ಗುರುವಾರ, ಫೆಬ್ರವರಿ 8, 2018

ಜನಕಥನ: ಗಂಟಿಚೋರರ ತುಡುಗು ಕಥನಗಳು




-ಡಾ.ಅರುಣ್ ಜೋಳದಕೂಡ್ಲಿಗಿ.
18 ನೇ ಶತಮಾನದ ಠಕ್ಕರ ಒಂದು ಚಿತ್ರ.



  ಹಿಂದೊಮ್ಮೆ ಜನಕಥನದಲ್ಲಿ ಗಂಟಿಚೋರ್ ಸಮುದಾಯದ ಹೋರಾಟಗಾರ್ತಿ ಗೋದಾವರಿ ಬಗ್ಗೆ ಬರೆದಿದ್ದೆ. ಆಗ ಈ ಸಮುದಾಯದ ಅಧ್ಯಯನ ನಿರತನಾಗಿದ್ದೆ. ಹಾಗಾಗಿ ಗಂಟಿಚೋರರ ಕೆಲವು ಪ್ರಾಥಮಿಕ ಸಂಗತಿಗಳನ್ನು ನಿಮ್ಮ ಜತೆ ಹಂಚಿಕೊಂಡಿದ್ದೆ. ಇದೀಗ ಗಂಟಿಚೋರ್ ಸಮುದಾಯದ ಸಂಶೋಧನ ಕೃತಿ ಪ್ರಕಟವಾಗಿ ಒಂದು ವರ್ಷ ಕಳೆಯಿತು. ಸಂಶೋಧನೆ ಕುರಿತು ಕೆಲವರು ಒಳ್ಳೆಯ ಅಭಿಪ್ರಾಯ ಕೊಟ್ಟಿದ್ದಾರೆ. ಒಂದು ಸಮುದಾಯದ ಜೀವಂತಿಕೆಯ ಎಲ್ಲಾ ಆಯಾಮಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಒಂದು ಸಂಕಥನವನ್ನು ಕಟ್ಟಿಕೊಡುವ ಪ್ರಯತ್ನವನ್ನು ಮಾಡಿರುವೆ. ಇದೀಗ ನನ್ನ ಸಂಶೋಧನೆಯ ಫಲಿತಗಳನ್ನು ನಿಮ್ಮ ಮುಂದೆ ಮಂಡಿಸುವುದಿಲ್ಲ. ಆಸಕ್ತರು ಕೃತಿಯನ್ನು ಓದಲು ಲಭ್ಯವಿದೆ. ಸಮುದಾಯಗಳು ತಮ್ಮ ನೆನಪುಗಳಲ್ಲಿ ತಮ್ಮದೇ ಚರಿತ್ರೆಯನ್ನು ಕಟ್ಟಿಕೊಂಡಿರುತ್ತವೆ. ಗಂಟಿಚೋರ ಸಮುದಾಯವೂ ಅಂತಹ ರೋಚಕ ನೆನಪುಗಳನ್ನು ಅಡಗಿಸಿಕೊಂಡಿದೆ. ಹಾಗಾಗಿ ಈ ಸಮುದಾಯದ ನೆನಪುಗಳಲ್ಲಿ ಕಟ್ಟಿಕೊಂಡ ಕೆಲವು ತುಡುಗು ಕಥನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವೆ.
                                                                      **       

  ಉತ್ತರ ಕರ್ನಾಟಕದ ಬೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆರರುಗಳೊಂದಿಗೆ ಈ ಸಮುದಾಯ ನೆಲೆಸಿದೆ. ಈ ಎಲ್ಲಾ ಹೆಸರುಗಳ ಒಳಗಿರುವ ಎಳೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ಯಾಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ. 

  ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.

  ಭಾರತದ ಚರಿತ್ರೆಯಲ್ಲಿ 18 ನೇ ಶತಮಾನ ಠಕ್ಕರ ಲೂಟಿ ಕೊಲೆ ಸುಲಿಗೆ ಮುಂತಾದವುಗಳ ಭಯಭೀತ ಅಧ್ಯಾಯವಾಗಿದೆ. ಈ ಹಿನ್ನೆಲೆಯ ಒಂದೆಳೆ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರರ ಜತೆ ತಳಕು ಹಾಕಿಕೊಂಡಿದೆ. ಆದರೆ ಗಂಟಿಚೋರರ ಹೆಸರಲ್ಲೇ `ಗಂಟುಕಳ್ಳರು’ ಎಂದಿರುವುದು ಇವರ ಕಳ್ಳತನದ ಸ್ವರೂಪವನ್ನು ಕಾಣಿಸುತ್ತದೆ. ಹೀಗಾಗಿಯೇ ಇವರನ್ನು ಸಂತೆಕಳ್ಳರೂ ಎಂದೂ ಕರೆಯುತ್ತಿದ್ದರು. ಇವರದು ಉತ್ತರಭಾರತದ ಠಕ್ಕರಂತೆ ಬೃಹತ್ ಜಾಲವಾಗಿರದೆ ಸಣ್ಣಪುಟ್ಟ ಕಳ್ಳತನದಲ್ಲಿ ತೊಡಗಿಕೊಂಡ ಹೊಟ್ಟೆಪಾಡಿನ ಕಳ್ಳರಾಗಿದ್ದರು. ಸಂತಕವಿ ಕನಕರು `ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎನ್ನುವಂತೆ ಗಂಟಿಚೋರರು ಕಳ್ಳತನ ಮಾಡಿ ಹೊಟ್ಟೆತುಂಬಿಸಿಕೊಂಡವರು. ಚಾರಿತ್ರಿಕವಾಗಿ ಗಂಟಿಚೋರರು ಸೈನಿಕ ಸಮುದಾಯವಾಗಿದ್ದರು ಎನ್ನುವ ಬಗ್ಗೆ ಪುರಾವೆಗಳಿವೆ.


                                                      ಠಕ್ಕರ ಕಾಳಿ ಆರಾಧನೆಯ ಚಿತ್ರ

 ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಅನ್ನಿಸುತ್ತದೆ. ಇದಕ್ಕೆ ವಡ್ಡಾರಾಧನೆ, ಧರ್ಮಾಮೃತ ಕೃತಿಗಳಲ್ಲಿ ಬರುವ ಚೋರರ ಕಥೆಗಳು ಸಾಕ್ಷಿಯಂತಿವೆ. ಸಧ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ. 


