವಂತೆ ಮಾಡುವ ಯೋಚನೆ ಇದೆ. ನೀವು ಹೇಳುವಂತೆ ಕನ್ನಡ ಜಾನಪದದ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಸಿಗುವಂತಹ ಯೋಜನೆ ಹಮ್ಮಿಕೊಳ್ಳಬೇಕಿದೆ. ಅದಕ್ಕೆ ನಿಮ್ಮಂತ ಯುವಕರು ಮುಂದಾಗಬೇಕು.


ಅರುಣ್: ಸಾರ್ ಇತ್ತೀಚೆಗೆ ಜಾನಪದ ಫೆಲೋಶಿಪ್ ಕೊಟ್ಟು ಜಾನಪದದ ಬಗ್ಗೆ ಸಂಶೋಧನೆ ಉತ್ತೇಜಿವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ, ಇದರ ಉದ್ದೇಶ ಮತ್ತು ಆಯ್ಕೆ ಪ್ರಕ್ರಿಯೆ ಹೇಗೆ ?

ಗೋ.ರು.ಚ: ಈ ಯೋಜನೆ ಜಾನಪದ ಸಂಶೋಧನೆಗೆ ಯುವ ಜನಾಂಗವನ್ನು ತೊಡಗಿಸುವ ಗುರಿಯನ್ನು ಹೊಂದಿದೆ. ಮೊದಲು ಪತ್ರಿಕೆಗಳಲ್ಲಿ ಜಾಹೀರಾತು ಮಾಡಲಾಗುವುದು, ನಂತರ ಬಂದ ಅರ್ಜಿಗಳಲ್ಲಿ ಆಯ್ದ ಸಂಶೋಧಕರನ್ನು ಸಂದರ್ಶನಕ್ಕೆ ಕರೆಸಿ, ಜಾನಪದ ವಿದ್ವಾಂಸರ ಸಮಿತಿ ರಚಿಸಿ, ಆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು. ಈ ಆಯ್ಕೆಯಲ್ಲಿ ಪ್ರಾದೇಶಿಕತೆ, ಪರಿಶಿಷ್ಟ ಜಾತಿ, ಪಂಗಡ, ಮಹಿಳೆ ಮುಂತಾದ ಮೀಸಲಾತಿಯ ನ್ನು ಅನುಸರಿಸಲಾಗುವುದು. ಈ ವರ್ಷ ಐದು ಜನ ಆಯ್ಕೆಯಾಗಿದ್ದಾರೆ, ಅವರು ಆರು ತಿಂಗಳಿಗೊಮ್ಮೆ ವರದಿ ನೀಡುವುದು, ನಂತರ ಸಂಶೋಧನೆ ಮುಗಿದಾಗ ಅಕಾಡೆಮಿಗೆ ಸಲ್ಲಿಸುವುದು ಇಷ್ಟು ಇದರ ನಿಯಮ.
ಅರುಣ್: ಸಾರ್ ಇತ್ತೀಚೆಗೆ ಜಾನಪದದಲ್ಲಿ ಹಲವು ಬದಲಾವಣೆ ನಡೆಯುತ್ತಿದೆ, ಹೊಸ ಜಾನಪದ ಸೃಷ್ಟಿಯಾಗುತ್ತಿದೆ ಅದನ್ನು ನೀವು ಹೇಗೆ ಗ್ರಹಿಸುತ್ತೀರಿ?

ಗೋ.ರು.ಚ: ಬದಲಾವಣೆ ಜಗದ ನಿಯಮ, ಸಾಮಾಜಿಕ ವರ್ತನೆಗಳಲ್ಲಿ ಬದಲಾವಣೆಗಳು ನಡೆಯುತ್ತಿವೆ, ಜಾನಪದದಲ್ಲೂ ಬದಲಾವಣೆಗಳು ಆಗುತ್ತಿವೆ. ಅವುಗಳನ್ನು ಗುರುತಿಸುವ ಪ್ರಯತ್ನಗಳು ನಡೆಯಬೇಕು. ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲು ಅಕಾಡೆಮಿಗೆ ವಿದ್ವಾಂಸರ ಸಲಹೆ ಸೂಚನೆಗಳು ಬಂದರೆ ಅದನ್ನು ಸ್ವೀಕರಿಸಿ, ಅದಕ್ಕೆ ಪೂರಕವಾದ ಕೆಲಸಗಳನ್ನು ಅಕಾಡೆಮಿ ಮಾಡುತ್ತದೆ.

ಅರುಣ್: ಕೆಲವು ಮಾತುಗಳನ್ನು ಕನ್ನಡ ಜಾನಪದ ಬ್ಲಾಗ್ ಗಾಗಿ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು ಸಾರ್, ಕನ್ನಡ ಜಾನಪದ ಬ್ಲಾಗ್ ನಿರಂತರ ನಿಮ್ಮ ಸಂಪರ್ಕದಲ್ಲಿರುತ್ತದೆ. ನಮಸ್ಕಾರಗಳು.

ಸೋಮವಾರ, ಫೆಬ್ರವರಿ 21, 2011

ಡಿ.ಎನ್.ಶಂಕರ ಭಟ್ಟರೊಂದಿಗೆ ಒಂದು ಮಾತುಕತೆ

ಮಾತುಕತೆ ನಡೆಸಿದವರು- ಮೇಟಿ ಮಲ್ಲಿಕಾರ್ಜುನ, ಸಿರಾಜ್ ಅಹಮದ್

( ಭಾಷಾವಿಜ್ಞಾನಿ ಡಿ.ಎನ್. ಶಂಕರ ಭಟ್ಟರನ್ನು ಹೊಸ ತಲೆಮಾರಿನ ಲೇಖಕರಾದ ಮೇಟಿ ಮಲ್ಲಿಕಾರ್ಜುನ ಮತ್ತು ಸಿರಾಜ್ ಅಹಮದ್ ಮಾತಿಗೆಳೆದಾಗ, ನಡೆದ ಸಂವಾದದ ಭಾಗವಿದು. ಈ ಬರಹ ಮಯೂರ, ಮತ್ತು ಕೆಂಡಸಂಪಿಗೆ ಬ್ಲಾಗನಲ್ಲೂ ಪ್ರಕಟವಾಗಿದೆ. ಶಂಕರ ಭಟ್ ಅವರು ಕನ್ನಡ ನುಡಿಯ ನಡೆಯ ಬಗೆಗೆ ಅಪರೂಪದ ಒಳನೋಟಗಳನ್ನು ಕೊಟ್ಟಿದ್ದಾರೆ. ಆಡು ನುಡಿ ಜನಪದ ಭಾಷೆಯ ಬಗೆಗೂ ಅವರ ಮಾತುಗಳು ಕನ್ನಡವನ್ನು ಬೇರೆ ಬೇರೆ ದಿಕ್ಕುಗಳಿಂದ ನೋಡುವಂತೆ ಒತ್ತಾಯಿಸುತ್ತವೆ. ಹಾಗಾಗಿ ಈ ಬರಹವನ್ನು ಕನ್ನಡ ಜಾನಪದ ಬ್ಲಾಗ್ ಓದುಗರ ಗಮನಕ್ಕೂ ತರಲು ಇಲ್ಲಿ ಮತ್ತೊಮ್ಮೆ ಪ್ರಕಟಿಸಲಾಗಿದೆ- ಅರುಣ್)

ಮೇಟಿ: ನೀವು ಮೂಲತಃ ಸಂಸ್ಕೃತ ವಿದ್ವಾಂಸರಾಗಿದ್ದುಕೊಂಡು ಕನ್ನಡದ ಬಗ್ಗೆ, ಭಾಷಾಶಾಸ್ತ್ರದ ಬಗ್ಗೆ ಹೇಗೆ ಆಸಕ್ತಿಯನ್ನು ಬೆಳೆಸಿಕೊಂಡಿರಿ?

ಶಂಕರ ಭಟ್ : ಹೌದು, ನಾನು ಮೂಲತಃ ಸಂಸ್ಕೃತದಲ್ಲಿ ಎಂಎ ಮಾಡಿದ್ದು. ಎಂಎನಲ್ಲಿ ಫೈಲಾಲಜಿ ಅಂತ ಒಂದು ಸಬ್ಜೆಕ್ಟ್ ಇತ್ತು. ಆಗ ಅದರ ಬಗ್ಗೆ ಒಂದು ಸ್ವಲ್ಪ ಆಸಕ್ತಿ ಹುಟ್ಟಿತು. ಅದಕ್ಕಿಂತ ಮುಖ್ಯವಾಗಿ ಕಿಟ್ಟೆಲ್ ಡಿಕ್ಷನರಿಯನ್ನು ರಿವೈಜ್ ಮಾಡಿದ ನಮ್ಮ ಅಜ್ಜ ತಾಯಿಯ ಸೋದರ ಮಾವ ಎಂ.ಮರಿಯಪ್ಪಭಟ್ಟರು ಒಂದು ಸಾರಿ, ಡೆಕ್ಕನ್ ಕಾಲೇಜಿನವರು ಕೊಯಮತ್ತೂರಿನಲ್ಲಿ ನಡೆಸುವ ಒಂದು ಸಮ್ಮರ್ ಸ್ಕೂಲ್ ಇದೆ. ಅದಕ್ಕೆ ನೀನು ಹೋಗಬಹುದು ಎಂದು ಹೇಳಿದರು. ನಲವತ್ತು ದಿನ ನಡೆದ ಆ ಸಮ್ಮರ್ ಸ್ಕೂಲ್ ನಲ್ಲಿ ಒಳ್ಳೊಳ್ಳೆಯ ವಿದ್ವಾಂಸರಿದ್ದರು. ಗ್ಲೀಸನ್ ಇದ್ದರು ಪಿ.ಬಿ.ಪಂಡಿತ್, ಕೇಲ್ಕರ್, ಘಾಟ್ಕೆ ಇದ್ದರು ಅವರೆಲ್ಲರ ಕಾರಣದಿಂದ ನನಗೆ ಭಾಷಾಶಾಸ್ತ್ರದ ಬಗ್ಗೆ ಬಹಳ ಕುತೂಹಲ ಹುಟ್ಟಿತು. ನಂತರ ಘಾಟ್ಕೆ ಅವರ ಬಳಿ ತುಳು ಭಾಷೆಯ ಬಗ್ಗೆ ಪಿಎಚ್.ಡಿ ಮಾಡಲು ಪುಣೆಗೆ ಹೋದೆ.

ಮೇಟಿ: ಎಪ್ಪತ್ತರ ದಶಕದಲ್ಲಿ ನೀವು ಕನ್ನಡದಲ್ಲಿ ಬರೆಯುತ್ತಿದ್ದಿರಿ. ನಂತರ ತೊಂಬತ್ತರ ದಶಕದವರೆಗೆ ಕನ್ನಡದಲ್ಲಿ ಯಾಕೆ ಬರೆಯಲೇ ಇಲ್ಲ?

ಶಂಕರ ಭಟ್ : ಮತ್ತೆ ಕನ್ನಡದಲ್ಲಿ ಬರೆಯಲಿಕ್ಕೆ ಚಂದ್ರಶೇಖರ ಕಂಬಾರರು ಕಾರಣ. ಒಂದು ಸಾರಿ ಯಾವುದೋ ಸೆಮಿನಾರಿಗೆ ಅಂತ ಕನ್ನಡ ವಿಶ್ವವಿದ್ಯಾಲಯಕ್ಕೆ ಹೋಗಿದ್ದೆ. ಆಗ ಅವರು ನೀವು ಕನ್ನಡದಲ್ಲಿ ಯಾವುದಾದರೂ ಒಂದು ಪುಸ್ತಕ ಕೊಡಲೇಬೇಕು ಎಂದು ಒತ್ತಾಯ ಮಾಡಿದರು. ಅವರು ಒತ್ತಾಯ ಮಾಡದಿದ್ದರೆ ನಾನು ಕನ್ನಡದಲ್ಲಿ ಮತ್ತೆ ಬರೆಯುತ್ತಿರಲಿಲ್ಲವೇನೋ. ಆಗ `ಕನ್ನಡಭಾಷೆಯ ಕಲ್ಪಿತ ಚರಿತ್ರೆ' ಎಂಬ ಪುಸ್ತಕ ಬರೆದೆ. ಅದರ ನಂತರ `ಕನ್ನಡ ಶಬ್ದ ರಚನೆ' ಎಂಬ ಪುಸ್ತಕ ಬರೆದೆ. ಎಲ್ಲ ರೆಡಿಯಾದ ಮೇಲೆ ಅಲ್ಲಿನ ಕುಲಪತಿಗಳು ಬದಲಾದರು ಅಂತ ಅದು ಅಲ್ಲಿಗೇ ನಿಂತುಹೋಯಿತು.

ಸಿರಾಜ್: ನೀವು ಎಪ್ಪತ್ತರ ದಶಕಲ್ಲಿ ಬರೆದಾಗ ನಿಮ್ಮ ಬರಹಗಳಿಗೆ ಎಂಥ ಪ್ರತಿಕ್ರಿಯೆ ಸಿಕ್ಕಿತು?

ಶಂಕರ ಭಟ್ : ಇಲ್ಲ ಯಾರೂ ಅದರ ಬಗ್ಗೆ ಗಮನ ವಹಿಸಲಿಲ್ಲ. ನನ್ನ ಮೊದಲ ಪುಸ್ತಕ ಬಂದಾಗ ಚಿದಾನಂದ ಮೂರ್ತಿಯಂಥ ವಿದ್ವಾಂಸರು ನಿಮ್ಮ ಪುಸ್ತಕವನ್ನು ಲೈಬ್ರರಿಯ ರ್ಯಾಕಿನಲ್ಲಿ ನೋಡಿದೆ ಅಂದರು. ಅದರೆ ಅದೇ ಇಂಗ್ಲಿಷ್ ನಲ್ಲಿ ಬರೆದ ಪುಸ್ತಕಗಳು ಆಮ್ ಸ್ಟರ್ ಡ್ಯಾಮ್, ಎಡಿನ್ ಬರಾ, ಜರ್ಮನಿ, ಆಕ್ಸ್ ಫರ್ಡ್ ಮುಂತಾದ ಕಡೆಗಳಲ್ಲಿ ಚರ್ಚೆಗೆ ಒಳಗಾಗಿವೆ. ಅಲ್ಲೆಲ್ಲ ನಾನು ವಿಸ್ತೃತವಾದ ಸಂಶೋಧನೆ, ಅಧ್ಯಾಪನದಲ್ಲಿ ತೊಡಗಿಕೊಂಡಿದ್ದೇನೆ.

ಸಿರಾಜ್: ನೀವು ಇಷ್ಟು ವರ್ಷ ಮಾಡಿರುವ ಕೆಲಸವನ್ನು ನೋಡಿದರೆ ಲಿಖಿತ ಭಾಷೆಗೂ ಮತ್ತು ಆಡುನುಡಿಗೂ ನಡುವೆ ಇರುವ ತಾರತಮ್ಯವನ್ನು ಅಳಿಸಿ ಹಾಕಿ ಅವೆರಡನ್ನೂ ಬ್ರಿಡ್ಜ್ ಮಾಡುವ ಕೆಲಸ ಮಾಡುತ್ತಿದ್ದೀರ ಅನ್ನಿಸುತ್ತೆ. ಇದರ ಬಗ್ಗೆ ಹೇಳಿ.

ಶಂಕರ ಭಟ್ : ನಾನು ಅವೆರಡರ ನಡುವಿನ ಅಂತರವನ್ನು ಅಳಿಸುವ ಪ್ರಯತ್ನವೇನು ಮಾಡ್ತಾಯಿಲ್ಲ. ನಾನು ಮಾಡ್ತಾಯಿರುವುದೇನಂದರೆ ಇಂದು ಎಲ್ಲರ ಕನ್ನಡ ಎಲ್ಲರದಾಗಿಲ್ಲ. ಉದಾಹರಣೆಗೆ ಪ್ರಜಾವಾಣಿ, ಉದಯವಾಣಿ, ಸಂಯುಕ್ತ ಕರ್ನಾಟಕ ಮುಂತಾದ ದಿನಪತ್ರಿಕೆಗಳು ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಪ್ರಕಟವಾದರೂ ಇವುಗಳ ಭಾಷೆ ಮಾತ್ರ ಒಂದೇ ಆಗಿರುತ್ತದೆ. ಇದನ್ನೇ ಇಂಗ್ಲಿಷ್ ನಲ್ಲಿ ಸ್ಟ್ಯಾಂಡರ್ಡ್ ಕನ್ನಡ ಎಂದೂ ಹೇಳುತ್ತಾರೆ. ಈ ಭಾಗಗಳ ಆಡುನುಡಿ ಬೇರೆಯಾಗಿರುತ್ತದೆ. ಆದರೆ ಎಲ್ಲರ ಕನ್ನಡ ಎನ್ನುವುದು ಆಡುನುಡಿಗೆ ಹತ್ತಿರವಾಗಿಲ್ಲ. ಇದು ಬರೀ ಸಂಸ್ಕೃತದಿಂದ ತುಂಬಿಹೋಗಿದೆ. ಹಾಗಾಗಿ ಮಕ್ಕಳಿಗೆ ಈ ಎಲ್ಲರ ಕನ್ನಡವನ್ನು ಕಲಿಯುವುದು ಕಷ್ಟವಾಗುತ್ತದೆ. ಉದಾಹರಣೆಗೆ, ಪ್ರಜಾವಾಣಿಯಲ್ಲಿ ನಾಯಿ ಎನ್ನುವುದಕ್ಕೆ ಶ್ವಾನವೆಂದೂ ಹಲ್ಲು ಎನ್ನುವುದಕ್ಕೆ ದಂತವೆಂದೂ ಬಳಸುತ್ತಾರೆ. ಇದು ಯಾರಿಗೂ ಅರ್ಥವಾಗುವುದಿಲ್ಲ. ಸಂಸ್ಕೃತ ಹಿರಿಮೆಯ ಸಂಕೇತ ಎಂದುಕೊಂಡಿದ್ದೇವೆ. ಇದನ್ನು ಬಿಟ್ಟು ಕನ್ನಡವನ್ನು ಬಳಸುವುದೇ ಹಿರಿಮೆ ಎಂಬುದನ್ನು ಹೇಳಬೇಕು. ಎಲ್ಲರ ಕನ್ನಡ ಅಥವಾ ಸ್ಟ್ಯಾಂಡರ್ಡ್ ಕನ್ನಡವನ್ನು ಆಡುನುಡಿಗೆ ಹತ್ತಿರ ತರಬೇಕು. ಇಲ್ಲಿ ಸಂಸ್ಕೃತ ಕಡಿಮೆ ಇರಬೇಕು ಓದುವ ಹಾಗೆ ಬರೆಯಬೇಕು. ಯಾಕಂದರೆ ಮಹಾಪ್ರಾಣಗಳನ್ನು ಬರೀತೀವಿ. ಆದರೆ ಓದುವುದಿಲ್ಲ. ಆಡುಕನ್ನಡವನ್ನು ಗಮನಿಸಿ ಬರಹಕನ್ನಡವನ್ನು ಸರಿಪಡಿಸಬೇಕು. ಆಗ ಸಂಸ್ಕೃತದ ಹೊರೆ ಕಡಿಮೆಯಾಗಿ ವೈವಿಧ್ಯತೆ ಉಳಿಯುತ್ತೆ. ಕನ್ನಡವನ್ನು ಎಲ್ಲರೂ ಕಲಿಯುವಂತೆ ಆಗುತ್ತೆ.


ಸಿರಾಜ್: ನೀವು ಬಹುವಾಗಿ ಹೇಳುವ ಸಂಸ್ಕೃತ ಹೇರಿಕೆಯ ಪ್ರಶ್ನೆ ಹೊಸದೇನಲ್ಲ. ಕವಿರಾಜಮಾರ್ಗ ಕಾಲದಲ್ಲಿಯೇ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿ ಕನ್ನಡ ಅದನ್ನು ಜೀರ್ಣಿಸಿಕೊಂಡು ಬೆಳೆದಿದೆ ಎಂಬ ವಾದ ಇದೆ. ಮಾರ್ಗಕಾರನಲ್ಲೇ ಸಂಸ್ಕೃತ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಸೇರಿಸಿ ಆಗಿರುವ ದೋಷಾದೋಷ ನಿರ್ಣಯದ ಚರ್ಚೆ ಇರುವಾಗ ಸಂಸ್ಕೃತದ ಬಗ್ಗೆ ನಿಮಗೆ ಯಾಕಿಷ್ಟು ಆತಂಕ?

ಶಂಕರ ಭಟ್ : ಇದು ಹಾಗಲ್ಲ. ಮೊನ್ನೆ ಮೊನ್ನೆಯವರೆಗೆ ಬರಹ ಓದು ಎಲ್ಲವೂ ನಮ್ಮ ಜನಸಂಖ್ಯೆಯ ಒಂದು ಪರ್ಸೆಂಟ್ ಅಥವಾ ಜೀರೋ ಪಾಯಿಂಟ್ ಒನ್ ಪರ್ಸೆಂಟ್ ಗಿಂತ ಕಮ್ಮಿ ಜನರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಓದು ಬರೆಯುವವರ ಸಂಖ್ಯೆ ನೂರು ಪರ್ಸೆಂಟ್ ಆಗಬೇಕು. ಎಲ್ಲರ ಕನ್ನಡ ಅಂದರೆ ಅದೇ. ಆದರೆ ಈ ಸಮಸ್ಯೆ ಕವಿರಾಜಮಾರ್ಗದ ಕಾಲದಲ್ಲಿ ಇರಲಿಲ್ಲ. ಹಾಗೆ ನೋಡಿದರೆ ಮಾರ್ಗಕಾರನ ಕಾಲದಲ್ಲಿ ಕನ್ನಡ ಸಂಸ್ಕೃತದ ಮುಖಾಮುಖಿ ಆಗಿಯೇ ಇರಲಿಲ್ಲ. ಆಗಿನ ಕಾಲದಲ್ಲಿ ಸಂಸ್ಕೃತವೇ ಮೊದಲು ನಂತರ ಕನ್ನಡ ಎಂಬ ಸ್ಥಿತಿ ಇತ್ತು. ಸಂಸ್ಕೃತವನ್ನು ಕನ್ನಡ ಜೀರ್ಣಿಸಿಕೊಂಡು ಬೆಳೆದಿದೆ ಎಂದು ಹೇಳುವುದು ಒಂದು ಚಿಕ್ಕ ಗುಂಪಿನ ಚಿಂತನೆ. ಆ ಗುಂಪು ಕನ್ನಡವು ಸಂಸ್ಕೃತದ ಜೊತೆಗಿನ ಮುಖಾಮುಖಿಯಲ್ಲಿ ಗೆದ್ದು ಬಂದಿದೆ ಎಂಬ ಭ್ರಮೆಯಲ್ಲಿದೆ. ಆದರೆ ನಾನು ಒಂದು ದೊಡ್ಡ ಜನಸಮೂಹದ ಪ್ರಶ್ನೆಗಳನ್ನು ಇಟ್ಟುಕೊಂಡು ನನ್ನ ಕೆಲಸದ ಮೂಲಕ ಅವನ್ನು ಬಗೆಹರಿಸಲು ಆಗುತ್ತಾ ಎಂದು ನೋಡುತ್ತಿದ್ದೇನೆ. ಇದು ಈಗ ಅಗತ್ಯವಾಗಿ ಆಗಬೇಕಾದ ಕೆಲಸ. ಇವತ್ತು ಏನಾಗಿದೆಯೆಂದರೆ ಅಪ್ಪರ್ ಕ್ಲಾಸಿನ ಜನ ತಮಗೆ ಬೇಕಾದದ್ದನ್ನೆಲ್ಲ ಇಂಗ್ಲಿಷಿನಿಂದ ಪಡೆಯುತ್ತಾರೆ, ಅವರಿಗೆ ಕನ್ನಡವೂ ಬೇಕಾಗಿಲ್ಲ ಸಂಸ್ಕೃತವೂ ಬೇಕಾಗಿಲ್ಲ. ಕನ್ನಡ ಬೇಕಾಗಿರುವುದು ಬಡವರಿಗೆ, ದಲಿತವರ್ಗದ ಮಕ್ಕಳಿಗೆ. ಅವರಿಗ್ಯಾಕೆ ಸಂಸ್ಕೃತವನ್ನು ಹೇರುತ್ತಾ ಇದೀರಿ? ಕೆ.ವಿ.ನಾರಾಯಣ ಅವರು ಹೇಳುವಂತೆ ಇವತ್ತು ಕನ್ನಡ ಉಳಿಸೋಣ ಎಂದು ಹೇಳುವವರು ಸಂಸ್ಕೃತಮಯವಾದ ಕನ್ನಡವನ್ನು ಉಳಿಸುತ್ತಿದ್ದಾರೆಯೇ ಹೊರತು ನಮ್ಮ ಎಲ್ಲರ ಕನ್ನಡವನ್ನಲ್ಲ. ನಾವು ಉಳಿಸಬೇಕಾಗಿರುವುದು ಬಡವರಿಗೆ ದಲಿತರಿಗೆ ಬೇಕಾಗಿರುವ ಕನ್ನಡವನ್ನ.

ಸಿರಾಜ್: ವಿಚಿತ್ರವೆಂದರೆ ಒಂದೇ ಕಾಲಮಾನದಲ್ಲಿ ನೀವು ಸಂಸ್ಕೃತದ ಹೇರಿಕೆ, ಅದನ್ನು ಬಿಡಿಸಿಕೊಳ್ಳುವ ಬಗ್ಗೆ ಮಾತಾಡುತ್ತಿದ್ದರೆ ಷೆಲ್ಡನ್ ಪೋಲಾಕನಂಥವರು ಕವಿರಾಜಮಾರ್ಗದ ಕಾಲದಿಂದಲೂ ಕನ್ನಡ-ಸಂಸ್ಕೃತದ ನಡುವೆ ಇರುವ ಚಲನಶೀಲ ಸಂಬಂಧದ ಬಗ್ಗೆ ಮಾತಾಡುತ್ತಾನೆ. ಅವನನ್ನು ಓದುವಾಗ ಕನ್ನಡ ಸಂಸ್ಕೃತಗಳು ಎದುರಾಳಿಗಳಲ್ಲ ಎಂಬ ಭಾವನೆ ಬರುತ್ತೆ...

ಶಂಕರ ಭಟ್ : ಮಾರ್ಗಕಾರ ಹೇಳುತ್ತಿರುವುದು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡೇ ಹೊರತು ಭಾಷೆಯನ್ನಲ್ಲ. ಇಲ್ಲಿಯವರೆಗೆ ಭಾಷೆಯ ಬಗ್ಗೆ, ವ್ಯಾಕರಣದ ಬಗ್ಗೆ ಬರೆದಿರುವವರು ಸಾಹಿತ್ಯವನ್ನು ಗಮನದಲ್ಲಿಟ್ಟುಕೊಂಡು ಮಾತಾಡಿದ್ದಾರೆಯೇ ಹೊರತು ಭಾಷೆಯನ್ನು ಮಖ್ಯವಾಗಿಟ್ಟುಕೊಂಡಿಲ್ಲ. ಪೋಲಾಕನ ಪುಸ್ತಕವನ್ನು ನಾನು ಓದಿಲ್ಲ. ಆದರೂ ಅವನು ಹೇಳುವ ಹಾಗೆ ಸಂಸ್ಕೃತದಿಂದ ಕನ್ನಡ ಹೊಸ ವಿಸ್ತಾರವನ್ನು ಪಡೆದುಕೊಂಡಿದೆ ಎಂಬುದರ ಬಗ್ಗೆ ಐ ಆಮ್ ನಾಟ್ ಶ್ಯೂರ್. ನಾನು ಇದನ್ನು ಒಪ್ಪುವುದು ಕಷ್ಟ.

ಸಿರಾಜ್: ರನ್ನ ನಿಘಂಟುವಿನ ಕಾಲದಿಂದಲೂ ಕನ್ನಡ ಸಂಸ್ಕೃತವನ್ನು ಬ್ರಿಡ್ಜ್ ಮಾಡುವುದೇ ಅವತ್ತಿನ ದೊಡ್ಡ ಗುರಿಯಾಗಿತ್ತು. ಷೆಲ್ಡನ್ ಪೋಲಾಕನು ಹೇಳುವಂತೆ ಕನ್ನಡವು ಸಂಸ್ಕೃತದ ಮೂಲಕ ದೊಡ್ಡದನ್ನು ಪಡೆದುಕೊಂಡಿತು ಎಂಬ ವಾದವೂ ಇದೆ.

ಶಂಕರ ಭಟ್ : ಹೀಗ್ಯಾಕೆ ಆಗುತ್ತೆ ಅಂದರೆ ಆಗ ಕನ್ನಡ ಬಳಸುವವರಿಗೆ ಕನ್ನಡವೂ ಗೊತ್ತಿತ್ತು ಸಂಸ್ಕೃತವೂ ಗೊತ್ತಿತ್ತು. ಆದರೆ ಈಗಿನವರಿಗೆ ಸಂಸ್ಕೃತ ಗೊತ್ತಿಲ್ಲ, ಗೊತ್ತಿರಬೇಕಾಗಿಯೂ ಇಲ್ಲ. ಆಗ ಒಂದು ಸಣ್ಣ ಪರ್ಸೆಂಟೇಜಿನ ಜನ ಕನ್ನಡವನ್ನು ಓದುತ್ತಿದ್ದರು. ಪೋಲಾಕನು ಹೇಳುವ ಹಾಗೆ ಎಲ್ಲವನ್ನು ಪಡೆದುಕೊಂಡಿದ್ದು ಒಂದು ಸಣ್ಣ ಸಮುದಾಯ ಮಾತ್ರ. ಅವರಿಗೆ ಸಂಸ್ಕೃತವೇ ಹೆಚ್ಚು ಗೊತ್ತಿತ್ತು, ಕನ್ನಡವೇನಿದ್ದರೂ ತಮಾಷೆಗೆ ಎನ್ನುವ ಹಾಗೆ. ಅದಕ್ಕೆ ಮೊದಲು ಗುರುಕುಲದಲ್ಲಿ ಸಂಸ್ಕೃತವನ್ನು ಕಲಿಸಿ ನಂತರ ಕನ್ನಡವನ್ನು ಕಲಿಸುತ್ತಿದ್ದರು. ಆದರೆ ಆಗಿನ ಸಮಸ್ಯೆಯೇ ಬೇರೆ ಈಗಿನ ಸಮಸ್ಯೆಗಳೇ ಬೇರೆ. ಈಗ ನಾವು ಎಲ್ಲರಿಗೂ ಭಾಷೆಯನ್ನು ಕಲಿಸಬೇಕಾಗಿದೆ, ಶಿಕ್ಷಣವನ್ನು ನೀಡಬೇಕಾಗಿದೆ. ಅಂದು ಭಾಷೆಯ ಕುರಿತ ಚಿಂತನೆಗಳು ವರ್ಗದ ಹಿತಾಸಕ್ತಿಯಿಂದ ಕೂಡಿದ್ದವು. ಈಗ ಅದು ಸಮುದಾಯದ ಹಿತಾಸಕ್ತಿಯಾಗಿ ರೂಪುಗೊಳ್ಳಬೇಕಿದೆ.



ಮೇಟಿ: ಸಂಸ್ಕೃತವನ್ನು ಸೇರಿದಂತೆ ಅನ್ಯ ಭಾಷಾ ಪದಗಳನ್ನು ಬಿಡುವುದಾದರೆ ಕನ್ನಡದಲ್ಲಿ ಉಳಿಯುವುದೇನು ಎಂಬ ಪ್ರಶ್ನೆಯೂ ಇದೆಯಲ್ಲ?

ಶಂಕರ ಭಟ್ : ಆಡುಮಾತಿನಲ್ಲಿ ನೀವು ನೋಡಿದರೆ ಸಂಸ್ಕೃತ ಪದಗಳೇ ಇಲ್ಲ. ಕುಂವೀಯವರ, ಗೀತಾನಾಗಭೂಷಣ ಅವರ ಕಾದಂಬರಿಗಳಲ್ಲಿ ಸಂಸ್ಕೃತ ಪದಗಳಿಲ್ಲ ಇದ್ದರೂ ತದ್ಭವಗಳ ರೂಪದಲ್ಲಿ ಇವೆ. ನಾಯಿ ಎನ್ನುವ ಕಡೆ ಶ್ವಾನ ಎನ್ನುವ, ಹಲ್ಲು ಎನ್ನುವ ಕಡೆ ದಂತ ಎಂದು ಬಳಸುವುದು ನಮಗಿರುವ ಸಂಸ್ಕೃತದ ವ್ಯಾಮೋಹದಿಂದ. ನಾನು ಹೇಳುತ್ತಿರುವುದೇನೆಂದರೆ ಸಂಸ್ಕೃತದ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಅಂತ.

ಮೇಟಿ: ಹಾಗಾದರೆ ಕನ್ನಡಕ್ಕೆ ಎಲ್ಲವನ್ನು ವಿವರಿಸುವ ಶಕ್ತಿ ಇದೆಯೆ?

ಶಂಕರ ಭಟ್ : ಅದು ಕನ್ನಡಕ್ಕೂ ಇಲ್ಲ ಸಂಸ್ಕೃತಕ್ಕೂ ಇಲ್ಲ. ಅದನ್ನು ನಾವು ಹೊಸ ಶಬ್ದಗಳನ್ನು ಟಂಕಿಸುವ ಮೂಲಕ ಪಡೆದುಕೊಳ್ಳಬಹುದು. ಬಿ.ಆರ್.ಲಕ್ಷ್ಮಣರಾವ್ ಅವರು ಒಮ್ಮೆ ನನ್ನ ಬಳಿ ದಿನ ಬಳಕೆಯಲ್ಲಿ ಎಲ್ಲಕ್ಕೂ ಕನ್ನಡ ತಂದು ಹಾಕಿದರೆ ಕಷ್ಟವಾಗುತ್ತದೆ ಎಂದಿದ್ದರು. ಸಂಸ್ಕೃತದಲ್ಲಿ ಗ್ರೀಕಿನಲ್ಲಿ ಏನಾಗಿದೆ ಎಂದು ನೋಡಿದರೆ ಅವರು ತಮಗೆ ಬೇಕಾದ ಹಾಗೆಲ್ಲ ಹೊಸ ಶಬ್ದಗಳನ್ನು ಟಂಕಿಸಿಕೊಂಡಿದ್ದಾರೆ. ಇಂಗ್ಲéಿಷಿನಲ್ಲಿಯೂ ಕೂಡ ಗ್ರೀಕ್ ಲ್ಯಾಟಿನ್ ಪದಗಳನ್ನು ಹಾಗೇ ಬಳಸಿದ್ದಾರೆ. ಆದರೆ ಕಂಪ್ಯೂಟರ್ ವಿಜ್ಞಾನಕ್ಕೆ ಸಂಬಂಧಿಸಿದ ಪದಗಳನ್ನು ಇಂಗ್ಲಿಷಿನ ಮೂಲಕವೇ ಟಂಕಿಸಿಕೊಂಡಿದ್ದಾರೆ. ಅಲ್ಲಿ ಸಾಧ್ಯವಾಗಿದ್ದರೆ ಇಲ್ಲೇಕೆ ಆಗುವುದಿಲ್ಲ? ಸಂಸ್ಕೃತದಿಂದ ಪಡೆದುಕೊಳ್ಳುವಾಗ ಸಂಸ್ಕೃತದಿಂದಲೇ ಪಡೆದುಕೊಂಡಿದ್ದೇವೆ. ಆದರೆ ಇಂಗ್ಲಿಷಿನಿಂದ ಪಡೆದುಕೊಳ್ಳುವಾಗ ಮತ್ತೆ ಸಂಸ್ಕೃತ ಯಾಕೆ? ಉದಾಹರಣೆಗೆ ಇಂಜನಿಯರ್ ಗೆ ಅಭಿಯಂತರ, ಆಲರ್ಟರ್ನೇಷನ್ಗೆ ಪರ್ಯಯನ, ಸಾಫ್ಟವೇರ್ ಗೆ ತಂತ್ರಾಂಶ- ಹೀಗೆ ಮಾಡಿದ್ದರಿಂದ ಕನ್ನಡದಲ್ಲಿರುವ ವಿಜ್ಞಾನದ ಪದಗಳು ಬಹಳ ಕಷ್ಟಕರವಾಗಿವೆ ಅವನ್ನು ಅರ್ಥ ಮಾಡಿಕೊಳ್ಳುವುದು ಸಾಧ್ಯವಿಲ್ಲ ಅಷ್ಟು ಸಂಸ್ಕೃತಮಯವನ್ನಾಗಿ ಮಾಡಿದ್ದೇವೆ.

ಸಿರಾಜ್: ಆದರೆ ಉದಾಹರಣೆಗೆ ಇಂಡೋ ಆರ್ಯನ್ ಭಾಷೆಗಳ ಮೂಲದಿಂದ ಬಂದಿರುವ ಹಲವು ಪದಗಳು ಕನ್ನಡಕ್ಕೆ ಬರುವಾಗ ಹಾಗೇ ಬಂದಿಲ್ಲ. ಅವು ಅರ್ಥವಿಸ್ತಾರವನ್ನೋ, ಅರ್ಥಸಂಕೋಚವನ್ನೋ ಪಡೆದುಕೊಂಡೇ ಬಂದಿವೆ. ಹೀಗಿರುವಾಗ ಅನ್ಯ ಭಾಷೆಗಳಿಂದ ಎರವಲು ಬೇಡ ಎನ್ನೋದು ಎಷ್ಟು ಸರಿ?

ಶಂಕರ ಭಟ್ : ನನ್ನ ಉದ್ದೇಶ ಸಂಸ್ಕೃತದ ಪದಗಳ ಸಹಾಯವಿಲ್ಲದೆ ಕನ್ನಡದಲ್ಲೇ ಬರೆಯಲು ಸಾಧ್ಯ ಎಂಬುದನ್ನು ತೋರಿಸುವುದು. ಕನ್ನಡದ ಖ್ಯಾತ ಲೇಖಕರೊಬ್ಬರಿಗೆ ಹೊಸಬರಹದಲ್ಲಿರುವ ನನ್ನ ಪುಸ್ತಕ `ಕನ್ನಡಕ್ಕೆ ಬೇಕು ಕನ್ನಡದ್ದೇ ಪದಗಳು' ಓದಲು ಕೊಟ್ಟೆ. ಅದರಲ್ಲಿ ನಾನು ಭಾಷಾಂತರಕ್ಕೆ ಬದಲಾಗಿ ನುಡಿಮಾರು, ಭಾಷೆಗೆ ಬದಲಾಗಿ ಸೊಲ್ಲು, ಉದಾಹರಣೆಗೆ ಬದಲಾಗಿ ಎತ್ತುಗೆ ಎಂದೆಲ್ಲ ಬಳಸಿ ಕನ್ನಡದಲ್ಲಿ ಇದೆಲ್ಲವನ್ನೂ ಹೇಳಲು ಸಾಧ್ಯ ಎಂದು ತೋರಿಸಲು ಪ್ರಯತ್ನಿಸಿದ್ದೆ. ಅವರು ನನಗೆ ಅರ್ಥವಾಗಲಿಲ್ಲ ಎಂದರು. ಅಂದರೆ ಅವರಿಗೆ ಸಂಸ್ಕೃತವೇ ಸಹಜವಾಗಿ ಕನ್ನಡ ಅಪರಿಚಿತವಾಗಿಬಿಟ್ಟಿದೆ.

ಮೇಟಿ: ಬೇರೆ ಭಾಷೆಯ ಪದಗಳು ಕನ್ನಡದ ಕಸುವು ಹೆಚ್ಚಿಸಿವೆ ಎಂಬ ವಾದವೂ ಇದೆ?

ಶಂಕರ ಭಟ್ : ಪ್ರೊವೈಡೆಡ್ ಭಾಷೆಗೆ ಆ ಮಿತಿ ಇದ್ದರೆ. ಇಲ್ಲದಿದ್ದರೆ ಅದು ನಾವು ಬಳಸುವ ಭಾಷೆಗೆ ಹೊರೆ. ನನ್ನ ಆಶಯ ಎಲ್ಲವನ್ನೂ ಸಾಧ್ಯವಾದಷ್ಟು ಕನ್ನಡದಲ್ಲಿ ಹೇಳುವುದು. ಅದರಲ್ಲಿ ಹತ್ತು, ಹದಿನೈದು ಪರ್ಸೆಂಟ್ ಫಾರಿನ್ ಪದಗಳಿದ್ದರೆ ತೊಂದರೆಯಿಲ್ಲ. ಪೂರ್ತಿ ಕನ್ನಡದಲ್ಲೇ ಅಗುವುದಿಲ್ಲ ಎಂದು ನನಗೂ ಗೊತ್ತಿದೆ. ಆದರೆ ಈಗಾಗಿರುವಂತೆ ಎಂಬತ್ತು ಪರ್ಸೆಂಟ್ ಸಂಸ್ಕೃತ ಕನ್ನಡದಲ್ಲಿ ಇರಬಾರದು. ಪ್ರಜಾವಾಣಿಯಲ್ಲಿ ಶಿಕ್ಷಣದಂಥ ಎಲ್ಲರಿಗೂ ಉಪಯೋಗಿಯಾಗುವ ವಿಷಯದ ಬಗ್ಗೆ ಬರೆಯುವವರು ಎಪ್ಪತ್ತೈದು ಪರ್ಸೆಂಟ್ ಸಂಸ್ಕೃತ ಪದಗಳನ್ನು ಬಳಸುತ್ತಾರೆ. ಅದನ್ನು ಸಂಸ್ಕೃತ ಲೇಖನ ಎಂದು ಕರೆದರೆ ಒಳ್ಳೆಯದು (ಜೋರು ನಗು). ಕನ್ನಡದಲ್ಲಿ ಅದನ್ನು ಹೇಳಿದರೆ ಎಲ್ಲರಿಗೂ ಗೊತ್ತಾಗುತ್ತೆ, ಪ್ರಯೋಜವಾಗುತ್ತೆ.....

ಸಿರಾಜ್: ಸಂಸ್ಕೃತದ ಪ್ರಭಾವ ಸಾರ್ವತ್ರಿಕವಾಗಿತ್ತು ಎಂದು ಹೇಳುವುದು ಎಷ್ಟು ಸರಿ? ಅದು ಜಾತಿಗಳಿಗೆ, ಉಪಜಾತಿಗಳಿಗೆ, ಪ್ರದೇಶಗಳಿಗೆ ಅನುಗುಣವಾಗಿ ಬದಲಾಗುತ್ತಾ ಹೋಗುತ್ತೆ.

ಶಂಕರ ಭಟ್ : ಅದಕ್ಕೇ ನಾನು ಹೇಳುವುದು ಕನ್ನಡ ಕಲಿಯಬೇಕಾದರೆ ಸಂಸ್ಕೃತ ಬಲ್ಲ ಮೇಲ್ಜಾತಿಯ ಮಕ್ಕಳಿಗೆ ಸ್ವಲ್ಪ ಕಷ್ಟವಾದರೆ ಕೆಳವರ್ಗದ ಮಕ್ಕಳಿಗೆ ಇನ್ನೂ ಕಷ್ಟ. ನನ್ನ ವಾದದ ಹಿಂದಿರುವ ಉದ್ದೇಶ ಏನೆಂದರೆ ನಮ್ಮಲ್ಲಿರುವ ಎಲ್ಲ ಜಾತಿ ವರ್ಗಗಳ ಮಕ್ಕಳೂ ಭಾಷೆ ಕಲಿತು ಶಿಕ್ಷಣದ ಉಪಯೋಗ ಪಡೆದುಕೊಳ್ಳುವಂತಾಗಬೇಕು ಅಂತ. ಮೊನ್ನೆ ನನಗೆ ಗೊತ್ತಿರುವ ಲೇಖಕರೊಬ್ಬರು ಯಕ್ಷಗಾನದಿಂದ ಕೆಳವರ್ಗದ ಮಕ್ಕಳಿಗೂ ಸಂಸ್ಕೃತದ ಉಚ್ಚಾರಣೆ ಸುಲಭವಾಗಿ ಬರುತ್ತೆ ಎಂದು ಹೇಳುತ್ತಿದ್ದರು. ಆದರೆ ಆ ಮಕ್ಕಳಿಗೆ ಎಷ್ಟು ಪದಗಳು ಬರುತ್ತವೆ ಎಷ್ಟರ ಅರ್ಥ ಗೊತ್ತಿದೆಯೋ ನನಗೆ ಗೊತ್ತಿಲ್ಲ.

ಸಿರಾಜ್: ಆದರೆ ಭಾಷೆಯ ಬಳಕೆಯ ವಿಷಯದಲ್ಲಿ ಇತಿಹಾಸವನ್ನು ಮತ್ತೆ ತಿರುಗುಮುರುಗಾಗಿಸಲು ಆಗುತ್ತದೆಯೆ?

ಶಂಕರ ಭಟ್ : ಕನ್ನಡದಲ್ಲಿ ಬೇರೆ ಭಾಷೆಯ ಪದಗಳು, ಅದರ ಪ್ರಭಾವ ಇದೆಲ್ಲವೂ ಕಡಿಮೆ ಪ್ರಮಾಣಕ್ಕೆ ಸೀಮಿತವಾಗಿದ್ದರೆ ಅದು ಸರಿ, ಜಾಸ್ತಿಯಾಗಿ ಅದು ಬೇರೆ ಬಗೆಯ ಕೀಳರಿಮೆಗೆ ದಾರಿ ಮಾಡುವ ಹಾಗಿದ್ದರೆ ಅದು ಹೊರೆ. ನೋಡಿ, ಈಗ ಎತ್ತುಗೆಗೆ ಬದಲಾಗಿ ಉದಾಹರಣೆ ಎನ್ನುವುದೇ ಸಹಜವೇನಲ್ಲ. ಅದರೆ ಅದೇ ಸಹಜ ಅನ್ನಿಸಿದೆ. ಇದನ್ನು ಬದಲಾಯಿಸುವುದೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್. ಇದರ ಉದ್ದೇಶ ಕನ್ನಡವನ್ನು ಎಲ್ಲರ ಕನ್ನಡವನ್ನಾಗಿ ಮಾಡುವುದು. ಎರಡು ಸಾವಿರ ವರ್ಷದಿಂದ ಮಹಾಪ್ರಾಣಗಳನ್ನು ಬಳಸುತ್ತಾ ಬಂದಿದ್ದೇವೆ. ಅದರಿಂದ ಏನು ಲಾಭ? ಇಲ್ಲಿವರೆಗೆ ಬಳಸುತ್ತಾ ಇದೀವಿ ಅನ್ನೋದನ್ನು ಬಿಟ್ಟರೆ ಅದರಿಂದ ಯಾವ ಲಾಭವೂ ನನಗೆ ಕಾಣುವುದಿಲ್ಲ. ಈ ಹೇರಿಕೆಯ ಚರಿತ್ರೆಯನ್ನು ತೆಗೆದುಹಾಕೋಣ. ಸಂಸ್ಕೃತದ ಹೇರಿಕೆಯೂ ಒಂದು ರೀತಿ ಅಸ್ಪೃಶ್ಯತೆಯ ತರ. ಅದರಿಂದ ಏನು ಪ್ರಯೋಜನ....? ಒಂದು ಸಮಾಜ ಬೆಳೆಯಬೇಕು ಎನ್ನುವುದಾದರೆ ಅದರಲ್ಲಿ ಬದುಕುವ ಎಲ್ಲರೂ ಬೆಳೆಯಬೇಕು, ಯಾವುದೋ ಒಂದು ಕಮ್ಯುನಿಟಿ ಮಾತ್ರ ಉದ್ಧಾರ ಆಗುವುದಲ್ಲ. ಮಹಾಪ್ರಾಣಗಳನ್ನು ಕಡಿಮೆ ಮಾಡಿದರೆ ಸಮಾಜದ ಎಲ್ಲ ಮಕ್ಕಳಿಗೆ ಕನ್ನಡ ಕಲಿಯುವುದು ಸುಲಭವಾಗುತ್ತೆ, ಅದನ್ನೇ ಲ್ಯಾಂಗ್ವೇಜ್ ಪ್ಲ್ಯಾನಿಂಗ್ ನಲ್ಲಿ ನಾವು ಮಾಡಬೇಕಾಗಿರುವುದು. ಹೀಗೆ ಮಾಡುತ್ತ ಹೋದರೆ ಹಳೆಗನ್ನಡ ಸಾಹಿತ್ಯವನ್ನು ಓದುವುದು ಹೇಗೆ ಎಂಬ ಪ್ರಶ್ನೆ ಎದುರಾಗಬಹುದು. ಅದಕ್ಕೆ ನಾನು ಹೇಳುವುದೇನೆಂದರೆ ಹಳೆಗನ್ನಡವಾಗಲಿ ಹೊಸಗನ್ನಡವಾಗಲಿ ಅದನ್ನು ಓದುವಾಗ ಹೇಗೂ ಉಚ್ಚರಿಸುವುದಿಲ್ಲವಲ್ಲ ಅಂತ. ಅದಕ್ಕಾಗೇ ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಬದಲಾವಣೆಗಳನ್ನು ಮಾಡಬೇಕೆಂದು ಸ್ವಲ್ಪ ಹಠದಿಂದಲೇ ಇದನ್ನೆಲ್ಲ ಮಾಡುತ್ತಿದ್ದೇನೆ.


ಮೇಟಿ: ಆದರೆ ಈ ನಡುವೆ ಕೆಲವು ಸಂಘಟನೆಗಳು ಎಲ್ಲರಿಗೂ ಸಂಸ್ಕೃತವನ್ನು ಕಲಿಸಬೇಕು ಎಂದು ಹೇಳುತ್ತಿದ್ದಾರಲ್ಲ ಅದರ ಉದ್ದೇಶ ಏನು?

ಶಂಕರ ಭಟ್ : ಯಾಕೆಂದರೆ ನಿಜವಾಗಿ ಅಂಥ ಸಂಘಟನೆಗಳಿಗೆ ಎಲ್ಲರೂ ತಮ್ಮ ಸಂಸ್ಕೃತಿಯನ್ನೇ ಕಲಿಯಬೇಕು ಎಂಬ ಉದ್ದೇಶ ಇದೆ, ಹಾಗಾಗಿ ಅದಕ್ಕೂ ಮೊದಲು ಸಂಸ್ಕೃತವನ್ನು ಕಲಿಸಿಬಿಟ್ಟರೆ ಸರಿಯಾಗುತ್ತದೆ ಎಂದು ಹೀಗೆಲ್ಲ ಅವರು ಮಾಡುತ್ತಿರಬಹುದು.

ಸಿರಾಜ್
: ಹಾಗಾದರೆ ಸಂಸ್ಕೃತ ವಿಶ್ವವಿದ್ಯಾಲಯವನ್ನು ಶುರುಮಾಡುವುದರಿಂದ ಕನ್ನಡಕ್ಕಾಗುವ ಪ್ರಯೋಜನವೇನು?

ಶಂಕರ ಭಟ್
: ಸಂಸ್ಕೃತ ವಿಶ್ವವಿದ್ಯಾನಿಲಯದ ಸ್ಥಾಪನೆಯಿಂದ ಕನ್ನಡಕ್ಕೆ ಏನು ಅಪಾಯವಿಲ್ಲ. ಆದರೆ ಒಂದಿಷ್ಟು ಹಣ ವೇಸ್ಟ್ ಆಗುತ್ತದೆ. ಬೇರೆಲ್ಲಾ ವಿಶ್ವವಿದ್ಯಾನಿಲಯಗಳು ಇರುವ ಹಾಗೆ ಅದೂ ಇರುತ್ತದೆ. ಅದರಿಂದ ಕೆಲವರಿಗೆ ಉದ್ಯೋಗ ಸಿಗಬಹುದು, ಅಷ್ಟೆ. ಹೆಚ್ಚೆಂದರೆ ಅಲ್ಲಿ ನಡೆಯುವ ಕೆಲವು ಸಂಶೋಧನೆಗಳು ಪುಸ್ತಕದ ರೂಪದಲ್ಲಿ ಬರಬಹುದು. ಕನ್ನಡದ ಉದ್ಧಾರವಾಗಬೇಕೆಂದರೆ, ಕನ್ನಡ ಬರಹದಲ್ಲಿ ಸಂಸ್ಕೃತ ಪದಗಳನ್ನು ಕಡಿಮೆ ಮಾಡಬೇಕು ಆವಾಗ ಅದು ಎಲ್ಲರ ಕನ್ನಡವಾಗುತ್ತದೆ. ಕನ್ನಡ ಭಾಷೆ ಬೆಳೆಯಬೇಕಾದರೆ, ಥೆಸಾರಸ್ಸ್ ಗಳನ್ನು ಹಾಗೂ ವಿಜ್ಞಾನ ಪಾರಿಭಾಷಿಕ ಪದಕೋಶಗಳನ್ನು ಬರೆಯಬೇಕು. ವಿಜ್ಞಾನದ ಪ್ರಯೋಗ ಹಾಗೂ ವಿಷಯಗಳನ್ನು ವಿವರಿಸುವಾಗ ನೂರಾರು ಸಂಸ್ಕೃತದ ಪದಗಳನ್ನು ಹಾಕಿ ಅದನ್ನು ಯಾರೂ ಓದದ ಹಾಗೆ ಮಾಡಿಬಿಟ್ಟಿದ್ದಾರೆ. ಇದರಿಂದ ಮಕ್ಕಳಿಗೆ ತೊಂದರೆಯಾಗುತ್ತದೆ. ಈ ತೊಡಕನ್ನು ನಿವಾರಿಸಬೇಕೆಂದರೆ ಕನ್ನಡವನ್ನೇ ಬಳಸಬೇಕು.

ಸಿರಾಜ್: ಇನ್ನೊಂದು ಪ್ರಶ್ನೆ. ಮೂಲ ಸಂಸ್ಕೃತ ಪದಗಳು ಕನ್ನಡದಲ್ಲಿ ಹಾಗೇ ಉಳಿದುಕೊಂಡಿವೆಯಲ್ಲ.... ತತ್ಸಮ ತದ್ಭವಗಳು ಎರಡೂ ಕನ್ನಡದಲ್ಲಿ ಇರುವಾಗ ನಿಮಗೆ ಸಂಸ್ಕೃತದ ಬಗ್ಗೆ ಇಷ್ಟು ಆತಂಕ ಯಾಕೆ?

ಶಂಕರ ಭಟ್ : ನಿಜವಾಗಿ ನೋಡಿದರೆ ಸುಮಾರು ಶಬ್ದಗಳು ತದ್ಭವ ಆಗಿ ಮತ್ತೆ ಸಂಸ್ಕೃತ ಶಬ್ದಗಳೇ ಹಿಂತಿರುಗಿ ಬಂದಿವೆ. ಉದಾಹರಣೆಗೆ ಕನ್ನಡದಲ್ಲಿ ಅಂಕುಸ-ಅಂಕುಶ, ಪಸು-ಪಶು, ಭಕುತಿ-ಭಕ್ತಿ, ರಿಸಿ-ಋಷಿ, ರಕ್ಕಸ-ರಾಕ್ಷಸ -ಹೀಗೆ ಬೇರೆ ಬೇರೆ ಬಗೆಯ ರಿವರ್ಸ್ ರೂಪಾಂತರಗಳು ಕನ್ನಡದಲ್ಲಿ ಆಗಿವೆ. ಇಲ್ಲಿ ನಾವು ನಮ್ಮ ಕನ್ನಡ ರೂಪಗಳನ್ನು ಕಳೆದುಕೊಂಡಿದ್ದೇವೆ. ಮೂಲ ಕನ್ನಡದಲ್ಲಿದ್ದ ರಿಸಿಯೇ ಈಗ ಕೀಳು ರೂಪವಾಗಿ ಸಂಸ್ಕೃತದ ಋಷಿಯೇ ಅಧಿಕೃತ ಎನ್ನಿಸಿಕೊಂಡಿದೆ. ಇದು ಯಾಕೆಂದರೆ ನಮಗೆ ಸಂಸ್ಕೃತದ ಬಗ್ಗೆ ಇರುವ ಕುರುಡು ವ್ಯಾಮೋಹದ ಕಾರಣದಿಂದ.

ಮೇಟಿ: ಪರ್ಶಿಯನ್, ಅರೇಬಿಕ್, ಇಂಗ್ಲಿಷ್ ಮುಂತಾದ ಭಾಷೆಯ ಪದಗಳನ್ನು ವಿರೂಪಗೊಳಿಸಿದರೆ ಯಾರಿಗೂ ಸಮಸ್ಯೆ ಅನಿಸುವುದಿಲ್ಲ. ಆದರೆ ಸಂಸ್ಕೃತದ ಪದಗಳನ್ನು ಸರಿಯಾಗಿ ಉಚ್ಚರಿಸದಿದ್ದರೆ/ಬರೆಯದಿದ್ದರೆ ದೊಡ್ಡ ಅನಾಹುತ ಆಗಿಬಿಡುತ್ತದೆಂಬ ಭಾವನೆ ಇದೆ. ಯಾಕೆ ಹೀಗೆ?

ಶಂಕರ ಭಟ್ : ಯಾಕೆಂದರೆ ಪರ್ಶಿಯನ್-ಅರೇಬಿಕ್ ಭಾಷೆಗಳನ್ನು ಪ್ರತಿನಿಧಿಸುವ ವರ್ಗ ಬಲಶಾಲಿಯಾಗಿಲ್ಲ. ಆದರೆ ಸಂಸ್ಕೃತದ ವಿಷಯದಲ್ಲಿ ಹಾಗಲ್ಲ. ಅದನ್ನು ಪ್ರತಿನಿಧಿಸುವ ವರ್ಗ ಪ್ರಬಲವಾಗಿದೆ. ಮೇಲಾಗಿ ಕನ್ನಡ ಲಿಪಿಯನ್ನು ಬ್ರಾಹ್ಮೀಯಿಂದ ಎರವಲು ಪಡೆದುಕೊಂಡಿದ್ದರಿಂದ ಸಂಸ್ಕೃತ ಪದಗಳನ್ನು ಇರುವ ಹಾಗೇ ಉಚ್ಚರಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.

ಮೇಟಿ: ಮಾತಿನಲ್ಲಿ 'ಹ'ಕಾರ ಮತ್ತು ಮಹಾಪ್ರಾಣಗಳನ್ನು ಲೋಪಮಾಡುವುದನ್ನು ಕಂಡರೆ ಅವರಿಂದ ಸಂಸ್ಕೃತಿಯೇ ನಾಶವಾಗಿಬಿಟ್ಟಿತು ಎಂಬ ಧೋರಣೆಯನ್ನು ಬೆಳೆಸಿಕೊಂಡಿದ್ದೇವಲ್ಲ?

ಶಂಕರ ಭಟ್ : ಇದು ಸಂಸ್ಕೃತಿಯ ಪ್ರಶ್ನೆಯೇ ಅಲ್ಲ. ಮಾತಿನಲ್ಲಿ ಅಧಿಕಾರಿ ಎಂದು ಹೇಳುವಾಗ ಮಹಾಪ್ರಾಣ ಬಳಸುವುದಿಲ್ಲ. ಅವು ಬಿದ್ದು ಹೋಗುತ್ತವೆ. ಶಕಾರವನ್ನು ಯಾರಿಗೂ ಸರಿಯಾಗಿ ಉಚ್ಚರಿಸಲು ಆಗುವುದಿಲ್ಲ. ಕನ್ನಡದವರಿರಲಿ ಸಂಸ್ಕೃತ ವಿದ್ವಾಂಸರಿಗೂ ಸರಿಯಾಗಿ ಇದನ್ನು ಉಚ್ಚರಿಸಲು ಆಗುವುದಿಲ್ಲ. ಇದನ್ನು ನಾನು ಚಾಲೆಂಜ್ ಮಾಡಿ ನೋಡಿದ್ದೇನೆ. ಕೃಪೆ ಎನ್ನುವ ಶಬ್ದವನ್ನು ಉಚ್ಚಾರಣೆಯಲ್ಲಿ ಕ್ರುಪೆ ಎಂದು ಹೇಳುತ್ತೇವೆ. ಸಂಸ್ಕೃತ ಭಾಷೆಯ ರಚನೆಯ ಪ್ರಕಾರ 'ಋ' ಒಂದು ಸ್ವರ. ಹಾಗಾಗಿ ಕ್+ಅ+ಋ ಈ ಅನುಕ್ರಮದಲ್ಲಿ ಎರಡು ಸ್ವರಗಳು ಒಟ್ಟಿಗೆ ಬರಲು ಸಾಧ್ಯವಿಲ್ಲ. ಬಹುಶಃ ಋಗ್ವೇದ ಕಾಲದಲ್ಲೂ ಹೀಗೆ ಉಚ್ಚರಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೇ ಮಹಾಪ್ರಾಣಗಳು ಉಚ್ಚಾರಣೆಯಲ್ಲಿ ಇಲ್ಲ ಬರಹ ಕನ್ನಡದಲ್ಲಿ ಮಾತ್ರ ಇವೆ. ಸಂಸ್ಕೃತ ಪಂಡಿತರು ಮಾತ್ರ ಇವನ್ನು ಉಚ್ಚರಿಸಬೇಕು ಎನ್ನುತ್ತಾರೆ.

ಮೇಟಿ: ಹಾಗಾದರೆ ಕನ್ನಡದಲ್ಲಿ ಅವು ಸೇರಿಕೊಂಡದ್ದು ಹೇಗೆ?

ಶಂಕರ ಭಟ್ : ಆಗಲೇ ಹೇಳಿದಂತೆ ಅವು ಬರಹದಲ್ಲಿ ಬಂದಿವೆ, ಉಚ್ಚಾರಣೆಯಲ್ಲಿ ಇಲ್ಲ. ನೀವು ಬೇರೆ ಭಾಷೆಗಳಿಗೆ ಕಂಪೇರ್ ಮಾಡಿ ನೋಡಿದರೆ ಇದು ಚೆನ್ನಾಗಿ ಗೊತ್ತಾಗುತ್ತದೆ. ಅಸ್ಸಾಮಿಯಲ್ಲಿ, ಮರಾಠಿಯಲ್ಲಿ ಬಹಳ ಸರಿಯಾಗಿ ಅವರು ಮಹಾಪ್ರಾಣಗಳನ್ನು ಉಚ್ಚರಿಸುತ್ತಾರೆ. ಸ್ವಲ್ಪಮಟ್ಟಿಗೆ ಧಾರವಾಡದ ಕಡೆ ಮರಾಠಿಯ ಕಾರಣದಿಂದ ಮಹಾಪ್ರಾಣಗಳು ಸಮಸ್ಯೆ ಆಗುವುದಿಲ್ಲ. ಆದರೆ ಮೈಸೂರಿನ ಕಡೆ ಸ-ಶ-ಷ ಗಳು ಹಾಗೂ ಮಹಾಪ್ರಾಣಗಳನ್ನು ಸರಿಯಾಗಿ ಉಚ್ಚರಿಸುವುದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಗುಲ್ಬರ್ಗದ ಕಡೆ ಕೆಲವರು ಎಜುಕೇಟೆಡ್ ಮಂದಿ ಮಾತ್ರ ಮಹಾಪ್ರಾಣ ಬಳಸುತ್ತಾರೆ. ಬೇರೆಯವರು ಅಲ್ಲ. ಇದರ ಬಗ್ಗೆ ಮಹದೇವನ್ ಎಂಬುವವರು ಸಂಶೋಧನೆ ಮಾಡಿದ್ದಾರೆ....

ಸಿರಾಜ್: ವಿವಿಧ ಭಾಷಾ ಪ್ರಬೇಧಗಳಿರುವ ನಮ್ಮ ಕರ್ನಾಟಕದಲ್ಲಿ ಒಂದು ಸ್ಟ್ಯಾಂಡರ್ಡೈಜ್ಡ್ ಕನ್ನಡದಲ್ಲಿರುವ ಪಠ್ಯಕ್ರಮವನ್ನು ಹೇರುವ ಬಗ್ಗೆ ಏನು ಹೇಳುತ್ತೀರಿ? ಸಮಸ್ಯೆ ಇರುವುದು ಭಾಷಾ ಮಾಧ್ಯಮದಲ್ಲೋ, ಪಠ್ಯ ಕ್ರಮದಲ್ಲೋ?

ಶಂಕರ ಭಟ್ : ಶಾಲೆಗೆ ಬರುವ ಮಗು ಮನೆಯಲ್ಲಿ ಮಾತಾಡುವ ಭಾಷೆಗಿಂತ ಭಿನ್ನವಾದ ಭಾಷೆಯನ್ನು ಕಲಿಯಲೇಬೇಕು. ಅದನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ನೀವು ಹೇಳುವ ಸಮಸ್ಯೆಯನ್ನು ಶಿಕ್ಷಣತಜ್ಞರೇ ಪರಿಹರಿಸಬೇಕು. ಎಲ್ಲರ ಕನ್ನಡವನ್ನು ಇಟ್ಟುಕೊಳ್ಳಬೇಕು ಎಂದು ಹೊರಟಿರುವಾಗ ಈ ಸಮಸ್ಯೆಯನ್ನು ಬಗೆಹರಿಸಲು ಆಗುವುದಿಲ್ಲ. ಆದರೆ ಪಠ್ಯಕ್ರಮದಲ್ಲಿ ಕೊಳ್ಳೇಗಾಲದ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸ, ವಿಶೇಷತೆಗಳನ್ನು ವಿವರಿಸಿ ಹೇಳುವುದಾದರೆ ಈ ಸಮಸ್ಯೆ ಬಗೆಹರಿಸಬಹುದು. ಹಾಗೇ ಧಾರವಾಡ ಕನ್ನಡಕ್ಕೂ ಪಠ್ಯಕ್ರಮದ ಕನ್ನಡಕ್ಕೂ ಇರುವ ವ್ಯತ್ಯಾಸವನ್ನು ತಿಳಿಸಬೇಕು. ಅದರ ಬಗ್ಗೆ ಮೆಟೀರಿಯಲ್ ತಯಾರು ಮಾಡಬೇಕು. ಹೀಗಾದಾಗ ಮಕ್ಕಳಿಗೆ ಮನೆಯಲ್ಲಿ ತಾವು ಮಾತಾಡುವ ಕನ್ನಡ ಪಠ್ಯಕ್ರಮದಲ್ಲಿ ಬಳಕೆಯಾಗುವ ಕನ್ನಡಕ್ಕಿಂತ ಕೀಳು ಎಂಬ ಮನೋಭಾವ ದೂರವಾಗುತ್ತದೆ. ಅಮೇರಿಕಾದಲ್ಲಿ ಇದನ್ನು ಮಾಡುತ್ತಿದ್ದಾರೆ. ಅಲ್ಲಿ ಆಡು ಭಾಷೆಗೂ ಬರಹಕ್ಕೂ ಇರುವ ವ್ಯತ್ಯಾಸವನ್ನು ತಿಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈಗ ನಮ್ಮೆಲ್ಲರ ಮೇಲೆ ಅನ್ಯಪ್ರಭಾವ, ವ್ಯಾಕರಣ, ಮಾಧ್ಯಮ, ಪಠ್ಯಕ್ರಮ ಎಲ್ಲವನ್ನೂ ಹೊಸದಾಗಿ ರೂಪಿಸಿಕೊಳ್ಳುವ ದೊಡ್ಡ ಜವಾಬ್ದಾರಿ ಇದೆ.

ಸಿರಾಜ್: ಲಿಪಿಸುಧಾರಣೆಯನ್ನು ಮೊದಲು ಬಿಎಂಶ್ರೀಯವರೂ ಸಹ ಮಾಡಿದ್ದರು. ಅದು ಫಲಕಾರಿಯಾಗಲಿಲ್ಲ. ನೀವು ಮಾಡುತ್ತಿರುವ ಲಿಪಿಸುಧಾರಣೆ ಎಷ್ಟರಮಟ್ಟಿಗೆ ಯಶಸ್ಸು ಕಾಣಬಹುದು?

ಶಂಕರ ಭಟ್ : ಅದು ನನ್ನ ಕೈಯಲ್ಲಿ ಇಲ್ಲ. ಮಾಡಿದರೆ ಒಳ್ಳೆಯದು. ಬಿಎಂಶ್ರೀಯವರು ಮಾಡಿದ ಲಿಪಿ ಸುಧಾರಣೆಯಿಂದ ಹೆಚ್ಚು ಲಾಭ ಆಗಲಿಲ್ಲ. ಅವರು ಮಾಡಿದ ಸುಧಾರಣೆಯಲ್ಲಿ ಒತ್ತಕ್ಷರಗಳನ್ನು ತೆಗೆದು ಅವನ್ನು ಪಕ್ಕಪಕ್ಕದಲ್ಲಿ ಬರೆಯುವುದು ಮುಖ್ಯವಾಗಿತ್ತು. ಅದನ್ನು ಅವರು ತಮಿಳಿನ ಮಾದರಿಯಲ್ಲಿ ಮಾಡಿದ್ದರು. ಶ್ರೀಯವರಿಗೆ ಕನ್ನಡದಲ್ಲಿರುವ ಎಲ್ಲ ಅಕ್ಷರಗಳು ಬೇಕು. ನಾನು ಹೇಳುವಂತೆ ಮಹಾಪ್ರಾಣಗಳು ಬೇಡ ಎನ್ನುವ ನಿಲುವು ಅವರಿಗೆ ಇರಲಿಲ್ಲ.

ಸಿರಾಜ್
: ಕನ್ನಡ ಮತ್ತು ತಮಿಳು ಭಾಷೆಗಳೆರಡೂ ಲಿಪಿಯನ್ನ ಬ್ರಾಹ್ಮೀಯಿಂದ ತೆಗೆದುಕೊಂಡವು. ಆದರೆ ತಮಿಳಿನಲ್ಲಿ 31 ಅಕ್ಷರಗಳನ್ನು ಮಾತ್ರ ಉಳಿಸಿಕೊಂಡರು. ನಿಮ್ಮ ಪ್ರಕಾರ ನಾವು ಸಂಸ್ಕೃತದ ಎಲ್ಲ 52 ಅಕ್ಷರಗಳನ್ನು ಕನ್ನಡದಲ್ಲಿ ಉಳಿಸಿಕೊಂಡಿದ್ದರಿಂದಲೇ ನಮ್ಮ ಎಲ್ಲ ಸಮಸ್ಯೆಗಳು ಶುರುವಾದವೆ?

ಶಂಕರ ಭಟ್ : ಕನ್ನಡಕ್ಕೆ ಈಗಿರುವಂತೆ 52 ಅಕ್ಷರಗಳ ಅಗತ್ಯವಿಲ್ಲ. ಮಹಾಪ್ರಾಣ, ಷ ಕಾರ ಇತ್ಯಾದಿಗಳನ್ನು ಹೊರತುಪಡಿಸಿ 31 ಅಕ್ಷರಗಳು ಸಾಕು. ಇದರಿಂದ ಕೆಳವರ್ಗದ ಮಕ್ಕಳಿಗೆ ಮಹಾಪ್ರಾಣ, ಷಕಾರಗಳನ್ನು ಸರಿಯಾಗಿ ಉಚ್ಚರಿಸಲು ಬರುವುದಿಲ್ಲ ಎಂಬ ಕೀಳರಿಮೆ ಕಡಿಮೆಯಾಗುತ್ತದೆ. ಶ-ಷಗಳನ್ನು ಸರಿಯಾಗಿ ಹೇಳಲು ಬರದಿದ್ದರೆ ಅದರಿಂದ ಯಾರಿಗೆ ನಷ್ಟ? ಎಲ್ಲ ಪದಗಳನ್ನು ಓದುವ ಹಾಗೆ ಬರೆಯುವುದರಿಂದ ಉಚ್ಚಾರಣೆ ಮತ್ತು ಅಚ್ಚಿನ ತಪ್ಪುಗಳು ಇಲ್ಲವಾಗುತ್ತವೆ. ಇದರಿಂದ ಬರಹಕ್ಕೂ ಮಾತಿಗೂ ಇರುವ ಅಂತರ ಕಡಿಮೆಯಾಗುತ್ತದೆ. ಇಂಗ್ಲಿಷಿನಲ್ಲಿ ಬರಹಕ್ಕೂ ಉಚ್ಚಾರಣೆಗೂ ನೇರ ಸಂಬಂಧವಿಲ್ಲ. ಅದರಿಂದಾಗಿಯೇ ಇಂಗ್ಲಿಷಿನಲ್ಲಿ ಬಹಳ ಸ್ಪೆಲ್ಲಿಂಗ್ ಸಮಸ್ಯೆಗಳಿವೆ. ಅದು ಯಾರಿಗೂ ದೊಡ್ಡ ಕೊರತೆಯಾಗಿ ಕಾಣುವುದಿಲ್ಲ. ಕೊರಿಯನ್ ಮತ್ತು ಸ್ವೀಡಿಶ್ ಭಾಷೆಗಳಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಂಡಿದ್ದಾರೆ. ಸಂಸ್ಕೃತದ ಅಕ್ಷರಗಳನ್ನು ಹೊರತುಪಡಿಸಿ ಕನ್ನಡದಲ್ಲಿ ಉಚ್ಚಾರಣೆಗೂ ಬರಹಕ್ಕೂ ನೇರ ಸಂಬಂಧವಿದೆ. ಹಾಗಾಗಿ ಸಂಸ್ಕೃತದ ಅಕ್ಷರಗಳನ್ನು ಬಿಟ್ಟು ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಓದು ಕನ್ನಡವೇ ಬರಹ ಕನ್ನಡವಾಗಬೇಕು.

ಮೇಟಿ
: ಲಿಪಿ ಇರುವ ಭಾಷೆಗಳು ಮೇಲು ಲಿಪಿ ಇಲ್ಲದ ಭಾಷೆಗಳ ಕೀಳು ಎನ್ನುವ ನಂಬಿಕೆ ಯಾಕೆ ಇದೆ?

ಶಂಕರ ಭಟ್ : ಹೌದು ಜನಸಾಮಾನ್ಯರಲ್ಲಿ ಅಂತಹ ಒಂದು ನಂಬಿಕೆ ಇದೆ. ಬರಹ ಬೇಕೆಂದರೆ ಲಿಪಿ ಬೇಕು. ಬರಹ ಇಲ್ಲದಿದ್ದರೆ ಆ ಸಮುದಾಯಕ್ಕೆ ಯಾವುದೇ ತರಹದ ಅಡ್ವಾಂಟೇಜ್ ಸಿಗೋದಿಲ್ಲ. ಒಂದು ಸಮುದಾಯ ಶತ ಶತಮಾನಗಳ ಕಾಲ ಬೆಳೆಯಬೇಕೆಂದರೆ ಅವರ ಭಾಷೆಗೆ ಲಿಪಿ ಬೇಕು. ಬರಹವಿಲ್ಲದೇ ಭಾಷೆ ಇರಲಿ, ಆ ಸಮುದಾಯವೇ ಬೆಳೆಯೋದಕ್ಕೆ ಸಾಧ್ಯವಿಲ್ಲ. ಕೆಲವು ವರ್ಷಗಳ ಹಿಂದೆ ಬರಹ ಇದ್ದರೂ ಇಲ್ಲದಿದ್ದರೂ ಒಂದೇ ಆಗಿತ್ತು. ಇದು ಜನಸಾಮಾನ್ಯರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಆದರೆ ಇವತ್ತು ಎಲ್ಲರಿಗೂ ಬರಹ ಬೇಕೇ ಬೇಕು. ಅವರದೇ ಭಾಷೆಯ ಲಿಪಿಗಳು ಬೇಕೆನ್ನುವ ಅಗತ್ಯವಿಲ್ಲ. ಬೇರೆ ಭಾಷೆಯ ಲಿಪಿಯನ್ನು ಕೂಡ ಅಳವಡಿಸಿಕೊಳ್ಳಬಹುದು. ಉದಾಹರಣೆಗೆ ಮರಾಠಿ, ನೇಪಾಳಿ ಹಿಂದಿ, ಸಂಸ್ಕೃತ ಮುಂತಾದ ಭಾಷೆಗಳು ದೇವನಾಗರಿ ಲಿಪಿಯನ್ನು ಅಳವಡಿಸಿಕೊಂಡಿವೆ.

ಮೇಟಿ: ಭಾರತೀಯ ಎಲ್ಲಾ ಭಾಷೆಗಳಿಗೂ ಒಂದೇ ಲಿಪಿ ಬೇಕು ಎನ್ನುವ ವಾದಗಳು ಕೇಳಿಬರುತ್ತಿವೆ. ಇದಕ್ಕೆ ಏನು ಹೇಳುತ್ತೀರಿ?

ಶಂಕರ ಭಟ್ : ಇಲ್ಲ ಇದು ಸಾಧ್ಯವಾಗಲ್ಲ. ಒಂದೇ ಲಿಪಿ ಆಗಬೇಕು ಎನ್ನುವವರು ಹಿಂದಿಯವರು. ಅವರು ದೇವನಾಗರಿ ಲಿಪಿಯನ್ನೇ ಎಲ್ಲ ಭಾರತೀಯ ಭಾಷೆಗಳು ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಅವರು ಕನ್ನಡದ ಲಿಪಿಯನ್ನೇ ಎಲ್ಲರೂ ಅಳವಡಿಸಿಕೊಳ್ಳಲಿ ಎಂದು ಹೇಳುವುದಿಲ್ಲ. ಒಂದೇ ಲಿಪಿ ಬೇಕೆನ್ನುವುದು ಫೂಲಿಶ್ ನೆಸ್. ಈಗ ಕಂಪ್ಯೂಟರ್ ನಲ್ಲಿ ಒಂದೇ ಲಿಪಿಯನ್ನು ಅಟೋಮ್ಯಾಟಿಕ್ ಆಗಿ ಮಾಡಿಕೊಳ್ಳಬಹುದು. ಪ್ರಿಂಟಿಂಗ್ ನಲ್ಲಿ ಮೊಳೆ ಜೋಡಿಸೋದು ಕಷ್ಟವಿಲ್ಲ. ಹಾಗಾಗಿ ಸಮಸ್ಯೆ ಏನು? ಬೇರೆ ಭಾಷೆಯ ಲಿಪಿ ಕಲಿಯಬೇಕೆಂದರೆ ಕೆಲವು ತಾಸುಗಳಲ್ಲಿ ಕಲಿಯಬಹುದು. ವೈಜ್ಞಾನಿಕವಾಗಿ ಹೋಲಿಸಿ ನೋಡಿದರೆ ದೇವನಾಗರಿ ಲಿಪಿ ಕಷ್ಟ. ಕನ್ನಡ ಲಿಪಿ ಸುಲಭ. ತಮಿಳು ಲಿಪಿ ಇನ್ನೂ ಸುಲಭ. ಈ ಭಾಷೆಗೆ ಒತ್ತಕ್ಷರವಿಲ್ಲ. ಇದು ಪ್ರಿಂಟ್ ಮಾಡೋಕೆ ಸರಳವಾಗಿದೆ. ಅದಕ್ಕಾಗಿ ನಮ್ಮ ಲಿಪಿಗಳನ್ನು ನಾವು ಯಾಕೆ ಬಿಡಬೇಕು?

ಸಿರಾಜ್: ಕೆಲವು ಭಾಷೆಗಳಿಗೆ ವಿಶೇಷ ಮಾನ್ಯತೆ ನೀಡುವುದು, ಉದಾಹರಣೆಗೆ ಶಾಸ್ತ್ರೀಯ ಭಾಷೆಯ ಪಟ್ಟ ಕಟ್ಟುವುದು ಈ ಬಗ್ಗೆ ಏನು ಹೇಳುತ್ತೀರ?

ಶಂಕರ ಭಟ್ : ಇದರಿಂದ ಏನೂ ಲಾಭವಿಲ್ಲ.ಯಾಕೆಂದರೆ ಒಂದು ಭಾಷೆಗೆ 2000 ವರ್ಷಗಳ ಇತಿಹಾಸ ಇದೆ ಎನ್ನುವುದು ಸಾಮಾನ್ಯ ಮನುಷ್ಯನ ಮೇಲೆ ಯಾವ ಪ್ರಭಾವವನ್ನೂ ಬೀರುವುದಿಲ್ಲ. ಭಾಷೆಯ ಚರಿತ್ರೆಯನ್ನು ಅದರ ಲಿಖಿತ ಆಧಾರಗಳ ಮೇಲೆ ನಿರ್ಧಾರ ಮಾಡುವುದು ಸರಿಯಾದ ಕ್ರಮ ಅಲ್ಲ. ಅದಕ್ಕಿಂತ ಹಿಂದಿನ ಪ್ರೋಟೋ ಡ್ರಾವಿಡಿಯನ್ ಸಹ ಇದೆಯಲ್ಲ. ಭಾಷೆಯ ಚರಿತ್ರೆಯನ್ನು ನೋಡುವಾಗ ಲಿಖಿತ ರೂಪಗಳಿಗಿಂತ ಹಿಂದಿನ ಭಾಷಾ ರೂಪಗಳನ್ನೂ ಸಹ ನೋಡಬೇಕು. ಅವುಗಳನ್ನು ಹೇಗೆ ಹುಡುಕುವುದು? ಒಂದು ಭಾಷೆ 2000 ವರ್ಷಗಳಷ್ಟು ಹಿಂದಿನದು ಎಂದರೆ ಅದಕ್ಕಿಂತ ಹಿಂದಿನ ಭಾಷಾ ರೂಪಗಳ ಚರಿತ್ರೆಯನ್ನು ಏನು ಮಾಡಬೇಕು. ಹೀಗೆ ಮಾಡುತ್ತ ಹೊದರೆ ತಮಿಳಿನವರು ಅದಕ್ಕಿಂತ ಹಿಂದೆ ಹೋಗಿ ತಮ್ಮ ಪ್ರಾಚೀನತೆಯನ್ನು ಸ್ಥಾಪಿಸುತ್ತಾರೆ. ಇದು ಎಂಡ್ ಲೆಸ್.

ಮೇಟಿ: ಋ ಕಾರವನ್ನು ಬಿಡುವ/ಉಳಿಸಿಕೊಳ್ಳುವ ಬಗ್ಗೆ ದೊಡ್ಡ ಚರ್ಚೆ ಕನ್ನಡದಲ್ಲಿ ನಡೆಯಿತು. ಸಮುದಾಯ ಸಂಸ್ಕೃತಿಗಳ ಬಗ್ಗೆ ಆಳವಾಗಿ ಚಿಂತಿಸಿದವರೂ ಸಹ ಕನ್ನಡದ್ದಲ್ಲದ ಧ್ವನಿಯ ಪರವಾಗಿ ನಿಂತಿದ್ದರು.

ಶಂಕರ ಭಟ್ : ಇದು ನನಗೆ ಆಶ್ಚರ್ಯಕರವಾಗಿ ಕಂಡಿದೆ. ಬಹಳ ಜನರಿಗೆ ಕನ್ನಡದ್ದೇ ಆದ ಅಕ್ಷರಗಳು ನಾಶವಾಗಿ ಹೋಗಿರುವ ಬಗ್ಗೆ ಏನೂ ಅನಿಸಿದ ಹಾಗೆ ಕಾಣುವುದಿಲ್ಲ. ಕನ್ನಡದ್ದೇ ಧ್ವನಿಗಳಾದ ರಳ-ಕುಳಗಳು ಬಿದ್ದುಹೋಗಿವೆ. ಕೆ.ವಿ.ಸುಬ್ಬಣ್ಣನವರು ಋ ಕಾರವನ್ನು ಬಿಡುವುದು ಕಷ್ಟ ಎಂದು ಲೇಖನ ಬರೆದಿದ್ದರು. ತಿರುಮಲೇಶ್ ಅವರೂ ಸಹ ಇದೇ ವಾದ ಮಾಡಿದ್ದರು. ಇಂಥ ಸಂಸ್ಕೃತ ಧ್ವನಿಗಳಿಂದ ಯಾವುದೇ ತರಹದ ಅಡ್ವಾಂಟೇಜ್ ಇಲ್ಲ, ಅದನ್ನು ಯಾರೂ ತೊರಿಸಿಕೊಟ್ಟಿಲ್ಲ. ಇದು ಒಂದು ರೀತಿಯಲ್ಲಿ ಅವರಿಗೆ ಸಂಸ್ಕೃತದ ಬಗ್ಗೆ ಇರುವ ಹೈ ರಿಗಾರ್ಡ್ ನಿಂದ ಬಂದಿದೆ. ಸಂಸ್ಕೃತ ದೇವ ಭಾಷೆ/ದೇವರ ಭಾಷೆ ಎಂಬ ಭಾವನೆ ಬಹಳ ಕಾಲದಿಂದ ಬಂದಿದೆ. ಅದಕ್ಕೆ ಅಷ್ಟು ಮಾನ್ಯತೆ ನೀಡುವುದರಲ್ಲಿ ನನಗೆ ನಂಬಿಕೆ ಇಲ್ಲ. ಹಾಗೆ ನೋಡಿದರೆ ಬಹಳ ಜನ ಕನ್ನಡ ಪಂಡಿತರು ಸಂಸ್ಕೃತದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ.

ಸಿರಾಜ್: ಒಂದು ವಿಚಿತ್ರ ಇದೆ. ಕನ್ನಡದ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಾ ದೊಡ್ಡ ಕೆಲಸ ಮಾಡಿರುವ ನೀವು ಹೆಚ್ಚಾಗಿ ಬರೆದಿರುವುದು ಇಂಗ್ಲಿಷಿನಲ್ಲಿ. ಇದನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?

ಶಂಕರ ಭಟ್
: ಹೌದು, ನಾನು ಇಂಗ್ಲಿಷಿನಲ್ಲಿ ಯೋಚಿಸಿ, ಓದಿದ್ದನ್ನು ಈಗ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಮೇಲಾಗಿ ಮೊದಲು ಸಂಸ್ಕೃತದಲ್ಲಿ ಇದ್ದ ಹಾಗೆ ಈಗ ಎಲ್ಲ ನಾಲೆಜ್ ಇರುವುದು ಇಂಗ್ಲಿಷಿನಲ್ಲಿ. ಕನ್ನಡದಲ್ಲಿ ನಾನು ಬರೆದದ್ದನ್ನು ಚರ್ಚಿಸುವ ವಾತಾವರಣ ಇರಲಿಲ್ಲ. ಬರೆದದ್ದನ್ನು ಓದುವವರಿಲ್ಲದಿದ್ದರೆ ಏನು ಮಾಡಬೇಕು. ಕನ್ನಡದಲ್ಲಿ ನಾನು ಎಪ್ಪತ್ತರ ದಶಕದಲ್ಲಿ ಒಂದೂವರೆ ವರ್ಷ ಕಷ್ಟ ಪಟ್ಟು ಬರೆದ ಪುಸ್ತಕವನ್ನು ಸರಿಯಾಗಿ ಚರ್ಚಿಸುವ ವಾತಾವರಣ ಇದ್ದಿದ್ದರೆ ನಾನು ಇಂಗ್ಲಿಷಿನಲ್ಲಿ ಹೆಚ್ಚು ಬರೆಯುತ್ತಿರಲಿಲ್ಲ. ಆಗ ನಾನು ಒಂದು ರೀತಿಯ ಫ್ರಸ್ಟ್ರೇಶನ್ ಗೆ ಒಳಗಾದೆ. ಆ ಪುಸಕ್ತಕ್ಕೆ ಒಂದು ರಿವ್ಯೂ ಸಹ ಬರಲಿಲ್ಲ. ಈಗ ನಿಧಾನಕ್ಕೆ ವಾತಾವರಣ ಬದಲಾಗುತ್ತಿದೆ.

ಮೇಟಿ: ಭಾಷಾ ಬಳಕೆಯಲ್ಲಿ ಸರಿತಪ್ಪುಗಳು ಇಲ್ಲ ಎಂಬ ವಾದವನ್ನು ಭಾಷಾವಿಜ್ಞಾನಿಗಳು ಮಂಡಿಸುತ್ತಾರೆ. ಆದರೆ ಈ ವಾದಕ್ಕೆ ಮನ್ನಣೆ ಸಿಕ್ಕಿಲ್ಲ ಯಾಕೆ?

ಶಂಕರ ಭಟ್ : ಮಹಾಪ್ರಾಣಗಳು ಕನ್ನಡದ ಉಚ್ಛಾರಣೆಯಲ್ಲಿಲ್ಲ ಬರವಣಿಗೆಯಲ್ಲಿ ಮಾತ್ರ ಇವೆ. ಇವು ಸಂಸ್ಕೃತದ ಬಾರೋವಿಂಗ್ಸ್ ನಲ್ಲಿ ಇವೆ. ಯಾರಿಗೆ ಸಂಸ್ಕೃತದ ಮೇಲೆ ಮೋಹವಿದೆಯೋ ಅವರು ಇದನ್ನು ಸಂಸ್ಕೃತದಂತೆ ಬರೆಯಬೇಕು ಎನ್ನುತ್ತಾರೆ. ಮುಖ್ಯವಾಗಿ ಎಲ್ಲರೂ ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಕನ್ನಡವು ಸಂಸ್ಕೃತದ ವಿಕೃತರೂಪವಲ್ಲ. ಕನ್ನಡವನ್ನು ಹೇಗೆ ಓದುತ್ತೇವೋ ಹಾಗೇ ಬರೆಯಬೇಕು. ಬರಹಕನ್ನಡ ಸರಿ ಆಡುಕನ್ನಡ ತಪ್ಪು ಎಂಬ ವರ್ಗೀಕರಣವೇ ತಪ್ಪು. ಭಾಷಾವಿಜ್ಞಾನಿ ಸರಿ ತಪ್ಪು ಅನ್ನುವ ವರ್ಗೀಕರಣವನ್ನೇ ಒಪ್ಪುವುದಿಲ್ಲ. ಸಂಸ್ಕೃತ ಪಂಡಿತರು ಬರಹ ಮೇಲು ಮಾತು ಕೀಳು ಎನ್ನುವ ಡೈಕಾಟಮಿಯನ್ನು ಸೃಷ್ಟಿಸಿದರು.

ಮೇಟಿ: ಕನ್ನಡ ಬರಹ ಸರಿಪಡಿಸೋಣ ಎನ್ನುವ ಚಿಂತನೆಯ ಹಿಂದಿನ ಉದ್ದೇಶ ಸಂಸ್ಕೃತಿ ಉದ್ಧಾರವೇ?

ಶಂಕರ ಭಟ್ : ಇಲ್ಲ, ನಾನು ಸಂಸ್ಕೃತಿಯ ಬಗ್ಗೆ ಮಾತಾಡುವುದಿಲ್ಲ. ಅಪ್ಪರ್ ಕ್ಲಾಸ್ ಮಕ್ಕಳಿಗೆ ಕನ್ನಡ ಬರಹ ಬೇಕಾಗಿಲ್ಲ. ಕೆಳವರ್ಗದ ಮತ್ತು ಬಡವರ ಮಕ್ಕಳು ಮಾತ್ರ ಕನ್ನಡ ಮಾಧ್ಯಮ ಶಾಲೆಗೆ ಹೋಗುತ್ತಾರೆ. ಕನ್ನಡ ಬರಹದ ಉದ್ಧಾರಕ್ಕಾಗಿ ಕನ್ನಡ ಬರಹ ಸರಿಪಡಿಸಬೇಕಿದೆ. ಬರಹ ಇಲ್ಲಿಯವರೆಗೆ ಕೆಲವೇ ಕೆಲವು ಜನರ ಸೊತ್ತಾಗಿತ್ತು. ಈಗ ಅದು ಎಲ್ಲರ ಸೊತ್ತಾಗಬೇಕು. ವಿಜ್ಞಾನ ಮುಂತಾದ ವಿಷಯಗಳನ್ನು ಕಲಿಸುವಾಗ ಸಂಸ್ಕೃತದ ತ್ರಿಶಂಕು ಪದಗಳನ್ನು ಕಾಯಿನ್ ಮಾಡಿ ಕಲಿಸುತ್ತಿದ್ದರು. ಇದರಿಂದ ಮಕ್ಕಳ ಕಲಿಕೆ ಕಷ್ಟವಾಗುತ್ತಿದೆ. ಕನ್ನಡ ಪದಗಳನ್ನು ಬಳಸಿದರೆ ಮಕ್ಕಳಿಗೆ ಕಲಿಕೆ ಸಲಭವಾಗುತ್ತದೆ. ಕನ್ನಡ ಬರಹದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸೋದೇ ನಮ್ಮ ಉದ್ದೇಶ.

ಮೇಟಿ: ಭಾಷೆಯ ಉದ್ಧಾರ ಅದು ಸಂಸ್ಕೃತಿಯ ಉದ್ಧಾರವಲ್ಲವೇ?

ಶಂಕರ ಭಟ್ : ವಚನಕಾರರು ಎಲ್ಲರನ್ನು ತಲುಪಬೇಕೆಂದು, ಅದು ಬರಹದ ಮೂಲಕವಲ್ಲ ಮಾತಿನ ಮೂಲಕ ಅದಕ್ಕಾಗಿ ಅವರು ಎಲ್ಲರ ಕನ್ನಡವನ್ನು ಬಳಸಿದರು. ಅವರು ಮಾಡಿದ್ದು ಅದು ಸಾಮಾಜಿಕ ಚಳುವಳಿ. ಭಾಷಾ ಚಳುವಳಿಯಲ್ಲ. ಬೌದ್ಧರು ಪಾಲಿಯನ್ನು ಹಾಗೂ ಜೈನರು ಪ್ರಾಕೃತವನ್ನು ಬಳಸಿದರು. ಇದಕ್ಕೆ ಕಾರಣ ಹೆಚ್ಚಿನ ಜನರಿಗೆ ಇವರ ವಿಚಾರಗಳು ಅರ್ಥವಾಗಲಿ ಎನ್ನುವುದಾಗಿತ್ತು.

ಮೇಟಿ: ಇವರೆಲ್ಲರೂ ಸಂಸ್ಕೃತಿಯ ಉದ್ಧಾರಕ್ಕಾಗಿ ಭಾಷೆಯನ್ನು ಒಂದು ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರಲ್ಲವೇ?

ಶಂಕರ ಭಟ್ : ಹೌದು, ಇವರು ಭಾಷೆಯನ್ನು ಒಂದು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ಬರಹದಿಂದ ನಾವೆಲ್ಲರೂ ಏನು ಲಾಭ ಪಡೆಯುತ್ತೇವೋ ಅದನ್ನು ಎಲ್ಲರೂ ಪಡೆಯಲಿ ಅನ್ನುವುದೇ ನಮ್ಮ ಉದ್ದೇಶ.

ಮೇಟಿ: ಬರಹದಲ್ಲಿ ಆಗುವ ಮಾರ್ಪಾಡುಗಳನ್ನು ಗಮನಿಸಿ ಭಾಷಾಶಾಸ್ತ್ರಜ್ಞರು ಭಾಷಾಚರಿತ್ರೆಯನ್ನು ಕಟ್ಟುತ್ತಾರೆ. ಆದರೆ ನಿಮ್ಮ 'ಕನ್ನಡ ಭಾಷೆಯ ಕಲ್ಪಿತ ಚರಿತ್ರೆ' ಪ್ರಕಾರ ಆಡುನುಡಿಗಳ ಬದಲಾವಣೆಗಳನ್ನು ಒಳಗೊಳ್ಳದೆ ಇರುವುದರಿಂದ ಭಾಷಿಕ ಬದಲಾವಣೆಗಳನ್ನು ವರ್ಣಿಸುವ ಬಗೆ ಕಲ್ಪಿತವೇ ಅಥವಾ ಬರಹದಲ್ಲಿರುವುದೇ ಕಲ್ಪಿತವೇ?

ಶಂಕರ ಭಟ್ : ಹಾಗಲ್ಲ ಅದು ಭಾಷೆಯ ಚರಿತ್ರೆಯನ್ನು ಕಟ್ಟುವ ಬಗೆ ಕಲ್ಪಿತ ಹೊರತು ಬರಹದಲ್ಲಿರುವುದು ಕಲ್ಪಿತವಲ್ಲ. ಉದಾಹರಣೆಗೆ ಕನ್ನಡ ಮತ್ತು ತಮಿಳು ಎರಡು ಒಂದೇ ಆಗಿರುವ ಕಾಲಕ್ಕೆ ಮರಳಿ ಹೋಗಿ ಆ ಎರಡು ಭಾಷೆಗಳನ್ನು ಹೋಲಿಸಿ ಅವುಗಳ ಕಾಲವನ್ನು ನಿರ್ಧರಿಸುವ ಬಗೆ ಕಲ್ಪಿತವಾಗಿರುತ್ತದೆ. ಆ ಎರಡು ಭಾಷೆಯ ಪದಗಳನ್ನು ಹೋಲಿಸಿ ನೋಡಬೇಕು. ಉದಾಹರಣೆಗೆ ತಮಿಳಿನಲ್ಲಿ ವೆಳ್ಳ್ ಇದೆ ಕನ್ನಡದಲ್ಲಿ ಬಿಳಿ ಇದೆ. ಇವೆರಡನ್ನು ಕಂಪೇರ್ ಮಾಡಿ ಯಾವುದು ಮೊದಲು ಅನ್ನುವುದನ್ನು ಗುರುತಿಸಬೇಕು. ಇಂತಹ ಹೋಲಿಕೆ ಕನ್ನಡದಲ್ಲಿಯೇ ಸಾಧ್ಯವಿದೆ. ಉದಾಹರಣೆಗೆ ಬಿಳಿ ಹಾಗೂ ಬೆಳ್ಳಗೆ ಎರಡೂ ಕನ್ನಡದಲ್ಲಿವೆ. ಇದು ಬಹುಶಃ ಪೂರ್ವಹಳಗನ್ನಡದ ವಡ್ಡಾರಧನೆಯಲ್ಲಿ ವೆ>ಬೆ ಆಗಿ ಬೆಳ್ಳ್ ಅನ್ನುವುದು ಇಕಾರ ಅಥವಾ ಉಕಾರ ಬಂದಾಗ ಬಿಳಿ ಆಗಿರಬಹುದು. ಇದಕ್ಕೆ ಇಂಟರ್ನಲ್ ರೀ-ಕನ್ ಸ್ಟ್ರಕ್ಸನ್ ಎಂದು ಹೇಳುತ್ತಾರೆ. ಈ ಬದಲಾವಣೆ ಹವ್ಯಕ ಹಾಗೂ ಕೋಸ್ಟಲ್ ಕನ್ನಡದಲ್ಲಿ ಆಗಿಲ್ಲ. ಇದನ್ನು ಮೂಲದ್ರಾವಿಡಕ್ಕೆ ಹೋಲಿಸಿ ನೋಡಬಹುದು. ಇಂತಹ ರೀ-ಕನ್ ಸ್ಟ್ರಕ್ಸನ್ ಗೆ ಯಾವುದೇ ಡಾಟಾ ಇಲ್ಲ. ಹಾಗಾಗಿ ಭಾಷೆಯ ಚರಿತ್ರೆಯನ್ನ ಕಟ್ಟುವ ಬಗೆ ಕಲ್ಪಿತವಾಗಿರುತ್ತದೆ.

ಮೇಟಿ: ಹಾಗಾದರೆ ಪ್ರೊ. ಎಸ್ ಶಟ್ಟರ್ ಅವರು ಇತ್ತೀಚಿಗೆ ಬರೆದ `ಶಂಗಂ ತಮಿಳಗಂ ಮತ್ತು ಕನ್ನಡ ನಾಡು ನುಡಿ' ಪುಸ್ತಕವು ಕನ್ನಡ ಭಾಷೆಯ ಚರಿತ್ರೆಯನ್ನು ಕಟ್ಟುವ ಕುರಿತು ಏನು ಹೇಳುತ್ತದೆ?

ಶಂಕರ ಭಟ್ : ಈ ಪುಸ್ತಕದಲ್ಲಿ ಭಾಷೆಯ ಚರಿತ್ರೆಯನ್ನು ಕಟ್ಟುವ ಚರ್ಚೆಗಳು ಬಂದಾಗಲೆಲ್ಲ ಅವರು ಅವಾಯ್ಡ್ ಮಾಡ್ತಾರೆ. ಭಾಷೆಯ ಬಗೆಗೆ ಅವರು ಹೆಚ್ಚಿನದನ್ನು ಹೇಳಲ್ಲ. ಕೆಲವು ವರ್ಡ್ಸ್ ಗಳನ್ನಿಟ್ಟುಕೊಂಡು ಚರ್ಚೆ ಮಾಡಿದರೆ, ಅದು ಭಾಷೆ ಅಥವಾ ವ್ಯಾಕರಣದ ಬಗ್ಗೆ ಏನೂ ಹೇಳಿದಂತಲ್ಲ. ಪುಸ್ತಕ ಓದಿ ನೋಡಿದೆ. ಅದು ಭಾಷೆಯ ಬದಲಾವಣೆಯ ಕುರಿತು ಏನನ್ನೂ ಹೇಳಿದಂತಿಲ್ಲ. ಭಾಷೆಯ ಚರಿತ್ರೆಯ ಬಗ್ಗೆ ಮಾತನಾಡುವಾಗ ಕೆಲವು ಸ್ಟ್ರಕ್ಚರ್ಸ್ ಅಥವಾ ಸೆಂಟನ್ಸ್ ಗಳನ್ನು ಗಮನಿಸಬೇಕಾಗುತ್ತೆ. ಕನ್ನಡ ಅಂತ ಹೇಳೋಕೆ ಕೆಲವು ಕಾರಣಗಳಿರುತ್ತವೆ. ಕನ್ನಡ ಮತ್ತು ತಮಿಳಿಗೆ ಏನು ವ್ಯತ್ಯಾಸ ಇದೆ. ಕನ್ನಡವನ್ನು ಕನ್ನಡವಾಗಿಸುವ ಹಾಗೂ ತಮಿಳನ್ನು ತಮಿಳಾಗಿಸುವ ಅಂಶಗಳು ಯಾವುವು ಎಂಬುದನ್ನು ಅವರು ಚರ್ಚಿಸಿಲ್ಲ. ಅಂದರೆ, ಕನ್ನಡದ ಅನನ್ಯತೆ ಗುರುತಿಸುವಲ್ಲಿ, ಅದರ ರಚನೆಯ ಸ್ವರೂಪ ಹೇಗಿದೆ ಅನ್ನುವುದನ್ನು ಅವರು ಗುರುತಿಸಿಲ್ಲ. ಉದಾಹರಣೆಗೆ ತಮಿಳಿನಲ್ಲಿ ಕ್>ಚ್ [ಕೇರಿ>ಚೇರಿ] ಧ್ವನಿಯಾಗಿ ಬದಲಾವಣೆ ಆಗಿದೆ. ಈ ಚೇಂಜ್ ಕನ್ನಡದಲ್ಲಿ ಆಗಿಲ್ಲ. ಈ ಚೇಂಜ್ ಯಾವಾಗ ಆಯ್ತೋ ಆವಾಗ ತಮಿಳಿಗೆ ಒಂದು ಐಡೆಂಟಿಟಿ ಸಿಕ್ಕಿದೆ. ಮತ್ತು ಕನ್ನಡಕ್ಕೂ ಒಂದು ಐಡೆಂಟಿಟಿ ಸಿಕ್ಕಿದೆ. ಇದರ ಬಗ್ಗೆ ಅವರು ಏನಾದರೂ ಹೇಳಿದ್ದಾರಾ? ಇಲ್ಲ. ಹಾಗಾಗಿ ಅದರ ಬಗ್ಗೆ ನಾನೇನು ಹೇಳಲ್ಲ. ಅದು ಸರಿಯೋ ತಪ್ಪೋ, ಅವರ ಹಿಸ್ಟಾರಿಕಲ್ ಪರ್ ಸ್ಪೆಕ್ಟಿವ್ ನನಗಿಲ್ಲ.

ಮೇಟಿ: ಶಬ್ದಮಣಿದರ್ಪಣವನ್ನು ಕುರಿತು ನೀವು ಬರೆದಿದ್ದೀರಿ. ಬಹಳ ಕಾಲದಿಂದ ಅದನ್ನು ವಿಶ್ವವಿದ್ಯಾಲಯಗಳು, ಪಂಡಿತರು ಅದನ್ನು ಎತ್ತಿಹಿಡಿಯುತ್ತ ಬಂದಿದ್ದರೂ ಒಟ್ಟಾಗಿ ಅದರ ಪ್ರಾಮುಖ್ಯತೆಯನ್ನೇ ನೀವು ಅಲ್ಲಗಳೆದಿದ್ದೀರ.....

ಶಂಕರ ಭಟ್ : ಕಾರಣ ಏನು ಅಂದರೆ ಅವನು ಅದನ್ನು ಬರೆದು ನೂರಾರು ವರ್ಷಗಳು ಕಳೆದಿದ್ದರೂ ಅದು ಸರಿಯೋ ತಪ್ಪೋ ಎಂದು ಹುಡುಕುವ ಗೋಜಿಗೇ ಹೋಗಿಲ್ಲ. ನಮ್ಮಲ್ಲಿ ಒಂದು ಕಾಮೆಂಟರಿ ಮೆಂಟಾಲಿಟಿ ಇದೆ. ರಾಮಾನುಜ ಶಂಕರಾಚಾರ್ಯರೂ ಸಹ ಕಾಮೆಂಟರಿ ಬರೆದರೇ ವಿನಾ ಇಂಡಿಪೆಂಡೆಂಟಾಗಿ ಬರೆಯಲಿಲ್ಲ. ಇದರಿಂದ ನಾವು ಬಹಳ ಕಾಲ ಸ್ವತಂತ್ರವಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ ಶಬ್ದಮಣಿದರ್ಪಣದಲ್ಲಿ ತಪ್ಪು ಕಂಡರೂ ಇದೆ ಎಂದು ಹೇಳಲಿಲ್ಲ. ಅದು ಮುಖ್ಯವಾಗಿ ಸಂಸ್ಕೃತದ ಬಗ್ಗೆ ಇದೆಯೇ ಹೊರತು ಕನ್ನಡದ ಬಗ್ಗೆ ಅಲ್ಲ. ಕನ್ನಡದ ಬಗ್ಗೆ ಕೆಲವು ಪ್ರಸ್ತಾಪಗಳು ಇದ್ದರೂ ಅವನು ಹೇಳುವುದರಲ್ಲಿ ಎಪ್ಪತ್ತೈದು ಭಾಗ ತಪ್ಪುಗಳೇ ತುಂಬಿಕೊಂಡಿವೆ. ಮೇಲಾಗಿ ಕೇಶಿರಾಜ ಕವಿಯೇ ಹೊರತು ಪಾಣಿನಿಯಂಥ ದೊಡ್ಡ ಸ್ಕಾಲರ್ ಅಲ್ಲ. ಅವನಲ್ಲೂ ಸಹ ಭಾಷೆಯ ಬಗ್ಗೆ ಬರುವ ಪ್ರಸ್ತಾಪಗಳು ಮುಖ್ಯವಾಗಿ ಸಾಹಿತ್ಯವನ್ನು ಗುರಿಯಾಗಿ ಇಟ್ಟುಕೊಂಡು ಹೇಳಿರುವಂಥವೇ ಆಗಿವೆ.

ಮೇಟಿ: ನಿಮ್ಮ ಪ್ರಕಾರ ಶಾಲಾ ವ್ಯಾಕರಣದ ಸ್ವರೂಪ ಹೇಗಿರಬೇಕು?

ಶಂಕರ ಭಟ್ : ಶಾಲೆಯಲ್ಲಿ ವ್ಯಾಕರಣ ಕಲಿಸ್ತಾರೆ ಇಲ್ಲಿಯವರೆಗೆ ಏನು ಕಲಿಸಿದರೋ ಅದರಿಂದ ಏನೂ ಪ್ರಯೋಜನವಾಗಿಲ್ಲ. ವ್ಯಾಕರಣ ಕಲಿಸೋದು ಬೇಡ ಮಕ್ಕಳು ಹೇಗಾದರೂ ಭಾಷೆ ಕಲಿತಾರೆ ಎಂದೂ ತೀರ್ಮಾನ ಮಾಡಿದ್ದರು. ಆದರೆ ಪಾಲಕರು ಹೇಳೋದೆನಂದರೆ ನೀವು ವ್ಯಾಕರಣ ಕಲಿಸಲ್ಲ ಅದಕ್ಕೆ ಮಕ್ಕಳು ಭಾಷೆಯನ್ನು ಕಲಿತಾಯಿಲ್ಲ. ವ್ಯಾಕರಣ ಕಲಿಸಬೇಕು ಆದರೆ ಯಾವ ತರಹದ ವ್ಯಾಕರಣ ಕಲಿಸಬೇಕು ಅನ್ನುವುದು ಮುಖ್ಯ. ಮಕ್ಕಳಿಗೆ ಉಪಯೋಗವಾಗುವಂತಹ ವ್ಯಾಕರಣ ಕಲಿಸಬೇಕು. ಸಂಸ್ಕೃತದ ಸಂಧಿ ಸಮಾಸಗಳನ್ನು ಕನ್ನಡದ ಮಕ್ಕಳಿಗೆ ಕಲಿಸುವುದರಿಂದ ಏನು ಲಾಭ? ವ್ಯಾಕರಣದಲ್ಲಿ ಯಾವುದು ಬೇಕು ಅಂದರೆ ಬರವಣಿಗೆ ಹಾಗೂ ಮಾತಿಗೆ ಯಾವುದು ಬೇಕು ಅದನ್ನ ಮಾತ್ರ ಕಲಿಸಿದರೆ ಸಾಕು.

ಸಿರಾಜ್: ಜಾಗತೀಕರಣದಿಂದ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳು ಕಣ್ಮರೆಯಾಗುವ ಅಪಾಯದ ಬಗ್ಗೆ ಏನು ಹೇಳುತ್ತೀರಿ.

ಶಂಕರ ಭಟ್ : ಇದನ್ನು ಪೂರ್ತಿ ಒಪ್ಪಲು ಸಾಧ್ಯವಿಲ್ಲ. ಭಾಷೆ ಮರೆಯಾಗುತ್ತದೆ ಅಂದರೆ ಅದನ್ನು ಮಾತನಾಡುವ ಸಮುದಾಯವೂ ಮರೆಯಾಗಿದೆ ಎಂದು ಅರ್ಥ. ಪ್ರಾಣಿ ಪಕ್ಷಿಗಳು ಮರೆಯಾಗುವ ಹಾಗೆ, ಜೀವ ವೈವಿಧ್ಯತೆ ಕಾಣೆಯಾಗುವ ಹಾಗೆ ಭಾಷೆಗಳೂ ಕ್ರಮೇಣ ಮರೆಯಾಗುತ್ತಿವೆ.

ಸಿರಾಜ್: ಸದ್ಯ ಹೆಗ್ಗೋಡಿನಲ್ಲಿ ನೀವು ನೆಲೆಸಿದ್ದೀರಿ. ನೀನಾಸಂ ಸಂಸ್ಕೃತಿಯ ಕ್ಷೇತ್ರದಲ್ಲಿ ಮಾಡುವುದನ್ನು ನೀವು ಭಾಷೆಯಲ್ಲಿ ಮಾಡುತ್ತಿದ್ದೀರಿ. ಇದು ನಿಮ್ಮ ಕೆಲಸಕ್ಕೆ ಹೇಗೆ ಪೂರಕವಾಗಿದೆ?



ಶಂಕರ ಭಟ್ : ಸುಬ್ಬಣ್ಣ ಅವರು ಇದ್ದಾಗ ಹಲವು ಬಾರಿ ನನ್ನನ್ನು ಕರೆದಿದ್ದರು. ನಾನು ಸ್ವಲ್ಪ ಸಂಕೋಚದ ಮನುಷ್ಯನಾಗಿರುವುದರಿಂದ ಹೋಗಲಿಲ್ಲ. ಆದರೆ ನೀನಾಸಂನ ಕೆಲಸಕ್ಕೂ ನನ್ನ ಕೆಲಸಕ್ಕೂ ಅಂತಹ ಸಂಬಂಧ ಇಲ್ಲ. ನಾನು ಇಲ್ಲಿನ ತಂಪು ವಾತಾವರಣದ ಬಗ್ಗೆ ಕೇಳಿ ಅಕ್ಷರ ಅವರಿಗೆ ಫೋನ್ ಮಾಡಿದೆ. ಆಗ ಅವರ ಬಳಿ ಹೇಳಿದ್ದು: ನಾನು ನಿಮ್ಮಲ್ಲಿಗೆ ಬಂದು ಹವ್ಯಕರ ಭಾಷೆಯ ಬಗ್ಗೆ ಕೆಲಸಮಾಡುತ್ತೇನೆ ಎಂದು. ನಂತರ ಮಾಡಲಿಲ್ಲ, ಅವರು ಕೇಳಲಿಲ್ಲ. ಅದು ಬೇರೆ ಮಾತು.....(ನಗು). ನನ್ನ `ಮಾತಿನ ಒಳಗುಟ್ಟು' ಪುಸ್ತಕವನ್ನು ಅವರೇ ಪ್ರಿಂಟ್ ಮಡುತ್ತೇನೆ ಎಂದಿದ್ದರು. ಆದರೆ ಅದನ್ನು ನಾನು ಹೊಸ ಬರಹದಲ್ಲಿ ಬರೆದದ್ದು ಅವರಿಗೆ ಇಷ್ಟವಾಗಲಿಲ್ಲ ಅನಿಸುತ್ತೆ.

ಸಿರಾಜ್: ಕನ್ನಡ ಚಳುವಳಿಗಳ ಉದ್ದೇಶ ಈಡೇರಿದೆಯೆ? ಈ ಚಳುವಳಿಗಾರರ ಬಗ್ಗೆ ಇರುವ ದೊಡ್ಡ ಆಪಾದನೆ ಎಂದರೆ ಅವರಿಗೆ ಶ-ಸ ಉಚ್ಚಾರಣೆ ಬರುವುದಿಲ್ಲ ಎನ್ನುವುದು. ಅವರು ನಿಮ್ಮ ವಾದವನ್ನು ತಿಳಿದುಕೊಂಡರೆ ಈ ಚಳುವಳಿಗಳಿಗೆ ಹೊಸದಿಕ್ಕು ಸಿಗುತ್ತದೆ ಎಂದು ನಿಮಗೆ ಅನಿಸುತ್ತದೆಯೇ?

ಶಂಕರ ಭಟ್ : ಚಳುವಳಿಗಳ ವಿಷಯ ಬೇಡ. ಅವನ್ನು ಕುರಿತು ನಾನು ಮಾತಾಡಲು ಬಯಸುವುದಿಲ್ಲ. ಮೇಲಾಗಿ ನಾನು ಹೇಳುವ ವಿಚಾರಗಳು ಚಳುವಳಿಯಿಂದ ಈಡೇರುತ್ತವೆ ಎಂದು ನನಗೆ ಅನಿಸುವುದಿಲ್ಲ.

ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ?

ಡಾ.ವೀರಣ್ಣ ದಂಡೆ




(ಡಾ.ವೀರಣ್ಣ ದಂಡೆ ಅವರದು ಕನ್ನಡ ಜಾನಪದ ಕ್ಷೇತ್ರದಲ್ಲಿ ಮರೆಯಲಾರದ ಹೆಸರು. ಅವರ ದೇಸಿ ಸಂಪುಟಗಳು ಜಾನಪದ ಅಧ್ಯಯನದ ಚಲನೆಯ ಹಲವು ಮಗ್ಗಲುಗಳ ಬಗ್ಗೆ ಗಮನ ಸೆಳೆಯುತ್ತವೆ. ಅದರಲ್ಲೂ ಹೈದರಾಬಾದ್ ಕರ್ನಾಟಕದ ಜಾನಪದ ಸಾಹಿತ್ಯದ ಸಂಗ್ರಹಣೆ ವಿಶ್ಲೇಷಣೆಯಲ್ಲಿ ವೀರಣ್ಣ ದಂಡೆ ಅವರು ದೊಡ್ಡ ಕೆಲಸ ಮಾಡಿದ್ದಾರೆ. ಅವರು ಹಾಲುಮತ ಮಹಾಕಾವ್ಯವನ್ನು ಸಂಗ್ರಹಿಸಿದ್ದಾರೆ, ಜಾನಪದ ಪ್ರಾಥಮಿಕ ವಿಮರ್ಶೆ ಕುರಿತ ಒಂದು ಪ್ರಯೋಗವನ್ನು ಮಾಡಿದ್ದಾರೆ. ಅವರ ಜಾನಪದ ವಿಶ್ಲೇಷಣೆಯಲ್ಲಿ ಜಾನಪದ ಅಧ್ಯಯನವನ್ನು ತುಂಬಾ ಮುಂದೆ ಕರೆದೊಯ್ಯುವ ಹೊಳನೋಟಗಳು ಇಲ್ಲವಾದರೂ, ಜಾನಪದದ ಕುರಿತು ಶ್ರದ್ಧೆಯಿಂದ ದುಡಿದಿದ್ದಾರೆ. ಆ ಕಾರಣಕ್ಕೆ ಅವರನ್ನು ಗೌರವಿಸಬೇಕು. ಅವರೀಗ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಜಾನಪದ ವಿಶ್ವವಿದ್ಯಾಲಯ ಹೇಗಿರಬೇಕು ಎನ್ನುವ ಬಗ್ಗೆ ತುಂಬಾ ವಿವರವಾಗಿ ಚರ್ಚಿಸಿದ್ದಾರೆ. ಇಲ್ಲಿ ಬಹಳ ಮುಖ್ಯವಾಗಿ ಗಮನಿಸಬಹುದಾದ ಹೊಳನೋಟಗಳು ಇಲ್ಲಿವೆ. ಕನ್ನಡ ಜಾನಪದ ಬ್ಲಾಗ್ ಗಾಗಿ ಕಿರುಪುಸ್ತಕ ರೂಪದಲ್ಲಿ ರಚಿಸಿದ್ದ ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ? ಎನ್ನುವ ಬರಹವನ್ನು ಪ್ರಕಟಿಸಲು ಅನುಮತಿ ನೀಡಿದ್ದಾರೆ. ಅದಕ್ಕಾಗಿ ವೀರಣ್ಣ ದಂಡೆ ಅವರಿಗೆ ಕೃತಜ್ಞತೆಗಳನ್ನು ಹೇಳುವೆ.
-ಅರುಣ್ ಜೋಳದಕೂಡ್ಲಿಗಿ.)

ಜಾನಪದಶಾಸ್ತ್ರ ಅಭ್ಯಾಸದ ಕ್ರಮೇಣ ಬೆಳವಣಿಗೆ:

ಕರ್ನಾಟಕ ವಿಶ್ವವಿದ್ಯಾಲಯವು ಅಸ್ತಿತ್ವಕ್ಕೆ ಬಂದ (೧೯೪೯) ಹೊಸದರಲ್ಲಿಯೇ ಡಾ| ಬಿ.ಎಸ್.ಗದ್ದಗಿಮಠ ಅವರಿಗೆ ಪಿಎಚ್.ಡಿ.ಸಂಶೋಧನೆಗೆ ಜನಪದ ಸಾಹಿತ್ಯದ ವಿಷಯವೊಂದನ್ನು (ಜಾನಪದ ಗೀತೆಗಳು) ಆರಿಸಿಕೊಳ್ಳುವ ಅವಕಾಶ ಕೊಟ್ಟದ್ದೇ ವಿಶ್ವವಿದ್ಯಾಲಯದ ಮಟ್ಟದಲ್ಲಿ ಜಾನಪದಶಾಸ್ತ್ರದ ಅಭ್ಯಾಸಕ್ಕೆ ನಾಂದಿಹಾಡಿದಂತಾಗಿದೆ. ಇದು ನಡೆದದ್ದು ಬಹುಶಃ ೧೯೫೧-೫೨ ಇರಬೇಕು ಎಂದು ಅಂದಾಜಿಸಬಹುದು. ಏಕೆಂದರೆ ೧೯೫೪ರಲ್ಲಿಯೇ ಅವರಿಗೆ ಪಿಎಚ್.ಡಿ.ಪದವಿ ದೊರೆತಿದೆ. ನಂತರ ೧೯೬೬ರಲ್ಲಿ ಮೈಸೂರು ವಿಶ್ವವಿದ್ಯಾಲಯ, ೧೯೬೭ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಎಂ.ಎ. ಪಠ್ಯಗಳಲ್ಲಿ ಜಾನಪದದ ಒಂದು ಪತ್ರಿಕೆಯನ್ನು ಸೇರಿಸಿದ್ದೇ ಜಾನಪದ ಅಧ್ಯಯನಕ್ಕೆ ಅಧಿಕೃತ ನಾಂದಿಯಾಯಿತು. ಮುಂದೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಜಾನಪದ ವಿಭಾಗಗಳು ಪ್ರಾರಂಭವಾದವು.

೧೯೬೭ರಲ್ಲಿ ತರೀಕೆರೆಯಲ್ಲಿ ಗೊ. ರು. ಚನ್ನಬಸಪ್ಪ ಮತ್ತವರ ಸ್ನೇಹಿತರ ಪ್ರಯತ್ನದಿಂದ ಬಹುದೊಡ್ಡ ಪ್ರಮಾಣದಲ್ಲಿ ಜಾನಪದ ಸಮಾವೇಶ ನಡೆಯಿತು. ಅದರ ಅಂಗವಾಗಿ ಕಲಾಮೇಳಗಳು, ವಿಚಾರ ಸಂಕಿರಣಗಳು ನಡೆದವು. ಸಾವಿರ ಪುಟಕ್ಕೂ ಹೆಚ್ಚಿನ ಒಂದು ದೊಡ್ಡ ಸ್ಮರಣ ಗ್ರಂಥ ’ಹೊನ್ನ ಬಿತ್ತೇವು ಹೊಲಕ್ಕೆಲ್ಲ’ ಪ್ರಕಟವಾಯಿತು. ಜಿ. ನಾರಾಯಣ ಅವರು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ೧೯೭೬ರಲ್ಲಿ, ಇಡೀ ಕರ್ನಾಟದ ತುಂಬ ಇರುವ ಜನಪದ ಕಲೆಗಳನ್ನು ಗುರುತಿಸುವ, ಕಲಾಪ್ರದರ್ಶನಗಳನ್ನು ಏರ್ಪಡಿಸುವ ಪ್ರಯತ್ನಗಳು ನಡೆದವು. ಅದರ ಫಲವಾಗಿ ’ಕರ್ನಾಟಕ ಜನಪದ ಕಲೆಗಳು’ (೧೯೭೭) ಎಂಬ ಕೃತಿ ಹೊರಬಂದಿತು. ಈ ಎಲ್ಲ ಚಟುವಟಿಕೆಗಳ ಹಿಂದೆ ಇದ್ದ ಗೊರುಚ, ಎಚ್. ಎಲ್. ನಾಗೇಗೌಡ ಮತ್ತವರ ಸ್ನೇಹಿತರ ಕೆಲಸಗಳು ಸ್ಮರಣೀಯ.

ಮುಂದೆ ೧೯೮೦ರಲ್ಲಿ ಈ ಮೇಲೆ ಹೆಸರಿಸಿದ ಹಿರಿಯರ ಪ್ರಯತ್ನದಿಂದಾಗಿಯೇ ’ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ ಹುಟ್ಟಿಕೊಂಡಿತು. ಜಾನಪದಕ್ಕೆ ಮೀಸಲಾದ ಎಚ್. ಎಲ್. ನಾಗೇಗೌಡರ ’ಜಾನಪದ ಪರಿಷತ್ತು’ (೧೯೭೯), ಕು.ಶಿ.ಹರಿದಾಸ ಭಟ್ಟರ ’ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ’ (೧೯೮೩) ಇವು ಅಸ್ತಿತ್ವಕ್ಕೆ ಬಂದವು. ಈ ಎಲ್ಲ ಪ್ರಯತ್ನಗಳ ಫಲವಾಗಿ ಜಾನಪದಶಾಸ್ತ್ರದ ಹೆಚ್ಚಿನ ಅಭ್ಯಾಸಕ್ಕೆ ನಾಂದಿಯಾಯಿತು.
*
ಕನ್ನಡ ಸಾಹಿತ್ಯದಲ್ಲಿ ಹೊಸ ಬೆಳವಣಿಗೆಗಳಿಗೆ ನಾಂದಿ:

ಜಾನಪದಶಾಸ್ತ್ರದ ಅಭ್ಯಾಸದಿಂದಾಗಿ ಕನ್ನಡ ಸಾಹಿತ್ಯದ ಅಭ್ಯಾಸದ ನಿಟ್ಟಿನಲ್ಲಿ ಅನೇಕ ಹೊಸ ದಾರಿಗಳು ತೆರೆದುಕೊಂಡವು. ಸಾಮಾನ್ಯರ ಸಾಹಿತ್ಯದೆಡೆ ಶಿಷ್ಟಸಾಹಿತ್ಯದ ವಿದ್ವಾಂಸರು ಲಕ್ಷಹರಿಸಿದರು. ದೇಸೀ ಚಿಂತನೆಗಳು ಬೆಳೆದು ಬಂದವು. ಜನಾಂಗಿಕ ಅಧ್ಯಯನಗಳಿಗೆ ನಾಂದಿಯಾಯಿತು. ಬಹುಸಂಸ್ಕೃತಿಗಳ ಅಭ್ಯಾಸದ ಕಡೆ ಲಕ್ಷ ಹರಿಯಿತು. ವಿಶೇಷವಾಗಿ ಸಂಸ್ಕೃತಿಯ ಅಧ್ಯಯನದೆಡೆ ಕನ್ನಡ ಸಾಹಿತ್ಯ ಕಣ್ಣು ತೆರೆಯಿತು. ಸಂಶೋಧನೆಯಲ್ಲಿ ಮೌಖಿಕ ಆಕರಗಳ ಬಳಕೆ ವ್ಯಾಪಕವಾಗಿ ಪ್ರಾರಂಭವಾಯಿತು.

ಮೌಖಿಕ ಪಠ್ಯಗಳ ಶೋಧ:

ಅಗಾಧ ಪ್ರಮಾಣದಲ್ಲಿ ಮೌಖಿಕ ಸಾಹಿತ್ಯದ ಪಠ್ಯಗಳು ಶೋಧಿತವಾದವು. ಜನಪದ ಹಾಲುಮತ ಮಹಾಕಾವ್ಯ, ಮಂಟೇಸ್ವಾಮಿ, ಜುಂಜಪ್ಪ, ಮಲೆಯ ಮಾದೇಶ್ವರ ಮುಂತಾದ ಬೃಹತ್ ಪಠ್ಯಗಳು ದೊರೆತು ಇಂದು ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಹೆಚ್ಚಿಸಿವೆ. ಸಾಹಿತ್ಯವನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಿವೆ.೧೫ನೇ ಶತಮಾನದಲ್ಲಿ ಹುಟ್ಟಿದ ಕೊಡೇಕಲ್ಲ ಸಾಹಿತ್ಯ ಲಿಖಿತ ರೂಪದಲ್ಲಿದ್ದರೂ ಅದು ಹಾಡಿನ ಪ್ರಕಾರಕ್ಕೆ ಸೇರಿದ ಸ್ವರವಚನ ಸಾಹಿತ್ಯವೆಂಬುದು ವಿಶೇಷಸಂಗತಿ. ಇದೇ ದಾರಿಯಲ್ಲಿಯೇ ಮುಂದೆ ಪ್ರತಿಭಾವಂತ ತತ್ತ್ವಪದಕಾರರ ಶೋಧಗಳು ನಡೆದು ಕಡಕೋಳ ಮಡಿವಾಳಪ್ಪ, ಶಿಶುನಾಳ ಶರೀಫರಂಥವರ ಹಾಡುಗಳ ಶಕ್ತಿ ಕನ್ನಡಕ್ಕೆ ದೊರೆಯಿತು. ಇಷ್ಟೆಲ್ಲ ಆಗಿ ಈಗ ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆ ಅರಿಯುವಲ್ಲಿಗೆ ಬಂದು ನಿಂತಿದ್ದೇವೆ.

ಜಾನಪದ ವಿಶ್ವವಿದ್ಯಾಲಯದ ಬೇಡಿಕೆ :

ಈಗ ಇಪ್ಪತ್ತು ವರ್ಷಗಳ ಹಿಂದಿನ ಮಾತು. ಪಂಚಾಯತರಾಜಗಳ ಹೊಸ ಆಡಳಿತವನ್ನು ಜಾರಿಗೆ ತರಲು ಕಾರಣರಾದ ಆಗಿನ ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದ ಶ್ರೀಮಾನ್ ನಜೀರ ಸಾಹೇಬರ ವಿನಂತಿಯ ಮೇರೆಗೆ, ಕನ್ನಡದ ಮೊದಲ ಜಾನಪದ ಪ್ರಾಧ್ಯಾಪಕರಾದ ಡಾ|ಜೀಶಂಪ ಅವರು ಜಾನಪದ ಸಂಗತಿಗಳ ಸಂವರ್ಧನೆ-ಸಂರಕ್ಷಣೆ ಹೇಗೆ ಎಂಬ ವಿಚಾರಗಳನ್ನು ಬರೆದು ೧೯೮೮ರಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆ ಬರಹದಲ್ಲಿ ಅವರು ಜಾನಪದ ವಿಶ್ವವಿದ್ಯಾಲಯದ ಅವಶ್ಯಕತೆಯನ್ನೂ ಮಂಡಿಸುತ್ತಾರೆ. ಆ ಸಾಲುಗಳು ಹೀಗಿವೆ: ಜಾನಪದ ಸಂರಕ್ಷಣೆಯ ದೃಷ್ಟಿಯಿಂದ, ಸಂವರ್ಧನೆಯ ದೃಷ್ಟಿಯಿಂದ ವ್ಯಾಪಕವಾದ ಯೋಜನೆಯನ್ನು ಹಾಕಿಕೊಂಡು ಕೆಲಸ ಮಾಡಬೇಕಾದ ಅಗತ್ಯ ಈಗ ತುಂಬ ಇದೆ. ಜಾನಪದದಂಥ ವ್ಯಾಪಕವಾದ ಕ್ಷೇತ್ರದಲ್ಲಿ ಸರಿಯಾದ ಸಂಶೋಧನೆ, ಅಧ್ಯಯನ ನಡೆಯಬೇಕಾದ ಬೇರೆ ಬೇರೆ ಇಲಾಖೆಗಳನ್ನೊಳಗೊಂಡ ಒಂದು ವಿಶ್ವವಿದ್ಯಾಲಯವನ್ನೇ ಸ್ಥಾಪಿಸಿ, ಪ್ರಾಚೀನ ಮೌಖಿಕ ಜ್ಞಾನದ ಪ್ರಯೋಜನವನ್ನು ಪಡೆಯಬಹುದು. (ಜೀಶಂಪ, ೧೯೮೮) ಇಪ್ಪತ್ತು ವರ್ಷಗಳ ಹಿಂದೆ ಕಂಡ ಜೀಶಂಪ ಅವರ ಕನಸು ಇಂದು ಗೊ. ರು. ಚನ್ನಬಸಪ್ಪ ಅವರ ಪ್ರಯತ್ನದಿಂದ ನನಸಾಗುವ ದಾರಿಯಲ್ಲಿದೆ ಎಂಬುದು ಸಂತೋಷದ ಸಂಗತಿ.

ಲಿಖಿತ ಮೂಲದ ಶಿಸ್ತುಗಳ ಅಧ್ಯಯನದ ವಿವಿಗಳು:

ಲಿಖಿತ ಮೂಲದ ಶಿಸ್ತುಗಳನ್ನೊಳಗೊಂಡ ಈಗಿನ ವಿಶ್ವವಿದ್ಯಾಲಯಗಳು ಕೊಡುವ ಶಿಕ್ಷಣವು- ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸಶಕ್ತವಾಗಿರುವ ಸಮುದಾಯಗಳು ಶಿಕ್ಷಣ ಪಡೆಯಲು ಹೆಚ್ಚು ಅನುಕೂಲಗಳನ್ನು ಒದಗಿಸುತ್ತ ಬಂದಿದೆ. ಹಾಗೆ ಸಶಕ್ತವಾಗಿರುವ ಸಮೂಹದಲ್ಲೂ ವಿಶೇಷವಾಗಿ ಗಂಡುಮಕ್ಕಳಿಗೆ ಮಾತ್ರ ಅದು ಹೆಚ್ಚು ಅನುಕೂಲತೆಗಳನ್ನು ಒದಗಿಸಿದೆ. ಜಾನಪದ ವಿಶ್ವವಿದ್ಯಾಲಯವು ಈ ತಾರತಮ್ಯವನ್ನು ಮೊದಲು ಹೋಗಲಾಡಿಸಲು ಪ್ರಯತ್ನಿಸುತ್ತದೆ. ಗಂಡಸರಂತೆ ಹೆಣ್ಣುಮಕ್ಕಳೂ ಜಾನಪದ ಕ್ಷೇತ್ರದಲ್ಲಿ ಪ್ರತಿಭಾವಂತರಾಗಿ ಕಾಣುತ್ತಾರೆ. ಹೀಗಾಗಿ ಜಾನಪದ ವಿಶ್ವವಿದ್ಯಾಲಯವು ಸ್ತ್ರೀಯರ ಜ್ಞಾನವನ್ನೂ ಒಳಗೊಂಡ ಒಂದು ವಿಶೇಷ ವಿಶ್ವವಿದ್ಯಾಲಯ ಎನಿಸುತ್ತದೆ. ಇದು ಕರ್ನಾಟಕದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಪ್ರಥಮ ಜಾನಪದ ವಿಶ್ವವಿದ್ಯಾಲಯ ಎನಿಸುತ್ತದೆ. ಹಾಗೆ ನೋಡಿದರೆ ಪ್ರಪಂಚದಲ್ಲಿಯೂ ಇದು ಮೊದಲನೆಯದೇ ಆಗುತ್ತದೆ.

ಸಮಾಜದ ಕಟ್ಟಕೊನೆಯ ವ್ಯಕ್ತಿಯನ್ನು ಒಳಗೊಳ್ಳುವ ವಿಶ್ವವಿದ್ಯಾಲಯ:

ಜಾನಪದವೆಂದರೆ ಮನುಷ್ಯ ಬದುಕಿನ ಅಭ್ಯಾಸವಾಗಿರುವುದರಿಂದ ಅದಕ್ಕೆ ಒಂದು ಸೀಮಿತ ಪ್ರದೇಶ, ಸೀಮಿತ ಜನಾಂಗ ಇವುಗಳ ಮಿತಿ ಇಲ್ಲ. ಜಾನಪದಶಾಸ್ತ್ರವು ಎಲ್ಲ ಜನಾಂಗಗಳ ಬದುಕಿನ ರೀತಿಯಾಗಿದೆ. ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ, ಸಾಮಾಜಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಶಕ್ತರಲ್ಲದ, ಈ ಎಲ್ಲ ಸಂಗತಿಗಳಲ್ಲಿ ಅವಕಾಶವಂಚಿತರಾದ ಎಲ್ಲ ಜನಸಮುದಾಯಗಳ ಬದುಕಿನ ಸಂಗತಿಗಳನ್ನು ಜಾನಪದ ಅಭ್ಯಾಸ ಹೆಚ್ಚಾಗಿ ಗಮನಿಸುವುದರಿಂದ, ’ಜಾನಪದ ವಿಶ್ವವಿದ್ಯಾಲಯ’ ಎಂದರೆ ಅದು ಸಮಾಜದ ಕಟ್ಟಕೊನೆಯಲ್ಲಿರುವ ಜನರನ್ನು ಒಳಗೊಂಡು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬರುತ್ತದೆ.

ವಿಜ್ಞಾನದ ದವಡೆಗೆ ಸಿಕ್ಕು ನುಗ್ಗಾಗಿದೆ ಬದುಕು:

ನಮ್ಮ ಬದುಕು ವಿಜ್ಞಾನದ ದವಡೆಗೆ ಸಿಕ್ಕು ತೀವ್ರವಾಗಿ ಬದಲಾವಣೆಯಾಗುತ್ತಿದೆ. ಈ ಬದಲಾವಣೆ ಬದುಕಿಗೆ ಸೌಲಭ್ಯಗಳನ್ನು ಒದಗಿಸುತ್ತಿದೆ ನಿಜ, ಆದರೆ ಅದರಿಂದ ನಮ್ಮ ಬದುಕು ತೀವ್ರವಾಗಿ ಮೌಲ್ಯಹೀನವಾಗುತ್ತಿದೆ. ಭೂಮಿಯ ಪರಿಸರವೇ ಕಲುಷಿತಗೊಂಡು ಇಂದು ಬದುಕಿಗೆ ಮಾರಕವಾಗಿ ಪರಿಣಮಿಸಿದೆ. ಇದು ಇಂದು ವಿಶ್ವಮಟ್ಟದಲ್ಲಿ ಚರ್ಚೆಯ ಸಂಗತಿಯಾಗಿದೆ. ಮಾನವನ ಕೃತ್ಯಗಳಿಂದ ಇಂದು ಪರಿಸರ ಕಲುಷಿತಗೊಂಡಿರುವುದರಿಂದ ನಮ್ಮ ಪ್ರಾಣ ಉಳಿಯಲು ಬೇಕಾದ ಶುದ್ಧವಾದ ಗಾಳಿ, ನೀರು, ಆಹಾರ ಇವು ಕೆಟ್ಟುಹೋಗುತ್ತಿವೆ. ಇದರಿಂದ ಮಾನವ ಕುಲದ ಆರೋಗ್ಯವೇ ಹಾಳಾಗುತ್ತಿದೆ. ಇದು ಜೀವಿಗಳ ಸಂತತಿಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ.

ಬದುಕಿನ ಮೌಲ್ಯಗಳ ಸಂರಕ್ಷಣೆ:

ಇಂತಹ ಸಮಯದಲ್ಲಿ ನಮ್ಮ ಪೂರ್ವಜರ ಬದುಕಿನ ಮಾದರಿಗಳು, ಚಿಂತನೆಗಳು ನಮ್ಮ ಸಹಾಯಕ್ಕೆ ಬರುತ್ತವೆ. ಗ್ರಾಮಾಂತರ ಬದುಕಿನ ಪರಿಗಳನ್ನು ಅರಿಯುವ, ಆಯುವ ಮತ್ತು ಅಧ್ಯಯನಕ್ಕೆ ಅಳವಡಿಸುವ ಉದ್ದೇಶಗಳು ನಮಗೆ ಇಂದು ಮುಖ್ಯವೆನಿಸುತ್ತವೆ. ಭಾರತೀಯ ಸಂಸ್ಕೃತಿಯ ಅನನ್ಯತೆಯನ್ನು, ನಮ್ಮ ಪರಂಪರೆಯ ಜ್ಞಾನದ ಅರಿವನ್ನು ಉಳಿಸಿಕೊಂಡು, ಬೆಳೆಸಿಕೊಂಡು ಹೋಗಲು, ಅವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಜಾನಪದಶಾಸ್ತ್ರಾಭ್ಯಾಸ ಅವಶ್ಯವೆನಿಸುತ್ತದೆ. ’ಜಾನಪದ ವಿಶ್ವವಿದ್ಯಾಲಯ’ ದ ಸ್ಥಾಪನೆ ಅದಕ್ಕಾಗಿ ತುರ್ತೆನಿಸುತ್ತದೆ.

ಕೈಗಾರಿಕೆಯ ನೆಪದಲ್ಲಿ ದೇಸೀ ಉದ್ಯೋಗಗಳ ನಾಶ:

ನಾವೀಗ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣಗಳ ಗುಂಗಿನಲ್ಲಿದ್ದೇವೆ. ಇವು ನಮ್ಮ ಬದುಕನ್ನೆಲ್ಲ ಹಾಳುಮಾಡುತ್ತಿವೆ ಎಂದು ಹಲಬುತ್ತಿದ್ದೇವೆ. ಆದರೆ ಭಾರತ ಸ್ವಾತಂತ್ರ್ಯದ ಜೊತೆಗೆ ಸೌಲಭ್ಯ ಮತ್ತು ಸುಧಾರಣೆಗಳ ಹೆಸರಿನಲ್ಲಿ ನಮ್ಮ ದೇಶಕ್ಕೆ ಕಾಲಿಟ್ಟದ್ದು ಕೈಗಾರಿಕಾ ಕ್ರಾಂತಿಯ ಹೆಸರಿನಲ್ಲಿ ಯಾಂತ್ರೀಕರಣ. ಯಾಂತ್ರೀಕರಣ ಪ್ರವೇಶಿಸಿ ಗ್ರಾಮೀಣ ಬದುಕಿಗೆ ಆಸರೆಯಾದ ಸ್ವಾವಲಂಬಿ ಉದ್ಯೋಗಗಳನ್ನು ಹಾಳು ಮಾಡಿತು. ಪರಾವಲಂಬಿಗಳಾಗುವಂತೆ ಮಾಡಿತು. ಇದರಿಂದಾಗಿ ನಮ್ಮ ಗ್ರಾಮಾಂತರ ಪ್ರದೇಶದ ಕಸುಬುದಾರರ, ಕುಶಲಕರ್ಮಿಗಳ ಸಂಸಾರಗಳು ದಿವಾಳಿ ಎದ್ದವು.

ಜಾನಪದ ವಿಶ್ವವಿದ್ಯಲಾಯದ ಅಧ್ಯಯನ/ತರಬೇತಿ ವಿಬಾಗಗಳು ಹೇಗಿರಬೆಕು:

ಜಾನಪದ ವಿಶ್ವವಿದ್ಯಾಲಯದಲ್ಲಿ ಗ್ರಾಮೀಣ ಬದುಕಿನ ಬಹುಮುಖ್ಯ ಸಂಗತಿಗಳ ಅಧ್ಯಯನ, ತರಬೇತಿ, ಕಲಿಕೆ, ಪ್ರಸಾರಗಳು ನಡೆಯುವಂತೆ ವ್ಯವಸ್ಥೆಯಾಗಬೇಕು. ಅಲ್ಲಿ ಶಿಕ್ಷಣ ಕೊಡಲು ಗ್ರಾಮೀಣ ಪ್ರತಿಭಾವಂತರಿಗೆ ನೇರವಾಗಿ ಅವಕಾಶಗಳನ್ನು ಒದಗಿಸಿ ಕೊಡಬೇಕು. ಆ ನಿಟ್ಟಿನಲ್ಲಿ ಇಲ್ಲಿ ಒಂದು ಸಾಮಾನ್ಯ ನೋಟಕ್ಕೆ ೪ ಭಾಗಗಳಲ್ಲಿ ೩೧ ಅಧ್ಯಯನ/ತರಬೇತಿ ವಿಭಾಗಗಳನ್ನು ಗುರುತಿಸಿಕೊಂಡು, ಒಂದೊಂದು ವಿಭಾಗಗದಲ್ಲಿ ಏನೇನು ಸೇರಬೇಕು ಎಂದು ವಿವರಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದರಿಂದ ಜಾನಪದ ವಿಶ್ವವಿದ್ಯಾಲಯದ ಒಂದು ಸಾಮಾನ್ಯ ಕಲ್ಪನೆ ಬರಲು ಸಾಧ್ಯವಾಗುತ್ತದೆ.
*
೧. ಕಸಬು/ಕರಕುಶಲ ಕಲಾ ವಿಭಾಗಗಳು:

’ಜಾನಪದ ವಿಶ್ವವಿದ್ಯಾಲಯ’ ವೊಂದು ಪ್ರಾರಂಭವಾದರೆ ಅಲ್ಲಿ ಮುಖ್ಯವಾದ ಕಲಿಕೆಯ ವಿಭಾಗಗಳು ನಮ್ಮ ಪರಂಪರೆಯ ದೇಸೀ ಕಸುಬುಗಳಿಗೆ, ಕರಕುಶಲ ಕಲೆಗಳಿಗೆ ಸಂಬಂಧಿಸಿರಬೇಕಾದುದು ಅವಶ್ಯ. ಆಗ ನೇರವಾಗಿ ಗ್ರಾಮಾಂತರ ಪ್ರದೇಶದ ದೇಸೀ ಕಸುಬುದಾರ ಮನೆತನದ ಪ್ರತಿಭಾವಂತರಿಗೆ ಅವಕಾಶಗಳು ದೊರೆಯುತ್ತವೆ. ಮತ್ತು ಈ ಕೈಸಬುಗಳನ್ನು ಕಲಿತ ಭಿನ್ನ ಸಮೂಹದ ಯುವಕರು ಕೂಡ ತಮ್ಮ ಬದುಕನ್ನು ತಾವೇ ನಿಭಾಯಿಸುವ ಸ್ವಾವಲಂಬಿ ಉದ್ಯೋಗಗಳನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣ ಗೈಯಲು ಅನುವಾಗುತ್ತದೆ.
ಈ ಹಿನ್ನೆಲೆಯಲ್ಲಿ ’ದೇಸೀ ತಾಂತ್ರಿಕ’ (ದೇಸೀ ಎಂಜಿನಿಯರಿಂಗ್) ವಿಷಯಗಳೆನಿಸುವ ಗ್ರಾಮೀಣ ಕಸುಬು ಮತ್ತು ಕರಕುಶಲ ಕಲೆಗಳಿಗೆ ಸಂಬಂಧಿಸಿದಂತೆ ಜಾನಪದ ವಿಶ್ವವಿದ್ಯಾಲಯದಲ್ಲಿ ವಿಭಾಗಗಳನ್ನು ತೆರೆದು- ತರಬೇತಿ, ಉತ್ಪನ್ನ, ಮಾರಾಟ ಮತ್ತು ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.




೧. ಶಿಲ್ಪಕಲಾ ವಿಭಾಗ : ಕಲ್ಲು ಇಲ್ಲಿಯ ಮೂಲ ವಸ್ತು. ಇವತ್ತಿಗೂ ಅಭಿಜಾತ ಶಿಲ್ಪಕಲೆ ಎಂದು ಹೇಳಿಕೊಳ್ಳುವಲ್ಲಿಯೂ ಸಾಮಾನ್ಯ ಕಲ್ಲಕುಟಿಗನೇ ನಮಗೆ ಕಾಣುತ್ತಾನೆ. ಅದಕ್ಕಾಗಿ ಇವತ್ತು ಶಿಲ್ಪಕಲೆಗಳು ಎಂದು ಹೇಳುವ ದೊಡ್ಡ ಪ್ರಸಿದ್ಧಿಯ ಶಿಲ್ಪಕಲೆಗಳೂ ಕೂಡ ಅವು ಮೂಲದಲ್ಲಿ ಗ್ರಾಮಾಂತರ ಕಲಾವಿದರಿಂದಲೇ ತಯಾರಿಸಲ್ಪಟ್ಟವಾಗಿವೆ. ಹೀಗಾಗಿ ಗೊಮ್ಮಟೇಶ್ವರನಂಥ ಶಿಲ್ಪವು ಕೂಡ ದೇಸೀ ಕಲೆಯೇ ಆಗುತ್ತದೆ. ಅದಕ್ಕಾಗಿ ಇಲ್ಲಿ ಮತ್ತೆ ಗ್ರಾಮಾಂತರ ಪ್ರದೇಶದ ಕಲ್ಲುಕುಟಿಗ ಕಲಾವಿದರನ್ನೇ ಶೋಧಿಸಿ ಬಳಸಿಕೊಂಡರೆ ಈ ಕಲೆ ಮತ್ತು ಉದ್ಯೋಗ ಎರಡೂ ಬೆಳೆಯುತ್ತವೆ.

೨. ವಾಸ್ತುಶಿಲ್ಪ ವಿಭಾಗ: ಕಲ್ಲು ಒಡೆಯುವ ಮತ್ತು ಕಟ್ಟಡ ನಿರ್ಮಿಸುವ ಕೆಲಸಗಳು ಇಲ್ಲಿ ಸೇರುತ್ತವೆ. ಒಡ್ಡರು ಮತ್ತು ಗೌಂಡಿ ಕೆಲಸಗಳು ಇಲ್ಲಿ ಸೇರಬೇಕು. ಇಂದು ಕಟ್ಟಡ ಕಾರ್ಮಿಕರ ಬೇಡಿಕೆ ವಿಪರೀತವಾಗಿ ಹೆಚ್ಚಿದೆ. ಉತ್ತಮ ಕಟ್ಟಡ ನಿರ್ಮಾಪಕರು, ಅದರಲ್ಲಿಯೇ ಪ್ರತಿಭೆವುಳ್ಳವರು ಉತ್ತಮ ವಾಸ್ತುಶಿಲ್ಪಿಗಳಾಗಿ ಬೆಳೆಯುವ ಸಾಧ್ಯತೆ ಇರುತ್ತದೆ.

೩. ಕಂಬಾರಿಕೆ ವಿಭಾಗ: ಕಬ್ಬಿಣದ ಕೆಲಸಗಳು ಇಲ್ಲಿ ಸೇರುತ್ತವೆ.

೪. ಕುಂಬಾರಿಕೆ ವಿಭಾಗ: ಮಣ್ಣನ್ನು ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಆಧುನಿಕ ಜೀವನ ಶೈಲಿಗೆ ಅನುಕೂಲಕರವಾದ ಮತ್ತು ಮನೆಯ ಅಲಂಕರಣಕ್ಕಾಗಿ ಮಣ್ಣಿನ ಪಾತ್ರೆಗಳನ್ನು ಬಳಸಬಹುದಾಗಿದೆ.

೫. ಬಡಿಗತನ ವಿಭಾಗ: ಕಟ್ಟಿಗೆ ಬಳಸಿ ಮಾಡುವ ಕೆಲಸಗಳು ಇಲ್ಲಿ ಸೇರಬೇಕು. ಈ ಉದ್ಯೋಗವಂತೂ ಇವತ್ತು ಭಾರೀ ಬೇಡಿಕೆಯಲ್ಲಿದೆ.

೬. ಅಕ್ಕಸಾಲಿ ವಿಭಾಗ: ಲೋಹದ ಕುಶಲಕರ್ಮ ಕೆಲಸಗಳು. ಇದು ಕೂಡ ಬೇಡಿಕೆಯ ಉದ್ಯೋಗವೇ ಆಗಿದೆ.

೭. ಮೇದಾರಿಕೆ ವಿಭಾಗ: ಬಿದಿರು ಮುಂತಾದ ಸಿಬಿಕೆಯಿಂದ ಬುಟ್ಟಿ, ಚಾಪೆ, ಮರ, ಬೀಸಣಿಕೆ ಇಂತಹ ಮನೆ ಬಳಕೆಯ ವಸ್ತುಗಳ ತಯಾರಿಕೆ ಮತ್ತು ಮಾರಾಟಗಳು ಇಲ್ಲಿ ಸೇರಬೇಕು. ಇವನ್ನು ಇವತ್ತಿಗೂ ಹೆಚ್ಚು ಪ್ರಚಾರಗೊಳಿಸಲು ಸಾಧ್ಯವಿದೆ.

೮. ಚಮ್ಮಾರಿಕೆ ವಿಭಾಗ: ಚರ್ಮದಿಂದ ವಸ್ತುಗಳ ತಯಾರಿಕೆ ಮತ್ತು ಮಾರಾಟ. ಇದೂ ಕೂಡ ಅಷ್ಟೇ ಬೇಡಿಕೆ ಇರುವ ವಿಭಾಗ.

೯. ನೇಕಾರಿಕೆ ವಿಭಾಗ: ಬಟ್ಟೆ, ಕಂಬಳಿಗಳನ್ನು ನೇಯುವ, ಬಣ್ಣ ಹಾಕುವ, ಮಾರಾಟದ ವ್ಯವಸ್ಥೆ ಇಲ್ಲಿ ಸೇರಬೇಕು.

೧೦. ವೇಷ-ಭೂಷಣ ವಿಭಾಗ: ಸಿಂಪಿಗನ ಕೆಲಸಗಳು ಇಲ್ಲಿ ಮುಖ್ಯ. ಫ್ಯಾಶನ್ ಡಿಸೈನ್ ಮತ್ತು ಹೊಲಿಗೆಗಳು- ವೇಷಭೂಷಣ, ಕೌದಿ, ಕುಂಚಿಗೆ-ಕುಲಾಯಿ ಮುಂತಾದವುಗಳ ತಯಾರಿಕೆ ಇಲ್ಲಿ ಸೇರಬೇಕು.
*
೨. ದೇಸೀ ವಿಜ್ಞಾನ ವಿಭಾಗಗಳು:

ದೇಸೀ ಕೃಷಿ, ತೋಟಗಾರಿಕೆ, ಹೈನುಗಾರಿಕೆ, ವೈದ್ಯಕೀಯ, ಮತ್ತು ಆಹಾರ-ಪಾನೀಯ ಇವು ಜನಪದರ ವೈಜ್ಞಾನಿಕ ತಿಳುವಳಿಕೆಗಳೆನಿಸುತ್ತವೆ. ಗ್ರಾಮೀಣ ಬದುಕಿನ ಅನುಭವದ ವೈಜ್ಞಾನಿಕ ಚಿಂತನೆಗಳು ಈ ವಿಷಯಗಳಲ್ಲಿ ಹುದುಗಿರುತ್ತವೆ. ಅನಾರೋಗ್ಯದಿಂದ ಕಾಪಾಡುವ ವೈದ್ಯಕೀಯದ ಅರಿವು, ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡು ಹೋಗಲು ಅವಶ್ಯವಾದ ಆಹಾರ-ಪಾನೀಯ ಇವುಗಳ ಅರಿವು ಅಧ್ಯಯನಕ್ಕೆ ಒಳಗಾಗಬೇಕಾದುದು ಅವಶ್ಯ. ಜೊತೆಗೆ ಇವುಗಳಿಗೆ ಸಂಬಂಧಿಸಿದಂತೆ ಉತ್ತಮ ಆಹಾರ ಬೆಳೆಗಳನ್ನು ಕೃಷಿಯಿಂದ ಮತ್ತು ಹೈನುಗಾರಿಕೆಯಿಂದ ಪಡೆಯುವುದು ಹೇಗೆ, ಕೃಷಿ ಮತ್ತು ಹೈನುಗಾರಿಕೆ ಗೈಯುವುದು ಹೇಗೆ ಮತ್ತು ಇವುಗಳಿಗೆ ಸಂಬಂಧಿಸಿದ ಇತರ ಸಂಗತಿಗಳೆಲ್ಲ ಇಲ್ಲಿ ಅಧ್ಯಯನಕ್ಕೆ ಅಳವಡುವುದು ಮುಖ್ಯ. ಅದಕ್ಕಾಗಿ ಇಲ್ಲಿಯ ವಿಭಾಗಗಳು ಹೀಗಿರಬಹುದಾಗಿದೆ:
೧. ದೇಸೀ ಕೃಷಿ ವಿಭಾಗ
೨. ದೇಸೀ ತೋಟಗಾರಿಕೆ ವಿಭಾಗ
೩. ಹೈನುಗಾರಿಕೆ ವಿಭಾಗ
೪. ದೇಸೀ ವೈದ್ಯ ವಿಭಾಗ
೫. ದೇಸೀ ಪಶುವೈದ್ಯ ವಿಭಾಗ
೬ ದೇಸೀ ಆಹಾರ-ಪಾನೀಯ ವಿಭಾಗ
*
೩. ಮನರಂಜನಾ ದೇಸೀಕಲಾ ವಿಭಾಗಗಳು:

ಬದುಕಿನ ವಿಧಿಕ್ರಿಯೆಗಳ ಅಂಗವಾಗಿ ಬಳಕೆಯಾಗುವ ಕಲೆಗಳು ಮನರಂಜನೆ ಯನ್ನೂ ಮುಖ್ಯವಾಗಿಸಿಕೊಂಡಿರುತ್ತವೆ. ಪ್ರತಿಭಾವಂತರ ಪ್ರದರ್ಶನಗಳಾಗಿರುವ ಇವುಗಳ ಮೇಲೆಯೇ ಬುದುಕು ಅವಲಂಬನೆಯಾಗಿರುತ್ತದೆ. ಕಣ್ಣು ಕಿವಿಗಳ ಮೂಲಕ ಒಳಹೊಕ್ಕು ಮನಸ್ಸನ್ನು ತಣಿಸುವ ಕಲೆಗಳು ಜಾನಪದದಲ್ಲಿ ಸಾಕಷ್ಟು ಇವೆ. ಹಾಡು, ಕುಣಿತ, ಅಭಿನಯ ಇವು ಮನುಷ್ಯನಿಗೆ ನೀರು ಗಾಳಿಗಳಷ್ಟೆ ಅವಶ್ಯ. ಅವು ನಮ್ಮ ಮನಸ್ಸನ್ನು ತಣಿಸುತ್ತವೆ, ಚೈತನ್ಯವನ್ನು ತುಂಬುತ್ತವೆ, ಬದುಕಿಗೆ ಆಸೆಯನ್ನು ಕೊಡುತ್ತವೆ. ಹೀಗಾಗಿ ಬದುಕಿನ ಮುಖ್ಯಸಂಗತಿಗಳಲ್ಲೆಲ್ಲ ಹಾಡು ಕುಣಿತಗಳು ಹುಟ್ಟಿಕೊಂಡಿವೆ.
ಇಂದು ಬುದುಕು ಬದಲಾದಂತೆ ಈ ಕಲೆಗಳು ಪ್ರಯೋಗವಾಗುವ ಸಂದರ್ಭಗಳೂ ಮರೆಯಾಗುತ್ತಿವೆ. ಮಾನವ ಬದುಕಿನ ಅಗಾಧ ಜ್ಞಾನವನ್ನು ತುಂಬಿಕೊಂಡ ಈ ಸಂದರ್ಭಗಳ ಕಲೆಗಳನ್ನು ಕಲಿಕೆ ಮತ್ತು ಅಧ್ಯಯನಕ್ಕೆ ಅಳವಡಿಸುವ ಅವಶ್ಯಕತೆ ಇದೆ. ಅವು ಮುಂದಿನ ಪೀಳಿಗೆಗೆ ದಾರಿದೀಪಗಳಾಗುವ ಸಾಧ್ಯತೆ ಇದೆ. ಪ್ರಮುಖವಾದ ಹಾಡಿನ ಮತ್ತು ಕುಣಿತದ ಪ್ರಕಾರಗಳನ್ನು ಗುರುತಿಸಿ ಅವನ್ನು ಕಲಿಸುವ ಮತ್ತು ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯವೂ ಇದೆ.
ಹಾಗೆಯೇ ಪ್ರದರ್ಶನ ಕಲೆಗಳಲ್ಲಿ ಇರುವ ರಂಗ ಪ್ರಕಾರ ಮತ್ತು ಬೀದಿ ಪ್ರಕಾರಗಳನ್ನು ಇಂದು ಹೆಚ್ಚು ಪ್ರಚಾರಗೊಳಿಸಲಾಗುತ್ತಿದೆ. ಇದು ಗ್ರಾಮೀಣ ಭಾಗದ ಪ್ರತಿಭಾವಂತರಿಗೆ ಒಂದು ದೊಡ್ಡ ಅವಕಾಶ. ರಂಗ ಪ್ರಕಾರದ ಬಯಲಾಟಗಳನ್ನು, ಗೊಂಬೆಯಾಟಗಳನ್ನು ಅಧುನಿಕ ಬದುಕಿನ ಸಂಗತಿಗೆ ಒಗ್ಗಿಸಿಕೊಳ್ಳಲು ಸಾಧ್ಯವಿದೆ. ಅದಕ್ಕಾಗಿ ಮತ್ತೆ ಗ್ರಾಮೀಣ ಪ್ರತಿಭಾವಂತರಿಗೆ ಇಲ್ಲಿ ಅವಕಾಶಗಳು ದೊರೆಯುವಂತೆ ಆಗಬೇಕು.

೧. ಚಿತ್ರಕಲಾ ವಿಭಾಗ: ರಂಗೋಲಿ, ಹಚ್ಚೆ, ರೇಖಾಚಿತ್ರ ಕಲೆಗಳು, ಸಾಂಪ್ರದಾಯಿಕ ವಿಧಿಕ್ರಿಯಾಚರಣೆಗಳಲ್ಲಿ ಬಿಡಿಸುವ ಚಿತ್ರಗಳು-ಹೀಗೆ ಗ್ರಾಮೀಣ ಭಾಗದ ಬದುಕಿನಲ್ಲಿರುವ ಚಿತ್ರಕಲಾ ಮಾದರಿಗಳು ಇಲ್ಲಿ ಸೇರಬೇಕು.

೨. ಸಂಗೀತ ವಿಭಾಗ: ಹಾಡುಗಾರಿಕೆ ಮತ್ತು ವಾದ್ಯಗಾರಿಕೆಗಳು ಇಲ್ಲೆ ಸೇರಬೆಕು.

೩. ನೃತ್ಯ-ಕುಣಿತ ವಿಭಾಗ: ಗ್ರಾಮೀಣ ನೃತ್ಯ ಕಲೆಗಳನ್ನು ಗುರುತಿಸಿ, ಕಲಿಕೆ- ಬೋಧನೆಗಳು ಇಲ್ಲಿ ನಡೆಯಬೇಕು.

೪. ಬಯಲಾಟ ವಿಭಾಗ: ಉತ್ತರ ಕರ್ನಾಟಕದ ಬಯಲಾಟಗಳಾದ ದೊಡ್ಡಾಟ, ಸಣ್ಣಾಟ-ಪಾರಿಜಾತ, ಬೀದಿ ಬಯಲಾಟಗಳಲ್ಲದೆ, ದಕ್ಷಿಣ ಕರ್ನಾಟಕದ ಯಕ್ಷಗಾನ-ಬಯಲಾಟಗಳೂ ಇಲ್ಲಿ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೫. ಯಕ್ಷಗಾನ ವಿಭಾಗ: ಕರಾವಳಿ ಭಾಗದ ಯಕ್ಷಗಾನ ಮತ್ತು ಯಕ್ಷಗಾನ-ತಾಳಮದ್ದಳೆಗಳು ಮಾತ್ರ ಈ ವಿಭಾಗಕ್ಕೆ ಸೇರಬೇಕು. ಅಭಿನಯ, ನಿರ್ದೇಶನ, ರಂಗಪರಿಕರಗಳ ತಯಾರಿಕೆ ಇಲ್ಲಿ ಸೇರಬೇಕಾದುದು ಅವಶ್ಯ.

೬. ಗೊಂಬೆಯಾಟಗಳ ವಿಭಾಗ: ಎಲ್ಲ ಪ್ರಕಾರದ ಗೊಂಬೆಯಾಟಗಳೂ ಇಲ್ಲಿ ಸೇರಬೇಕು. ಗೊಂಬೆಗಳ ತಯಾರಿಕೆ ಮತ್ತು ಕಲಾ ಪ್ರದರ್ಶನಗಳೂ ಈ ಪಠ್ಯದಲ್ಲಿ ಸೇರುತ್ತವೆ.

೭. ಪ್ರದರ್ಶನ ಕಲೆಗಳ ವಿಭಾಗ: ಬೀದಿಯ ಮೇಲೆ ಪ್ರದರ್ಶನಗೊಳ್ಳುವ ವೃತ್ತಿ ಮತ್ತು ಹವ್ಯಾಸಿ ಕಲೆಗಳು.

೪. ದೇಸೀ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನ ವಿಭಾಗಳು:

ಜಾನಪದ ಅಧ್ಯಯನ ವಿಭಾಗಗಳಲ್ಲಿ ಎಂಟು ವಿಷಯಗಳನ್ನು ಗುರುತಿಸಿಕೊಳ್ಳಲು ಸಾಧ್ಯವಿದೆ. ಸಾಹಿತ್ಯ, ಸಂಸ್ಕೃತಿ, ಜನಾಂಗೀಯ ಅಧ್ಯಯನ ಇಂತಹ ಗಂಭೀರ ಅಧ್ಯಯನಗಳು ಭಾರತದ ಗ್ರಾಮೀಣ ಪ್ರದೇಶಗಳ ಸಾಂಸ್ಕೃತಿಕ ಕೊಡುಗೆಳಾಗಿ, ಜ್ಞಾನದ ಶಾಖೆಗಳಾಗಿ ಮಹತ್ವದ ಅಭ್ಯಾಸಕ್ಕೆ ನಾಂದಿ ಹಾಡುತ್ತವೆ. ಅವುಗಳನ್ನು ಈ ಕೆಳಗಿನಂತೆ ಗುರುತಿಸಿಕೊಳ್ಳಬಹುದಾಗಿದೆ.

೧. ಜಾನಪದ ಸಾಹಿತ್ಯ ಅಧ್ಯಯನ
೨. ಜಾನಪದ ಸಾಮಾಜಿಕ ಅಧ್ಯಯನ
೩. ಬುಡಕಟ್ಟು ಅಧ್ಯಯನ
೪. ಜನಾಂಗೀಯ ಅಧ್ಯಯನ
೫. ಜಾನಪದ ಸಂಸ್ಕೃತಿ ಅಧ್ಯಯನ
೬. ಜಾನಪದ ನ್ಯಾಯ-ನೀತಿಶಾಸ್ತ್ರ ಅಧ್ಯಯನ
೭. ಜಾನಪದ ಅಂತರ್ ಶಿಸ್ತೀಯ ಅಧ್ಯಯನ
೮. ಜಾನಪದ ಆಟ-ಪಾಠಗಳ ಅಧ್ಯಯನ

*

ಶಾಲಾ ಪಠ್ಯಗಳಲ್ಲಿ ಜಾನಪದ ಜ್ಞಾನ ಕಲಿಕೆಯ ಸೇರ್ಪಡೆ:

ಈಗಿನ ಲಿಖಿತ ಮೂಲದ ಜ್ಞಾನ ಬೋಧನೆಯ ಅವಕಾಶವಿರುವ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ, ಸಂಶೋಧಿಸುವ ವಿಷಯಗಳಿಗೆ ಸಹಾಯಕವಾಗಿ ಇಂದಿನ ಪ್ರಾಥಮಿಕ ಶಾಲೆಗಳಿಂದ ಕಾಲೇಜುಗಳವರೆಗೆ ಶಿಕ್ಷಣ ಸಂಸ್ಥೆಗಳು ಬೆಳೆದು ನಿಂತುದನ್ನು ನಾವು ಕಾಣುತ್ತೇವೆ. ಜಾನಪದದ ಅಭ್ಯಾಸ ಅನಾವರಣಗೊಂಡುದು ಉನ್ನತ ಶಿಕ್ಷಣವನ್ನು ಕೊಡುವ ವಿಶ್ವವಿದ್ಯಾಲಯಗಳ ಪ್ರಾಂಗಣಗಳಲ್ಲಿ. ಈಗ ಜಾನಪದದ ಅಭ್ಯಾಸವು ಪಿಎಚ್.ಡಿ. ಮತ್ತು ಎಂ.ಎ. ಪದವಿಗಳಿಗೆ ಸೀಮಿತವಾಗಿದೆ. ಅದನ್ನು ಪದವಿ, ಹೈಸ್ಕೂಲ್, ಮಾಧ್ಯಮಿಕ ಮತ್ತು ಪ್ರಾಥಮಿಕ ಮಟ್ಟದ ತರಗತಿಗಳ ಪಠ್ಯಗಳಲ್ಲಿ ಅಳವಡಿಸುವ ಪ್ರಯತ್ನವನ್ನು ಮಾಡಬೇಕಾಗಿದೆ. ಸಮಾಜದ ತಳಸಮುದಾಯಗಳಲ್ಲಿ ಇರುವ ಜಾನಪದ ಪ್ರತಿಭಾವಂತರನ್ನು ಗುರುತಿಸಿ, ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಅವರ ಅನುಭವದ ಪ್ರಯೋಜನ ಪಡೆಯುವ ವ್ಯವಸ್ಥೆಯಾಗಬೇಕಾಗಿದೆ.

ಮಕ್ಕಳಿಗೆ ಮನೆಯಲ್ಲಿ ಶಿಶುಪ್ರಾಸಗಳನ್ನು, ಕಥೆಗಳನ್ನು ಹೇಳುತ್ತೇವೆ. ಶಾಲಾ ಪಠ್ಯಗಳಲ್ಲಿ ಬಹುಸುಲಭವಾಗಿ ಜನಪದ ಕತೆಗಳನ್ನು, ಉತ್ತಮ ಹಾಡುಗಳನ್ನು ಸೇರಿಸಬಹುದಾಗಿದೆ. ಕೆಲ ವರ್ಗಗಳ ಪಠ್ಯಗಳಲ್ಲಿ ಅಲ್ಲಲ್ಲಿ ಜನಪದ ಕಥೆ, ತ್ರಿಪದಿ ಮತ್ತು ಕಥನಕಾವ್ಯಗಳ ತುಣುಕುಗಳು ಕಾಣಸಿಗುತ್ತವೆ. ಅವುಗಳ ಪ್ರಮಾಣವನ್ನು ಹೆಚ್ಚಿಸಬಹುದು. ಜೊತೆಗೆ ಜನಪದ ಕಲೆಗಳ ಪರಿಚಯ, ಕಲಾವಿದರ ಪರಿಚಯ ಸೇರಿಸಬಹುದು. ಜನಪದ ಆಟಗಳನ್ನು ಮಕ್ಕಳಿಗೆ ಕಲಿಸಬಹುದು. ಪ್ರಾಯೋಗಿಕವಾಗಿ ಜನಪದ ಹಾಡುಗಳನ್ನು ಹೇಳಿಕೊಡುವ ವವಸ್ಥೆಯನ್ನೂ ಮಾಡಬಹದು.

ಪಂಚಾಯತಿಗಳ ಬಳಕೆ:

ಪ್ರತಿ ಹಳ್ಳಿಯ ಗ್ರಾಮಪಂಚಾಯಿತಿಗಳನ್ನು ಜಾನಪದ ಸಂಗತಿಗಳ ಸಂಗ್ರಹ, ಪ್ರಚಾರ, ಸಂರಕ್ಷಣೆ ಈ ಮುಂತಾದ ಉದ್ದೇಶಗಳಿಗಾಗಿ ಬಳಸಿಕೊಳ್ಳಲು ಸಾಧ್ಯವಿದೆ. ಗ್ರಾಮಪಂಚಾಯತಿಯ ಕೆಳಗಡೆ ಒಬ್ಬ ಜಾನಪದ ಕ್ಷೇತ್ರಕಾರ್ಯಸಹಾಯಕನನ್ನು ಸರ್ಕಾರ ನೇಮಿಸುವ ಯೋಜನೆ ಹಾಕುವುದು ಅವಶ್ಯವಿದೆ. ಆತ ಗ್ರಾಮಗಳಲ್ಲಿ ಮೌಖಿಕ ಪರಂಪರೆಯ ಜ್ಞಾನದ ಬಗ್ಗೆ ಪ್ರಚಾರ ಮಾಡುವುದು, ಪ್ರತಿಭಾವಂತರನ್ನು ಗುರುತಿಸಿ ಸರ್ಕಾರದ- ವಿಶ್ವವಿದ್ಯಾಲಯದ ಗಮನಕ್ಕೆ ತರುವುದು ಮತ್ತು ಗ್ರಾಮಪಂಚಾಯಿತಿಯ ಅಧೀನದಲ್ಲಿ ಒಂದು ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಿ, ಅದನ್ನು ಬೆಳೆಸಿಕೊಂಡು, ಕಾಪಾಡಿಕೊಂಡು ಬರುವ ಕೆಲಸವನ್ನು ಮಾಡುವುದು ಅವನ ಕರ್ತವ್ಯಗಳಾಗಬೇಕು.

ಜಾನಪದ ವಸ್ತುಸಂಗ್ರಹಾಲಯಗಳು ಪ್ರತಿಗ್ರಾಮಪಂಚಾಯತಿ ಮಟ್ಟದಲ್ಲಿ ಇರಬೇಕು. ಇಲ್ಲಿ ಜನಪದ ಸಾಹಿತ್ಯ ಮತ್ತು ಮಾಹಿತಿಗಳ ಸಂಗ್ರಹ, ಗ್ರಾಮಗಳ ನಾನಾ ಕ್ಷೇತ್ರಗಳಲ್ಲಿ ಕಾಣುವ ಪ್ರತಿಭಾವಂತರನ್ನು ಗುರುತಿಸುವ, ಅವರ ಬಗೆಗೆ ಮಾಹಿತಿಗಳನ್ನು ಕಲೆಹಾಕುವ, ಅವುಗಳನ್ನು ಸಂಗ್ರಹಾಲಯಗಳಲ್ಲಿ ದಾಖಲಿಸಿ ಇಡುವ, ಅಗತ್ಯ ಬಿದ್ದಾಗ ಸರ್ಕಾರಕ್ಕೆ ಮತ್ತು ವಿಶ್ವವಿದ್ಯಾಲಯಕ್ಕೆ ಅಗತ್ಯ ಮಾಹಿತಿಗಳನ್ನು ದೊರಕಿಸುವ ಕೆಲಸವನ್ನು ಮಾಡಬೇಕು. ತಾಲೂಕಾ ಮತ್ತು ಜಿಲ್ಲಾಮಟ್ಟದ ಪಂಚಾಯತಿಗಳ ಅಧೀನದಲ್ಲೂ ಇಂತಹ ಸಂಗ್ರಹಾಲಯಗಳು ಪ್ರಾರಂಭವಾಗಬೇಕು. ಅಲ್ಲಿಯೂ ಸಿಬ್ಬಂದಿಯ ವ್ಯವಸ್ಥೆಯಾಗಬೇಕು. ಜಿಲ್ಲಾಮಟ್ಟದಲ್ಲಿ ಜಾನಪದಕ್ಕೆ ಸಂಬಂಧಿಸಿ ಎರಡು ಘಟಕಗಳು ಕೆಲಸ ಮಾಡಬೇಕು:

೧. ಸಂಗ್ರಹಾಲಯ: ವಸ್ತು ಸಂಗ್ರಹ ಮತ್ತು ಸಂರಕ್ಷಣೆ.

೨. ಪತ್ರಾಗಾರಗಳು: ಸಾಹಿತ್ಯ/ಮಾಹಿತಿ ಸಂಗ್ರಹ ಮತ್ತು ದಾಖಲಾತಿ.


ಜಾನಪದ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಆಗುವ ಪ್ರಯೋಜನಗಳು:

೧. ದೇಸೀಸಂಸ್ಕೃತಿ ಮತ್ತು ಬದುಕಿನ ಮೌಲ್ಯಗಳ ಅರಿವು, ಪುನರುತ್ಥಾನ ಮತ್ತು ಪ್ರಸಾರ

೨. ಮೌಖಿಕ ಸಾಹಿತ್ಯ-ಗ್ರಾಮೀಣ ಕಲಾ-ಕ್ರೀಡಾ ಪ್ರಕಾರಗಳ ಕಲಿಕೆ ಪ್ರಸಾರ.

೩. ಪರಂಪರೆ ಜ್ಞಾನದ ಶೋಧ-ಸಂರಕ್ಷಣೆ, ಬದುಕಿನಲ್ಲಿ ಅಳವಡಿಕೆ.

೪. ಗ್ರಾಮೀಣ ಕಸಬು ಮತ್ತು ಕರಕುಶಲ ಕಲೆಗಳ ಪುನಃಶ್ಚೇತನ

೫. ದೇಸೀ ಕೃಷಿ ಮತ್ತು ವೈದ್ಯ ಪದ್ಧತಿಗಳ ಶೋಧ ಮತ್ತು ಅಳವಡಿಕೆ. ಇದರಿಂದ ದೇಶದ ಆಹಾರ, ಆರೋಗ್ಯಗಳ ಅಭಿವೃದ್ಧಿ, ಅರಿವುಗಳ ಹೆಚ್ಚಳ. ಇದರಿಂದ ಸಮೃದ್ಧ ಭಾರತದ ನಿರ್ಮಾಣಕ್ಕೆ ನಾಂದಿ.

೬. ಗ್ರಾಮಾಂತರ ಪ್ರದೇಶದ ಪ್ರತಿಭಾವಂತ ಕಸಬುದಾರರಿಗೆ/ ಕಲಾವಿದರಿಗೆ ಪ್ರೋತ್ಸಾಹ ಮತ್ತು ಆರ್ಥಿಕ ಭದ್ರತೆ.
೭. ಭಾರತದ ಯುವಕರಿಗೆ ಸ್ವಾವಲಂಬಿ ಉದ್ಯೋಗದ ಅವಕಾಶ, ಒಂದು ಹೊಸ ಬದುಕಿನ ದಾರಿಯ ಅನ್ವೇಷಣೆ. ಇದರಿಂದ ಸ್ವಾವಲಂಬಿ ಭಾರತದ ನಿರ್ಮಾಣಕ್ಕೆ ನಾಂದಿ.

೮. ದೇಸಿ ಸೌಲಭ್ಯಗಳ ಅರಿವು ಮತ್ತು ಅಳವಡಿಕೆ.

೯. ಆಧುನಿಕ ಪ್ರಪಂಚದ ಆತಂಕಗಳಿಂದ (ಕೈಗಾರಿಕೀಕರಣ, ಜಾಗತೀಕರಣಗಳ ದುಷ್ಪರಿಣಾಮಗಳಿಂದ) ರಕ್ಷಣೆ.

೧೦. ನೈಸರ್ಗಿಕ ಪರಿಸರದ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲು ಒಂದು ಪ್ರತಿ ಯೋಜನೆ.


-ಡಾ| ವೀರಣ್ಣ ದಂಡೆ
ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಸಂಸ್ಥೆ
ಗುಲಬರ್ಗಾ ವಿಶ್ವವಿದ್ಯಾಲಯ
ಗುಲಬರ್ಗಾ-೫೮೫ ೧೦೬
ಮೊಬಾಯಿಲ್: ೯೪೪೮೭೭೮೯೯೧

ದೆಹಲಿಯಲ್ಲಿ ರಹಮತ್ ತರೀಕೆರೆ

( ಈಚೆಗಷ್ಟೆ ರಹಮತ್ ತರೀಕೆರೆ ದೆಹಲಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವ ಹೊತ್ತಿನ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ. ಇಲ್ಲಿನ ಫೋಟೋಗಳು ಡಿ.ಬಾಲಕೃಷ್ಣ ನಾಯ್ಕ್ ಅವರ ಕೆಂಪುಕೋಟೆ ಬ್ಲಾಗ್ ನಿಂದ ಎರವಲು ಪಡೆದು ಇಲ್ಲಿ ಬಳಸಿಕೊಳ್ಳಲಾಗಿದೆ)

ಶುಕ್ರವಾರ, ಫೆಬ್ರವರಿ 18, 2011

ದನಿ ಕಳೆದುಕೊಳ್ಳುತ್ತಿರುವ ಉರುಮೆ ವಾದ್ಯ ಬಾರಿಸುವವರು

-ಸಿದ್ದರಾಮ ಹಿರೇಮಠ, ಕೂಡ್ಲಿಗಿ. (ಉರುಮೆ ವಾದ್ಯ ದೇಸಿ ವಾದ್ಯಗಳಲ್ಲಿ ಪ್ರಮುಖವಾದುದು. ಇದು ಗ್ರಾಮದೇವತೆಯ ಜಾತ್ರೆಗೆ ಕಳೆ ಗಟ್ಟಿಸುವ ವಾದ್ಯ. ಇದರ ದ್ವನಿಯೇ ತೀರಾ ಗಡುಸಾದುದು. ಮನಕ್ಕೆ ಇಂಪು ನೀಡುವ ಜಾಯಮಾನ ಈ ವಾದ್ಯದ್ದಲ್ಲ. ಇದು ಶೋಷಿತರ ನೋವನ್ನು ದೊಡ್ಡದಾಗಿ ಎತ್ತರದ ದ್ವನಿಯಲ್ಲಿ ಪ್ರತಿರೋಧಿಸುವುದರ ರೂಪಕದಂತಿದೆ. ಈ ವಾದ್ಯವನ್ನು ನುಡಿಸುವ ಕಲಾವಿದರು ಇಂದು ಅನಾಥ ಪ್ರಜ್ಞೆಯಲ್ಲಿ ಬದುಕು ದೂಡುತ್ತಿದ್ದಾರೆ. ಹೊಸ ತಲೆಮಾರು ಈ ವಾದ್ಯದ ಸಂಗ ತ್ಯಜಿಸಿ ಹೊಸ ಬದುಕಿನತ್ತ ಆಸೆಗಣ್ಣುಗಳಿಂದ ನೋಡುತ್ತಿದ್ದಾರೆ. ಅವರ ಹೊಸ ಬದುಕು ಹಸನಾಗಲಿ ಎಂದು ನಮ್ಮ ಹರಕೆ. ಆದರೆ ಉರುಮೆಯನ್ನೇ ನಂಬಿ ಬದುಕುತ್ತಿರುವ ಹಿರಿ ಜೀವಗಳನ್ನು ಜನಪದ ಕಲಾವಿದರೆಂದು ಗುರುತಿಸಿ ಅವರ , ಮಾಶಾಸನ ಮುಂತಾದ ಮೂಲಭೂತ ಸೌಲಭ್ಯಗಳನ್ನು ಕೊಡುವಲ್ಲಿ ಸರಕಾರ ಗಮನಹರಿಸಬೇಕಾಗಿದೆ. ಅಂತಹ ಉರುಮೆ ವಾದಕರ ಅಳಲನ್ನು ಕವಿ, ಸೃಜನಶೀಲ ಲೇಖಕರಾದ ಸಿದ್ಧರಾಮ ಹಿರೇಮಠ ಅವರು ಬರಹದಲ್ಲಿ ಹಿಡಿದಿಟ್ಟಿದ್ದಾರೆ. -ಅರುಣ್ ) ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಜಾನಪದೀಯ ಅಂಶಗಳನ್ನು ಮೈಗೂಡಿಸಿಕೊಂಡಿರುವ ಉರುಮೆ ವಾದ್ಯಗಾರರು, ಸರ್ಕಾರದ ಯಾವುದೇ ಪ್ರೋತ್ಸಾಹ, ಸೌಲಭ್ಯಗಳಿಲ್ಲದೆ ದನಿ ಕಳೆದುಕೊಳ್ಳುತ್ತಿದ್ದಾರೆ. ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಮರಬನಹಳ್ಳಿಯ ಉರುಮೆ ವಾದ್ಯಗಾರರ ತಂಡ ಹಲವಾರು ಜಿಲ್ಲೆಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದರೂ ಇಲ್ಲಿಯ ಯಾರಿಗೂ ಇದುವರೆಗೆ ಯಾವುದೇ ರೀತಿಯ ಮಾಸಾಶನ ದೊರೆತಿಲ್ಲ. ಜಿರ್..ಜೀಂಯ್....... ಎಂದು ಕೇಳುಗರ ಎದೆಬಡಿತವನ್ನೇ ಏರುಪೇರು ಮಾಡುವಂತಿರುವ ಉರುಮೆ ವಾದ್ಯ, ಪರಂಪರಾಗತವಾಗಿ ಬಂದದ್ದು. ಮರಬನಹಳ್ಳಿಯ ಉರುಮೆ ವಾದ್ಯಗಾರರು ತಮ್ಮ ತಲೆತಲಾಂತರಗಳಿಂದಲೂ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಕೆಲ ವಾದ್ಯಗಾರರು ವಯಸ್ಸಾಗಿ ಯಾವುದೇ ಸೌಲಭ್ಯವಿಲ್ಲದೆ ಮರಣಹೊಂದಿದ್ದರೆ, ಇರುವ ಹಿರಿಯರು ಮಾಸಾಶನದ ನಿರೀಕ್ಷೆಯಲ್ಲೇ ಮುಪ್ಪಾಗಿದ್ದಾರೆ. ಯಾವುದೇ ಜಾತ್ರೆ, ಉತ್ಸವ, ಗ್ರಾಮದೇವತೆಗಳ ಮೆರವಣಿಗೆಗಳಿಗೆ ಉರುಮೆ ವಾದ್ಯ ಬೇಕೇ ಬೇಕು. ಅದು ಸತ್ಸಂಪ್ರದಾಯವೂ ಹೌದು, ಕುಲಕಸಬೂ ಹೌದು. ಇವರ‍್ಲಿಲದೆ ಯಾವುದೇ ಮೆರವಣಿಗೆ, ಸಂಪ್ರದಾಯಿಕ ಉತ್ಸವಗಳಿಗೆ ಮೆರಗು ಬರುವುದೇ ಇಲ್ಲ. ಉರುಮೆಯವರ ತಂಡ ಮೆರವಣಿಗೆಯ್ಲಲಿದೆಯೆಂದರೆ ಕುಣಿಯಲಾರದವರೂ ಇದರ ನಾದಕ್ಕೆ, ಆವೇಶಕ್ಕೆ ಮಾರುಹೋಗಿ ಕುಣಿಯತೊಡಗುತ್ತಾರೆ. ವಿಶೇಷವಾಗಿ ಗ್ರಾಮದೇವತೆಗಳಿಗೆ ಉರುಮೆ ವಾದ್ಯ ಬೇಕು. ಅಷ್ಟೇ ಅಲ್ಲದೆ ಜನಪ್ರತಿನಿಧಿಗಳು ಗೆದ್ದರೆ, ಮಂತ್ರಿ ಮಹೋದಯರು ಬಂದರೆ ಅವರ ಮೆರಣಿಗೆಗೆ ಕಳೆ ಕಟ್ಟುವುದೇ ಉರುಮೆ ವಾದ್ಯದ ಸದ್ದು. ಎಲ್ಲರ ಮೆರವಣಿಗೆಗೆ ಕಳೆಕಟ್ಟುವ, ದೇವತೆಗಳನ್ನು ಸಂಪ್ರೀತಿಪಡಿಸುವ ಉರುಮೆ ವಾದಕರು ಮಾತ್ರ ಕುಣಿಯಲಾರದಂತೆ ಕುಸಿದುಹೋಗಿದ್ದಾರೆ. ‘ಎಂ.ಪಿ.ಪ್ರಕಾಶ ಸಾಹೇಬ್ರು ಇದ್ದಾಗ ನಮಗೆಲ್ಲ ಅನುಕೂಲ ಮಾಡಿಕೊಟ್ಟಿದ್ರು, ಇರಾಕ ಮನೀನೂ ಕೊಟ್ಟಿದ್ರು, ಉರುಮೆ ಕೊಡಿಸಿದ್ರು, ಕಾರ್ಯಕ್ರಮದಾಗ ಅವಕಾಶಾನೂ ಕೊಡಿಸಿದ್ರು, ಈಗ ಏನೂ ಇಲ್ರಿ’ ಎಂದು ಉರುಮೆ ವಾದ್ಯದ ೭೫ ವರ್ಷಗಳ ಹಿರಿಯ ಪಟಗಾಣಿ ಬಸಪ್ಪ ನೊಂದು ನುಡಿಯುತ್ತಾನೆ. ಇದರಿಂದ ಏನೂ ಲಾಭವಿಲ್ಲವೆ ಎಂದು ಪ್ರಶ್ನಿಸಿದರೆ, ‘ ಇದು ನಮ್ಮ ಕುಲಕಸಬು, ಯಾರು ಕೊಟ್ರೇನು, ಬಿಟ್ರೇನು ನಮ್ ಕೆಲ್ಸ ನಾವು ಮಾಡ್ತೀವಿ, ಕೆಲವರು ಕೊಡ್ತಾರೆ, ಕೆಲವರು ಅದರಾಗೆ ಉಳಿಸ್ಕೊಂಡು ನಮಗೆ ಕಡಿಮಿ ಕೊಡ್ತಾರ ಅದಕ್ಕೇನೂ ನಾವು ಬೇಜಾರು ಮಾಡ್ಕಣಂಗಿಲ್ಲ ಎಂದು ವಾದಕರು ನಿರಾಶೆಯಿಂದ ಹೇಳುತ್ತಾರೆ. ಗ್ರಾಮದಲ್ಲಿ ನೋಂದಣಿಯಾಗಿರುವ ಉರುಮೆ ವಾದಕರ ಸಂಘವೂ ಇದೆ. ಛಲವಾದಿ ಮಾರಪ್ಪ ಸಂಘದ ಅಧ್ಯಕ್ಷ. ‘ಮಾಸಾಶನ ಕೊಡಿಸ್ತೀವಿ ಅಂತ ಕಾಗ್ದಪತ್ರ ಎಲ್ಲಾನೂ ತೊಗೊಂಡು ಹೋದ್ರು, ಚಿತ್ರದುರ್ಗಕ್ಕ ಇಂಟ್ರ್ಯೂಗೆ ಬರ್ರಿ ಅಂತ ಕಾಗ್ದ ಬಂತು, ಉರುಮಿ ಬಾರ್ಸಿ ತೋರ್ಸಪಾ ಅಂದ್ರು, ಬಾರ್ಸಿ ಬಂದ್ವಿ, ಇದಾಗಿ ೩-೪ ವರ್ಷಾತು ಇನ್ನವರೆಗೂ ಅದೇನಾತಂತನ ಗೊತ್ತಿಲ್ಲ’ ಎಂದು ಮಾರಪ್ಪ ಹೇಳಿದರು. ಈ ಗ್ರಾಮದ ತಂಡದ ಸದಸ್ಯರು ಪ್ರತಿವರ್ಷವೂ ಹಂಪಿ ಉತ್ಸವದಲ್ಲಿ ತಮ್ಮ ಕಲೆಯ ಗತ್ತನ್ನು ಪ್ರದರ್ಶಿಸಿದ್ದಾರೆ, ಬಳ್ಳಾರಿ ಜಿಲ್ಲೆಯೂ ಸೇರಿದಂತೆ ಚಿಕ್ಕಮಗಳೂರು, ಧಾರವಾಡ, ದಾವಣಗೆರೆ ಹೀಗೆ ಹಲವಾರು ಜಿಲ್ಲೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ, ಉರುಮೆ ಬಾರಿಸಿ ಈಗಾಗಲೇ ಇವರ ಕೈಗಳು ಸುಸ್ತಾಗಿವೆ, ದಣಿವಾಗಿದೆ, ಇದೀಗ ಇವರಿಗೆ ಸರ್ಕಾರದ ಆಸರೆ ಬೇಕಾಗಿದೆ, ಕಲೆಗೆ ಪ್ರೋತ್ಸಾಹ, ಪ್ರಶಸ್ತಿಗಳೂ ಬೇಕಾಗಿವೆ. ಸರ್ಕಾರಿ ಕಾರ್ಯಕ್ರಮಗಳಿಗೆ ಇವರನ್ನು ಕರೆಯಲಾಗುತ್ತದಾದರೂ ಕೆಲವೊಮ್ಮೆ ಅಂಚೆಯ ವಿಳಂಬದಿಂದಾಗಿ, ಕಾರ್ಯಕ್ರಮ ಮುಗಿದ ನಂತರ ಆಹ್ವಾನ ಪತ್ರಗಳು ತಲುಪಿದ ಉದಾಹರಣೆಗಳೂ ಇವೆ. ಮೈಸೂರು ದಸರಾ ಉತ್ಸವಕ್ಕೆ ಆಹ್ವಾನ ಬಂದಾಗ, ಅದಾಗಲೇ ಮುಗಿದುಹೋಗಿತ್ತು ಎಂದು ಸಂಘದ ಅಧ್ಯಕ್ಷ ಮಾರಪ್ಪ ಬೇಸರದಿಂದ ಹೇಳುತ್ತಾರೆ. ಇವರ ಮಕ್ಕಳು ಶಿಕ್ಷಣ ಪಡೆದಿದ್ದಾರೆ, ಕೆಲವರು ಒಳ್ಳೆಯ ಉದ್ಯೋಗದಲ್ಲೂ ಇದ್ದಾರೆ, ಅವರೂ ಸಹ ಕೆಲವೊಮ್ಮೆ ಉತ್ಸವಗಳಲ್ಲಿ ಉರುಮೆ ಬಾರಿಸಿ ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ. ಹೀಗೆ ದೇಸಿ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗುತ್ತಿರುವ ಉರುಮೆ ವಾದಕರಿಗೆ ಮಾಸಾಶನ, ಮೆಚ್ಚುಗೆಯ ಮಾತುಗಳ ಅವಶ್ಯಕತೆಯಿದೆ. ಕಲೆಗೆ ಸಂಬಂಧಿಸಿದ ಇಲಾಖೆಗಳು ತಮ್ಮನ್ನು ನಿರ್ಲಕ್ಷಿಸುತ್ತಿವೆ ಎಂಬ ನೋವೂ ಉರುಮೆ ವಾದಕರಿಗಿದೆ. ತಾಲೂಕಿನ ಸೂಲದಾರಹಳ್ಳಿ, ಇಮಡಾಪುರ, ಗುಂಡುಮುಣುಗು, ಮಾಡ್ಲಾಕನಹಳ್ಳಿ, ಕುರಿಹಟ್ಟಿ, ಕಡೇಕೊಳ್ಳ ಗ್ರಾಮಗಳೂ ಸೇರಿದಂತೆ ತಾಲೂಕಿನಲ್ಲಿ ಸುಮಾರು ೩೦೦-೪೦೦ ಜನ ಉರುಮೆ ವಾದಕರಿದ್ದಾರೆ. ಉರುಮೆ ವಾದ್ಯದ ಹಿರಿಯರಿಗೆ ನೆರವು, ಹೊಸಬರಿಗೆ ಪ್ರೋತ್ಸಾಹ, ಕಲಿಕೆಯ ಅವಶ್ಯಕತೆಯಿದೆ, ಸಂಬಂಧಿಸಿದ ಇಲಾಖೆಗಳು ಇತ್ತ ಗಮನಿಸಬೇಕಾಗಿದೆ.

ಜನಪದ ಕವಿ ನಿಡುಗುರ್ತಿ ಅಂಜಿನಪ್ಪ

-ಸ್ವರೂಪನಂದ ಎಂ ಕೊಟ್ಟೂರು ( ಜಾನಪದ ಕಲಾವಿದರಲ್ಲಿ, ಅಕ್ಷರವಂತರೂ ಇದ್ದಾರೆ. ಅವರ ಅಕ್ಷರ ಜ್ಞಾನ ಅವರ ಜಾನಪದ ಸಾಹಿತ್ಯದ ಮೇಲೆ ಪ್ರಭಾವ ಬೀರಿರುತ್ತದೆ. ಇದನ್ನು ಕೂಡ ನಾವಿಂದು ಜನಪದ ಅಂತಲೇ ಗುರುತಿಸಬೇಕಿದೆ. ಆದರೆ ಇದನ್ನು ವಿವರಿಸಿಕೊಳ್ಳುವಾಗ, ಬೇರೆಯದೇ ಕ್ರಮವನ್ನು ಅನುಸರಿಸುವ ಅಗತ್ಯವಿದೆ. ಈಗ ಕರ್ನಾಟಕದಲ್ಲಿ ಹುಟ್ಟುತ್ತಿರುವ ಜಾನಪದದಲ್ಲಿ ಈ ಆಯಾಮವಿರುವುದನ್ನು ಅಲ್ಲಗಳೆಯುವಂತಿಲ್ಲ. ಮೊಹರಂ ಗಾಯಕರು, ಡೊಳ್ಳಿನ ಹಾಡುಗಾರರು ಇಂತಹದೇ ನೆಲೆಯಲ್ಲಿ ಅಪಾರ ಸಾಹಿತ್ಯವನ್ನು ರಚಿಸಿದ್ದಾರೆ. ಈ ನಿಟ್ಟಿನಲ್ಲಿ ಜಾನಪದವನ್ನು ತೀರಾ ಭಿನ್ನವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಒಬ್ಬ ಅಪರೂಪದ ಜಾನಪದ ಹಾಡುಗಾರ, ಕವಿಯಾದ ನಿಡುಗುರ್ತಿ ಅಂಜಿನಪ್ಪನ ಪರಿಚಯ ಇಲ್ಲಿದೆ. –ಅರುಣ್) ಬಳ್ಳಾರಿ ಜಿಲ್ಲೆ ಸಂಡೂರು ತಾಲ್ಲೂಕಿನ ನಿಡಗುರ್ತಿ ಎಂಬ ಗ್ರಾಮದ ಅಂಜಿನಪ್ಪ ಒಬ್ಬ ಅಪ್ಪಟ ಜನಪದ ಕವಿ. ೭೦ ವರ್ಷದ ಅಜ್ಜನಿಗೆ ಹಾಡುವುದು ದಣಿವಲ್ಲ, ಬದಲಾಗಿ ಜೀವನೋತ್ಸಾಹ. ನಿಡಿದಾದ ಎತ್ತರದ, ಗಟ್ಟಿಮುಟ್ಟಾದ ದೇಹ, ದೇಹಕ್ಕೆ ತಕ್ಕ ದ್ವನಿ ಎಲ್ಲವೂ ದೇಸಿ ಹಾಡುಗಾರನೊಬ್ಬನ ಲಕ್ಷಣದ ಜೀವವಂತಿಕೆ ಇರುವ ವ್ಯಕ್ತಿತ್ವ. ಜಾನಪದ ವಿದ್ವಾಂಸರು, ಜಾನಪದ ನಶಿಸುತ್ತಿದೆ ಎನ್ನುವ ಹಳಹಳಿಕೆಯಲ್ಲೇ ಇಂತಹ ಜನಪದ ಕಲಾವಿದರನ್ನು ಮರೆಯುತ್ತಾರೆನಿಸುತ್ತದೆ. ಹಾಗಾಗಿ ಅಂಜಿನಪ್ಪ ಇನ್ನು ಅಧ್ಯಯನಕಾರರ ಗಮನಕ್ಕೆ ಬಿದ್ದಂತಿಲ್ಲ. ಏಳನೇ ತರಗತಿ ಕಲಿತಿರುವುವ ಅಂಜಿನಪ್ಪ, ಅಕ್ಷರ ಜ್ಞಾನವನ್ನು ತನ್ನ ಜನಪದ ಪ್ರತಿಭೆಗೆ ಬಳಸಿಕೊಂಡಿದ್ದಾರೆ. ಹಾಗಾಗಿಯೇ ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು. ಈ ಇಳಿವಯಸ್ಸಿನಲ್ಲಿಯೂ ಅದ್ಭುತ ಹಾಡುಗಾರಿಕೆಯ ಮೂಲಕ ಜನರನ್ನು ಮಂತ್ರಮುಗ್ದರನ್ನಾಗಿಸುವ ಶಕ್ತಿ ಈ ಕಲಾವಿದನಿಗಿದೆ. ಮುಪ್ಪು ಆವರಿಸುತ್ತಿರುವುದು ತನ್ನ ದೇಹಕ್ಕೆ ವಿನಾಃ ನನ್ನ ಕಲಾ ಸೇವೆಗಲ್ಲಾ ಎಂಬ ಕಡಕ್ ಮಾತು ಈತನದು. ಈಗ್ಗೆ ೫೦ ವರ್ಷಗಳಿಂದ ಹಾಡುಗಾರಿಕೆಯನ್ನೇ ತನ್ನ ಬದುಕಾಗಿಸಿಕೊಂಡ ಈ ಹಿರಿ ಜೀವ ಜನಪದವನ್ನು ಬದುಕುತ್ತಿದ್ದಾರೆ. ಈ ತನಕ ಬಳ್ಳಾರಿ, ರಾಯಚೂರು, ಚಿತ್ರದುರ್ಗ ಮುಂತಾದ ಕಡೆಗಳಲ್ಲಿ ತನ್ನ ಹಾಡುಗಾರಿಕೆಯ ಸವಿಯನ್ನು ಜನರಿಗೆ ಹಂಚಿದ್ದಾರೆ. ಈ ಮೊದಲೇ ಹೇಳಿದೆ, ಅಕ್ಷರ ರೂಪದ ಸಾಹಿತ್ಯನ್ನು ಜನಪದೀಕರಿಸಿದ ಹೆಚ್ಚುಗಾರಿಕೆ ಈ ಕಲಾವಿದನದು ಎಂದು. ಇವರು ಪ್ರಾರಂಭದಲ್ಲಿ ಮೈಸೂರು ವಿವಿ, ನಂತರದಲ್ಲಿ ಕ.ಸಾ.ಪ ದಿಂದ ಪುಸ್ತಕಗಳನ್ನು ತಂದು ಓದಿದ್ದಾರೆ, ಈ ಬಗೆಯ ಅವರ ಓದು, ಅವರ ಹಾಡುಗಾರಿಕೆಯ ಸಾಹಿತ್ಯದ ಮೇಲೆ ಪ್ರಭಾವ ಬೀರಿದೆ. ಈ ಬಗೆಯ ಮೌಖಿಕತೆ ಶಿಷ್ಟದ ಮಿಲನ ಇವರಲ್ಲಿ ವಿಚಿತ್ರ ರೀತಿಯಲ್ಲಿ ಬೆರೆತಿದೆ. ಹಾಗಾಗಿ ಇವರು ಬಸವಣ್ಣನವರ ೩೬೫ ವಚನಗಳು, ಕನಕ ದಾಸರ ೧೫೦ ಪದಗಳು, ಪಾಂಡುರಂಗರ ೨೬೫ ಪದಗಳು, ಸಂಗ್ರಹ ಮೂಲದ ೬೮ ಹಾಡುಗಳು, ಶಿಶುನಾಳಜ್ಜರ ಮತ್ತು ನಾಗಲಿಂಗಜ್ಜರ ತಲಾ ೬೫ ಹಾಡುಗಳನ್ನು ಜನಪದ ಹಾಡಿನ ಲಯದಲ್ಲಿ ಹಾಡುತ್ತಾರೆ. ಜೊತೆಗೆ ಹಂಪಿ ಇತಿಹಾಸದ ಬಗ್ಗೆ, ಬಸವಣ್ಣ ಹಾಗೂ ಮುರುಘರಾಜೇಂದ್ರ ಸ್ವಾಮಿಗಳ ಮೇಲೆ ೬೦ ಗೀತೆಗಳನ್ನು ಸ್ವತಃ ರಚಿಸಿದ್ದಾರೆ. ಹಾಗಾಗಿ ಇವರು ನಿಜಾರ್ಥದಲ್ಲಿ ಜನಪದ ಕವಿಯೇ ಸರಿ. ಅಂಜಿನಪ್ಪ ಅಚ್ಚರಿ ಮೂಡಿಸುವ ಕಲಾವಿದ. ಇವರು ಹಾಡುವುದಕ್ಕೆ ಸಾಥ್ ನೀಡುವುದು ಚರ್ಮದ ದಿಂಬಡಿ. ಸಂಗೀತದ ೨೮ ರಾಗಗಳನ್ನು ಬಲ್ಲವರಾಗಿರುವ ಇವರು ಸಂಗೀತದಲ್ಲಿ ಪ್ರವೀಣರು. ಇವರು ಹಾಡಲು ನಿಂತರೆ ಸಂಗಿತಾಸಕ್ತರ ದಂಡೇ ಇವರತ್ತ ದೌಡಾಯಿತ್ತದೆ. ಆಕರ್ಷಕ ಕಂಠ ಸಿರಿ, ಹಾಡುವಾಗ ಕಂಡುಬರುವ ಗತ್ತು-ಗಾಂಭೀರ್ಯ, ಸ್ವ-ರಚಿತ ಕವನಗಳಲ್ಲಿನ ಗ್ರಾಮೀಣ ಸೊಗಡು, ಅದರಲ್ಲಿ ಬಳಸಿದ ನಾಣ್ಣುಡಿಗಳು ಕೇಳುಗರನ್ನು ಆಕರ್ಶಿಸುತ್ತದೆ. ಇವರು ಕೇವಲ ಸಂಗೀತಗಾರನಾಗಿರದೇ ಆ ಹಾಡನ್ನು ಏಳೆ-ಏಳೆಯಾಗಿ ಬಿಡಿಸಿ ಮನೋಜ್ಞವಾಗಿ ಅರ್ಥೈಸುವ ಮಾದರಿಯೂ ಕುತೂಹಲಕರ. ಅನೇಕ ರಾತ್ರಿಗಳನ್ನು ವಿಶ್ರಮಿಸದೇ, ಎದರು ಹಾಡುಗಾರರು ಇದ್ದರೆ ಸಮಯದ ಪರಿವೇ ಇರದಂತೆ ಹಾಡುವ ಜ್ಞಾನ ಬಂಡಾರ ಇವರಲ್ಲಿದೆ. ಇದರಿಂದಾಗಿ ಇವರು ಈ ಭಾಗದಲ್ಲಿ “ಭಜನೆ ಅಂಜಿನಪ್ಪ” ಎಂದೇ ಚಿರಪರಿಚಿತ. ಜೊತೆಗೆ “ಆಡು ಮುಟ್ಟದ ಸೊಪ್ಪಿಲ್ಲ ಅಂಜಿನಪ್ಪ ಮಾತನಾಡದ ವಿಷಯಗಳಿಲ್ಲ್ಲ” ಎಂಬ ಮಾತು ಜನರ ಬಾಯಿಯಲ್ಲಿ ಹರಿದಾಡುತ್ತಿದೆ. ಬಂಡ್ರಿಯ ಅಗಸರ ಚೆನ್ನಪ್ಪ ಎನ್ನುವರು ನನಗೆ ಸ್ಪೂರ್ತಿಯಾದರೆ, ನಾಗಲಾಪುರದ ಜಂಬಯ್ಯ ಮೇಷ್ಟ್ರು ತನ್ನ ಸಾಧನೆಗೆ ಮೈಲುಗಲ್ಲಾದರೆಂದು ನೆನೆಯುತ್ತಾರೆ. ಗುರುಪುತ್ರರಾಗಿರುವ ಇವರು ತನ್ನ ಸುತ್ತಮುತ್ತಲಿನ ಸುಮಾರು ೫೦೦ ಜನರಿಗೆ ಗುರುಪುತ್ರ ದೀಕ್ಷೆ ಕೊಡಿಸಿದ್ದಾರೆ. ಈಗಾಗಲೇ ಹಂಪಿ ಉತ್ಸವ ಸೇರಿದಂತೆ ಹಲವಾರು ಕಡೆ ಕಾರ್ಯಕ್ರಮ ಕೊಟ್ಟಿದ್ದಾರೆ. ಅಂಜಿನಪ್ಪ ಕಲೆಯನ್ನೇ ಉಸಿರಾಗಿಸಿಕೊಂಡಿದ್ದಾರೆ. ಅನೇಕ ಕಡೆ ಇವರಿಗೆ ಸನ್ಮಾನಗಳಾಗಿವೆ. ತನ್ನ ಸ್ವ-ರಚಿತ ಕವನಗಳನ್ನು ಪುಸ್ತಕ ರೂಪದಲ್ಲಿ ಹೊರುವ ಆಸೆ ಇದೆ. ಹಣದ ಕೊರತೆ ಇವರ ಆಸೆಯನ್ನು ಆಗುಮಾಡಿಲ್ಲ. ಸರ್ಕಾರವೂ ಇವರ ಕಲೆಯನ್ನು ಹೆಚ್ಚಾಗಿ ಗುರುತಿಸಿಲ್ಲ. ಕಲಾವಿದರನ್ನು ಸರ್ಕಾರ ಕಡೆಗಣಿಸುತ್ತಿರುವುದಕ್ಕೆ ಇವರಲ್ಲಿ ಬೇಸರವಿದೆ. ಕೆಲ ತಿಂಗಳುಗಳಿಂದ ಕಲಾವಿದರ ಮಾಶಾಸನ ಪಡೆಯುತ್ತಿದ್ದು, ಈಗ ಅದುವೇ ಜೀವನಕ್ಕೆ ಊರುಗೋಲಾಗಿದೆ

ಗುರುವಾರ, ಫೆಬ್ರವರಿ 17, 2011

ಜಾನಪದ ವಿವಿ ಸ್ವರೂಪ ಹೇಗಿರಬೇಕು?

-ಡಾ. ಬಸವರಾಜ ಮಲಶೆಟ್ಟಿ (ಪ್ರೊ. ಬಸವರಾಜ ಮಲಶೆಟ್ಟರು ಹಿರಿಯ ಜಾನಪದ ವಿದ್ವಾಂಸರಲ್ಲಿ ಪ್ರಮುಖರು. ಹೊಸಪೇಟೆಯ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರಾಗಿದ್ದು, ನಿವೃತ್ತಿಯಾಗಿದ್ದಾರೆ. ಉತ್ತರ ಕರ್ನಾಟಕದ ಜನಪದ ರಂಗಭೂಮಿ, ಬಯಲಾಟ, ಸಣ್ಣಾಟ ಮುಂತಾದ ಜನಪದ ರಂಗಭೂಮಿಯ ಬಗ್ಗೆ ಅಪಾರ ವಿದ್ವತ್ತನ್ನು ಹೊಂದಿದವರು. ಅವರು ಜಾನಪದ ವಿವಿ ಆರಂಭವಾದ ಮೊದಲಿಗೆ ಬರೆದ ಬರೆಹವನ್ನು ಕನ್ನಡ ಜಾನಪದ ಓದುಗರಿಗಾಗಿ ಪ್ರಕಟಿಸಲಾಗಿದೆ. ಇಲ್ಲಿ ಜಾನಪದ ವಿವಿ ಯನ್ನು ರೂಪಿಸುವ ಬಗ್ಗೆ ಕೆಲವು ಒಳ್ಳೆಯ ಅಂಶಗಳಿವೆ. –ಅರುಣ್) ಕರ್ನಾಟಕಕ್ಕೊಂದು ಜಾನಪದ ವಿಶ್ವವಿದ್ಯಾಲಯ ಬೇಕೆಂಬ ಕೂಗು ಬಹಳ ದಿನಗಳಿಂದ ಕೇಳಿಬರುತ್ತಿದೆ. ನಮ್ಮ ಜಾನಪದದ ಸಂಗ್ರಹ-ಅಧ್ಯಯನ ಪ್ರಸಾರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರ ಪ್ರಾಮಾಣಿಕ ಹಂಬಲವಿದು. ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತು ಚರ್ಚಿಸಲು ಇತ್ತೀಚೆಗೆ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿಯವರು ಒಂದು ಸಭೆ ಕರೆದಿದ್ದರು. ಸುಮಾರು 60 ಜನ ಜಾನಪದ ವಿದ್ವಾಂಸರು ಆಸಕ್ತರು ಪಾಲ್ಗೊಂಡಿದ್ದ ಆ ಸಭೆಯು ಜಾನಪದ ವಿಶ್ವವಿದ್ಯಾಲಯದ ಸ್ಥಾಪನೆಗೆ ಮುಂದಾಗಿರುವ ಸರ್ಕಾರವನ್ನು ಶ್ಲಾಘಿಸಿತು. ವಿಶ್ವವಿದ್ಯಾಲಯ ಅಂದ ಕೂಡಲೇ ನಮ್ಮ ಕಣ್ಣೆದುರಿಗೆ ಈಗಿರುವ ಮಾಮೂಲಿ ವಿವಿಗಳು ಬಂದು ನಿಲ್ಲುತ್ತವೆ. ಜಾನಪದ ವಿಶ್ವವಿದ್ಯಾಲಯ ಈ ಮಾಮೂಲಿ ವಿವಿಗಳನ್ನು ಖಂಡಿತವಾಗಿಯೂ ಮಾದರಿಯಾ¬ಗಿಟ್ಟು¬ಕೊಳ್ಳಬಾರದು. ಅವುಗಳಂತೆಯೇ ಇಲ್ಲಿಯೂ ಸಿಬ್ಬಂದಿ¬ಯನ್ನು ತುರುಕಿ ಬೇರೆ ಬೇರೆ ತರಗತಿಗಳು ಪದವಿಗಳು ಪರೀಕ್ಷೆಗಳು ಸರ್ಟಿಫಿಕೇಟ್‌ಗಳು ಮುಂತಾದವುಗಳ ಅನವಶ್ಯಕ ಜಂಜಾಟ¬ದಲ್ಲಿ ಜಾನಪದ ವಿವಿಯನ್ನು ಸಿಕ್ಕಿಸ¬ಬಾರದು. ಇಲ್ಲಿ ‘ವಿಶ್ವವಿದ್ಯಾಲಯ’ ಎಂಬ ಪದ ಗೌರವ ಘನತೆಗಾಗಿ ಇರಬೇಕಲ್ಲದೆ ಮಾದರಿಗಾಗಿ ಅಲ್ಲ. ಜಾನಪದ ವಿವಿ ಸಂಶೋಧನೆಯ ಹೆಸರಿನಲ್ಲಿ ಪಿಎಚ್‌ಡಿ, ಎಂಫಿಲ್‌ಗಳ ಗೊಡವೆಗೆ ಹೋಗಬಾರದು. ಏಕೆಂದರೆ ನಮ್ಮ ಎಲ್ಲ ವಿವಿಗಳು ಈ ಪದವಿಗಳನ್ನು ವ್ಯವಸ್ಥಿತವಾಗಿ ಅಪಮೌಲ್ಯಗೊಳಿಸಿವೆ. ಅವುಗಳ ಬೆಲೆ ಎಷ್ಟು ಕೆಳಗಿಳಿದಿದೆ¬ಯೆಂದರೆ ಕೈಗೆ ಸಿಗಲಾರದಂತಾಗಿ ನೆಲದಲ್ಲಡಗಿದೆ. ಇಂಥ ಬೆಲೆ ಕಳೆದುಕೊಂಡ ಪದವಿ ನೀಡಲು ಈ ರಾಜ್ಯಕ್ಕೆ ಇನ್ನೊಂದು ವಿಶ್ವವಿದ್ಯಾಲಯ ಬೇಕೇ? ಮೊದಲು ಈ ವಿವಿಯನ್ನು ಏಕೆ ಸ್ಥಾಪಿಸಲಾ¬ಗುತ್ತಿದೆ ಎಂಬುದನ್ನು ಗಂಭೀರವಾಗಿ ಆಲೋಚಿಸಬೇಕು. ಪ್ರಸ್ತುತ ನಮ್ಮ ಜಾನಪದದ ಸ್ಥಿತಿಗಳೇನು? ಈ ಸಂದರ್ಭದಲ್ಲಿ ಜಾನಪದದ ರಕ್ಷಣೆಗೆ ಆನ್ವಯಿಕತೆಗೆ ಪರಿಷ್ಕರಣಕ್ಕೆ ಏನು ಮಾಡಬೇಕು? ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕಾಗಿ ಮತ್ತು ಆ ಉತ್ತರಗಳನ್ನು ಕಾರ್ಯಗತ¬ಗೊಳಿಸುವುದಕ್ಕಾಗಿ ಜಾನಪದ ವಿವಿ ಸ್ಥಾಪಿಸಬೇಕಾಗಿದೆ ಅತ್ಯಂತ ಜರೂರಾಗಿ ಕೈಗೊಳ್ಳಬೇಕಾದುದು ದಾಖಲೀ¬ಕರಣ. ಬದಲಾವಣೆ-ಪರಿವರ್ತನೆ ಜೀವನದ ತತ್ವ. ಅದನ್ನು ತಡೆದು ನಿಲ್ಲಿಸಲಾಗದು. ಬದಲಾವಣೆಗೆ ತೆರೆದುಕೊಳ್ಳದೆ ಸಂಪ್ರದಾಯವನ್ನೇ ಗಟ್ಟಿಯಾಗಿ ಹಿಡಿದುಕೊಳ್ಳುತ್ತೇವೆ ಎಂಬುದು ಹುಂಬತನವಾಗುತ್ತದೆ. ಉದಾಹರಣೆಗೆ ಬೀಸುಕಲ್ಲು. ಒಂದು ಕಾಲಕ್ಕೆ ಬೀಸುವುದು ನಮ್ಮ ಹಳ್ಳಿಗಳಲ್ಲಿ ನಿತ್ಯದ ದಿನಚರಿಯಾಗಿತ್ತು. ಹಿಟ್ಟಿನ ಗಿರಣಿಗಳು ಬಂದ ಮೇಲೆ ಬೀಸು ಕಲ್ಲುಗಳು ಮೂಲೆ ಸೇರಿದವು. ಅವುಗಳೊಂದಿಗೆ ಅಸಂಖ್ಯಾತ ಬೀಸುವ ಪದಗಳೂ ಮರೆಯಾದವು. ಈಗ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಲು ಮತ್ತೆ ಬೀಸುಕಲ್ಲನ್ನು ಚಾಲ್ತಿಗೆ ತರುವುದು ಸಾಧ್ಯವೇ? ಬೀಸುಕಲ್ಲು ಇನ್ನೆಂದಿಗೂ ತನ್ನ ದನಿ ನೀಡದು. ಅದನ್ನು ಬೀಸುವವರು ಬೀಸುವಾಗ ಹಾಡುವವರು ಇನ್ನೂ ಇದ್ದಾರೆ.ಅವರಿಂದ ಹಾಡುಗಳನ್ನು ಧ್ವನಿಮುದ್ರಣದ ಮೂಲಕ ಸಂಗ್ರಹಿಸಬೇಕು. ಬೀಸುವುದನ್ನು ಚಿತ್ರೀಕರಿಸಿಕೊಳ್ಳಬೇಕು. ಮುಂದಿನ ಜನಾಂಗ ಇವುಗಳನ್ನು ಕೇಳಿ ನೋಡಿ ತಮ್ಮ ಸಂಸ್ಕೃತಿಯನ್ನು ಅರಿತುಕೊಳ್ಳುವುದು, ಇದೇ ರೀತಿ ಮರೆಯಾಗುತ್ತಿರುವ ಕಲೆ ಹಬ್ಬ ಪ್ರದರ್ಶನ ಕಲೆ ಒಕ್ಕಲುತನ ಮತ್ತು ಇತರ ವೃತ್ತಿಗಳನ್ನು ದಾಖಲೀಕರಿಸಬೇಕು. ಸಮಗ್ರ ದಾಖಲೀಕರಣ ಕಾರ್ಯ ಜಾನಪದ ವಿಶ್ವವಿದ್ಯಾಲಯದ ಆದ್ಯ ಕರ್ತವ್ಯವಾಗಬೇಕು.ದಾಖಲೀಕರಣದ ಇನ್ನೊಂದು ಮಗ್ಗಲು ವಸ್ತುಸಂಗ್ರಹಾ¬ಲಯ. ಇಡೀ ಗ್ರಾಮೀಣ ಕರ್ನಾಟಕದ ಜೀವನ ಕ್ರಮವನ್ನು ಬಿಂಬಿಸುವ ಬೃಹತ್ತಾದ ವಸ್ತುಸಂಗ್ರಹಾಲಯ ನಿರ್ಮಿಸ¬ಬೇಕು. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ಹೆಚ್ಚು ಆಕರ್ಷಣೀಯ¬ವಾಗುವಂತೆ ನಿರ್ಮಿಸಬೇಕು. ಅದು ಕೇವಲ ಹಳೆಯ ವಸ್ತುಗಳಿಗೆ ಆಶ್ರಯ ತಾಣ¬ವಾಗದೆ ಬೋಧಪ್ರದ¬ವಾದ ಲವಲವಿಕೆಯ ತಾಣವಾಗಬೇಕು. ಜಾಗತೀಕರಣದ ಬಿರುಗಾಳಿ ನಮ್ಮ ಜಾನಪದವನ್ನು ಅಲ್ಲಾಡಿಸಿದೆ. ಪೂರ್ತಿ ನಾಶ ಮಾಡಿಲ್ಲ. ಬಯಲಾಟ ಕೋಲಾಟ ಪೂಜಾಕುಣಿತ ಕರಡಿಮಜಲು ಗೀಗೀಪದ ಕುಸ್ತಿ ಮುಂತಾದವು ಇನ್ನೂ ಜಾನಪದ ವಲಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಆದರೆ ಅವು ಸಾಂಪ್ರದಾಯಿಕ ಸ್ವರೂಪ¬ದಿಂದ ದೂರ ಸರಿದಿವೆ. ಅಪಕ್ವ ಹೊಸತನ ಅವುಗಳಿಗೆ ಹೊಂದಿಕೆ¬ಯಾಗಿಲ್ಲ. ಇಂಥ ಕಲೆ ಕ್ರೀಡೆಗಳನ್ನು ಆಧುನಿಕ ಸಂದರ್ಭಕ್ಕೆ ತಕ್ಕ ಹಾಗೆ ಪರಿಷ್ಕರಿಸಬೇಕು. ಜನಪದರಲ್ಲಿ ಅವುಗಳ ಬಗ್ಗೆ ಪ್ರೀತಿ ವಿಶ್ವಾಸ ಮೂಡುವಂತೆ ರೂಢಿಗೆ ತರಬೇಕು. ಅವುಗಳನ್ನು ಸವಿಯುವ ಅನುಭವಿಸುವ ಅಭ್ಯಾಸ ಬೆಳೆಸಬೇಕು. ಜಾನಪದ ವಿಶ್ವವಿದ್ಯಾಲಯ ಈ ನಿಟ್ಟಿನಲ್ಲಿ ಜವಾಬ್ದಾರಿ¬ಯುತ ಕಾರ್ಯ ಯೋಜನೆಯಲ್ಲಿ ತನ್ನನ್ನು ತೊಡಗಿಸಿ¬ಕೊಳ್ಳಬೇಕು. ನೇಕಾರಿಕೆ ಕುಂಬಾರಿಕೆ ಮೊದಲಾದ ಜಾನಪದ ಕುಶಲಕರ್ಮಗಳಿಗೆ ಹೊಸ ಸ್ಪರ್ಶ ನೀಡಿದರೆ ಅವು ಪುನರ್ಜನ್ಮ ಪಡೆದುಕೊಳ್ಳುತ್ತವೆ. ಹಳ್ಳಿ ನಗರಗಳ ಕನ್ನಡಿಗರು ಇಂಥ ಹೊಸ ಉತ್ಪಾದನೆಗಳನ್ನು ಖುಷಿಯಿಂದ ಬಳಸುವಂಥ ವಾತಾವರಣ ಸೃಷ್ಟಿಗೊಳ್ಳಬೇಕು. ಇದಕ್ಕಾಗಿ ತಂತ್ರಜ್ಞಾನ ಮಾರುಕಟ್ಟೆ ಶಾಸ್ತ್ರ ಬಲ್ಲವರು ಉದ್ದೇಶಿತ ಜಾನಪದ ವಿಶ್ವವಿದ್ಯಾಲಯದಲ್ಲಿರಬೇಕು.ಒಂದು ಹೊಸ ವಿಶ್ವವಿದ್ಯಾಲಯ ಹುಟ್ಟಿಕೊಂಡ ಕೂಡಲೇ ಅದರ ಮೊದಲ ಗುರಿ ಯುಜಿಸಿಯಿಂದ ಮಾನ್ಯತೆ ಪಡೆಯುವದಾಗಿರುತ್ತದೆ. ಮಾಮೂಲಿ ವಿವಿಗಳ ವಿಷಯದಲ್ಲಿ ಇದು ಅನಿವಾರ್ಯ. ಆದರೆ ಜಾನಪದ ವಿವಿ ಯುಜಿಸಿಯ ಹಂಗಿನಲ್ಲಿರಬಾರದು. ಯುಜಿಸಿಯ ನಿಯಮಾವಳಿಗಳನ್ನು ತೃಪ್ತಿಪಡಿಸಲು ಹೋದರೆ ಅದು ತನ್ನ ಮೂಲ ಉದ್ದೇಶದಿಂದಲೇ ದೂರಾಗುತ್ತದೆ. ಕನ್ನಡನಾಡಿನ ಸಂಸ್ಕೃತಿ ಇತಿಹಾಸ ಭಾಷೆ ಜಾನಪದಗಳ ಅಧ್ಯಯನ ಮತ್ತು ಸಂಶೋಧನೆಗಳಿಗಾಗಿ ಜನ್ಮತಳೆದ ಕನ್ನಡ ವಿವಿ ಎಂದು ಯುಜಿಸಿಗೆ ಬದ್ಧವಾಯಿತೋ ಅಂದೇ ತನ್ನ ಘೋಷಣಾ ಉದ್ದೇಶವನ್ನು ಕಳೆದುಕೊಂಡಿತು. ಈ ಉದಾಹರಣೆ ಕಣ್ಮುಂದೆ ಇರುವಾಗ ಜಾನಪದ ವಿವಿ ಯುಜಿಸಿ ಬಗ್ಗೆ ಆಲೋಚಿಸುವುದೂ ಅಪರಾಧವೆನಿಸುತ್ತದೆ.ಇದು ಕರ್ನಾಟಕ ಜಾನಪದ ವಿವಿ. ಅಂದರೆ ಇದು ಕರ್ನಾಟಕ ಸರಕಾರ ಕರ್ನಾಟಕದ ಜಾನಪದದ ಏಳ್ಗೆಗಾಗಿ ಸ್ಥಾಪಿಸಲಿರುವ ವಿವಿ. ಇದರ ಸಂಪೂರ್ಣ ನಿರ್ವಹಣಾ ವೆಚ್ಚವನ್ನು ಕರ್ನಾಟಕ ಸರಕಾರ ಭರಿಸಬೇಕು. ಒಂದು ರಾಜ್ಯ ಸರಕಾರಕ್ಕೆ ಇದು ಭಾರವೇ? ಜಾನಪದ ವಿವಿಗೆ ಮಾಮೂಲಿ ವಿವಿಗಳ ಮಾದರಿಯಲ್ಲಿ ಹೆಚ್ಚು ಜನ ಪ್ರಾಧ್ಯಾಪಕರನ್ನು ನೇಮಿಸಬಾರದು. ಪ್ರತಿಯೊಂದು ವಿಭಾಗಕ್ಕೆ ಒಬ್ಬರು ಸಾಕು. ಉಳಿದವರು ಹೊರಗಿನಿಂದ ಡೆಪ್ಯೂಟೇಶನ್ ಮೂಲಕ ಇಲ್ಲಿಗೆ ಬಂದು ನಿರ್ದಿಷ್ಟ ಅವಧಿಯಲ್ಲಿ ತಮ್ಮ ಇಚ್ಛೆಯ ಸಂಶೋಧನೆ ಅಧ್ಯಯನ ಆನ್ವಯಿಕತೆಗಳನ್ನು ಪೂರೈಸಿ ಮರಳಿ ಹೋಗುವಂಥ ವ್ಯವಸ್ಥೆ ಇರಬೇಕು. ಹೀಗಾದರೆ ಆಸಕ್ತ ಅಭ್ಯಾಸಿಗಳು ಮಾತ್ರ ಇತ್ತ ಸುಳಿಯುತ್ತಾರೆ. ಪ್ರತಿ ವಿಭಾಗಕ್ಕೆ ನಾಲ್ಕಾರು ಜನರಂತೆ ಸೇರಿಸುವುದು ನಿಷ್ಪ್ರಯೋಜಕ. ಸೇರಿಕೊಂಡವರು ನೌಕರಿ ಖಾಯಂ ಆದ ಕೂಡಲೇ ನಿಷ್ಕ್ರಿಯರಾಗುತ್ತಾರೆ. ಅವರನ್ನು ಜಡತನ ಆವರಿಸಿಕೊಳ್ಳುತ್ತದೆ.ಆದ್ದರಿಂದ ಪ್ರತಿ ವಿಭಾಗಕ್ಕೆ ಒಬ್ಬರು ಪ್ರಾಧ್ಯಾಪಕರಿದ್ದು ಅವರು ಸಂಯೋಜಕರಾಗಿ ಕೆಲಸ ಮಾಡಬೇಕು. ಕುಲಪತಿ ಇವರೆಲ್ಲರಿಗೆ ಹಿರಿಯ ಸಂಯೋಜಕರಾಗಿ ಕಾರ್ಯ ನಿರ್ವಹಿಸಬೇಕು, ಬೇರೆ ಬೇರೆ ಸಂಪನ್ಮೂಲಗಳಿಂದ ಹಣ ಮತ್ತು ಸಂಶೋಧನಾ ಯೋಜನೆಗಳನ್ನು ತರುವ, ಅವುಗಳನ್ನು ಸಮರ್ಥರಿಗೆ ಹಂಚುವ, ಅವರಿಂದ ಕೆಲಸ ಮಾಡಿಸಿಕೊಳ್ಳುವ ಜಾಣ್ಮೆ ಕುಲಪತಿಯಲ್ಲಿರಬೇಕು. ಇದೇ ರೀತಿಯಲ್ಲಿ ಬೋಧಕೇತರ ಸಿಬ್ಬಂದಿಯೂ ಮಿತಿಯಲ್ಲಿರಬೇಕು. ಅಂದಾಗ ಮಾತ್ರ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಅರ್ಥಪೂರ್ಣವಾಗಿ ಕಾರ್ಯ ನಿರ್ವಹಿಸಬಲ್ಲದು.

ಸೋಮವಾರ, ಫೆಬ್ರವರಿ 14, 2011

ಹಗಲು ವೇಷಗಾರರ ‘ಹನುಮಾಯಣ’

-ಸ್ವರೂಪನಂದ ಎಂ ಕೊಟ್ಟೂರು (‘ಹನುಮಾಯಣ’ ಇದು ಹಗಲು ವೇಷಗಾರರೇ ತಮ್ಮ ಕಲೆಯನ್ನು ಉಳಿಸಿಕೊಳ್ಳುವ ಶೋಧದಲ್ಲಿ ತೊಡಗಿಕೊಂಡಾಗ ಕಂಡುಕೊಂಡ ಪರ್ಯಾಯ. ಇಂದು ಭಜರಂಗದಳ, ಆರ್.ಎಸ್.ಎಸ್ ಗಳು ಹನುಮನನ್ನು ದೊಡ್ಡ ಐಕಾನ್ ಆಗಿ ಬಳಸಿಕೊಂಡು, ಹನುಮನನ್ನು ಆರಾಧಿಸುವ ದೊಡ್ಡ ಸಮುದಾಯವನ್ನು ತನ್ನೆಡೆಗೆ ಸೆಳೆಯುವ ಹುನ್ನಾರ ಮಾಡುತ್ತಿದೆ. ಆದರೆ ನಿಜಾರ್ಥದಲ್ಲಿ ಜನಪದರಲ್ಲಿ ಇರುವ ಹನುಮನೇ ಬೇರೆ. ರಾಮಾಯಣದಿಂದ ಎದ್ದು ಬಂದವನಲ್ಲ. ಅಲ್ಲಿಯದೇ ಸ್ಥಳೀಯ ಚರಿತ್ರೆಯಲ್ಲಿ ಹನುಮನ ಜೀವಂತಿಕೆ ಬೇರೆಯೇ ಇದೆ. ಅಲ್ಪ ಸಂಖ್ಯಾತ ವೈದಿಕ ಸಮುದಾಯ ಕಟ್ಟಿದ ಹನುಮನ ಚಿತ್ರವನ್ನು ಬಹುಸಂಖ್ಯಾತ ತಳ ಸಮುದಾಯಗಳ ಹನುಮನ ನಂಬಿಕೆಯ ಲೋಕದ ಮೇಲೆ ಪ್ರಹಾರ ಮಾಡುತ್ತಿವೆ. ಜನಪದರು ಕಟ್ಟಿಕೊಂಡ ಹನುಮನ ನಂಬಿಕೆಯ ಜಗತ್ತನ್ನು ಇಂದು ವಿಶೇಷವಾಗಿ ಅಧ್ಯಯನ ಮಾಡುವ ಅಗತ್ಯವಿದೆ. ಅಂತಹ ಅಧ್ಯಯನಕ್ಕೆ ತಕ್ಕ ತಯಾರಿಗಳನ್ನು ಕ್ಷೇತ್ರಕಾರ್ಯದ ತಿರುಗಾಟವನ್ನೂ ಮಾಡುತ್ತಿದ್ದೇನೆ. ಈ ಹುಡುಕಾಟದ ಸಂದರ್ಬದಲ್ಲಿ ಸಿಕ್ಕ ಹನುಮಾಯಣ ಹಗಲುವೇಷಗಾರರ ಆಟ ಗಮನಸೆಳೆಯಿತು. ಇಲ್ಲಿ ಹನುಮ ರಾಮನ ಸೇವಕನಲ್ಲ ಅವನದೇ ಆದ ಸ್ವಂತ ಶಕ್ತಿಯನ್ನು ಉಳ್ಳ ವೀರ ದೀರ. ಇಲ್ಲಿ ರಾಮ ನೆಪ ಮಾತ್ರ. ಹನುಮನ ವ್ಯಕ್ತಿತ್ವದ ಮೂಲಕ ರಾಮನನ್ನು ನೋಡುವ ವಿಶಿಷ್ಟ ಪ್ರಯತ್ನ ಇಲ್ಲಿದೆ. ಈ ತಂಡದ ರಾಮುವನ್ನು ಮಾತನಾಡಿಸಿದಾಗ “ಹನುಮನನ್ನು ನಾವು ಕಂಡದ್ದು ಬೇರೇನೆ ಸಾರ್, ಆಗಾಗಿ ಹನುಮನನ್ನೇ ನಾಯಕನನ್ನಾಗಿಸಿ ನಾವೇ ಈ ನಾಟಕ ತಯಾರಿಸಿದ್ವಿ” ಎನ್ನುತ್ತಾರೆ. ಈ ಬರಹ ಬರೆದ ಸ್ವರೂಪಾನಂದ ವೃತ್ತಿಯಲ್ಲಿ ಪೋಲಿಸ್, ಆದರೆ ಅಲ್ಲಿದ್ದು ಇಂತಹವುದಳನ್ನು ಸೂಕ್ಷ್ಮವಾಗಿ ನೋಡುವ ಒಳಗಣ್ಣಿರುವ ಉತ್ಸಾಹಿ ಹುಡುಗ. ಹಾಗಾಗಿ ಸ್ವರೂಪಾನಂದ ಪತ್ರಿಕೆಯೊಂದಕ್ಕೆ ಬರೆದ ಬರಹವನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ.-ಅರುಣ್ ಜೋಳದಕೂಡ್ಲಿಗಿ.) ಇದೇನಿದು ಮಹಾಭಾರತ, ರಾಮಾಯಣ ಕೇಳಿದ್ದೀವಿ, ಹನುಮಾಯಾಣ ಎಲ್ಲಿಂದ ಬಂತು ಅಂತಾ ದಂಗು ಬಡಿದು ಹೋದಿರಾ..ಹೌದು ಈಗ ಮಹಾಭಾರತ ಮತ್ತು ರಾಮಾಯಣದ ಕಥಾವಸ್ತುಗಳೊಂದಿಗೆ ಹನುಮಾಯಣವನ್ನು ಸೇರಿಸಿಕೊಳ್ಳಬೇಕಾಗಿದೆ. ಇದು ಹಗಲು ವೇಷಗಾರರ ಒಂದು ವಿಶಿಷ್ಠ ಪ್ರಯತ್ನದ ಫಲ. ಹತ್ತಾರು ವೇಧಿಕೆಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದಿರುವ ಜನಪದ ಕಲಾ ತಂಡ ಹಂಪಿ ಭಾಗದಲ್ಲಿದೆ. ಅದು ಕಡ್ಡಿರಾಂಪುರದ ಕೆ.ರಾಮು ನೇತೃತ್ವದ ಶ್ರೀ ಹಂಪಿ ವಿರುಪಾಕ್ಷೇಶ್ವರ ಬುಡ್ಗಜಂಗಮ ಸಾಂಸ್ಕೃತಿಕ ಹಗಲು ವೇಷ ಕಲಾವಿದರ ಸಂಘ. ಇದೇನಿದು ಹನುಮಾಯಣ ಅಂತೀರಾ? ಇದು ರಾಮಾಯಣದಿಂದ ಆಯ್ದ ಭಾಗವಾಗಿದೆ. ಹಂಪಿ ಕೇವಲ ವಿಜಯನಗರ ಸಾಮ್ರಾಜ್ಯದಿಂದ ಮಾತ್ರ ಖ್ಯಾತಿಗೆ ಬಂದಿಲ್ಲ. ಅದಕ್ಕಿಂತಲೂ ಮೊದಲು ಸಹಸ್ರಾರು ವರ್ಷಗಳ ಹಿಂದಿನ ರಾಮಾಯಣದ ಕಿಷ್ಕಿಂದಾ ಕಾಂಡದ ಅವಶೇಷಗಳನ್ನು ಹೊಂದಿರುವುದು ಇಲ್ಲಿನ ವಿಶೇಷ. ಇಲ್ಲಿಯ ವಾಲಿಕಾಷ್ಠ, ಸುಗ್ರಿವ ಗುಹೆ, ಸೀತಾ ಸೆರಗು, ರಾಮ ಲಕ್ಷ್ಮಣರ ಮಂದಿರಗಳು, ರಿಷಿಮುಖ, ವಾಲಿ, ತಾರ ಬೆಟ್ಟಗಳು ರಾಮಾಯಣದ ಚರಿತ್ರೆ ಸಾರುತ್ತವೆ. ಇವೆಲ್ಲಾವನ್ನು ಇಟ್ಟುಕೊಂಡು ಈ ಭಾಗಕ್ಕೆ ಸಂಭಂದಿಸಿದ ಸನ್ನಿವೇಶಗಳನ್ನು ರಾಮಾಯಣದಿಂದ ಎಕ್ಕಿ ತೆಗೆದು ಎಣೆದ ಭಾಗವೇ ಈ ಹನುಮಯಾಣ. ಇದರಲ್ಲಿ ಹನುಮನೇ ಹಿರೋ. ರಾಮ-ಲಕ್ಷ್ಮಣರು ಸೀತೆಯನ್ನು ಹುಡುಕುತ್ತಾ ಕಿಷ್ಕಿಂದೆಗೆ ಬಂದಿದ್ದು, ರಾಮ ಮತ್ತು ಹನುಮನ ಭೇಟಿ, ವಾಲಿ-ಸುಗ್ರೀವರ ಕಾಳಗ, ಈ ಕಾಳಗದಲ್ಲಿ ರಾಮನ ಪಾತ್ರ, ಇತ್ಯಾದಿ-ಇತ್ಯಾದಿ ಪ್ರಸಂಗಗಳಿಂದ ಹಿಡಿದು ಹನುಮಂತ ಸೇತುವೆ ನಿರ್ಮಿಸುವರೆಗೂ ಪ್ರದರ್ಶನ ಸಾಗುತ್ತದೆ. ಈ ತಂಡ ಹನುಮಾಯಾಣದ ಪ್ರತಿ ಸನ್ನಿವೇಶಗಳನ್ನು ಮನೋಜ್ಞ ಹಾಗೂ ರೋಚಕವಾಗಿ ಅಭಿನಯಿಸಿ ನೋಡುಗರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಇಂತಹ ಹೊಸ ಪ್ರಯೋಗ ನಡೆಸಿ ಜಾನಪದ ಕಲೆಯೊಂದಕ್ಕೆ ಮರುಜೀವ ತುಂಬಿದ ತಂಡದ ಯಶೋಗಾಥೆ ಇಲ್ಲಿದೆ. ಇಂದಿನ ದಿನಗಳಲ್ಲಿ ಜಾನಪದ ಲೋಕದಿಂದ ಹಗಲು ವೇಷಗಾರರ ಕೊಂಡಿ ಕಳಚುತ್ತಾ ಸಾಗಿದೆ. ತಲ-ತಲಾಂತರಿಂದ ಹಗಲು ವೇಷವನ್ನು ಮಾಡುತ್ತ ಬಂದವರು ಇಂದು ಇದಕ್ಕೆ ಇತಿಶ್ರೀ ಹಾಡಿ ವ್ಯಾಪಾರ ಸೇರಿದಂತೆ ಇತರೆ ವೃತ್ತಿಗಳನ್ನು ಆಶ್ರಯಿಸಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆ.ರಾಮು ಹಾಗೆ ಮಾಡಲಿಲ್ಲ. ಹಗಲು ವೇಷಗಾರರಲ್ಲಿಯೇ ಪ್ರಖ್ಯಾತರಾದ ವೆಂಕಟಾಪುರ ಕ್ಯಾಂಪ್ನ ರಾಮಣ್ಣನ ಗರಡಿಯಲ್ಲಿ ಪಳಗಿದರು. ಇದರೊಂದಿಗೆ ಇವರ ಸ್ನೇಹಿತರು ಕೈ ಜೋಡಿಸಿದರು. ಹಗಲು ವೇಷಗಾರರ ಸಂಪ್ರದಾಯವೆಂಬಂತೆ ಪೊಲೀಸ್, ಸಾಧುಗಳು, ಮೋಹಿನಿ ಬಸ್ಮಾಸುರ ಕತೆ, ಭೀಮಾಂಜನೇಯ ಯುದ್ದ, ರಾಮಾಯಣದಲ್ಲಿನ ಸೂರ್ಪನಖಿ ಗರ್ವಭಂಗ, ಲಂಕಾದಹನ [ಗಜಲಂಕಿನಿ], ವಾಲಿ ಸುಗ್ರೀವನ ಕಾಳಗಗಳನ್ನು ಪ್ರಮುಖವಾಗಿ ಪ್ರದರ್ಶಿಸುತ್ತಾ ಬಂದರು. ಹಂಪಿ ತುಂಗಭದ್ರೆಯ ನದಿ ತೀರ ಇವರ ಕಲಿಕೆಯ ಕೇಂದ್ರವಾಯಿತು. ವಿದೇಶಿಯರು ಸೇರಿದಂತೆ ಹಂಪಿಯಲ್ಲಿ ಪ್ರವಾಸ ಕೈಗೊಂಡವರ ಕರತಾಳ ಇವರಿಗೆ ಸ್ಪೂರ್ತಿಯಾಯಿತು. ಅದರಲ್ಲೂ ಹಾಲೆಂಡ್ ಮೂಲದ ವಿಲಿಯಂ ಇವರ ಕಲೆಗೆ ಮಾರುಹೋಗಿ ಇವರ ಬೆನ್ನಲುಬಾಗಿ ನಿಂತಿದ್ದು ಇವರ ಕಲೆಗೆ ಭವಿಷ್ಯವಿದೆ ಎಂದು ಆಗಲೇ ಮನದಟ್ಟು ಮಾಡಿಕೊಟ್ಟಿತು. ಆಗೋಮ್ಮೆ-ಹೀಗೊಮ್ಮೆ ಅಕ್ಕ-ಪಕ್ಕದ ಗ್ರಾಮಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದರು. ಆಗಾಗ್ಗೆ ರಾಮುವಿನ ಮನಸ್ಸು ಇದರಲ್ಲಿ ಅಗಾಧವಾದ ಸಾಧನೆ ಮಾಡಬೇಕೆಂದು ತುಡಿಯುತ್ತಿತ್ತು. ಕಿಷ್ಕಿಂದೆ ಅಧಾರವಾಗಿಟ್ಟುಕೊಂಡು ಒಂದು ಪ್ರದರ್ಶನ ಮಾಡಬೇಕೆಂದು ಇವರ ಸ್ನೇಹಿತರಲ್ಲಿ ಚರ್ಚೆಗಳು ಸಾಗಿದವು. ಈ ನಡುವೆ ಇವರಿಗೆ ರಾಮಾಯಣ ಪ್ರದರ್ಶನ ನೀಡವಂತೆ ಆನೆಗುಂದಿಯ ಕಿಷ್ಕಿಂದ ಟ್ರಸ್ಟ್ನಿಂದ ಬುಲಾವ್ ಬಂತು. ಆನೆಗೊಂದಿಯಲ್ಲಿ ನಡೆದ ರಂಗ ಶಿಬಿರದ ಜವಾಬ್ದಾರಿ ಹೊತ್ತವರು ಹೊಸಪೇಟೆಯ ಭಾವೈಕ್ಯತಾ ವೇದಿಕೆ. ಪಿ. ಅಬ್ದುಲ್, ಪಿ.ಸಹನಾ, ಪಿ. ಸಹರಾ. ೧೫ ದಿನ ಅವರು ಅಲ್ಲಿಯೇ ಇದ್ದು ತರಬೇತಿ ಶಿಬಿರ ನಡೆಸಿಕೊಟ್ಟರು. ಹೊಸಪೇಟೆಯ ಕ್ರಿಯಾಶೀಲ ಬರಹಗಾರರಾದ ಪರುಶುರಾಮ ಕಲಾಲ ಅವರು ಒಂದು ದಿನ ಅಲ್ಲಿ ಭಾಗಿಯಾಗಿ ಇವರಿಗಾಗಿಯೇ ’ಹನುಮಾಯಣ’ ಸ್ಪ್ರಿಪ್ಟ್ ರಚಿಸಿದ್ದಾರೆ. ಅದನ್ನೇ ಅಲ್ಲಿ ರಂಗಕ್ಕೆ ಅಳವಡಿಸಿದರು. ಅಲ್ಲಿ ಅದ್ಬುತ ಪ್ರದರ್ಶನ ನೀಡಿದ್ದರಿಂದ ಶ್ಯಾಮ್ ಪವಾರ್ಗೆ [ಕೇಂದ್ರ ಸಚಿವ ಶರದ್ ಪವಾರ್ರವರ ಸಹೋದರಿ] ತುಂಬಾ ಆತ್ಮೀಯರಾಗಿಬಿಟ್ಟರು. ಇವರಲ್ಲಿ ತಮ್ಮ ಮನದ ಇಂಗಿತವನ್ನು ಅರುಹಿದರು. ಶ್ಯಾಮ್ ಪವಾರ್ ಇವರ ಮನದ ಇಂಗಿತವನ್ನು ಅರಿತು 12 ಜನರ ತಂಡಕ್ಕೆ ತಮ್ಮ ಗರಡಿಯಲ್ಲಿ ಸತತ 25 ದಿನಗಳ ತರಬೇತಿ ನೀಡಿದರು. ಒಳ್ಳೆಯ ತಯಾರಿ ನಡೆಸಿದ ಫಲವಾಗಿ ನಿರೀಕ್ಷೆ ಮೀರಿ ಪ್ರತಿಭೆಯನ್ನು ಹೋರಹಾಕಿದ ಈ ತಂಡ ಇಂದು ದೊಡ್ಡ-ದೊಡ್ಡ ವೇದಿಕೆಗಳಲ್ಲಿ ಪ್ರೇಕ್ಷಕರ ಕರತಾಳಗಳೊಂದಿಗೆ ಸಾಧನೆಯ ಬೆನ್ನೇರಿ ಹೊರಟಿದೆ. ಹನುಮಾಯಣವನ್ನು ಇಂದು ಕೇವಲ ಮುಕ್ಕಾಲು ಗಂಟೆಯಲ್ಲಿ ಪರಿಣಾಮಕಾರಿಯಾಗಿ ಅಭಿನಯಿಸುವಷ್ಠು ನಿಪುಣರಾಗಿದ್ದಾರೆ. ಅಂದಿನಿಂದ ಆರಂಭವಾದ ಇವರ ಕಲಾ ಸೇವೆಯ ಪಯಣ ಬಿಡುವಿಲ್ಲದೆ ಸಾಗಿದೆ. ಈ ತಂಡವು ಅಭಿನಯಿಸಿದ ಒಂದು ಪುಟ್ಟ ಮಾಹಿತಿ ಇಲ್ಲಿದೆ.2006 ರಲ್ಲಿ ಬೆಂಗಳೂರಿನ ಲಾಲಾಬಾಗಿನಲ್ಲಿ ನಡೆದ ಜನಪದ ಜಾತ್ರೆ.,2008 ರಲ್ಲಿ ಹಂಪಿ ಉತ್ಸವದ ಅಲೆಮಾರಿ ವೇದಿಕೆ.,2009 ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿ ನಡೆದ ಜನಪದ ಜಾತ್ರೆ., 2009 ರ ಜನವರಿಯಲ್ಲಿ ಬೆಂಗಳೂರಿನಲ್ಲಿ ಹಂಪಿ ಕುರಿತು ನಡೆದ ಅಂತರಾಷ್ಠ್ರೀಯ ಸಮ್ಮೇಳನ.,2009 ರ ಫೆಬ್ರವರಿಯಲ್ಲಿ ರಾಮನಗರದ ಜಾನಪದ ಲೋಕದಲ್ಲಿ ಜರುಗಿದ ಜಾನಪದ ಲೋಕೋತ್ಸವ.,2009 ರ ಆಗಸ್ಟ್ 20 ರಂದು ಡಿ.ದೇವರಾಜು ಅರಸುರವರ ಹುಟ್ಟು ಹಬ್ಬದ ಅಂಗವಾಗಿ ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ.,2009 ರಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆಸಿದ ಸಮಾರಂಭ.,2009 ರ ನವಂಬರ್ ತಿಂಗಳಲ್ಲಿ ಹಂಪಿಯಲ್ಲಿ ಪುರಾತತ್ವ ಇಲಾಖೆ ನಡೆಸಿದ ಐತಿಹಾಸಿಕ ಪರಂಪರೆ ರಕ್ಷಿಸಿ ಕಾರ್ಯಕ್ರಮ. 2009 ಡಿಸೆಂಬರ್ ತಿಂಗಳಲ್ಲಿ ಡಾ.ರಾಜಕುಮಾರ್ ಅಂತರಾಷ್ಠ್ರೀಯ ಪ್ರತಿಷ್ಠಾನ ಇವರು ಬೆಂಗಳೂರಿನಲ್ಲಿ ನಡೆಸಿದ ಡಾ.ರಾಜಕುಮಾರ್ ರಾಜೋತ್ಸವ ಪ್ರಶಸ್ತಿ ಸಮಾರಂಭ. ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ಹನುಮಾಯಣವನ್ನು ಪ್ರದರ್ಶಿಸಿ ಜನರಿಂದ ಮೆಚ್ಚುಗೆಯನ್ನು ಪಡೆದಿದ್ದಾರೆ. ಅಲ್ಲದೆ National Institute of Advance studies [NIAS] ಇವರ ಹನುಮಾಯಣ ಪ್ರದರ್ಶನಕ್ಕೆ ಪ್ರಾಶಸ್ತ್ಯ ನೀಡಿ ಕಳೆದ ಎರಡು ವರ್ಷಗಳಿಂದ ಅವಕಾಶಗಳನ್ನು ನೀಡುತ್ತಾ ಬಂದಿದೆ. ಅಲ್ಲದೆ ಹನುಮಾಯಣವನ್ನು ಡಾಕುಮೆಂಟರಿ ಮಾಡಲು ಹೊರಟಿದೆ. ಜೊತೆಗೆ ಇಂದಿರಾ ರಾಷ್ಠ್ರೀಯ ಕಲಾ ಮಂದಿರ ಬೆಂಗಳೂರು ಇವರ ``ಸೂರ್ಪನಖಿ ಗರ್ವಭಂಗ'' ಮತ್ತು ``ಭೀಮಾಂಜನಯ ಯುದ್ದ'' ದ ಕಥಾವಸ್ತುಗಳನ್ನು ಡಾಕುಮೆಂಟರಿ ಮಾಡಿದ್ದಾರೆ. ವೈಯುಕ್ತಿಕವಾಗಿ ಕೆ.ರಾಮು ಹಗಲು ವೇಷಗಾರರ ಜಾನಪದ ಕಲೆಯನ್ನು ಉಳಿಸುವತ್ತ ಹೆಚ್ಚು ಶ್ರಮವಹಿಸುತ್ತಿದ್ದಾರೆ. ರಾಮು ಹನುಮನ ವೇಷದಲ್ಲಿ ಅಖಾಡಕ್ಕೆ ಇಳಿದರೆ ಈತನ ಅದ್ಬುತ ನಟನೆಗೆ ಪ್ರೇಕ್ಷಕರು ಮಂತ್ರಮುಗ್ದರಾಗುತ್ತಾರೆ. ಇವರ ಪ್ರಯತ್ನದ ಫಲವಾಗಿ ಒಂದು ಕಾಲದಲ್ಲಿ ತಮ್ಮ ಕಲೆಯ ಬಗ್ಗೆ ಭ್ರಮನಿರಸನ ಹೊಂದಿದವರು ಇಂದು ಕಲೆಯ ಉಳಿವು ಹಾಗೂ ಬೆಳವಣಿಗೆಗಾಗಿ ತಪಸ್ಸು ಮಾಡುತ್ತಿದ್ದಾರೆ. ಇವರ ಕಲಾ ತಂಡಗಳಿಗೆ ಪದವೀದದರು ಸೇರಿಕೊಳ್ಳುತ್ತಿರುವುದು ಇದರ ಜೀವಂತಿಕೆಗೆ ಸಾಕ್ಷಿಯಾಗಿದೆ. ಇವರ ಪ್ರಯತ್ನದ ಫಲವಾಗಿ ಹೊಸಪೇಟೆ, ದರೋಜಿ, ಸಿರುಗುಪ್ಪ ತಾಲ್ಲೂಕಿನ ಬೆಲಕುಂದಿ, ಹಳೆಕೋಟೆ, ಬಳ್ಳಾರಿ ಜಿಲ್ಲೆಯ ಹೊಸಹಳ್ಳಿಗಳಲ್ಲಿ ಸಂಘಗಳು ನೊಂದಾಣಿಯಾಗಿ ಕ್ರೀಯಾಶೀಲವಾಗಿವೆ. ತಮ್ಮ ಅಸಂಖ್ಯಾತ ಪ್ರದರ್ಶನಗಳ ಮೂಲಕ ಜನಪದ ಕಲೆಯ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ರಾಮು ತಂಡ ರಾಜ್ಯದಲ್ಲಿ ಮನೆ ಮಾತಾಗಿದೆ. ಆದರೆ ತನ್ನ ತವರು ನೆಲದಲ್ಲಿಯೇ ನಿರ್ಲಕ್ಷಕ್ಕೆ ಒಳಗಾಗಿರುವುದು ವಿಪಾರ್ಯಸ. ಇಷ್ಠು ದಿನ ನಡೆದ ಹಂಪಿ ಉತ್ಸವಗಳಲ್ಲಿ ಇವರಿಗೆ ಅವಕಾಶ ಸಿಕ್ಕಿದ್ದು 2008 ರಲ್ಲಿ ಮಾತ್ರ. ಅದು ಕೇಲವ ಹತ್ತು ನಿಮಿಷಗಳ ಕಾಲವಕಾಶ. ಮೊನ್ನೆ ಅಂದರೆ ೨೦೧೧ ಜನವರಿ 27 ರಿಂದ 29 ರವರೆಗೆ ನಡೆದ ಹಂಪಿ ಉತ್ಸವದಲ್ಲಿ ಇವರ ಪಾಲಿಗೆ ಬಂದಿದ್ದು ಶೋಭಯಾತ್ರೆಯಲ್ಲಿ ಪಾಲ್ಗೊಳ್ಳುವ ಅವಕಾಶ. ಅಂದು ಅಂತಿಮ ಕ್ಷಣದಲ್ಲಿ. ಅದನ್ನು ಬಿಟ್ಟರೆ ಉಳಿದಂತೆ ಸರಕಾರ ಇವರ ಕಲೆಗೆ ಹೆಚ್ಚು ಪ್ರಾಶಸ್ತ್ಯ ನೀಡಿಲ್ಲ. ತಮ್ಮ ಸಾಧನ ಕ್ಷೇತ್ರದಲ್ಲಿ ಪ್ರದರ್ಶನ ನೀಡಲಾಗುತ್ತಿಲ್ಲ ಎಂಬ ಅಸಂತೃಪ್ತಿ ರಾಮು ತಂಡದ್ದು. ಅದು ಹಂಪಿಯ ನೆಲದಲ್ಲಿ ಕಿಷ್ಕಿಂದ ಆಧಾರಿತ ಕಥಾವಸ್ತುವನ್ನು ಜನತೆಯ ಮನಮುಟ್ಟುವಂತೆ ಪ್ರದರ್ಶಿಸುವ ಅವಕಾಶ ಸಿಗದಿರುವ ಕೊರಗು ಅವರನ್ನು ಬಿಟ್ಟುಬಿಡದೆ ಕಾಡುತ್ತಿದೆ. ಹಂಪಿಯ ಸುತ್ತಾ-ಮುತ್ತಾ ಸುಮಾರು 12 ಜನಪದ ಕಲೆಗಳು ಇನ್ನೂ ಜೀವಂತವಾಗಿವೆ. ಈ ಕಲೆಗಳನ್ನು ಶಾಶ್ವತವಾಗಿ ಹಂಪಿಯಲ್ಲಿ ಪ್ರದರ್ಶನ ಏರ್ಪಡಿಸುವ ವ್ಯವಸ್ಥೆಯಾಗಬೇಕು ಎಂಬುವುದು ರಾಮು ಮತ್ತು ಸಂಘದ ಕೋರಿಕೆ ಹಾಗೂ ಕನವರಿಕೆ. ಹಗಲು ವೇಷಗಾರರನ್ನು ಸಂಘಟಿಸಿ ಅವಾಸನದ ಅಂಚಿನಲ್ಲಿದ್ದ ಜಾನಪದ ಕಲೆಗೆ ಜೀವ ತುಂಬಿದ ರಾಮು ಸಾಧನೆ ಒಂದು ಮಾದರಿಯೇ ಸರಿ. ಇವರ ಹಾಗೂ ಇವರ ಕಲಾ ತಂಡಕ್ಕೆ ನೀವು ಅಭಿನಂದನೆ ಸಲ್ಲಿಸಬೇಕೆಂತಿದ್ದರೆ, ಕೆ ರಾಮುರವರ ನಂ 9448970618 ಕ್ಕೆ ಸಂಪರ್ಕಿಸಿ.

ಶುಕ್ರವಾರ, ಫೆಬ್ರವರಿ 4, 2011

ಇವರದು 56 ವರ್ಷಗಳಿಗೊಮ್ಮೆ ಗಂಗೆಪೂಜೆ : ಕಾಲ್ನಡಿಗೆಯಲ್ಲಿ ಹಂಪೆಗೆ ಯಾತ್ರೆ

-ಸಿದ್ದರಾಮ ಹಿರೇಮಠ, ಕೂಡ್ಲಿಗಿ ಬುಡಕಟ್ಟು ಜನಾಂಗಗಳ್ಲಲಿ ಇನ್ನೂ ಕೆಲವು ಸಾಂಪ್ರದಾಯಿಕ ಆಚರಣೆಗಳು ಜೀವಂತವಾಗಿವೆ ಎಂಬುದಕ್ಕೆ ತಾಲೂಕಿನ ಪೂಜಾರಹಳ್ಳಿ ಗ್ರಾಮದ ಜನಾಂಗವೇ ಸಾಕ್ಷಿಯಾಗಿದೆ. ಇಲ್ಲಿನ ನಾಯಕ ಜನಾಂಗದವರು 56 ವರ್ಷಗಳಿಗೊಮ್ಮೆ ಗಂಗೆಪೂಜೆ ಮಾಡುತ್ತಾರೆ. ಮತ್ತೂ ವಿಶೇಷವೆಂದರೆ, ಗಂಗೆಪೂಜೆ ಮಾಡಲು ಇವರು ತಮ್ಮ ದೇವರನ್ನು ಹೊತ್ತುಕೊಂಡು 60 ಕಿ.ಮೀ ದೂರದ ಹಂಪೆಯವರೆಗೂ ಕಾಲ್ನಡಿಗೆಯಲ್ಲಿ ಹೋಗಿಬರುತ್ತಾರೆ. ಈ ಉತ್ಸವದಲ್ಲಿ ಸಾವಿರಾರು ಜನ ಪಾಲ್ಗೊಂಡಿರುತ್ತಾರೆ. ಗುರುವಾರ ಈ ಯಾತ್ರಾಥರ್ಿಗಳು ಗಂಗೆಪೂಜೆ ಪೂರ್ಣಗೊಳಿಸಿ ಶಿವಪುರ, ಕೂಡ್ಲಿಗಿ ಮಾರ್ಗವಾಗಿ ಪೂಜಾರಹಳ್ಳಿಗೆ ತೆರಳಿದರು. ಈ ರೀತಿಯ ವಿಶಿಷ್ಟವಾದ ಆಚರಣೆ ತಾಲೂಕಿನ ಪೂಜಾರಹಳ್ಳಿಯಲ್ಲಿ ಭಾನುವಾರ ಆರಂಭಗೊಂಡಿತು. ಅಲ್ಲಿನ ಓಬಳೇಶ್ವರ ಸ್ವಾಮಿ ಹಾಗೂ ಕೆ.ಬಿ.ಹಟ್ಟಿಯ ಬಸವೇಶ್ವರ ಸ್ವಾಮಿಯನ್ನು ಹೊತ್ತು 56 ವರ್ಷಗಳ ನಂತರ ಇಲ್ಲಿನ ಸಾವಿರಾರು ಜನ ಪ್ರವಾಹದೋಪಾದಿಯಲ್ಲಿ ಹಂಪೆಗೆ ಕಾಲ್ನಡಿಗೆಯಲ್ಲಿ ಹೊರಟೇಬಿಟ್ಟರು.ಇವರೊಂದಿಗೆ ದೇವರಿಗಾಗಿ ಛತ್ರ, ಚಾಮರ, ಡೊಳ್ಳು, ವಿವಿಧ ವಾದ್ಯಗಳ ವೈಭವ. ಅಲ್ಲದೆ ಸುಮಾರು 40 ದೇವರ ಎತ್ತುಗಳೂ ಯಾತ್ರೆಯಲ್ಲಿ ಪಾಲ್ಗೊಂಡಿದ್ದವು.ಬುಧವಾರ ಹಂಪೆಯ ವಿರುಪಾಕ್ಷನ ಸನ್ನಿಧಿಯಲ್ಲಿ ತುಂಗಭದ್ರಾ ನದಿಯ ಚಕ್ರತೀರ್ಥದಲ್ಲಿ ಗಂಗೆಪೂಜೆಯನ್ನು ಸಾಂಪ್ರದಾಯಿಕವಾಗಿ ನೆರವೇರಿಸಿ, ಗುರುವಾರ ಮರಳಿ ವಾದ್ಯ ವೈಭವಗಳೊಂದಿಗೆ ತಮ್ಮ ಗ್ರಾಮಕ್ಕೆ ಹೊರಡಿದ್ದಾರೆ. ಇವರು ಪೂಜಾರಹಳ್ಳಿಯನ್ನು ತಲುಪುವುದು ಫೆಬ್ರವರಿ 5ರಂದು. ನಂತರ ಫೆಬ್ರವರಿ 12,13ಕ್ಕೆ ಗ್ರಾಮದಲ್ಲಿ ಗುಗ್ಗರಿ ಹಬ್ಬ, 14, 15ಕ್ಕೆ ಕೆ.ಬಿ.ಹಟ್ಟಿಯ ಬಸವೇಶ್ವರ ಗುಗ್ಗರಿ ಹಬ್ಬವನ್ನು ಆಚರಿಸಲಾಗುವುದು ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಬಸವರಾಜ್ ಗೊಂಚಿಗಾರ ತಿಳಿಸಿದರು. ಗ್ರಾಮದ ಜನಾಂಗದವರ ಮನೆತನಗಳ ದೈವ ಹಂಪೆಯ ವಿರುಪಾಕ್ಷನಾಗಿದ್ದು, ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಈ ರೀತಿ ಗ್ರಾಮಸ್ಥರು ಭೇಟಿ ನೀಡಿ ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿತ್ತು. ಅದೇ ಇಲ್ಲಿನವರೆಗೆ ಮುಂದುವರೆದುಕೊಂಡು ಬಂದಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕ ಡಾ.ವಿರುಪಾಕ್ಷಿ ಪೂಜಾರಹಳ್ಳಿ ಹೇಳುತ್ತಾರೆ. ಈ ರೀತಿ ಉತ್ಸವ ಆಚರಣೆಯಿಂದ ಗ್ರಾಮಕ್ಕೆ ಒಳಿತಾಗುವುದೆಂಬ ನಂಬಿಕೆಯೂ ಇದೆ ಎಂದು ಅವರು ತಿಳಿಸಿದರು. `ನಮ್ಮ ಅಜ್ಜ 1950ರೊಳಗ ಬಂಡಿ ಹೂಡ್ಕೊಂಡು ಗ್ರಾಮಸ್ಥರೆಲ್ಲ ಸೇರಿ ಹಂಪಿಗೆ ಗಂಗಿ ಪೂಜೆಗೆ ಹೋಗಿದ್ರಂತ ನಾನು ಸಣ್ಣವನಿದ್ದಾಗ ಕೇಳ್ತಿದ್ದೆ, ಈಗ ನಮ್ ಪುಣ್ಯಾ ನಾವು ಹೋಗಿ ಬಂದೀವಿ' ಎಂದು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಗೊಂಚಿಗಾರ ಬೋರಯ್ಯ ತಿಳಿಸಿದರು. ಇವರು ಹಂಪೆಗೆ ಹೋಗುವ ಮಾರ್ಗದಲ್ಲಿ ಸಂಬಂಧಿಕರಿರುವ ಊರುಗಳಲ್ಲಿ ಇವರಿಗೆ ಊಟ, ವಸತಿ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಉತ್ಸವದಲ್ಲಿ ಪೂಜಾರಿ ಓಬಣ್ಣ, ಕೆ.ಬಿ.ಹಟ್ಟಿ ಪೂಜಾರಿ ಬಸಯ್ಯ, ಮುಷ್ಟಲಗುಮ್ಮಿ ತಿಪ್ಪೇಸ್ವಾಮಿ, ಗೌಡರ ಓಬಯ್ಯ, ನಡುವಲಮನಿ ಓಬಯ್ಯ ಮುಂತಾದ ಗ್ರಾಮದ ಪ್ರಮುಖರು ಪಾಲ್ಗೊಂಡಿದ್ದರು.