ಸೋಮವಾರ, ಅಕ್ಟೋಬರ್ 29, 2012

ಹಲವು ಮಹಾಭಾರತಗಳ ಕತೆ


    • ಪುರುಷೋತ್ತಮ ಬಿಳಿಮಲೆ
                      ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿದ್ದೇವೆ. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ವಾಲ್ಮೀಕಿ ಮತ್ತು ವ್ಯಾಸರಂಥ ಮಹಾ ಪ್ರತಿಭೆಯ ಕವಿಗಳು ಅಂಥ ಅನೇಕ ನಿರೂಪಣೆಗಳಿಗೆ ಕಿವಿಗೊಟ್ಟು ತಮ್ಮ ಕಾವ್ಯಗಳನ್ನು ಬರೆದರೋ ಅಥವಾ ವ್ಯಾಸ, ವಾಲ್ಮೀಕಿಯರ ರಚನೆಗಳೇ ಹಲವು ಕಾವ್ಯಗಳನ್ನು ಸೃಜಿಸಿದುವೋ ಈಗ ಹೇಳುವುದು ಕಷ್ಟ.
ಸುಮಾರು ಐದು ನೂರು ವರ್ಷಗಳ ಹಿಂದೆ ಬ್ರಿಟಿಷರು ಭಾರತಕ್ಕೆ ಕಾಲಿರಿಸಿದಾಗ ಅವರಿಗೆ ಇಲ್ಲಿ ಕಂಡದ್ದು ಇಲ್ಲಿನ ಅಪಾರ ವೈವಿಧ್ಯ ಅನೇಕ ಭಾಷೆಗಳು, ಸಮುದಾಯಗಳು, ಆಚರಣೆಗಳು, ಭೌಗೋಳಿಕ ವ್ಯತ್ಯಾಸ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಅವರು ಮನಗಂಡಿ ದ್ದರಲ್ಲದೆ ಭಾರತವನ್ನು ಯಾವುದಾದ‌ರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಅವರು ಹೆಣಗುತ್ತಿದ್ದರು. ಭಾರತಕ್ಕೆ ಒಂದು ವ್ಯಾಕರಣ ಬೇಕಾಗಿತ್ತು ಅವರಿಗೆ.
ಇಂಥ ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು.ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಪ್ರತೀತಗೊಳಿಸಿ, ಅದನ್ನು ಅಧಿಕೃತಗೊಳಿ ಅಧಿಕೃತಗೊಳಿ ಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ಆ ಕ್ರಮವನ್ನು ನಾವು ಈಗಲೂ ಮುಂದುವರೆಸಿಕೊಂಡು ಬರುತ್ತಿದ್ದೇವೆ.


ಉದಾಹರಣೆಗೆ ಗಮನಿಸೋಣ : ವ್ಯಾಸರು ಬರೆದ ಮಹಾಭಾರತದ ನೂರಾರು ಪಠ್ಯಗಳನ್ನು ಸಂಗ್ರಹಿಸಿ, ಅವುಗಳಿಂದ "ಒಂದು ಅಧಿಕೃತ' ಮಹಾಭಾರತವನ್ನು ಸಿದ್ಧಪಡಿಸಿಕೊಡಲು ಬ್ರಿಟಿಷರು ಪ್ರಖ್ಯಾತ ಸಂಸ್ಕೃತ ವಿದ್ವಾಂಸರಾಗಿದ್ದ ಶ್ರೀ ವಿಷ್ಣು ಎಸ್‌. ಸೂಕ್ತಂಕರ್‌ ಅವರನ್ನು 1919ರಲ್ಲಿ ಕೇಳಿಕೊಂಡರು. ಸೂಕ್ತಂಕರ್‌ ಅವರು ಪಿ. ವಿ. ಕಾಣೆ, ಆರ್‌.ಡಿ. ಕರಮರ್ಕರ್‌, ವಿ.ಜಿ. ಪರಾಂಜಪೆ, ವಿಂಟರ್‌ನೀಟ್ಜ್ ಮೊದಲಾದ ಸಮರ್ಥ ವಿದ್ವಾಂಸರ ತಂಡದೊಂದಿಗೆ ಸುಮಾರು 15 ವರ್ಷಗಳ ಕಾಲ ದುಡಿದು, ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ವಿವಿಧ ಪ್ರದೇಶಗಳಲ್ಲಿ ಲಭ್ಯವಿದ್ದ ಸುಮಾರು 160 ಹಸ್ತಪ್ರತಿಗಳನ್ನು ಸಂಗ್ರಹಿಸಿದರು. ಕರ್ನಾಟಕ ಮತ್ತು ಒರಿಸ್ಸಾದಲ್ಲಿದ್ದ ಹಸ್ತಪ್ರತಿಗಳು ಯಾಕೋ ಅವರ ಕಣ್ಣಿಗೆ ಬೀಳಲಿಲ್ಲ.
ಅವೆಲ್ಲವುಗಳನ್ನು ಅಧ್ಯಯನ ಮಾಡಿ ಮೂಲಕ್ಕೆ ಹತ್ತಿರ ಅನ್ನ ಬಹುದಾದ ಪಠ್ಯವೊಂದನ್ನು ಸಿದ್ಧಪಡಿಸಿ, ಅದನ್ನು ಪುಣೆಯ ಭಂಡಾರ್‌ಕಾರ್‌ ಓರಿಯಂಟಲ್‌ ರಿಸರ್ಚ ಇನ್ಸ್ಟಿಟ್ಯೂಟ್‌ನಿಂದ ಪ್ರಕಟಿಸಿದರು (1933).
ಹಾಗೆ ಪ್ರಕಟಿಸುವಾಗ ಸೂಕ್ತಂಕರ್‌ ಅವರು ಬರೆದ ಬಹಳ ಮಹತ್ವದ ವಾಕ್ಯವೊಂದು ಇಂತಿದೆ- ""ವ್ಯಾಸರು ಬರೆದ ಮೂಲ ಪಠ್ಯ ಹೇಗಿದ್ದಿರಬಹುದೆಂದು ಸಾಧಿಸುವುದು ಸಾಧ್ಯವಿಲ್ಲದ ಕೆಲಸ, ಈಗ ನಾವು ಸಿದ್ಧಪಡಿಸಿದ್ದು ಮಹಾಭಾರತದ ಇನ್ನೊಂದು ಪಠ್ಯ ಅಷ್ಟೆ '. ಆದರೆ, ಅವರು ಏನೇ ಹೇಳಲಿ, ನಾವೀಗ ಲಿಖೀತ ಪಠ್ಯಗಳನ್ನೇ ಆಧರಿಸಿ ಮಾತಾಡಲು ಕಲಿತಿದ್ದೇವೆ.

ಕುತೂಹಲದ ವಿಷಯವೆಂದರೆ, ನಮ್ಮ ದೇಶದಲ್ಲಿ ವಿವಿಧ ಸಮುದಾಯಗಳು ಕಾವ್ಯವನ್ನು ತಮಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಳ್ಳುತ್ತವೆ ಎಂಬುದನ್ನು ನಾವೀಗ ಮರೆತುಬಿಟ್ಟಿರುವುದು. ತನ್ನ ಕಾಲದ, ಸಮುದಾಯದ, ಪ್ರದೇಶದ ಮತ್ತು ನಿರೂಪಕನ ಅಗತ್ಯಗಳಿಗೆ ಅನುಗುಣವಾಗಿ ಇಲ್ಲಿ ಕಾವ್ಯಗಳನ್ನು ಮತ್ತೆ ಮತ್ತೆ ಬರೆಯಲಾಗುತ್ತದೆ. ವಾಲ್ಮೀಕಿ ಮತ್ತು ವ್ಯಾಸರಂಥ ಮಹಾ ಪ್ರತಿಭೆಯ ಕವಿಗಳು ಅಂಥ ಅನೇಕ ನಿರೂಪಣೆಗಳಿಗೆ ಕಿವಿಗೊಟ್ಟು ತಮ್ಮ ಕಾವ್ಯಗಳನ್ನು ಬರೆದರೋ ಅಥವಾ ವ್ಯಾಸ, ವಾಲ್ಮೀಕಿಯರ ರಚನೆಗಳೇ ಹಲವು ಕಾವ್ಯಗಳನ್ನು ಸೃಜಿಸಿದುವೋ ಈಗ ಹೇಳುವುದು ಕಷ್ಟ. ಭಾರತ ದೇಶದಾದ್ಯಂತ ಹರಡಿರುವ ದಲಿತರಲ್ಲಿ ಲಭ್ಯವಿರುವ ಕಾವ್ಯಗಳನ್ನು ಗಮನಿಸಿದರೆ, ಮೊದಲಿನದೇ ಸತ್ಯಕ್ಕೆ ಹೆಚ್ಚು ಹತ್ತಿರ ಎಂದು ಊಹಿಸಲು ಸಾಧ್ಯವಿದೆ.
 


ಏನೇ ಇರಲಿ, ಬ್ರಿಟಿಷರು ಹಾಕಿಕೊಟ್ಟ ವಿಧಾನಗಳಿಂದ ನಮ್ಮನ್ನು ನಾವೇ ಬಿಡಿಸಿಕೊಂಡು, ಜನ ನಿರೂಪಣೆಗಳಿಗೆ ಕಿವಿಗೊಟ್ಟರೆ, ನಮಗೆ ಬೇರೆಯದೇ ಆದ ಭಾರತವೊಂದು ದೊರೆಯುತ್ತದೆ. ಬೃಹತ್‌ ಭಾರತದ ಬೇರೆ ಬೇರೆ ಭಾಗಗಳು, ಸಮುದಾಯಗಳು ಮಹಾಭಾರತ ಕತೆಯನ್ನು ತಮಗೆ ಬೇಕಾದಂತೆ ಒಗ್ಗಿಸಿಕೊಂಡ ರೀತಿ ಅನುಪಮವಾದುದು. ಭಾರತದ ಬೇರೆ ಬೇರೆ ಭಾಷೆಗಳಲ್ಲಿ ಮಹಾಭಾರತದ ಅನೇಕ ಘಟನೆಗಳನ್ನು ಮತ್ತೆ ಬರೆಯಲಾಗಿದೆ. ಇಲ್ಲಿ ಅವುಗಳನ್ನು ಗಮನಿಸದೆ, ಮೌಖೀಕ ರೂಪದಲ್ಲಿ ಮಾತ್ರ ಪ್ರಚಲಿತದಲ್ಲಿರುವ ಕೆಲವನ್ನು ಮುಂದೆ ಪರಿಚಯಿಸಲಾಗಿದೆ.

ನಮಗೆಲ್ಲಾ ತಿಳಿದಿರುವ ಹಾಗೆ, ನೆರೆಯ ತಮಿಳುನಾಡಿನಲ್ಲಿ ಕರಗವಿದೆ. ಅದು ದ್ರೌಪದಿಯನ್ನು ಆಧರಿಸಿದ ಆಚರಣೆ. ತಮಿಳರಿಗೆ ದ್ರೌಪದಿ ಮಹಾಭಾರತದ ಕೇವಲ ಒಂದು ಪಾತ್ರವಲ್ಲ, ಬದಲು ಆಕೆ ಅವರಿಗೆ ದೈವವೂ ಹೌದು. ಹಾಗಾಗಿ, ತಮಿಳುನಾಡಿನ ಮಹಾಭಾರತಗಳೆಲ್ಲ ದ್ರೌಪದಿ ಕೇಂದ್ರಿತವಾಗಿಯೇ ಬೆಳೆದವು. ಕೆಲವು ವರ್ಷಗಳ ಹಿಂದೆ ನಾನು ಮಧುರೈಯಲ್ಲಿ ತೆರುಕೂತ್ತು ನೋಡುತ್ತಿದ್ದೆ. ದ್ರೌಪದಿ ವಸ್ತ್ರಾಪಹಾರ ಅಂದಿನ ಪ್ರಸಂಗ. ದುಶ್ಯಾಸನ ಅಬ್ಬರದಿಂದಲೇ ರಂಗ ಪ್ರವೇಶ ಮಾಡಿದ. ದ್ರೌಪದಿ ಅಳುತ್ತಾ ರಂಗದ ನಡುವೆಯೇ ನಿಂತಿದ್ದಳು. ಇದ್ದಕ್ಕಿದ್ದಂತೆ ನನ್ನ ಊಹೆಗೂ ಮೀರಿ ದುಶ್ಯಾಸನನು ದ್ರೌಪದಿಯ ಕಾಲಿಗೆ ಧೊಪ್ಪನೆ ಬಿದ್ದು ಹೇಳಿದ- ""ಅಮ್ಮಾ ತಾಯಿ, ನೀನು ನಮ್ಮ ದೈವ, ನಿನ್ನನ್ನು ಮುಟ್ಟಬಾರದು, ನಿನ್ನ ಸೆರಗಿಗೆ ಕೈ ಹಾಕಬಾರದು, ಆದರೆ, ನಾನು ಒಬ್ಬ ನಟ, ಇದನ್ನು ಈಗ ಮಾಡಲೇ ಬೇಕಾಗಿದೆ, ನನ್ನ ತಪ್ಪನ್ನು ಮನ್ನಿಸು' ಅಂದವನೇ ಆಕೆಯ ಕಾಲು ಮುಟ್ಟಿ ನಮಸ್ಕರಿಸಿ, ಮತ್ತೆ ಎದ್ದು ನಿಂತು ಆರ್ಭಟಿಸತೊಡಗಿದ. ಕನ್ನಡದ ಕುಮಾರವ್ಯಾಸನಿಗಾಗಲಿ, ಸಂಸ್ಕೃತದ ವ್ಯಾಸನಿಗಾಗಲಿ ಇಂಥ ಒಂದು ಸ್ಥಿತಿಯನ್ನು ಊಹಿಸಿಕೊಳ್ಳುವುದೂ ಕಷ್ಟ . ಆದರೆ, ಜನ ಕಲ್ಪಿಸಿಕೊಂಡಿದ್ದಾರೆ. ಇಲ್ಲಿ ಕಾಪಿರೈಟಿನ ಪ್ರಶ್ನೆಯೇ ಇಲ್ಲ.

ತೆಲುಗು ಭಾಷೆಯಲ್ಲಿ ದೊರೆಯುವ ಅನೇಕ ಮಹಾಭಾರತಗಳಲ್ಲಿ ಪಾಂಡುವಿನ ಹೆಣವನ್ನು ಅವನ ಮಕ್ಕಳು ತಿನ್ನುವ ಪ್ರಸಂಗ ವಿಶೇಷವಾಗಿ ಬರುತ್ತದೆ. ಅಪ್ಪನ ಹೆಣವನ್ನು ಮಕ್ಕಳು ತಿಂದರೆ, ಮಕ್ಕಳು ಅಜರಾಮರವಾಗುತ್ತಾರೆ ಎಂಬ ನಂಬಿಕೆಯಲ್ಲಿ ಹಾಗೆ ಮಾಡಲಾಗುತ್ತದೆ. ಆದರೆ, ಕೃಷ್ಣ ಅದನ್ನು ತಪ್ಪಿಸಿ ಪಾಂಡವರಿಗೂ ಮರಣಬರುವಂತೆ ಮಾಡುತ್ತಾನೆ. ಅದು ಹೇಗೋ ಪಾಂಡುವಿನ ಕಿರುಬೆರಳನ್ನು ತಿಂದ ಸಹದೇವನು ಭವಿಷ್ಯವನ್ನು ತಿಳಿಯಬಲ್ಲ ಮಹಾಜಾnನಿಯಾಗುತ್ತಾನೆ. ಕೌರವನೊಡನೆ ಕಾಲ ಬೆರಳಲ್ಲಿ ಪಗಡೆಯಾಡುವ ದ್ರೌಪದಿಯ ಕಲ್ಪನೆ ಮೂಲತಃ ತೆಲುಗು ಭಾಷೆಯದ್ದು. ಮಲೆಯಾಳ ಭಾಷೆಯಲ್ಲಿ ಲಭ್ಯವಿರುವ ಮಹಾಭಾರತಗಳಲ್ಲಿ ಕೌರವ- ಪಾಂಡವರ ದ್ವೇಷವೇ ವಿಜೃಂಭಿಸಿದೆ. ನಿಶಾಲಕೂತ್ತುವಿನಲ್ಲಿ ಕೌರವರು ಪಾಂಡವರನ್ನು ಮಾಟದ ಮೂಲಕ ಕೊಲ್ಲಲು ಮಾಡುವ ಅಪೂರ್ವ ವಿವರಗಳಿವೆ.

ಸಂಸ್ಕೃತ ಓದಲಾಗದ ನನಗೆ ವೈಯಕ್ತಿಕವಾಗಿ ಗೊತ್ತಿರುವ ಮಹಾಭಾರತವು ಯಕ್ಷಗಾನ, ತಾಳಮದ್ದಳೆ‌ ಮತ್ತು ಹರಿಕತೆಗಳಿಂದ ತಿಳಿದದ್ದು. ಬಿಡಿ ಬಿಡಿಯಾಗಿ ಬೇರೆ ಬೇರೆ ಸಂದರ್ಭಗಳಲ್ಲಿ ಕೇಳಿದ ಅನೇಕ ಪ್ರಸಂಗಗಳಿಂದ ನಾನು ನನ್ನದೇ ಆದ ಮಹಾಭಾರತವೊಂದನ್ನು ಮನಸಿನಲ್ಲಿ ಕಂಡರಿಸಿಕೊಂಡಿದ್ದೇನೆ. ಆ ಮಹಾಭಾರತದಲ್ಲಿ, ಭದ್ರಗಿರಿ ಕೇಶವದಾಸರಿದ್ದಾರೆ, ಅಚ್ಯುತ ದಾಸರಿದ್ದಾರೆ, ಮಲ್ಪೆ$ಶಂಕರನಾರಾಯಣ ಸಾಮಗರೋ, ಶ್ರೇಣಿ ಗೋಪಾಲಕೃಷ್ಣ ಭಟ್ಟರೋ ಇದ್ದಾರೆ. ಎಲ್ಲೋ ಒಂದೆಡೆ ಕುಮಾರವ್ಯಾಸ ಕಾವ್ಯದ ಗಮಕವೂ ಇದೆ. ಕಲಾವಿದರು ಮಹಾಭಾರತದ ಕತೆಯನ್ನು ಎಲ್ಲಿಂದಲೇ ಸುರು ಮಾಡಲಿ, ಪೀಠಿಕಾ ರೂಪದ ಮಾತುಗಳಲ್ಲಿ ಹಿಂದಿನ ಕತೆಯನ್ನು ಹೇಳಿ, ಕತೆಯ ಎಳೆ ಕಡಿಯದಂತೆ ನೋಡಿಕೊಳ್ಳುತ್ತಾರೆ.
ಎಳವೆಯಲ್ಲಿ ತಲೆ ಕೂದಲು ಕತ್ತರಿಸುವಾಗ ಪಂಜದ ಕೃಷ್ಣಪ್ಪಹೇಳುತ್ತಿದ್ದ ಮಹಾಭಾರತವೇ ಬೇರೆ. ಆತ ಅದನ್ನು ಯಾರಿಂದ, ಯಾವಾಗ ಕಲಿತನೋ ದೇವರೇ ಬಲ್ಲ. ಒಮ್ಮೆ ಪಂಜ ಜಾತ್ರೆಯಲ್ಲಿ ಅದೇ ಕೃಷ್ಣಪ್ಪ ಕೀಚಕನ ಪಾತ್ರ ಮಾಡಿದ್ದರು. ಅವರ ವೇಷ ರಂಗಪ್ರವೇಶವಾಗುವಾಗ ಮಧ್ಯರಾತ್ರಿ ಎರಡು ಗಂಟೆಯಾದರೂ ಆಗಿರಬೇಕು, ಕೃಷ್ಣಪ್ಪನವರು ಆ ದಿನ ಅತ್ಯುತ್ಸಾಹದಲ್ಲಿದ್ದರು. ಆದರೇನು ಮಾಡೋಣ?
ಕೀಚಕ ರಂಗಪ್ರವೇಶಿಸಿ ಸೈರೇಂಧ್ರಿಯನ್ನು ಕಂಡು ಇನ್ನೂ ಹೆಚ್ಚು ಮತ್ತೇರಿಸಿಕೊಳ್ಳಬೇಕು, ಅಷ್ಟರಲ್ಲಿ ರಂಗದ ಎರಡೂ ಬದಿಯಲ್ಲಿದ್ದ ಗ್ಯಾಸ್‌ಲೈಟ್‌ ಭಗ್‌... ಭಗ್‌... ಅನ್ನತೊಡಗಿತು. ಅದರಲ್ಲಿ ಗ್ಯಾಸ್‌ ಕಡಿಮೆಯಾಗಿತ್ತು.
ಆಗ ಯಾರಾದರೂ ಬಂದು ಅದನ್ನು ಸರಿ ಮಾಡಬೇಕು. ಆದರೆ, ಯಾರೂ ಬರಲಿಲ್ಲ. ಸೈರೇಂಧ್ರಿಯನ್ನು ಕಂಡ ಕೀಚಕನ ಮತ್ತೇರುತ್ತಿತ್ತು. ಆದರೆ, ಗ್ಯಾಸ್‌ಲೈಟ್‌ನ ಬೆಳಕು ಕಡಿಮೆಯಾಗುತ್ತಿತ್ತು. ಕೀಚಕ ಥಟ್ಟನೆ, "ಎಲೈ ಸೈರೇಂಧ್ರಿಯೇ ಸ್ವಲ್ಪ ತಡೆ' ಎಂದು ಸೈರೇಂಧ್ರಿಯನ್ನು ನಿಲ್ಲಿಸಿದ, ಭಾಗವತರ ಬಳಿ ಸಿಂಹಾಸನವೆಂದು ಇರಿಸಲಾದ ಮರದ ಕುರ್ಚಿಯನ್ನು ಇದಿರು ತಂದು ಅದರ ಮೇಲೇರಿದ, ಗ್ಯಾಸ್‌ಲೈಟನ್ನು ಕೆಳಗಿಳಿಸಿ ಚೆನ್ನಾಗಿ ಪಂಪುಹೊಡೆದು ಮತ್ತೆ ಮೇಲೇರಿಸಿದ. ಕುರ್ಚಿಯನ್ನು ಮತ್ತೆ ಹಿಂದೆ ಇರಿಸಿ "ಎಲೈ ಸೈರೇಂಧ್ರಿಯೇ...' ಅಂತ ಪಾತ್ರ ಮುಂದುವರಿಸಿದ. ನನ್ನ ನೆನಪಿನ ಮಹಾಭಾರತದಲ್ಲಿ ಗ್ಯಾಸ್‌ಲೈಟಿಗೆ ಗಾಳಿ ಹಾಕಿದ ಕೀಚಕನೂ ಇದ್ದಾನೆ, ಬೀಡಿ ಸೇದುವ ಸುಯೋಧನನೂ ಇದ್ದಾನೆ.


ಕಳೆದ ಸುಮಾರು 12 ವರ್ಷಗಳಿಂದ ನಾನು ಉತ್ತರಭಾರತದಲ್ಲಿ ಓಡಾಡುತ್ತಿದ್ದೇನೆ. ಅಲ್ಲಿನ ಮೌಖೀಕ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳಲು ಹಿಂದಿ ಭಾಷೆಯ ಪ್ರಾದೇಶಿಕ ಪ್ರಬೇಧಗಳು ಒಂದು ದೊಡ್ಡ ತೊಡಕಾದರೂ ಪಂಡ್ವಾನಿ, ಪಾಂಡವಲೀಲಾ ಮೊದಲಾದ ಪ್ರದರ್ಶನಗಳನ್ನು ಕಂಡು ಸಂತಸ ಪಟ್ಟಿದ್ದೇನೆ. ಹಿಮಾಲಯದ ತಪ್ಪಲಿನಲ್ಲಿರುವ ಜನರಿಗೆ ಮಹಾಭಾರತ ಎಂದರೆ ಅದು ಹಿಡಿಂಬೆಯ ಕತೆ. ಹಿಮಾಚಲ ಪ್ರದೇಶದ ಮಂಡಿಯಲ್ಲಿ ಹಿಡಿಂಬಾ ದೇವಸ್ಥಾನವೂ ಇದೆ. ನನ್ನ ಅಮೇರಿಕನ್‌ ವಿದ್ಯಾರ್ಥಿಯೊಬ್ಬನ ಸಂಶೋಧನಾ ವಿಷಯವೇ ಹಿಡಿಂಬೆ. ಆತ ಆಕೆಯ ಬಗ್ಗೆ ಸಂಗ್ರಹಿಸಿದ ವಿವರಗಳು ನನ್ನ ಊಹೆಗೂ ನಿಲುಕದು ಈಗಿನ ಉತ್ತರಾಖಂಡದಾದ್ಯಂತ ಇರುವ ಗಡ್ಡಿ ಬುಡಕಟ್ಟಿನ ಜನರಿಗೆ ಜರಾಸಂಧನೇ ದೈವ.ಅವರ ನಂಬಿಕೆಯ ಪ್ರಕಾರ ಜರಾಸಂಧನು ಕಲಿಯುಗವನ್ನು ಬಂಧಿಸಿಟ್ಟು , ಜನರನ್ನು ಅನಾಹುತಗಳಿಂದ ರಕ್ಷಿಸಿದ್ದ, ಆದರೆ ಭೀಮನೆಂಬ ದ್ರೋಹಿಯು ಮೋಸದಿಂದ ಜರಾಸಂಧನನ್ನು ಕೊಂದು ಕಲಿಯುಗವನ್ನು ಸೆರೆಯಿಂದ ಬಿಡಿಸಿದ್ದರಿಂದ ಈಗ ಕೆಟ್ಟ ಘಟನೆಗಳೆಲ್ಲ ನಡೆಯುತ್ತಿವೆ. ಗಡ್ಡಿಗಳ ಪ್ರದರ್ಶನವೊಂದರಲ್ಲಿ, ಜರಾಸಂಧನ ದೂತನೊಬ್ಬ ಊರು ಸುತ್ತುವಾಗ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಭೇಟಿ ಮಾಡಿ, ಪ್ರಶ್ನೆಯೊಂದನ್ನು ಕೇಳಿದಾಗ, ಅವರು ಉತ್ತರ ಕೊಡಲು ತೆರೆದ ಬಾಯಿ ಮುಚ್ಚುವುದರೊಳಗಾಗಿ ಆತ ಪಾರ್ಲಿಮೆಂಟ್‌ ಭವನವನ್ನೂ ನೋಡಿ ಬಂದಿದ್ದ. ಕಾಂಗ್ರಾ ಪ್ರದೇಶದಲ್ಲಿ ದೊರೆಯುವ ನಿರೂಪಣೆಗಳ ಪ್ರಕಾರ ಪಾಂಡು ಸತ್ತ 12 ವರ್ಷಗಳ ಆನಂತರ ಕುಂತಿಗೆ ಮಾಂಸ ತಿನ್ನುವ ಬಯಕೆಯಾಗುತ್ತದೆ. ಆಗ ಭೀಮಾರ್ಜುನರು ಜೊತೆಯಾಗಿ ಬೇಟೆಯಾಡುತ್ತಾರೆ. ಕಥನದ ಮುಂದಿನ ವಿವರಗಳೆಲ್ಲ ಭೀಮಾರ್ಜುನರ ಬೇಟೆಗೇ ಸೀಮಿತವಾಗಿದೆ. ಈಗಿನ ಹಿಮಾಚಲ ಪ್ರದೇಶದ ಕಿನ್ನೂರ್‌ ಪ್ರದೇಶದಲ್ಲಿ ಜನಪ್ರಿಯವಾಗಿರುವ ನಿರೂಪಣೆಗಳ ಪ್ರಕಾರ ಮರಿಗಳೊಡನೆ ಆಡುವ ಮಂಗಗಳನ್ನು ನೋಡಿದ ಕುಂತಿಗೆ ಮಗುವಿನ ಬಯಕೆ ಮೂಡಿ, 12 ವರ್ಷಗಳವರೆಗೆ "ಋಷಿ ಮಾಮ'ನ ಸೇವೆ ಮಾಡಿ, ಮಕ್ಕಳನ್ನು ಪಡೆಯುತ್ತಾಳೆ. ಇಲ್ಲಿನ ದಲಿತರ ಪ್ರಕಾರ, ಪಾಂಡವರು ಬೆಟ್ಟದ ಮೇಲೆಯೂ, ಕೌರವರು ಅದೇ ಬೆಟ್ಟದ ಬುಡದಲ್ಲಿಯೂ ವಾಸಿಸುತ್ತಿದ್ದರು. ಪಾಂಡವರಿಗೆ ಒಬ್ಬಳು ತಂಗಿಯೂ ಇದ್ದಳು. ಅವಳೇ ಬೂರಾದೇವಿ. ನೀರಿನ ವಿಷಯದಲ್ಲಿ ಅವರ ನಡುವೆ ಜಗಳ ಬಂದಾಗ ಸೆಗಣಿಯ ಮನೆ ಮಾಡಿ ಪಾಂಡವರನ್ನು ಕೊಲ್ಲಲು ಕೌರವ ಪ್ರಯತ್ನಿಸುತ್ತಾನೆ. ಗಢವಾಲದ ಜನಪ್ರಿಯ ಪಾಂಡವಲೀಲಾದಲ್ಲಿ ಐವರು ಪಾತ್ರಧಾರಿಗಳ ಮೇಲೆ ಪಾಂಡವರು ಆವೇಶಿತರಾಗಿ ಜನರನ್ನು ಹರಸುತ್ತಾರೆ. ಜಮ್ಮು ಪ್ರದೇಶದ ಜನರು ತಮ್ಮನ್ನು ಶಲ್ಯ ಮಹಾರಾಜನ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ವನವಾಸದ ಸಂದರ್ಭದಲ್ಲಿ ಪಾಂಡವರು ಅಲ್ಲಯೇ ತಂಗಿದ್ದರಂತೆ. ಸ್ಥೂಲವಾಗಿ ಉತ್ತರ ಭಾರತೀಯ ಜನಪದರ ಪ್ರಕಾರ ಕೌರವರ ಒಟ್ಟು ಸಂಖ್ಯೆ 60, ಪಾಂಡವರ ಸಂಖ್ಯೆ ಐದು. ಪಾಂಡವರ ತಾಯಿ ಕಾತಮ, ಕೌರವರ ತಾಯಿ ನಿತಿನಿ.

ಭಾರತದ ಈಶಾನ್ಯ ಭಾಗಗಳಿಗೆ ಹೋದರೆ ಅಲ್ಲಿ ಕೌರವನ ಪಕ್ಷದವರೇ ಹೆಚ್ಚು ಪ್ರಸಿದ್ಧರು. ಭಗದತ್ತ, ಬಾಣಾಸುರ, ರುಕ್ಮ, ಬಭುÅವಾಹನರನ್ನು ಅಸ್ಸಾಮಿನ ಜನರು ತಮ್ಮ ಪೂರ್ವಜರೆಂದು ಭಾವಿಸುತ್ತಾರೆ. ಬೋಡೋಗಳ ಪ್ರಕಾರ ಕೃಷ್ಣನ ಹೆಂಡತಿ ರುಕ್ಮಿಣಿಯು ಬೋಡೋ ಕನ್ಯೆ.

ಮಧ್ಯ ಭಾರತದ ಮಹಾಭಾರತ ಕಥನಗಳಲ್ಲಿ ಭೀಮನೇ ನಾಯಕ. ಕೊಂಡ ಬುಡಕಟ್ಟಿನ ಜನರಲ್ಲಿ ಬಹಳ ಪ್ರಸಿದ್ಧವಾಗಿರುವ "ಭೀಮ ಸಿದಿ' ಎಂಬ ಕಥನ ಕಾವ್ಯದಲ್ಲಿ ಭೀಮನೇ ವಸ್ತ್ರಾಪಹಾರಕ. ಚೆಂದದ ಹುಡುಗಿಯರನ್ನು ನೋಡಿದಾಗ ಆತ ತನ್ನ ತಂದೆ ಪವನಾರ್‌ ದೇವನನ್ನು ಪ್ರಾರ್ಥಿಸುತ್ತಾನೆ. ಪವನಾರ್‌ನು ಜೋರಾಗಿ ಬೀಸಿ ಹುಡುಗಿಯರ ಬಟ್ಟೆ ಹಾರಿಸುತ್ತಾನೆ. ಭೀಮನು ಅಲ್ಲಿ ಮಳೆ ತರುವ ದೈವವೂ ಆಗಿರುವುದು ಇದಕ್ಕೆ ಪೂರಕವಾದ ವಿಚಾರ. ಕೊಂಡರಿಗೆ ಭೀಮನು ಫ‌ಲವಂತಿಕೆಯ ದೈವವೂ ಹೌದು.
ಬಿಂಜಾಲ್‌ ಬುಡಕಟ್ಟಿನವರಿಗೆ ಕೀಚಕನೆಂದರೆ ಇಷ್ಟ.

ದ್ರೌಪದಿ ಮತ್ತು ಕೃಷ್ಣರ ನಡವಣ ಸಂಬಂಧವೂ ಬೇರೆ ಬೇರೆ ಭಾರತೀಯ ಭಾಷೆಗಳಲ್ಲಿ ಕುತೂಹಲ ಹುಟ್ಟಿಸುವ ರೀತಿಯಲ್ಲಿ ಪ್ರತೀತಗೊಂಡಿದೆ. ಚತ್ತೀಸಗಢ ಪರಿಸರದಲ್ಲಿ ಪ್ರಚಲಿತದಲ್ಲಿರುವ ಪುಟ್ಟ ಕಥನ ಕಾವ್ಯವೊಂದರಲ್ಲಿ ಬಾಣದ ಮೊನೆಯನ್ನು ಕೃಷ್ಣನು ಹರಿತಗೊಳಿಸುತ್ತಿರುವಾಗ ಕೈಗೆ ಗಾಯ ಮಾಡಿಕೊಳ್ಳುತ್ತಾನೆ. ಆಗ ದ್ರೌಪದಿಯು ತನ್ನ ಸೆರ‌ಗಿಂದ ಹರಿದ ಬಟ್ಟೆಯ ತುಂಡೊಂದನ್ನು ಕೃಷ್ಣನ ಬೆರಳಿಗೆ ಕಟ್ಟಿ , ರಕ್ತ ಒಸರುವುದನ್ನು ನಿಲ್ಲಿಸುತ್ತಾಳೆ. ಅದೇ ಪ್ರದೇಶದ ಇನ್ನೊಂದು ನಿರೂಪಣೆಯ ಪ್ರಕಾರ, ಒಮ್ಮೆ ಕೃಷ್ಣನು ಪಾಂಡವರೊಡನೆ ಕೆರೆಯೊಂದರಲ್ಲಿ ಈಜುತ್ತಿರುವಾಗ ಆತನ ಲಂಗೋಟಿ ಕಳೆದು ಹೋಗುತ್ತದೆ.

ಪಾಂಡವರು ಸ್ನಾನದ ಆನಂತರ ಮೇಲೆ ಬಂದರೂ ಕೃಷ್ಣ ಬಾರದಾದ. ಆಗ ಪಕ್ಕದ ಕೆರೆಯಲ್ಲಿ ಗೆಳತಿಯರೊಂದಿಗೆ ಈಜಾಡುತ್ತಿದ್ದ ದ್ರೌಪದಿಗೆ ಅದು ಗೊತ್ತಾಗುತ್ತದೆ. ಅವಳು ಸೆರಗಿನಿಂದ ಹರಿದ ಸೀರೆಯ ತುಣುಕನ್ನು ಕೃಷ್ಣನೆಡೆಗೆ ಎಸೆಯುತ್ತಾಳೆ. ಅದನ್ನು ಲಂಗೋಟಿ ಮಾಡಿಕೊಂಡ ಕೃಷ್ಣನು ಮೇಲೆ ಬಂದು-ನನ್ನ ಕಷ್ಟಕ್ಕೆ ಆದೆ, ನಿನ್ನ ಕಷ್ಟಕ್ಕೆ ಸಹಾಯ ಮಾಡುತ್ತೇನೆ ಅನ್ನುತ್ತಾನೆ. ಹೀಗೆ ದ್ರೌಪದಿ ಕೊಟ್ಟ ಒಂದು ತುಂಡು ಬಟ್ಟೆಯನ್ನು ಮುಂದೆ ಕೃಷ್ಣನು ಅಕ್ಷಯಾಂಬರ ಮಾಡಿ ಕೃತಜ್ಞತೆ ಸಲ್ಲಿಸುತ್ತಾನೆ. ಏನಿದ್ದರೂ ಬೆರಳು, ರಕ್ತ, ಸೆರಗು ಮತ್ತು ಲಂಗೋಟಿಗಳ ಸುತ್ತ ಹೆಣೆಯಲಾದ ಈ ಕತೆಯು ಮತ್ತಷ್ಟು ವಿಶ್ಲೇಷಣೆಗೆ ಅರ್ಹವಾದುದು.
ಇವೆಲ್ಲವುಗಳನ್ನು ಗಮನಿಸಿದಾಗ ಈ ಕೆಳಗಿನ ಕೆಲವು ಅಂಶಗಳು ಸ್ಪಷ್ಟವಾಗುತ್ತವೆ-

.
ಮೌಖೀಕ ಮಹಾಭಾರತಗಳಲ್ಲಿ ಸ್ಥೂಲವಾಗಿ ಉತ್ತರ, ಪೂರ್ವ, ಮಧ್ಯ ಮತ್ತು ದಕ್ಷಿಣ ಭಾರತಗಳೆಂಬ ಪ್ರಬೇಧಗಳನ್ನು ಗುರುತಿಸಲು ಸಾಧ್ಯ. ಉತ್ತರ ಭಾರತದ ಕಥನಗಳು ಸಾಮಾನ್ಯವಾಗಿ ಪಾಂಡವರನ್ನೂ, ಪೂರ್ವ ಭಾರತದ ಕಥನಗಳು ಕೌರವರನ್ನೂ, ಮಧ್ಯ ಭಾರತದ ನಿರೂಪಣೆಗಳು ಭೀಮನನ್ನೂ , ದಕ್ಷಿಣ ಭಾರತದ ಕಥನಗಳು ದ್ರೌಪದಿಯನ್ನೂ ಕೇಂದ್ರವಾಗಿರಿಸಿಕೊಂಡು ಬೆಳೆದಿವೆ.

.
ಈ ಮೌಖೀಕ ಮಹಾಭಾರತಗಳನ್ನು ವ್ಯಾಸ ಭಾರತದೊಂದಿಗೆ ಹೋಲಿಸಿ ಬೆಲೆಕಟ್ಟುವುದು ತಪ್ಪು$. ಇವೆಲ್ಲವೂ ಸ್ವತಂತ್ರ ರಚನೆಗಳು.

.
ಮೌಖೀಕ ಮಹಾಭಾರತಗಳು ಪೂರ್ಣ ರೂಪದಲ್ಲಿ ದೊರೆಯುವುದು ಇಲ್ಲವೆಂಬಷ್ಟು ಕಡಿಮೆ. ಬದಲು ಹಲವು ಪ್ರಸಂಗಗಳಾಗಿ ಅವು ಒಡ ಮೂಡಿವೆ. ಅನೇಕ ಪ್ರಸಂಗಗಳನ್ನು ನೋಡಿದ ಅಥವಾ ಕೇಳಿದ ಪ್ರೇಕ್ಷಕರು ತಮ್ಮ ಮನಸ್ಸಿನಲ್ಲಿ ತಮಗೆ ತೋಚಿದ ಮಹಾಭಾರತವೊಂದನ್ನು ಪ್ರತೀತಗೊಳಿಸಿಕೊಂಡಿರುತ್ತಾರೆ. ಈ ಅರ್ಥದಲ್ಲಿ ಭಾರತದಲ್ಲಿ ಕೋಟ್ಯಂತರ ಮಹಾಭಾರತಗಳಿವೆ.

.
ಅನೇಕ ಮಹಾಭಾರತ ಪ್ರಸಂಗಗಳು ಪ್ರಾದೇಶಿಕ ವಿಶಿಷ್ಟವಾದ ಕೆಲವು ಆಚರಣೆಗಳನ್ನು ಸೃಷ್ಟಿ ಮಾಡಿವೆ. ಈ ಆಚರಣೆಗಳಲ್ಲಿ ಮಹಾಭಾರತದ ಅನೇಕ ಪಾತ್ರಗಳು ಪ್ರತಿವರ್ಷ ನವೀಕರಣಗೊಳ್ಳುತ್ತವೆ. ಕುಂತಿ, ಭೀಮ, ಅರ್ಜುನ, ದ್ರೌಪದಿ, ಅರವನ್‌ (ಅರ್ಜುನನ ಮಗ), ಹಿಡಿಂಬೆ, ಮತ್ತು ಕೃಷ್ಣ ಹೀಗೆ ಆಗಾಗ ಆಚರಣೆಗಳಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಾಗಿವೆ.

ಒಟ್ಟಿಂದ, ಮಹಾಭಾರತವು ಕೇವಲ ಪಠ್ಯಗಳ ಸಮೂಹವಲ್ಲ, ಬದಲು ಒಂದು ದೊಡ್ಡ ಪರಂಪರೆ ಎಂಬ ಅಂಶ ತಾನೇ ತಾನಾಗಿ ಪ್ರತೀತಗೊಳ್ಳುತ್ತದೆ.ಮೌಖೀಕ ಮಹಾಭಾರತಗಳು ಆಕಾಶದಲ್ಲಿರುವ ನಕ್ಷತ್ರಗಳ ಹಾಗೆ.ಅವುಗಳನ್ನು ನಾವು ಎಣಿಸಲಾರೆವು, ಅವುಗಳಿಗೆ ವ್ಯಾಕರಣವನ್ನೂ ಬರೆಯಲಾರೆವು, ಆದರೆ ಅವು ಆಗಸದ ಒಟ್ಟಂದವನ್ನು ಹೆಚ್ಚಿಸಿವೆ, ಹಾಗೆಯೇ ಈ ಹಲವು ಮಹಾಭಾರತಗಳು ಭಾರತ ದೇಶದ ಸೌಂದರ್ಯವನ್ನು ಸಂವರ್ಧಿಸಿವೆ.

 

 

ಶನಿವಾರ, ಅಕ್ಟೋಬರ್ 13, 2012

ಹನುಮನಹಳ್ಳಿಯ ಬ್ರಿಟೀಷ್ ಕಾಲದ ತಿಜೋರಿಗಳ ಕಥೆ


 

 

-ಸಿದ್ದರಾಮ ಹಿರೇಮಠ ಕೂಡ್ಲಿಗಿ

    ನಮ್ಮ ದೇಶವನ್ನು ಬ್ರಿಟಿಷರು 4೦೦ ವರ್ಷಗಳ ಕಾಲ ಆಳಿದರು ಎಂಬುದು ಇತಿಹಾಸದ ಮಾತು. ಈಗಿನ ಯುವಜನಾಂಗಕ್ಕೆ ಇದನ್ನು ಅರ್ಥೈಸಿಕೊಳ್ಳುವುದು ಇನ್ನೂ ಕಷ್ಟವೇ ಅನಿಸಬಹುದು. ಆದರೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ತೂಲಹಳ್ಳಿ ಬಳಿಯ ಹನುಮನಹಳ್ಳಿ ಗ್ರಾಮಕ್ಕೆ ಹೋದರೆ ಅಲ್ಲಿನ ಬಹುತೇಕ ಮನೆಗಳಲ್ಲಿ ಬ್ರಿಟಿಷರ ಕಾಲದ ತಿಜೋರಿಗಳು ಈಗಲೂ ಇವೆ. ಆದರೆ ಅವೆಲ್ಲ ಪಳೆಯುಳಿಕೆಗಳಂತಾಗಿ ಮೂಲೆ ಸೇರಿವೆ. ಇಷ್ಟೊಂದು ತಿಜೋರಿಗಳು ಈ ಗ್ರಾಮದಲ್ಲಿ ಹೇಗೆ ಸೇರಿದವೆಂಬುದೇ ಅಚ್ಚರಿಯ ಸಂಗತಿ. ಗ್ರಾಮಸ್ಥರಿಗೂ ಈ ಕುರಿತು ಗೊತ್ತಿಲ್ಲ. ವಿಶೇಷವೆಂದರೆ ಇವೆಲ್ಲವೂ ಗ್ರಾಮಸ್ಥರಿಗೆ ಸಮಸ್ಯೆಯಾಗಿ ಕುಳಿತಿರುವುದು.
 

 

    ತಾಲೂಕಿನ ತೂಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಹನುಮನಹಳ್ಳಿ ಕೂಡ್ಲಿಗಿ ತಾಲೂಕು ಕೇಂದ್ರದಿಂದ ಸುಮಾರು ೩೫ ಕಿ.ಮೀ ದೂರವಿದೆ. ಮೊದಲ ನೋಟಕ್ಕೇ ಕುಗ್ರಾಮದಂತೆ ಕಂಡುಬರುವ ಹನುಮನಹಳ್ಳಿಯಲ್ಲಿನ ಜನತೆ ತಮ್ಮ ಜಮೀನು, ಮನೆಯೊಂದಿಗೆ ನೆಮ್ಮದಿಯಿಂದ ಬದುಕಿದ್ದಾರೆ. ಒಕ್ಕಲುತನ ಪ್ರಧಾನ ವೃತ್ತಿ. ಕೂಲಿ ಕೆಲಸಕ್ಕೆ ಹೋಗುವ ಬಡಕುಟುಂಬಗಳೂ ಇಲ್ಲಿವೆ. ಆದರೆ ಹಳೆಯ ಮನೆಗಳಲ್ಲಿ ಹೆಜ್ಜೆಯಿರಿಸಿದರೆ ಕಂಡುಬರುವುದು ಬ್ರಿಟಿಷರ ಕಾಲದ ಭದ್ರವಾದ ತಿಜೋರಿಗಳು. ೪-೫ ಅಡಿ ಎತ್ತರದ ಈ ತಿಜೋರಿಗಳು ಬಹುತೇಕ ಮನೆಗಳ್ಲಲಿ ಫ್ರಿಜ್‌ಗಳ ರೀತಿಯಲ್ಲಿವೆ.
 
   ತಿಜೋರಿಗಳ ಮೇಲ್ಭಾಗದ್ಲಲಿ ಹಿತ್ತಾಳೆಯಲ್ಲಿ ಸಿದ್ಧಪಡಿಸಿದ ಬ್ರಿಟಿಷರ ರಾಜಲಾಂಛನವಿದೆ. ಮೇಲ್ಗಡ ಬ್ರಿಟಿಷ ರಾಜಮನೆತನದ ಕಿರೀಟ, ಅದರೆ ಮೇಲೆ ಸಿಂಹ, ಎರಡೂ ಬದಿಯಲ್ಲಿ ಸಿಂಹ ಮತ್ತು ಕುದುರೆ ಚಿತ್ರಗಳಿವೆ. ಚಿನ್ಹೆಯಲ್ಲಿ ಲ್ಯಾಟಿನ್ ಭಾಷೆಯ್ಲಲಿರುವ gÀĪÀ honi soit qui mal y pense ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ evil be to him who evil thinks ಎಂದಾಗುವುದು. ಇದರ ಕೆಳಗಡೆಯಲ್ಲಿಯೂ ಲ್ಯಾಟಿನ್ ಭಾಷೆಯಲ್ಲಿ dieuet mon droit ಎಂದಿದೆ. ಇಂಗ್ಲಿಷ್‌ನಲ್ಲಿ ಇದರರ್ಥ god and my right ಎಂದಾಗುವುದು.

 

 

ವಿಶೇಷವೆಂದರೆ ಈ ತಿಜೋರಿಗಳು ಎಷ್ಟು ಭದ್ರ ಹಾಗೂ ಉಕ್ಕಿನ ಬಾಗಿಲುಗಳನ್ನು ಹೊಂದಿವೆಯೆಂದರೆ ಇವನ್ನು ಕೊಂಚ ಸರಿಸಲೂ ಸಾಧ್ಯವಿಲ್ಲ. ಟನ್‌ಗಟ್ಟಲೆ ತೂಗುವ ಈ ತಿಜೋರಿಗಳನ್ನು ಎತ್ತಿ ಕೊಂಚ ಸರಿಸಲು ಕನಿಷ್ಟ ೮ ಜನರಾದರೂ ಬೇಕು. ಅಲ್ಲದೆ ಕೆಲವು ಮನೆಗಳಿಗೆ ಹೊಸರೂಪ ನೀಡಿ ನಿರ್ಮಿಸುವಾಗ ಇವುಗಳನ್ನು ಬೇರೆಡೆ ಸಾಗಿಸಲು ಸಾಧ್ಯವಾಗದೆ ಅವುಗಳನ್ನು ಇದ್ದಲ್ಲಿಯೇ ಇರಲು ಬಿಟ್ಟಿದ್ದಾರೆ. ಮತ್ತೆ ಕೆಲವರು ಇದಾವ ಸಮಸ್ಯೆ ಎಂದು ತಮ್ಮ ಸಂಬಂಧಿಕರಿಗೋ, ಸ್ನೇಹಿತರಿಗೋ ಕಾಣಿಕೆಯಾಗಿ ನೀಡಿ ಕೈ ತೊಳೆದುಕೊಂಡಿದ್ದಾರೆ. ಇಂದಿಗೂ ಸುಸ್ಥಿತಿಯಲ್ಲಿರುವ ಈ ತಿಜೋರಿಗಳ ಬಾಗಿಲನ್ನು ತೆರೆಯಲು ೨-೩ ಬೀಗದ ಕೈಗಳಿವೆ. ಎಲ್ಲವನ್ನೂ ಒಟ್ಟಿಗೆ ಬಳಸಿದಾಗ ಮಾತ್ರ ತಿಜೋರಿ ತೆರೆಯುತ್ತದೆ. ಬಾಗಿಲುಗಳೇ ಅಂಗೈಯಗಲ ಗಾತ್ರವನ್ನು ಹೊಂದಿವೆ. ಒಳಗಡೆ ೨-೩ ಖಾನೆಗಳಿವೆ. ಹಿಂದಿನ ಕಾಲದವರು ಹಣ, ಒಡವೆಗಳನ್ನಿರಿಸುತ್ತಿದ್ದರೋ ಏನೋ, ಈಗ ಮಾತ್ರ ಅಲ್ಲಿ ಕೆಲವು ಕಾಗದ ಪತ್ರಗಳನ್ನು ಹೊರತುಪಡಿಸಿದರೆ ಏನೇನೂ ಇಲ್ಲದೆ ಖಾಲಿಯಾಗಿವೆ.

ಯಾವಾಗಲೋ ನಮ್ಮ ಮುತ್ತಾತರ ಕಾಲದಿಂದ ತಿಜೋರಿಗಳು ಹಂಗೇ ಅದಾವ ಸರ್, ಅವನ್ನು ಮನ್ಯಾಗ ಇಟ್ಟೀವಷ್ಟೇ ಅದರಿಂದೇನೋ ಪ್ರಯೋಜನಿಲ್ಲ ಎಂದು ಗ್ರಾಮದ ಕೆ.ಚನ್ನಬಸಪ್ಪ ಹೇಳುತ್ತಾರೆ. ನಮ್ ದುಡಿಮೆ ನಾವು ಆರಾಮದೀವಿ, ಹೊಸಾ ಮನಿ ಕಟ್ಬೇಕಂದ್ರ ಅವನ್ನ ಏನ್ಮಾಡಬೇಕೆಂಬೂದ ದೊಡ್ಡ ಸಮಸ್ಯೆಎಂದು ಬಣಕಾರ ಚನ್ನಬಸಪ್ಪ, ಮಾಗಡಿ ಹೆಗ್ಗನಗೌಡ್ರು ಹೇಳುತ್ತಾರೆ.

ಗ್ರಾಮದಲ್ಲೇನೋ ತಿಜೋರಿಗಳಿವೆ, ಆದರೆ ಎಲ್ಲವೂ ಖಾಲಿಯಾಗಿವೆ ಇನ್ನೂ ವಿಚಿತ್ರವೆಂದರೆ ಇಲ್ಲಿನ ಜನತೆಗೆ ಅವು ದೊಡ್ಡ ಸಮಸ್ಯೆಯಾಗಿ ಕೂತಿವೆ.

ಸೋಮವಾರ, ಅಕ್ಟೋಬರ್ 8, 2012

ಎರಡು ವರ್ಷ ಪೂರೈಸಿದ ಕನ್ನಡ ಜಾನಪದ ಬ್ಲಾಗ್…




  ಇದೇ ಅಕ್ಟೋಬರ್ 7ನೇ ತಾರೀಕಿಗೆ ಕನ್ನಡ ಜಾನಪದ ಬ್ಲಾಗ್  ಎರಡು ವರ್ಷ ಪೂರೈಸಿ, ಮೂರನೆ ವರ್ಷಕ್ಕೆ ಕಾಲಿಟ್ಟಿದೆ. ಇದೊಂದು ಪುಟ್ಟ ಸಂಭ್ರಮ ನನಗೆ. ಕನ್ನಡ ಜಾನಪದ ಸಂಬಂದಿಸಿದಂತೆ ಕನ್ನಡದಲ್ಲಿ ಗೂಗಲ್ ಹುಡುಕಾಟ ಮಾಡಿದವರಿಗೆ ಈಗ ತಕ್ಕಮಟ್ಟಿಗೆ ಪಲಿತಾಂಶಗಳು ಬರುತ್ತಿರುವುದು ಸಂತಸದ ಸಂಗತಿ. 2010 ರ ಅಕ್ಟೋಬರ್ 7 ರಂದು ಕನ್ನಡ ಜಾನಪದ ಬ್ಲಾಗ್ ಆರಂಭಿಸಿದಾಗ ಆಗಿನ್ನು ಕನ್ನಡ ಜಾನಪದ ಕುರಿತಂತೆ ಒಂದೇ ಒಂದು ವೆಬ್ ತಾಣವೂ ಇರಲಿಲ್ಲ. ಈಗ ಕರ್ನಾಟಕ ಜಾನಪಪದ ವಿಶ್ವವಿದ್ಯಾಲಯದ ವೆಬ್ ಸೈಟ್, ಜಾನಪದ ಅಕಾಡೆಮಿ ವೆಬ್ ಸೈಟ್, ರಾಮನಗರದ ಜಾನಪದ ಲೋಕದ ವೆಬ್ ಸೈಟ್ ಚಾಲನೆಯಲ್ಲಿವೆ. ಇವುಗಳಿಗಿಂತ ಮುಂಚಿನ ಪುಟ್ಟ ಪ್ರಯತ್ನ ಕನ್ನಡ ಜಾನಪದ.

         ವಯಕ್ತಿಕವಾಗಿ ನನ್ನ ಮಿತಿಗಳ ಮಧ್ಯೆ ಕನ್ನಡ ಜಾನಪದ ಬ್ಲಾಗ್ ಗೆ ಎರವಲು ತಂದು, ಬೇರೆಯವರಿಂದ ಬರೆಸಿ, ನಾನು ಕೆಲವು ಟಿಪ್ಪಣಿರೂಪದ ಬರಹ ಮಾಡಿ ಬ್ಲಾಗ್ ನ್ನು ನಿರಂತರಗೊಳಿಸುವ ಪ್ರಯತ್ನವನ್ನು ಮಾಡಿದ್ದೇನೆ. ಈ ಮದ್ಯೆ ಇದೇ ಬ್ಲಾಗನ್ನು ವೆಬ್ ಮ್ಯಾಗಜಿನ್ ಮಾಡಲು ಪ್ರಯತ್ನಿಸಿ ಹಣಕಾಸಿನ ತೊಂದರೆಯಿಂದ ಈ ಕನಸನ್ನು ಒಂದಷ್ಟು ದೂರ ಮುಂದೂಡಿದ್ದೇನೆ.  ಈತನಕ 150 ಕ್ಕಿಂತ ಹೆಚ್ಚಿನ ಬರಹಗಳನ್ನು ಬ್ಲಾಗಿನಲ್ಲಿ ಪ್ರಕಟಿಸಲಾಗಿದೆ. ಬ್ಲಾಗ್ ನೋಡುವಿಕೆ ಸಂಖ್ಯೆ 21 ಸಾವಿರ ದಾಟಿದೆ. ಯು.ಆರ್. ಅನಂತಮೂರ್ತಿ,ಪುರುಷೋತ್ತಮ ಬಿಳಿಮಲೆ, ಬಿ.ಎ. ವಿವೇಕರೈ, ರಹಮತ್ ತರೀಕೆರೆ , ಅಂಬಳಿಕೆ ಹಿರಿಯಣ್ಣ ಮೊದಲಾದವರು ಈ ಬ್ಲಾಗ್ ಪ್ರಯತ್ನವನ್ನು ಮೆಚ್ಚಿಕೊಂಡಿದ್ದಾರೆ. ಪ್ರಜಾವಾಣಿ, ವಿಜಯಕರ್ನಾಕಟ, ಸಂಯುಕ್ತ ಕರ್ನಾಕಟ ಪತ್ರಿಕೆಗಳಲ್ಲಿ ಜಾನಪದ ಬ್ಲಾಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಜಾನಪದ ಬ್ಲಾಗ್ ಬರಹಗಳು ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
 ಬ್ಲಾಗ್ ನ ಹೊಟ್ಟೆತುಂಬಿಸಿದವರು ಅನೇಕರು ಅವರೆಲ್ಲರನ್ನೂ ನೆನೆಯುವೆ. ಇನ್ನಷ್ಟು ಹೊಸ ಶಕ್ತಿ, ಸಂವೇದನೆ, ಕ್ರಿಯಾಶೀಲವಾಗಿ ಜಾನಪದ ಬ್ಲಾಗ್ ನ್ನು ನಿರ್ವಹಿಸುವ ಪ್ರಯತ್ನವನ್ನು ಮುಂದುವರೆಸುವೆ. ಇದಕ್ಕೆ ಎಂದಿನಂತೆ ಸ್ನೇಹಿತರ ಸಹಕಾರ ಇದ್ದೇ ಇರುತ್ತೆ ಎಂದು ಭಾವಿಸುವೆ.

                                                                                               ಕನ್ನಡ ಜಾನಪದ ಬ್ಲಾಗಿಗ
                                                                                            ಡಾ. ಅರುಣ್ ಜೋಳದಕೂಡ್ಲಿಗಿ