  ಗಂಟಿಚೋರ್ಸ್ ಸಮುದಾಯ ತನ್ನ ಸ್ಮøತಿಲೋಕದಲ್ಲಿ ಎಲ್ಲ ಬಗೆಯ ರೂಪಾಂತರದ ಕಥನವನ್ನೂ ಅಡಗಿಸಿಟ್ಟುಕೊಂಡಿದೆ. ಈ ಸಮುದಾಯದ ನೆನಪಿನಾಳಕ್ಕೆ ಪ್ರವೇಶಿಸಿದರೆ ಅದರ ಸ್ಪಷ್ಟ ಆಕಾರಗಳು ಕಾಣತೊಡಗುತ್ತವೆ. ಈಗ ಕರ್ನಾಟಕದಲ್ಲಿ ನೆಲೆಸಿದ ಗಂಟಿಚೋರ ಸಮುದಾಯದ ಹಿರಿಯರನ್ನು ಮಾತನಾಡಿಸಿದರೆ ಕಾಣಸಿಗುವ ಚಿತ್ರಗಳು ಭಿನ್ನವಾಗಿದೆ. ಮೂಲತಃ ಕಳ್ಳತನವೇ ನಮ್ಮ ಕುಲವೃತ್ತಿ ಎಂದು ಹೇಳುತ್ತಾರೆ. ಈ ವೃತ್ತಿಗೆ ಅಂಟಿಕೊಂಡ ಅನೇಕ ನಂಬಿಕೆಯ ಲೋಕವನ್ನು ಹೇಳತೊಡಗುತ್ತಾರೆ. ಅಂತೆಯೇ ಈ ಸಮುದಾಯವೇ ತನ್ನ ಸಮುದಾಯದ ಚರಿತ್ರೆಯನ್ನು ಹೇಗೆ ರೂಪಿಸಿಕೊಂಡಿದೆ ಎಂದು ನೋಡಿದರೆ ಕುತೂಹಲದ ಸಂಗತಿಗಳು ಬಯಲಿಗೆ ಬರುತ್ತವೆ. ಇದರಲ್ಲಿ ಮುಖ್ಯವಾಗಿ ತುಡುಗುತನದ ಶೌರ್ಯ ಸಾಹಸಗಳ ಬಗ್ಗೆ ಹೆಮ್ಮೆ ಮೂಡುವುದನ್ನು ಕಾಣಬಹುದು. ಈ ವಿವರಗಳು ಈ ಸಮುದಾಯದ ಮಾನಸಿಕ ಬಿಡುಗಡೆಯಂತೆಯೂ ಕಾಣುತ್ತದೆ. ಕಾರಣ ಹೊರಜಗತ್ತು `ತುಡುಗುತನ’ವನ್ನು ಅಪರಾಧಿ ಚಟುವಟಿಕೆಯನ್ನಾಗಿ ನೋಡಿದರೆ, ಇದೇ ಚಟುವಟಿಕೆಯನ್ನು ಸಕಾರಾತ್ಮಕ ನಡೆಯಂತೆ ಅದನ್ನು ಮೌಲ್ಯೀಕರಿಸುವತ್ತ ಈ ಚರಿತ್ರೆ ಸಾಗುತ್ತದೆ. 
ಠಕ್ಕರು 1857 ರಲ್ಲಿ ಜೈಲಲ್ಲಿ ಸೆರೆಯಾದ ರೇಖಾಚಿತ್ರ.


    ಮುಖ್ಯವಾಗಿ ಗಂಟಿಚೋರ್ಸ್ ಸಮುದಾಯ ಕಟ್ಟಿಕೊಂಡ ಚರಿತ್ರೆಯ ಸಂಗತಿಗಳು ವಿಶಿಷ್ಟವಾಗಿವೆ. ಮೊದಲನೆಯದಾಗಿ ತಮ್ಮ ಸಮುದಾಯದ ದೊಡ್ಡ ದೊಡ್ಡ ಕಳ್ಳರ ಬಗ್ಗೆ ಕಥನಗಳಿವೆ. ಅಂತೆಯೇ ಜೀವಮಾನದ ಶ್ರೇಷ್ಠವಾದ ವಿಶಿಷ್ಠ ಕಳ್ಳತನಗಳ ಬಗ್ಗೆ ಕಥನಗಳಿವೆ. ಕಳ್ಳತನಕ್ಕೆ ನೆರವಾಗುವ ದೈವಗಳ ಬಗ್ಗೆ ಪವಾಡದ ರೀತಿಯ ಕಥನಗಳಿವೆ. ತುಡುಗು ಮಾಡುವಾಗ ಬಳಸುವ ಅವರದೇಯಾದ ತುಡುಗು ಭಾಷೆ ಕೂಡ ಇದೆ. ಅಂತೆಯೇ ಈ ಎಲ್ಲಾ ಬಗೆಯ ಕಥನಗಳು ತುಡುಗುತನವನ್ನು ಮೌಲ್ಯೀಕರಿಸುತ್ತಾ ಅದರ ಹಿರಿಮೆಯನ್ನು ಹೆಚ್ಚಿಸುವ ದಾಟಿಯಲ್ಲಿ ವಿವರಿಸುತ್ತಾ ಹೋಗುತ್ತಾರೆ. ಹೀಗೆ ಹೇಳುತ್ತಲೇ ಸಣ್ಣ ಧ್ವನಿಯಲ್ಲಿ `ಈಗ ಎಲ್ಲಾನು ಬಿಟ್ ಬಿಟ್ಟೀವಿ ಸಾರ್’ ಈಗಿನ ಹುಡುಗರು ಮರ್ಯಾದೆಗೆ ಅಂಜುತ್ತಾರೆ. ಪೋಲೀಸರ ಕಾಟನೂ ಜಾಸ್ತಿ, ಅಂತೆಯೇ `ನಮ್ಮ ಮಕ್ಕಳು ಶಾಲಿ ಕಲೀಲಿಕತ್ಯಾವ, ನೌಕರಿ ಸೇರಲಿಕತ್ಯಾವ’ ಎಂದು ವಾಸ್ತವದ ಜತೆ ತಮ್ಮ ಬದುಕನ್ನು ಬೆಸೆಯುತ್ತಾರೆ. ಹೀಗೆ ಗಂಟಿಚೋರರು ತಮ್ಮ ಕುಲದ ಚರಿತ್ರೆಯನ್ನು ದಾಖಲಿಸಿಕೊಳ್ಳುವ ಕೆಲವು ಕಥನಗಳು ಇಲ್ಲಿವೆ.

ಗಂಟಿಚೋರರು ‘ಕಳ್ಳತನಕ್ಕೆ’ ತುಡುಗು ಎಂದೇ ಕರೆಯುವುದು. ಈ ತುಡುಗುತನಕ್ಕೆ ಅಂಟಿಕೊಂಡ ನಂಬಿಕೆಯ ಲೋಕವೊಂದು ಇದೆ. ಅಂತೆ ತುಡುಗುತನದ ವಿಶಿಷ್ಟತೆಗಳು ಈ ಸಮುದಾಯಕ್ಕೇ ಅನನ್ಯವಾದ ಗುರುತುಗಳಾಗಿವೆ. ಮುಖ್ಯವಾಗಿ ತುಡುಗು ಮಾಡುವುದಕ್ಕೆ ಸಂತೆ, ಜಾತ್ರೆ, ತೇರು, ದೇವಸ್ಥಾನ, ಬಸ್ ಸ್ಟ್ಯಾಂಡ್ ಒಳಗೊಂಡಂತೆ ಎಲ್ಲೆಲ್ಲಿ ಜನರು ಹೆಚ್ಚು ಸೇರುತ್ತಾರೋ ಅಂತಹ ಕಡೆಗಳಲ್ಲಿ ತುಡುಗು ಮಾಡುತ್ತಿದ್ದರು. ಆರಂಭದಲ್ಲಿ ಗಂಟಿಚೋರರಲ್ಲಿ ರಾತ್ರಿಯ ವೇಳೆ ತುಡುಗು ಮಾಡುವುದು ನಿಷಿದ್ಧವಾಗಿತ್ತು. ಆದರೆ ಕಾಲಾನಂತರ ರಾತ್ರಿಯ ತುಡುಗು ಚಾಲ್ತಿಗೆ ಬಂತು. ರಾತ್ರಿಯ ತುಡುಗಿನಲ್ಲಿ ಮನೆಗಳಿಗೆ ಕನ್ನ ಹಾಕುವುದು, ದರೋಡೆ ಮಾಡುವುದನ್ನು ಮಾಡತೊಡಗಿದರು. ಈ ಸಮುದಾಯದಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳೂ ಸಹ ತುಡುಗು ಮಾಡುತ್ತಿದ್ದರು. ಇವರ ಕಾರ್ಯಕ್ಷೇತ್ರ ಸೀಮಿತವಾಗಿತ್ತು. ಹಗಲಿನ ಕಳವಾಗಿತ್ತು. ಜಾತ್ರೆ, ಸಂತೆ, ರೈಲ್ವೆ ನಿಲ್ದಾಣ ಮುಂತಾದ ಕಡೆ ಜನಸಂದಣಿ ಇರುವ ಕಡೆಗಳಲ್ಲಿ ಮಹಿಳೆಯರು ತುಡುಗು ಮಾಡುತ್ತಿದ್ದರು.


