ಶುಕ್ರವಾರ, ಜುಲೈ 14, 2017

ಭಾವೋನ್ಮಾದದ ರಾಜಕಾರಣ



     ಅನುಶಿವಸುಂದರ್
 ghorkland ಗೆ ಚಿತ್ರದ ಫಲಿತಾಂಶ



ಗೋರ್ಖಾಲ್ಯಾಂಡ್ ವಿವಾದವನ್ನು ಬಗೆಹರಿಸಲು ಪಶ್ಚಿಮ ಬಂಗಾಳ ಸರ್ಕಾರವು ರಾಜಕೀಯ ಮಾತುಕತೆಗೆ ಮುಂದಾಗಬೇಕು.

ಜನರು ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಒಂದು ಜೀವಂತ ಪ್ರಜಾತಂತ್ರದ ಸಂಕೇತ. ಆದರೆ ಯಾವುದೇ ಬಗೆಯ ಭಾವೋನ್ಮಾದವು ಪ್ರಜಾತಂತ್ರಕ್ಕೆ ಅಪಾಯವನ್ನೇ ಒಡ್ಡುತ್ತದೆ. ಏಕೆಂದರೆ ಪ್ರಜಾತಾಂತ್ರಿಕ ರಾಜಕಾರಣ ಸಾಧ್ಯವಾಗುವುದು ವಿವೇಚನೆಯುಳ್ಳ ನಾಗರಿಕರಿದ್ದಾಗ ಮಾತ್ರ. ಅದಕ್ಕೆ ತದ್ವಿರುದ್ಧವಾಗಿ ಭಾವೋನ್ಮಾದವು ವೀವೇಕಶೂನ್ಯತೆಯನ್ನು ಹೆಚ್ಚು ಮಾಡುತ್ತದೆ. ಇಂದು ಭಾರತದ ರಾಜಕಾರಣವು ಜನರಲ್ಲಿ ಉನ್ಮಾದವನ್ನು ಕೆರಳಿಸುವಂಥ ವಿಷಯಗಳ ಸುತ್ತವೇ ಕೇಂದ್ರೀಕರಿಸಲ್ಪಟ್ಟಿದೆ; ಗೋಹತ್ಯೆ, ಲವ್ ಜೆಹಾದ್, ಕಪ್ಪು ಹಣ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಪ್ರತ್ಯೇಕತಾವಾದ. ಪ್ರತ್ಯೇಕತಾವಾದವೆಂಬ ಗುಮ್ಮವಂತೂ ರಾಜಕೀಯ ಸ್ವಾಯತ್ತತೆಯ ಹಕ್ಕಿನ ಕುರಿತಾದ ಮುಕ್ತ ಚರ್ಚೆಯನ್ನೂ ಅಸಾಧ್ಯಗೊಳಿಸಿಬಿಡುತ್ತಿದೆ. ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯು ಇಂದು ಎದುರಿಸುತ್ತಿರುವ ಬಿಕ್ಕಟ್ಟು ಪ್ರಜಾತಾಂತ್ರಿಕ ಸಂವಾದದ ಅವಕಾಶಗಳು ಮುರುಟಿಹೋಗುತ್ತಿರುವುದಕ್ಕೆ ಸೂಚಕವಾಗಿದೆ.

ಸುಮಾರು ೪೫ ವರ್ಷಗಳ ನಂತರಕಳೆದ ಜೂನ್ ರಂದುಪಶ್ಚಿಮ ಬಂಗಾಳದ ಸರ್ಕಾರವು ಡಾರ್ಜಲಿಂಗ್ನಲ್ಲಿ ತನ್ನ ಸಂಪುಟ ಸಭೆಯನ್ನು ನಡೆಸುತ್ತಿರುವಾಗಲೇ ಗೋರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನವೂ ನಡೆಯಿತು. ಪಶ್ಚಿಮ ಬಂಗಾಳದ ಎಲ್ಲಾ ಶಾಲೆಗಳಲ್ಲೂ ಬಂಗಾಳಿಯನ್ನು ಕಡ್ಡಾಯ ಮಾಡುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ನಿರ್ಧಾರವು ಕುದಿಯುತ್ತಿದ್ದ ಜನರ ಅಸಮಾಧಾವು ಹೊತ್ತಿ ಉರಿಯಲು ಕಾರಣವಾಯಿತು. ಆದರೆ ನಿರ್ಧಾರವು ಪ್ರಧಾನವಾಗಿ ಬಂಗಾಳಿ ಮಾತನಾಡುವ ಡಾರ್ಜಲಿಂಗ್ ಗಿರಿಪ್ರಾಂತ್ಯಗಳಿಗೆ ಅನ್ವಯವಾಗುವುದಿಲ್ಲವೆಂದು, ರಾಜ್ಯ ಸಚಿವ ಸಂಪುಟವು ಡಾರ್ಜಲಿಂಗ್ನಲ್ಲಿ ಭೇಟಿ ಮಾಡುವ ವೇಳೆಗಾಗಲೇಬ್ಯಾನರ್ಜಿಯವರು ಸ್ಪಷ್ಟೀಕರಣವನ್ನು ಕೊಟ್ಟಾಗಿತ್ತು. ಆದರೆ ವೇಳೆಗಾಗಲೇ ಭಾಷಾ ವಿಷಯವು ಗೋರ್ಖಾಲ್ಯಾಂಡಿನ ಬೇಡಿಕೆಗೆ ಮರುಹುಟ್ಟು ನೀಡಾಗಿತ್ತು. ಸರ್ಕಾರವು ತನ್ನ ಪೊಲೀಸ್, ಅರೆ ಸೇನಾಪಡೆಗಳು ಹಾಗೂ ಸೇನೆಯನ್ನು ಸಹ ಬಳಸಿ ಹೋರಾಟವನ್ನು ಹತ್ತಿಕ್ಕಲು ಮುಂದಾಯಿತು

ಪಶ್ಚಿಮ ಬಂಗಾಳದ ಭೌಗೋಳಿಕ ಸಮಗ್ರತೆಯ ಹಿತಾಸಕ್ತಿಯಿಂದ ಸೇನಾ ಮಧ್ಯಪ್ರವೇಶ ಅತ್ಯಗತ್ಯವಾಗಿತ್ತೆಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದ ರಾಜ್ಯ ಸರ್ಕಾರ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿತು. ಇದು ಒಂದು ಸಾಮೂಹಿಕ ಉನ್ಮಾದವನ್ನೇ ಕೆರಳಿಸಿಬಿಟ್ಟಿತು. ಉನ್ಮತ್ತ ಬಂಗಾಳಿ ಸಂಸ್ಕೃತಿ ಪ್ರತಿಪಾದಕರು ಡಾರ್ಜಲಿಂಗನ್ನು ಕಾಶ್ಮೀರದ ಪ್ರಕ್ಷುಬ್ಧತೆಗೆ ಹೋಲಿಸುವ ಅವಸರ ಮಾಡಿದರು. ಎರಡೂ ಚಳವಳಿಗಳೂ ಭಾರತದಿಂದ ಪ್ರತ್ಯೇಕಗೊಳ್ಳಬೇಕೆಂಬ ಆಗ್ರಹದಿಂದ ನಡೆಯುತ್ತಿರುವ ಪ್ರತ್ಯೇಕತಾವಾದವೆಂದು ಬಿತ್ತರಿಸಲಾಯಿತು. ಆದರೆ ಕಾಶ್ಮೀರದ ಸ್ವ ನಿರ್ಣಂii ಹೋರಾಟದ ಬೇಡಿಕೆ ಪ್ರತ್ಯೇಕ ರಾಷ್ಟ್ರವನ್ನು ಕೇಳುತ್ತಿದ್ದರೆ ಗೋರ್ಖಾಲ್ಯಾಂಡ್ ಚಳವಳಿ ಭಾರತದೊಳಗೆ ಒಂದು ಸ್ವಾಯತ್ತ ರಾಜ್ಯದ ಸ್ಥಾನಮಾನವನ್ನಷ್ಟೇ ಕೇಳುತ್ತಿದೆಯೆಂಬ ನಿಚ್ಚಳಸತ್ಯವು ಪ್ರಕ್ರಿಯೆಯಲ್ಲಿ ಮರೆಮಾಚಲ್ಪಟ್ಟಿತು. ಉದ್ದೇಶಪೂರ್ವಕ ಮರೆವನ್ನು ಕೋಲ್ಕತ್ತದ ಮಾಧ್ಯಮಗಳು ಮತ್ತಷ್ಟು ಪೋಷಿಸಿದವು. ಅವುಗಳಲ್ಲಿ ಪ್ರಭಾವಿಗಳು ಮತ್ತಷ್ಟು ಮುಂದೆ ಹೋಗಿ ಒಂದೆಡೆ ಕೇಂದ್ರ ಸರ್ಕಾರವು  ಕಾಶ್ಮೀರದ ಪ್ರತ್ಯೇಕತಾವಾದವನ್ನು ಉಕ್ಕಿನ ಪಾದದಿಂದ ಮಣಿಸುತ್ತಿದ್ದರೆ ಉತ್ತರ ಬಂಗಾಳದಲ್ಲಿ ಮಾತ್ರ ಹಿಂಸಾಚಾರವನ್ನು ಅಡಗಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆಯೆಂದು ಆಪಾದಿಸಿದರು. ಬಗೆಯ ತರ್ಕ ಸರಣಿಯಲ್ಲಿ ಮೊದಲಿಗೆ ಬಲಿಯಾಗುವುದು ತಾರ್ಕಿಕ ವಿವೇಚನೆಯೇ. ಜನಪ್ರಿಯ ಚಳವಳಿಗಳ ಮೇಲಿನ ದಮನವು ತಾತ್ಕಾಲಿಕವಾಗಿ ಒಂದು ಚಳವಳಿಯನ್ನು ಹತ್ತಿಕ್ಕಬಹುದೇ ವಿನಃ ಅದರ ಹುಟ್ಟಿಗೆ ಕಾರಣವಾದ ಅಂಶಗಳನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂಬ ಸತ್ಯದ ಬಗೆಗಿನ ನಮ್ಮ ಸಾಮೂಹಿಕ ವಿಸ್ಮೃತಿಯನ್ನು ಬಗೆಯ ತರ್ಕವು ಮತ್ತಷ್ಟು ಗಟ್ಟಿಗೊಳಿಸುತ್ತದೆ.


ರಾಜ್ಯ ಸರ್ಕಾರವು ಜಿಜೆಎಂನ ಪ್ರತಿಪಾದನೆಗಳ ಯಥಾರ್ಥತೆಯನ್ನು ಪರಿಶೀಲಿಸದೆ ಅವರ ಹೋರಾಟಕ್ಕೆ ಖಂಡಿತಾ ಮಣಿಯಬಾರದು. ಮೊದಲಿಗೆ, ಗೋರ್ಖಾಲ್ಯಾಂಡ್ ಚಳವಳಿಯು ಸಂಘಟಿಸಲು ಯತ್ನಿಸುತ್ತಿರುವ ಭಾಷಾ-ಜನಾಂಗೀಯ ಅಸ್ಮಿತೆಯ ಭೂಮಿಕೆಯನ್ನು ಪ್ರಶ್ನಿಸಬಹುದಾಗಿದೆ. ಗೋರ್ಖಾ (ಅಥವಾ ಗೂರ್ಖಾ) ಎಂಬ ಪದದ ಮೂಲವು ವಸಾಹತುಶಾಹಿ ಸೈನಿಕ ಜನಾಂಗದ (ಮಾರ್ಷಲ್ ರೇಸ್) ಸಿದ್ಧಾಂತದಲ್ಲಿದ್ದು ಅದರಡಿಯಲ್ಲಿ ವಸಾಹತುಶಾಹಿಗಳು ವಿವಿಧ ಭಾಷಿಕ ಜನಾಂಗಗಳನ್ನು ಒಟ್ಟುಗೂಡಿಸಿ ಸೇನೆಗೆ ಭರ್ತಿ ಮಾಡಿಕೊಂಡರೆಂದು ಇತಿಹಾಸಕಾರ ಲಿಯೋನೆಲ್ ಕಪ್ಲಾನ್ ಪ್ರತಿಪಾದಿಸುತ್ತಾರೆ. ಆದರೆ ವಾದ ಅದರ ನ್ಯಾಯಸಮ್ಮತೆತಯನ್ನು ನಿರಾಕರಿಸುವುದೇ? ಎಲ್ಲಾ ಸಾಮುದಾಯಿಕ ಅಸ್ಮಿತೆಗಳು(ಸಾಂಸ್ಕೃತಿಕ, ಧಾರ್ಮಿಕ, ಭಾಷಿಕ, ಜನಾಂಗೀಯ, ರಾಷ್ಟ್ರೀಯ) ನಿಸ್ಸಂಶಯವಾಗಿ ಇತಿಹಾಸದ ಉತ್ಪನ್ನಗಳೇ. ಇಂದು ನಾವು ಗುರುತಿಸಿಕೊಳ್ಳುವ ಬಹುಪಾಲು ಅಸ್ಮಿತೆಗಳೆಲ್ಲವೂ ಹೆಚ್ಚೂ ಕಡಿಮೆ ವಸಾಹತುಶಾಹಿಯೊಂದಿಗಿನ ಮುಖಾಮುಖಿಯಲ್ಲಿ ಕಟ್ಟಿಕೊಂಡಿರುವುವೇ ಆಗಿವೆ. ಬ್ರಿಟನ್ನಿನ ವೃತ್ತಿಪರ ಮಧ್ಯಮವರ್ಗದ ಎರಕದಲ್ಲೇ ರೂಪುಗೊಂಡ ಬಂಗಾಳಿ ಭದ್ರಲೋಕದ ಅಸ್ಮಿತೆ ನ್ಯಾಯಸಮ್ಮತವಾದದ್ದಾದರೆ ಉತ್ತರ ಬಂಗಾಳದಲ್ಲಿ ಅದರ ರಾಜಕೀಯ ಯಾಜಮಾನ್ಯಕ್ಕೆ ಸವಾಲೆಸೆಯುತ್ತಿರುವ ಗೋರ್ಖಾ ಅಸ್ಮಿತೆ ಏಕೆ ನ್ಯಾಯಸಮ್ಮತವಾಗುವುದಿಲ್ಲ?


 ಎಲ್ಲಕ್ಕಿಂತ ಹೆಚ್ಚಿಗೆ ಕಾಡಬೇಕಾದ  ಪ್ರಶ್ನೆಯೆಂದರೆ ಜಿಜೆಎಂ ಯಾರನ್ನು ಪ್ರತಿನಿಧಿಸುತ್ತದೆ ಮತ್ತು ಯಾರನ್ನು ಹೊರಗಿಡಲು ಬಯಸುತ್ತದೆ ಎಂಬುದು. ಗೋರ್ಖಾ ಸಮುದಾಯವೊಂದೇ ಉತ್ತರ ಬಂಗಾಳದಲ್ಲಿರುವ ಏಕೈಕ ಜನಾಂಗೀಯ ಸಮುದಾಯವೇನಲ್ಲ. ಹೀಗಾಗಿ ಅಲ್ಲಿರುವ ಇತರೇ ಜನಾಂಗೀಯ ಸಮುದಾಯಗಳನ್ನು ಜಿಜೆಎಂ ಎಷ್ಟು ಪ್ರತಿನಿಧಿಸುತ್ತದೆ? ಅಷ್ಟು ಮಾತ್ರವಲ್ಲ. ಗೋರ್ಖಾಗಳು ಬಹುಸಂಖ್ಯಾತರಾಗಿರುವ ಡಾರ್ಜಲಿಂಗ್ ಮಾತ್ರವಲ್ಲದೆ ಸಿಲಿಗುರಿ ಪಟ್ಟಣವನ್ನೂ ಒಳಗೊಂಡಂತೆ ವಿಶಾಲವಾದ ಬೆಟ್ಟದ ತಪ್ಪಲು ಮತ್ತು ಮೈದಾನ ಪ್ರದೇಶಗಳೂ ಸಹ ಗೋರ್ಖಾಲ್ಯಾಂಡಿನ ಭಾಗವಾಗಬೇಕೆಂಬ ಹಕ್ಕೊತ್ತಾಯವನ್ನು  ಜಿಜೆಎಂ ಮುಂದಿಟ್ಟಿದೆ. ಆದರೆ ಪ್ರದೇಶಗಳಲ್ಲಿ ಗೋರ್ಖಾಗಳು ಅಲ್ಪಸಂಖ್ಯಾತರಾಗಿದ್ದಾರೆ. ಹೀಗಾಗಿ ಗೋರ್ಖಾಗಳಲ್ಲದವರನ್ನು ತಮ್ಮ ಪ್ರಸ್ತಾವಿತ ಗೋರ್ಖಾಲ್ಯಾಂಡಿನಲ್ಲಿ ಜಿಜೆಎಂ ಯಾವ ರೀತಿಯಲ್ಲಿ ಸೇರಿಸಿಕೊಳ್ಳಬಯಸುತ್ತದೆಂದು ಪ್ರಶ್ನಿಸಲೇ ಬೇಕಾಗುತ್ತದೆ. ಆದರೆ ಇದು ಸಾಧ್ಯವಾಗುವುದು ಒಂದು ಮುಕ್ತ ಪ್ರಜಾತಾಂತ್ರಿಕ ಸಂವಾದದ ಮೂಲಕ. ಶಕ್ತಿ ಪ್ರದರ್ಶನದ ಮೂಲಕವೋ ಅಥವಾ ಭೌಗೋಳಿಕ ಸಮಗ್ರತೆಯ ರಕ್ಷಣೆಯೆಂಬ ಭಾವೋನ್ಮಾದದ ಪರಿಸರದಲ್ಲೋ ಅಂಥ ಸಂವಾದ ಸಾಧ್ಯವಾಗುವುದಿಲ್ಲ.


ಪಶ್ಚಿಮ ಬಂಗಾಳದ ಭೌಗೋಳಿಕ ಸಮಗ್ರತೆಯನ್ನು ಪರಿರಕ್ಷಿಸಲು ತಾನು ತೋರುತ್ತಿರುವ ಬದ್ಧತೆ ರಾಜ್ಯದ ಮಿಕ್ಕ ಪ್ರದೇಶಗಳಲ್ಲಿ ಟಿಎಂಸಿಯ ಬೆಂಬಲವನ್ನು ಮತ್ತಷ್ಟು ಸಧೃಢೀಕರಿಸುತ್ತದೆ ಎಂಬ ಎಣಿಕೆಯೇ ರಾಜ್ಯ ಸರ್ಕಾರವು ತನ್ನ ಕ್ರೂರ ದಮನವನ್ನು ಮುಂದುವರೆಸಿರುವುದರ ಹಿಂದಿರುವ ಪ್ರಮುಖ ಕಾರಣ. ೧೯೦೫ರಲ್ಲೊಮ್ಮೆ ಮತ್ತು ೧೯೪೭ರಲ್ಲೊಮ್ಮೆ ವಿಭಜನೆಗೊಂಡ ಬಂಗಾಳದ ನೆನಪುಗಳ ಭೂತವನ್ನು ಗೋರ್ಖಾಲ್ಯಾಂಡ್ ಚಳವಳಿಯು ಎದ್ದುಕೂರುವಂತೆ ಮಾಡುತ್ತಿದೆ. ರಾಜ್ಯದ ಮತ್ತೊಂದು ವಿಭಜನೆಯ ಆಗ್ರಹಕ್ಕೆ ಸರ್ಕಾರ ಕಿಂಚಿತ್ತೂ ಮಣಿಯದೆಂಬಂತೆ ತೋರಿಸಿಕೊಳ್ಳುತ್ತಾ ಟಿಎಂಸಿ ತನ್ನನ್ನು ತಾನು ಬಂಗಾಳಿ ಸಾಂಸ್ಕೃತಿಕ ಅಸ್ಮಿತೆಯ ಏಕೈಕ ಪರಿರಕ್ಷಕನೆಂಬಂತೆ ಮುಂದೊಡ್ಡಿಕೊಳ್ಳಬಹುದೆಂಬ ಲೆಕ್ಕಾಚಾರದಲ್ಲಿದೆ. ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಹಿಂದೂತ್ವವನ್ನು ಮುಂದಿಟ್ಟುಕೊಂಡು ನುಸುಳಲು ಯತ್ನಿಸುತ್ತಿರುವ ಭಾರತೀಯ ಜನತಾ ಪಕ್ಷದ ವ್ಯೂಹತಂತ್ರವನ್ನು ಸೋಲಿಸಲು ರೀತಿ ಮತ್ತೊಂದು ಅಸ್ಮಿತೆಯ ದಾಳವನ್ನು ಬಳಸಲಾಗುತ್ತಿದೆ.


ರಾಜಕೀಯ ಅಸ್ಥಿರತೆಯು ಉತ್ತರ ಬಂಗಾಳದಲ್ಲಿ ಆರ್ಥಿಕ ಜೀವನವನ್ನು ನಿಲುಗಡೆಗೆ ತಂದುಬಿಟ್ಟಿದೆ. ಆದರೂ, ಸದ್ಯಕ್ಕಂತೂ ಟಿಎಂಸಿ ಇದರ ಚುನಾವಣಾ ಪ್ರಯೋಜನವನ್ನು ಪಡೆದುಕೊಳ್ಳಲಿದೆ. ಹಿಂದಿನ ಎಡರಂಗ ಸರ್ಕಾರದಂತೆ (ಗೋರ್ಖಾಲ್ಯಾಂಡಿನ ವಿಷಯಕ್ಕೆ ಸಂಬಂಧಪಟ್ಟಂತೆ ಅದೂ ಸಹ ಯಥಾವತ್ ಟಿಎಂಸಿಯ ನಿಲುವುಗಳನ್ನೇ ಅಳವಡಿಸಿಕೊಂಡಿತ್ತು), ಟಿಎಂಸಿಗೂ ಸಹ ಬಂಗಾಳಿ ಸಾಂಸ್ಕೃತಿಕ ದುರಭಿಮಾನವನ್ನು ಉದ್ರೇಕಿಸುವುದರ ಲಾಭವೇನೆಂದು ಗೊತ್ತಾಗಿದೆ. ವಿಷಯದ ಬಗ್ಗೆ ಬಿಜೆಪಿಯ ಎಡಬಿಡಂಗಿ ನಿಲುವುಗಳು ಸಹ ಅಧ್ಯಯನಯೋಗ್ಯವಾಗಿವೆ. ಹಿಂದೆ ಅದು ಗೋರ್ಖಾಲ್ಯಾಂಡ್ ಚಳವಳಿಯ ಬಗ್ಗೆ ಸಹಾನುಭೂತಿಯನ್ನು ಪ್ರದರ್ಶಿಸಿತ್ತು. ಆದರೆ ಬಂಗಾಳದ ರಾಜಕಾರಣದ ಬಗ್ಗೆ ಹೆಚ್ಚುತ್ತಿರುವ ಅದರ ಆಶೋತ್ತರಗಳು ಸಂದರ್ಭವನ್ನು ಬಿಗಡಾಯಿಸುವಂತೆ ಮಾಡಿದೆ. ಬಿಜೆಪಿಯ ಡಾರ್ಜಲಿಂಗ್ ಘಟಕ ಗೋರ್ಖಾಲ್ಯಾಂಡ್ ಬೇಡಿಕೆಗೆ ಸಮಹಮತವನ್ನು ವ್ಯಕ್ತಪಡಿಸಿದೆ; ಆದರೆ ಪಶ್ಚಿಮ ಬಂಗಾಳ ಘಟಕ ಅದನ್ನು ವಿರೋಧಿಸಿದೆ. ಮತ್ತೊಂದು ಕಡೆ ಕೇಂದ್ರ ಸರ್ಕಾರವು ಚಳವಳಿಯನ್ನು ದಮನ ಮಾಡಲು ಸೇನಾ ಸಹಕಾರವನ್ನು ನೀಡಿದೆ. ಮತ್ತೊಂದೆಡೆ ಸಿಕ್ಕಿಂನ ಮುಖ್ಯಮಂತ್ರಿ ಪವನ್ ಕುಮಾರ್ ಚಾಮ್ಲಿಂಗ್ ಗೋರ್ಖಾಲ್ಯಾಂಡಿಗೆ ತಮ್ಮ ಬೆಂಬಲವನ್ನು ಸೂಚಿಸುವ ಮೂಲಕ ಸಮ್ದರ್ಭದ ಸಂಕೀರ್ಣತೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಅದೇನೇ ಇದ್ದರೂ ಅಂತಿಮವಾಗಿ ಪ್ರತ್ಯೇಕತಾವಾದದ ಸುತ್ತಾ ಸಾಮೂಹಿಕ ಉನ್ಮಾದವನ್ನು ಕೆರಳಿಸುವುದು ಪ್ರಜಾತಂತ್ರದ ಆರೋಗ್ಯಕ್ಕಂತೂ ಖಂಡಿತಾ ಹಾನಿಯನ್ನುಂಟು ಮಾಡಲಿದೆ.


ಅವಿರತವಾಗಿ ಮುಂದುವರೆಯುತ್ತಿರುವ ಹಿಂಸೆಯನ್ನು ನೆಪ ಮಾಡಿ ಎರಡು ಕಡೆಯವರು ಮಾತುಕತೆಗೆ ಮುಂದಾಗುತ್ತಿಲ್ಲ. ಆದರೆ ಸಂದರ್ಭವನ್ನು ತಣ್ಣಗಾಗಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದೇ ಆಗಿದೆ. ತಾನು ಇಡೀ ಪಶ್ಚಿಮ ಬಂಗಾಳದ ಎಲ್ಲಾ ಜನರಿಂದ ಪ್ರಜಾತಾಂತ್ರಿಕವಾಗಿ ಆಯ್ಕೆಗೊಂಡ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಮಮತಾ ಬ್ಯಾನರ್ಜಿಯವರು ಸಮೂಹ ಸನ್ನಿಯ ರಾಜಕಾರಣವನ್ನು ಮಾಡದೆ ರಾಜಕೀಯ ಮಾತುಕತೆಗೆ ಮುಂದಾಗಬೇಕಿದೆ.

  ಕೃಪೆ: Economic and Political Weekly
  June 24, 2017. Vol. 52. No. 25 &26

                                                                                                                                               









ಕಾಮೆಂಟ್‌ಗಳಿಲ್ಲ: