ಬುಧವಾರ, ಮಾರ್ಚ್ 9, 2011

ಸಂಯುಕ್ತ ಕರ್ನಾಟಕ ‘ಚೇತನ’ ಪುರವಣಿಯ ‘ಈ ಸಂಭಾಷಣೆ’

೧೦.೦೩.೨೦೧೧ ರ ಸಂಯುಕ್ತ ಕರ್ನಾಟಕ ಪತ್ರಿಕೆಯ ವಿಶೇಷ ಪುರವಣಿ ‘ಚೇತನ’ ದ ಈ ಸಂಭಾಷಣೆ ಕಾಲಂ ನಲ್ಲಿ ಪಲ್ಲವಿ ಪಾಟೀಲ ಸೇಡಂ ಅವರು ನನ್ನ ಸಂದರ್ಶನ ಮಾಡಿದ್ದಾರೆ. ಅವರು ನನ್ನನ್ನು ಗುರುತಿಸಿದ್ದು ಕನ್ನಡ ಜಾನಪದ ಬ್ಲಾಗ್ ಮೂಲಕ. ಹಾಗಾಗಿ ಪಲ್ಲವಿ ಅವರಿಗೆ ಕೃತಜ್ಞತೆಗಳು. ಈ ಸಂದರ್ಶನ ಮುಖ್ಯವಾಗಿ ಜಾನಪದದ ಬಗ್ಗೆಯೇ ಆಗಿರುವುದರಿಂದ ಈ ಸಂದರ್ಶನದ ಭಾಗವನ್ನು ಕನ್ನಡ ಜಾನಪದ ಬ್ಲಾಗ್ ನಲ್ಲೂ ಪ್ರಕಟಿಸಲಾಗಿದೆ



೧. ಜನಪದ, ಜನಪದ ಸಾಹಿತ್ಯ ಎಂದರೇನು? ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ ಹೇಗಾಯಿತು?

ಈ ಪ್ರಶ್ನೆಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವುದು ಕಷ್ಟ. ಕೆಲವು ಮುಖ್ಯ ಸಂಗತಿಗಳನ್ನು ಗುರುತಿಸಬಹುದಷ್ಟೆ. ಜನಪದ ಎಂದರೆ ಹಲವು ವ್ಯಾಖ್ಯಾನಗಳಿವೆ. ಅವು ಕಾಲಾನಂತರದಲ್ಲಿ ಬದಲಾಗಿವೆ ಕೂಡ. ಜನಸಾಮಾನ್ಯರ ಪರಂಪರೆಯ ಜ್ಞಾನವೇ ಜಾನಪದ ಎನ್ನುವುದರಿಂದ, ಯಾವುದೇ ಒಂದು ಜನರ ಸಮಾನ ಗುಂಪಿನಲ್ಲಿ ಇರಬಹುದಾದ ನಂಬಿಕೆ, ಆಚರಣೆ, ಪರಂಪರೆಯ ಜ್ಞಾನವೇ ಜಾನಪದ ಎನ್ನುವ ತನಕ ಅದರ ವ್ಯಾಖ್ಯಾನ ಗಳು ಬದಲಾಗಿವೆ. ಜನಪದ ಎಂದರೆ ಜಾನಪದದ ಒಂದು ಘಟಕ ಎಂತಲೂ, ಹಲವು ಜನಪದಗಳು ಸೇರಿ ಜಾನಪದ ಎಂತಲೂ ಕನ್ನಡದಲ್ಲಿ ಬಳಕೆಯಲ್ಲಿದೆ. ಜನಪದ ಸಾಹಿತ್ಯದ ಹುಟ್ಟು ಬೆಳವಣಿಗೆ, ಮನುಷ್ಯನ ಹುಟ್ಟು ಬೆಳವಣಿಗೆಯ ಜತೆ ಸಾವಯವ ಸಂಬಂಧವನ್ನು ಹೊಂದಿದೆ.

ಜಾನಪದ ಒಂದು ಅಧ್ಯಯನ ಶಿಸ್ತಾಗಿ ಬೆಳೆದದ್ದಕ್ಕೆ ಜಾಗತಿಕವಾಗಿ ಮತ್ತು ಭಾರತ, ಕರ್ನಾಟಕದಲ್ಲಿಯೂ ಬೇರೆ ಬೇರೆ ಹಂತಗಳಿವೆ. ೧೮೪೬ ರಲ್ಲಿ ಇಂಗ್ಲೇಂಡಿನ ಪ್ರಾಚೀನ ಅನ್ವೇಷಕ ಡಬ್ಲು.ಜೆ.ಥಾಮ್ಸ ‘ಪಾಪುಲರ್ ಎಂಟಿಕ್ವಿಟೀಸ್’ ಎನ್ನುವ ಪದಕ್ಕೆ ಸಂವಾದಿಯಾಗಿ ಮೊದಲು ‘ಪೋಕ್ ಲೋರ್’ ಎನ್ನುವ ಪದವನ್ನು ಬಳಸಿದ. ೧೯೬೬ ರಲ್ಲಿ ‘ಪೋಕ್ ಲೋರ್’ ಪದಕ್ಕೆ ಸಂವಾದಿಯಾಗಿ ಕನ್ನಡದಲ್ಲಿ ‘ಪೋಕ್’ ಎಂದರೆ ‘ಜನಪದ’ ಎಂತಲೂ, ‘ಪೋಕ್ ಲೋರ್’ ಎಂದರೆ ‘ಜಾನಪದ’ ಎಂತಲೂ ಹಾ.ಮಾ. ನಾಯಕ ಅವರು ಬಳಸಿದರು. ಕನ್ನಡದಲ್ಲಿ ಜಾನಪದ ಅಧ್ಯಯನವನ್ನು ಕಟ್ಟಿಬೆಳೆಸಿದ ಹಲವು ಮಹನೀಯರಿದ್ದಾರೆ. ಅದರಲ್ಲಿ ಜಿ.ಶಂ.ಪರಮಶಿವಯ್ಯ ಅವರ ಶ್ರಮ ಕರ್ನಾಟಕದ ಮಟ್ಟಿಗೆ ನೆನಪಿಟ್ಟುಕೊಳ್ಳುವಂತದ್ದು. ಇನ್ನು ಜಾನಪದ ಅಧ್ಯಯನಗಳ ಚರಿತ್ರೆ ತುಂಬಾ ದೊಡ್ಡದಿದೆ ಇಲ್ಲಿ ಉತ್ತರಿಸುವುದು ಕಷ್ಟ.

೨. ಜನಪದ ಸಾಹಿತ್ಯ ಅಧ್ಯಯನ ಮಾಡಿದವರಿಗೆ ಉದ್ಯೋಗವಕಾಶಗಳು ಇವೆಯಾ?


ಜನಪದ ಸಾಹಿತ್ಯ ಅಧ್ಯಯನದಲ್ಲಿ ಎರಡು ವಿಧಗಳಿವೆ. ಕನ್ನಡ ಎಂಎ ನಲ್ಲಿ ಜಾನಪದವನ್ನು ಐಚ್ಚಿಕ ವಿಷಯವಾಗಿ ಓದುವುದು. ಇದನ್ನು ಕನ್ನಡ ಎಂ.ಎ ಎಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಅದಕ್ಕಿರುವ ಉದ್ಯೋಗಾವಕಾಶಗಳು ಅನ್ವಯವಾಗುತ್ತವೆ. ಎರಡನೆಯದು ಜಾನಪದವನ್ನೇ ಪ್ರತ್ಯೇಕವಾಗಿ ಎಂ.ಎ ಮಾಡುವ ಅವಕಾಶ ಇದೆ. ಹೀಗೆ ಜಾನಪದ ಎಂ.ಎ ಮಾಡಿದವರು ಪಿಯು ಅಧ್ಯಾಪಕರಾಗಬಹುದು. ಜಾನಪದ ವಿಷಯವಾಗಿ ಪಿಹೆಚ್ ಡಿ ಮಾಡಲು ಅವಕಾಶವಿದೆ. ಜಾನಪದ ಕುರಿತಂತೆ ಡಿಪ್ಲೊಮಾ ಕೋರ್ಸುಗಳಿವೆ. ಇವುಗಳಿಗೆ ಪೂರಕವಾದ ಉದ್ಯೋಗವಕಾಶಗಳು ಇನ್ನು ಸೃಷ್ಟಿಯಾಗಬೇಕಿದೆ. ಈಚೆಗೆ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಹುದ್ದೆಗೆ ಜಾನಪದ ಎಂ.ಎ ಯನ್ನು ಪರಿಗಣಿಸುತ್ತಿಲ್ಲ , ಇದೊಂದು ಅವೈಜ್ಞಾನಿಕ ಕ್ರಮ. ಏಕೆಂದರೆ ಯುಜಿಸಿ ಯಲ್ಲಿ ಇವೆರಡೂ ಪ್ರತ್ಯೇಕ ವಿಷಯಗಳು, ಆದರೆ ಕರ್ನಾಟಕದಲ್ಲಿ ಜಾನಪದ ಮತ್ತು ಕನ್ನಡವನ್ನು ಒಂದೇ ಎಂದು ಪರಿಗಣಿಸಲಾಗುತ್ತಿದೆ. ಆ ಕಾರಣಕ್ಕೆ ಕನ್ನಡ ಅಧ್ಯಾಪಕರ ಆಯ್ಕೆಯಲ್ಲಿ ಶೇಕಡವಾರು ಇಂತಿಷ್ಟು ಜಾನಪದ ಎಂ.ಎ ಮಾಡಿದವರನ್ನು ಆಯ್ಕೆ ಮಾಡುವುದು ನ್ಯಾಯಯುತವಾದುದು. ಈ ಕುರಿತು ಜಾನಪದ ವಿದ್ವಾಂಸರು, ಜಾನಪದ ಅಕಾಡೆಮಿ ಅಧ್ಯಕ್ಷರು, ಜಾನಪದ ವಿವಿಯ ವಿಶೇಷಾಧಿಕಾರಿಗಳು ಒಟ್ಟಾಗಿ ಸರಕಾರದ ಗಮನಸೆಳೆಯುವ ಅಗತ್ಯವಿದೆ.



೩. ಜನಪದ ಸಂಶೋಧಕರಿಗೆ ಸರಕಾರದಿಂದ ದೊರೆಯುವ ಅವಕಾಶಗಳು, ಫೆಲೋಶಿಪ್ಸ ಏನಾದ್ರೂ ಇದಾವ?


ಯು.ಜಿ.ಸಿ ಯಿಂದ ವಿಶ್ವವಿದ್ಯಾಲಯಗಳ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅದ್ಯಾಪಕರುಗಳಿಗೆ ಸಮಾಜ ವಿಜ್ಞಾನದ ವಿಭಾಗಗಳಲ್ಲಿ ನೀಡುವ, ಮೈನರ್, ಮತ್ತು ಮೇಜರ್ ಪ್ರಾಜೆಕ್ಟಗಳಲ್ಲಿ ಯೋಜನಾ ಸಹಾಯಕರಾಗಿ ಕೆಲಸ ಮಾಡುವ ಅವಕಾಶಗಳಿವೆ. ಅಂತೆಯೇ ಜಾನಪದ ಸಂಶೋಧಕರಿಗೆ (ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ) ರಾಜೀವಗಾಂಧಿ ಪೆಲೋಷಿಪ್ ಇದೆ. ಅಂತೆಯೇ ಆಂತರಿಕವಾಗಿ ವಿಶ್ವವಿದ್ಯಾಲಯಗಳಲ್ಲಿ ಎಂಪಿಲ್, ಪಿಹೆಚ್.ಡಿ ಸಂಶೋಧನೆಗೆ ಸಿಗುವ ಎಲ್ಲಾ ಬಗೆಯ ಅವಕಾಶಗಳೂ ಸಹಜವಾಗಿ ಜಾನಪದ ಸಂಶೋಧಕರಿಗೂ ಸಿಗುತ್ತವೆ. ಜಾನಪದ ಸಂಶೋಧನೆಗಾಗಿ ಈಚೆಗೆ ಜಾನಪದ ಅಕಾಡೆಮಿ ಒಂದು ಲಕ್ಷ ರೂಪಾಯಿಯ ಪೆಲೋಶಿಪ್ ಕೊಟ್ಟು ಅಧ್ಯಯನ ಮಾಡಿಸುವ ಯೋಜನೆಯೊಂದನ್ನು ತಂದಿದೆ. ಅದರ ಭಾಗವಾಗಿ ಈಗಾಗಲೇ ಐದು ಜನ ಯುವ ಜಾನಪದ ಆಸಕ್ತ ಸಂಶೋಧಕರಿಗೆ ಈ ಪೆಲೋಶಿಪ್ ನೀಡಲಾಗಿದೆ. ಇನ್ನೂ ರಾಷ್ಟ್ರಮಟ್ಟದಲ್ಲಿ ಜಾನಪದ ಸಂಶೋಧನೆಗಾಗಿ ವಿಪುಲ ಅವಕಾಶಗಳು, ಪೆಲೋಶಿಪ್‌ಗಳು ಇವೆ. ಆದರೆ ಅವುಗಳ ಮಾಹಿತಿಯ ಕೊರತೆ ನಮ್ಮಲ್ಲಿದೆ.

೪. ಜಾನಪದ ವಿಶ್ವವಿದ್ಯಾಲಯ ಆಗಿದೆ, ಈ ವಿವಿ ಯಿಂದ ನೀವು ಏನನ್ನು ನಿರೀಕ್ಷಿಸುವಿರಿ?


ಜಾನಪದ ವಿಶ್ವವಿದ್ಯಾಲಯ ಆಗಿರುವುದು ಕನ್ನಡಿಗರಿಗೆ ಸಂತೋಷದ ಸಂಗತಿ. ಜರ್ಮನಿಯಲ್ಲಿ ಈಗಾಗಲೆ ಜಾನಪದ ವಿಶ್ವವಿದ್ಯಾಲಯ ಇದೆ. ಜಗತ್ತಿನಲ್ಲಿ ಇದು ಎರಡನೆಯ ಜಾನಪದ ವಿವಿ. ಈ ವಿವಿಯನ್ನು ತುಂಬಾ ಮುಂದಾಲೋಚನೆಯಿಂದ ರೂಪಿಸುವ ಅಗತ್ಯವಿದೆ. ಇತರೆ ಜಾನಪದ ವಿವಿಗಳಿಗಿಂತ ಇದು ತೀರಾ ಭಿನ್ನವಾದುದು. ಸಮಸ್ತ ಜನಸಮುದಾಯವನ್ನು ತಾಯ್ತನದಿಂದ ನೋಡುವ ಅಂತಃಕರಣದ ಮಾನವೀಯ ಗುಣ ಈ ವಿಶ್ವವಿದ್ಯಾಲಯಕ್ಕೆ ಬೇಕು. ತೀರಾ ಅಕಾಡೆಮಿಕ್ ಎನ್ನುವಂತಹ ಜನರ ಜತೆ ಸಂಪರ್ಕ ಕಡಿದುಕೊಂಡು ಜಡವಾಗುವ ಗುಣದಿಂದ ಇದು ದೂರ ಇರಬೇಕು. ಜಾನಪದ ವಿವಿ ಮೊದಲ ಆದ್ಯತೆಗಳ ಕೆಲಸದಲ್ಲಿ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದ ತನಕ ಜಾನಪದವನ್ನು ಒಂದು ಕಡ್ಡಾಯ ಪಠ್ಯವನ್ನು ಅಳವಡಿಸಿ, ಜನಪದ ಕಲಾವಿದರನ್ನು ಒಳಗೊಳ್ಳುವ ಹಾಗೆ ಪ್ರಾತ್ಯಕ್ಷಿಕೆ ಕೊಡಲು ಅನುವಾಗುವಂತಹ ಕೆಲಸ ಮಾಡಬೇಕು.

ಮುಖ್ಯವಾಗಿ ಜಾನಪದವನ್ನು ರಾಜಕಾರಣದ ಭಾಷೆಯನ್ನಾಗಿ ರೂಪಿಸಬೇಕಿದೆ. ಜಾನಪದ ಎಂದರೆ ಹಳೆಯದು ಎನ್ನುವ ಗತಕಾಲದ ವ್ಯಾಖ್ಯಾನಕ್ಕೆ ಕಟ್ಟು ಬೀಳದೆ, ಈ ಕಾಲದ ಹೊಟ್ಟೆಯೊಳಗಿಂದ ಹೊಸ ಜಾನಪದ ಹುಟ್ಟುತ್ತದೆ, ಅದನ್ನು ಸಹ ಗ್ರಹಿಸುವ ಮನಸ್ಥಿತಿ ಜಾನಪದ ವಿವಿಗೆ ಇರಬೇಕಾಗುತ್ತದೆ. ಮುಖ್ಯವಾಗಿ ಜನಪದರ ಜ್ಞಾನವನ್ನು ಮಾತ್ರ ಗೌರವಿಸಿ, ಅವರ ಬದುಕನ್ನು ಕಡೆಗಣಿಸುವ ಅಮಾನವೀಯ ಜಾನಪದ ಅಧ್ಯಯನ ವಿಧಾನಗಳಿಂದ ಈ ವಿವಿ ಮುಕ್ತವಾಗಬೇಕು. ಜಾನಪದ ಕಲಾವಿದರನ್ನು ಸಮಾಜ ಗೌರವಿಸುವಂತಹ, ಮತ್ತು ಸ್ವತಃ ಜನಪದ ಕಲಾವಿದರು ಗೌರವಯುತವಾಗಿ ಬದುಕುವಂತಹ ವಾತಾವರಣವನ್ನು ಈ ವಿವಿ ನಿರ್ಮಿಸಲು ಪ್ರಯತ್ನಿಸಬೇಕು. ಮುಖ್ಯವಾಗಿ ಆನ್ವಯಿಕ ಜಾನಪದದ ಆಲೋಚನೆ ಈ ವಿವಿಯ ಆಂತರ್ಯದ ತಾತ್ವಿಕತೆಯಾಗಬೇಕು. ಜನಪದರ ತಿಳುವಳಿಕೆಯ ಕಣ್ಣೋಟದಿಂದ ಈ ರಾಜ್ಯದ ಚರಿತ್ರೆಯನ್ನು, ಆಲೋಚನ ಕ್ರಮವನ್ನು, ವರ್ತಮಾನವನ್ನು ಗ್ರಹಿಸುವಂತೆ ತಿಳುವಳಿಕೆಯ ಕ್ರಮವನ್ನು ಬದಲಾಯಿಸುವ ಮಹತ್ವದ ಜವಾಬ್ದಾರಿ ಈ ವಿವಿಯ ಮೇಲಿದೆ.

೫. ಜಾನಪದ ಕ್ಷೇತ್ರದಲ್ಲಿ ನಿಮ್ಮ ಕೆಲಸಗಳೇನು?

ನಾನು ಮೂಲತ: ಜಾನಪದದಲ್ಲಿನ ಆಸಕ್ತಿಯಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಜಾನಪದ ಎಂ ಎ ಮಾಡಿದೆ. ಜಾನಪದದಲ್ಲಿ ಇನ್ನಷ್ಟು ಆಳವಾಗಿ ಅಧ್ಯಯನ ಮಾಡುವ ಆಸೆಯಿಂದ, ‘ಕನ್ನಡ ಜಾನಪದ ಅಧ್ಯಯನದ ತಾತ್ವಿಕ ನೆಲೆಗಳು’ ಎನ್ನುವ ವಿಷಯವಾಗಿ ೧೯೫೦ ರಿಂದೀಚೆಗೆ ಕರ್ನಾಟಕದಲ್ಲಿ ನಡೆದ ಜಾನಪದ ಅಧ್ಯಯನಗಳ ತಾತ್ವಿಕ ನೆಲೆಗಳನ್ನು ಕುರಿತ ಪಿ.ಹೆಚ್.ಡಿ ಮಾಡಿದೆ. ಈ ಕಾರಣಕ್ಕಾಗಿ ಕನ್ನಡ ಜಾನಪದವನ್ನು ಹೆಚ್ಚು ಓದಿಕೊಳ್ಳಲು ಸಾದ್ಯವಾಯಿತು. ಈಗ ಜಾನಪದದ ಹೊಸ ನಡಿಗೆ ಬಗೆಗೆ ಸಂಶೋದನೆ ಮಾಡುತಿದ್ದೇನೆ. ನವ ಮೌಖಿಕತೆ ಕುರಿತಂತೆ ಕೆಲಸ ಮಾಡುತ್ತಿದ್ದೇನೆ. ಅದರ ಭಾಗವಾಗಿ ಅಂತರ್ಜಾಲದಲ್ಲಿ ‘ಕನ್ನಡ ಜಾನಪದ’ ಎನ್ನುವ ಬ್ಲಾಗ್ ನಿರ್ವಹಿಸುತಿದ್ದೇನೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಈಚೆಗೆ ಕರ್ನಾಟಕದ ಜನಪದ ಹನುಮ ಪರಂಪರೆ ಬಗ್ಗೆ ಕ್ಷೇತ್ರಕಾರ್ಯ ನಡೆಸುತಿದ್ದೇನೆ. ಸದ್ಯಕ್ಕೆ ಜಾನಪದವನ್ನು ನನ್ನ ಆಸಕ್ತಿ ಕ್ಷೇತ್ರವನ್ನಾಗಿಸಿಕೊಂಡು ಇನ್ನು ಹೆಚ್ಚೆಚ್ಚು ಕೆಲಸ ಮಾಡುವ ಒತ್ತಾಸೆಯಿದೆ

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಅರುಣ್, ಸಂದರ್ಶನ ಚೆನ್ನಾಗಿದೆ, ಹೊಸವಿಷಯಗಳಿವೆ.
ಬಿಳಿಮಲೆ