1898 ರ ಗವರ್ನರ್ ಸಲೂನು ತುಡುಗು

 1989 ರಲ್ಲಿ ಸದರ್ನ ಮರಾಠಾ ರೈಲ್ವೇನಲ್ಲಿ ಮುಂಬೈ ಗವರ್ನರ್ ಒಬ್ಬರು ಪ್ರಯಾಣಿಸುತ್ತಿದ್ದರು. ಇವರು ಪಸ್ಟ್ ಕ್ಲಾಸ್ ಬೋಗಿಯಲ್ಲಿದ್ದರು. ಗವರ್ನರ್ ಆದ ಕಾರಣ ಬಿಗಿಯಾದ ಬಂದೋಬಸ್ತನ್ನು ಏರ್ಪಡಿಸಲಾಗಿತ್ತು. ಪೋಲಿಸರು ಕಿಕ್ಕಿರಿದಂತೆ ಕಾವಲಿಗಿದ್ದರು. ಈ ಮಧ್ಯೆ ಗಂಟಿಚೋರ್ಸ್ ಒಬ್ಬರಿಗೆ ಈ ಗಮರ್ನರ್ ಪ್ರಯಾಣ ತಿಳಿದಿದೆ. ಗವರ್ನರ್ ಬಳಸುವ ಪ್ರತಿ ವಸ್ತುವೂ ಮೌಲ್ಯಯುತವಾಗಿರುತ್ತವೆ. ಹೇಗಾದರೂ ಸರಿ ಅವರ ಬ್ಯಾಗನ್ನು ಕದಿಯಬೇಕೆಂದು, ಶ್ರೀಮಂತ ವೇಷದಲ್ಲಿ ಗವರ್ನರ್ ಇದ್ದ ಬೋಗಿಯ ಆಚೆಯ ಬೋಗಿಯೊಂದರಲ್ಲಿ ಗಂಟಿಚೋರ ವ್ಯಕ್ತಿಯೊಬ್ಬ ಪ್ರಯಾಣಿಸುತ್ತಿದ್ದ. ಗವರ್ನರ್ ಬೋಗಿಯಲ್ಲಿ ದೀಪ ಉರಿಯುತ್ತಿದ್ದರೂ, ಪೋಲಿಸರ ಬೆಂಗಾವಲಿದ್ದರೂ ಗವರ್ನರ್ ಕೆಲವು ಮೌಲ್ಯಯುತ ಸಾಮಾನುಗಳು ಕಳುವು ಮಾಡಲಾಯಿತು. ಮರುದಿನ ಪತ್ರಿಕೆಗಳಲ್ಲಿ ದೊಡ್ಡ ಸುದ್ದಿಯಾಯಿತು. ಆದರೂ ಕದ್ದ ಗಂಟಿಚೋರ ಸಿಗಲೇ ಇಲ್ಲ.

ಗದಗ-ಬೆಟಗೇರಿ ಸೆಟ್ಲಮೆಂಟ್ ಆಫೀಸರ್ ಮನೆ ತುಡುಗು

 ನಮ್ಮ ಹಿರೇರು ಹೇಳಿದ ಕಥೆ ಎಂದು ಬಾಲೆಹೊಸೂರಿನ ಹಿರಿಯರು ಹೇಳಿದ ಕಥೆ ವಿಶಿಷ್ಠವಾಗಿದೆ. ಗದಗ ಬೆಟಗೇರಿ ಸೆಟ್ಲಮೆಂಟ್ ಆಫೀಸರ್ ಒಬ್ಬ ತುಂಬಾ ಸ್ಟ್ರಿಕ್ಟ್ ಇದ್ದರಂತೆ. ಇವರು ಗಂಟಿಚೋರ್ಸ್ ಸಮುದಾಯವನ್ನು ಯಾವಾಗಲೂ ಹಿಯಾಳಿಸಿ ಅವಮಾನಿಸಿ ಬೈಯುತ್ತಿದ್ದರಂತೆ. ಹೀಗಿರಲು ಒಮ್ಮೆ ಸಮುದಾಯದವರು `ಉದ್ಯೋಗ ಕೊಡ್ರಿ ಅಂದರೆ ನಾವು ತುಡುಗು ಮಾಡದು ಬಿಡ್ತೀವಿ, ಸುಮನ ನಮ್ಮನ್ನ ಬೈಯಬ್ಯಾಡ್ರಿ’ ಅಂದರಂತೆ. ಆಗ ಆಫೀಸರ್ ನೀವೇನು ತುಡುಗು ಬಿಡೋದು, ನಾನ ಬಿಡಸ್ತೀನಿ. ಇನ್ನು ಮುಂದೆ ಅದೆಂಗೆ ತುಡುಗು ಮಾಡ್ತೀರಿ ನಾನು ನೋಡ್ತೀನಿ. ನಿಮ್ಮನ್ನೆಲ್ಲಾ ಒದ್ದು ಜೈಲಿಗೆ ಹಾಕೋದು ಬಿಟ್ಟು, ಕೆಲಸ ಬೇರೆ ಕೊಡಬೇಕಾ ? ಎಂದು ಗದರಿದನಂತೆ. 

 ಇದರಿಂದ ಬೇಸರವಾದ ಸಮುದಾಯದ ಹಿರಿಯರು `ನಮ್ಮನ್ನ ಹಿಡಿತಾನಂತೆ ಈ ಆಫೀಸರ್ ನಮ್ಮ ತಾಕತ್ತು ಏನಂತ ತೋರಿಸಲೇಬೇಕು’ ಅನ್ಕೊಂಡು, ಒಂದಿನ ಸೆಟ್ಲಮೆಂಟ್ ಆಫೀಸರ್ ಇರುವ ಮನೆಗೆ ಕನ್ನ ಹಾಕಿ. ಆತನ ಹಣ ಬಂಗಾರ ಎಲ್ಲವನ್ನು ಆಫೀಸರ್ ಮಲಗಿದ್ದ ಮಂಚದ ಮುಂದೆ ಇಟ್ಟುಕೊಂಡು ಬೆಳಗಿನವರೆಗೂ ಕೂತು. ಜನ ಓಡಾಡಲು ಶುರುಮಾಡಿದಾಗ ತಪ್ಪಿಸಿಕೊಂಡರಂತೆ. ಇದು ಗಂಟಿಚೋರರು ತಮ್ಮ ಚಾಕಚಕ್ಯತೆಯನ್ನು ಮನವರಿಕೆ ಮಾಡುವ ಮತ್ತು `ನಿನ್ನ ಮನೆಯನ್ನು ತುಡುಗು ಮಾಡಿದ್ರ ನಮ್ಮನ್ನ ಹಿಡಿಯೋಕೆ ಆಗಲಿಲ್ಲ, ಇನ್ನ ಬೇರೆಯವರ ಮನೆಗಳನ್ನು ತುಡುಗು ಮಾಡಿದ್ರ ನೀ ಏನ್ ಹಿಡೀತೀಯ’ ಎನ್ನುವುದನ್ನು ಆ ಆಫೀಸರ್‍ಗೆ ಮನವರಿಕೆ ಮಾಡುವುದಾಗಿತ್ತು. ಈ ಅವಮಾನಕ್ಕೆ ಬೆಚ್ಚಿಬಿದ್ದ ಬ್ರಿಟೀಷ್ ಆಫೀಸರ್ ಗಂಟಿಚೋರ್ಸ್ ಬಗ್ಗೆ ಅವಮಾನಿಸಿ ಬೈಯುವುದನ್ನು ನಿಲ್ಲಿಸಿದನಂತೆ. ಹೀಗೆ ಈ ಕಥೆಯನ್ನು ಹೇಳುವಾಗ ಈ ಸಮುದಾಯದ ಹಿರಿಯರ ಮುಖದಲ್ಲಿ `ನೋಡ್ರಿ ನಾವು ಸೆಟ್ಲಮೆಂಟ್ ಆಫಿಸರನ್ನೇ ಬಿಟ್ಟವರಲ್ಲ’ ಎಂಬ ಗೆಲುವಿನ ಭಾವ ಕಾಣುತ್ತಿತ್ತು.

ಜಂಗಳದರ ಮನಿ ತುಡುಗು

 ಜಂಗಳದವರು ಎನ್ನುವ ಶ್ರೀಮಂತರ ಮನೆಯ ಅಜ್ಜಿಯ ಶವದ ಮೇಲಿನ ಬಂಗಾರವನ್ನು ಕಳವು ಮಾಡಿದ ಸಂಗತಿ ವಿಶಿಷ್ಠವಾಗಿದೆ. ಜಂಗಳದವರ ಅಜ್ಜಿಯ ದೇಹವನ್ನು ಪೂಜಿಸಿ, ಬಂಗಾರದ ಒಡವೆಗಳನ್ನೆಲ್ಲಾ ಹಾಕಿ ಶೃಂಗಾರ ಮಾಡಿಸಿ ಕೂಡಿಸಿದ್ದರಂತೆ. ರಾತ್ರಿಪೂರಾ ಭಜನೆ ಇತ್ತು. ಈ ಅಜ್ಜಿಯ ಕೊರಳಲ್ಲಿನ ಬಂಗಾರವನ್ನು ನೋಡಿದ ಗಂಟಿಚೋರ್ ಮಂದಿ, ಹೇಗಾದರೂ ಮಾಡಿ ಈ ಬಂಗಾರವನ್ನು ಹೊಡೆಯಬೇಕೆಂದು ಯೋಚಿಸಿದರು. ಆಗ ವಿದ್ಯುತ್ ಇರಲಿಲ್ಲ. ಗೊರವಿನ ಬೊಡ್ಡೆಯನ್ನು ಉರಿಸುತ್ತಾ ಬೆಳಕು ಮಾಡಬೇಕಿತ್ತು. ಈ ಸಂದರ್ಭದಲ್ಲಿ ಒಂದಿಬ್ಬರು ಭಜನೆಮಾಡುವವರ ನೆಪದಲ್ಲಿ ಮನೆಯ ಮುಂದೆ ಸೇರಿದರು.

 ಭಜನೆ ನಡೆಯುತ್ತಿತ್ತು. ಮಧ್ಯರಾತ್ರಿಯ ಹೊತ್ತಿಗೆ ಗೊರವಿನ ಕಟ್ಟಿಗೆ ಮುಗಿದು ಬೆಂಕಿಯ ಬೆಳಕು ಮಂದವಾಯಿತು. ಉಳಿದಂತೆ ಅಜ್ಜಿಯ ದೇಹದ ಮುಂದೆ ಎರಡು ದೀಪಗಳು ಮಾತ್ರ ಉರಿಯುತ್ತಿದ್ದವು. ಜನರು ನಿದ್ದೆಯ ಜೋಂಪಲ್ಲಿದ್ದರು. ಭಜನೆಯೂ ಕಳೆಗುಂದಿತ್ತು. ಈ ಸಂದರ್ಭವನ್ನು ಅರಿತ ಗಂಟಿಚೋರ ಸಮುದಾಯದ ಮನುಷ್ಯ ಕತ್ತಲಲ್ಲಿ ಅಜ್ಜಿಯ ದೇಹದ ಹಿಂದಕ್ಕೆ ಹೋಗಿ ಹೆಣದ ಎರಡೂ ಕೈಗಳನ್ನು ಹಿಡಿದು ಮುಂದೆ ಉರಿಯುತ್ತಿದ್ದ ಎರಡು ದೀಪಗಳನ್ನು ರಪ್ಪನೆ ಹೊಡೆಸಿದನಂತೆ. ಆಗ ಪೂರ್ಣ ಕತ್ತಲಾಗಿದೆ. ಇದನ್ನು ನೋಡಿದ ಜನರು ಗಾಬರಿಯಾಗಿ ಅಜ್ಜಿ ದೆವ್ವವಾಗಿದ್ದಾಳೆಂದು ಎದ್ದು ಓಡತೊಡಗಿದರು. ನಂತರ ತಡವರಿಸಿ ದೀಪ ಹಚ್ಚುವ ವೇಳೆಗೆ ಅಜ್ಜಿಯ ಕೊರಳಿಗೆ ಹಾಕಿ ಶೃಂಗಾರ ಮಾಡಿದ ಬಂಗಾರವೆಲ್ಲಾ ಕಳವಾಗಿತ್ತು. ಮನೆಯವರು ಅತ್ತು ಕರೆದು ಹುಡುಕಾಡಿದರೂ ಬಂಗಾರ ಮಾತ್ರ ಸಿಗಲಿಲ್ಲ.

ಹನುಮಂತ ದೇವರಿಗೆ ಮಡ್ಡಿಗಿ ತುಡುಗು

  ಬಾಲೇಹೊಸೂರು ಗಂಟಿಚೋರರು ಹೆಚ್ಚಿರುವ ಊರು. ಈ ಊರಿನಲ್ಲಿ ತುಡುಗು ಮಾಡಲು ಹೋಗುವ ಮೊದಲು ಹನುಮಂತನಲ್ಲಿ ಪ್ರಸಾದ ಕೇಳುತ್ತಿದ್ದರು. ಈ ಪ್ರಸಾದವನ್ನು ಆಧರಿಸಿ ಕಳ್ಳತನಕ್ಕೆ ಹೋಗುತ್ತಿದ್ದರು. ಇಂತಹ ಗಂಟಿಚೋರರ ಇಷ್ಟದೈವ ಹನುಮಂತನ ಗುಡಿಕಟ್ಟಲು ಸಮುದಾಯದವರು ಯೋಚಿಸಿದರು. ಆಗ ಕಟ್ಟಡ ಶುರುವಾಗಿ ಮಾಳಿಗೆವರೆಗೂ ಬಂತು. ಆಗ ಮಾಳಿಗೆಗೆ ಹಾಕಲು ಮಡ್ಡಿಗಿ (ಮರದ ತೊಲೆ ಕಂಭಗಳು) ಇರಲಿಲ್ಲ. ಇದೇ ಸಂದರ್ಭಕ್ಕೆ ಸವಣೂರಿನ ನವಾಬನು ದೊಡ್ಡದಾದ ವಾಡೆಯೊಂದನ್ನು ಕಟ್ಟಿಸಲು ಮಡ್ಡಿಗಿ ಯನ್ನು ಕೆತ್ತಿಸಿ ಇಟ್ಟಿದ್ದ ವಿಷಯ ತಿಳಿಯಿತು. ಇವನ್ನು ಕಳವು ಮಾಡಬೇಕೆಂದು ನಿರ್ಧರಿಸಿದ ಬಾಲೆಹೊಸೂರು ಗಂಟಿಚೋರರು ಹತ್ತಿಪ್ಪತ್ತು ಎತ್ತಿನ ಗಾಡಿ ಕಟ್ಟಿಕೊಂಡು ರಾತ್ರಿಯೇ ಸವಣೂರಿಗೆ ಹೋಗಿ ಮಡ್ಡಿಗಿಯನ್ನು ಕದ್ದು ಬಂಡಿಗಳಲ್ಲಿ ಏರಿಕೊಂಡು ತಂದರು. ಬಂದವರೆ ಎಲ್ಲರೂ ಸೇರಿ ಗುಡಿಗೆ ಮಡ್ಡಗಿ ಏರಿಸಿ ಮೇಲುಮುದ್ದೆ ಹಾಕಿ ಮುಗಿಸಿಬಿಟ್ಟರಂತೆ.


 ಮರುದಿನ ಸವಣೂರಿನ ನವಾಬರಿಗೆ ಈ ವಿಷಯ ತಿಳಿದು, ಬಂಡಿಗಳ ಜಾಡು ಹಿಡಿದು ಹುಡುಕಿಕೊಂಡು ಸರಿಯಾಗಿ ಬಾಲೆಹೊಸೂರು ಹನುಮಂತನ ಗುಡಿಯ ಬಳಿ ಬಂದರಂತೆ. ಮಡ್ಡಿಗಿಯು ಹನುಮಂತ ದೇವರ ಮಾಳಿಗೆಗೆ ಏರಿದ್ದನ್ನು ನೋಡಿ, ದೇವರ ಗುಡಿಯಾದ್ದರಿಂದ ಕೀಳುವುದು ಸರಿಯಲ್ಲವೆಂದು ಬಗೆದು ಸವಣೂರಿನ ನವಾಬನ ಕಡೆಯವರು ವಾಪಾಸ್ಸು ಮರಳಿದರಂತೆ. ಇದರ ಸೇಡು ತೀರಿಸಿಕೊಳ್ಳಲು ಹೋಗುವಾಗ ಕಣಗಳಲ್ಲಿರುವ ಮರ ಮುಟ್ಟು, ಹೊಲದಲ್ಲಿರುವ ಬೆಳೆಗಳು, ಸೊಪ್ಪಿನ ಬಣವೆ, ಹೊಲದ ಬದಿಯ ಮರಗಳು ಹೀಗೆ ಕೈಗೆ ಸಿಕ್ಕದ್ದನ್ನೆಲ್ಲ ದೋಚಿಕೊಂಡು ಹೋದರಂತೆ. ಈಗಲೂ ನಾವು ಬಾಲೆಹೊಸೂರು ಹನುಮಂತನ ದೇವಸ್ಥಾನದಲ್ಲಿ ಸವಣೂರು ನವಾಬರ ಮಡ್ಡಿಗಿಯನ್ನು ನೋಡಬಹುದಾಗಿದೆ. ಈ ಇಡೀ ದೇವಸ್ಥಾನವನ್ನು ತುಡುಗು ಮಾಡಿದ ಇಟ್ಟಿಗೆ, ಕಲ್ಲು, ಕಡಪ, ಮಣ್ಣು, ಹುಸುಕಿನಿಂದಲೇ ಗುಡಿ ಕಟ್ಟಿದೆವು ಎಂದು ಬಾಲೆಹೊಸೂರಿನ ಗಂಟಿಚೋರ ಹಿರಿಯರು ಹೇಳುತ್ತಾರೆ.

ಮಹಾಲಕ್ಷ್ಮಿ ಎಕ್ಸ್‍ಪ್ರೆಸ್ ಟ್ರೇನ್ ರಾಬರಿ

  ಇದು 1982 ರಲ್ಲಿ ನಡೆದ ಘಟನೆ. ಇಡೀ ದೇಶವ್ಯಾಪಿ ಸುದ್ದಿಯಾದ ಸಂಗತಿಯಾಗಿತ್ತು. ಇದೊಂದು ಸಿನಿಮೀಯವಾಗಿ ನಡೆದ ಘಟನಾವಳಿಗಳಂತಿದೆ. ರಾಯಭಾಗ ತಾಲೂಕಿನ ಜೋಡಟ್ಟಿಯ ಮತ್ತು ಹುಬ್ಬಳ್ಳಿಯ ಕೆಲವರು ಸೇರಿ ಒಂದು ತೀರ್ಮಾನ ಮಾಡಿದರು. ಅದೇನೆಂದರೆ ಪದೇ ಪದೇ ಚಿಕ್ಕಪುಟ್ಟ ಕಳ್ಳತನ ಮಾಡಿ ಉದ್ಧಾರವಾಗುವುದು ಸಾಧ್ಯವಿಲ್ಲ. ಹಾಗಾಗಿ ಒಂದೇ ಬಾರಿಗೆ ದೊಡ್ಡದೊಂದು ಕಳ್ಳತನ ಮಾಡಿ ದಿಡೀರ್ ಶ್ರೀಮಂತರಾಗಿ ಮತ್ತೆಂದು ಕಳ್ಳತನ ಮಾಡದಂತೆ ಬದುಕಿದರಾಯಿತು ಎನ್ನುವುದಾಗಿತ್ತು. ಈ ಯೋಚನೆಗೆ ಪೂರಕವಾಗಿ ದೊಡ್ಡದೊಂದು ರಾಬರಿ ಮಾಡಲು ಹವಣಿಸುತ್ತಿದ್ದಾಗ ಒಂದು ಸಂಗತಿ ಇವರ ಗಮನಕ್ಕೆ ಬರುತ್ತದೆ. ಅದೇನೆಂದರೆ ಬೆಂಗಳೂರಿನ ಒಬ್ಬ ಸೇಟು ಬಾಂಬೆಗೆ ಗೋಲ್ಡ್ ಬಿಸ್ಕೇಟನ್ನು ಸಾಗಿಸುತ್ತಿದ್ದನಂತೆ. ಈ ಸೇಟುವಿನ ಬಗ್ಗೆ ಸರಿಯಾದ ಮಾಹಿತಿ ಕಲೆ ಹಾಕಿದ್ದಾರೆ. ಹೀಗೆ ಮಾಹಿತಿ ಕಲೆಹಾಕಿ ಕನಿಷ್ಠ ಆರು ತಿಂಗಳುಗಳ ಕಾಲ ಈ ರಾಬರಿ ಮಾಡುವ ಬಗ್ಗೆ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ. ಇದರ ಪ್ರಕಾರ ರೈಲ್ವೇ ಚೈನ್ ಎಳೆಯುವುದು, ಟ್ರೇನ್ ನಿಂತ ತಕ್ಷಣ ಓಡಿ ತಪ್ಪಿಸಿಕೊಳ್ಳುವುದು, ತಪ್ಪಿಸಿಕೊಂಡ ಸ್ಥಳದಲ್ಲಿ ಮೊದಲೆ ಒಂದಷ್ಟು ಈ ಟೀಮಿನ ಸದಸ್ಯರು ಬಂದಿರುವುದು, ಅವರುಗಳು ಹೀಗೆ ಕದ್ದುತಂದ ಪೆಟ್ಟಿಗೆಗಳನ್ನು ಹೊತ್ತೊಯ್ಯುವುದು ಹೀಗೆ ಸರಿಯಾಗಿ ಪ್ಲಾನ್ ಮಾಡಿದ್ದರು.  ಹೀಗೆ ರೈಲ್ವೇ ಚೈನ್ ಎಳೆಯುವ ಸ್ಥಳವನ್ನೂ ಕೂಡ ಆಯ್ಕೆ ಮಾಡಿದ್ದರು. ಇಷ್ಟೆಲ್ಲಾ ಆದಮೇಲೆ ಸೇಟ್‍ಜಿ ಬೆಂಗಳೂರಿನಿಂದ ಮುಂಬೈಗೆ ಹೆಚ್ಚುವರಿ ಗೋಲ್ಡ್ ಬಿಸ್ಕೇಟ್ ಸಾಗಿಸುವ ಮಾಹಿತಿ ಸಂಗ್ರಹಿಸಿ ಮೊದಲೇ ಪ್ಲಾನ್ ಮಾಡಿದಂತೆ ರಾಬರಿ ಮಾಡಿದರು. ಆದರೆ ಎಲ್ಲವೂ ಪ್ಲಾನ್ ಪ್ರಕಾರವೇ ನಡೆಯಿತು, ಆದರೆ ತಪ್ಪಿಸಿಕೊಳ್ಳುವಾಗ ಈ ಟೀಮಿನ ಇಬ್ಬರು ಸಿಕ್ಕಿಹಾಕಿಕೊಂಡರು.

 ಮರುದಿನ ದೊಡ್ಡ ಸುದ್ದಿಯಾಯಿತು. ಟೀಮಿನ ಸದಸ್ಯರು ಸಿಕ್ಕರೆ ವಿನಹಃ ಕದ್ದ ಪೆಟ್ಟಿಗೆಗಳು ಸಿಕ್ಕಲಿಲ್ಲ. ಸಿಕ್ಕಿಹಾಕಿಕೊಂಡ ಸದಸ್ಯರನ್ನು ಎಷ್ಟೇ ಚಿತ್ರಹಿಂಸೆ ಕೊಟ್ಟರೂ ಯಾವೊಂದು ಸಂಗತಿಯನ್ನೂ ಬಿಟ್ಟುಕೊಡಲಿಲ್ಲ. ಪೋಲೀಸರಿಗೆ ಇದೊಂದು ದೊಡ್ಡ ಸಮಸ್ಯೆಯಾಯಿತು. ಹೀಗಿರುವಾಗ ಪೋಲೀಸರು ಒಂದು ತಂತ್ರ ಹೂಡಿದರು. ಬಂದಿತರಾದ ಇಬ್ಬರಿಗೂ ನೀವು ಎಷ್ಟೇ ಕೇಳಿದರೂ ಒಪ್ಪುತ್ತಿಲ್ಲ. ಬಹುಶಃ ಈ ರಾಬರಿ ಮಾಡಿದವರು ಬೇರೆಯವರಿದ್ದಾರೆ, ಅವರ ಸುಳಿವು ನಮಗೆ ಸಿಕ್ಕಿದೆ. ನಿಮ್ಮನ್ನು ನಾಳೆ ಬಿಡುಗಡೆ ಮಾಡುತ್ತೇವೆ ಎಂದು ಈ ಇಬ್ಬರಿಗೂ ಹೇಳಿದರು. ಆಗ ಪ್ರತ್ಯೇಕ ಕೋಣೆಯಲ್ಲಿದ್ದ ಇಬ್ಬರನ್ನೂ ಒಂದೇ ಕೋಣೆಗೆ ವರ್ಗಾಯಿಸಿದರು. ಆಗ ಇಬ್ಬರೂ ನಿರಾಳವಾಗಿದ್ದರು. ಸದ್ಯಕ್ಕೆ ತಾವಿಬ್ಬರು ಸತ್ಯಹೇಳದ್ದರ ಗಟ್ಟಿತನದ ಬಗ್ಗೆ ಹೆಮ್ಮೆ ಪಟ್ಟುಕೊಂಡರು. ಮೈಮರೆತು ಕೋಣೆಯಲ್ಲಿ ಇಬ್ಬರೂ ರಾಬರಿ ಮಾಡಿದ ಬಗ್ಗೆ ಮಾತುಕತೆ ಮಾಡಿದರು. ನಾವು ಬಿಡುಗಡೆಯಾದ ನಂತರ ಎಷ್ಟು ಪಾಲು ನಮಗೆ ದಕ್ಕಬೇಕು? ಯಾರು ಯಾರಿಗೆ ಎಷ್ಟು ಪಾಲು ಬರಬಹುದು? ಎಷ್ಟು ಗೋಲ್ಡ್ ಬಿಸ್ಕೇಟ್ ಇರಬಹುದು? ಬಿಡುಗಡೆಯಾದ ನಂತರ ಯಾರು ಯಾರ ಮನೆಗೋಗಿ ಈ ಬಗ್ಗೆ ವಿಚಾರಿಸುವುದು? ಎಲ್ಲಿ ಹಂಚಿಕೊಳ್ಳುವುದು ಮುಂತಾಗಿ ಸುಧೀರ್ಘವಾಗಿ ಚರ್ಚಿಸಿದರು. 
ಗಂಟಿಚೋರ ಸಮುದಾಯದ ಹಿರಿಯರು ಬಾಲೇಹೊಸೂರು


  ಇವರಿಗೆ ಅರಿವಿಲ್ಲದಂತೆ ಈ ಕೋಣೆಯಲ್ಲಿ ಪೋಲೀಸರು ಅಡಗಿಸಿಟ್ಟ ರೆಕಾರ್ಡರ್ ಎಲ್ಲವನ್ನೂ ಧ್ವನಿ ಮುದ್ರಿಸಿಕೊಂಡಿತ್ತು. ಈ ಧ್ವನಿಮುದ್ರಣದ ಮಾತುಕತೆ ಕೇಳಿಸಿಕೊಂಡು, ಆ ಇಬ್ಬರನ್ನು ತೀವ್ರಹಿಂಸೆಗೆ ಒಳಪಡಿಸಿ ಎಲ್ಲವನ್ನೂ ಬಾಯಿಬಿಡಿಸಿದರು. ಹೀಗೆ ರಾಬರಿ ಮಾಡಿದ ಇಡೀ ಟೀಮಿನ ಸದಸ್ಯರನ್ನು ಒಬ್ಬೊಬ್ಬರನ್ನಾಗಿ ಬಂಧಿಸಿದರು. ಕದ್ದ ಗೋಲ್ಡ್ ಬಿಸ್ಕೇಟ್ ಒಂದಷ್ಟು ಸಿಗಲೇ ಇಲ್ಲ. ಆದರೆ ಈ ರಾಬರಿ ಮಾಡಿದ ಸದಸ್ಯರು ಜೈಲುವಾಸಿಗಳಾದರು. ಈ ಘಟನೆಯಲ್ಲಿ ಭಾಗವಹಿಸಿದವರ ಹೆಸರು ಹೇಳಲಿಚ್ಚಿಸದ ವಕ್ತøವೊಬ್ಬರು ಇದನ್ನೊಂದು ಸಾಮಾನ್ಯ ಕತೆಯಂತೆ ಹೇಳಿದರು. ಈ ರಾಬರಿಯ ಅಘಾತದಿಂದ ಆ ನಂತರ ಗಂಟಿಚೋರ್ ಸಮುದಾಯ ಇಂತಹ ದೊಡ್ಡ ರಾಬರಿಗಳನ್ನು ಮಾಡುವುದನ್ನೆ ಕೈಬಿಟ್ಟಿತು. ಇದರ ಅಘಾತಕ್ಕೆ ಸಣ್ಣಪುಟ್ಟ ತುಡುಗು ಮಾಡುತ್ತಿದ್ದವರೂ ಹೆದರಿ ಅದರಿಂದ ದೂರ ಸರಿದರು. ಆದರೆ ಈ ಘಟನೆ ಮಾತ್ರ ಈ ಒಂದು ಭಯಾನಕ ಅಧ್ಯಾಯದಂತೆ ಸಮುದಾಯದ ಸ್ಮøತಿಲೋಕದಲ್ಲಿ ಅಡಗಿ ಕೂತಿದೆ.

ರಾಮಥಡಿ
ಇದು ಒಂದು ತುಡುಗು ವಿಧಾನ. ಇದರಲ್ಲಿ ಬಂಗಾರದ ನೀರು ಕುಡಿಸಿದ ಬೆಳ್ಳಿ ಅಥವಾ ತಾಮ್ರದ ಸಾಮಾನುಗಳನ್ನು ಬಂಗಾರವೆಂದು ನಂಬಿಸಿ ಇವನ್ನು ಕೊಟ್ಟು ಅವರ ಬಂಗಾರದ ವಡವೆಗಳನ್ನು ತುಡುಗು ಮಾಡುತ್ತಿದ್ದರು. ಇದರ ಕ್ರಮವೆಂದರೆ ಒಂದು ಬಂಗಾರದ ಗಟ್ಟಿಯನ್ನು ತೋರಿಸಿ, ನಮಗೆ ಕಷ್ಟವಿರುವುದಾಗಿಯೂ ಈ ಗಟ್ಟಿಯನ್ನು ಮಾರುವುದಕ್ಕೆ ಭಯವಿರುವುದಾಗಿಯೂ, ಈ ಗಟ್ಟಿ ಮೂರ್ನಾಲ್ಕು ತೊಲ(ಮೂವತ್ತು ಗ್ರಾಂ) ಇರುವುದಾಗಿಯೂ, ಇದನ್ನು ತೆಗೆದುಕೊಂಡು ನಿಮ್ಮ ಚೈನನ್ನೋ, ಉಂಗುರವನ್ನೋ ಕೊಟ್ಟರೆ ಈ ಗಟ್ಟಿಯನ್ನು ಕೊಡುವುದಾಗಿ ನಂಬಿಸಿ ತುಡುಗು ಮಾಡುತ್ತಿದ್ದರು. ಈ ಬಂಗಾರದ ಗಟ್ಟಿಗೆ ರಾಮಥಡಿ ಎಂದು ಕರೆಯುತ್ತಿದ್ದರು.

ವೇಷಧಾರಿ ತುಡುಗು
ತುಡುಗು ಮಾಡುವುದಕ್ಕೆ ಈ ಸಮುದಾಯ ವಿವಿಧ ವೇಷ ಧರಿಸಿ ಕಳವು ಮಾಡುತ್ತಿದ್ದ ಬಗ್ಗೆ ಎಂ.ಕೆನಡಿಯವರು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ. ಇದರಲ್ಲಿ ನಾನಾ ವಿಧದ ವೇಷಗಳನ್ನು ಹಾಕುತ್ತಿದ್ದರು. ಶ್ರೀಮಂತರ ವೇಷ ಧರಿಸಿ ರೈಲಿನಲ್ಲಿ ಫಸ್ಟ್ ಕ್ಲಾಸ್ ಟಿಕೆಟ್ ತೆಗೆಸಿ ಪ್ರಯಾಣ ಮಾಡುವುದು. ಸಾಮಾನ್ಯವಾಗಿ ಫಸ್ಟ್ ಕ್ಲಾಸ್‍ನಲ್ಲಿ ಶ್ರೀಮಂತರು ಉತ್ತಮಸ್ಥರು ಪ್ರಯಾಣಿಸುತ್ತಿರುತ್ತಾರೆ. ಇಂಥವರನ್ನು ಗುರುತಿಸಿ ಅವರ ಹಣ ಸಂಪತ್ತನ್ನು ಗುರುತಿಸಿ ತುಂಬಾ ಚಾಕಚಕ್ಯತೆಯಿಂದ ಕಳವು ಮಾಡುತ್ತಿದ್ದರು.

ಅಂತೆಯೇ ಜೋಯಿಸರ ವೇಷವನ್ನು ಹಾಕಿ ಕಳವು ಮಾಡುವ ಬಗ್ಗೆಯೂ ಕ್ಷೇತ್ರಕಾರ್ಯದಲ್ಲಿ ಮಾಹಿತಿ ಸಿಕ್ಕಿತು. ಜೋಯಿಸರ ಹಾಗೆ ವೇಷ ಹಾಕಿ ಊರಿನ ಶ್ರೀಮಂತರ ಪೂರ್ವಾಪರಗಳನ್ನೆಲ್ಲಾ ತಿಳಿದುಕೊಂಡು ಅವರಿಗೆ ಜೋತಿಷ್ಯ ಹೇಳುವ ನೆಪದಲ್ಲಿ ಅವರ ಮನೆಗೆ ಪ್ರವೇಶಿಸಿ, ನಂಬುವಂತೆ ಜ್ಯೋತಿಷ್ಯ ಹೇಳಿ ವಂಚಿಸಿ ತುಡುಗು ಮಾಡುವ ವಿಧಾನದಲ್ಲಿಯೂ ಕೆಲವರು ಪರಿಣತರಿದ್ದರೆಂದು ಹೇಳುತ್ತಾರೆ. ಕೆಲವೊಮ್ಮೆ ಪೊಲೀಸರ ವೇಷ ಹಾಕಿ ಕಳವು ಮಾಡಿದ ಕೆಲವು ಪ್ರಸಂಗಗಳೂ ಇವೆ.

ಪಾತ್ರಧಾರಿ ತುಡುಗು

ಇದೊಂದು ಭಿನ್ನವಾದ ಕಳವು. ಗಂಟಿಚೋರ್ ಸಮುದಾಯದಲ್ಲಿ ನಾಟಕ ಕಲಾವಿದರು ಅದರಲ್ಲಿಯೂ ಬಯಲಾಟ ಪಾರಿಜಾತದ ಪ್ರತಿಭಾವಂತ ಕಲಾವಿದರಿದ್ದರು. ಈ ಕಲಾವಿದರು ಒಂದು ಹಳ್ಳಿಯಲ್ಲಿ ಬಯಲಲ್ಲೇ ಮನೋರಂಜನೆಗಾಗಿ ಬಯಲಾಟದ ತುಣುಕನ್ನೋ, ಪಾರಿಜಾತದ ಒಂದು ಪ್ರಸಂಗವನ್ನೋ ಆಯೋಜಿಸುತ್ತಿದ್ದರು. ಇಂತಹ ಕಡೆಗಳಿಗೆ ಹಳ್ಳಿಯ ಜನರೆಲ್ಲಾ ಜಮಾಯಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಈ ಮೊದಲೇ ನಿರ್ಧರಿಸಿದಂತೆ ಕೆಲವರು ಕೆಲವು ಗುರುತಿಸಿಕೊಂಡಿದ್ದ ಮನೆಗಳನ್ನು ಕಳವು ಮಾಡುತ್ತಿದ್ದರು.

ಇದು ಇನ್ನೊಂದು ರೀತಿಯಲ್ಲಿ ನಡೆಯುತ್ತಿತ್ತು. ಈಗಾಗಲೆ ಮೊದಲೇ ಇಂತಹ ಊರಲ್ಲಿ ನಾಟಕ, ಬಯಲಾಟ ಅಥವಾ ಪಾರಿಜಾತ ನಡೆಯುವ ಸುದ್ದಿ ತಿಳಿದು, ಆ ನಾಟಕದ ರಾತ್ರಿ ಕಳ್ಳತನ ಮಾಡುವುದಕ್ಕೆ ಆಯಾ ಊರುಗಳಲ್ಲಿ ಮೊದಲೇ ಸುತ್ತಿ ಶ್ರೀಮಂತರ ಮನೆಗಳನ್ನು ಗುರುತು ಮಾಡಿ ತುಡುಗು ಮಾಡುತ್ತಿದ್ದರು. ಮುಖ್ಯವಾಗಿ ಹಿಂದೆ ಉತ್ತರ ಕರ್ನಾಟಕದಲ್ಲಿ ನಿರಂತರವಾಗಿ ನಾಟಕಗಳು ನಡೆಯುತ್ತಿದ್ದುದರಿಂದ ಇದರ ಲಾಭವನ್ನು ಗಂಟಿಚೋರರು ತುಡುಗು ಮಾಡಲು ಬಳಸುತ್ತಿದ್ದರು.

ವಿಶಿಷ್ಟ ಮಾದರಿಯ ತುಡುಗು

ಗಂಟಿಚೋರ್ ಸಮುದಾಯದಲ್ಲಿ ಕೆಲವು ವಿಶಿಷ್ಟವಾದ ಕಳವು ಮಾಡುವ ನಿಪುಣರಿದ್ದಾರೆ. ಇವರು ತಮಗೇ ವಿಶಿಷ್ಟವಾದ ಮಾದರಿಯನ್ನು ಜನಪ್ರಿಯಗೊಳಿಸಿರುತ್ತಾರೆ. ಇಂತಹ ಕೆಲವರ ಕಳ್ಳತನದ ಮಾದರಿಯನ್ನು ಹೆಸರಲ್ಲೇ ಗುರುತಿಸುವುದನ್ನು ಕಾಣಬಹುದು. ಅದರಲ್ಲಿ ಸಾಯಬ್ಯೂತಾತ್ಯನ ತುಡುಗುತನದ ಮಾದರಿಯೊಂದು ವಿಶಿಷ್ಟವಾಗಿದೆ. ಈತನು ಇಲಿಗಳನ್ನು ಸಾಕಿದ್ದನು. ಈ ಇಲಿಗಳನ್ನು ಗೋದಿ, ರಾಗಿ, ನವಣೆ ಹೊಲಗಳಲ್ಲಿ ರಾತ್ರಿಯ ಹೊತ್ತು ಬಿಟ್ಟು ಬರುತ್ತಿದ್ದ. ಇಲಿಗಳು ತೆನೆಗಳನ್ನು ಕತ್ತರಿಸಿ ಬಿಲದಲ್ಲಿ ಸಂಗ್ರಹಿಸಿಡುತ್ತಿದ್ದವು. ಇಂತಹ ಸಂದರ್ಭದಲ್ಲಿ ತಾತಾ ಇಲಿ ಹಿಡಿಯುವ ನೆಪದಲ್ಲಿ ಹೊಲಗಳಿಗೆ ಹೋಗಿ ಇಲಿಬಿಲದ ತೆನೆಗಳನ್ನೆಲ್ಲಾ ಸಂಗ್ರಹಿಸಿ, ಇಲಿ ಹಿಡಿದುಕೊಂಡು ಬರುತ್ತಿದ್ದನು. ಈತ ಸುಗ್ಗಿ ಮುಗಿವ ಹೊತ್ತಿಗೆ ಒಂದು ವರ್ಷಕ್ಕೆ ಆಗುವಷ್ಟು ದವಸ ಧಾನ್ಯಗಳನ್ನು ಇದೇ ಮಾದರಿಯಲ್ಲಿ ಸಂಗ್ರಹಿಸುತ್ತಿದ್ದುದಾಗಿ ಸಮುದಾಯದ ಹಿರಿಯರು ಹೇಳುತ್ತಾರೆ.

ಅಂತೆಯೇ ಕುಳ್ಡ ವೆಂಕಟಪ್ಪನ ಮಾದರಿಯೊಂದು ಪ್ರಸಿದ್ದಿ ಹೊಂದಿತ್ತು. ಈತನ ಕುಟುಂಬವೇ ಕಳ್ಳತನ ಮಾಡುತ್ತಿತ್ತು. ಈತನ ಬಳಿ ಬಲಿಷ್ಠವಾದ ನಾಯಿಗಳಿದ್ದವು. ಈತ ಗುಂಪುಗಳಲ್ಲಿ ಕಳ್ಳತನ ಮಾಡದೆ ಒಂಟಿಯಾಗಿ, ಕೆಲವೊಮ್ಮೆ ಮನೆಯವರೊಂದಿಗೆ ತುಡುಗು ಮಾಡುತ್ತಿದ್ದ. ತುಂಬಾ ಬಲಿಷ್ಠವಾದ ದೇಹದ ಮೈಕಟ್ಟನ್ನು ಹೊಂದಿದ್ದನೆಂದು ಹೇಳುತ್ತಾರೆ. ಈತನ ತುಡುಗುತನದ ಚಾಕಚಕ್ಯತೆ ಯಾರಿಗೂ ಬರುವುದಿಲ್ಲ ಎನ್ನುವುದು ಈ ಭಾಗದವರ ನಂಬಿಕೆ. ತುಡುಗು ಮಾಡಿ ತಪ್ಪಿಸಿಕೊಳ್ಳುವಾಗ ಕವಣೆ ಕಲ್ಲನ್ನು ಬಳಸುತ್ತಿದ್ದ. ಕೊನೆಗೆ ಪೊಲೀಸರ ಕೈಗೆ ಸಿಕ್ಕು ಆತನ ಒಂದು ಕಣ್ಣನ್ನು ಕಿತ್ತರೂ ಆತ ಕಳ್ಳತನ ಮಾಡುತ್ತಿದ್ದ ಎನ್ನುವುದು ಆತನ ಬಗ್ಗೆ ಇರುವ ಹೆಗ್ಗಳಿಕೆಯ ಮಾತು. 
**

  
 ಹೀಗೆ ಸಮುದಾಯದ ನೆನಪಿನಲ್ಲಿ ಇಂತಹ ನೂರಾರು ಕಥನಗಳಿವೆ. ಈ ಕಥನಗಳೇ ಈ ಸಮುದಾಯದ ಚರಿತ್ರೆಯ ಮೌಖಿಕ ಆಕರವಾಗಿದೆ. ಈ ಆಕರಗಳು ಇವರ ಬಗೆಗಿನ ಲಿಖಿತ ದಾಖಲೆಗಳಿಗಿಂತ ಜೀವಂತವಾಗಿರುತ್ತವೆ. ಆದರೆ ಲಿಖಿತ ಆಕರಗಳನ್ನು ಮಾತ್ರ ಚರಿತ್ರೆ ಎಂದು ಗ್ರಹಿಸುವ ಅಧ್ಯಯನಕಾರರು ಈ ಬಗೆಯ ಸಮುದಾಯದ ನೆನಪುಗಳಿಗೆ ಮಾನ್ಯತೆ ಕೊಡದೆ ಅಳಿಸಿ ಹಾಕುತ್ತಾರೆ. ಇದೀಗ ಗಂಟಿಚೋರರು ತಮಗಂಟಿದ್ದ ತುಡುಗನ್ನು ಬಿಟ್ಟು ಬದುಕಿಗೆ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.  

  ಈ ಸಮುದಾಯಕ್ಕೆ ಸೆಟ್ಲಮೆಂಟ್‍ನಿಂದ ವಿಮುಕ್ತಿ ಪಡೆದ ನಂತರ ಹೆಚ್ಚು ಸಹಕಾರಿಯಾಗಿದ್ದು ಸೆಟ್ಲಮೆಂಟಿನಲ್ಲಿ ಕೊಡುತ್ತಿದ್ದ ಶಿಕ್ಷಣ. ಹೀಗೆ ಶಿಕ್ಷಣ ಪಡೆದವರಲ್ಲಿ ಕೆಲವರು ಸ್ವತಂತ್ರ ಭಾರತದಲ್ಲಿ ಸರಕಾರಿ ನೌಕರಿಗಳಿಗೆ ಸೇರಲು ಸಾಧ್ಯವಾಯಿತು. ಆಗ ನೌಕರಿಗೆ ಸೇರಿದವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಆರಂಭಿಸಿದರು. ಹೀಗಾಗಿ ಈ ಸಮುದಾಯಗಳ ಮೊದಲ ತಲೆಮಾರಿನ ಶಿಕ್ಷಿತರಿಂದ ಶಿಕ್ಷಣದ ಒಂದು ಪರಂಪರೆ ತೆಳುವಾಗಿಯಾದರೂ ಬೆಳವಣಿಗೆಯನ್ನು ಹೊಂದಿತು. ಹೀಗೆ ವಿಮುಕ್ತಿಯ ನಂತರ ಗಂಟಿಚೋರ ಸಮುದಾಯ ಬಹುಮುಖ ನೆಲೆಯಲ್ಲಿ ವಿಸ್ತರಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಸಿ ಕೃಷಿಯನ್ನು ಕೃಷಿ ಕೂಲಿಯನ್ನು ಕೈಗೊಂಡಿದೆ. ಅಂತೆಯೇ ಹುಬ್ಬಳ್ಳಿ ಗದಗ ಗೋಕಾಕ ಮೊದಲಾದೆಡೆಗಳಲ್ಲಿ ನೆಲೆಸಿದ ಗಂಟಿಚೋರರು ಸಹಜವಾಗಿ ನಗರ ಸಂಬಂಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

  ಹೀಗಿದ್ದೂ ವಿಮುಕ್ತಿಯ ನಂತರದಲ್ಲಿ ಸಮುದಾಯಗಳು ಸರಳರೇಖಾತ್ಮಕ ಚಲನೆಯನ್ನು ಹೊಂದಿಲ್ಲ ಬದಲಾಗಿ ಅಂಕುಡೊಂಕಿನ, ತಿರುವು ಮುರುವಿನ ಚಲನೆಯಲ್ಲಿದೆ. ಇದರಲ್ಲಿ ಶ್ರೇಣೀಕರಣದ ಏಣಿಯಲ್ಲಿ ಬಹುಸಂಖ್ಯಾತರು ಕೆಳಗಿದ್ದರೆ,  ಬೆರಳೆಣಿಕೆಯ ಕೆಲವರುವರು ಮೇಲಿದ್ದಾರೆ. ಸರಕಾರದ ಸಮುದಾಯ ಮುಖಿ ಯೋಜನೆಗಳು ಈ ಸಮುದಾಯವನ್ನು ಈಗಿರುವ ಸ್ತರದಿಂದ ಮತ್ತೊಂದು ಸ್ತರಕ್ಕೆ ಮೇಲೆತ್ತುವ ಸಾಧ್ಯತೆಗಳಿವೆ. ಸಮುದಾಯವೂ ಈಗ ಸಂಘಟನಾತ್ಮಕವಾಗಿ ಬಲಗೊಳ್ಳುತ್ತಾ ತಮ್ಮ ಸೌಲಭ್ಯಗಳನ್ನು ಗಟ್ಟಿಯಾಗಿ ಕೇಳಲು ಅಣಿಯಾಗಿದೆ.




ಕಾಮೆಂಟ್‌ಗಳಿಲ್ಲ: