ಸೋಮವಾರ, ಜುಲೈ 9, 2012

ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ

 ಕನ್ನಡ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೊ. ಹಿ.ಚಿ. ಬೋರಲಿಂಗಯ್ಯ


-ಅರುಣ್ ಜೋಳದಕೂಡ್ಲಿಗಿ


    ಬಹುದಿನದಿಂದ ಖಾಲಿ ಇದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಹುದ್ದೆಗೆ ಇಲ್ಲಿಯ ಬುಡಕಟ್ಟು ಅಧ್ಯಯನ ವಿಭಾಗದ ಪ್ರೊಫೆಸರ್ ಹಿ.ಚಿ. ಬೋರಲಿಂಗಯ್ಯ ಅವರು ಆಯ್ಕೆಯಾಗಿದೆ. ಈ ಆಯ್ಕೆಯ ಬಗೆಗೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಭ್ರಮದ ವಾತಾವರಣವಿದೆ. ಇಲ್ಲಿಯರೇ ಅಧ್ಯಾಪಕರು ಕುಲಪತಿಗಳಾದ ಸಂಭ್ರಮವದು. ಜಾನಪದ ಅಧ್ಯಯನ, ಬುಡಕಟ್ಟು ಅಧ್ಯಯನಗಳ ಮೂಲಕ ಗುರುತಿಸಿಕೊಂಡಿರುವ ಪ್ರೊ. ಹಿಚಿಬೋ ಅವರು ದೇಸಿ ಚಿಂತನೆಯ ಆಯಾಮದಲ್ಲಿ ಆಲೋಚಿಸಬಲ್ಲವರು. ಕನ್ನಡ ವಿಶ್ವವಿದ್ಯಾಲಯದ ದೇಸಿ ಚಿಂತನೆಯನ್ನು ಇನ್ನಷ್ಟು ವಿಸ್ತರಿಸಬಲ್ಲ ಪ್ರೊ. ಹಿಚಿಬೋ ಅವರನ್ನು ಕನ್ನಡ ಜಾನಪದ ಬ್ಲಾಗ್ ಅಭಿನಂದಿಸುತ್ತದೆ.
  
   ಪ್ರೊ. ಹಿ.ಚಿ. ಬೋರಲಿಂಗಯ್ಯ ಅವರು ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹಿತ್ತಲಪುರ ಗ್ರಾಮದವರು.
ಬಾಲ್ಯದಿಂದಲೇ ಗ್ರಾಮೀಣ ಸಂಸ್ಕೃತಿ, ಸಂಪ್ರದಾಯಗಳ ಸ್ಫೂರ್ತಿ ಪಡೆದು ಜಾನಪದ ಅಧ್ಯಯನ ಆಸಕ್ತಿ ಬೆಳೆಸಿಕೊಂಡವರು.
ಹಂಪಿಯ ವಿಶ್ವವಿದ್ಯಾನಿಲಯದ ಬುಡಕಟ್ಟು ಅಧ್ಯಯನ ವಿಭಾಗದಲ್ಲೂ ಅವರು ತಮ್ಮ ಸೇವೆಯಿಂದ ವಿಶಿಷ್ಟ ಛಾಪು ಮೂಡಿಸಿದವರು. ಇಳಿ ವಯಸ್ಸಿನಲ್ಲೂ ಜಾನಪದ ಅಧ್ಯಯನ, ಸಂಶೋಧನೆಗೆ ತಮ್ಮ ಯುವ ಚೈತನ್ಯ ವನ್ನೂ ಬಳಸಿ ತಮ್ಮ ಕೊಡುಗೆ ನೀಡಿದವರು.


  ಇಟಲಿ, ಫ್ರಾನ್ಸ್, ಹಾಲೆಂಡ್ ಹಾಗೂ ಇರಾನ್ ದೇಶಗಳಲ್ಲಿ ನಡೆದ ಗೊಂಬೆಯಾಟ ಜಾನಪದ ಉತ್ಸವದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡವರು. ಬುಡಕಟ್ಟು ಜನರ ಇತಿಹಾಸ ಅಧ್ಯಯನ, ಸಂಶೋಧನೆಗಾಗಿ ಅವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.

  ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯದ ಹಂಗಾಮಿ ಕುಲಪತಿಗಳಾಗಿ, ಕುಲಸಚಿವರಾಗಿ, ವಿವಿಧ ನಿಕಾಯಗಳ ಡೀನ್ ಆಗಿಯೂ, ಕನ್ನಡ ವಿವಿಯ ಪ್ರಸಾರಾಂಗದ ನಿರ್ಧೇಶಕರಾಗಿಯೂ ಕೆಲಸ ಮಾಡಿ ಕನ್ನಡ ವಿಶ್ವವಿದ್ಯಾಲಯದ ಹೇಳಿಗೆಗೆ ಶ್ರಮಿಸಿದ್ದಾರೆ.  17 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಪ್ರೊ. ಹಿಚಿಬೋ ಅವರು ಈ ತನಕ 23 ಕೃತಿಗಳನ್ನೂ, 82 ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸಿದ್ದಾರೆ.


  ಮುಖ್ಯವಾಗಿ ಗುರುತಿಸಬಹುದಾದ ಅವರ ಕೃತಿಗಳೆಂದರೆ, ಉಜ್ಜನಿ ಚೌಡಮ್ಮ, ದಾಸಪ್ಪ-ಜೋಗಪ್ಪ, ಗಿರಿಜನ ನಾಡಿಗೆ ಪಯಣ, ನಮ್ಮೊಳಗೊಂದು ಪುಟ್ಟ ಆಫ್ರಿಕಾ, ಸಿದ್ಧಿಯರ ಸಂಸ್ಕೃತಿ, ಕಾಡು ಕಾಂಕ್ರೇಟ್ ಮತ್ತು ಜಾನಪದ, ಗಿರಿಜನರು, ಮಂಟೇಸ್ವಾಮಿ ಮಹಾಕಾವ್ಯ (ಸಂಪಾದನೆ), ಕರ್ನಾಕಟ ಜನಪದ ಕಲೆಗಳ ಕೋಶ (ಸಂಪಾದನೆ), ಗೊಂಡರ ರಾಮಾಯಣ, ವಿಸ್ಮೃತಿ ಮತ್ತು ಸಂಸ್ಕೃತಿ,  ಬುಡಕಟ್ಟು ದೈವಾರಾಧನೆ, ಗಿರಿಜನ ಕಾವ್ಯ(ಸಂಪಾದನೆ) , ಹಾಲಕ್ಕಿ ಒಕ್ಕಲಿಗರ ಜ್ಞಾನಪರಂಪರೆ, ಕಾಗೋಡು ಚಳವಳಿ (ಸಂಪಾದನೆ), ದೇಸಿ ಸಂಸ್ಕೃತಿ ಸಂಕಥನ ಮುಂತಾದವುಗಳನ್ನು ಹೆಸರಿಸಬಹುದು. ಬುಡಕಟ್ಟು ಅಧ್ಯಯನ, ಜಾನಪದ ಗಂಗೋತ್ರಿ, ಚೆಲುವ ಕನ್ನಡ, ಪುಸ್ತಕ ಮಾಹಿತಿ ಮುಂತಾದ ಸಂಶೋಧನ ಪತ್ರಿಕೆಗಳ ಸಂಪಾದಕರಾಗಿಯೂ ದುಡಿದಿದ್ದಾರೆ. ಕರ್ನಾಟಕ ಬುಡಕಟ್ಟು ಮಹಾಕಾವ್ಯ ಮಾಲೆಯ  ಪ್ರಧಾನ ಸಂಪಾದಕರಾಗಿ ಜನಪದ ಮಹಾಕಾವ್ಯಗಳ ಸಂಗ್ರಹದಂತಹ ಚಾರಿತ್ರಿಕ ಮಹತ್ವದ ಕೆಲಸಕ್ಕೆ ಪ್ರೇರಣೆಯಾಗಿದ್ದಾರೆ.

     ಹಲವು ಪ್ರಶಸ್ತಿಗಳು ಇವರಿಗೆ ಸಂದಿವೆ. ಮುಖ್ಯವಾಗಿ ದೇಸಿ ಆಲೋಚನ ಕ್ರಮ ಇವರ ಚಿಂತನೆಯಲ್ಲಿ ಪ್ರಮುಖವಾಗಿ ಕಾಣಬಹುದಾಗಿದೆ. ಅವರು ಜಾನಪದ ಅಕಾಡೆಮಿಯ ರಿಜಿಷ್ಟ್ರಾರ್ ಆದಾಗಲೂ ಜಾನಪದ ಕ್ಷೇತ್ರಕ್ಕೆ ಬಹಳ ಮುಖ್ಯ ಕೊಡುಗೆಗಳನ್ನು ನೀಡಿದ್ದಾರೆ. ಅಂತೆಯೇ ಜಾನಪದ ವಿದ್ವಾಂಸರಾಗಿ ಕನ್ನಡದಲ್ಲಿ ಲೋಕದೃಷ್ಠಿಯ ಬಗ್ಗೆ ಮೊದಲ ಬಾರಿಗೆ ವಿಸ್ತಾರವಾಗಿ ಶೋಧಿಸಿದರು. ಅದು ಅವರ ವಿಸ್ಮೃತಿ ಸಂಸ್ಕ್ರತಿ ಕೃತಿಯಲ್ಲಿ ನೋಡಬಹುದು. ಕಾಡು ಕಾಂಕ್ರೇಟ್ ಪುಸ್ತಕದಲ್ಲಿ ಆಧುನಿಕ ಅಭಿವೃದ್ಧಿಯ ಮಾದರಿಗಳಿಂದಾಗಿ ಬುಡಕಟ್ಟು ಸಮುದಾಯಗಳು ಎದುರಿಸುತ್ತಿರುವ ಬಿಕ್ಕಟ್ಟುಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಆಲೋಚಿಸುತ್ತಾರೆ.

  ಹೀಗಿರುವ ಪ್ರೊ. ಹಿಚಿಬೋ ಅವರು ಕನ್ನಡ ವಿಶ್ವವಿದ್ಯಾಲಯವನ್ನು ಸಮರ್ಥವಾಗಿ ಮುನ್ನಡೆಸಲಿ ಎಂದು ಮತ್ತೊಮ್ಮೆ ಶುಭ ಹಾರೈಸುತ್ತೇನೆ.

ಜಾನಪದ ಜಗತ್ತಿನ ಕನಸು

ಗಣೇಶ ಅಮೀನಗಡ 

 ಕೃಪೆ: ಪ್ರಜಾವಾಣಿ

ಜಗತ್ತಿನ ಮೊದಲ ಜಾನಪದ ವಿಶ್ವವಿದ್ಯಾನಿಲಯ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲ್ಲೂಕಿನ ಗೊಟಗೋಡಿಯಲ್ಲಿ ಆರಂಭಗೊಂಡಿದ್ದು, ಇದರ ಮೊದಲ ಕುಲಪತಿ ಡಾ.ಅಂಬಳಿಕೆ ಹಿರಿಯಣ್ಣ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆ ಗ್ರಾಮದ ಹಿರಿಯಣ್ಣ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಂತರ `ಮಲೆನಾಡಿನ ಒಕ್ಕಲಿಗರು ಮತ್ತು ಅವರ ಜಾನಪದ` ಕುರಿತು ಪಿಎಚ್.ಡಿ ಪದವಿ ಪಡೆದ ನಂತರ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.

ಜೊತೆಗೆ ಬುಡಕಟ್ಟು ಜನರ ಬದುಕನ್ನು ಮತ್ತು ಅವರ ಸಂಸ್ಕೃತಿಯನ್ನು ನಿಕಟವಾಗಿ ನೋಡಿದವರು. ದಕ್ಷಿಣ ಕರ್ನಾಟಕದ ಕಾಡುಗೊಲ್ಲರ ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನದೊಂದಿಗೆ ಉತ್ತರ ಕನ್ನಡ ಜಿಲ್ಲೆಯ ಕಚ್ಚೆ ಗೌಳಿಗರ ಕುರಿತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಪಸಂಸ್ಕೃತಿ ಮಾಲೆಯಡಿ ಅಧ್ಯಯನ ಹಾಗೂ ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿಯ ತೊದವರು ಕುರಿತು ಅಧ್ಯಯನ ಕೈಗೊಂಡರು.

ಜೊತೆಗೆ ತೊಗಲು ಗೊಂಬೆಯಾಟ, ಯಕ್ಷಗಾನ ಸಾಹಿತ್ಯ, ಸೂರ್ಯ ಜಾನಪದ ಹೀಗೆ ಜಾನಪದದ ವಿವಿಧ ಸಂಪ್ರದಾಯಗಳು, ನಂಬಿಕೆಗಳು ಕುರಿತು ನಿರಂತರ ಅಧ್ಯಯನನಿರತರು. `ಮಲೆನಾಡಿನ ಜನಪದ ಸಂಪ್ರದಾಯಗಳು` ಕುರಿತು ಕೃತಿಯನ್ನು ಪ್ರಕಟಿಸಿದ್ದಾರೆ.

ಜಾಗತಿಕ ಸೈದ್ಧಾಂತಿಕ ವಿಚಾರಗಳನ್ನು ಅರಗಿಸಿಕೊಂಡು ಕನ್ನಡ ಜಾನಪದವನ್ನು ಅವರು ನೋಡಿದ ಪರಿಣಾಮ ಜಾನಪದಕ್ಕೆ ಅಖಂಡವಾದ ನೋಟವನ್ನು ತಂದುಕೊಡಲು ಯತ್ನಿಸಿದರು.

ರಷ್ಯಾದ ಪ್ರಾಪ್ ಎಂಬ ವಿದ್ವಾಂಸನ ಮಾದರಿಯಲ್ಲಿ ಕನ್ನಡ ಜನಪದ ಗದ್ಯ ಕಥನಗಳನ್ನು ಅರ್ಥೈಸುವುದರ ಜೊತೆಗೆ ಪ್ರಾಪ್ ಮಾದರಿಯನ್ನು ಕನ್ನಡದ ಕಥೆ ಹಾಗೂ ಪುರಾಣಗಳಿಗೆ ಅನ್ವಯಿಸಿ ವಿಶ್ಲೇಷಿಸಿದರು.

ಇದುವರೆಗೆ ಅವರ 43 ಕೃತಿಗಳು ಬೆಳಕು ಕಂಡಿದ್ದು, ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದ್ದಾರೆ. ಅವರೊಂದಿಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಜಾನಪದ ವಿಶ್ವವಿದ್ಯಾನಿಲಯದ ಸ್ವರೂಪ ಹೇಗೆ?
ಜಾನಪದ ಕುರಿತು ರೂಪುಗೊಂಡ ಮೊದಲ ವಿಶ್ವವಿದ್ಯಾನಿಲಯವಿದು. ಇದು ವಿನೂತನ ಪ್ರಯತ್ನ. ಈಗಿರುವ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲಿ ಕಲಿಸುವ ಕ್ರಮ ಇರುವುದಿಲ್ಲ. ಇದಕ್ಕೆ ಬದು-ಬಾಂದು (ಗಡಿ ಕಲ್ಲು) ಇಲ್ಲ; ಎಲ್ಲ ಮುಕ್ತ. ಜಾನಪದ ಜ್ಞಾನ ಎಂದರೆ ಅದು ಸಮುದಾಯ ಜ್ಞಾನ. ಬಹುಮಟ್ಟಿಗೆ ಮೌಖಿಕ ಪರಂಪರೆಯಲ್ಲಿ ಉಳಿದು ಬಂದಿರುವ ಜ್ಞಾನ.

ಬರವಣಿಗೆ ಗೊತ್ತಿಲ್ಲದವರು ಅಭಿನಯ ಹಾಗೂ ಮಾತಿನ ಮೂಲಕ ಅಭಿವ್ಯಕ್ತಿಸಿ ಜನಮಾನಸದಲ್ಲಿ ಜಾನಪದವನ್ನು ಉಳಿಸಿದ್ದಾರೆ. ಇಂಥ ಜಾನಪದದತ್ತ ಇಂದಿನ ಯುವಜನತೆಯನ್ನು ಸೆಳೆಯಬೇಕಿದೆ. ಇದಕ್ಕಾಗಿ ಆಸಕ್ತರಿಗೆ ಪ್ರಯೋಗ-ಪ್ರದರ್ಶನ ಮೂಲಕ ಕಲಿಸಲಾಗುತ್ತದೆ.

* ಕಲಿಸುವ ವಿಧಾನ ಹೇಗೆ?
ಮೂಲೆಗುಂಪಾದ ವೃತ್ತಿ ಕಲಾವಿದರನ್ನು ಗುರುತಿಸಿ, ಆಹ್ವಾನಿಸಿ ಅವರಿಂದ ಕಲಿಸುತ್ತೇವೆ. ವಿಶ್ವವಿದ್ಯಾನಿಲಯದ ಅಧಿನಿಯಮದ ಪ್ರಕಾರ ಒಂದು ವರ್ಷಕ್ಕೆ 14 ಕಲಾವಿದರನ್ನು ನೇಮಿಸಿಕೊಳ್ಳಬಹುದು. ಈ ವರ್ಷ ಮೂರು ಕಲಾವಿದರನ್ನು ನೇಮಿಸಿಕೊಳ್ಳಲು ಅವಕಾಶವಿದೆ.

ತೊಗಲು ಗೊಂಬೆಯಾಟ, ದೊಡ್ಡಾಟ, ಪೂಜಾ ಕುಣಿತ ಹಾಗೂ ಚಿಟ್ ಮೇಳವನ್ನು ಮುನ್ನೆಲೆಗೆ ತರುವ ಸಲುವಾಗಿ ಕಲಿಸುತ್ತೇವೆ ಜೊತೆಗೆ ಬುಡಕಟ್ಟು ಕುಣಿತ ಕಲಿಸುವ ಹಂಬಲವಿದೆ.

ಮುಂದೆ ಡೊಳ್ಳು ಕುಣಿತದ ಕಲಾವಿದರು ಹಾಗೂ ಯಕ್ಷಗಾನ ಕಲಾವಿದರನ್ನು ನೇಮಿಸಿಕೊಂಡು ಅವರ ಮೂಲಕ ಈಗಿನ ತಲೆಮಾರಿನ ಕಲಾವಿದರಿಗೆ ಕಲೆಗಳನ್ನು ಹಸ್ತಾಂತರಿಸುತ್ತೇವೆ. ಒಂದು ವರ್ಷದವರೆಗೆ ಯುಜಿಸಿ ವೇತನ ನೀಡುತ್ತೇವೆ.

ಕಲಿಯುವವರಿಗೆ ವಸತಿಸಹಿತ ಸೌಲಭ್ಯ ಕಲ್ಪಿಸಲಿದ್ದೇವೆ. ಮುಖ್ಯವಾಗಿ ಇದು ನಿವಾಸಿ ಸ್ವರೂಪದ ವಿಶ್ವವಿದ್ಯಾನಿಲಯ. ಜೊತೆಗೆ ಏಕವಿಷಯ ಅವಲಂಬಿತವಾದರೂ ಬಹುಶಾಸ್ತ್ರೀಯ ವಿಷಯಗಳು ಅಳವಡುತ್ತವೆ.

ಮನೋವಿಜ್ಞಾನ, ಸಾಹಿತ್ಯ, ಸಮಾಜವಿಜ್ಞಾನ, ಚರಿತ್ರೆ, ವಿಜ್ಞಾನದ ಹಿನ್ನೆಲೆಯಲ್ಲಿ ಪ್ರಾಣಿವಿಜ್ಞಾನ, ಸಸ್ಯವಿಜ್ಞಾನ, ಖಗೋಳವಿಜ್ಞಾನ ಹಿನ್ನೆಲೆಯಲ್ಲಿ ಈ ಪಾರಂಪರಿಕ ಜ್ಞಾನವನ್ನು ಅಧ್ಯಯನ ಮಾಡಬಹುದು.

* ವಿಶ್ವವಿದ್ಯಾಲಯ ಎಂದರೆ ವಿದ್ವಾಂಸರಿಗೆ ಮಾತ್ರ ಮೀಸಲು ಎನ್ನುವ ಅಭಿಪ್ರಾಯವಿದೆ?
ನಿಜ. ಆದರೆ ನಮ್ಮದು ಜನತಾ ವಿಶ್ವವಿದ್ಯಾನಿಲಯ. ಜನಪದ ಕಲಾವಿದರು, ಕುಶಲಕರ್ಮಿಗಳು, ಕಸುಬುದಾರರು... ಹೀಗೆ ಎಲ್ಲ ಬಗೆಯವರು ಇದು ನಮ್ಮ ವಿಶ್ವವಿದ್ಯಾನಿಲಯವೆಂದು ಬರಬೇಕು.

ಪ್ರತಿ ವೃತ್ತಿಯವರಿಗೆ ಕುಟೀರಗಳನ್ನು ನಿರ್ಮಿಸಿ ಅವರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುತ್ತೇವೆ. ಇದು ಸ್ವಉದ್ಯೋಗ ಮೂಲಕ ಸ್ವಾವಲಂಬಿಯಾಗಿಸುವ ಗುರಿ.

ಈಗಾಗಲೇ ಗೊಟಗೋಡಿಯಲ್ಲಿ ಉತ್ಸವ ರಾಕ್ ಗಾರ್ಡನ್‌ನಲ್ಲಿ ಗ್ರಾಮ ಸಂಸ್ಕೃತಿ ಕಟ್ಟಿಕೊಟ್ಟಿರುವ ಕಲಾವಿದ ತಿಪ್ಪಣ್ಣ ಸೊಲಬಕ್ಕನವರ ಸುಮಾರು 200 ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಇದು ಸ್ವಾವಲಂಬಿ ಬದುಕಿಗೆ ಮಾದರಿ. ಇದನ್ನು ವಿಶ್ವವಿದ್ಯಾಲಯದ ಮೂಲಕ ಮುಂದುವರಿಸುತ್ತೇವೆ.

* ರಾಜ್ಯದಲ್ಲಿ ಜಾನಪದವನ್ನು ಶಾಸ್ತ್ರೀಯವಾಗಿ ಓದಿರುವವರಿಗೆ ಯಾವ ಯೋಜನೆ?
ಜಾನಪದ ಎಂ.ಎ ಪದವಿ ಪಡೆದವರ ಜೊತೆಗೆ ಎಂ.ಫಿಲ್ ಹಾಗೂ ಪಿಎಚ್.ಡಿ ಪಡೆದವರಿಗೆ ಒಂದು ವರ್ಷದ ಕಾಲಮಿತಿಯಲ್ಲಿ ಕಿರು ಸಂಶೋಧನೆ ಕೈಗೊಳ್ಳಬಹುದು. 30 ಜಿಲ್ಲೆಗಳಿಂದ 30 ಸಂಶೋಧಕರನ್ನು ಆಯ್ಕೆ ಮಾಡಲಿದ್ದೇವೆ. ಸಂಶೋಧಕರಿಗೆ ಒಂದು ಲಕ್ಷ ರೂಪಾಯಿ ಅನುದಾನ ಸಿಗಲಿದೆ.

* ಜಾನಪದ ವಿಶ್ವವಿದ್ಯಾನಿಲಯವನ್ನು ವಿಸ್ತರಿಸುವ ಯೋಜನೆ?
ಇದೆ. ಬೀದರ, ಉಡುಪಿ ಅಥವಾ ಮಂಗಳೂರು, ರಾಮನಗರ ಹೀಗೆ ಸ್ಥಳ, ಅನುದಾನ ಹಾಗೂ ಮಾನವ ಸಂಪನ್ಮೂಲ ಲಭ್ಯತೆಯನ್ನು ಗಮನಿಸಿ ಆರು ಕಡೆ ಪ್ರಾದೇಶಿಕ ಕೇಂದ್ರಗಳನ್ನು ಆರಂಭಿಸುವ ಗುರಿಯಿದೆ.

ಇದರಿಂದ ಆಯಾ ಪ್ರದೇಶದ ಕಲೆ, ಸಂಸ್ಕೃತಿ ಹಾಗೂ ಭಾಷೆ ಪುನಶ್ಚೇತನಗೊಳ್ಳಬೇಕು. ಅಲ್ಲಿಯ ಯುವ ಜನತೆಯಲ್ಲಿ ಜಾನಪದ ಕುರಿತು ಸದಭಿರುಚಿ ಹುಟ್ಟಬೇಕು. ಜೊತೆಗೆ ಇಂದಿನ ಪೀಳಿಗೆಗೆ ಸಮುದಾಯ ಜ್ಞಾನ ಹಿರಿಯರಿಂದ ಹಸ್ತಾಂತರಗೊಳ್ಳಬೇಕು.

* ಜಾನಪದಕ್ಕೆ ಸಂಬಂಧಿಸಿ ನಿಘಂಟು ತರುತ್ತೀರಾ?
ಕನ್ನಡ ಜಾನಪದ ನಿಘಂಟು ಎಂಬ ಮೂರು ಸಂಪುಟಗಳನ್ನು ಜಾನಪದ ಅಕಾಡೆಮಿಯು ಗೊ.ರು. ಚನ್ನಬಸಪ್ಪ ನೇತೃತ್ವದಲ್ಲಿ ಈಗಾಗಲೇ ಹೊರತರಲಾಗಿದೆ. ಇನ್ನಷ್ಟು ವೈಜ್ಞಾನಿಕವಾಗಿ, ಸಮಗ್ರವಾಗಿ ಹಾಗೂ ಅಖಂಡ ಕರ್ನಾಟಕ ವ್ಯಾಪ್ತಿಯಲ್ಲಿ ಭಾಷೆಯ ಸೊಗಡನ್ನು ಸಂರಕ್ಷಿಸುವ ರೀತಿಯಲ್ಲಿ 10 ಸಂಪುಟಗಳನ್ನು ತರುತ್ತೇವೆ.

* ದಾಖಲೀಕರಣ ಕೈಗೊಳ್ಳುವಿರಾ?
ಹೌದು. ಜಾನಪದ ದಾಖಲೀಕರಣ ಕಾರ್ಯ ಸಮಗ್ರವಾಗಿ ಆಗಿಯೇ ಇಲ್ಲ. ರಾಜ್ಯದ ನಾಲ್ಕು ಕಂದಾಯ ವಲಯಗಳಲ್ಲಿ ನಾಲ್ಕು ತಂಡಗಳನ್ನು ಕಟ್ಟಲಾಗುತ್ತದೆ. ವ್ಯಾಪಕವಾಗಿ ಸಂಚರಿಸಿ ಕನ್ನಡದಲ್ಲಿ ಪ್ರಚಲಿತವಿರುವ, ವಿಶಿಷ್ಟ ಅಂಶಗಳುಳ್ಳ ಮಾಹಿತಿಗಳನ್ನು ಶ್ರವ್ಯ ಹಾಗೂ ದೃಶ್ಯ ಮಾಧ್ಯಮದಲ್ಲಿ ದಾಖಲಿಸಲಾಗುತ್ತದೆ.

ಜೊತೆಗೆ ದಾಖಲಾತಿ ಭಂಡಾರವನ್ನು ನಿರ್ಮಿಸುತ್ತೇವೆ. ಹೇಗೆಂದರೆ ಶ್ರವ್ಯ ಹಾಗೂ ದೃಶ್ಯ ಮಾಧ್ಯಮವೆಂದು ಸಿಗುವ ಉದಾಹರಣೆಗೆ ರಂಗ ಪ್ರದರ್ಶನ, ರೇಖಾಚಿತ್ರ, ಫೋಟೋ ಹೀಗೆ ಎಲ್ಲವನ್ನು ಭಂಡಾರದಲ್ಲಿ ಸಂಗ್ರಹಿಸಿಡುತ್ತೇವೆ. ಯುರೋಪ್ ರಾಷ್ಟ್ರಗಳಲ್ಲಿ ದಾಖಲಾತಿ ಭಂಡಾರಗಳಿವೆ.
ಇದೇ ಮಾದರಿಯಲ್ಲಿ ನಮ್ಮ ವಿಶ್ವವಿದ್ಯಾನಿಲಯದಲ್ಲಿ ಭಂಡಾರ ಆಗಲಿದೆ. ಇದರೊಂದಿಗೆ ಗ್ರಾಮ ಕರ್ನಾಟಕ ನಿರ್ಮಾಣ ಆಗಲಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಭಿನ್ನ ಸಂಸ್ಕೃತಿಗಳಿವೆ.

ಅದನ್ನು ಬಿಂಬಿಸುವ ಭೌತಿಕ ಪ್ರದರ್ಶನಾಲಯ ಕಟ್ಟಲಿದ್ದೇವೆ. ಅದು ಬಯಲು ವಸ್ತುಸಂಗ್ರಹಾಲಯ. ಇದರಿಂದ ಜಾನಪದ ವಿಶ್ವವಿದ್ಯಾನಿಲಯ ಪ್ರವಾಸಿ ಕೇಂದ್ರವಾಗಿಯೂ ಗಮನ ಸೆಳೆಯಲಿದ್ದು, ಮಾರುಕಟ್ಟೆ ವಿಸ್ತರಣೆಯಾಗಲಿದ್ದು, ಉತ್ತರ ಕರ್ನಾಟಕ ಆರ್ಥಿಕವಾಗಿಯೂ ಅಭಿವೃದ್ಧಿಯಾಗಲಿದೆ.

* ವಿಶ್ವವಿದ್ಯಾನಿಲಯದ ಯೋಜನೆಗಳೇನು?

ಗ್ರಾಮ ಚರಿತ್ರ ಕೋಶ ತರಲಿದ್ದೇವೆ. ಇದು ತ್ರೈವಾರ್ಷಿಕ ಯೋಜನೆ. ರಾಜ್ಯದ 30 ಜಿಲ್ಲೆಗಳ 176 ತಾಲ್ಲೂಕುಗಳ 36 ಸಾವಿರ ಗ್ರಾಮಗಳ ಚರಿತ್ರೆಯನ್ನು ಕಟ್ಟಿಕೊಡುವ ಸುಮಾರು 10 ಕೋಟಿ ರೂಪಾಯಿಯ ಬೃಹತ್ ಯೋಜನೆ ಇದು. ದಕ್ಷಿಣ ಭಾರತೀಯ ದೇಸಿ ಕೃಷಿ ವಿಜ್ಞಾನ ಕೋಶವನ್ನು ತರುತ್ತೇವೆ.

ಇದು ಒಂದು ಸಾವಿರ ಪುಟಗಳ ಮಿತಿಯ ಸಂಪುಟ. ದಕ್ಷಿಣ ಭಾರತದ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಕೋಶವದು. ರಾಜ್ಯದಲ್ಲಿಯ ತುಳು ಹಾಗೂ ಕೊಡವ ಭಾಷೆಗೆ ಸಂಬಂಧಿಸಿದ ಕೃಷಿ ಜ್ಞಾನವನ್ನು ಸಂಪುಟದಲ್ಲಿ ಸೇರಿಸಲಾಗುತ್ತದೆ.

ಸಂದರ್ಶಕರು: ಗಣೇಶ್ ಅಮಿನಗಡ