ಮಂಗಳವಾರ, ಆಗಸ್ಟ್ 29, 2017

ತ್ರಿವಳಿ ತಲಾಖ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ತೀರ್ಪು: ಒಂದು ಸಣ್ಣ ಸರಿಹೆಜ್ಜೆ


ಅನುಶಿವಸುಂದರ್
Related image

ತ್ರಿವಳಿ ತಲಾಖ್ ಪ್ರಕರಣದಲ್ಲಿ ಸುಪ್ರಿಂ ಕೋರ್ಟು ನೆಲಬಾಂಬುಗಳಿಂದ ಕೂಡಿದ್ದ ಪ್ರದೇಶವೊಂದರ ಮೇಲೆ ಯಶಸ್ವಿ ಪ್ರಯಾಣ ಮಾಡಿದೆ.

ಭಾರತೀಯ ಮುಸ್ಲಿಂ ಮಹಿಳೆಯರು ಒಂದು ಸಣ್ಣ ವಿಜಯವನ್ನು ಪಡೆದಿದ್ದಾರೆ. ಇದರ ಶ್ರೇಯಸ್ಸು ಸ್ವಯಂ ಮುಸ್ಲಿಮ್ ಮಹಿಳೆಯರಿಗೆ ಮತ್ತು ನ್ಯಾಯಾಂಗಕ್ಕೆ ಸಲ್ಲಬೇಕೇ ವಿನಃ ಅದರಲ್ಲಿ ಪಾಲು ಕದಿಯಲು ಹೊಂಚುಹಾಕುತ್ತಿರುವ ಭಾರತೀಯ ಜನತಾ ಪಕ್ಷಕ್ಕಲ್ಲ. ಮಹಿಳೆಯರ ಸತತ ಪರಿಶ್ರಮದಿಂದಾಗಿಯೇ ಅಹವಾಲು ಸುಪ್ರೀಂ ಕೋರ್ಟಿನಲ್ಲಿ ದಾಖಲಾಯಿತು. ಈಗ ಸುಪ್ರೀಂ ಕೋರ್ಟು ಅವರ ಅಹವಾಲಿಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಮುಸ್ಲಿಂ ಪುರುಷನೊಬ್ಬ ತಲಾಖ್ ಎಂದು ಒಂದೇ ಬಾರಿಗೆ ಮೂರು ಸಲ ಮೌಖಿಕವಾಗಿ ಹೇಳುವ ಮೂಲಕ ತನ್ನ ಹೆಂಡತಿಗೆ ವಿಚ್ಚೇದನ ಕೊಡುವ ತಲಾಖ್--ಬಿದ್ದತ್ ಆಚರಣೆಯನ್ನು ಕಾನೂನು ಬಾಹಿರವೆಂದು ಘೋಷಿಸಿದೆ.

ಸುಪ್ರೀಂ ಕೋರ್ಟಿನ ಮುಂದೆ ತ್ರಿವಳಿ ತಲಾಖ್ ಮತ್ತು ಬಹುಪತ್ನೀತ್ವದಂಥ ತಾರತಮ್ಯ ಮಾಡುವ ಆಚರಣೆಗಳನ್ನು ರದ್ದು ಮಾಡಬೇಕೆಂದು ಐವರು ವಿಚ್ಚೇದಿತ ಮುಸ್ಲಿಮ್ ಮಹಿಳೆಯರು ಹಾಗೂ ಭಾರತೀಯ ಮುಸ್ಲಿಮ್ ಮಹಿಳಾ ಆಂದೋಲ ಎಂಬ ಮುಸ್ಲೀಮ್ ಮಹಿಳೆಯರ ಸಂಘಟನೆಯು ಜೊತೆಗೂಡಿ ಸಲ್ಲಿಸಿದ್ದ ಅಹವಾಲಿತ್ತು. ಆದರೆ ನ್ಯಾಯಾಲಯವು ತಲಾಖ್--ಬಿದ್ದತ್ ವಿಷಯದ ಪರಿಶೀಲನೆಗೆ ಮಾತ್ರ ವಿಚಾರಣೆಯನ್ನು ಸೀಮಿತಗೊಳಿಸಿತ್ತು. ನ್ಯಾಯಾಲಯವು ನೀಡಿರುವ ತೀರ್ಪು ೩೯೫ ಪುಟಗಳಷ್ಟು ದೊಡ್ಡದಾಗಿದ್ದು ಅಷ್ಟೇ ಸಂಕೀರ್ಣವಾಗಿಯೇ ಇದೆ; ಐದು ನ್ಯಾಯಾಧೀಶರು ಮೂರು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದಾರೆ. ನ್ಯಾಯಮೂರ್ತಿ ಆರ್. ಎಫ್. ನಾರಿಮನ್ ಮತ್ತು ಯು. ಯು. ಲಲಿತ್ ಅವರು ನೀಡಿರುವ ಜಂಟಿ ತೀರ್ಪು ಮತ್ತು  ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಪ್ರತ್ಯೇಕವಾಗಿ ನೀಡಿರುವ ತೀರ್ಪು ತ್ರಿವಳಿ ತಲಾಖ್ ರದ್ದಾಗಬೇಕೆಂಬ ವಿಷಯದಲ್ಲಿ ಏಕೀಭವಿಸಿದೆ. ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ಮೂವರು ನೀಡಿರುವ ಏಕಾಭಿಪ್ರಾಯದ ತೀರ್ಪೇ ಬಹುಸಂಖ್ಯಾತರ ತೀರ್ಪು ಆಗಿರುವುದರಿಂದ ಅದೇ ಈಗ ಚಾಲ್ತಿಗೆ ಬರುವ ಆದೇಶವೂ ಆಗಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ ೨೦೦೨ರ ಶಮೀಮ್ ಆರಾ ಮತ್ತು ಉತ್ತರಪ್ರದೇಶ ಸರ್ಕಾರ ಪ್ರಕರಣದಲ್ಲೇ ಸುಪ್ರಿಂ ಕೋರ್ಟು  ಆಚರಣೆಯು ಕಾನೂನುಬಾಹಿರವಾದದ್ದೆಂದು ಆದೇಶ ನೀಡಿತ್ತು. ಆದರೆ ತೀರ್ಪು ಮಾಧ್ಯಮಗಳ, ರಾಜಕೀಯ ಪಕ್ಷಗಳ ಮತ್ತು ನಾಗರಿಕ ಸಮಾಜದ ಗಮನ ಸೆಳೆಯದಿರುವುದು ಆಶ್ಚರ್ಯಕರವಾಗಿದೆ.
Related image

ಬದಲಿರುವ ದಿನಗಳಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳ, ಸಂಕೀರ್ಣವಾದ ಮತ್ತು ಹಲವು ಪದರಗಳನ್ನು ಹೊಂದಿರುವ ಆದೇಶಗಲ್ಲಿರುವ ಸೂಕ್ಷ್ಮವಾದ ಅಂಶಗಳ ಬಗ್ಗೆ ಹಲವು ವಿಶ್ಲೇಷಣೆಗಳು ಮತ್ತು ಚರ್ಚೆಗಳು ನಡೆಯಲಿವೆ. ಆದೇಶವು ಇಡೀ ಮುಸ್ಲಿಂ ಸಮುದಾಯದ ಮೇಲೆ ಒಂದೇ ಬಗೆಯ ಪರಿಣಾಮವನ್ನೇನೂ ಬೀರುವುದಿಲ್ಲ. ಏಕೆಂದರೆ ಇಡೀ ಮುಸ್ಲಿಂ ಸಮುದಾಯ ಏಕರೂಪಿಯಾದ ಆಚರಣೆಗಳನ್ನೇನೂ ಅನುಸರಿಸುವುದಿಲ್ಲ. ಇಸ್ಲಾಮಿನಲ್ಲಿ ಶ್ರದ್ಧೆಯುಳ್ಳ ಎಲ್ಲರನ್ನೂ ಒಂದೇ ಎಂದು ಭಾವಿಸುವ ಪ್ರವೃತ್ತಿ ಇರುವುದರಿಂದ ಅಂಶವನ್ನು ಒತ್ತುಕೊಟ್ಟು ಹೇಳುವ ಅಗತ್ಯವಿದೆ. ಹೀಗಾಗಿ ಸ್ಪಷ್ಟವಾಗುವ ವಿಷಯವೇನೆಂದರೆ ಸುನ್ನಿ ಸ್ಲಿಮರಲ್ಲಿ ಒಂದು ಪಂಥವು ಮಾತ್ರ ಅನುಸರಿಸುವ ಒಂದು ಆಚರಣೆಯನ್ನು ಮಾತ್ರ ವಿವಿಧ ಪ್ರತಿಪಾದನೆಗಳ ಮೂಲಕ ಬಹುಸಂಖ್ಯಾತ ಆದೇಶವು ರದ್ದುಪಡಿಸಿದೆ.

ಆದೇಶದಲ್ಲಿ ಕಳವಳಕಾರಿಯಾದ ಭಾಗವೇನೆಂದರೆ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ಮತ್ತು ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರುಗಳು ನೀಡಿರುವ ಅಲ್ಪಸಂಖ್ಯಾತ ತೀರ್ಪು. ಅವರ ಪ್ರಕಾರ ತಲಾಖ್--ಬಿದ್ದತ್ ಎಂಬುದು ಸುನ್ನಿ ಮುಸ್ಲಿಮರ ವೈಯಕ್ತಿಕ ಕಾನೂನಿಗೆ ಸಂಬಂಧಪಟ್ಟ ವಿಷಯವಾಗಿರುವುದು ಮಾತ್ರವಲ್ಲದೆ ಧಾರ್ಮಿಕ ಶ್ರದ್ಧೆಗೆ ಸಂಬಂಧಪಟ್ಟ ವಿಷಯವೂ  ಆಗಿರುವುದರಿಂದ ಸಂವಿಧಾನದ ೨೫ನೇ ಕಲಮಿನ ರಕ್ಷಣೆಯನ್ನು ಪಡೆದಿದೆ. ಮುಂದುವರೆದು ಧರ್ಮವನ್ನು ಮತ್ತು ವೈಯಕ್ತಿಕ ಕಾನೂನುಗಳನ್ನು ಆಯಾ ಧಾರ್ಮಿಕ ಶ್ರದ್ಧೆಯ ಅನುಚರರು ಹೇಗೆ ಆಚರಿಸಿಕೊಂಡು ಬಂದಿದ್ದಾರೋ  ಹಾಗೆಯೇ ಗ್ರಹಿಸಬೇಕೇ ವಿನಃ ಇತರರು ಅಥವಾ ಆಯಾ ಧರ್ಮಕ್ಕೆ ಸೇರಿದ ಸ್ವಘೋಷಿತ ವಿಚಾರವಾದಿಗಳು ಅವು ಹೇಗಿರಬೇಕೆಂದು ಬಯಸುತ್ತಾರೋ ಹಾಗಲ್ಲ ಎಂಬ ತರ್ಕವನ್ನು ಇಬ್ಬರು ನ್ಯಾಯಮೂರ್ತಿಗಳು ಮುಂದಿರಿಸಿದ್ದಾರೆ. ಒಂದು ವೇಳೆ ಅಭಿಪ್ರಾಯವೇ ಬಹುಸಂಖ್ಯಾತ ನ್ಯಾಯಮೂರ್ತಿಗಳ ಆದೇಶವೂ ಆಗಿಬಿಟ್ಟಿದ್ದರೆ ಮಹಿಳೆಯರಾಗಲೀ, ಇತರರಾಗಲೀ ವೈಯಕ್ತಿಕ ಕಾನೂನುಗಳಲ್ಲಿ ಸುಧಾರಣೆಯನ್ನು ಆಗ್ರಹಿಸುವ ಅವಕಾಶಗಳೇ ಇರುತ್ತಿರಲಿಲ್ಲ. ವೈಯಕ್ತಿಕ ಕಾನೂನುಗಳಲ್ಲಿ ಯಾವುದೇ ತಿದ್ದುಪಡ್ಡಿಗಳನ್ನು ಮಾಡಬೇಕಿರುವುದು ಸಂಸತ್ತೇ ಹೊರತು ನ್ಯಾಯಾಂಗವಲ್ಲವೆಂದು ಅಭಿಪ್ರಾಯಪಟ್ಟಿರುವ ನ್ಯಾಯಾಧೀಶರು ಅರ್ಜಿದಾರರ ಆಗ್ರಹಕ್ಕೆ ಪ್ರತಿಕ್ರಿಯಿಸಿ ಆರು ತಿಂಗಳೊಳಗೆ ಒಂದು ಕಾನೂನನ್ನು ರಚಿಸಬೇಕೆಂದು ಸರ್ಕಾರಕ್ಕೆ  ಆದೇಶಿಸಿದ್ದರು. ಅದೃಷ್ಟವಶಾತ್ ಸಲಹೆಗಳನ್ನು ಸಹ ಈಗ ಜಾರಿಗೆ ತರುವ ಅಗತ್ಯವಿಲ್ಲ. ಒಂದು ವೇಳೆ ಅಭಿಪ್ರಾಯವನ್ನು ಜಾರಿಗೆ ತರುವ ಸಣ್ಣ ಅವಕಾಶವಿದ್ದರೂ ಬಿಜೆಪಿಯು ಅದನ್ನು ಏಕರೂಪಿ ನಾಗರಿಕ ಸಂಹಿತೆಯನ್ನು ತರಲು ಬಳಸಿಕೊಂಡು ಬಿಡುತ್ತಿತ್ತು.

ಇದೀಗ ನ್ಯಾಯಾಲಯವು ತನ್ನ ಆದೇಶವನ್ನು ನೀಡಿಯಾಗಿದೆಯಾದ್ದರಿಂದ ನಾವೀಗ ಭವಿಷ್ಯದತ್ತ ಮುಖಮಾಡಬೇಕು. ಮೊಟ್ಟಮೊದಲ ಬಾರಿಗೆ ಮುಸ್ಲೀಮ್ ಮಹಿಳೆಯರನ್ನು ಪ್ರತಿನಿಧಿಸುವ ಸಂಘಟನೆಯೊಂದು ತನ್ನ ಸಮುದಾಯದಲ್ಲಿರುವ ತಾರತಮ್ಯಕಾರಿ ಆಚರಣೆಗಳನ್ನು ನಿವಾರಿಸಬೇಕೆಂಬ ದಾವೆಯಲ್ಲಿ ಕಕ್ಷಿದಾರನಾಗಿದೆ. ಇದೊಂದು ಮಹತ್ವದ ಬೆಳವಣಿಗೆಯೂ ಆಗಿದೆ. ೧೯೮೫ರ ಶಾ ಬಾನು ಪ್ರಕರಣದಲ್ಲಿ ಅಪರಾಧ  ಸಂಹಿತೆಯ ೧೨೫ನೇ ಕಲಮಿನ ಪ್ರಕಾರ ವಿಚ್ಚೇದಿತ ಮುಸ್ಲೀಮ್ ಮಹಿಳೆಯು ಪರಿಹಾರಕ್ಕೆ ಅರ್ಹಳೆಂಬ ತೀರ್ಪನ್ನು ಸುಪ್ರೀಂ ಕೋರ್ಟು ನೀಡಿತ್ತು. ಆದರೆ ಮುಸ್ಲಿಮ್ ಪುರೋಹಿತಶಾಹಿಗಳ ಒತ್ತಡಕ್ಕೆ ಮಣಿದು ಅಂದಿನ ರಾಜೀವ ಗಾಂಧಿ ಸರ್ಕಾರ ಮುಸ್ಲೀಮ್ ಮಹಿಳೆಯರ (ವಿಚ್ಚೇದನ ಹಕ್ಕಿನ ರಕ್ಷಣೆ) ಕಾಯಿದೆ-೧೯೮೬ನ್ನು ಜಾರಿಗೆ ತಂದು ಸುಪ್ರೀಂ ಕೋರ್ಟಿನ ಸಕಾರಾತ್ಮಕ ಆದೇಶದ ಪರಿಣಾಮವನ್ನೇ ಶೂನ್ಯಗೊಳಿಸಿತು. ಹೀಗಾಗಿ ಮುಸ್ಲಿಮ್ ವೈಯಕ್ತಿಕ ಕಾನೂನಿನಲ್ಲಿ ಯಾವುದೇ ಬದಲಾವಣೆ ಬರಬೇಕೆಂದರೂ ಸಮುದಾಯದ ಒಳಗಿನಿಂದಲೇ ಅಂಥಾ ಆಗ್ರಹವು ಮೂಡಿಬರಬೇಕೆಂದು ಅಂದಿನಿಂದ ಪ್ರತಿಪಾದಿಸಿಕೊಂಡು ಬರಲಾಗಿತ್ತು. ಸಮಾನತೆ ಮತ್ತು  ಲಿಂಗಾಧಾರಿತ ನ್ಯಾಯಕಾಗಿ ಹೋರಾಡುತ್ತಿರುವ ಮಹಿಳಾ ಸಂಘಟನೆಗಳೂ ಸಹ ಮುಸ್ಲಿಮ್ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೊಡ್ಡ ದನಿಯೆತ್ತಲು ಹಿಂಜರಿಯುತ್ತಿದ್ದರು. ಮುಸ್ಲಿಮ್ ಮಹಿಳೆಯರ ಸಮಸ್ಯೆಗಳನ್ನು ಮುಂದುಮಾಡಿ ಇಡೀ ಮುಸ್ಲಿಮ್ ಸಮುದಾಯವನ್ನೇ ಖಳರನ್ನಾಗಿಸಲು ಸದಾ ತುದಿಗಾಲಲ್ಲಿ ನಿಂತಿರುವ ಹಿಂದೂ ಬಲಪಂಥೀಯರು ತಮ್ಮ ಪ್ರಯತ್ನಗಳನ್ನು ಬಳಸುವಂತಾಗಬಾರದೆಂಬ ಕಾಳಜಿಯೇ ಹಿಂಜರಿಕೆಗೆ ಕಾರಣವಾಗಿತ್ತು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ಅತ್ಯಂತ ಮುಖ್ಯವಾಗಿ ಮುಸ್ಲಿಮ್ ಮಹಿಳೆಯರು ಸಂಘಟಿತರಾಗಿದ್ದಾರೆ. ತಮ್ಮ ಆಗ್ರಹಗಳನ್ನು ಮುಂದಿಡುತ್ತಿದ್ದಾರೆ. ಮುಸ್ಲಿಮ್ ಪುರುಷರ ಅಧಿಪತ್ಯದಲ್ಲಿರುವ ಆಖಿಲ ಭಾರತ ಮುಸ್ಲೀಮ್ ವೈಯಕ್ತಿಕ ಕಾನೂನು ಮಂಡಳಿಗೆ ಪರ್ಯಾಯವಾಗಿ ಅಖಿಲ ಭಾರತ ಮುಸ್ಲಿಮ್ ಮಹಿಳಾ ವೈಯಕ್ತಿಕ ಕಾನೂನು ಮಂಡಳಿಯನ್ನು ರಚಿಸಿಕೊಂಡಿದ್ದಾರೆ. ಮತ್ತು ತಮ್ಮ ಸಮುದಾಯದ ಸಂಪ್ರದಾಯವಾದಿ ನಾಯಕತ್ವವನ್ನು ಉಲ್ಲಂಘಿಸಲು ಸಿದ್ಧವಾಗಿದ್ದಾರೆ.

ಅದೇ ಸಮಯದಲ್ಲಿ, ನ್ಯಾಯಾಲಯದಲ್ಲಿ ಅವರು ಗಳಿಸಿದ ವಿಜಯವು ಮುಸ್ಲಿಮ್ ಮಹಿಳೆಯರ ಮೇಲಿನ ತಾರತಮ್ಯವನ್ನು ಕೊನೆಗೊಳಿಸಿ ಲಿಂಗಾಧಾರಿತ ನ್ಯಾಯವನ್ನು ಪಡೆದುಕೊಳ್ಳುವ ದಿಕ್ಕಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆಯಷ್ಟೇ ಆಗಿದೆ. ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ ವ್ಯಕ್ತಿಗತ ಮುಸ್ಲಿಮ್ ಮಹಿಳಾ ಅಹವಾಲುದಾರರು ವರ್ಷಗಳಿಂದ ತಾವು ಅನುಭವಿಸುತ್ತಿದ್ದ ಚಿತ್ರಹಿಂಸೆಗಳ ಮತ್ತು ವರದಕ್ಷಿಣೆ ಕಿರುಕುಳಗಳ ಕಥೆಗಳನ್ನು ಬಿಚ್ಚಿಟ್ಟಿದ್ದಾರೆ. ಬೇಕಾಬಿಟ್ಟಿಯಾಗಿ ವಿಚ್ಚೇದನ ನೀಡುವ ಬಗ್ಗೆ ಮಾತ್ರ ಸೀಮಿತವಾಗಿರುವ ತೀರ್ಪಿನಿಂದ  ಮುಸ್ಲಿಮ್ ಮಹಿಳೆಯರು ಎದಿರಿಸುತ್ತಿರುವ ಇತರ ಹಿಂಸೆಗಳೇನೂ ಕಣ್ಮರೆಯಾಗುವುದಿಲ್ಲ.

ಇಂದು ಭಾರತವು ಎದಿರಿಸುತ್ತಿರುವ ಕೋಮುವಾದೀ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೋಡುವುದಾದರೆ ಸುಪ್ರೀಂ ಕೋರ್ಟಿನ ಐದು ನ್ಯಾಯಮೂರ್ತಿಗಳ ಪೀಠವು ನೆಲಬಾಂಬುಗಳಿಂದ ಕೂಡಿದ್ದ ಪ್ರದೇಶವೊಂದರ ಮೇಲೆ ಯಶಸ್ವಿಯಾಗಿ ಪ್ರಯಾಣ ಮಾಡಿದೆಯೆಂದು  ಹೇಳಬಹುದು. ತೀರ್ಪಿನಿಂದಾಗಿ ಮುಸ್ಲಿಮರು zರಲ್ಲೂ ಮುಸ್ಲಿಮ್ ಮಹಿಳೆಯರು ತಮ್ಮ ವೈಯಕ್ತಿಕ ಕಾನೂನುಗಳಲ್ಲಿ ತಾವು ಬಯಸುವ ಮಾರ್ಪಾಡುಗಳನ್ನು ಹೇಗೆ ತರಬಹುದೆಂಬ ಚರ್ಚೆಗೆ ಬೇಕಾದ ದಾರಿಯು ತೆರೆದುಕೊಂಡಿದೆ. ಇದೇ ತೀರ್ಪಿನ ಮಹತ್ವವೂ ಆಗಿದೆ.

   ಕೃಪೆ: Economic and Political Weekly
          Aug 26, 2017. Vol. 52. No. 34

                                                                                                









                

ಕಾಮೆಂಟ್‌ಗಳಿಲ್ಲ: