ಬುಧವಾರ, ಸೆಪ್ಟೆಂಬರ್ 6, 2017

ನಗರಗಳಲ್ಲಿ ವರ್ಷಧಾರೆ ಮತ್ತು ವಿಭ್ರಾಂತಿ


  ಅನುಶಿವಸುಂದರ್
Image result for rainfall in city

ಭಾರತದ ನಗರಗಳು ಕೆಟ್ಟ ಆಡಳಿತ ನಿರ್ವಹಣೆ ಮತ್ತು ನಿರ್ಲಕ್ಷ್ಯಗಳಿಂದಾಗಿ ಮುಳುಗುತ್ತಿವೆ.

ಭಾರತದ ನಗರಗಳು ಮಳೆನೀರಿನಲ್ಲಿ ಮುಳುಗುತ್ತಿರುವುದು ಅಸಹಜವಾಗಿ ಸುರಿಯುವ ಅಧಿಕ ಮಳೆಯ ಕಾರಣದಿಂದಾಗಿ ಮಾತ್ರವಲ್ಲ. ನಗರಗಳು ಮಳೆಯಲ್ಲಿ ಮತ್ತು ನೆರೆಯಲ್ಲಿ ಮುಳುಗಿಹೋಗಲು ಪ್ರಧಾನ ಕಾರಣ ಆಡಳಿತ ವರ್ಗದ ದುರಾಡಳಿತ ಮತ್ತು ಅಸಮರ್ಪಕ ನಗರ ಯೋಜನೆಗಳು. ಇದೇ ಆಗಸ್ಟ್ ೨೯ರಂದು ಮುಂಬೈ ನಗರದಲ್ಲಿ ಕೇವಲ ೧೨ ಗಂಟೆಯಲ್ಲಿ ೩೦೦ ಮಿಲಿಮೀಟರಿನಷ್ಟು ಮಳೆ ಸುರಿಯಿತು. ಇದು ನಿಜಕ್ಕೂ ಅಸಾಧಾರಣವಾದ ಮಳೆಯೇ. ಆದರೆ ಮುಂಬೈ ನಗರದ ಜೀವನವನ್ನು ಸಬ್ಧಗೊಳಿಸಿದ್ದು ಅಸಹಜ ವರ್ಷಧಾರೆಯಲ್ಲ. ಬದಲಿಗೆ ಮುಂಬೈ ನಗರಿಗರ ಬದುಕನ್ನು ನರಕವಾಗಿಸಿದ್ದು ನಗರ ನಿರ್ವಹಣೆಯ ಹೊಣೆಹೊತ್ತವರ ನೀತಿ ಮಂಪರುಗಳು, ವಿಭ್ರಾಂತಿಗಳು ಮತ್ತು ನಿರ್ಲಕ್ಷ್ಯಗಳು. ೨೦೦೫ರ ಜುಲೈ ೨೬ರಂದು ಸಾಧಾರಣಕ್ಕಿಂತ ಮೂರು ಪಟ್ಟು ಹೆಚ್ಚು ಮಳೆ ಸುರಿದಿದ್ದರಿಂದ ಇಡೀ ಮುಂಬೈ ನಗರವೇ ಕುಸಿದಿತ್ತು. ಹಲವರು ಸತ್ತರು. ಮತ್ತು ಕೋಟ್ಯಾಂತರ ರೂಪಾಯಿಗಳ ಆಸ್ತಿ-ಪಾಸ್ತಿ ನಷ್ಟ ಉಂಟಾಗಿತ್ತು. ಆದರೂ ಅದರಿಂದ ನಗರದ ಆಡಳಿತ ಏನೂ ಪಾಠ ಕಲಿಯಲಿಲ್ಲ. ಅದೂ ಹೋಗಲಿ. ಇಂಥ ಸಂದರ್ಭದಲ್ಲಿ ಇರಬೇಕಿದ್ದ ಕನಿಷ್ಟ ಸಾಮಾನ್ಯ ಪ್ರಜ್ನೆಯನ್ನು ಸಹ ಸರ್ಕಾರ ಪ್ರದರ್ಶಿಸಲಿಲ್ಲ

ವರ್ಷ ಕಡಿಮೆ ಅವಧಿಂiಲ್ಲಿ ಅಸಾಧಾರಣವಾದ ಮಳೆ ಸುರಿದದ್ದು ಕೇವಲ ಮುಂಬೈ ನಗರದಲ್ಲಿ ಮಾತ್ರವೇನಲ್ಲ. ಜುಲೈ ೨೬ ಮತ್ತು ೨೭ರಂದು ಅಹಮದಾಬಾದಿನಲ್ಲಿ ವಾಡಿಕೆಗಿಂತ ೧೧ ಪಟ್ಟು ಹೆಚ್ಚು ಮಳೆಯಾಗಿದೆ. ಚಂಡೀಗಡದಲ್ಲಿ ಆಗಸ್ಟ್ ೨೧ ರಂದು ಇಡೀ ಋತುವಿನಲ್ಲಿ ಬರುತ್ತಿದ್ದ ಮಳೆಯ ೨೩ ಪಟ್ಟು ಹೆಚ್ಚು ಮಳೆಯಾಗಿದೆ. ಇಡೀ ಬೆಂಗಳೂರು ನಗರಾದ್ಯಂತ ಆಗಸ್ಟ್ ೧೫ರಂದು  ಸರಾಸರಿಗಿಂತ ೩೭ ಪಟ್ಟು ಹೆಚ್ಚು ಮಳೆ ಸುರಿದಿದೆ. ಯಾವ ಕಾರಣದಿಂದ ಆಗಸ್ಟ್ ೨೯ರ ಮಳೆಯಿಂದ ಮುಂಬೈ ನಗರದಲ್ಲಿ ದೊಡ್ಡ ಅನಾಹುತವೇ ಸಂಭವಿಸಿತೋ ಅದೇ ಕಾರಣಗಳಿಂದಾಗಿ ನಗರಗಳೂ ಸಹ ಕೊಚ್ಚಿಹರಿದ ಮಳೆಯಿಂದಾಗಿ ಇನ್ನಿಲ್ಲದ ನಷ್ಟಗಳನ್ನು ಅನುಭವಿಸಿದವು. ಇದಕ್ಕೆ ಮಳೆ ನೀರು ಹರಿದು ಹೋಗಲು ಸಾಕಾಗುವಷ್ಟು ಒಳಚರಂಡಿ-ರಾಜಕಾಲುವೆಗಳ ವ್ಯವಸ್ಥೆ ಇಲ್ಲದಿರುವುದು ಮಾತ್ರ ಕಾರಣವಲ್ಲ. ಮುಂಬೈನಲ್ಲಿ ಸಮಸ್ಯೆ ದಶಕಗಳಿಂದ ಅಸ್ಥಿತ್ವದಲ್ಲಿದ್ದರೂ ಯಾರೂ ಅದರ ಬಗ್ಗೆ ಸರಿಯಾಗಿ ಗಮನಹರಿಸಿಲ್ಲ. ನಗರಗಳಲ್ಲಿ ಸಂಭವಿಸಿದ ಮಳೆ ಸಂಬಂಧೀ ಅನಾಹುತಗಳಿಗೆ ಮೂಲ ಕಾರಣ ಹೆಚ್ಚುವರಿ ನೀರನ್ನು ಸೆಳೆದುಕೊಳ್ಳಬಲ್ಲ ನೈಸರ್ಗಿಕ ವ್ಯವಸ್ಥೆಗಳ ಬಗ್ಗೆ ಆಡಳಿತ ವರ್ಗಕ್ಕಿರುವ ಅಸಾಧಾರಣ ನಿರ್ಲಕ್ಷ. ಅಂಥ ನೀರುಹೀರಕ ನೈಸರ್ಗಿಕ ವ್ಯವಸ್ಥೆಗಳೆಂದರೆ ಗಿಡಗಂಟೆಗಳು, ಪೊದೆಗಳು, ಜವಗು ನೆಲಗಳು, ಪ್ರವಾಹಪಾತ್ರದ ಬಯಲುಭೂಮಿಗಳು, ಸಮುದ್ರ ತೀರದ ಉಪ್ಪುಹರಹುಗಳು, ಕೊಳಗಳು, ಕೆರೆಗಳು ಮತ್ತು ಬಯಲು ಹುಲ್ಲುಗಾವಲುಗಳು.

ಪ್ರತಿಯೊಂದು ನಗರಗಳಲ್ಲೂ ಭೂಮಿ ಬಳಕೆಯ ಕಾನೂನುಗಳನ್ನು ಬದಲಾಯಿಸುವ ಮೂಲಕ ನೈಸರ್ಗಿಕ ನೀರುಹೀರುಕಗಳಿರುವ ಜಾಗಗಳನ್ನು ಕಬಳಸಿ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ೨೦೧೫ರ ನವಂಬರ್ನಲ್ಲಿ ಭೀಕರ ಪ್ರವಾಹಕ್ಕೆ ಗುರಿಯಾದ ಚೆನ್ನೈನ ವಿಮಾನ ನಿಲ್ದಾಣವಿರುವುದು ಪ್ರವಾಹದ ಪಾತ್ರದಲ್ಲಿ; ಈಗ ಪ್ರವಾಹ ಪೀಡಿತ ಪ್ರದೇಶವೊಂದರಲ್ಲಿ ಬಸ್ ನಿಲ್ದಾಣವೊಂದನ್ನು ನಿರ್ಮಿಸಲಾಗುತ್ತಿದೆ ಮತ್ತು ರಾಜಕಾಲುವೆಯೊಂದರ ಮೇಲೆ ಸಮೂಹ ತ್ವರಿತ ಸಾರಿಗೆ ವ್ಯವಸ್ಥೆಯನ್ನೂ ನಿರ್ಮಿಸಲಾಗುತ್ತಿದೆ. ಬೆಂಗಳೂರಿನಲ್ಲಿ ಇಡೀ ನಗರಕ್ಕೆ ನೀರನ್ನು ಒದಗಿಸುತ್ತಲೂ, ಮತ್ತೊಂದು ಕಡೆ ಹೆಚ್ಚುವರಿ ಮಳೆನೀರುಗಳ ಸಂಗ್ರಹಕವಾಗಿಯೂ ವರ್ತಿಸುತ್ತಿದ್ದ ಹಲವಾರು ಪ್ರಖ್ಯಾತ ಕೆರೆಗಳ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಈಗವು ಹೆಚ್ಚೂ ಕಡಿಮೆ  ಅವು ಹೆಚ್ಚುಕಡಿಮೆ ಕಣ್ಮರೆಯಾಗಿಬಿಟ್ಟಿವೆ. ಮುಂಬೈ ನಗರದಲ್ಲಿ ಬಹುಮಹಡಿ ಸಂಕಿರ್ಣಗಳಿಗಾಗಿ ಗಿಡಗಂಟೆಗಳಿದ್ದ ಪೊದೆಗಳನ್ನು ನಿರ್ನಾಮ ಮಾಡಲಾಗಿದೆ. ಇದರಿಂದಾಗಿ ಮುಂದೆ ಸಮುದ್ರಮಟ್ಟದಿಂದ ನೀರು ಏರಿಕೆಯಾದಲ್ಲಿ ಅಥವಾ ಪದೇಪದೇ ಆಗುತ್ತಿರ್ರುವ ಹೆಚ್ಚೆಚ್ಚು ಸುರಿಮಳೆಯಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ನೈಸರ್ಗಿಕ ಕವಚವೇ ಇಲ್ಲವಾಗುತ್ತಿದೆ. ಅದೇ ರೀತಿ ಪರಿಸರದ ದೃಷ್ಟಿಯಿಂದ ಅತ್ಯಂತ ಮುಖ್ಯವಾದ ಮುಂಬೈನ ಉಪ್ಪು ಹರಹು ಪ್ರದೇಶಗಳಲ್ಲಿ ಬಡವರಿಗೆ ವಸತಿಯನ್ನು ಕಲ್ಪಿಸಿಕೊಡುವ ಯೋಜನೆಯನ್ನು ರೂಪಿಸಲಾಗುತ್ತಿದೆ. ಅಂದರೆ ಬಡವರಿಗೆ ಪ್ರವಾಹ ಸಂಭವನೀಯ ಪ್ರದೇಶದಲ್ಲಿ ಮುರುಕುಮನೆಗಳನ್ನು ಕಟ್ಟಿಕೊಡುವ ಯೋಜನೆ ಇದಾಗಿದೆ.

ವೇಳೆಗಾಗಲೇ ನಮ್ಮ ನಗರ ನಿರ್ಮಾತೃಗಳಿಗೆ ಒಂದು ವಿಷಯ ಸ್ಪಷ್ಟವಾಗಿರಬೇಕಿತ್ತು. ಒಂದು ನಗರವನ್ನು ನಿರ್ಮಿಸುವಾಗ ಹೆಚ್ಚುವರಿ ನೀರನ್ನು ಸಹಜವಾಗಿ ಹೀರಿಕೊಳ್ಳುವ ವ್ಯವಸ್ಥೆಯನ್ನು ಮಾಡದಿದ್ದರೆ ಅದು ಪ್ರವಾಹಕ್ಕೆ ಈಡಾಗುವುದು ಸಹಜ. ಆದರೂ ನಗರಗಳ ದೂರಗಾಮಿ ಭವಿಷ್ಯದ ಹಿತಾಸಕ್ತಿಗಿಂತ ರಾಜಕೀಯ ನಾಯಕರ ಕೃಪಾಶೀರ್ವಾದವನ್ನು ಪಡೆದ ರಿಯಲ್ ಎಸ್ಟೇಟ್ ಧಣಿಗಳ ಮತ್ತು ಬಿಲ್ಡರ್ಗಳ ಹಿತಾಸಕ್ತಿಯೇ ಪ್ರತಿಯೊಂದು ನಗರಗಳಲ್ಲೂ ಪ್ರಮುಖವಾಗುತ್ತಿದೆ. ಇತರ ಎಲ್ಲಾ ಸಮಸ್ಯೆಗಳಿಗೂ ಅನ್ವಯವಾಗುವಂತೆ ಇಲ್ಲೂ ಸಮಸ್ಯೆ ಇರುವುದು ಸಂಪನ್ಮೂಲದ್ದಲ್ಲ. ಬದಲಿಗೆ ಆದ್ಯತೆಗಳದ್ದು. ಮುಂಬೈನಲ್ಲಿ ಬ್ರಿಟಿಷರ ಕಾಲದ ಚರಂಡಿ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸುವ ಯೋಜನೆಯೊಂದನ್ನು ೧೯೮೦ರಲ್ಲಿ ರೂಪಿಸಲಾಯಿತು. ಹಲವಾರು ವರ್ಷಗಳ ನಂತರ ಅದರ ನಿರ್ಮಾಣವು ಪ್ರಾರಂಭಗೊಂಡಿತು. ಆದರೆ ಈವರೆಗೂ ಚರಂಡಿ ನಿರ್ಮಾಣ ಪೂರ್ತಿಯಾಗಿಲ್ಲ. ಬದಲಿಗೆ ಸಂಗ್ರಹಿಸಲಾದ ಸಂಪನ್ಮೂಲಗಳನ್ನು ನಗರದ ಅತ್ಯುತ್ತಮ ಭಾಗಗಳಲ್ಲಿ ವಾಸಿಸುವ ಅತ್ಯಂತ ಸಣ್ಣ ಸಂಖ್ಯೆಯ ಉಳ್ಳವರ್ಗಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವ್ಯಯಿಸಲಾಗುತ್ತಿದೆ. ಉದಾಹರಣೆಗೆ ಸಾರ್ವಜನಿಕರು ಮತು ಬಡವರು ಉಪಯೋಗಿಸುವ ಸಾರ್ವಜನಿಕ ಸಾರಿಗೆಯನ್ನು ಹೆಚ್ಚಿಸಲು ಬಳಸಬೇಕಾದ ಸಂಪನ್ಮೂಲಗಳನ್ನು ಖಾಸಗಿ ವಾಹನಗಳ ಬಳಕೆಯ ರಸ್ತೆ ನಿರ್ಮಾಣಕ್ಕೆ ಬಳಸುವುದು ಅಂಥ ಯೋಜನೆಗಳಲ್ಲಿ ಒಂದು. ಪ್ರವಾಹದಂಥ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಆಡಳಿತಶಾಹಿಯ ಇಂಥಾ ಪಕ್ಷಪಾತಿ ಆದ್ಯತೆಗಳ ಪರಿಣಾಮಗಳು ಎದ್ದುಕಾಣುತ್ತವೆ. ಏಕೆಂದರೆ ಪ್ರವಾಹದಲ್ಲಿ ಅತ್ಯಂತ ಅನಾಹುತಗಳಿಗೆ ಬಲಿಯಾಗುವವರು ಬಡವರೇ ಆಗಿರುತ್ತಾರೆ. ಬಹುಪಾಲು ನಗರಗಳ ಬಡವರ ಜೋಪಡಿಗಳು ಪ್ರವಾಹಪಾತ್ರದ ತಗ್ಗುಪ್ರದೇಶಗಳಲ್ಲೇ ಇರುತ್ತವೆ. ಅವರು ಮಾಮೂಲಿ ಮಳೆಗಾಲದಲ್ಲೂ ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿರುತ್ತಾರೆ. ಆದರೆ ಮೇಘಸ್ಪೋಟ ಅಥವಾ ಚಂಡಮಾರುತದ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಬೇರೆ ಯಾವ  ಜಾಗವೂ ಅವರಿಗಿರುವುದಿಲ್ಲ.

ಇದರ ಜೊತೆಗೆ ರೀತಿಯ ಅಸಾಧಾರಣ ಮಳೆಗಳಿಗೆ ಮತ್ತು ನಗರಗಳಲ್ಲಿ ಪ್ರವಾಹ ಸದೃಶ ಪರಿಸ್ಥಿತಿಯನ್ನು ಸೃಷ್ಟಿಸುವ  ಅನಿರೀಕ್ಷಿತವಾದ ಮತ್ತು ತೀವ್ರವಾದ ಹವಾಮಾನ ವೈಪರೀತ್ಯಗಳಿಗೆ ಜಾಗತಿಕ ತಾಪಮಾನ ಏರಿಕೆಯೂ ಸಹ ಒಂದು ಕಾರಣವೆಂದು ಇತ್ತೀಚೆಗೆ ಹಲವಾರು ಅಧ್ಯಯನಗಳು ಅಭಿಪ್ರಾಯ ಪಡುತ್ತಿವೆ. ಬೆಂಗಳೂರಿನ ಭಾರತೀಯ ವಿಜ್ನಾನ ಸಂಸ್ಥೆಯ ಅಂತರ್ ಶಿಸ್ತೀಯ ಜಲ ಅಧ್ಯಯನ ಕೇಂದ್ರವು ಇತ್ತೀಚೆಗೆ  ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರು ನಗರಗಳಲ್ಲಿನ ಬರುತ್ತಿರುವ ಮಳೆಯ ಲಕ್ಷಣಗಳನ್ನು ಅಧ್ಯಯನ ಮಾಡಿದೆ. ಅದು ನಗರಗಳಲ್ಲಿ ದಿಢೀರನೆ ಹೆಚ್ಚಿನ ತೀವ್ರತೆಯಲ್ಲಿ ಸುರಿಯುವ ಮಳೆಗೆ ಹವಾಮಾನ ಬದಲಾವಣೆಯೂ ಒಂದು ಕಾರಣವೆಂಬ ತೀರ್ಮಾನಕ್ಕೆ ಬಂದಿದೆ. ಸಮುದ್ರ ತೀರದಲ್ಲಿರುವ ನಗರಗಳ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ಏಕೆಂದರೆ ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರದ ಮಟ್ಟವೂ ಏರುತ್ತಿದ್ದು ತೂಫಾನು, ಚಂಡಮಾರುತ ಅಥವಾ ಸುನಾಮಿಗಳು ಸಂಭವಿಸಿದಲ್ಲಿ ನಗರಗಳು ಸಂಪೂರ್ಣವಾಗಿ ಮುಳುಗಿಹೋಗುತ್ತವೆ. ಹೀಗಾಗಿ ನಗರಗಳು ಜಾಗತಿಕ ತಾಪಮಾನ ಏರಿಕೆಯ ದುಷ್ಫರಿಣಾಮಗಳನ್ನು ನಿವಾರಿಸಿಕೊಳ್ಳಲು ಬೇಕಾದ ಮಾರ್ಪಾಡುಗಳಿಗೆ ತಯಾರಾಗಬೇಕಿರುವುದು ಸ್ಪಷ್ಟವಾಗಿದೆ. ಹೀಗಾಗಿ ಭೂಮಿ ಬಳಕೆಯ ಆದ್ಯತೆಯ ಮತ್ತು ಕಟ್ಟಡ ನಿರ್ಮಾಣಗಳ ಬಗೆಗಳ ಕುರಿತು ಮತ್ತೊಮ್ಮೆ ಪುನರಾಲೋಚನೆ ಮಾಡುವುದು ಮತ್ತು ಸಹಜ ಗಿಡಪೊದೆಗಳ ಮತ್ತು ಬಯಲು ಭೂಮಿಗಳ ರಕ್ಷಣೆಯ ಕುರಿತು ಚಿಂತಿಸಬೇಕಿರುವುದು ಅತ್ಯಗತ್ಯವಾಗಿದೆ. ಇದು ಪರಿಸರದ ಬಗೆಗಿನ ಮೋಹ ಅಥವಾ ಗೀಳಿನಿಂದ ಹುಟ್ಟುತ್ತಿರುವ ಯೋಚನೆಗಳಲ್ಲ; ಇದು ಕೇವಲ ಒಂದು ಸಾಮನ್ಯ ಪ್ರಜ್ನೆಯ ವಿಷಯ. ಆದರೆ ದುರದೃಷ್ಟವಶಾತ್ ಇಂದು ನಮ್ಮ ನಗರಗಳ ಆಡಳಿತ ನಿರ್ವಹಣೆ ಮಾಡುತ್ತಿರುವವರಲ್ಲಿ ಅದು ಕಾಣೆಯಾಗಿದೆ. ಬಗೆಯ ಕುರುಡಿನ ಮತ್ತು ವಿಭ್ರಾಂತಿಯಿಂದ ಕೂಡಿದ ಯೋಜನೆಗಳಿಗೆ ನಿರಂತರವಾಗಿ ಬಲಿಯಾಗುತ್ತಿರುವ ಸಾಮಾನ್ಯ ನಾಗರಿಕರ ಮುಂದಿರುವ ಏಕೈಕ ದಾರಿಯೆಂದರೆ ಒಂದು ಸುರಕ್ಷಿತ ಮತ್ತು ಸುಸ್ಥಿರ ನಗರ ವಾತಾವರಣದಲ್ಲಿ ಬದುಕುವ ತಮ್ಮ ಹಕ್ಕಿಗಾಗಿ ನಿರಂತರವಾಗಿ ಹೋರಾಡುವುದು.

  ಕೃಪೆ: Economic and Political Weekly
           Sep 2, 2017. Vol. 52. No. 35

                                                                                              





ಕಾಮೆಂಟ್‌ಗಳಿಲ್ಲ: