ಭಾನುವಾರ, ಮಾರ್ಚ್ 27, 2011

ದಕ್ಷಿಣ ಭಾರತೀಯ ಜಾನಪದ ಕೋಶ-ಬಿಡುಗಡೆ ಸಮಾರಂಭ

ಪ್ರಸಾರಾಂಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ
ವಿದ್ಯಾರಣ್ಯ-೫೮೩೨೭೬

ದಕ್ಷಿಣ ಭಾರತೀಯ ಜಾನಪದ ಕೋಶ
ಬಿಡುಗಡೆ ಸಮಾರಂಭ


**
೨೯ ಮಾರ್ಚ ೨೦೧೧ ಮಂಗಳವಾರ
ಸಮಯ: ಸಂಜೆ ೫ ಗಂಟೆ
ಸ್ಥಳ: ಕೃಷ್ಣರಾಜ ಪರಿಷನ್ಮಂದಿರ
ಕನ್ನಡ ಸಾಹಿತ್ಯ ಪರಿಷತ್ತು
ಚಾಮರಾಜಪೇಟೆ, ಬೆಂಗಳೂರು.


**
ತಮಗೆ ಸ್ವಾಗತ

ಡಾ.ಮಂಜುನಾಥ ಬೇವಿನಕಟ್ಟಿ
ಕುಲಸಚಿವರು, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಡಾ. ಎ. ಸುಬ್ಬಣ್ಣ ರೈ
ನಿರ್ದೇಶಕರು, ಪ್ರಸಾರಾಂಗ



*
ಸ್ವಾಗತ
ಡಾ. ಸ.ಚಿ.ರಮೇಶ್
ಸಂಪಾದಕರು, ದಕ್ಷಿಣ ಭಾರತೀಯ ಜಾನಪದ ಕೋಶ
*
ಸಂಪುಟಗಳ ಬಿಡುಗಡೆ
ಡಾ.ಬಿ.ಎ. ವಿವೇಕ ರೈ
ಸಂದರ್ಶಕ ಪ್ರಾದ್ಯಾಪಕರು, ವೂಜ್ ಬರ್ಗ ವಿಶ್ವವಿದ್ಯಾಲಯ, ಜರ್ಮನಿ.
*
ಶ್ರೀ ಮನು ಬಳಿಗಾರ ಕ.ಆ.ಸೇ
ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.
*
ಸಂಪುಟಗಳ ಕುರಿತು:
ಡಾ. ಹಿ.ಚಿ. ಬೋರಲಿಂಗಯ್ಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ತರು, ಕುವೆಂಪು ಅಧ್ಯಯನ ಕೇಂದ್ರ, ಕುಪ್ಪಳ್ಳಿ
*
ಡಾ. ಆರ‍್ವಿಯಸ್ ಸುಂದರಂ
ಕಾರ್ಯನಿರ್ವಾಹಕ ಸಂಪಾದಕರು, ದಕ್ಷಿಣ ಭಾರತೀಯ ಜಾನಪದ ಕೋಶ
*
ಮುಖ್ಯ ಅಥಿತಿಗಳು
ಡಾ. ಕಡಪ ರಮಣಯ್ಯ
ಕುಲಪತಿಗಳು, ದ್ರಾವಿಡ ವಿಶ್ವವಿದ್ಯಾಲಯ, ಕುಪ್ಪಂ

*
ಅತ್ಮೀಯ ಅಥಿತಿಗಳು
ಡಾ. ರಾಘವನ್ ಪಯ್ಯನಾಡು
ವಿಶ್ರಾಂತ ಪ್ರಾದ್ಯಾಪಕರು, ಕೋಝಿಕೋಡ್ ವಿಶ್ವವಿದ್ಯಾಲಯ, ಕೇರಳ.
*
ಡಾ. ಎ.ಧನಂಜಯನ್
ಪ್ರಾದ್ಯಾಪಕರು, ಸೇಂಟ್ ಕ್ವೇವಿಯರ್ಸ ಕಾಲೇಜು, ಪಾಳಯಂಕೋಟ್ಟೈ, ತಮಿಳುನಾಡು.

*
ಡಾ.ಡಿ.ಪಾಂಡುರಂಗ ಬಾಬು
ಪ್ರಾದ್ಯಾಪಕರು, ಕನ್ನಡ ಭಾಷಾದ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಅಧ್ಯಕ್ಷತೆ
ಡಾ.ಎ.ಮುರಿಗೆಪ್ಪ
ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ

ವಿಶೇಷ ಸೂಚನೆ: ಬಿಡುಗಡೆಯಾಗುವ ಸಂಪುಟಗಳನ್ನು ಸಮಾರಂಭದ ಸಂದರ್ಭದಲ್ಲಿ ೫೦% ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಶನಿವಾರ, ಮಾರ್ಚ್ 26, 2011

ಜಾನಪದ: ವರ್ತಮಾನದ ಮುಖಾಮುಖಿ-ವಿಚಾರ ಸಂಕಿರಣ

ಕರ್ನಾಟಕ ಜಾನಪದ ಅಕಾಡೆಮಿ ಮತ್ತು ಕನ್ನಡ ಅಧ್ಯಯನ ವಿಭಾಗ, ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ ಇವರು ಸಂಯುಕ್ತವಾಗಿ ಆಯೋಜಿಸಿದ ರಾಜ್ಯಮಟ್ಟದ ವಿಚಾರ ಸಂಕಿರಣ

‘ಜಾನಪದ: ವರ್ತಮಾನದ ಮುಖಾಮುಖಿ’


ದಿನಾಂಕ: ೨೯.೦೩.೨೦೧೧, ಸ್ಥಳ: ಕಾಲೇಜು ಸಭಾಂಗಣ, ದಾವಣಗೆರೆ

ಏರುಹೊತ್ತು: ೧೦.೩೦

ಉದ್ಘಾಟನೆ: ಶ್ರೀ ಗೊ.ರು.ಚನ್ನಬಸಪ್ಪ
ಅಧ್ಯಕ್ಷರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಅತಿಥಿಗಳು: ಡಾ.ಅಂಬಳಿಕೆ ಹಿರಿಯಣ್ಣ
ವಿಶೇಷಾಧಿಕಾರಿಗಳು, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಬೆಂಗಳೂರು

ಉಪಸ್ಥಿತಿ: ಡಾ. ಮೈಲಳ್ಳಿ ರೇವಣ್ಣ
ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಪ್ರೊ. ಆರ್. ತಿಪ್ಪಾರೆಡ್ಡಿ
ಎಕ್ಯೂಎಸಿ ಸಂಚಾಲಕರು, ಸ.ಪ್ರ.ದ.ಕಾಲೇಜು ದಾವಣಗೆರೆ.

ಅಧ್ಯಕ್ಷತೆ: ಪ್ರೊ.ಡಿ. ಬಸವರಾಜ್
ಪ್ರಾಂಶುಪಾಲರು, ಸ.ಪ್ರ.ದ.ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ, ದಾವಣಗೆರೆ.

ಗೋಷ್ಠಿ: ಒಂದು


ಮಾತು: ಡಾ.ಕುರುವ ಬಸವರಾಜ
ಜಾನಪದಲೋಕ, ರಾಮನಗರ
ವಿಷಯ: ‘ಜನಪದ ಸಮಾಜ: ಸಮಕಾಲೀನ ತಲ್ಲಣಗಳು’

ಮಾತು: ಡಾ. ಅರುಣ್ ಜೋಳದಕೂಡ್ಲಿಗಿ
ಯೋಜನಾ ಸಹಾಯಕರು, ಹಂಪಿ ವಿವಿ.
ವಿಷಯ: ‘ಜನಪದ ಸಾಹಿತ್ಯ: ವರ್ತಮಾನದ ತಲ್ಲಣಗಳು’

ಅಧ್ಯಕ್ಷತೆ: ಡಾ.ದುರ್ಗಾದಾಸ್
ನಿರ್ದೇಶಕರು, ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿವಿ ಧಾರವಾಡ.

ಗೋಷ್ಠಿ: ಎರಡು


ಮಾತು: ಡಾ. ಎ.ಎಸ್. ಪ್ರಭಾಕರ್
ಅಧ್ಯಾಪಕರು, ಹಂಪಿ ವಿವಿ.
ವಿಷಯ: ‘ಜನಪದ ಸಂಸ್ಕೃತಿ: ಪ್ರತಿರೋಧ- ಅನುಸಂಧಾನ’


ಮಾತು: ಸೇತು ಮಾಧವ
ಆಧಿವಾಸಿ ಚಿಂತಕ, ಬೆಂಗಳೂರು
ವಿಷಯ:ಜನಪದ ಕಲೆಗಳು: ಆಧುನಿಕ ರೂಪಗಳು


ಅಧ್ಯಕ್ಷತೆ: ಡಾ.ಸಣ್ಣರಾಮ
ನಿರ್ದೇಶಕರು, ಕನ್ನಡ ಭಾರತಿ, ಕುವೆಂಪು ವಿವಿ, ಶಂಕರಘಟ್ಟ.

ಎಲ್ಲರಿಗೂ ಪ್ರೀತಿಯ ಸ್ವಾಗತ

ಡಾ. ಮೈಲಳ್ಳಿ ರೇವಣ್ಣ
ಸದಸ್ಯರು, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು

ಮುಖ್ಯಸ್ಥರು, ಪ್ರಾಧ್ಯಾಪಕರು
ಕನ್ನಡ ಅಧ್ಯಯನ ವಿಭಾಗ.

ಶ್ರೀ ಡಿ.ಎನ್.ಪರಡ್ಡಿ
ರಿಜಿಸ್ಟ್ರಾರ್, ಕರ್ನಾಟಕ ಜಾನಪದ ಅಕಾಡೆಮಿ, ಬೆಂಗಳೂರು
ಮತ್ತು
ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿವರ್ಗ, ವಿದ್ಯಾರ್ಥಿವೃಂದ
ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ದಾವಣಗೆರೆ

ಭಾನುವಾರ, ಮಾರ್ಚ್ 20, 2011

ಅರಣ್ಯವಾಸಿ ಜಾನಪದ: ಒಂದು ವಿಮರ್ಶಾತ್ಮಕ ಟಿಪ್ಪಣಿ




-ಅರುಣ್

ಮಾರ್ಚ ೧೮, ೧೯ ರಂದು ಹಂಪಿ ಕನ್ನಡ ವಿವಿಯಲ್ಲಿ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಒಂದು ದಿನ (ಮಾ ೧೯) ನಾನು ಭಾಗವಹಿಸಿದ್ದೆ. ಅದರ ಒಂದು ವಿಮರ್ಶಾತ್ಮಕ ಟಿಪ್ಪಣಿ ಇದು. ಸಮ್ಮೇಳನ ಎನ್ನುವ ಪದದ ಜತೆಗಿನ ನಮ್ಮ ಕಲ್ಪನೆಗಳನ್ನು ಈ ಸಮ್ಮೇಳನದ ಜತೆ ತಾಳೆ ಹಾಕಿದರೆ ನಿರಾಸೆ ಹುಟ್ಟಿಸುವಂತಿತ್ತು. ವಿವಿ ಪ್ರವೇಶಿಸುತ್ತಿದ್ದಂತೆ ಸಮ್ಮೇಳನದ ಬ್ಯಾನರ್ ತುಂಬಾ ಬೇಸರದಿಂದ ಆಹ್ವಾನಿಸುವಂತಿತ್ತು. ವಿವಿಯ ಭುವನ ವಿಜಯದಲ್ಲಿ ಈ ಕಾರ್ಯಕ್ರಮವಿತ್ತು. ೫೦ ರ ಆಸುಪಾಸು ವಿದ್ಯಾರ್ಥಿಗಳು, ೮ ರ ಸಂಖ್ಯೆ ದಾಟದ ಅಧ್ಯಾಪಕರು, ಸಭೆಯಲ್ಲಿ ನಾಲ್ಕು ಜನ ಭಾಷಣ ಮಂಡಿಸುವ ವಿದ್ವಾಂಸರು ಇದ್ದರು. ನಾನು ಭುವನ ವಿಜಯಕ್ಕೆ ಬೇಟಿಕೊಟ್ಟಾಗ ಪನ್ನಂಗಧರ ಅವರು ಬುಡಕಟ್ಟುಗಳ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ನಂತರ ಗಂಗಾಧರ ದೈವಜ್ಞ ಬುಡಕಟ್ಟುಗಳ ಆಹಾರ ಪದ್ದತಿ ಕುರಿತಂತೆ ಮಾತನಾಡಿದರು. ಈ ಮಾತುಗಳಲ್ಲಿ ಹೊಸ ನೋಟಗಳು ಇರದೆ, ಕೇವಲ ಮಾಹಿತಿಯ ಮಂಡನೆಯಂತಿದ್ದವು. ದಾರವಾಡ ವಿವಿಯ ವಿದ್ಯಾರ್ಥಿ ಮಿತ್ರರು ತಪ್ಪು ತಪ್ಪು ನಿರೂಪಣೆ ಮಾಡುತ್ತಿದ್ದರು.

ನಂತರ ಶಾಲಿನಿ ರಘುನಾಥ ಅವರ ಅಧ್ಯಕ್ಷತೆಯಲ್ಲಿ ಮೊಗಳ್ಳಿ ಗಣೇಶ್ ಅವರು ಜಾನಪದ ಮತ್ತು ಆಧುನಿಕತೆ ಕುರಿತಂತೆ ಟಿಪ್ಪಣಿ ಮಂಡಿಸಿದರು. ಎಂದಿನಂತೆ ಅವರ ಅಖಂಡ ಭಾಷಣ ರಮ್ಯಲೋಕಗಳನ್ನು ಸ್ಪರ್ಶಿಸುವಂತಿತ್ತು. ಜಾನಪದ ಎಂ.ಎ ಓದುವಾಗ ಅವರು ಮಾಡುತ್ತಿದ್ದ ಪಾಠಗಳು ನನಗೆ ನೆನಪಾದವು. ಆದಿವಾಸಿ ಸಂವೇದನೆಯನ್ನು ಆಧುನಿಕತೆ ಭಗ್ನಗೊಳಿಸಿದೆ, ಈ ಭಗ್ನಗೊಳಿಸುವಿಕೆಯಿಂದಾಗಿ ಅವು ಆನಾಥಪ್ರಜ್ಞೆಯಲ್ಲಿ ಬದುಕು ದೂಡುತ್ತಿವೆ, ಎನ್ನುತ್ತಾ ಜಾನಪದ ಎಂದರೆ ಅದು ಎಲ್ಲಿಯಾದರೂ ಹುಟ್ಟಬಹುದು. ಸಾಪ್ಟವೇರ್ ಉದ್ಯಮದಲ್ಲೂ ಒಂದು ಬಗೆಯ ಜಾನಪದ ಹುಟ್ಟುತ್ತದೆ, ಇಂಟರ್ ನೆಟ್‌ನಲ್ಲೂ ಪೋಕ್‌ಲೋರ್‌ನ ಅಂಶಗಳಿವೆ ಎಂದು ಜಾನಪದದ ವ್ಯಾಖ್ಯಾನವನ್ನು ತುಂಬಾ ವಿಸ್ತರಿಸಿ, ಕೆಲವು ಒಳನೋಟದ ಮಾತುಗಳನ್ನಾಡಿದರು.

ಮೆಗಾ ನರೇಟಿವ್ಸ ಚಿಂತನೆಯನ್ನು ಬಿಟ್ಟು ಬಿಡಿ ಬಿಡಿ ಘಟಕಗಳ ಮೂಲಕ ಅಖಂಡವನ್ನು ವ್ಯಾಖ್ಯಾನಿಸುವತ್ತ ಜಾಗತಿಕ ಚಿಂತನಾ ಮಾದರಿಗಳು ವಿಸ್ತರಿಸಿವೆ. ಕನ್ನಡದಲ್ಲೂ ಈ ಚಿಂತನೆ ಇದೆ. ಆದರೆ ಮೊಗಳ್ಳಿಯವರು ಇನ್ನೂ ಅಖಂಡತೆಯ ಕುರಿತು ಮಾತನಾಡುತ್ತ, ಕೆಲವೊಮ್ಮೆ ಅಪರೂಪದ ಒಳನೋಟಗಳನ್ನೂ, ಮಗದೊಮ್ಮೆ ಬೀಸುಹೇಳಿಕೆಗಳನ್ನೂ ಕೊಡುತ್ತಿದ್ದರು. ಇದನ್ನು ನೋಡಿದರೆ ಸಮಾಜದ ಬಿಡಿಬಿಡಿ ಘಟಕಗಳ ಬದಲಾದ ಸ್ಥಿತಿಯನ್ನು ತುಂಬಾ ಹತ್ತಿರದಿಂದ ನೋಡಲು ಮೊಗಳ್ಳಿಯವರಿಗೆ ಸಾಧ್ಯವಾಗುತ್ತಿಲ್ಲ ಅನ್ನಿಸುತ್ತದೆ. ಅಥವಾ ಅವರ ಬಾಲ್ಯದ ಅನುಭವದ ಕಣ್ಣುಗಳ ಮೂಲಕ ಈ ಕಾಲವನ್ನು ನೋಡುತ್ತಿರಬಹುದು. ಅವರ ಜಾನಪದ ಸಂಶೋಧನಾ ಕೃತಿಗಳೂ ಇದೇ ಕಾರಣಕ್ಕೆ ಕೇವಲ ಥಿಯರಿಯ ಭಾರದಿಂದ ನರಳುತ್ತವೆ. ಬಹುಶಃ ಮೊಗಳ್ಳಿಯವರು ಈ ಮಿತಿಯನ್ನು ಮೀರಲು ಸಾಧ್ಯವಾದರೆ, ಮತ್ತದೇ ಮಾತುಗಳು ಬೇರೆ ಬೇರೆ ವೇಷಗಳಲ್ಲಿ ಮರಳುವುದು ತಪ್ಪಬಹುದು.

ಮೊಗಳ್ಳಿಯವರ ಮಾತಿನ ನಂತರ ಸಂಶೋಧನ ವಿದ್ಯಾರ್ಥಿಗಳಿಂದ ಸಂವಾದ ಶುರುವಾಯಿತು. ಇಲ್ಲಿ ನನ್ನ ಮಾತುಗಳ ಮೂಲಕ ಸಂವಾದ ಆರಂಭವಾಯಿತು. ಕನ್ನಡದ ಜಾನಪದ ಅಧ್ಯಯನ ವಿಧಾನಗಳಲ್ಲಿ ತುಂಬಾ ಹಳೆಯ ಮಾದರಿ ಈಗಲೂ ಮುಂದುವರೆದಿದೆ, ಅರವತ್ತು ಎಪ್ಪತ್ತರ ದಶಕಗಳಲ್ಲಿ ಮಾತನಾಡಿದ ಕ್ಯಸೆಟ್ಟುಗಳನ್ನು ರಿವೈಂಡ್ ಮಾಡಿದಂತೆ ಬಹುಪಾಲು ಜಾನಪದ ವಿದ್ವಾಂಸರು ಮಾತನಾಡುತ್ತಾರೆ, ಮುಂತಾಗಿ ಹೇಳಿದೆ. ಜಾನಪದವನ್ನು ಚಳವಳಿಯ ಸಂಗತಿಯ ಭಾಗವಾಗಿ ಸಾಮಾಜಿಕ ಬದುಕಿನೊಂದಿಗೆ ಲಗತ್ತಿಸಬೇಕಿದೆ, ಜಾನಪದವನ್ನು ರಾಜಕೀಯ ಹಕ್ಕೊತ್ತಾಯದ ಸಂಗತಿಯನ್ನಾಗಿ ಮಾಡುವುದು ಇಂದಿನ ಅಗತ್ಯ ಎಂದು ಹೇಳುತ್ತಾ ಆಧುನಿಕತೆ ಮತ್ತು ಜಾನಪದ ಎಂದು ದಿನಗಟ್ಟಲೇ ಮಾತನಾಡುತ್ತಲೇ ಕೂರುವುದು ಕೇವಲ ಸೆಮಿನಾರಿನ ಸಂಗತಿಗಳಾಗುತ್ತವೆ. ಇಂತಹ ಮಾತುಗಳನ್ನೆ ಹಳಹಳಿಕೆಯಿಂದ ಮಾತನಾಡುತ್ತಲೇ ಇರಬೇಕಾಗುತ್ತದೆ ಎಂದೆಲ್ಲಾ ಕೊಂಕು ನುಡಿದೆ. ಇದು ಆಯೋಜಕರಿಗೆ ಇಷ್ಟವಾದಂತೆ ಕಾಣಲಿಲ್ಲ.



ಅದಕ್ಕೆ ಮೊಗಳ್ಳಿಯವರು ಪ್ರತಿಕ್ರಿಯಿಸಿ ಹಿಂದೆ ಕನ್ನಡದಲ್ಲಿ ಜಾನಪದವನ್ನು ಚಳವಳಿಯ ಭಾಗವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತಾ ವರ್ತಮಾನದಲ್ಲಿ ಅದರ ಮುಂದುವರಿಕೆ ಹೇಳದೆ ಮೌನವಾದರು. ನಂತರ ವಿಧ್ಯಾರ್ಥಿಗಳು ಜಾಗತೀಕರಣ ಮತ್ತು ಜಾನಪದದ ಮುಖಾಮುಖಿ ಬಗ್ಗೆ ಪ್ರಶ್ನೆ ಕೇಳುತ್ತಾ ಹೋದರು, ಅದಕ್ಕೆ ಮೊಗಳ್ಳಿಯವರು ಉತ್ತರಿಸುತ್ತಾ ಸಂವಾದ ಒಂದು ಹಂತದಲ್ಲಿ ತಾರಕಕ್ಕೇರಿ ಮುಗಿಯಿತು. ಆದರೆ ಯಾವ ವಿದ್ಯಾರ್ಥಿಗಳು ಅರಣ್ಯವಾಸಿಗಳ ಸಂಕಷ್ಟಗಳ ಬಗ್ಗೆಯಾಗಲಿ, ಅರಣ್ಯವಾಸಿಗಳ ಒಕ್ಕಲೆಬ್ಬಿಸಿ ಅತಂತ್ರ ಸ್ಥಿತಿಯಲ್ಲಿರುವಾಗ ಅವರ ಜಾನಪದದ ಬಗ್ಗೆ ಮಾತನಾಡುವುದರ ಹಿಂದಿರುವ ರಾಜಕೀಯ ಹಿತಾಸಕ್ತಿ ಯಾವುದಾಗಿರಬೇಕು ಎನ್ನುವುದನ್ನಾಗಲಿ ವಿದ್ಯಾರ್ಥಿಗಳು ಮಾತನಾಡಲಿಲ್ಲ. ಅಂದರೆ ಈ ಹೊತ್ತಿನ ವಿದ್ಯಾರ್ಥಿಗಳಿಗೆ ಸದ್ಯದ ರಾಜಕೀಯ ವರ್ತಮಾನದ ಪ್ರಜ್ಞೆಯನ್ನು ಬೆಳೆಸದಿರುವುದು ಇದರಿಂದ ತಿಳಿಯುತ್ತಿತ್ತು. ಇದರಲ್ಲಿ ಹುಡುಗಿಯರು ಸಕ್ರಿಯವಾಗಿ ಭಾಗವಹಿಸಿದ್ದು ಖುಷಿಯ ಸಂಗತಿ.

ನಂತರ ಶಾಲಿನಿ ಮೇಡಂ ಅವರು ಚುಟುಕಾಗಿ ಅಧ್ಯಕ್ಷೀಯ ಮಾತು ಮುಗಿಸಿದರು. ನಂತರ ಪ್ರೊ. ಕಾಳೇಗೌಡ ನಾಗವಾರ ಅವರು ಓತಪ್ರೋತವಾಗಿ ಮಾತಿನ ವಾಗ್ಝರಿಯನ್ನೇ ಹರಿಸಿದರು. ಅವರ ಮಾತಿಗೆ ಒಂದು ಕೇಂದ್ರವೆನ್ನುವುದು ಇರಲಿಲ್ಲ. ಮಾತುಗಳು ಎಲ್ಲೆಲ್ಲಿಗೋ ಹೋಗಿ, ಎಲ್ಲೆಲ್ಲಿಯೂ ಸುತ್ತಿ, ಎಲ್ಲೆಲ್ಲಿಗೋ ಮರಳಿದಂತಹ ಅನುಭವ ಕೇಳುಗರದು. ಜನಪದರು ಒಳುಉಡುಪುಗಳನ್ನು ಹಾಕುತ್ತಿರಲಿಲ್ಲ, ಅದು ಈ ಹೊತ್ತು ಚರ್ಚೆ ಆಗಬೇಕಾದ ವಿಷಯ ಎಂದು ಹೇಳಿ ಕೇಳುಗರಲ್ಲಿ ಮುಜುಗರ ಉಂಟುಮಾಡಿದರು. ಹೆಣ್ಣಿನ ಪಲವಂತಿಕೆಯ ಬಗ್ಗೆ, ಹೆಣ್ಣಿನ ಸೌಂದರ್ಯದ ಬಗ್ಗೆ, ಆಹಾರ ಪಾನೀಯದ ರುಚಿ, ಗಂಡು ಹೆಣ್ಣಿನ ಮಧುರ ಸಂಬಂಧ ಮುಂತಾದವುಗಳ ಬಗ್ಗೆ ಜನಪದ ನುಡಿಗಟ್ಟು ಮತ್ತು ತ್ರಿಪದಿಗಳನ್ನು ಉಲ್ಲೇಖಿಸಿ ಉತ್ಸಾಹಭರಿತರಾಗಿ ಮಾತನಾಡಿದರು. ಆಗ ಮದ್ಹಾನ ಮೂರು ಗಂಟೆ. ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲರ ಮುಖ ಹೊಟ್ಟೆ ಹಸಿವಿನಿಂದ ಸಪ್ಪೆಯಾಗಿತ್ತು. ಆದರೆ ನಾಗವಾರರ ಭಾಷಣ ಮಾತ್ರ ಮುಗಿದಂತೆ ಕಾಣಲಿಲ್ಲ.

ಕೊನೆಗೂ ಅರಣ್ಯವಾಸಿಗಳ ಜಾನಪದದ ಬಗ್ಗೆಯಾಗಲಿ ಅವರ ವರ್ತಮಾನದ ತಲ್ಲಣದ ಬಗ್ಗೆಯಾಗಲಿ ನಾಗವಾರರು ಮಾತೆತ್ತಲಿಲ್ಲ. ಅಥವಾ ಅವರ ತಲ್ಲಣಗಳು ತಾಕದಂತಹ ಸೇಪರ್ ಜೋನಲ್ಲಿ ನಿಂತು ಮಾತನಾಡಿದಂತಿತ್ತು. ಕೊನೆಗೆ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷರಾದ ಶಂಕರ ನಾರಾಯಣರ ಮಾತುಗಳದೂ ಇದೇ ಧಾಟಿಯಲ್ಲಿತ್ತು. ಕಾರ್ಯಕ್ರಮ ಮುಗಿಯಿತಲ್ಲ ಎಂದು ಎಲ್.ವಿ ಪಾಟೀಲರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸುತ್ತಿದ್ದರು. ಕಾರಣವೇ ಗೊತ್ತಿಲ್ಲದೆ ಅಧ್ಯಾಪಕರುಗಳು ಒಬ್ಬರಿಗೊಬ್ಬರು ಸನ್ಮಾನ ಮಾಡಿಕೊಂಡರು. ಈ ಸನ್ಮಾನ ಯಾವ ಸಾಧನೆಗಾಗಿ ಎಂದರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎನ್ನುವ ಉತ್ತರ ಬಂತು. ವಿದ್ಯಾರ್ಥಿಗಳು ಕಾರ್ಯಕ್ರಮ ಯಶಸ್ವಿಯಾದ ಬಗ್ಗೆ ನಾನಾ ಬಗೆಯಲ್ಲಿ ವರ್ಣನೆ ಮಾಡಿದರು. ಆಯೋಜಕರಿಗೆ ಕಾರ್ಯಕ್ರಮವೊಂದನ್ನು ಮುಗಿಸಿದ ಸಂತೃಪ್ತಿ. ಅಬ್ಬಾ ಅಂತೂ ಇಂತೂ ಈ ವರ್ಷದ ಕಾರ್ಯಕ್ರಮವನ್ನು ಮುಗಿಸಿದೆವಲ್ಲಾ ಎಂಬ ನಿರಾಳತೆ ಶಾಲಿನಿ ರಘುನಾಥ ಅವರ ಮುಖದಲ್ಲಿ ಕಾಣುತ್ತಿತ್ತು.



ಈ ಸೆಮಿನಾರನ್ನು ವಿಮರ್ಶೆ ಮಾಡಿದ್ದಕ್ಕೆ ಕಾರಣವೆಂದರೆ, ಬಹುತೇಕ ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ. ಒಂದು ವಿಶ್ವವಿದ್ಯಾಲಯದ ಅದ್ಯಾಪಕರು ಮತ್ತೊಂದು ವಿವಿಯ ಅದ್ಯಾಪಕರನ್ನು ಆಹ್ವಾನಿಸುವುದು, ಅವರನ್ನು ಇವರು ಹೊಗಳುವುದು, ಇವರನ್ನು ಅವರು ಹೊಗಳುವ ಆತ್ಮವಂಚನೆಯಲ್ಲೇ ಸೆಮಿನಾರುಗಳು ಮುಗಿಯುತ್ತವೆ. ಆಯಾ ಸೆಮಿನಾರಿಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತದೆ.

ನೋಡಿ, ಈ ಸಮ್ಮೇಳನ ಅರಣ್ಯವಾಸಿ ಜಾನಪದ ಕುರಿತದ್ದು. ಅದು ಅರಣ್ಯವಾಸಿಗಳ ಬದುಕಿನ ಪ್ರತಿಬಿಂಬವನ್ನು ಕಾಣಿಸುವಂತದ್ದು. ಇಂದು ತಮ್ಮ ಕಲೆಯನ್ನಾಗಲಿ, ಕಾವ್ಯವನ್ನಾಗಲೀ ಸಂಭ್ರಮದಿಂದ ಹೇಳುವ ಸ್ಥಿತಿಯಲ್ಲಿ ಅರಣ್ಯವಾಸಿಗಳಿಲ್ಲ. ಇಂತಹ ಅರಣ್ಯರೋಧನದಲ್ಲಿ ಅವರುಗಳು ಬದುಕುತ್ತಿದ್ದರೆ ಅವರ ಜಾನಪದವನ್ನು ಮಾತ್ರ ಬೇರ್ಪಡಿಸಿ ಮಾತನಾಡುವುದಾದರೂ ಹೇಗೆ? ಆದರೆ ಇಂತಹ ಘನಕಾರ್ಯವನ್ನು ಈ ಸಮ್ಮೇಳನ ಮಾಡಿತು. ಇಲ್ಲಿ ಯಾವುದೇ ಅರಣ್ಯವಾಸಿಗಳ ಸುಳಿವಿರಲಿಲ್ಲ. ಹೋಗಲಿ ಅರಣ್ಯವಾಸಿಗಳ ಬಗ್ಗೆ ಪ್ರಾಮಾಣಿಕವಾಗಿ ದುಡಿಯುವವರನ್ನಾದರೂ ಕರೆಸಿರಲಿಲ್ಲ.

ಇಂದು ಅರಣ್ಯವಾಸಿಗಳನ್ನು ವಕ್ಕಲೆಬ್ಬಿಸುವ ಮರಣಶಾಸನದಂತಹ ಕಾನೂನುಗಳು ಬರುತ್ತಿವೆ, ಅವುಗಳನ್ನು ವಿರೋಧಿಸುವ, ಆ ವಿರೋಧದ ನಿಲುವನ್ನು ಸರಕಾರಕ್ಕೆ ತಿಳಿಸುವ ಯಾವ ತುರ್ತೂ ಈ ಸೆಮಿನಾರಿನಲ್ಲಿ ಕಾಣಿಸಲಿಲ್ಲ. ಅಥವಾ ಅರಣ್ಯವಾಸಿಗಳು ಹೆಚ್ಚಿರುವ ಜಾಗದಲ್ಲಿ ಈ ಸೆಮಿನಾರನ್ನು ಏರ್ಪಡಿಸಿ, ಅರಣ್ಯವಾಸಿಗಳ ಬಗ್ಗೆ ಕೆಲಸ ಮಾಡಿದ ಕೆಲವರನ್ನು ಆಹ್ವಾನಿಸಿ, ಕೆಲವು ಅರಣ್ಯವಾಸಿ ಜನರನ್ನೇ ಕರೆಸಿ ತಮ್ಮ ನಂಬಿಕೆ, ಆಚರಣೆ ಸಂಪ್ರದಾಯದಲ್ಲಿ ಆಗುತ್ತಿರುವ ಬದಲಾವಣೆಗಳಾವುವು? ಈ ಬದಲಾವಣೆಗೆ ಕಾರಣವಾದ ಸಂಗತಿಗಳಾವುವು? ಸದ್ಯದ ತಮ್ಮ ಬದುಕಿನ ತಲ್ಲಣಗಳೇನು ಮುಂತಾಗಿ ಮಾತನಾಡಿಸಿ ಅವುಗಳ ನೆಲೆಯಲ್ಲಿ ಅರಣ್ಯವಾಸಿಗಳ ಜಾನಪದವನ್ನು ಅರ್ಥಮಾಡಿಕೊಳ್ಳುವ ಕೆಲಸವನ್ನು ಮಾಡಬಹುದಿತ್ತು.

ಆದರೆ ಇಂತಹ ಯಾವ ಯೋಚನೆಯೂ ಆಯೋಜಕರಿಗೆ ಹೊಳೆದಂತಿಲ್ಲ. ಹೀಗೆ ವಿಶ್ವವಿದ್ಯಾಲಯಗಳ ಲಕ್ಷಾಂತರ ರೂಗಳು ಕನಿಷ್ಠ ರಾಜಕೀಯ ಪ್ರಜ್ಞೆಯನ್ನು ಬೆಳೆಸದ ಸೆಮಿನಾರುಗಳಿಗೆ ಕರ್ಚಾಗುತ್ತದೆ. ಅದೇ ಸೆಮಿನಾರಿನ ವಿಷಯವಾಗಿದ್ದ ಜನರ ಬದುಕು ಎಂದಿನ ದರಿದ್ರ ಸ್ಥಿತಿಯಲ್ಲಿ ಮುಂದುವರೆಯುತ್ತದೆ. ಹಾಗೆಂದು ಈ ಮಾತನ್ನು ಸಾರಾಸಗಟಾಗಿ ವಿಶ್ವವಿದ್ಯಾಲಯಗಳ ಎಲ್ಲಾ ಸೆಮಿನಾರುಗಳಿಗೆ ಆರೋಪಿಸಲು ಆಗದು. ಅಪರೂಪಕ್ಕೊಮ್ಮೆ ಒಳ್ಳೆಯ ಸೆಮಿನಾರುಗಳೂ ನಡೆಯುತ್ತವೆ. ಆದರೆ ಬಹುಪಾಲು ಸೆಮಿನಾರುಗಳು ಮೇಲಿನ ಮಾತುಗಳಿಗೆ ಪೂರಕವಾಗಿವೆ, ಇದು ವಿಶ್ವವಿದ್ಯಾಲಯಗಳ ಸೆಮಿನಾರುಗಳ ವಾಸ್ತವ. ಬಹುಪಾಲು ವಿಶ್ವವಿದ್ಯಾಲಯಗಳ ಅಧ್ಯಾಪಕರುಗಳು ಇಂತಹ ಜಡತೆಯಿಂದ ಮೈಕೊಡವಿ ಹೊರ ಬರುವುದು ಯಾವಾಗ?

ಶುಕ್ರವಾರ, ಮಾರ್ಚ್ 18, 2011

ಇಂದು ನಾಳೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 37 ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನವಿಜಯದಲ್ಲಿ. ಮಾರ್ಚ 18,19 ರಂದು ಎರಡು ದಿನಗಳ ಕಾಲ 37 ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ‘ಅರಣ್ಯವಾಸಿ ಜಾನಪದ ಸಮ್ಮೇಳನ’ ಜರುಗಲಿದೆ. ಕರ್ನಾಟಕ ವಿಶ್ವವಿದ್ಯಾಲಯದ, ಜಾನಪದ ಅಧ್ಯಯನ ವಿಭಾಗ ಮತ್ತು ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮಾರ್ಚ 18 ರಂದು ಬೆಳಗ್ಗೆ 10.30 ಕ್ಕೆ ಕವಿವಿ ಕುಲಪತಿ ಡಾ.ಹೆಚ್.ಬಿ ವಾಲೀಕಾರ ಕಾರ್ಯಕ್ರಮ ಉದ್ಘಾಟಿಸುವರು. ಕುಪ್ಪಳ್ಳಿ ಕುವೆಂಪು ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ಹಿ.ಚಿ.ಬೋರಲಿಂಗಯ್ಯ ಆಶಯ ಭಾಷಣ ಮಾಡುವರು. ಜಾನಪದ ತಜ್ಞರಾದ ಡಾ.ಸೋಮಶೇಖರ ಇಮ್ರಾಪುರ, ಡಾ.ತಿ.ನಂ.ಶಂಕರ ನಾರಾಯಣ, ಮುಖ್ಯ ಅಥಿತಿಗಳಾಗಿ ಭಾಗವಹಿಸುವರು. ಕನ್ನಡ ವಿವಿ ಕುಲಪತಿ ಎ.ಮುರಿಗೆಪ್ಪ ಅಧ್ಯಕ್ಷತೆ ವಹಿಸುವರು.

ಮಧ್ಯಾನ 12 ಗಂಟೆಗೆ ಅರಣ್ಯ ಮತ್ತು ಆಧಿವಾಸಿಗಳ ತಾತ್ವಿಕ ಪರಿಕಲ್ಪನೆ ಕುರಿತು ಗೋಷ್ಠಿ ನಡೆಯಲಿದೆ. ಹಂಪಿ ವಿವಿಯ ಡಾ.ಸ.ಚಿ.ರಮೇಶ್ ಅಧ್ಯಕ್ಷತೆ ವಹಿಸುವರು.

ಮಧ್ಯಾನ 3 ಗಂಟೆಗೆ ಅರಣ್ಯ ಮತ್ತು ಬುಡಕಟ್ಟುಗಳ ಪಾರಂಪರಿಕ ಸಂಬಂಧಗಳ ತಾತ್ವಿಕ ವಿವೇಚನೆ. 2 ನೇ ಗೋಷ್ಠಿಯಲ್ಲಿ ಹಂಪಿ ವಿವಿಯ ಬುಡಕಟ್ಟು ಅಧ್ಯಯನ ವಿಭಾಗದ ಕೆ.ಎಂ.ಮೈತ್ರಿ ಅಧ್ಯಕ್ಷತೆ ವಹಿಸುವರು.

ಸಂಜೆ 6 ಗಂಟೆಗೆ ಜಾನಪದ ಕಲಾಪ್ರದರ್ಶನ ನಡೆಯುವುದು.

ಮಾರ್ಚ 19 ರಂದು ಬೆಳಗ್ಗೆ 11 ಗಂಟೆಗೆ ಅರಣ್ಯ ಮತ್ತು ಬುಡಕಟ್ಟುಗಳ ಜ್ಞಾನಪರಂಪರೆಗಳ ವಿವೇಚನೆ ಕುರಿತು ನಡೆವ ಗೋಷ್ಠಿಯಲ್ಲಿ ಡಾ.ಗಂಗಾಧರ ದೈವಜ್ಞ ಅಧ್ಯಕ್ಷತೆ ವಹಿಸಲಿದ್ದು ನಿಸರ್ಗದ ಬಳಕೆ ಸಂರಕ್ಷಣೆ ಕುರಿತು ಡಾ.ಸಿದ್ದಗಂಗಮ್ಮ, ಸಾಹಿತ್ಯ ಕಲೆ ಕುರಿತು ಪನ್ನಂಗಧರ ಮಾತನಾಡುವರು.

ಮಧ್ಯಾನ 12 ಗಂಟೆಗೆ ನಡೆಯುವ ಆಧುನಿಕತೆ ಮತ್ತು ಜಾನಪದ ಕುರಿತು ನಡೆವ ಸಂವಾದ ಗೋಷ್ಠಿಯಲ್ಲಿ ಡಾ.ಶಾಲಿನಿ ರಘುನಾಥ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ವಿವಿಯ ಪ್ರಾಧ್ಯಾಪಕ ಡಾ.ಮೊಗಳ್ಳಿ ಗಣೇಶ್ ಹಾಗೂ ಯುವ ಸಂಶೋಧಕರು ಮಾತನಾಡುವರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಪ್ರೊ.ಕಾಳೇಗೌಡ ನಾಗವಾರರು ಸಮಾರೋಪ ಭಾಷಣ ಮಾಡುವರು. ಕರ್ನಾಟಕ ವಿವಿಯ ಕುಲಸಚಿವರಾದ ಡಾ.ಎಸ್.ಬಿ. ಹಿಂಚಿಗೇರಿ, ಸಮ್ಮೇಳನದ ಸರ್ವಾಧ್ಯಕ್ಷ ಡಾ.ತಿ.ನಂ.ಶಂಕರನಾರಾಯಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಹಂಪಿ ವಿವಿಯ ಕುಲಸಚಿವ ಮಂಜುನಾಥ ಬೇವಿನಕಟ್ಟಿ ಅಧ್ಯಕ್ಷತೆ ವಹಿಸಿವರು.

ಗುರುವಾರ, ಮಾರ್ಚ್ 17, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’




(ಉಷಾಕಟ್ಟೆಮನೆ ಅವರು ತಮ್ಮ ಮೌನಕಣಿವೆ ಬ್ಲಾಗ್ ನಲ್ಲಿ ಬರೆದುಕೊಂಡ ಬರಹವಿದು. ಒಂದು ಭಾಷೆ,ಸಂಸ್ಕೃತಿ , ಜಾನಪದ ಹೇಗೆ ಒಂದರೊಳಗೊಂದು ಬೆರೆತಿರುತ್ತವೆ ಎನ್ನುವುದನ್ನು ಅಕಾಡೆಮಿಕ್ ಶೈಲಿಯ ಭಾರವಿಲ್ಲದೆ ಆಪ್ತವಾಗಿ ಬರೆದಿದ್ದಾರೆ. ತುಳು ಭಾಷೆ ಮತ್ತು ಅದರ ದೇಸಿಯ ಅಂತರ್ಗತ ಜಗತ್ತನ್ನುಆಪ್ತ ಮಾತುಕತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನೆಲೆಯಲ್ಲಿ ಕನ್ನಡದಲ್ಲಿ ಈಗಲೂ ಉಳಿದಿರುವ ಶಿಷ್ಟ ,ಜನಪದ ಎನ್ನುವ ಶ್ರೇಣೀಕೃತ ಮನಸ್ಥಿತಿಯ ಬಗ್ಗೆ ಸಣ್ಣ ತಕರಾರನ್ನೂ ಎತ್ತಿದ್ದಾರೆ. ಈ ಬರಹ ಕನ್ನಡ ಜಾನಪದ ಬ್ಲಾಗ ಓದುಗರ ಗಮನಕ್ಕೆ. –ಅರುಣ್)

-ಉಷಾ ಕಟ್ಟೆಮನೆ

ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, “ಯಾನ್ ತುಳು ಆಣನೇ ಮದ್ಮೆ ಆಪಿನಿ” ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?
ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ….ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

ಸೋಮವಾರ, ಮಾರ್ಚ್ 14, 2011

ಜನಪದ ಕಸಬು-೨ ಕೊರಚರಟ್ಟಿ ಗ್ರಾಮದ ಪ್ಲಾಸ್ಟಿಕ್ ಹಗ್ಗ ತಯಾರಿಕೆ




ಜನಪದರು ತಮ್ಮ ಕಾಲಕ್ಕೆ ತಕ್ಕ ಹಾಗೆ ತಮ್ಮ ಹಳೆ ಕಸಬುಗಳಿಗೆ ಹೊಸ ಮಾರ್ಪಾಟುಗನ್ನು ಮಾಡಿಕೊಳ್ಳುತ್ತಾರೆ. ಆ ಮೂಲಕ ತಮ್ಮ ಆಲೋಚನೆ, ಆಚರಣಾ ಲೋಕದಲ್ಲಿಯೂ ತಕ್ಕ ಬದಲಾವಣೆ ಸಹಜವಾಗಿ ಆಗುತ್ತದೆ. ಹಾಗೆ ಜನರೇ ಸೃಷ್ಟಿಸಿಕೊಂಡ ಹೊಸ ಕಸಬು ಪ್ಲಾಸ್ಟಿಕ್ ಹಗ್ಗಗಳ ತಯಾರಿಕೆ. ಪ್ಲಾಷ್ಟಿಕ ಚೀಲಗಳಿಂದ ಎಳೆಗಳನ್ನು ಬಿಡಿಸಿ, ಅವುಗಳನ್ನು ನೂಲು ಮಾಡಿ ಹಗ್ಗಗಳನ್ನು ಮಾಡಿ ಮಾರಾಟ ಮಾಡಲಾಗುತ್ತದೆ. ಇದಕ್ಕೆ ನೆರವಾದ ವೃತ್ತಿ ಕಸಬೆಂದರೆ ಕತ್ತಾಳೆಯಿಂದ ನಾರು ತೆಗೆದು ಹಗ್ಗ ಮಾಡುವುದಾಗಿತ್ತು. ಈಗಲೂ ಕತ್ತಾಳೆ ನಾರಿನಿಂದ ನೂಲು ತೆಗೆಯುತ್ತಾರಾದರೂ ಅದರ ಪ್ರಮಾಣ ಕಡಿಮೆಯಾಗಿದೆ. ಅಥವಾ ಯಾವುದೋ ಒಂದು ಭಾಗದಲ್ಲಿ ಮಿಷನ್ ಬಳಸಿ ನಾರು ತೆಗೆಯುವುದನ್ನು ನೋಡಬಹುದು. ಅದು ಚಳ್ಳಕೆರೆಯ ಕುರುಡಿಹಳ್ಳಿಯ ಬಳಿ ಇರುವ ನಂದನಳ್ಳಿ ತಾಂಡದಲ್ಲಿ ಕಾಣುತ್ತದೆ. ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲೂ ಇರಬಹುದು. ಜನಪದ ಕಸಬು ಸರಣಿಯಲ್ಲಿ ಕೂಡ್ಲಿಗಿಯ ಸಿದ್ಧರಾಮ ಹಿರೇಮಠ ಅವರು ಕೊರಚರಟ್ಟಿ ಗ್ರಾಮದ ಪ್ಲಾಸ್ಟಿಕ್ ಹಗ್ಗ ತಯಾರಿಕೆಯ ಬಗ್ಗೆ ಬರೆದಿದ್ದಾರೆ.-ಅರುಣ್



-ಸಿದ್ಧರಾಮ ಹಿರೇಮಠ


ಬಿಸಾಡುವ ಕಾಗದ, ಪ್ಲಾಸ್ಟಿಕ್‌ಗಳಿಂದ, ಗೊಂಬೆ, ಅಲಂಕಾರಿಕ ವಸ್ತುಗಳನ್ನು ಸಿದ್ಧಪಡಿಸಿದರೆ, ನಗರ ಪ್ರದೇಶಗಳಲ್ಲಿ ಅದೊಂದು ಅತ್ಯುತ್ತಮ ಕಲೆಯೆಂದೇ ಪ್ರಸಿದ್ಧಿ ಪಡೆಯುತ್ತದೆ. ಅದಕ್ಕೆ ಎಲ್ಲಿಲ್ಲದ ಬೆಲೆ ಹಾಗೂ ಬೇಡಿಕೆ. ಆದರೆ ಗ್ರಾಮೀಣ ಭಾಗಗಳಲ್ಲಿ ಪ್ಲಾಸ್ಟಿಕ್‌ಗಳಿಂದ ಹಗ್ಗ ತಯಾರಿಸಿದರೆ ಅದು ಬದುಕಿಗೆ ಮಾರ್ಗವಾಗುತ್ತದೆ, ಬೆಲೆಯೂ ಕಡಿಮೆ, ಬೇಡಿಕೆಯೂ ಅಷ್ಟಕ್ಕಷ್ಟೆ. ತಾಲೂಕಿನ ಕೊರಚರಹಟ್ಟಿ ಗ್ರಾಮದಲ್ಲಿನ ಗ್ರಾಮಸ್ಥರಿಗೆ ಪ್ಲಾಸ್ಟಿಕ್ ಹಗ್ಗಗಳನ್ನು ಹೊಸೆಯುವುದೇ ಒಂದು ವೃತ್ತಿ.
ತಾಲೂಕು ಕೇಂದ್ರದಿಂದ ೩೫ ಕಿ.ಮೀ ದೂರವಿರುವ, ಬೆಳ್ಳಗಟ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ಪುಟ್ಟ ಗ್ರಾಮ ಕೊರಚರಹಟ್ಟಿಯಲ್ಲಿ ಪ್ಲಾಸ್ಟಿಕ್‌ನಿಂದ ಹಗ್ಗ ತಯಾರಿಸುವುದೇ ಕಾಯಕವಾಗಿದೆ. ಅದೇ ಅವರ ಬದುಕಿಗೆ ಆಧಾರ.

ಕೋಳಿ ಫಾರಂಗಳಲ್ಲಿ ಸಿಗುವ ಕೋಳಿ ಆಹಾರದ ಪ್ಲಾಸ್ಟಿಕ್ ಚೀಲಗಳನ್ನು ೨ ರೂ.ಗಳಿಗೊಂದರಂತೆ ಖರೀದಿಸಿ ತರುತ್ತಾರೆ. ಅವುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುತ್ತಾರೆ. ನಂತರ ಅವುಗಳನ್ನು ದಾರದ ರೀತಿಯಲ್ಲಿ ಕತ್ತರಿಸಿಕೊಂಡು, ಯಂತ್ರವಿರುವವರು ಯಂತ್ರದಲ್ಲಿ ಹಗ್ಗ ಹೊಸೆದರೆ, ಬಹುತೇಕ ಜನ ಕೈಯಿಂದಲೇ ಹಗ್ಗ ಹೊಸೆಯುತ್ತಾರೆ. ಹೀಗೆ ಹೊಸೆದ ಹಗ್ಗದಲ್ಲಿ ಮಡಕೆ ಮಿಣಿ, ಬಾರಿಣಿ, ಹಿಡಿಹಗ್ಗ, ಎತ್ತಿನ ಹಗ್ಗ ಹೀಗೆ ಕೃಷಿಗೆ ಬೇಕಾಗುವ ಎಲ ಬಗೆಯ ಹಗ್ಗಗಳನ್ನೂ ಸಿದ್ಧಪಡಿಸುತ್ತಾರೆ. ನಂತರ ತಾಲೂಕಿನಾದ್ಯಂತ ಎಲ್ಲೆಲ್ಲಿ ಸಂತೆಗಳಿರುತ್ತವೆಯೋ ಅಲಿ ಮಾರಾಟಕ್ಕೆ ಒಯ್ಯುತ್ತಾರೆ. ಪ್ಲಾಸ್ಟಿಕ್ ಹಗ್ಗವಾದರೆ ೨೫ ರೂ.ಗಳಂತೆ, ಮಿಣಿಯಾದರೆ ೬೦ ರೂ.ಗಳಂತೆ ಸಂತೆಯ್ಲಲಿ ಮಾರಾಟ ಮಾಡುತ್ತಾರೆ. ಹಗ್ಗಗಳನ್ನು ಕೈಯಿಂದಲೇ ಹೊಸೆದು ಸಿದ್ಧಪಡಿಸಿದರೆ ದಿನಕ್ಕೆ ೧೦೦ ರೂ.ಗಳಂತೆ ದುಡಿಯಬಹುದಾಗಿದೆ, ಯಂತ್ರವಿದ್ದಲ್ಲಿ, ೨೦೦-೩೦೦ ರೂ.ಗಳವರೆಗೂ ದುಡಿಯಬಹುದೆಂದು ಗ್ರಾಮದ ಜಯಣ್ಣ ಹೇಳುತ್ತಾನೆ.

ಗ್ರಾಮದಲ್ಲಿನ ೪೦ ಮನೆಗಳೂ ಇದೇ ವೃತ್ತಿಯನ್ನು ಅವಲಂಬಿಸಿವೆ. ಬೇಸಿಗೆಯಲ್ಲಿ ಕತ್ತಾಳೆ ನಾರಿನ ಹಗ್ಗವನ್ನು ಹೊಸೆದರೆ, ಉಳಿದ ದಿನಗಳಲ್ಲಿ ಪ್ಲಾಸ್ಟಿಕ್ ಹಗ್ಗಗಳನ್ನು ಸಿದ್ಧಪಡಿಸುತ್ತೇವೆಂದು ರಾಮಪ್ಪ ಹೇಳುತ್ತಾನೆ. ಹಗ್ಗ ಹೊಸೆವ ಯಂತ್ರವಾದರೆ ದುಡಿಮೆಗೆ ಮಾರ್ಗವಾಗುತ್ತದೆ. ಯಂತ್ರವನ್ನು ಹುಬ್ಬಳ್ಳಿಯಿಂದಲೇ ತರಬೇಕು, ಅದಕ್ಕೆ ೫,೦೦೦ ರೂ.ಗಳಾಗುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಹಣವಿದ್ದವರು ಸ್ವಂತಕ್ಕೆ ಖರೀದಿಸಿ ತಂದರೆ, ಉಳಿದವರು ಹಳೆಯ ಪದ್ಧತಿಯಂತೆಯೇ ಕೈಯಿಂದಲೇ ಹೊಸೆಯುತ್ತಾರೆ.


ಸಿದ್ಧಪಡಿಸಿದ ಹಗ್ಗವನ್ನು ಸಂಗ್ರಹಿಸಲು, ಸಿದ್ಧಪಡಿಸಲು ಅನುಕೂಲವಾಗಲೆಂದು ಕಳೆದ ೧೫ ವರ್ಷಗಳ ಹಿಂದೆಯೇ ಕೈಗಾರಿಕಾ ಇಲಾಖೆಯ ವತಿಯಿಂದ ಗೋಡೌನ್ ನಿರ್ಮಿಸಲಾಗಿದೆ. ಆದರೆ ಅದೀಗ ಯಾತಕ್ಕೂ ಬಾರದ ದುಸ್ಥಿತಿಗೆ ತಲುಪಿದೆ. ಅದರ ಷಟರ್, ಕಿಟಕಿಗಳು ಎಂದೋ ಕಿತ್ತುಹೋಗಿದ್ದು, ಒಳಗಡೆ ನೆಲ, ಗೋಡೆಗಳು ಯಾತಕ್ಕೂ ಬಾರದ ಸ್ಥಿತಿಯಲ್ಲಿವೆ. ಅಲ್ಲೀಗ ಕತ್ತಾಳೆ ನಾರಿನ ಹಗ್ಗಗಳನ್ನಿಡಲಾಗಿದೆಯಾದರೂ ಅದಕ್ಕೆ ಯಾವುದೇ ರೀತಿಯ ರಕ್ಷಣೆಯಿಲ್ಲ. ಇಡೀ ಗ್ರಾಮವೇ ಬದುಕುವುದಕ್ಕಾಗಿ ಒಂದು ವೃತ್ತಿಯನ್ನು ಕೈಗೊಂಡಿರುವಾಗ, ಸಂಬಂಧಿಸಿದ ಇಲಾಖೆ ಪ್ಲಾಸ್ಟಿಕ್ ಹಗ್ಗಗಳನ್ನು ಹೊಸೆಯುವ ಯಂತ್ರಗಳನ್ನು, ಸಂಗ್ರಹಕ್ಕಾಗಿ ಗೋಡೌನ್‌ನ್ನು ನಿರ್ಮಿಸಿಕೊಟ್ಟರೆ ಎಷ್ಟೋ ಕುಟುಂಬಗಳು ಬದುಕಲು ಮಾರ್ಗವಾಗುತ್ತದೆ ಎಂದು ಗ್ರಾಮದ ಕೆ.ಎಸ್.ಧನಂಜಯ ಹೇಳುತ್ತಾರೆ.

***

ಗುರುವಾರ, ಮಾರ್ಚ್ 10, 2011

ಗಾಣಗಟ್ಟೆ ಮಾಯಮ್ಮ: ಗ್ರಾಮ ದೇವತೆಯ ಆಧುನಿಕ ರೂಪಾಂತರ.



-ಅರುಣ್

ಕನ್ನಡ ಜಾನಪದ ಅಧ್ಯಯನಗಳಲ್ಲಿ ಗ್ರಾಮ ದೈವಗಳ ಅಧ್ಯಯನ ವ್ಯಾಪಕವಾಗಿ ನಡೆದಿದೆ. ಹಿ.ಚಿ. ಬೋರಲಿಂಗಯ್ಯ ಅವರ ಉಜ್ಜನಿ ಚೌಡಮ್ಮ, ಸಿದ್ದಲಿಂಗಯ್ಯ ಅವರ ಕರ್ನಾಟಕದ ಗ್ರಾಮದೇವತೆಗಳು, ಪುರುಷೋತ್ತಮ ಬಿಳಿಮಲೆ ಅವರ ಹುಲಿಗೆಮ್ಮ, ಎಸ್‍. ಎಸ್‍. ಹಿರೇಮಠ್‍ ಅವರ ಗ್ರಾಮದೇವತೆಗಳ ಅಧ್ಯಯನಗಳು ಚಕ್ಕನೆ ನೆನಪಾಗುತ್ತವೆ. ಆನಂತರ ಪಿಹೆಚ್.ಡಿ ಮತ್ತು ಎಂಫಿಲ್‍ ಅಧ್ಯಯನಗಳಿಗಾಗಿ ಕರ್ನಾಟಕದ ಬಹುತೇಕ ಗ್ರಾಮದೇವತೆಗಳ ಅಧ್ಯಯನಗಳು ನಡೆದಿವೆ ಮತ್ತು ನಡೆಯುತ್ತಿವೆ.

ಇಂದು ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ನಡೆಸುವವರು ಈ ಕಾಲದಲ್ಲಿ ಆ ದೇವತೆಯ ನಂಬಿಕೆ ಮತ್ತು ಆಚರಣೆಗಳು ಆಧುನಿಕವಾಗಿ ಹೇಗೆ ರೂಪಾಂತರಗೊಂಡಿವೆ, ಮತ್ತು ಮೂಲ ಆರಾಧಕರಿಂದ ವಂಚಿತವಾಗಿ ಹೇಗೆ ಮೇಲ್ವರ್ಗದವರ ಕಪಿಮುಷ್ಟಿಯಲ್ಲಿ ಗ್ರಾಮದೈವಗಳು ಸಿಲುಕಿವೆ, ಒಂದು ಕಾಲದಲ್ಲಿ ತಳ ಸಮುದಾಯಗಳಿಗೆ ಚೈತನ್ಯ ನೀಡುವ ದೇವತೆಗಳು ಅದೇ ಸಮುದಾಯದಿಂದ ಹೇಗೆ ಪರಕೀಯವಾಗಿವೆ? ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಅನೇಕ ಗ್ರಾಮದೇವತೆಗಳು ಕೇಸರೀಕರಣಕ್ಕೆ ಒಳಗಾಗಿವೆ. ಬಳ್ಳಾರಿಯ ಜನಪ್ರಿಯ ಗ್ರಾಮ ದೇವತೆ ಬಳ್ಳಾರಿ ದುರ್ಗಮ್ಮ ಇಂದು ದುರ್ಗಾಪರಮೇಶ್ವರಿ ಎಂಬ ಹೆಸರಲ್ಲಿ ಪುರೋಹಿತರ ಹಿಡಿತದಲ್ಲಿದೆ. ಇಂತಹ ಅನೇಕ ಉದಾಹರಣೆಗಳನ್ನು ಜೋಡಿಸಬಹುದು. ಈ ಕುರಿತು ಗಂಭೀರ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.



ಈಚೆಗೆ ನಮ್ಮ ಭಾಗದಲ್ಲಿ ಅಂದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆಯ ಗ್ರಾಮದೇವತೆ ಮಾಯಮ್ಮ ಹೆಚ್ಚು ಜನಪ್ರಿಯವಾಗುತ್ತಿದೆ. ಮಾಯಮ್ಮ ಮಾಡಿದ ಪವಾಡಗಳ ಕತೆಗಳು ಹಳ್ಳಿಗಳಲ್ಲಿ ನಾನಾ ಬಗೆಯಲ್ಲಿ ಹಬ್ಬಿಕೊಳ್ಳುತ್ತಿವೆ. ಮಾಯಮ್ಮನನ್ನು ಜನರು ದುಡ್ಡಿನ ದೇವತೆ ಎಂದು ಕರೆಯುತ್ತಾರೆ. ಕಾರಣ ಈ ದೇವತೆಗೆ ಯಾವುದೇ ಹರಕೆಯನ್ನು ಹೊತ್ತರೂ ಅದು ಹಣದ ರೂಪದಲ್ಲೇ ಇರಬೇಕು . ಅದರಲ್ಲೂ ಯಾರು ಹೆಚ್ಚು ಹಣವನ್ನು ಹರಕೆಯ ರೂಪದಲ್ಲಿ ಕೊಡುತ್ತಾರೋ ಅವರ ಕೆಲಸ ಬಹು ಬೇಗ ಆಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಮೂಲತಃ ಗ್ರಾಮದೇವತೆಯ ಬಹಳ ಮುಖ್ಯ ಹರಕೆಯೆಂದರೆ ಪ್ರಾಣಿ ಬಲಿ ಎಂದು ತಿಳಿದ ಜನರು ಈ ದೇವತೆಯ ಹಣದ ಮಹಿಮೆ ಕಂಡು ದಂಗಾಗಿದ್ದಾರೆ.



ಯಾಕೆ ಈ ದೇವಿ ಕೇವಲ ಹಣವನ್ನು ಹರಕೆಯನ್ನಾಗಿ ಸ್ವೀಕರಿಸುತ್ತಾಳೆ? ಇದಕ್ಕೆ ಉತ್ತರವಿಲ್ಲ. ಇಲ್ಲಿ ಪೂಜೆ ಮಾಡುವವರು ಪುರೋಹಿತರಲ್ಲ. ಮೊದಲಿನಿಂದಲೂ ಪೂಜಿಸಿಕೊಂಡುಬಂದ ನಾಯಕ ಬುಡಕಟ್ಟು ಸಮುದಾಯ. ಈ ಪೂಜಾರಿಯ ಪ್ರಕಾರ ಈ ದೇವಾಲಯಕ್ಕೆ ಪ್ರತಿ ತಿಂಗಳು ಕನಿಷ್ಟ 4 ಲಕ್ಷ ರೂ ಆದಾಯವಿದೆ. ಈ ಎಲ್ಲಾ ಆದಾಯವನ್ನು ದೇವಸ್ಥಾನದ ಅಭಿವೃದ್ದಿಗಾಗಿ ಬಳಸಲಾಗುತ್ತಿದೆ. ಸ್ಥಳೀಯರ ಪ್ರಕಾರ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗುವುದಿಲ್ಲ ಎಂದು ಹೇಳುತ್ತಾರೆ.
ಅದೇನೆ ಇರಲಿ, ಈ ದೇವಿ ಮೂಲತಃ ತಳಸಮುದಾಯಗಳ ಚೈತನ್ನವನ್ನು ಹೆಚ್ಚಿಸಬೇಕಿತ್ತು, ಆದರೆ ಇಂದು ಅದೇ ದೇವಿ ಅದೇ ಭಕ್ತರಿಂದ ಕೇವಲ ಹಣ ಬೇಡುವ ಹಣದಾಹಿಯಾಗಿ ಪರಿವರ್ತನೆಯಾಗಿರುವುದು ಈ ಕಾಲದ ಮಹಿಮೆಯೇ ಸರಿ.



ಈ ದೇವಿಯ ಪವಾಡದ ಕಥೆಗಳು ಮಾತ್ರ ಬಳ್ಳಾರಿ ಜಿಲ್ಲೆಯಾದ್ಯಾಂತ, ಅದರಲ್ಲೂ ಕೂಡ್ಲಿಗಿ ತಾಲೂಕಿನಾದ್ಯಾಂತ ವಿಚಿತ್ರ ರೀತಿಯಲ್ಲಿ ಜನಪದ ಕಥೆಗಳಂತೆ ಹರಡಿಕೊಂಡಿವೆ. ಅಂತೆಯೇ ಅದರ ಹಲವಾರು ಪಾಠಾಂತರಗಳೂ ಸಿಗುತ್ತವೆ. ಇವುಗಳನ್ನು ಇಂದಿನ ಜನಪದ ಅಧ್ಯಯನಕಾರರು ಸಮುದಾಯದ ಗ್ರಹಿಕೆ ಮತ್ತು ವರ್ತಮಾನದ ಜತೆ ಮುಖಾಮುಖಿ ಮಾಡುವ ಅಗತ್ಯವಿದೆ. ಗಾಣಗಟ್ಟೆಯಂತಹ ಕುಗ್ರಾಮದಲ್ಲಿ ಇಂತಹ ಬೃಹತ್ ದೇವಾಲಯದ ನಿರ್ಮಾಣ ಎಂತವರನ್ನೂ ಅಚ್ಚರಿಯನ್ನುಟ್ಟಿಸುತ್ತದೆ. ಈ ದೇವಿಯನ್ನು ಕುರಿತು ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿಯವರು ಅಧ್ಯಯನ ಮಾಡಿ ಕಿರು ಹೊತ್ತಿಗೆಯನ್ನು ಬರೆದಿದ್ದಾರೆ. ಇದೊಂದು ಒಳ್ಳೆಯ ಪ್ರಯತ್ನ. ಆದರೆ ಇವರು ಇದನ್ನು ಕೇವಲ ಇತಿಹಾಸಕಾರನ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಇಲ್ಲಿ ಸಂಶೋಧಕರೊಬ್ಬರು ಎತ್ತಲೇಬೇಕಾದ ಯಾವ ಪ್ರಶ್ನೆಯನ್ನು ಇವರಿಗೆ ಎತ್ತಲು ಸಾಧ್ಯವಾಗಿಲ್ಲ. ಇದು ಒಬ್ಬ ಸಂಶೋಧನಾ ವಿಧ್ಯಾರ್ಥಿ ಬರೆಯಬಹುದಾದ ಒಂದು ಪ್ರಾಥಮಿಕ ತಿಳುವಳಿಕೆಯ ಪ್ರಬಂಧವಿದ್ದಂತಿದೆ. ಇಂದು ಗ್ರಾಮದೇವತೆಗಳು ಪಡೆಯುತ್ತಿರುವ ಹೊಸ ಬಗೆಯ ಸ್ಥಿತ್ಯಂತರಗಳ ಕುರಿತು ಅಧ್ಯನ ಮಾಡುವ ಅಗತ್ಯವಿದೆ. ಇವುಗಳು ಪಡೆಯುತ್ತಿರುವ ಹೊಸ ರೂಪಾಂತರಗಳ ಬಗ್ಗೆ, ಇದಕ್ಕೆ ಜನ ಸಮುದಾಯ ಪ್ರತಿಕ್ರಿಯಿಸುತ್ತಿರುವ ಬಗ್ಗೆ ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.

ಬುಧವಾರ, ಮಾರ್ಚ್ 9, 2011

ಸಂಯುಕ್ತ ಕರ್ನಾಟಕ ‘ಚೇತನ’ ಪುರವಣಿಯ ‘ಈ ಸಂಭಾಷಣೆ’

೧೦.೦೩.೨೦೧೧ ರ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶೇಷ ಪುರವಣಿ ‘ಚೇತನ’ ದ ಈ ಸಂಭಾಷಣೆ ಕಾಲಂ ನಲ್ಲಿ ಪಲ್ಲವಿ ಪಾಟೀಲ ಸೇಡಂ ಅವರು ನನ್ನ ಸಂದರ್ಶನ ಮಾಡಿದ್ದಾರೆ. ಅವರು ನನ್ನನ್ನು ಗುರುತಿಸಿದ್ದು ಕನ್ನಡ ಜಾನಪದ ಬ್ಲಾಗ್ ಮೂಲಕ. ಹಾಗಾಗಿ ಪಲ್ಲವಿ ಅವರಿಗೆ ಕೃತಜ್ಞತೆಗಳು. ಈ ಸಂದರ್ಶನ ಮುಖ್ಯವಾಗಿ ಜಾನಪದದ ಬಗ್ಗೆಯೇ ಆಗಿರುವುದರಿಂದ ಈ ಸಂದರ್ಶನದ ಭಾಗವನ್ನು ಕನ್ನಡ ಜಾನಪದ ಬ್ಲಾಗ್ ನಲ್ಲೂ ಪ್ರಕಟಿಸಲಾಗಿದೆ



೧. ಜನಪದ, ಜನಪದ ಸಾಹಿತ್ಯ ಎಂದರೇನು? ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ ಹೇಗಾಯಿತು?

ಈ ಪ್ರಶ್ನೆಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವುದು ಕಷ್ಟ. ಕೆಲವು ಮುಖ್ಯ ಸಂಗತಿಗಳನ್ನು ಗುರುತಿಸಬಹುದಷ್ಟೆ. ಜನಪದ ಎಂದರೆ ಹಲವು ವ್ಯಾಖ್ಯಾನಗಳಿವೆ. ಅವು ಕಾಲಾನಂತರದಲ್ಲಿ ಬದಲಾಗಿವೆ ಕೂಡ. ಜನಸಾಮಾನ್ಯರ ಪರಂಪರೆಯ ಜ್ಞಾನವೇ ಜಾನಪದ ಎನ್ನುವುದರಿಂದ, ಯಾವುದೇ ಒಂದು ಜನರ ಸಮಾನ ಗುಂಪಿನಲ್ಲಿ ಇರಬಹುದಾದ ನಂಬಿಕೆ, ಆಚರಣೆ, ಪರಂಪರೆಯ ಜ್ಞಾನವೇ ಜಾನಪದ ಎನ್ನುವ ತನಕ ಅದರ ವ್ಯಾಖ್ಯಾನ ಗಳು ಬದಲಾಗಿವೆ. ಜನಪದ ಎಂದರೆ ಜಾನಪದದ ಒಂದು ಘಟಕ ಎಂತಲೂ, ಹಲವು ಜನಪದಗಳು ಸೇರಿ ಜಾನಪದ ಎಂತಲೂ ಕನ್ನಡದಲ್ಲಿ ಬಳಕೆಯಲ್ಲಿದೆ. ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ, ಮನುಷ್ಯನ ಹುಟ್ಟು ಬೆಳವಣಿಗೆಯ ಜತೆ ಸಾವಯವ ಸಂಬಂಧವನ್ನು ಹೊಂದಿದೆ.

ಜಾನಪದ ಒಂದು ಅಧ್ಯಯನ ಶಿಸ್ತಾಗಿ ಬೆಳೆದದ್ದಕ್ಕೆ ಜಾಗತಿಕವಾಗಿ ಮತ್ತು ಭಾರತ, ಕರ್ನಾಟಕದಲ್ಲಿಯೂ ಬೇರೆ ಬೇರೆ ಹಂತಗಳಿವೆ. ೧೮೪೬ ರಲ್ಲಿ ಇಂಗ್ಲೇಂಡಿನ ಪ್ರಾಚೀನ ಅನ್ವೇಷಕ ಡಬ್ಲು.ಜೆ.ಥಾಮ್ಸ ‘ಪಾಪುಲರ್ ಎಂಟಿಕ್ವಿಟೀಸ್’ ಎನ್ನುವ ಪದಕ್ಕೆ ಸಂವಾದಿಯಾಗಿ ಮೊದಲು ‘ಪೋಕ್ ಲೋರ್’ ಎನ್ನುವ ಪದವನ್ನು ಬಳಸಿದ. ೧೯೬೬ ರಲ್ಲಿ ‘ಪೋಕ್ ಲೋರ್’ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಪೋಕ್’ ಎಂದರೆ ‘ಜನಪದ’ ಎಂತಲೂ, ‘ಪೋಕ್ ಲೋರ್’ ಎಂದರೆ ‘ಜಾನಪದ’ ಎಂತಲೂ ಹಾ.ಮಾ. ನಾಯಕ ಅವರು ಬಳಸಿದರು. ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಕಟ್ಟಿಬೆಳೆಸಿದ ಹಲವು ಮಹನೀಯರಿದ್ದಾರೆ. ಅದರಲ್ಲಿ ಜಿ.ಶಂ.ಪರಮಶಿವಯ್ಯ ಅವರ ಶ್ರಮ ಕರ್ನಾಟಕದ ಮಟ್ಟಿಗೆ ನೆನಪಿಟ್ಟುಕೊಳ್ಳುವಂತದ್ದು. ಇನ್ನು ಜಾನಪದ ಅಧ್ಯಯನಗಳ ಚರಿತ್ರೆ ತುಂಬಾ ದೊಡ್ಡದಿದೆ ಇಲ್ಲಿ ಉತ್ತರಿಸುವುದು ಕಷ್ಟ.

೨. ಜನಪದ ಸಾಹಿತ್ಯ ಅಧ್ಯಯನ ಮಾಡಿದವರಿಗೆ ಉದ್ಯೋಗವಕಾಶಗಳು ಇವೆಯಾ?


ಜನಪದ ಸಾಹಿತ್ಯ ಅಧ್ಯಯನದಲ್ಲಿ ಎರಡು ವಿಧಗಳಿವೆ. ಕನ್ನಡ ಎಂಎ ನಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಓದುವುದು. ಇದನ್ನು ಕನ್ನಡ ಎಂ.ಎ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅದಕ್ಕಿರುವ ಉದ್ಯೋಗಾವಕಾಶಗಳು ಅನ್ವಯವಾಗುತ್ತವೆ. ಎರಡನೆಯದು ಜಾನಪದವನ್ನೇ ಪ್ರತ್ಯೇಕವಾಗಿ ಎಂ.ಎ ಮಾಡುವ ಅವಕಾಶ ಇದೆ. ಹೀಗೆ ಜಾನಪದ ಎಂ.ಎ ಮಾಡಿದವರು ಪಿಯು ಅಧ್ಯಾಪಕರಾಗಬಹುದು. ಜಾನಪದ ವಿಷಯವಾಗಿ ಪಿಹೆಚ್ ಡಿ ಮಾಡಲು ಅವಕಾಶವಿದೆ. ಜಾನಪದ ಕುರಿತಂತೆ ಡಿಪ್ಲೊಮಾ ಕೋರ್ಸುಗಳಿವೆ. ಇವುಗಳಿಗೆ ಪೂರಕವಾದ ಉದ್ಯೋಗವಕಾಶಗಳು ಇನ್ನು ಸೃಷ್ಟಿಯಾಗಬೇಕಿದೆ. ಈಚೆಗೆ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಯನ್ನು ಪರಿಗಣಿಸುತ್ತಿಲ್ಲ , ಇದೊಂದು ಅವೈಜ್ಞಾನಿಕ ಕ್ರಮ. ಏಕೆಂದರೆ ಯುಜಿಸಿ ಯಲ್ಲಿ ಇವೆರಡೂ ಪ್ರತ್ಯೇಕ ವಿಷಯಗಳು, ಆದರೆ ಕರ್ನಾಟಕದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದೇ ಎಂದು ಪರಿಗಣಿಸಲಾಗುತ್ತಿದೆ. ಆ ಕಾರಣಕ್ಕೆ ಕನ್ನಡ ಅಧ್ಯಾಪಕರ ಆಯ್ಕೆಯಲ್ಲಿ ಶೇಕಡವಾರು ಇಂತಿಷ್ಟು ಜಾನಪದ ಎಂ.ಎ ಮಾಡಿದವರನ್ನು ಆಯ್ಕೆ ಮಾಡುವುದು ನ್ಯಾಯಯುತವಾದುದು. ಈ ಕುರಿತು ಜಾನಪದ ವಿದ್ವಾಂಸರು, ಜಾನಪದ ಅಕಾಡೆಮಿ ಅಧ್ಯಕ್ಷರು, ಜಾನಪದ ವಿವಿಯ ವಿಶೇಷಾಧಿಕಾರಿಗಳು ಒಟ್ಟಾಗಿ ಸರಕಾರದ ಗಮನಸೆಳೆಯುವ ಅಗತ್ಯವಿದೆ.



೩. ಜನಪದ ಸಂಶೋಧಕರಿಗೆ ಸರಕಾರದಿಂದ ದೊರೆಯುವ ಅವಕಾಶಗಳು, ಫೆಲೋಶಿಪ್ಸ ಏನಾದ್ರೂ ಇದಾವ?


ಯು.ಜಿ.ಸಿ ಯಿಂದ ವಿಶ್ವವಿದ್ಯಾಲಯಗಳ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅದ್ಯಾಪಕರುಗಳಿಗೆ ಸಮಾಜ ವಿಜ್ಞಾನದ ವಿಭಾಗಗಳಲ್ಲಿ ನೀಡುವ, ಮೈನರ್, ಮತ್ತು ಮೇಜರ್ ಪ್ರಾಜೆಕ್ಟಗಳಲ್ಲಿ ಯೋಜನಾ ಸಹಾಯಕರಾಗಿ ಕೆಲಸ ಮಾಡುವ ಅವಕಾಶಗಳಿವೆ. ಅಂತೆಯೇ ಜಾನಪದ ಸಂಶೋಧಕರಿಗೆ (ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ) ರಾಜೀವಗಾಂಧಿ ಪೆಲೋಷಿಪ್ ಇದೆ. ಅಂತೆಯೇ ಆಂತರಿಕವಾಗಿ ವಿಶ್ವವಿದ್ಯಾಲಯಗಳಲ್ಲಿ ಎಂಪಿಲ್, ಪಿಹೆಚ್.ಡಿ ಸಂಶೋಧನೆಗೆ ಸಿಗುವ ಎಲ್ಲಾ ಬಗೆಯ ಅವಕಾಶಗಳೂ ಸಹಜವಾಗಿ ಜಾನಪದ ಸಂಶೋಧಕರಿಗೂ ಸಿಗುತ್ತವೆ. ಜಾನಪದ ಸಂಶೋಧನೆಗಾಗಿ ಈಚೆಗೆ ಜಾನಪದ ಅಕಾಡೆಮಿ ಒಂದು ಲಕ್ಷ ರೂಪಾಯಿಯ ಪೆಲೋಶಿಪ್ ಕೊಟ್ಟು ಅಧ್ಯಯನ ಮಾಡಿಸುವ ಯೋಜನೆಯೊಂದನ್ನು ತಂದಿದೆ. ಅದರ ಭಾಗವಾಗಿ ಈಗಾಗಲೇ ಐದು ಜನ ಯುವ ಜಾನಪದ ಆಸಕ್ತ ಸಂಶೋಧಕರಿಗೆ ಈ ಪೆಲೋಶಿಪ್ ನೀಡಲಾಗಿದೆ. ಇನ್ನೂ ರಾಷ್ಟ್ರಮಟ್ಟದಲ್ಲಿ ಜಾನಪದ ಸಂಶೋಧನೆಗಾಗಿ ವಿಪುಲ ಅವಕಾಶಗಳು, ಪೆಲೋಶಿಪ್‌ಗಳು ಇವೆ. ಆದರೆ ಅವುಗಳ ಮಾಹಿತಿಯ ಕೊರತೆ ನಮ್ಮಲ್ಲಿದೆ.

೪. ಜಾನಪದ ವಿಶ್ವವಿದ್ಯಾಲಯ ಆಗಿದೆ, ಈ ವಿವಿ ಯಿಂದ ನೀವು ಏನನ್ನು ನಿರೀಕ್ಷಿಸುವಿರಿ?


ಜಾನಪದ ವಿಶ್ವವಿದ್ಯಾಲಯ ಆಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿ. ಜರ್ಮನಿಯಲ್ಲಿ ಈಗಾಗಲೆ ಜಾನಪದ ವಿಶ್ವವಿದ್ಯಾಲಯ ಇದೆ. ಜಗತ್ತಿನಲ್ಲಿ ಇದು ಎರಡನೆಯ ಜಾನಪದ ವಿವಿ. ಈ ವಿವಿಯನ್ನು ತುಂಬಾ ಮುಂದಾಲೋಚನೆಯಿಂದ ರೂಪಿಸುವ ಅಗತ್ಯವಿದೆ. ಇತರೆ ಜಾನಪದ ವಿವಿಗಳಿಗಿಂತ ಇದು ತೀರಾ ಭಿನ್ನವಾದುದು. ಸಮಸ್ತ ಜನಸಮುದಾಯವನ್ನು ತಾಯ್ತನದಿಂದ ನೋಡುವ ಅಂತಃಕರಣದ ಮಾನವೀಯ ಗುಣ ಈ ವಿಶ್ವವಿದ್ಯಾಲಯಕ್ಕೆ ಬೇಕು. ತೀರಾ ಅಕಾಡೆಮಿಕ್ ಎನ್ನುವಂತಹ ಜನರ ಜತೆ ಸಂಪರ್ಕ ಕಡಿದುಕೊಂಡು ಜಡವಾಗುವ ಗುಣದಿಂದ ಇದು ದೂರ ಇರಬೇಕು. ಜಾನಪದ ವಿವಿ ಮೊದಲ ಆದ್ಯತೆಗಳ ಕೆಲಸದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ತನಕ ಜಾನಪದವನ್ನು ಒಂದು ಕಡ್ಡಾಯ ಪಠ್ಯವನ್ನು ಅಳವಡಿಸಿ, ಜನಪದ ಕಲಾವಿದರನ್ನು ಒಳಗೊಳ್ಳುವ ಹಾಗೆ ಪ್ರಾತ್ಯಕ್ಷಿಕೆ ಕೊಡಲು ಅನುವಾಗುವಂತಹ ಕೆಲಸ ಮಾಡಬೇಕು.

ಮುಖ್ಯವಾಗಿ ಜಾನಪದವನ್ನು ರಾಜಕಾರಣದ ಭಾಷೆಯನ್ನಾಗಿ ರೂಪಿಸಬೇಕಿದೆ. ಜಾನಪದ ಎಂದರೆ ಹಳೆಯದು ಎನ್ನುವ ಗತಕಾಲದ ವ್ಯಾಖ್ಯಾನಕ್ಕೆ ಕಟ್ಟು ಬೀಳದೆ, ಈ ಕಾಲದ ಹೊಟ್ಟೆಯೊಳಗಿಂದ ಹೊಸ ಜಾನಪದ ಹುಟ್ಟುತ್ತದೆ, ಅದನ್ನು ಸಹ ಗ್ರಹಿಸುವ ಮನಸ್ಥಿತಿ ಜಾನಪದ ವಿವಿಗೆ ಇರಬೇಕಾಗುತ್ತದೆ. ಮುಖ್ಯವಾಗಿ ಜನಪದರ ಜ್ಞಾನವನ್ನು ಮಾತ್ರ ಗೌರವಿಸಿ, ಅವರ ಬದುಕನ್ನು ಕಡೆಗಣಿಸುವ ಅಮಾನವೀಯ ಜಾನಪದ ಅಧ್ಯಯನ ವಿಧಾನಗಳಿಂದ ಈ ವಿವಿ ಮುಕ್ತವಾಗಬೇಕು. ಜಾನಪದ ಕಲಾವಿದರನ್ನು ಸಮಾಜ ಗೌರವಿಸುವಂತಹ, ಮತ್ತು ಸ್ವತಃ ಜನಪದ ಕಲಾವಿದರು ಗೌರವಯುತವಾಗಿ ಬದುಕುವಂತಹ ವಾತಾವರಣವನ್ನು ಈ ವಿವಿ ನಿರ್ಮಿಸಲು ಪ್ರಯತ್ನಿಸಬೇಕು. ಮುಖ್ಯವಾಗಿ ಆನ್ವಯಿಕ ಜಾನಪದದ ಆಲೋಚನೆ ಈ ವಿವಿಯ ಆಂತರ್ಯದ ತಾತ್ವಿಕತೆಯಾಗಬೇಕು. ಜನಪದರ ತಿಳುವಳಿಕೆಯ ಕಣ್ಣೋಟದಿಂದ ಈ ರಾಜ್ಯದ ಚರಿತ್ರೆಯನ್ನು, ಆಲೋಚನ ಕ್ರಮವನ್ನು, ವರ್ತಮಾನವನ್ನು ಗ್ರಹಿಸುವಂತೆ ತಿಳುವಳಿಕೆಯ ಕ್ರಮವನ್ನು ಬದಲಾಯಿಸುವ ಮಹತ್ವದ ಜವಾಬ್ದಾರಿ ಈ ವಿವಿಯ ಮೇಲಿದೆ.

೫. ಜಾನಪದ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳೇನು?

ನಾನು ಮೂಲತ: ಜಾನಪದದಲ್ಲಿನ ಆಸಕ್ತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ ಎ ಮಾಡಿದೆ. ಜಾನಪದದಲ್ಲಿ ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವ ಆಸೆಯಿಂದ, ‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’ ಎನ್ನುವ ವಿಷಯವಾಗಿ ೧೯೫೦ ರಿಂದೀಚೆಗೆ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳ ತಾತ್ವಿಕ ನೆಲೆಗಳನ್ನು ಕುರಿತ ಪಿ.ಹೆಚ್.ಡಿ ಮಾಡಿದೆ. ಈ ಕಾರಣಕ್ಕಾಗಿ ಕನ್ನಡ ಜಾನಪದವನ್ನು ಹೆಚ್ಚು ಓದಿಕೊಳ್ಳಲು ಸಾದ್ಯವಾಯಿತು. ಈಗ ಜಾನಪದದ ಹೊಸ ನಡಿಗೆ ಬಗೆಗೆ ಸಂಶೋದನೆ ಮಾಡುತಿದ್ದೇನೆ. ನವ ಮೌಖಿಕತೆ ಕುರಿತಂತೆ ಕೆಲಸ ಮಾಡುತ್ತಿದ್ದೇನೆ. ಅದರ ಭಾಗವಾಗಿ ಅಂತರ್ಜಾಲದಲ್ಲಿ ‘ಕನ್ನಡ ಜಾನಪದ’ ಎನ್ನುವ ಬ್ಲಾಗ್ ನಿರ್ವಹಿಸುತಿದ್ದೇನೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಈಚೆಗೆ ಕರ್ನಾಟಕದ ಜನಪದ ಹನುಮ ಪರಂಪರೆ ಬಗ್ಗೆ ಕ್ಷೇತ್ರಕಾರ್ಯ ನಡೆಸುತಿದ್ದೇನೆ. ಸದ್ಯಕ್ಕೆ ಜಾನಪದವನ್ನು ನನ್ನ ಆಸಕ್ತಿ ಕ್ಷೇತ್ರವನ್ನಾಗಿಸಿಕೊಂಡು ಇನ್ನು ಹೆಚ್ಚೆಚ್ಚು ಕೆಲಸ ಮಾಡುವ ಒತ್ತಾಸೆಯಿದೆ

Folk U Band - Live Feb 2011

ಮುಗುಚಿ ಬಿದ್ದ ಹಂಪಿಯ ಅಕ್ಕ ತಂಗೇರ ಕಲ್ಲುಗಳು : ಅದರ ಸುತ್ತ ಹುಟ್ಟಿದ ಜನಪದ ಕತೆಗಳು.




-ಅರುಣ್



ಕಮಲಾಪುರ ಮಾರ್ಗವಾಗಿ ಹಂಪಿಗೆ ಹೋಗುವಾಗ, ದಾರಿಯಲ್ಲಿ ಎರಡು ಬೃಹತ್ ಬಂಡೆಗಳು ಒಂದಕ್ಕೊಂದು ಆಸರೆಯಾಗಿ ನಿಂತಂತೆ ಕಾಣುತ್ತವೆ. ಅವುಗಳನ್ನು ಹಂಪಿ ಭಾಗದಲ್ಲಿ ಅಕ್ಕತಂಗೇರ ಬಂಡಿ ಎಂದು ಕರೆಯುತ್ತಾರೆ. ಅವುಗಳು ಅಕ್ಕತಂಗಿಯರು ಅನೋನ್ಯವಾಗಿರುವ ಸಂಬಂಧಕ್ಕೆ ರೂಪಕವಾಗಿ ಈ ಬಂಡೆಗಳ ಬಗ್ಗೆ ಅನೇಕ ಜನಪದ ಕಥೆಗಳಿವೆ. ಆ ಎರಡು ಬಂಡಿಗಳಲ್ಲಿ ಒಂದು ಬಂಡಿ 9.3.2011 ರಂದು ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸೀಳಿ ಅದರ ಒಂದು ಭಾಗ ಮುಗುಚಿ ಬಿದ್ದಿದೆ. ಇದು ಹಂಪಿ ಭಾಗದಲ್ಲಿ ದೊಡ್ಡ ಸುದ್ದಿಯಾಗಿದೆ. ಇದಕ್ಕೆ ಪೂರಕವಾದ ಅನೇಕ ಕಥೆಗಳು ಹುಟ್ಟಿವೆ.

ಈ ಅಕ್ಕ ತಂಗೇರ ಬಂಡಿಯ ಬಗ್ಗೆ ಜನಪದರಲ್ಲಿ ಇರುವ ಕಥನಗಳು ಹೀಗಿವೆ.

ಒಂದು- ವಿಜಯ ನಗರ ಸಾಮ್ರಾಜ್ಯವನ್ನು ಮೊದಲು ಸ್ಥಾಪಿಸುವಾಗ ಮೊದಲು ಈ ಎರಡು ಬೃಹತ್ ಕಲ್ಲುಗಳನ್ನು ನಿಲ್ಲಿಸಿದರಂತೆ, ಅವಕ್ಕೆ ಅಕ್ಕ ತಂಗಿ ಕಲ್ಲುಗಳೆಂದು ನಾಮಕರಣ ಮಾಡಿದರಂತೆ, ಈ ಎರಡೂ ಕಲ್ಲುಗಳು ಎಲ್ಲಿಯವರೆಗೂ ನಿಂತಿರುತ್ತವೆಯೋ ಅಲ್ಲಿಯತನಕ ವಿಜಯನಗರ ಸಾಮ್ರಾಜ್ಯ ವಿರಾಜಮಾನವಾಗಿ ಬೆಳಗುತ್ತದೆ ಎಂದು ನುಡಿದರಂತೆ ಎನ್ನುವ ನಂಬಿಕೆಯಿದೆ.

ಎರಡು- ಉಜ್ಜಯನಿ ರಾಜನ ಇಬ್ಬರು ಪರಾಕ್ರಮಿ ಹೆಣ್ಣುಮಕ್ಕಳು ಬೇಟೆಯಾಡುತ್ತಾ ಹಂಪಿಯ ಭಾಗಕ್ಕೆ ಬಂದರಂತೆ, ಆಗ ಹಂಪಿ ಪುಣ್ಯ ಕ್ಷೇತ್ರವಾಗಿತ್ತಂತೆ, ಆ ಪರಾಕ್ರಮಿ ಹೆಣ್ಣುಮಕ್ಕಳಿಬ್ಬರು ಹಂಪಿಯ ಬಗ್ಗೆ ಗೇಲಿ ಮಾಡಿ ನಕ್ಕರಂತೆ, ಅವರ ಗರ್ವ ಮುರಿಯಲೆಂದು ವಿರೂಪಾಕ್ಷನು ಅವರಿಬ್ಬರನ್ನು ಕಲ್ಲಾಗುವಂತೆ ಮಾಡಿದನಂತೆ.

ಮೂರು- ಇಬ್ಬರು ಹೆಣ್ಣುಮಕ್ಕಳು ಹಂಪಿ ನೋಡಲು ಬಂದರಂತೆ, ನೋಡುತ್ತಾ ನೋಡುತ್ತಾ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಬಂದಾಗ ದಡೂತಿ ದೇಹದ ಗಂಡಸೊಬ್ಬ ಈ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಅವರಿಬ್ಬರ ಮೇಲೆರಗಿದನಂತೆ, ಅವರು ವಿಧಿಯಿಲ್ಲದೆ ಕಿರುಚಿಕೊಂಡರಂತೆ ಆಗ ಅವರು ಆ ದಡೂತಿ ದೇಹದ ಮನುಷಷ್ಯನಿಂದ ಅತ್ಯಾಚಾರಕ್ಕೆ ಬಲಿಯಾಗಿ ಮಾನಗೇಡಿಗಳಾಗುವುದಕ್ಕಿಂತ ಕಲ್ಲಾಗುವುದೇ ಲೇಸು ಎಂದು ಬಗೆದು ಕಲ್ಲಾದರಂತೆ.



ಇಂತಹ ಇನ್ನಷ್ಟು ಕತೆಗಳು ಪ್ರಚಲಿತದಲ್ಲಿವೆ. ಪುರುಷೋತ್ತಮ ಬಿಳಿಮಲೆ ಮತ್ತು ಚಲುವರಾಜು ಅವರು ಸಂಪಾದಿಸಿದ ಹಂಪಿ ಜಾನಪದ ಎನ್ನುವ ಪುಸ್ತಕದಲ್ಲಿ ಇದರ ಪಠ್ಯಗಳನ್ನು ನೋಡಬಹುದು. ಈ ಕಲ್ಲುಗಳ ಬಗ್ಗೆ ಹಂಪಿ ಪರಿಸರದ ಹೆಣ್ಣುಮಕ್ಕಳಲ್ಲಿ ಭಾವನಾತ್ಮಕ ಸಂಬಂಧವೂ ಇದ್ದಂತಿದೆ. ಈಗ ಅಕ್ಕತಂಗೇರ ಬಂಡಿ ಬಿದ್ದಿದೆ ಎನ್ನುವ ಸುದ್ದಿ ಗೊತ್ತಾಗುತ್ತಿದ್ದಂತೆಯೇ ಹಂಪಿ ಸುತ್ತಮುತ್ತಲ ಹಳ್ಳಿಗಳ ಜನ ತಂಡೋಪತಂಡವಾಗಿ ನೋಡಲು ಬರುತ್ತಿದ್ದಾರೆ. ಈ ಕಲ್ಲುಗಳ ಬಗ್ಗೆ ವಿಚಿತ್ರವಾದ ಅನುಕಂಪವೂ, ಅಯ್ಯೋ ಎನ್ನುವ ಭಾವನಾತ್ಮಕ ಉದ್ಘಾರವೂ ನೋಡಲು ಬಂದವರಲ್ಲಿ ವ್ಯಕ್ತವಾಗುತ್ತಿದೆ. ಹಾಗೆಯೇ ಈ ಕಲ್ಲು ಬಿದ್ದ ಬಗ್ಗೆಯೂ ಅನೇಕ ಕಥನಗಳು ಹುಟ್ಟಿಕೊಳ್ಳುತ್ತಿವೆ.


ಹಾಗೆ ಹುಟ್ಟಿಕೊಂಡ ಕಥನಗಳಲ್ಲಿ ಕೆಲವು ಹೀಗಿವೆ. ಒಂದು: ಇದು ಕೇಡನ್ನು ಸೂಚಿಸುತ್ತದೆ, ಈ ಭಾಗದಲ್ಲಿ ದೊಡ್ಡದಾದ ಕೇಡು ಕಾದಿದೆ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಎರಡು: ಈ ಕಲ್ಲು ಬಿದ್ದ ಕಾರಣ ಪ್ರಳಯದ ಮುನ್ಸೂಚನೆ ಕಾಣಿಸಿಕೊಂಡಿದೆ ಇನ್ನು ಪ್ರಳಯವಾಗುವುದು ಖಚಿತ ಎನ್ನುವುದು ಕೆಲವರ ನಂಬಿಕೆ. ಮೂರು: ತಂಗಿಯ ಆಯಸ್ಸು ಮುಗಿದಿದೆ, ಅಕ್ಕನ ಆಯಸ್ಸು ಇನ್ನು ಗಟ್ಟಿ ಇದೆ. ಹಾಗಾಗಿ ತಂಗಿ ತನ್ನ ಆಯಸ್ಸು ಮುಗಿದಿದೆ ಎಂದು ತೋರಿಸಿಕೊಟ್ಟಿದ್ದಾಳೆ ಎಂಬ ನಂಬಿಕೆ ಇದೆ. ನಾಲ್ಕು: ಈ ಕಲ್ಲಿನ ಆಕಾರದಲ್ಲಿ ಅಕ್ಕನನ್ನು ತಂಗಿ ಹೊತ್ತುಕೊಂಡಂತಿದೆ, ಹಾಗಾಗಿ ತಂಗಿ ಮುನಿಸಿಕೊಂಡು ಇನ್ನೆಷ್ಟು ದಿನ ನಾ ಹೊತ್ತಿರಲಿ ಎಂದು ತಂಗಿ ಅಕ್ಕನ ಮೇಲೆ ಬೇಸರವಾಗಿ ಮೈಕೊಡವಿದ್ದಾಳೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.



ಈ ಬಗೆಯ ಜನಪದ ನಂಬಿಕೆಗಳ ಆಚೆಗೆ ನಿಂತು ನೋಡುವುದಾದರೆ, ಈ ಎರಡು ಬೃಹತ್ ಕಲ್ಲುಗಳು ನೈಸರ್ಗಿಕವಾಗಿ ನಿಂತಂತವು. ಹೀಗೆ ನಿಂತ ಕಾರಣಕ್ಕೇ ಈ ಬಗೆಯ ಕಥನಗಳು ಹುಟ್ಟಿರಲಿಕ್ಕೆ ಸಾಧ್ಯವಿದೆ. ಅಂತೆಯೇ ಇಂತಹ ಬೃಹತ್ ಬಂಡೆಗಳು ಸೀಳಿ ಉದುರಲು ಮುಖ್ಯ ಕಾರಣ ಈ ಭಾಗದಲ್ಲಿ ನಡೆಯುತ್ತಿರುವ ಮೈನಿಂಗ್ ಎನ್ನುವುದು ಎಲ್ಲರ ಅಭಿಪ್ರಾಯ. ಕಲ್ಲು ಮೈನಿಂಗ್ ನಲ್ಲಿ ಮದ್ದನ್ನು ಇಟ್ಟು ಸಿಡಿಸುತ್ತಾರೆ, ಈ ಮದ್ದು ಸಿಡಿಯುವ ಹೊತ್ತಿಗೆ ನೆಲ ಅದುರುತ್ತದೆ. ಅದರಲ್ಲೂ ಹಂಪಿ ಭಾಗದಲ್ಲಿ ಪ್ರಾಚೀನ ಅವಶೇಷಗಳು ಇರುವ ಕಾರಣ ಅವುಗಳೂ ಸಹಜವಾಗಿ ಅದುರುತ್ತವೆ. ಇದರ ಪರಿಣಾಮ ಅಕ್ಕತಂಗಿಯರ ಬಂಡೆಯ ಮೇಲಾಗಿದೆ. ಹಾಗಾಗಿ ಸರಕಾರ ಹಂಪಿಗೆ ಸುತ್ತಮುತ್ತಲು ನಡೆಯುತ್ತಿರುವ ಮೈನಿಂಗ್ ನ್ನು ನಿಲ್ಲಿಸುವುದು ಒಳಿತು.

ಸೋಮವಾರ, ಮಾರ್ಚ್ 7, 2011

ಜನಪದ ಕಸುಬು-೧ ಚಳ್ಳಕೆರೆಯ ಕಂಬಳಿ ಉದ್ಯಮ

-ಅರುಣ್ ಜೋಳದಕೂಡ್ಲಿಗಿ


(ಗಾಂಧೀಜಿ ಜನಪದರ ವೃತ್ತಿಕಸಬುಗಳನ್ನೇ ಆಧರಿಸಿದ ಪುಟ್ಟ ಪುಟ್ಟ ಕೈಗಾರಿಗೆಗಳನ್ನು ಅಭಿವೃದ್ದಿ ಪಡಿಸುವ ಗುಡಿ ಕೈಗಾರಿಕೆಗಳ ಕಲ್ಪನೆಯನ್ನು ಕೊಟ್ಟರು. ಈ ಮೂಲಕ ಜನಸಾಮಾನ್ಯರು ಸ್ವಾವಲಂಬಿಗಳಾಗಿ ಬದುಕುವ ಕನಸು ಕಂಡಿದ್ದರು. ಆದರೆ ಇಂದು ಜನಪದರ ಕಸಬು ಕೆಲವು ಕಳೆದೇ ಹೋದವು. ಕಾರಣ ಅವುಗಳು ವರ್ತಮಾನದ ಜತೆ ಸಾವಯವ ಸಂಬಂಧ ಕಡಿದುಕೊಂಡು ಪರಕೀಯ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು. ಇಷ್ಟೆಲ್ಲದರ ನಡುವೆ ಇನ್ನೂ ಅನೇಕ ಜನಪದ ಕುಲಕಸಬುಗಳು ಜೀವಂತವಾಗಿವೆ. ಆದರೆ ಅವುಗಳು ಪಡೆದ ವ್ಯಾಪಕ ವಿಸ್ತಾರವನ್ನು ಕಡಿದುಕೊಂಡು ಒಂದು ಸಣ್ಣ ವಲಯದಲ್ಲಿ ಜೀವಿಸುತ್ತಿವೆಯಷ್ಟೆ. ಅದನ್ನು ಗುರುತಿಸಿ ಅದರ ವಲಯದ ವ್ಯಾಪ್ತಿಯನ್ನು ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ವಿಸ್ತರಿಸಬೇಕಿದೆ. ಅಂತಹ ಜನಪದರ ಕಸಬುಗಳನ್ನು ಕನ್ನಡ ಜಾನಪದ ಬ್ಲಾಗ್ ನಲ್ಲಿ ಸರಣಿಯಾಗಿ ಪರಿಚಯಿಸುವ ಪ್ರಯತ್ನ ಮಾಡಲಾಗುವುದು. ಇಲ್ಲಿ ಮುಖ್ಯವಾಗಿ ಆಯಾ ಕಸಬು ಯಾವ ಸ್ಥಿತಿಯಲ್ಲಿ ಮುಂದುವರಿಯುತ್ತಿದೆ. ಅದನ್ನು ನಂಬಿದ ಜನರ ಬದುಕು ಹೇಗಿದೆ? ಈ ಕಸುಬಿಗೆ ಮರುಜೀವ ತುಂಬಲು ಅದನ್ನು ನಂಬಿದವರು ನಿರೀಕ್ಷಿಸುವುದೇನು? ಅದರ ಬಳಕೆಯ ವಲಯವನ್ನು ಹೆಚ್ಚಿಸಿ ಆಯಾ ಕಸಬಿಗೆ ಮರುಜೀವ ನೀಡುವ ಸಾದ್ಯತೆಗಳೇನು? ಮುಂತಾದ ಅಂಶಗಳನ್ನು ಈ ಸರಣಿಯ ಬರಹ ಒಳಗೊಂಡಿರುತ್ತದೆ)



ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಭಾಗದಲ್ಲಿ ಕಂಬಳಿ ನೇಯುವ ಜನಪದ ಕಸಬು ಜೀವಂತವಾಗಿದೆ. ಇಂದು ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿಯೂ ಕಂಬಳಿ ನೇಯ್ಗೆ ಇದೆ. ಆದರೆ ಅದರ ಪ್ರಮಾಣ ಮೊದಲಿಗಿಂತ ಈಗ ಕಡಿಮೆಯಾಗುತ್ತಾ ಸಾಗುತ್ತಿದೆ. ಇದು ಮೂಲತಃ ಕುರಿಸಾಕಣೆಗೆ ಹೊಂದಿಕೊಂಡಂತಹ ಉಪಕಸಬು. ಕುರಿಯ ಕೂದಲನ್ನು ಕತ್ತರಿಸಿ, ಆ ಕೂದಲಿನಿಂದ ನೂಲು ತೆಗೆದು, ಆ ನೂಲಿನಿಂದ ಕಂಬಳಿ ನೇಯುವುದು, ಆ ಕಂಬಳಿಯನ್ನು ಮಾರಾಟ ಮಾಡುವುದು ನಡೆಯುತ್ತದೆ. ಇಂದು ಕುರಿ ಸಾಕಣೆಯ ಪ್ರಮಾಣವೇ ಕಡಿಮೆಯಾಗುತ್ತಿರುವುದರಿಂದ ಸಹಜವಾಗಿ ಅದಕ್ಕೆ ಹೊಂದಿಕೊಂಡಂತಹ ಕಂಬಳಿ ನೇಯ್ಗೆಯೂ ಮೊದಲಿಗಿಂತ ಕಡಿಮೆಯಾಗಿದೆ. ಈ ನಡುವೆಯೂ ಚಳ್ಳಕೆರೆಯಲ್ಲಿ ಕಂಬಳಿ ಉದ್ಯಮ ಪ್ರತಿ ವಾರವೂ ಹತ್ತಾರು ಲಕ್ಷಗಳ ವಹಿವಾಟು ನಡೆಸುತ್ತಿದೆ. ಈ ಉದ್ಯಮವನ್ನು ನಂಬಿ ಈ ಭಾಗದ ನೂರಾರು ಹಳ್ಳಿಗಳ ಜನರು ಕಂಬಳಿ ನೇಯುವ ಕುಲಕಸಬಿನಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಒಂದು ನೋಟ ಇಲ್ಲಿದೆ.



ಚಳ್ಳಕೆರೆಯ ಸಂತೆಪೇಟೆಯ ಕಂಬಳಿಕಟ್ಟೆ ಎನ್ನುವ ಪ್ರದೇಶದಲ್ಲಿ ಪ್ರತಿ ಭಾನುವಾರ ಕಂಬಳಿಸಂತೆ ನಡೆಯುತ್ತದೆ. ಇಲ್ಲಿಗೆ ಸುತ್ತಮುತ್ತಲ ಹಳ್ಳಿಗಳಿಂದ ಕುರಿಗಾರರು, ರೈತರು, ನೇಕಾರರು ತಾವು ನೇಯ್ದು ತಂದ ಕಂಬಳಿಗಳನ್ನು ಮಾರಾಟ ಮಾಡುತ್ತಾರೆ. ಕಂಬಳಿಯನ್ನು ಕೊಳ್ಳಲು ಆಂದ್ರ, ಮಹಾರಾಷ್ಟ್ರ, ಹಿಮಾಲಯ, ಕಾಶ್ಮೀರ ಭಾಗದಿಂದಲೂ ವ್ಯಾಪಾರಸ್ತರು ಬರುತ್ತಾರೆ. ವಿಪರ್ಯಾಸ ಅಂದರೆ ಕಂಬಳಿಯ ಬಳಕೆ ಈ ಭಾಗದಲ್ಲಿಯೇ ಕಡಿಮೆಯಾಗಿದೆ. ಹಿಮಾಲಯ ಕಾಶ್ಮೀರ ಮುಂತಾದ ಹಿಮ ಚಳಿ ಹೆಚ್ಚಿರುವ ಭಾಗದಲ್ಲಿ ಕಂಬಳಿಗೆ ದೊಡ್ಡ ಬೇಡಿಕೆ ಇದೆ.



ನೇಕಾರರು ಸಂತೆ ಕಂಬಳಿಯನ್ನು ಎರಡು ದಿನಕ್ಕೆ ಒಂದರಂತೆ ನೇಯ್ದರ, ನೈಸ್ ಕಂಬಳಿಯನ್ನು ವಾರಕ್ಕೆ ಒಂದರಂತೆ ನೇಯುತ್ತಾರೆ. ಒಂದು ಕಂಬಳಿಗೆ ೩೫೦ ರೂಪಾಯಿಗಳಿಂದ ಆರಂಭವಾಗಿ, ೨೦೦೦ ರೂಪಾಯಿಗಳ ತನಕ ತಾರಾವರಿ ಬೆಲೆ ಇದೆ .ಈ ಬೆಲೆಯು ಆಯಾ ಕಂಬಳಿಯ ಗುಣಮಟ್ಟ ಮತ್ತು ಕಂಬಳಿಗೆ ಬಳಸಿದ ಹುಣ್ಣೆಯ ಗುಣಮಟ್ಟವನ್ನು ಆಧರಿಸಿರುತ್ತದೆ. ಸಂತೆ ಕಂಬಳಿ ಒರಟಾಗಿದ್ದರೆ, ನೈಸ್ ಕಂಬಳಿ ತುಂಬಾ ನಯವಾಗಿಯೂ ತೆಳ್ಳಗೂ ಇರುತ್ತದೆ. ಆಧುನಿಕ ಕಾಲಮಾನಕ್ಕೆ ಒಪ್ಪುವಂತೆ ನಯವಾದ ಕಂಬಳಿಯನ್ನು ನೇಯುವ ಬದಲಾವಣೆಯೂ ಈ ನೇಯ್ಗೆಯಲ್ಲಿ ಆಗಿದೆ. ಈ ಕಂಬಳಿ ಸಂತೆಯಲ್ಲಿ ಕೇವಲ ಕಂಬಳಿ ಮಾತ್ರ ಮಾರಾಟವಾಗುವುದಿಲ್ಲ, ಅದಕ್ಕೆ ಹೊಂದಿಕೊಂಡಂತೆ ಹುಣ್ಣೆ, ಮತ್ತು ಕಂಬಳಿ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಮಾರಾಟವೂ ನಡೆಯುತ್ತದೆ.




ಕುರಿಗಾರಿಕೆ ಮತ್ತು ಕಂಬಳಿ ನೇಯ್ಗೆಯಲ್ಲಿ ಇಲ್ಲಿನ ಹಲವಾರು ಸಮುದಾಯಗಳು ಭಾಗಿಯಾಗಿವೆ. ಪ್ರಮುಖವಾಗಿ ಇದರಲ್ಲಿ ಕುರುಬರು, ಗೊಲ್ಲರು, ಬೇಡರು, ಒಕ್ಕಲಿಗರ ಸಮುದಾಯಗಳಿವೆ. ಉಣ್ಣೆ ತೆಗೆಯುವುದು, ಹುಣ್ಣೆಯನ್ನು ಸ್ವಚ್ಚಗೊಳಿಸುವುದು, ನೂಲು ತೆಗೆಯುವುದು, ನೇಯುವುದರಲ್ಲಿ ಮಹಿಳೆಯರ ಭಾಗವಹಿಸುವಿಕೆ ದೊಡ್ಡ ಪ್ರಮಾಣದಲ್ಲಿ ದೆ. ಆದರೆ ಇದರ ಮಾರಾಟ, ವ್ಯವಹಾರದಲ್ಲಿ ಮಾತ್ರ ಮಹಿಳೆಯರ ಪಾತ್ರ ಶೂನ್ಯ. ಕಂಬಳಿಯ ವ್ಯಾಪಾರದಲ್ಲಿ ಪುರುಷ ಪ್ರಧಾನತೆಯೇ ಎದ್ದು ಕಾಣುತ್ತದೆ. ಕುರಿಯವರಿಂದ ನೇಕಾರರು ಕುರಿಯ ಹುಣ್ಣೆಯನ್ನು ಕತ್ತರಿಸಿಕೊಂಡು ಬಂದು, ಅದಕ್ಕೆ ಬದಲಿಯಾಗಿ ಕುರಿಯವರಿಗೆ ಕಂಬಳಿಯನ್ನು ಕೊಡುವ ಪದ್ದತಿ ಇದೆ. ಈಗೀಗ ಕುರಿಯ ಹುಣ್ಣೆ ಕತ್ತರಿಸಲು ಕುರಿಯವರೇ ನೇಕಾರರಿಗೆ ಒಂದು ಕುರಿಗೆ ಎರಡು ರೂಪಾಯಿಯನ್ನು ಈಗ ಕೊಡುತ್ತಾರೆ. ಸ್ವಚ್ಚಗೊಂಡ ಒಂದು ಮಣ ಹುಣ್ಣೆಗೆ ೩೫೦ ರಿಂದ ೪೦೦ ರೂಗಳವರೆಗೆ ಬೆಲೆ ಇದೆ.

ಈ ಕಂಬಳಿ ಉದ್ಯಮವನ್ನು ಆಧರಿಸಿಯೇ ಇಲ್ಲಿ ಸರಕಾರ ‘ಉಣ್ಣೆ ಉತ್ಪಾದನಾ ಮಾರಾಟ ಸಹಕಾರ ಮಹಾ ಮಂಡಳ’ ವನ್ನು ಸ್ಥಾಪಿಸಿದೆ. ಈ ಮಂಡಳಿ ನೇಕಾರರಿಗೆ ಹುಣ್ಣೆಯನ್ನು ಮಾರಾಟ ಮಾಡುತ್ತದೆ, ಅಂತೆಯೇ ಕಂಬಳಿಯನ್ನು ಕೊಳ್ಳುವ ಮತ್ತು ಮಾರುವ ಕೆಲಸಕ್ಕೆ ಸಹಕಾರವನ್ನೂ, ಕಂಬಳಿಗೆ ಪೂರಕವಾದ ಸಾಲ ಸೌಲಭ್ಯಗಳನ್ನೂ ಒದಗಿಸುತ್ತದೆ. ಆದರೆ ಅದು ಇನ್ನೂ ಹೆಚ್ಚು ಕ್ರಿಯಾಶೀಲವಾಗಿ ನೇಕಾರರಿಗೆ ಸ್ಪಂದಿಸಿದಂತೆ ಕಾಣುವುದಿಲ್ಲ. ಇಲ್ಲಿ ಕಂಬಳಿಯನ್ನು ಆಧರಿಸಿದ ದೊಡ್ಡ ಆಚರಣ ಪರಂಪರೆಯೇ ಇದೆ. ಇದರಲ್ಲಿ ಸ್ವಲ್ಪ ಬದಲಾವಣೆಯಾಗಿದೆಯಾದರೂ ಅದರ ಸಾಂಪ್ರದಾಯಿಕ ನಂಬಿಕೆಯ ಲೋಕದಲ್ಲಿ ಅಷ್ಟು ಬದಲಾವಣೆ ಆದಂತಿಲ್ಲ. ಈ ಕಂಬಳಿ ನೇಯ್ಗೆಯ ಉದ್ಯಮದಲ್ಲಿ ಯುವ ಜನತೆಯನ್ನು ಆಕರ್ಷಿಸುವಂತಹ ಗುಣ ಕಡಿಮೆ. ಅದರಲ್ಲೂ ವಿದ್ಯಾವಂತ ಯುವ ಜನತೆ ಈ ಕಂಬಳಿ ನೇಯ್ಗೆ ಉದ್ಯಮದ ಕಡೆ ಬರುವಂತಹ ವಾತಾವರಣ ಸೃಷ್ಟಿಯಾಗಬೇಕಿದೆ. ಅಥವಾ ನಗರಗಳತ್ತ ವಲಸೆ ಹೋಗುವ ಯುವಕರನ್ನು ಕಂಬಳಿ ಉದ್ಯಮದಲ್ಲಿ ತೊಡಗಿಕೊಳ್ಳುವಂತಹ ವಾತಾವರಣ ಸೃಷ್ಟಿ ಮಾಡುವಂತಹ ಯೋಜನೆಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ. ಹಾಗಾದಲ್ಲಿ ಈ ಕಂಬಳಿ ಉದ್ಯಮವನ್ನು ಮತ್ತಷ್ಟು ಬೆಳೆಸುವ ಸಾಧ್ಯತೆಗಳಿವೆ.